Site icon Vistara News

ಹನುಮ ಜಯಂತಿ: ಆಂಜನೇಯನ ನಾಲ್ಕು ಅಪರೂಪದ ಕತೆಗಳು

hanuman

ಹನುಮನಿಗೆ ಋಷಿಗಳ ಶಾಪ
ಹನುಮಂತ ಬಾಲ್ಯದಲ್ಲಿ ಭಯಂಕರ ಚೇಷ್ಟೆಯ ಬಾಲಕನಾಗಿದ್ದ. ಕೆಲವೊಮ್ಮೆ ಕಾಡಿನಲ್ಲಿ ಧ್ಯಾನಸ್ಥ ಋಷಿಗಳನ್ನು ಕೀಟಲೆ ಮಾಡುತ್ತಿದ್ದ. ಅವನ ಚೇಷ್ಟೆಗಳು ಅಸಹನೀಯ ಎನಿಸಿದಾಗ ಋಷಿಗಳು ಸಿಟ್ಟಿಗೆದ್ದರು. ಆದರೆ ಅವನು ಇನ್ನೂ ಬಾಲಕ, ಮಾತ್ರವಲ್ಲ ಅವನಿಂದ ಮುಂದೆ ಶ್ರೀರಾಮನ ಕಾರ್ಯದಲ್ಲಿ ಸಹಾಯವಾಗಲಿದೆ ಎಂಬುದನ್ನು ದಿವ್ಯದೃಷ್ಟಿಯಿಂದ ತಿಳಿದರು.

ಆದರೆ ಹನುಮಂತನ ಚೇಷ್ಟೆ ಸಹಿಸಲಸಾಧ್ಯವಾದಾಗ, ಒಂದು ಸೌಮ್ಯವಾದ ಶಾಪವನ್ನು ನೀಡಿದರು. ಇದರಿಂದಾಗಿ ಅವನು ತನ್ನ ಸ್ವಂತ ಸಾಮರ್ಥ್ಯಗಳನ್ನು ಮರೆತೇಬಿಟ್ಟ. ಇನ್ನೊಬ್ಬ ವ್ಯಕ್ತಿ ನೆನಪಿಸದ ಹೊರತು ಅವನಿಗೆ ತನ್ನ ಶಕ್ತಿ ನೆನಪಾಗುತ್ತಿರಲಿಲ್ಲ. ಹೀಗಾಗಿ ಅವನು ಚೇಷ್ಟೆ ತೊರೆದು ಸೌಮ್ಯನಾದ. ಮುಂದೆ ಸೀತಾನ್ವೇಷಣ ಕಾರ್ಯದ ವೇಳೆಗೆ ಸುಮ್ಮನೇ ಕುಳಿತಿದ್ದ ಅವನಿಗೆ ಜಾಂಬವಂತರು ಆತನ ಸಾಮರ್ಥ್ಯಗಳನ್ನು ನೆನಪಿಸಿದರು. ಆಗ ಅವನು ತ್ರಿವಿಕ್ರಮಾಕಾರದಲ್ಲಿ ಬೆಳೆದು ಸಮುದ್ರವನ್ನು ಉಲ್ಲಂಘಸಿ ಹಾರಿದ.

ರಾಮಾಯಣ ಬರೆದ ಹನುಮ

ನಮಗೆ ಗೊತ್ತಿರುವಂತೆ ಆದಿಕವಿ ವಾಲ್ಮೀಕಿ ರಾಮಾಯಣ ಬರೆದವರು. ಆದರೆ ವಾಲ್ಮೀಕಿಗೂ ಮುನ್ನವೇ ಹನುಮ, ರಾಮನ ಕತೆಯನ್ನು ಬರೆದಿದ್ದ. ಆ ಕತೆ ಹೀಗೆ. ಶ್ರೀರಾಮನ ನಿರ್ಗಮನದ ಬಳಿಕ, ಹಿಮಾಲಯದ ಬೃಹತ್‌ ಶಿಲಾಪರ್ವತದ ಮೇಲೆ ರಾಮನನ್ನು ನೆನೆಯುತ್ತಾ ಆತನ ಕತೆಯನ್ನು ಹನುಮ ಬರೆದಿಟ್ಟಿದ್ದ. ವಾಲ್ಮೀಕಿಗೆ ರಾಮಾಯಣವನ್ನು ಬರೆದ ನಂತರ ಈ ಬಗ್ಗೆ ಗೊತ್ತಾಯಿತು. ಅವನು ಹನುಮ ಬರೆದ ರಾಮಾಯಣವನ್ನು ನೋಡಲು ಹೋದ. ಅದು ವಾಲ್ಮೀಕಿಯ ರಾಮಾಯಣಕ್ಕಿಂತಲೂ ಅದ್ಭುತವಾಗಿ, ಕಾವ್ಯಮಯವಾಗಿತ್ತು.

ಇದನ್ನು ಕಂಡು, ತನ್ನ ಕೆಲಸ ವ್ಯರ್ಥವಾಯಿತಲ್ಲಾ ಎಂದು ವಾಲ್ಮೀಕಿಗೆ ವ್ಯಥೆಯಾಯಿತು. ಅದನ್ನು ಹನುಮ ಗಮನಿಸಿದ. ಏನೆಂದು ಕೇಳಿದ. ಆಗ ವಾಲ್ಮೀಕಿ ತಾನೂ ರಾಮಾಯಣ ಬರೆದಿರುವುದಾಗಿ ಹೇಳಿದ. ಆಗ ಪವನಸುತ ಒಂದು ಕ್ಷಣವೂ ಯೋಚಿಸದೆ, ತಾನು ಬರೆದ ಕಾವ್ಯವಿದ್ದ ಶಿಲಾಪರ್ವತವನ್ನೇ ಬುಡದಿಂದ ಎತ್ತಿ ನೆಲಕ್ಕೆ ಕುಕ್ಕಿ ಹುಡಿ ಹುಡಿ ಮಾಡಿದ. ಅವನಿಗೆ ತನ್ನ ಹೆಸರು ಲೋಕದಲ್ಲಿ ಉಳಿಯಲಿ ಎಂಬ ಸ್ವಾರ್ಥವಿರಲಿಲ್ಲ. ಕಾವ್ಯರಚನೆ ಅವನಿಗೆ ಶ್ರೀರಾಮನನ್ನು ನೆನೆಯುವ ಮಾಧ್ಯಮ ಆಗಿತ್ತಷ್ಟೇ.

ಹನುಮಂತನಿಗೆ ಒಬ್ಬ ಮಗ

ಬ್ರಹ್ಮಚಾರಿ ಹನುಮನಿಗೆ ಒಬ್ಬ ಮಗನಿದ್ದ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು. ಸೀತಾನ್ವೇಷಣೆಯ ಬಳಿಕ ಹನುಮನನ್ನು ಹಿಡಿದು ಲಂಕೆಯ ರಾಕ್ಷಸರು ಆತನ ಬಾಲಕ್ಕೆ ಬೆಂಕಿಯಿಕ್ಕಿದಾಗ, ಬಾಲದಿಂದಲೇ ಲಂಕೆಯನ್ನು ಸುಟ್ಟು ನಾಶ ಮಾಡಿದ ಹನುಮಂತ. ನಂತರ ಬೆವರಿದ ದೇಹದೊಂದಿಗೆ ಆತ ಸಮುದ್ರವನ್ನು ಲಂಘಿಸಿ ಹಾರಿ ಬರುತ್ತಿದ್ದಾಗ ಅವನ ಬೆವರ ಹನಿ ಸಾಗರದಲ್ಲಿದ್ದ ಒಂದು ಮಹಾ ಮತ್ಸ್ಯದ ಬಾಯಿಗೆ ಬಿದ್ದು, ಅದು ಗರ್ಭ ಧರಿಸಿತು. ಅದರಿಂದ ಜನಿಸಿದವನೇ ಮಕರಧ್ವಜ.

ಮುಂದೆ, ಲಂಕಾಯುದ್ಧದ ಸಂದರ್ಭದಲ್ಲಿ, ರಾಮ ಲಕ್ಷ್ಮಣರನ್ನು ಅಹಿರಾವಣ ಎಂಬ ರಾಕ್ಷಸ ಪಾತಾಳಕ್ಕೆ ಒಯ್ದು ಅಡಗಿಸಿ ಇಟ್ಟ. ಅವರನ್ನು ಹುಡುಕುತ್ತಾ ಬಂದ ಹನುಮನಿಗೆ, ಅಹಿರಾವಣನ ಕೋಟೆಗೆ ಕಾವಲಾಗಿದ್ದ ಮಕರಧ್ವಜ ಎದುರಾದ. ನೀನು ಯಾರೆಂದು ವಿಚಾರಿಸಿದಾಗ, ಹನುಮನ ಮಗನೆಂಬ ಉತ್ತರ. ಹನುಮನಿಗೇ ಅಚ್ಚರಿಯಾಯಿತು. ಅದು ಹೇಗೆ ಎಂಬ ಕತೆಯೂ ಮಕರಧ್ವಜನಿಂದಲೇ ತಿಳಿಯಿತು. ನಾನೇ ನಿನ್ನ ತಂದೆ ಎಂದ ಹನುಮ. ಮಕರಧ್ವಜ ಭಕ್ತಿಯಿಂದ ನಮಿಸಿದನಾದರೂ, ಅಹಿರಾವಣನ ಕೋಟೆ ಕಾಯುವ ತನ್ನ ಸ್ವಾಮಿನಿಷ್ಠೆಗೆ ಚ್ಯುತಿ ತರಲು ಒಪ್ಪಲಿಲ್ಲ. ಹೀಗಾಗಿ ಮಗನನ್ನು ಹೋರಾಟದಲ್ಲಿ ಸೋಲಿಸಿ ಹನುಮಂತ ಅಹಿರಾವಣನ ಕೋಟೆಯ ಒಳಗೆ ಹೋಗಬೇಕಾಯಿತು. ಮುಂದೆ ಅಹಿರಾವಣನ ಸಾವಿನ ಬಳಿಕ ಮಕರಧ್ವಜ ಪಾತಾಳದ ರಾಜನಾದ.

ರಾಮನ ತೆರಳಲು ಬಿಡದ ಹನುಮ

ಹತ್ತು ಸಾವಿರ ವರ್ಷಗಳ ಕಾಲ ಬದುಕಿ ಆಡಳಿತ ಮಾಡಿದರೂ ಶ್ರೀರಾಮನು ನಿರ್ಯಾಣ ಹೊಂದಲಿಲ್ಲ. ಯಾಕೆಂದರೆ ಪ್ರತಿಬಾರಿ ಅವನನ್ನು ಕೊಂಡೊಯ್ಯಲು ಕಾಲಪುರುಷ ಬಂದಾಗಲೂ, ಆಂಜನೇಯ ಆತನನ್ನು ತಡೆಯುತ್ತಿದ್ದ. ಕೊನೆಗೊಂದು ದಿನ ಕಾಲಪುರುಷನೇ ಇದರ ಬಗ್ಗೆ ರಾಮನ ಗಮನ ಸೆಳೆದ. ತಾನು ಭೂಮಿಯಿಂದ ತೆರಳಲೇಬೇಕಿದೆ, ಆದರೆ ಹಾಗಾಗಬೇಕಾದರೆ ಆಂಜನೇಯ ಇಲ್ಲಿರಬಾರದು ಎಂದು ಅರ್ಥ ಮಾಡಿಕೊಂಡ ರಾಮ, ತನ್ನ ಮುದ್ರೆಯುಂಗುರವನ್ನು ಕೆಳಕ್ಕೆ ಬೀಳಿಸಿದ. ಅದು ಪಾತಾಳಕ್ಕೆ ಹೋಯಿತು.

ಅದನ್ನು ತರಲು ಹನುಮನಿಗೆ ಆದೇಶಿಸಿದ. ಹನುಮ ಉಂಗುರ ತರಲು ಪಾತಾಳಕ್ಕೆ ತೆರಳಿದ. ಅಲ್ಲಿ ನಾಗಲೋಕವನ್ನು ತಲುಪಿದ. ಅಲ್ಲಿ ಬಲಿ ಚಕ್ರವರ್ತಿ ಇದ್ದ. ರಾಮನ ಉಂಗುರವನ್ನು ಹುಡುಕಲು ಹನುಮ ಆತನ ಸಹಾಯ ಕೇಳಿದ. ಆಗ ಬಲಿ ಚಕ್ರವರ್ತಿ ಮುಗುಳ್ನಕ್ಕು, ಒಂದು ದೊಡ್ಡ ಪಾತ್ರೆಯನ್ನು ತರಿಸಿ ಹನುಮನ ಮುಂದಿಟ್ಟ. ಅದರ ತುಂಬಾ ಒಂದೇ ಥರದ ನೂರಾರು ಮುದ್ರೆಯುಂಗುರಗಳಿದ್ದವು. ಹನುಮನಿಗೆ ಅದೇನು ಎಂದು ಅರ್ಥವಾಗಲಿಲ್ಲ.

ಆಗ ಬಲಿ ಹೇಳಿದ- ʼʼಈ ಹಿಂದೆ ಎಷ್ಟೋ ಕಲ್ಪಗಳಲ್ಲಿ ಅದೆಷ್ಟೋ ರಾಮರು ಆಗಿ ಹೋಗಿದ್ದಾರೆ. ಅವರೆಲ್ಲರೂ ತಮ್ಮ ಸಮಯ ಬಂದಾಗ ಮರಳಿ ಭೂಮಿ ಬಿಟ್ಟು ಕ್ಷೀರಸಾಗರಕ್ಕೆ ಹೋಗಿದ್ದಾರೆ. ಆದರೆ ಪ್ರತಿಬಾರಿಯೂ ಇಂಥದೇ ಸನ್ನಿವೇಶ ಉಂಟಾಗಿ, ಆಂಜನೇಯನನ್ನು ಅಲ್ಲಿಂದ ತಪ್ಪಿಸಲು ತನ್ನ ಮುದ್ರೆಯುಂಗುರವನ್ನು ಪಾತಾಳಕ್ಕೆ ಬೀಳಿಸುತ್ತಾನೆ ರಾಮ. ಇದು ಅಂಥ ಉಂಗುರಗಳ ಪಾತ್ರೆ. ನಿನ್ನ ರಾಮನ ಉಂಗುರ ಹುಡುಕಿ ಸಿಕ್ಕರೆ ಕೊಂಡೊಯ್ಯಿʼʼ ಎನ್ನುತ್ತಾನೆ. ಆಗ ಹನುಮನಿಗೆ ತನ್ನ ಕಾರ್ಯದ ವ್ಯರ್ಥತೆ, ಕಾಲಚಕ್ರದ ಸತ್ಯಗಳು ಮನದಟ್ಟಾಗುತ್ತವೆ. ಭಾರವಾದ ಹೃದಯದಿಂದ ಭೂಮಿಗೆ ಮರಳುತ್ತಾನೆ. ಅಷ್ಟರಲ್ಲಿ ಶ್ರೀರಾಮ ಭೂಮಿಯಿಂದ ನಿರ್ಯಾಣ ಹೊಂದಿರುತ್ತಾನೆ.

ಇದನ್ನೂ ಓದಿ: Book Review: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?

Exit mobile version