Site icon Vistara News

ನಾಡದೇವಿ ಚಿತ್ರ | ಹೊಸ ವರ್ಣಚಿತ್ರಕ್ಕೆ ಗದಗ ಕಲಾವಿದರ ವಿರೋಧ; ಸಂಕೇತಗಳು ಸ್ಪಷ್ಟವಿರಲಿಲ್ಲ ಎಂದ ಸರ್ಕಾರದ ಸಮಿತಿ

ಬೆಂಗಳೂರು: ನಾಡದೇವಿಯ ಹೊಸ ವರ್ಣಚಿತ್ರವನ್ನು ಅಧಿಕೃತಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಗದಗದ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದು, 1953ರಲ್ಲಿ ಸಿ.ಎನ್‌. ಪಾಟೀಲರು ರಚಿಸಿದ ಚಿತ್ರವನ್ನೇ ಆಯ್ಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ವಿರೋಧಕ್ಕೆ, ಹೊಸ ವರ್ಣಚಿತ್ರ ರಚನೆಯ ಸಮಿತಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಗದಗದ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರ ಕಲ್ಪನೆಯ ಆಧಾರದಲ್ಲಿ ಕಲಾವಿದ ಸಿ.ಎನ್‌. ಪಾಟೀಲರು ಚಿತ್ರ ರಚಿಸಿದ್ದರು. ಏಕೀಕರಣದ ಸಂದರ್ಭದಲ್ಲಿ ಈ ಚಿತ್ರವನ್ನು ರಚಿಸಲಾಗಿದ್ದು, ಕರ್ನಾಟಕದ ಅನೇಕ ಸಾಂಸ್ಕೃತಿಕ ವೈಭವವನ್ನೂ ಒಳಗೊಂಡಿದೆ. ಹಾಗಾಗಿ ಈ ಚಿತ್ರವನ್ನೇ ಅಧಿಕೃತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುಬ ಡಿ. ಮಹೇಂದ್ರ, ನಾಡದೇವತೆ ಚಿತ್ರ ಕುರಿತಂತೆ ಗದಗ ಜಿಲ್ಲೆಯ ಸಾಹಿತಿ, ಕಲಾವಿದರು ಆಕ್ಷೇಪ ವ್ಯಕ್ತವಾಗಿರುವುದು ಆಶ್ಚರ್ಯ. ಹಿಂದೆ ನಾಡಗೀತೆ ಆಯ್ಕೆಯ ಸಂದರ್ಭದಲ್ಲೂ, ನಾಡಗೀತೆ ಹಾಡಿನ ಧಾಟಿ ಆಯ್ಕೆ ಸಂದರ್ಭದಲ್ಲೂ ಅಪಸ್ವರಗಳು ವ್ಯಕ್ತವಾಗಿದ್ದವು. ೧೯೫೩ರಲ್ಲಿ ಗದಗಿನ ಕಲಾವಿದ ಸಿ.ಎಸ್. ಪಾಟೀಲರು ಕಲಾಕೃತಿ ರಚಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಅಂಶಗಳು ಕನ್ನಡ ನಾಡು, ಸಂಸ್ಕೃತಿಗೆ ತಾಳೆಯಾಗುತ್ತಿಲ್ಲ. ಕಾರಣ ಈ ಚಿತ್ರ ಸಾಹಿತ್ಯ ಹಿನ್ನೆಲೆಯವರ ಕಲ್ಪನೆಗಳಿಗೆ ರೂಪು ನೀಡಿದ್ದಾಗಿದ್ದು, ಕಲಾವಿದನ ಪ್ರತಿಭೆ, ಕ್ರಿಯಾಶೀಲತೆಗಳಿಗೆ ಅವಕಾಶ ಇಲ್ಲವಾಗಿರುವುದು ಕಂಡುಬರುತ್ತದೆ.

೧) ಮೊದಲಿಗೆ ಕಿರೀಟವೇ ಉತ್ತರ ಭಾರತದ ಶೈಲಿಯಲ್ಲಿದೆ, ಪಾರ್ಸಿ ಪೌರಾಣಿಕ ನಾಟಕಗಳ ಹೋಲುತ್ತದೆ. ಮುಕುಟವು ಕನ್ನಡ ಸಾಂಸ್ಕೃತಿಕ ಕಲಾ ವೈಭವವನ್ನು ಎತ್ತಿ ತೋರುತ್ತಿಲ್ಲ,
೨) ಬಿಳಿಯ ಬಣ್ಣದ ಸೀರೆ ಸಂಕೇತವೂ ಸ್ಟಷ್ಟತೆಯಿಲ್ಲ, ದಕ್ಷಿಣ ಕರ್ನಾಟಕ ಹಾಗೂ ಕೊಡಗು ಜಿಲ್ಲೆಗಳಲ್ಲಿ ಬಿಳಿಯ ಬಣ್ಣದ ರೇಷ್ಮೆಯಂಚಿನ ಸೀರೆಯನ್ನು ವಧುವನ್ನು ಧಾರೆಯೆರೆಯುವ ಸಂದರ್ಭದಲ್ಲಿ ಉಡಿಸುವುದು ಸಾಮಾನ್ಯ,
೩) ಅಲ್ಲದೆ ನಾಡದೇವಿಯ ಶಾರೀರ ಅಂಗಾಗಗಳು ಪ್ರಬುದ್ದತೆ ಇಲ್ಲ, ಅತ್ತ ಯೂರೋಪಿಯನ್ನಿನ ಶಾರೀರ ಶಾಸ್ರ್ರ (ಅನಾಟಮಿ) ಆಧಾರಿಸಿಯೂ ಇಲ್ಲ, ಇತ್ತ ನಮ್ಮದೆ ಶಿಲ್ಪಶಾಸ್ತ್ರ ಶಾರೀರ ಪ್ರಮಾಣ ಬದ್ಧಗಳನ್ನು ಅನುಸರಿಸಿಲ್ಲ, (ವಿಚಿತ್ರವೆಂದರೆ ಅಪಸ್ವರ ಎತ್ತುತ್ತಿರುವ ನಮ್ಮ ಕಲಾವಿದರಿಗೆ ಇವೆಲ್ಲವೂ ಏಕೆ ಕಂಡಿಲ್ಲ ಎಂಬುದೇ ಆಶ್ಚರ್ಯಕರ)
೩) ಕೈಗಳ ರಚನೆಯಲ್ಲಿ ಒಂದು ಕೆಳಗೆ ಇನ್ನೊಂದು ಕೈ ಮೇಲೆ ಇದೆ. ಸಾಂಪ್ರದಾಯಿಕ ಚಿತ್ರರಚನಾ ತಂತ್ರವಾಗಲಿ ಕೌಶಲ್ಯವಾಗಲಿ ಅನುಸರಿಸಿಲ್ಲ.
೪)ಇನ್ನು ಬಹುಮುಖ್ಯ ಸಂಗತಿಯೇ ನಾಡದೇವಿಯ ಕಾಲುಗಳು ಮರೆಯಾಗಿರುವುದು.
೫) ಹಾಗೆ ಕರ್ನಾಟಕ ನಕಾಶೆಯ ತಳಕ್ಕೆ (ಕೇರಳ ರಾಜ್ಯದ ಬಳಿ) ಸಮುದ್ರ ಅಲೆಗಳ ರಚನೆಯಿರುವುದು ವಾಸ್ತವಿಕತೆಗೆ ದೂರವಾಗಿದೆ. ಹಾಗೂ ಕೇರಳ ಭಾಗವನ್ನು ನಾಡದೇವಿ ಒಳಗೊಳ್ಳುವುದು ಆ ರಾಜ್ಯದ ಆಕ್ಷೇಪಣೆಗೆ ಕಾರಣವಾಗಬಹುದು.
೬) ಕರ್ನಾಟಕ ನಕಾಶೆಯೂ ಸರಿಪ್ರಮಾಣದಲ್ಲಿ ಚಿತ್ರಿತವಾಗಿಲ್ಲ,
೭) ಇನ್ನು ಪುಸ್ತಕ ಹಿಡಿದಿರುವುದು ತಾಳೆಯ ಗರಿಯಾಗಿದೆ, ಆಧುನಿಕ ಪುಸ್ತಕ ರಚನೆಕ್ರಮದಲ್ಲಿಯೂ ವ್ಯತ್ಯಾಸವಿದೆ.
೮) ಇನ್ನು ಬಹುಮುಖ್ಯ ಸಂಗತಿಯೆಂದರೆ ನಾವುಗಳು ಭಾವನಾತ್ಮಕವಾಗಿ ಒಪ್ಪಿರುವ ಕನ್ನಡದ ಧ್ವಜವೇ ಈ ಚಿತ್ರದಲ್ಲಿ ಇಲ್ಲ.
೯) ಹಾಗೆ ನಾಡದೇವಿಯ ಸುತ್ತಲಿನ ಚಿತ್ರಣಗಳು ಬಹಳ ಸಂಖ್ಯೆಯಲ್ಲಿದ್ದು ಶಾಲಾ ಮಕ್ಕಳು ಕಲಾಸಕ್ತರು ನಾಡದೇವಿ ಪ್ರತಿಮೆಯನ್ನು ಪ್ರತಿನಕಲಿಸಲು ಮತ್ತು ಇಂದಿನ ಡಿಜಿಟಲ್‌ ಯುಗಕ್ಕೆ ಮುದ್ರಣಕ್ಕೆ ಬಳಸುವಲ್ಲಿ ಕಷ್ಟಕರವಾಗಿದೆ.

ಈ ಎಲ್ಲ ಅಂಶಗಳನ್ನು ಸಮಿತಿ ಗಮನಿಸಿಯೇ ನಾಡದೇವಿಗೆ ಅಗತ್ಯವಿರುವ ಎಲ್ಲ ಕಲಾರಚನೆ ಸೂಕ್ಷಗಳನ್ನು ಗಮನದಲ್ಲಿರಿಸಿ ಅಧ್ಯಯನ ನಡೆಸಿ ರಚಿಸಲಾಗಿದೆ. ಮತ್ತು ನಾಡಿನ ಹಿರಿಯ ಕಲಾವಿದ ಬಿ.ಕೆ.ಎಸ್.‌ ವರ್ಮಾ ಅವರನ್ನೂ ಒಳಗೊಂಡು ಹಲವು ಕಲಾವಿದರ ಸಂಪರ್ಕಿಸಿ, ಚಿತ್ರ ರಚನೆಗೆ ಮುಂದಾಗಿದ್ದೇವೆ. ಈ ನಾಡದೇವಿಯ ವಸ್ತ್ರಾಭರಣವನ್ನೇಲ್ಲವೂ ಗದುಗಿನವರೆ ಆದ ಹಾಗೂ ಈ ವಿಷಯದಲ್ಲಿ ಸಾಕಷ್ಟು ಅಧ್ಯಯನ ಮಾಡಿ, ಹಲವಾರು ಸಂಶೋಧನಾ ಗ್ರಂಥಗಳ ಬರೆದಿರುವ ಡಾ, ಚೂಡಾಮಣಿ ನಂದಗೋಪಾಲ್‌ ಇವರೆ ಮುತುರ್ವಜಿಯಲ್ಲಿ ನಿರೂಪಿಸಿದೆ ಎಂದು ಮಹೇಂದ್ರ ಹೇಳಿದ್ದಾರೆ.

ಇದನ್ನೂ ಓದಿ | ಕರ್ನಾಟಕ ಮಾತೆಯ ಹೊಸ ಅಧಿಕೃತ ಚಿತ್ರ ಇದು: ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಬಳಕೆ ಕಡ್ಡಾಯ

Exit mobile version