| ವಾಣಿ ಸುರೇಶ್ ಕಾಮತ್
ದಕ್ಷಿಣ ಕನ್ನಡದವಳಾದ ನಾನು ಭೂತ, ದೆವ್ವಗಳ ಕತೆಗಳನ್ನು ಕೇಳುತ್ತಾ, ಬೆಚ್ಚುತ್ತಾ ಬೆದರುತ್ತಾ, ಕೇಳಿದ ಕತೆಗಳಿಗೆ ನಾನು ಕೂಡ ಒಂದಿಷ್ಟು ಮಸಾಲೆ ಬೆರೆಸಿ ಇತರರನ್ನು ಹೆದರಿಸುತ್ತಾ ಬೆಳೆದವಳು. ನಾನು ಪ್ರೈಮರಿ ಶಾಲೆಯಲ್ಲಿರುವಾಗ ಆಗಷ್ಟೇ ಟಿವಿಯನ್ನು ಕಂಡ ಪುಟ್ಟ ಊರು ನನ್ನದು. ಹಾಗಾಗಿ ಹಿರಿಯರ ಬಾಯಿಯಿಂದ ಕತೆಗಳನ್ನು ಕೇಳುತ್ತಾ, ಗ್ರಾಮ ಪಂಚಾಯತ್ತಿನ ಲೈಬ್ರರಿಗೆ ಹೋಗಿ ಕತೆ ಪುಸ್ತಕಗಳನ್ನು ಓದುತ್ತಾ ಕಳೆದ ಬಾಲ್ಯ ನನ್ನದು.
ನಮ್ಮ ಊರಲ್ಲಿ ಕೆಲವರ ಮನೆಗಳಲ್ಲಿ ಪಂಜುರ್ಲಿ, ಕಲ್ಲುರ್ಟಿ ಮುಂತಾದ ದೈವಗಳ ಆರಾಧನೆ ನಡೆಯುತ್ತದೆ. ಕಲ್ಕುಡ ಎಂಬ ದೈವಕ್ಕೆ ನದಿಯ ಇನ್ನೊಂದು ಬದಿಯಲ್ಲಿ ಗುಡಿಯಿದ್ದು ಪ್ರತಿವರ್ಷ ನೇಮ ನಡೆಯುತ್ತದೆ. ಇದಲ್ಲದೆ ಆಗ ಮಕ್ಕಳ ಕತೆಗಳ ಪ್ರಕಾರ ಮಾಸ್ತಿ ಎಂಬ ದೈವದ ಅನಧಿಕೃತ ಇರುವಿಕೆಯೂ ಇತ್ತು. ಬಿಳಿ ಸೀರೆಯುಟ್ಟು, ಉದ್ದವಾದ ತಲೆಗೂದಲನ್ನು ಬಿಚ್ಚಿ ರಾತ್ರಿ ಹೊತ್ತು ಸುತ್ತಾಡುವ ಮಾಸ್ತಿ ಮನುಷ್ಯರ ಬಳಿ ಬಂದು ದುಡ್ಡು ಕೇಳುತ್ತಾ ಕೈ ಚಾಚುತ್ತಾಳಂತೆ. ಆದರೆ ಆಕೆಯ ಅಂಗೈಗೆ ತೂತು ಇರುವ ಕಾರಣ ಹಾಕಿದ ನಾಣ್ಯ ಕೆಳಗೆ ಬೀಳುತ್ತದೆಯಂತೆ. ಆ ನಾಣ್ಯ ಹೆಕ್ಕಲು ಬಗ್ಗಿದವರಿಗೆ ಆಕೆ ಜೋರಾಗಿ ಬೆನ್ನಿಗೆ ಗುದ್ದುತ್ತಾಳಂತೆ! ವೀಳ್ಯದೆಲೆ ಕೊಟ್ಟರೆ ಭಯಪಟ್ಟು ಮಾಯವಾಗುತ್ತಾಳಂತೆ! ಇದು ಸುಮಾರು ಹನ್ನೆರಡು ವರ್ಷದೊಳಗಿನ ಮಕ್ಕಳ ನಡುವೆ ತುಂಬಾ ಫೇಮಸ್ ಆಗಿದ್ದ ಕತೆ! ಆದರೆ ಆ ಹಳ್ಳಿಯಲ್ಲಿ ಮಧ್ಯರಾತ್ರಿ ಪರ್ಸ್ ಹಿಡಿದು ಹೋಗುವವರ್ಯಾರು? ಬಿಳಿಸೀರೆ ಉಟ್ಟ ಹೆಣ್ಣಿಗೆ ದುಡ್ಡು ಕೊಡುವಷ್ಟು ಛಾತಿ ಉಳ್ಳವರ್ಯಾರು? ಆಕೆಯಿಂದ ಪೆಟ್ಟು ತಿಂದ ವ್ಯಕ್ತಿ ಯಾರಾದರೂ ಇದ್ದಾರಾ ಎಂದು ಪ್ರಶ್ನಿಸುವಷ್ಟು ಬುದ್ದಿವಂತಿಕೆ ನಮಗ್ಯಾರಿಗೂ ಇರಲಿಲ್ಲ. ಒಂದು ರೂಪಾಯಿ ನಾಣ್ಯವೇ ದೊಡ್ಡ ಶ್ರೀಮಂತಿಕೆಯ ಕುರುಹಾಗಿದ್ದ ಆ ವಯಸ್ಸಿನಲ್ಲಿ ನೋಟನ್ನು ಕಂಡವರು ನಮ್ಮ ಗುಂಪಿನಲ್ಲಿ ಇರಲೂ ಇಲ್ಲ. ಹಾಗಾಗಿ ಮಾಸ್ತಿಯ ಅಂಗೈ ಮೇಲೆ ನೋಟು ಇಟ್ಟರೆ ಏನಾಗುತ್ತದೆ ಎಂಬ ಪ್ರಶ್ನೆ ನಮಗ್ಯಾರಿಗೂ ಮೂಡಿರಲಿಲ್ಲ ಬಿಡಿ! ಆದರೆ ರಾತ್ರಿ ಹೊತ್ತು ಎಚ್ಚರವಾದಾಗ ಮಾತ್ರ ಒಣಗಲು ಹಾಕಿದ್ದ ಬಟ್ಟೆಯನ್ನು ನೋಡಿ ಮಾಸ್ತಿಯೆಂದು ಭ್ರಮಿಸಿ ಹೆದರಿ ನಡುಗಿದ್ದುಂಟು.
ಇಷ್ಟೇ ಅಲ್ಲದೆ ಎತ್ತರವಾದ ಕುದುರೆಯ ಮೇಲೆ ಸವಾರಿ ಮಾಡುವ ದೈವವನ್ನು ಕೂಡ ನಮ್ಮೂರಿನಲ್ಲಿ ಕಂಡವರಿದ್ದರಂತೆ. ಒಂದು ರಾತ್ರಿ ಕುದುರೆಯ ಖರಪುಟದ ಸದ್ದು ಕೇಳಿದವರೊಬ್ಬರು ಎದ್ದು ನೋಡಿದಾಗ ಮನೆಯಷ್ಟು ಎತ್ತರದ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ನೋಡಿ ಹೆದರಿ ಜ್ವರದಿಂದ ಬಳಲಿದ್ದರಂತೆ. ಇನ್ನೊಬ್ಬರು ಮಧ್ಯರಾತ್ರಿ ಹೊತ್ತು ಮನೆಗೆ ಹೋಗುತ್ತಿದ್ದಾಗ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತ ವ್ಯಕ್ತಿ ಕೂತಲ್ಲೇ ಗಿರಗಿರನೆ ಸುತ್ತುವುದನ್ನು ನೋಡಿ ಕಂಗಾಲಾಗಿ ಓಡಿಯೇ ಮನೆ ಸೇರಿದ್ದರಂತೆ!
ಇಷ್ಟೇ ಅಲ್ಲದೆ ದೈವವನ್ನು ಆರಾಧಿಸುತ್ತಿದ್ದ ಮನೆಗಳ ಮಕ್ಕಳು ಕೂಡ ಕುತೂಹಲಕಾರಿ ಕತೆಗಳನ್ನು ಹೇಳುತ್ತಿದ್ದರು. ರಾತ್ರಿ ಹೊತ್ತು ಗಗ್ಗರದ ಸದ್ದು ಕೇಳಿಸುವುದಂತೆ, ಕಳ್ಳಕಾಕರಿಂದ ದೈವ ರಕ್ಷಿಸುವುದಂತೆ, ಬಡವರಾಗಿದ್ದವರು ದೈವದ ಅನುಗ್ರಹದಿಂದಾಗಿ ಶ್ರೀಮಂತರಾಗಿರುವುದಂತೆ – ಇತ್ಯಾದಿ ಕತೆಗಳು ಎಷ್ಟು ರೋಚಕವಾಗಿರುತ್ತಿದ್ದವೆಂದರೆ ಬಡವರಾಗಿದ್ದ ನಮಗೂ ಕೇಳಿದ್ದೆಲ್ಲಾ ಕೊಡುವ ಯಾವುದಾದರೂ ದೈವ ಸಿಗಬಾರದೇ ಅನ್ನಿಸುತ್ತಿತ್ತು!
ನಮ್ಮೂರಿಗೆ ಒಂದು ವಿಶೇಷತೆಯಿದೆ. ಅದು ಎರಡು ನದಿಗಳು ಸಂಗಮವಾಗುವ ಸ್ಥಳವಾಗಿರುವುದರಿಂದ ಸಂಗಮ ಸ್ಥಳದಲ್ಲಿ ಅಸ್ಥಿ ವಿಸರ್ಜನೆ, ಪಿಂಡ ವಿಸರ್ಜನೆಯ ಕಾರ್ಯ ವರ್ಷವಿಡೀ ನಡೆಯುತ್ತಲೇ ಇರುತ್ತದೆ. ಹಾಗಾಗಿ ಮಹಾಲಯ ಬಂತೆಂದರೆ ಸಾಕು, ಹದಿನೈದು ದಿನಗಳ ಮಟ್ಟಿಗೆ ನಮಗೆಲ್ಲಾ ಗೃಹ ಬಂಧನವೇ. ಪ್ರತಿನಿತ್ಯದಂತೆ ನಮಗೆ ನದಿ ತೀರಕ್ಕೆ ಆಡಲು ಹೋಗುವಂತಿರಲಿಲ್ಲ. ಅದರಲ್ಲೂ ವಯಸ್ಸಿಗೆ ಬಂದ ಹುಡುಗಿಯರು, ಮುಟ್ಟಾದ ಹೆಂಗಸರಿಗಂತೂ ನದಿತೀರ ನಿಷಿದ್ಧವೇ. ಮಕ್ಕಳು ರಾತ್ರಿ ಹೊತ್ತು ಅಡ್ಡಾಡುವಂತಿರಲಿಲ್ಲ. ಅಷ್ಟೇ ಏಕೆ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆಲ್ಲಾ ತಲೆಗೂದಲು ಬಿಚ್ಚಿ ಕುಳಿತುಕೊಳ್ಳುವಂತಿರಲಿಲ್ಲ. ಮಹಾಲಯದಲ್ಲಿ ದೆವ್ವಗಳು ಸ್ವತಂತ್ರವಾಗಿ ಸುತ್ತಾಡುತ್ತವೆ ಎಂಬ ಮಾತಿತ್ತು. ಬಿಚ್ಚುಗೂದಲು ಕಂಡರೆ ದೆವ್ವ ಬಂದು ತಲೆಯ ಮೇಲೆ ಏರಿ ಕೂರುತ್ತದೆ ಎಂದು ಹಿರಿಯರು ಗದರಿಸುತ್ತಿದ್ದರು. ಆಗ ಪ್ರಚಲಿತವಿದ್ದ ಅಜ್ಜಿಕತೆಯ ಪ್ರಕಾರ ಒಬ್ಬ ವ್ಯಕ್ತಿ ನಡುಮಧ್ಯಾಹ್ನ ಕೋಳಿಯನ್ನು ಹಿಡಿದುಕೊಂಡು ನದಿ ದಾಟುತ್ತಿದ್ದನಂತೆ. ಆಗ ಕೋಳಿಯನ್ನು ಯಾರೋ ಹಿಡಿದು ಎಳೆದಂತಾಗಿ, ಆತ ತಿರುಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲವಂತೆ! ಪುನಃ ಮುಂದಕ್ಕೆ ಹೆಜ್ಜೆ ಹಾಕಿದಾಗ ಇದೇ ಪುನರಾವರ್ತನೆಯಾಗಿ ಆತ ಕೋಳಿಯನ್ನು ಬಿಟ್ಟು ಓಡಿಹೋಗಿ ಜೀವ ಉಳಿಸಿಕೊಂಡನಂತೆ.
ಹೀಗೆ ದೈವ ಮತ್ತು ದೆವ್ವ – ಎರಡೂ ನಮ್ಮೂರಲ್ಲಿ ಇದ್ದಿದ್ದರಿಂದ ಚಿಕ್ಕಂದಿನಲ್ಲಿ ನನಗೆ ಅವೆರಡರ ನಡುವಿನ ವ್ಯತ್ಯಾಸ ತಿಳಿದಿರಲಿಲ್ಲ. ಇವೆರಡನ್ನೂ ಸೇರಿಸಿ ‘ಭೂತ’ ಎಂದು ಕರೆದು ಹೆದರುವುದಷ್ಟೇ ಮಾತ್ರವಿತ್ತು. ಭೂತದ ಕೋಲದ ದೈವಪಾತ್ರಿಗಳ ಅರಿಸಿನ ಹಚ್ಚಿದ ಮುಖವನ್ನು ನೋಡಿ ಹೆದರಿ, ಒಂದೆರಡು ರಾತ್ರಿ ಗಗ್ಗರದ ಸದ್ದನ್ನು ಕೇಳಿದಂತೆ ಭ್ರಮೆಯಾಗಿದ್ದುಂಟು.
ಈಗ ಈ ಬರಹದ ಮುಖ್ಯ ಭೂಮಿಕೆಗೆ ಬರೋಣ. ನಾನು ಏಳನೇ ತರಗತಿಯಲ್ಲಿದ್ದಾಗ ನಮ್ಮೂರಿನಲ್ಲಿ ಮಕ್ಕಳಿಗಾಗಿ ಒಂದು ದಿನದ ಶಿಬಿರವೊಂದು ನಡೆಯಿತು. ವೆಂಕಟರಮಣ ದೇವಸ್ಥಾನದ ಮದುವೆಯ ಹಾಲ್ ನಲ್ಲಿ ಸುಮಾರು ಐವತ್ತರಷ್ಟು ಹೆಣ್ಣುಮಕ್ಕಳು ಮತ್ತು ಮಾತೆಯರು ಸೇರಿದ್ದ ಕಾರ್ಯಕ್ರಮ ಅದು. ಒಂದೇ ವಯಸ್ಸಿನ ಹೆಣ್ಣುಮಕ್ಕಳು ಪರಿಚಿತರಾಗಿ ಹರಟೆ ಹೊಡೆಯಲು ಎಷ್ಟು ಹೊತ್ತು ಬೇಕು ಹೇಳಿ? ಅದರಲ್ಲೂ ನಾನು ಆ ವಯಸ್ಸಿನಲ್ಲಿ ಮಾತಿನ ಮಲ್ಲಿಯಾಗಿದ್ದೆ. ಜೊತೆಗೆ ಅಧಿಕಪ್ರಸಂಗಿ ಮತ್ತು ತುಂಟಿ ಕೂಡ ಆಗಿದ್ದೆ.
ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ
ಶಿಬಿರದ ಸಂಜೆ ಹಿರಿಯರೊಬ್ಬರು ರಾಮಾಯಣದ ಕತೆ ಹೇಳಲು ನಮ್ಮನ್ನೆಲ್ಲಾ ಕೂರಿಸಿಕೊಂಡರು. ನಮ್ಮನ್ನು ಉದ್ದೇಶಿಸಿ “ರಾಮ ಯಾರು ಮಕ್ಕಳೇ?” ಎಂದು ಕೇಳಿದರು. ಎಲ್ಲರೂ ಸುಮ್ಮನಿದ್ದದ್ದು ನೋಡಿ ನಾನು ಜೋರಾಗಿ “ಸೀತೆಯ ಗಂಡ” ಎಂದು ಹೇಳಿದೆ. ಆ ಹಿರಿಯರು “ಹೌದುʼʼ ಎಂದು ಹೇಳಿ, “ಸೀತೆ ಯಾರು ಹೇಳಿ ನೋಡೋಣ?” ಎಂದು ಕೇಳಿದರು. ಮೊದಲೇ ಅಧಿಕಪ್ರಸಂಗಿಯಾಗಿದ್ದ ನನ್ನ ಉತ್ಸಾಹ ಈಗ ಎರಡು ಪಟ್ಟಾಗಿತ್ತು. ನಾನು “ಸೀತೆ, ರಾಮನ ಹೆಂಡತಿ” ಎಂದು ಕಿರುಚಿದೆ. ಆಗ ಆ ಹಿರಿಯರ ಮುಖ ಗಂಭೀರವಾಯಿತು. ನನ್ನತ್ತ ಬೆಟ್ಟು ತೋರಿಸಿ “ಏನಮ್ಮಾ ನಿನ್ನ ಹೆಸರು?” ಎಂದು ಕೇಳಿದರು. ಅವರ ನಗುವಿಲ್ಲದ ಮುಖ ನೋಡಿ ನನ್ನ ಉತ್ಸಾಹ ಜರ್ರನೆ ಇಳಿದುಹೋಗಿ, ಬಾಯಿ ಕಟ್ಟಿಹೋಯಿತು. ಮೆಲ್ಲನೆ “ವಾಣಿ” ಎಂದು ಹೇಳಿದಾಗ “ ಓ, ಹೆಸರಿಗೆ ತಕ್ಕ ಹಾಗೆ ಇದ್ದಿ ನೀನು. ಮಾತು ಜಾಸ್ತಿ ನಿನಗೆ” ಅಂದುಬಿಟ್ಟರು! ಎಲ್ಲರೆದುರು ನನ್ನನ್ನು ನಿಲ್ಲಿಸಿ ಇನ್ ಡೈರೆಕ್ಟ್ ಆಗಿ “ಬಾಯಿ ಮುಚ್ಚಿ ಕುಳಿತುಕೋ” ಎಂದು ಹೇಳಿದಂತಾಗಿ ನಾನು ನಾಚಿಕೆಯಿಂದ ಮುದುಡಿಹೋದೆ. ಆಗಲೇ ನಾನು ಗುಂಪಿನಲ್ಲಿ ನೋಟೆಡ್ ಆಗಿಹೋಗಿದ್ದೆ.
ರಾತ್ರಿ ಊಟದ ಸಮಯದಲ್ಲಿ ಪಕ್ಕದ ಊರಿನ ಒಂದಿಷ್ಟು ಹುಡುಗಿಯರ ಜೊತೆಗೆ ಗೆಳೆತನವಾಗಿ ಹರಟೆ ಹೊಡೆಯಲು ಶುರು ಮಾಡಿದೆವು. ಮೊದಲೇ ಕತೆ ಕಟ್ಟಲು ಎತ್ತಿದ ಕೈ ನನ್ನದು. ನನಗೆ ಗೊತ್ತಿದ್ದ ಭೂತದ ಕತೆಗಳನ್ನೆಲ್ಲಾ ಬಣ್ಣಬಣ್ಣವಾಗಿ ವರ್ಣಿಸತೊಡಗಿದೆ. ಅದರಲ್ಲೂ ನಮ್ಮ ಶಿಬಿರವಿದ್ದ ಜಾಗ ಮಾಸ್ತಿ ಓಡಾಡುವ ಜಾಗವೆಂದು ಹೆಮ್ಮೆಯಿಂದಲೇ ಹೇಳಿಕೊಂಡೆ. ಪಕ್ಕದೂರಿನ ಹುಡುಗಿಯರು ಬಹುಶಃ ನಮ್ಮೂರಿನಲ್ಲಿ ರಾತ್ರಿ ಹೊತ್ತು ಭೂತಗಳ ಜಾತ್ರೆಯೇ ನಡೆಯುತ್ತದೆಯೆಂದು ಊಹಿಸಿಕೊಂಡರೋ ಏನೋ, ಯಾರೂ ಮಾತನಾಡದೆ ಸುಮ್ಮನೆ ನನ್ನ ಕತೆಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಎಲ್ಲರೂ ಮಲಗಿದ ನಂತರವೂ ನಾನು ಮತ್ತು ಒಂದಿಬ್ಬರು ಹುಡುಗಿಯರು ಸೇರಿ ಪಿಸಪಿಸನೆ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ಒಬ್ಬ ಹುಡುಗಿ ತನಗೆ ಬಾತ್ರೂಮಿಗೆ ಹೋಗಬೇಕೆಂದು ಹೇಳಿದಾಗ, ನಾನೇ ಲೀಡರ್ ಶಿಪ್ ವಹಿಸಿಕೊಂಡೆ. ಒಟ್ಟು ನಾಲಕ್ಕು ಜನರು ಸೇರಿ ಮಂದ ಬೆಳಕಿನಲ್ಲಿ ಹಾಲ್‌ನ ಒಳಗೆಯೇ ಆದರೆ ಹಿಂಬದಿಯಲ್ಲಿದ್ದ ವಾಶ್ ರೂಮಿನ ಕಡೆಗೆ ಹೋದೆವು.
ಇದನ್ನೂ ಓದಿ | ಸಣ್ಣ ಕಥೆ | ಕಾಲ ವಟಿ
ನನಗೆ ಒಳಗೊಳಗೇ ಭಯವಾಗುತ್ತಿದ್ದರೂ ನಾನು ಅದನ್ನು ತೋರಿಸುವಂತಿರಲಿಲ್ಲ. ಅಲ್ಲಿಂದ ಬರುತ್ತಿದ್ದಾಗ ಒಂದು ಕಿಟಕಿಯ ಮೇಲಿನ ಅರ್ಧ ಬಾಗಿಲು ತೆರೆದುಕೊಂಡಿತ್ತು. ನಾನು ಸುಮ್ಮನಿರದೆ ಅಲ್ಲಿಂದ ಹೊರಗೆ ಇಣುಕಿ ನೋಡಿದೆ. ಹೊರಗೇನಿತ್ತೋ, ಆ ವೆಂಕಟರಮಣನೇ ಬಲ್ಲ! ನನಗಂತೂ ಬೆಳ್ಳಗಿನ ಮುಖವೊಂದು ತೋರಿದಂತಾಗಿ “ಓಓಓಓ, ಮಾಸ್ತೀಈಈ” ಎಂದು ಜೋರಾಗಿ ಕಿರುಚಿ ಓಡತೊಡಗಿದೆ! ನನ್ನ ಹಿಂದೆಯೇ ಮಿಕ್ಕಿದ ಹುಡುಗಿಯರೂ ಕಿರುಚುತ್ತಾ ಓಡಿ ಬಂದರು. ನಮ್ಮ ಗದ್ದಲ ಕೇಳಿ ಮಲಗಿದ್ದ ಮಾತೆಯರು ಎಚ್ಚರಗೊಂಡು ನಮಗೊಂದಿಷ್ಟು ಗದರಿದಾಗ ತೆಪ್ಪಗೆ ಬಿದ್ದುಕೊಂಡೆವು.
ಮರುದಿನ ಬೆಳಗ್ಗೆ ಶಿಬಿರದ ಎಲ್ಲಾ ಮಕ್ಕಳನ್ನು ಆಟವಾಡಿಸಲು ನದಿತೀರಕ್ಕೆ ಕರೆದೊಯ್ಯಲಾಯಿತು. ಆಟದ ನಂತರ ತಿಂಡಿಯ ಕಾರ್ಯಕ್ರಮ ನಡೆದು ಶಿಬಿರ ಸಮಾಪ್ತಿಯಾಗುವುದಿತ್ತು. \ಆಟವಾಡುತ್ತಿದ್ದಾಗ ಹಿಂದಿನ ದಿನ ಪರಿಚಯವಾಗಿದ್ದ ಹುಡುಗಿಯರಿಬ್ಬರು ಬಂದು, ಕೆಂಪು ಚೂಡಿದಾರ್ ಹಾಕಿದ ಹುಡುಗಿಯೊಬ್ಬಳು ದೆವ್ವ, ಭೂತದ ಕತೆ ಹೇಳಿ ಇತರ ಹುಡುಗಿಯರನ್ನು ಹೆದರಿಸ್ತಾ ಇದ್ದಾಳಂತ ಕಂಪ್ಲೇಂಟ್ ಕೊಟ್ಟಿದ್ದಾರಂತೆ ಅಂದರು. ನಾನು ಆ ಹುಡುಗಿ ಯಾರಿರಬಹುದು ಎಂದು ಸುತ್ತಲೂ ನೋಡಿದಾಗ ಕೆಂಪು ಚೂಡಿದಾರ್ ಧರಿಸಿದವರ್ಯಾರೂ ಕಾಣಿಸಲಿಲ್ಲ. ನನ್ನ ಊರಿನ ಇತರ ಹುಡುಗಿಯರು ಅಲ್ಲವೆಂದರೆ ಮಿಕ್ಕಿದವಳು ನಾನೇ ತಾನೇ! ಈ ಯೋಚನೆ ಬಂದು ನಾನು ಧರಿಸಿದ್ದ ಬಟ್ಟೆ ನೋಡಿದವಳೇ ಭೂತದರ್ಶನವಾದವಳಂತೆ ನಿಂತು ಬಿಟ್ಟೆ. ಆ ‘ಕೆಂಪು ಚೂಡಿದಾರದ ಹುಡುಗಿ’ ಬೇರೆ ಯಾರೂ ಆಗಿರದೆ ನಾನೇ ಆಗಿದ್ದೆ!
ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ಸೀದಾ ಮನೆಗೆ ಹೋದರೆ ಹೇಗೆ ಎಂಬ ಯೋಚನೆ ನನಗೆ ಮೊದಲಿಗೆ ಬಂತು. ಆದರೆ ಒಂದು ಜೊತೆ ಬಟ್ಟೆ ಮತ್ತು ಬೆಡ್ ಶೀಟ್ ಹಾಕಿಟ್ಟಿದ್ದ ಬ್ಯಾಗಿನ ನೆನಪಾದಾಗ ಆ ಪ್ಲಾನು ತೋಪಾಯಿತು. ಶಿಬಿರದಿಂದ ಬರೀ ಇನ್ನೂರು ಮೀಟರ್ ದೂರವಿದ್ದ ಮನೆಗೆ ಹೋದರೆ ಅಮ್ಮ ಪುನಃ ಬ್ಯಾಗು ತರಲು ಕಳಿಸುತ್ತಾರೆ ಎಂದು ಗ್ಯಾರಂಟಿ ಗೊತ್ತಿತ್ತು. ಹಿಂದಿನ ದಿನ ರಾಮಾಯಣದ ಕತೆ ಹೇಳುವಾಗ ನಾನು ನೋಟೆಡ್ ಆಗಿದ್ದೂ ನೆನಪಿಗೆ ಬಂತು. ಏನು ಮಾಡಬೇಕೆಂದು ತೋಚದೆ ಕೊನೆಗೆ ಹೆದರಿ ನಡುಗುತ್ತಾ ಶಿಬಿರ ಸೇರಿ, ಬ್ಯಾಗು ಕೈಯಲ್ಲಿಡಿದು ಮನೆಯತ್ತ ನನ್ನದು ಒಂದೇ ಓಟ! ಈ ಘಟನೆಯಿಂದ ಸುಧಾರಿಸಿಕೊಳ್ಳಲು ಒಂದಿಷ್ಟು ಸಮಯ ತೆಗೆದುಕೊಂಡು ಆಮೇಲೆ ಕತೆ ಹೇಳುವ ಕಾಯಕವನ್ನು ಪುನಃ ಮುಂದುವರಿಸಿದೆ !
ಮೇಲೆ ಹೇಳಿದ ದೈವ, ದೆವ್ವದ ಕತೆಗಳೆಲ್ಲಾ ಎಷ್ಟು ಸತ್ಯವೋ, ಎಷ್ಟು ಸುಳ್ಳೋ ಯಾರಿಗೂ ಗೊತ್ತಿಲ್ಲ! ರಾತ್ತಿ ಎಂಟುಗಂಟೆಗೇ ಅಂಗಡಿ, ಮನೆಗಳೆಲ್ಲಾ ಬಾಗಿಲು ಮುಚ್ಚಿ ಮಲಗಿಕೊಳ್ಳುತ್ತಿದ್ದ ಕಾಲದಲ್ಲಿ ಈ ಕತೆಗಳೇ ಎಲ್ಲಾ ಮಕ್ಕಳಿಗೆ ಮನೋರಂಜನೆ ನೀಡುತ್ತಿದ್ದವು. ಆಗ ಪ್ರತಿಯೊಂದು ಮಗುವಿನೊಳಗೂ ಒಬ್ಬ ಕತೆಗಾರನಿರುತ್ತಿದ್ದ. ಧ್ವನಿಯಲ್ಲಿ ಮಾರ್ಪಾಡು ಮಾಡುತ್ತಾ, ಮುಖದಲ್ಲಿ ಭಾವನೆಗಳನ್ನು ಮೂಡಿಸಿ, ಹಾವಭಾವದೊಂದಿಗೆ ಕತೆಗಳನ್ನು ಹೇಳುವ ಕಲೆ ಹೆಚ್ಚಿನ ಮಕ್ಕಳಿಗೆ ಒಲಿದಿತ್ತು. ಆದರೆ ಬುದ್ಧಿ ಬೆಳೆಯುತ್ತಿದ್ದಂತೆ, ಪ್ರತಿಯೊಂದನ್ನು ಪ್ರಶ್ನಿಸಲು ಶುರು ಮಾಡಿದ ಮೇಲೆ ದೈವವೇ ಬೇರೆ, ದೆವ್ವಗಳೇ ಬೇರೆ ಎಂಬ ಸತ್ಯದರ್ಶನವಾಗಿ ದೈವದ ಬಗೆಗಿನ ಭಯ ಮಾಯವಾಗಿತ್ತು. ಮಾಸ್ತಿಯ ಬಗೆಗಿನ ಕತೆಗಳು ಕೇಳುವುದು ಕಡಿಮೆಯಾಗಿ ಅದು ದೆವ್ವವೋ, ದೈವವೋ ಎಂದು ತಲೆ ಕೆಡಿಸಿಕೊಳ್ಳುವ ಪ್ರಸಂಗ ಬರಲೇ ಇಲ್ಲ! ಇಂದು ಹಾರರ್ ಸಿನೆಮಾ ನೋಡುವಾಗ ಮಾತ್ರ ದೆವ್ವಗಳನ್ನು ನೋಡಿ ಹೆದರುತ್ತೇನೆಯೇ ವಿನಹ ಮಿಕ್ಕಿದ ಸಮಯದಲ್ಲಿ “ಎಬ್ಬೇ, ಪ್ರೇತಗೀತ ಅಂತ ಏನೂ ಇಲ್ಲ ಮಾರ್ರೆ!” ಎಂದು ಹೇಳಿ ಬಿಡುತ್ತೇನೆ.
ಜೀವನದಲ್ಲಿ ಕಳೆದುಕೊಂಡ ಅಮೂಲ್ಯವಾದ ವಸ್ತುಗಳೆಂದರೆ ‘ಬಾಲ್ಯ’ ಮತ್ತು ‘ಮುಗ್ಧತೆ’ ಎಂದಷ್ಟೇ ಹೇಳಬಲ್ಲೆ. ‘ಬಾರ್ ಬಾರ್ ಆತೀ ಹೈ ಮುಜ್ ಕೋ ಮಧುರ್ ಯಾದ್ ಬಚ್ಪನ್ ತೇರಿ…’ ಎಂಬ ಕವಿತೆಯ ನೆನಪಾಗಿ ಅದು ನನ್ನ ಕಣ್ಣಲ್ಲಿ ಆರ್ದ್ರತೆ ಮೂಡಿಸುತ್ತದೆ.
(ಲೇಖಕರು ಕತೆಗಾರ್ತಿ)