Site icon Vistara News

ಸಾಹಿತಿಗಳನ್ನು ಓದದೇ ನಿರಾಕರಿಸುವುದು ತಪ್ಪು | ನಿಲುವು‌ಗಳ ಒತ್ತಡ ಲೇಖಕನ ಸವಾಲು ಹೆಚ್ಚಿಸಿದೆ: ದಾದಾಪೀರ್‌ ಜೈಮನ್ ಸಂದರ್ಶನ

dadapeer jaiman

ಚೊಚ್ಚಲ ಕತಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದ ಕತೆಗಾರ

ʼನೀಲಕುರಿಂಜಿʼ ಕತಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪಡೆದ ಕನ್ನಡದ ಕತೆಗಾರ ದಾದಾಪೀರ್‌ ಜೈಮನ್‌, ತಮ್ಮ ಈ ಹಿಂದಿನ ʼಪರ್ದಾ ಆಂಡ್‌ ಪಾಲಿಗಮಿʼ ಕೃತಿಯ ಅನುವಾದಕ್ಕಾಗಿ ಕುವೆಂಪು ಭಾಷಾ ಭಾರತಿ ಪುರಸ್ಕಾರವನ್ನೂ ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿಯ ದಾದಾಪೀರ್‌, ಧಾರವಾಡದಲ್ಲಿ ಗಣಿತ ಎಂಎಸ್ಸಿ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಶಿಕ್ಷಕರಾಗಿದ್ದಾರೆ. ಅಕಾಡೆಮಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಪುಟ್ಟ ಸಂದರ್ಶನ ಇಲ್ಲಿದೆ.

ಸಂದರ್ಶನ: ಹರೀಶ್‌ ಕೇರ

ಪ್ರಶ್ನೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುದಕ್ಕೆ ಅಭಿನಂದನೆಗಳು. ಮೊದಲ ಕಥಾ ಸಂಕಲನಕ್ಕೇ ಇಂಥ ದೊಡ್ಡ ಪುರಸ್ಕಾರ ಸಿಗುವುದು ನಿಮ್ಮನ್ನು ಕನ್ನಡ ಸಾಹಿತ್ಯದಲ್ಲಿ ಎಲ್ಲಿ ನಿಲ್ಲಿಸುತ್ತದೆ ಅನಿಸುತ್ತದೆ?

ದಾದಾಪೀರ್:‌ ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಹೌದು, ಇದು ಖುಷಿ ತರುವುದರ ಜೊತೆಗೆ ನನ್ನ ಹೊಣೆಗಾರಿಕೆಯನ್ನೂ ಹೆಚ್ಚಿಸಿದೆ. ಮೊದಲು ಏನೂ ತಲೆ ಕೆಡಿಸಿಕೊಳ್ಳದೆ, ಆರಾಮಾಗಿ ಬರೆಯುತ್ತಿದ್ದಂತೆ ಇನ್ನು ಬರೆಯಲಾಗದು ಅಂತಲೂ ಅನಿಸುತ್ತದೆ.

ಪ್ರಶ್ನೆ: ನಿಮ್ಮ ಮೊದಲ ಕೃತಿ ಅನುವಾದ. ಅದಕ್ಕೂ ಕುವೆಂಪು ಭಾಷಾ ಭಾರತಿ ಪುರಸ್ಕಾರ ಸಂದಿದೆ. ಅನುವಾದ ಮತ್ತು ಕಥಾಸೃಷ್ಟಿಯ ನಡುವಿನ ವ್ಯತ್ಯಾಸ ಹಾಗೂ ಅವುಗಳ ಹೊಣೆಗಾರಿಕೆ ಬಗ್ಗೆ ಏನು ಹೇಳುತ್ತೀರಿ?

ದಾದಾಪೀರ್:‌ ಅನುವಾದ ಒಂದು ರೀತಿಯಲ್ಲಿ ಬೇರೊಬ್ಬರ ಮಗುವನ್ನು ಮನೆಗೆ ತಂದು ಹೊಸ ಬಟ್ಟೆ ಹಾಕಿಸಿ ಆಟವಾಡಿ ಸಂಭ್ರಮಿಸಿದ ಹಾಗೆ. ಅದು ನಮ್ಮ ಭಾಷೆಗೆ ಬೇರೊಂದು ಕಡೆಯಿಂದ ಹೊಸತನ್ನು ತರುವ ಕ್ರಿಯೆ. ಅದು ಮೂಲ ಕೃತಿ ಬರೆದವನನ್ನು ಎಷ್ಟು ಮುಕ್ತಗೊಳಿಸುತ್ತದೋ ಅನುವಾದಕನನ್ನೂ ಹಾಗೇ ಲಿಬರೇಟ್‌ ಮಾಡುತ್ತದೆ. ಆದರೆ ಇಲ್ಲಿ ಬೇರೆ ಬಗೆಯ ಮುಕ್ತಿ ಇರುತ್ತದೆ. ಅನುವಾದಕ್ಕೆ ಹೆಚ್ಚಿನ ಫೋಕಸ್‌ ಬೇಕು. ಅಲ್ಲಿನ ನುಡಿಗಟ್ಟು ಅರ್ಥ ಮಾಡಿಕೊಳ್ಳಬೇಕು, ಅದಕ್ಕೆ ಸಂವಾದಿಯಾದ ಕನ್ನಡದ ನುಡಿಗಟ್ಟು ಹುಡುಕಬೇಕು. ಅಂಥ ಕೆಲವು ತಾಂತ್ರಿಕ ಸವಾಲುಗಳಿರುತ್ತವೆ. ಹಾಗೇ ಇದು ನಮ್ಮನ್ನು ತುಂಬ ವಿನೀತರನ್ನಾಗಿಸುತ್ತದೆ. ಬೇರೊಂದು ಭೌಗೋಲಿಕ ಪ್ರದೇಶದ ಮಾನವ ತಂತುವನ್ನು ಇಲ್ಲಿ ಜೋಡಿಸಬೇಕಿರುತ್ತದೆ. ಆದರೆ ಕೃತಿ ನಮಗೆ ಇಷ್ಟವಾಗಿದ್ದರೆ, ಕನ್ನಡದಲ್ಲಿ ಇದು ಬರಲೇಬೇಕು ಎಂದು ಅನಿಸಿದ್ದರೆ ಅದರ ಅನುವಾದ ಕಷ್ಟವೆಂದು ಅನಿಸುವುದೇ ಇಲ್ಲ.

ಪ್ರಶ್ನೆ: ಅನುವಾದದಲ್ಲಿ ತೊಡಗಿಕೊಂಡರೆ ಸೃಷ್ಟಿಶೀಲ ಬರಹಕ್ಕೆ ತೊಡಕಾಗುತ್ತದೆ ಎಂಬ ಹೇಳಿಕೆಯಿದೆ. ಇದು ನಿಮ್ಮ ಅನುಭವಕ್ಕೆ ಬಂದಿದೆಯೇ?

ದಾದಾಪೀರ್:‌ ನನಗೆ ಯಾವತ್ತೂ ಹಾಗೆ ಅನಿಸಿಲ್ಲ. ನಾನು ಯಾವ ಕ್ಷಣದಲ್ಲೂ ಒಂದರಿಂದ ಇನ್ನೊಂದಕ್ಕೆ ಶಿಫ್ಟ್‌ ಆಗಬಹುದು ಅನಿಸುತ್ತದೆ. ಸಮಯದ ವಿಚಾರ ಗಮನಿಸಿದರೆ ಇದು ಸ್ವಲ್ಪ ಮಟ್ಟಿಗೆ ನಿಜವಿರಬಹುದು. ಅನುವಾದ ಹೆಚ್ಚಿನ ಸಮಯ ಬೇಡುತ್ತದೆ ಹಾಗೂ ಆ ಸಮಯದಲ್ಲಿ ಬೇರೆ ಸೃಜನಶೀಲ ಕೃತಿಗಳನ್ನು ತಡೆಹಿಡಿಯಬೇಕಾಗಬಹುದು.

ಪ್ರಶ್ನೆ: ನಿಮ್ಮ ವಿಶಿಷ್ಟ ಕತೆಗಳ ಪಾತ್ರಗಳು ಎಲ್ಲಿಂದ ಬರುತ್ತವೆ?

ದಾದಾಪೀರ್:‌ ನನ್ನ ಮೊದಲಿನ ಸಂಕಲನದಲ್ಲಿ ನಾನು ನೋಡಿದ, ಕೇಳಿದ, ಮಾತನಾಡಿದ ಪಾತ್ರಗಳೇ ಇವೆ. ಯಾವುದಾದರೂ ಒಂದು ಪಾತ್ರ ನನ್ನನ್ನು ತುಂಬಾ ಕಾಡಬೇಕು. ಆಗ ಮಾತ್ರ ನಾನು ಬರೆಯಲು ಸಾಧ್ಯ. ನೀನು ಬರೆಯಲೇಬೇಕು ಎಂದು ಅದು ನನ್ನನ್ನು ಒತ್ತಾಯಿಸಬೇಕು. ಹಾಗೇ ಆ ಪಾತ್ರದ ಶೋಧನೆಗೂ ಆಸ್ಪದ ಇರಬೇಕು. ಒಬ್ಬ ವ್ಯಕ್ತಿ ಒಂದು ಸಂದರ್ಭದಲ್ಲಿ ಯಾಕೆ ಹಾಗೆ ವರ್ತಿಸಿದ ಎಂದು ಶೋಧಿಸಲು ನನಗೆ ಅವಕಾಶವಿದ್ದರೆ, ಅಂಥ ಪಾತ್ರಗಳು ನನಗೆ ಎಕ್ಸೈಟಿಂಗ್‌ ಅನಿಸುತ್ತವೆ. ಒಂದು ನಾನ್‌ ಫಿಕ್ಷನ್‌ ಮಾಡದೇ ಇರುವುದನ್ನು ಫಿಕ್ಷನ್‌ ಮಾಡಬೇಕು. ಅಂದರೆ ಕತೆಯ ಸತ್ಯ, ಕತೆಗಾರನ ಸತ್ಯವೇ ಬೇರೆ. ಅದು ವಾಸ್ತವದ ಸತ್ಯ ಎಂದು ನಿರೀಕ್ಷಿಸಲಾಗದು. ಜನಪ್ರಿಯವಾದ ನಿಲುವುಗಳನ್ನು ನಾವು ನಾನ್‌ ಫಿಕ್ಷನ್‌ನಲ್ಲಿ ನಾವು ಹೆಚ್ಚು ಮೀರಲು ಆಗುವುದಿಲ್ಲ. ಆದರೆ ಫಿಕ್ಷನ್‌ನಲ್ಲಿ ಅದನ್ನು ಮೀರಿ ಇನ್ನೇನನ್ನೋ ಹುಡುಕಬಹುದು. ಅದು ನನಗೆ ಫಿಕ್ಷನ್‌ನ ಮಹಾ ಸಾಧ್ಯತೆ ಅನಿಸುತ್ತದೆ. ಅದಕ್ಕಾಗೇ ನನಗೆ ಕತೆ ಬರೆಯುವುದು ತುಂಬಾ ಇಷ್ಟ.

ಪ್ರಶ್ನೆ: ನೀವು ಕವಿತೆಗಳನ್ನೂ ಸಾಕಷ್ಟು ಪರಿಣಾಮಕಾರಿಯಾಗಿ ಬರೆಯುತ್ತೀರಿ…

ದಾದಾಪೀರ್:‌ ನಾನು ಬರೆಯುವ ಕವಿತೆಗಳು ಮಾತ್ರವಲ್ಲ, ಬೇರೆ ಬೇರೆಯವರ ಕವಿತೆಗಳನ್ನು ಓದಿಕೊಳ್ಳುವುದು ನನಗೆ ತುಂಬಾ ಇಷ್ಟ. ಕಾವ್ಯಸತ್ಯ ಅಂತ ಒಂದಿರುತ್ತದಲ್ಲ- ಅದನ್ನು ಶೋಧಿಸುವುದು ನನ್ನನ್ನು ಥ್ರಿಲ್‌ ಆಗಿಸುತ್ತದೆ.

ಪ್ರಶ್ನೆ: ಹೆಚ್ಚಾಗಿ ಯಾವ ಬಗೆಯ ಓದು ನಿಮ್ಮದು?

ದಾದಾಪೀರ್:‌ ಸಾಮಾನ್ಯವಾಗಿ ಕೈಗೆ ಸಿಕ್ಕಿದ್ದು ಓದುತ್ತಿರುತ್ತೇನೆ. ಇತ್ತೀಚೆಗೆ ಯಾರಾದರೂ ನೀನು ಇದನ್ನು ಓದಲೇಬೇಕು ಅಂತ ಹೇಳಿದರೆ ಅದನ್ನು ಓದುತ್ತೇನೆ. ಬೇರೆ ಬೇರೆ ಭಾಷೆಯ, ದೇಶಗಳ ಲೇಖಕರು ಬರೆದುದನ್ನು ಪ್ರಯತ್ನಿಸುತ್ತೇನೆ. ಅವರು ಯಾವ ಬಗೆಯ ಅನುಭವಗಳನ್ನು ಶೋಧಿಸಲು ಯತ್ನಿಸುತ್ತಿದ್ದಾರೆ ಎಂದು ನೋಡುತ್ತೇನೆ. ಆಮೇಲೆ ಕಾವ್ಯ ಓದುತ್ತೇನೆ. ʼಕಾವ್ಯದ ಓದು ವ್ಯಾಯಾಮದಂತೆ, ಸಂಗೀತಗಾರನ ರಿಯಾಜ್‌ ಇದ್ದಂತೆʼ ಎಂದು ಜಯಂತ ಕಾಯ್ಕಿಣಿ ಹಿಂದೊಮ್ಮೆ ಹೇಳಿದ್ದರು. ಅದು ನಿಜ ಅನಿಸುತ್ತದೆ. ಭಾಷೆಯ ಮೇಲೆ ಪ್ರೀತಿ ಇರುವವನು ಕಾವ್ಯ ಓದಬೇಕು. ಕಾವ್ಯ ಜಾಸ್ತಿ ಓದುತ್ತೇನೆ.

ಇದನ್ನೂ ಓದಿ: ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು

ಪ್ರಶ್ನೆ: ರಾಜಕೀಯ, ಸೈದ್ಧಾಂತಿಕ ನಿಲುವುಗಳನ್ನು ಕತೆಗಾರ ತನ್ನ ಕೃತಿಯಲ್ಲಿ ನೇರವಾಗಿ ಅಭಿವ್ಯಕ್ತಿಸಬೇಕು ಎಂಬ ನಿಲುವು- ಇದರ ಬಗ್ಗೆ ನಿಮ್ಮ ಯೋಚನೆ ಏನು?

ದಾದಾಪೀರ್:‌ ಕೃತಿಯಲ್ಲಿ ಯಾವುದೂ ವಾಚ್ಯವೆನ್ನಿಸುವಂತೆ ಇರುವುದಿಲ್ಲ. ಹಾಗಿದ್ದರೆ ಅದು ಉತ್ತಮ ಕೃತಿಯಾಗುತ್ತದೆ ಎಂಬುದರ ಬಗ್ಗೆ ನಂಬಿಕೆಯಿಲ್ಲ. ನಿಲುವುಗಳು ನಿಮ್ಮಲ್ಲಿ ಇರಬಹುದು, ಆದರೆ ಅದನ್ನು ಅಭಿವ್ಯಕ್ತಿಸಲೇಬೇಕು ಎಂಬ ಒತ್ತಡ ಮಾತ್ರ ಸರಿಯಲ್ಲ. ನಾನಾಗಲೇ ಹೇಳಿದಂತೆ ಕಾವ್ಯಸತ್ಯ, ಕಾವ್ಯವಾಸ್ತವ ಬೇರೆ ಇರುತ್ತದೆ. ಕತೆಗಾರ ಶೋಧಿಸುತ್ತಿರುತ್ತಾನೆ. ಒಂದು ಕೊಲೆ ಸಂಭವಿಸಿದೆ ಎಂದರೆ ಅದರ ಹಿಂದೆ ಏನೇನು ಕಾರಣಗಳು, ಕ್ರಿಯೆಗಳು ನಡೆದಿವೆ ಎಂಬುದನ್ನು ಅವನೇ ಶೋಧಿಸಬೇಕು. ಕೊಲೆ ಮಾಡಿದವನು ಕೆಟ್ಟವನು ಎಂದು ನೇರವಾಗಿ ಹೇಳುವುದು ಬೇರೆ. ಆದರೆ ಕೊಲೆ ಮಾಡಲು ಅವನಿಗಿದ್ದ ಸಾಮಾಜಿಕ- ರಾಜಕೀಯ ಒತ್ತಡಗಳನ್ನು ಹುಡುಕುವುದು ಫಿಕ್ಷನ್‌ನಲ್ಲಿ ಮಾತ್ರ ಸಾಧ್ಯ.

ಎಷ್ಟೋ ಲೇಖಕರಲ್ಲಿ ನಿಲುವುಗಳಿರುತ್ತವೆ, ಆದರೆ ಅದನ್ನು ಅಭಿವ್ಯಕ್ತಿಸಬೇಕೆಂದಿಲ್ಲ. ಇನ್ನು ಕೆಲವರು ಬೇರೆ ಥರ, ಉದಾಹರಣೆಗೆ ಆರುಂಧತಿ ರಾಯ್‌ ಮುಂತಾದವರು ನಾನ್‌ ಫಿಕ್ಷನ್‌ನಲ್ಲಿ ತಮ್ಮ ನಿಲುವುಗಳನ್ನು ನಿರ್ಭಿಢೆಯಾಗಿ ಮಾತನಾಡುತ್ತಾರೆ. ಆದರೆ ಫಿಕ್ಷನ್‌ಗೆ ಬಂದಾಗ ಅವರು ಫಿಕ್ಷನ್‌ನ ಸೌಂದರ್ಯವನ್ನು, ಫಿಕ್ಷನ್‌ನ ಮೌಲ್ಯಗಳನ್ನು ಬಿಟ್ಟುಕೊಡುವುದಿಲ್ಲ. ಅವರು ರಾಜಕೀಯ ಕೃತಿಗಳನ್ನೂ ಫಿಕ್ಷನ್‌ನ ಚೌಕಟ್ಟಿನಲ್ಲೇ ಹೇಳುತ್ತಾರೆ. ಅವರನ್ನು ಮಾದರಿಯಾಗಿ ತೆಗೆದುಕೊಂಡರೆ ನಾವು ಸೌಂದರ್ಯಾತ್ಮಕವಾಗಿ ನಿಲುವುಗಳನ್ನು ಮುಂದಿಡಲು ಸಾಧ್ಯ ಅನಿಸುತ್ತದೆ.

ಪ್ರಶ್ನೆ: ತಮ್ಮ ನಿಲುವನ್ನು ಒಪ್ಪದ ಕೃತಿಕಾರರನ್ನು ನಿರಾಕರಿಸುವ (cancel culture) ಪ್ರವೃತ್ತಿ ಬೆಳೆಯುತ್ತಿರುವುದರ ಬಗ್ಗೆ ಏನಾದರೂ ಹೇಳಬಯಸುತ್ತೀರಾ?

ದಾದಾಪೀರ್:‌ ಎಡ ಅಥವಾ ಬಲ ಎಕ್ಸ್‌ಟ್ರೀಮ್‌ಗಳ ನಡುವೆ ಏನೋ ಮೃದುವಾದದ್ದು, ಜೀವಕ್ಕೆ ಹತ್ತಿರವಾದದ್ದು ಕಳೆದುಹೋಗಿಬಿಡುತ್ತದೇನೋ ಎಂದು ನನಗೆ ಯಾವಾಗಲೂ ಭಯವಾಗುತ್ತಿರುತ್ತದೆ. ರಾಜಕೀಯ ನಿಲುವುಗಳನ್ನು ಒಪ್ಪುವುದು- ಬಿಡುವುದು ಬೇರೆ. ಆದರೆ ಕೃತಿಯ ವಿಷಯಕ್ಕೆ ಬಂದಾಗ ಒಂದನ್ನು ಓದದೇ ನಿರಾಕರಿಸುವುದು, ತಳ್ಳಿಹಾಕುವುದು ತಪ್ಪು. ಇದು ಹೀಗೇ ಮುಂದುವರಿದರೆ ಕೊನೆಗೆ ಏನು ಉಳಿಯುತ್ತದೆ? ಏನೂ ಇಲ್ಲ. ಇದು ಹಲವು ವಲಯಗಳಲ್ಲಿ ಇದೆ. ಇದರಿಂದಾಗಿ ಫಿಕ್ಷನ್‌ ಬರಹಗಾರನ ಸವಾಲುಗಳು ಹೆಚ್ಚಿವೆ ಕೂಡ. ಅವನು ತನ್ನ ಸಹಜ ಮನಸ್ಥಿತಿ ಕಾಪಾಡಿಕೊಳ್ಳುವುದೇ ಸವಾಲು.

ಇದನ್ನೂ ಓದಿ: ಕೇರಂ ಬೋರ್ಡ್‌ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು

ಪ್ರಶ್ನೆ: ಕತೆ ಹೊರತುಪಡಿಸಿ ನಿಮ್ಮ ಕ್ರಿಯೇಟಿವ್‌ ಒತ್ತಡವನ್ನು ಬೇರೆ ಯಾವ ರೀತಿಯಲ್ಲಿ ಚಾನೆಲ್‌ ಮಾಡುತ್ತೀರಿ? ಕಾದಂಬರಿ ಬರೆಯುವ ಉದ್ದೇಶ ಇದೆಯೇ?

ದಾದಾಪೀರ್:‌ ಕಾದಂಬರಿ ಬರೆಯುವ ಆಸೆ, ಉದ್ದೇಶ ಇದೆ. ಬೇರೆ ಬೇರೆ ಕಾದಂಬರಿಗಳನ್ನು ಓದುತ್ತಿದ್ದೇನೆ. ಎಷ್ಟೊಂದು ಮಂದಿ ನನ್ನ ಸಮಕಾಲೀನರು ಕಾದಂಬರಿ ಬರೆಯುತ್ತಿದ್ದಾರೆ. ಕತೆಗಳನ್ನಂತೂ ಬರೆಯುತ್ತಲೇ ಇರುತ್ತೇನೆ. ಇದೆಲ್ಲದರ ಜೊತೆಗೆ ಕಲೆಯ ಬೇರೆ ಬೇರೆ ಅಭಿವ್ಯಕ್ತಿ ರೂಪಗಳನ್ನು ನೋಡುತ್ತಿರುತ್ತೇನೆ. ಚಿತ್ರಕಲೆ ನೋಡುತ್ತೇನೆ, ನಾಟಕಗಳಿಗೆ ಹೋಗುತ್ತೇನೆ. ಇವೆಲ್ಲವೂ ತುಂಬ ಆಸಕ್ತಿಕರ. ಬರವಣಿಗೆಯಲ್ಲಿ ಏನೇ ಇದ್ದರೂ ಎಲ್ಲವೂ ಭಾಷೆಯಲ್ಲಿ ಬರಬೇಕು. ಆದರೆ ಅದೇ ಬೇರೆ ಕಲೆಗಳಲ್ಲಿ ಭಾಷೆಯ ಹಂಗಿಲ್ಲದ ಅಭಿವ್ಯಕ್ತಿ ಇರುತ್ತಲ್ಲ, ಅದು ನಂಗೆ ಎಕ್ಸೈಟಿಂಗ್‌ ಅನಿಸುತ್ತದೆ. ಸಿನಿಮಾದಲ್ಲಿ ವಿಷುವಲ್‌ ಭಾಷೆ ಇರುತ್ತದೆ. ಇವರೆಲ್ಲ ಹೇಗೆ ಅನುಭವವನ್ನು ಶೋಧಿಸುತ್ತಾರೆ ಎಂಬುದು ಆಸಕ್ತಿಕರವಾಗಿರುತ್ತದೆ.

Exit mobile version