Site icon Vistara News

ಡಾ. ಗುರುಲಿಂಗ ಕಾಪಸೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ

gurulinga kapse

ನವ ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿ ಹಿರಿಯ ಲೇಖಕರಾದ ಡಾ. ಗುರುಲಿಂಗ ಕಾಪಸೆ ಅವರಿಗೆ ದೊರೆತಿದೆ.

ಡಾ. ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ. ಸ. ಖಾಂಡೇಕರ್ ಅವರ ʼಒಂದು ಪುಟದ ಕಥೆ’ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ. ʼಒಂದು ಪುಟದ ಕಥೆ’ (ಮೂಲ- ʼಏಕಾ ಪಾನಾಚಿ ಗೋಷ್ಠʼ) ಖಾಂಡೇಕರ್ ಅವರ ಆತ್ಮಕಥೆ. ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು. ಅವರ ʼಯಯಾತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು.

ಕಾಪಸೆಯವರು ಅನುವಾದಿಸಿದ ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳ ಸಮಗ್ರವಾದ ವಿವರಣೆ ನೀಡುತ್ತದೆ. ಖಾಂಡೇಕರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಳಿಯ. ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮಣೇರಿಕರ್ ಕುಟುಂಬದ ಉಷಾ ಅವರು ಖಾಂಡೇಕರ್‌ ಅವರ ಹೆಂಡತಿ. ಮದುವೆಗಾಗಿ ಅವರು ಮಹಾರಾಷ್ಟ್ರದ ರತ್ನಾಗಿರಿಯಿಂದ ಅಸೋಗಾ ಗ್ರಾಮದ ವರೆಗೆ ಚಕ್ಕಡಿ ಕಟ್ಟಿಕೊಂಡು ಬಂದ ವಿವರಗಳನ್ನು ಕೃತಿಯಲ್ಲಿ ನೀಡಿದ್ದಾರೆ.

ಇದನ್ನೂ ಓದಿ: ಕವಿ ಎಚ್ಚೆಸ್ವಿ ಜನ್ಮದಿನ: ತೂಗುಮಂಚದ ಕವಿಯ ಓದಬೇಕಾದ 7 ಕವನಗಳು

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದ ಅನುವಾದ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯು ಕಾಪಸೆಯವರು ಅನುವಾದಿಸಿದ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆಮಾಡಿತು. ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಹಿರಿಯ ಲೇಖಕರಾದ ಡಾ. ಬಸವರಾಜ ಕಲ್ಗುಡಿ, ಕವಿಗಳಾದ ಬಿ. ಆರ್. ಲಕ್ಷ್ಮಣರಾವ್, ಡಾ. ಸುಬ್ಬು ಹೊಲೆಯಾರ್ ಇದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ನೆರವೇರಲಿದೆ. ಪ್ರಶಸ್ತಿಯು 50,000 ರೂಪಾಯಿ ನಗದು, ಸ್ಮೃತಿ ಫಲಕ, ಶಾಲು ಸನ್ಮಾನ ಒಳಗೊಂಡಿರುತ್ತದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್‌ಗೆ ಸೇಡಿಯಾಪು ಪ್ರಶಸ್ತಿ

Exit mobile version