86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ವಿಶೇಷ ಸಂದರ್ಶನ
ಸಂದರ್ಶನ: ಹರೀಶ್ ಕೇರ
ಕವಿ, ಚಿತ್ರಸಾಹಿತಿ ಡಾ.ದೊಡ್ಡರಂಗೇಗೌಡರು ಹಾವೇರಿಯಲ್ಲಿ ಇದೇ 6, 7, 8ರಂದು ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಸಮ್ಮೇಳನಾಧ್ಯಕ್ಷ ಪೀಠದ ಭಾಷಣ, ನುಡಿಯ ಆಶಯ, ಗಡಿನಾಡು, ಪರ್ಯಾಯ ಸಾಹಿತ್ಯ ಸಮ್ಮೇಳನ, ಸಿನಿಮಾ ಸಾಹಿತಿ ಎಂಬ ಕಡೆಗಣನೆ- ಎಲ್ಲದರ ಕುರಿತು ಅವರು ಆಡಿರುವ ಮಾತುಗಳು ಇಲ್ಲಿವೆ.
ಸಂ: ನಿಮ್ಮ ಅಧ್ಯಕ್ಷ ಭಾಷಣದಲ್ಲಿ ಯಾವ ವಿಚಾರಗಳು ಆದ್ಯತೆ ಪಡೆದಿವೆ?
ದೊರಂಗೌ: ಒಂದನೆಯದಾಗಿ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕ- ಇವುಗಳ ಆಂತರಿಕ ಸಂಬಂಧಗಳು. ಕರ್ನಾಟಕದಲ್ಲಿ ಕನ್ನಡಿಗ, ಕನ್ನಡಿಗನೊಳಗೆ ಕನ್ನಡ. ಇವುಗಳ ಸಾವಯವ ಸಂಬಂಧ, ಅವುಗಳಿಗೆ ಇರುವ ಸಮಸ್ಯೆ, ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದರತ್ತ ಲಕ್ಷ್ಯ ನೀಡಿದ್ದೇನೆ.
ಎರಡನೆಯದಾಗಿ, ಗಡಿನಾಡಿನ ಸಮಸ್ಯೆಗಳು. ಬೆಳಗಾವಿ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ನಾಡಿನ ಅವಿಭಾಜ್ಯ ಅಂಗ. ಅದನ್ನು ಶತಾಯಗತಾಯ ಉಳಿಸಿಕೊಳ್ಳಬೇಕು. ಇನ್ನೊಂದು ಕಡೆ ಕಾಸರಗೋಡಿನಲ್ಲಿ ಕನ್ನಡದ ಅವಗಣನೆಯಾಗುತ್ತಿದೆ. ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಬಿಟ್ಟು, ಮಲಯಾಳವನ್ನು ಬಲಾತ್ಕಾರವಾಗಿ ಕಲಿಸಲಾಗುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೇರಳ ಸರ್ಕಾರದ ಜತೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.
ಮೂರನೆಯದು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಲಾಭವನ್ನು ನಾವು ಸರಿಯಾಗಿ ಪಡೆದೇ ಇಲ್ಲ. ತಮಿಳುನಾಡಿನವರು ನೋಡಿ, ಶಾಸ್ತ್ರೀಯ ಭಾಷೆ ಅಧ್ಯಯನ- ಕೆಲಸಕಾರ್ಯಕ್ಕಾಗಿ 500 ಕೋಟಿ ರೂ. ಪಡೆದಿದ್ದಾರೆ. ಅದನ್ನು ಸರ್ವಾಂಗ ಸುಂದರವಾಗಿ ಮಾಡಲು ಪಣ ತೊಟ್ಟಿದ್ದಾರೆ. ನಮ್ಮಲ್ಲಿ ಇನ್ನೂ ಅದಕ್ಕೊಂದು ಕಟ್ಟಡ ಎಲ್ಲಿ ಆಗಬೇಕು ಎಂಬ ವಿವಾದದಲ್ಲೇ ಸಮಯ ಸರಿದುಹೋಗಿದೆ. ಮುಖ್ಯವಾಗಿ ನಮ್ಮ ಸಂಸದರು ಪಣ ತೊಡಬೇಕು, ಸರ್ಕಾರದಿಂದ ಅನುದಾನ ತರಬೇಕು. ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.
ನನ್ನ ಭಾಷಣದ ಇತರ ಅಂಶಗಳೆಂದರೆ, ಸಂಸದರು ತಮ್ಮ ಅನುದಾನದಲ್ಲಿ ಕನಿಷ್ಠ ಮೂರು ಹಳ್ಳಿ ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಿದರೆ ನಾಡಿಗೆ ಪ್ರಯೋಜನವಾಗುತ್ತದೆ. ಬರಿಯ ಮಾತಿನಿಂದ ಪ್ರಯೋಜನವಿಲ್ಲ. ಇನ್ನು ರೈಲ್ವೆ, ಬ್ಯಾಂಕ್ ಮುಂತಾದ ಕಡೆ ಕನ್ನಡದ ಬಳಕೆಯಾಗಬೇಕು; ಅಲ್ಲಿನ ಅರ್ಜಿಗಳು ಕನ್ನಡದಲ್ಲಿ ಸಿಗುವಂತಾಗಬೇಕು. ನ್ಯಾಯಾಲಯಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಬಳಸಬೇಕು. ಕೇಂದ್ರ ಸರ್ಕಾರಿ ಪರೀಕ್ಷೆಗಳನ್ನು ಕನ್ನಡದಲ್ಲಿ ದೊರೆಯುವ ಹಾಗೆ ಮಾಡಬೇಕು. ಇನ್ನೂ ಇಂಗ್ಲಿಷನ್ನೇ ʼಅನ್ನದ ಭಾಷೆʼ ಎಂದು ಕರೆಯುವ ಗೀಳು ನಮ್ಮಲ್ಲಿದೆ. ಅದು ಸರಿಯಲ್ಲ. ಕನ್ನಡವೂ ಅನ್ನದ ಭಾಷೆಯೇ. ಕನ್ನಡದಲ್ಲಿ ಮಾತಾಡುವ, ಬರೆಯುವ ಉಮೇದು ಶಿಕ್ಷಕರು, ಪೋಷಕರಲ್ಲಿ ಬಂದಾಗ ನುಡಿಯ ಜತೆಗೆ ನಾಡೂ ಅಭಿವೃದ್ಧಿಯಾಗುತ್ತದೆ.
ಸಂ: ಕನ್ನಡ ಖಾಸಗಿ ಪುಸ್ತಕೋದ್ಯಮದ ಉಚ್ಛ್ರಾಯ, ಇನ್ನೊಂದು ಕಡೆ ಸರ್ಕಾರಿ ಖರೀದಿಯ ಅವಗಣನೆ. ಇದು ಸಾಹಿತ್ಯವನ್ನು ಹೇಗೆ ಪ್ರಭಾವಿಸುತ್ತದೆ?
ದೊರಂಗೌ: ಖಾಸಗಿ ಸಂಸ್ಥೆಗಳು ತುಂಬಾ ಚೆನ್ನಾಗಿ ಪುಸ್ತಕದ ಉದ್ಯಮ ನಡೆಸುತ್ತಿವೆ. ಆದರೆ ಸರ್ಕಾರ ಇದನ್ನು ಸಾಂಸ್ಕೃತಿಕ ಸೇವೆಯಾಗಿ ಪರಿಗಣಿಸಬೇಕು. ನಮ್ಮಲ್ಲಿನ ಪ್ರಾಧಿಕಾರ, ಕಸಾಪಗಳಿಗೆ ಮುದ್ರಿಸುವುದು ಗೊತ್ತಿದೆ, ಆದರೆ ಹೇಗೆ, ಎಲ್ಲಿ ಮಾರಬೇಕು ಗೊತ್ತಿಲ್ಲ. ಗ್ರಂಥಾಲಯ ಇಲಾಖೆ ಎರಡು ಮೂರು ವರ್ಷಗಳಿಂದ ಖರೀದಿ ಮಾಡಿದ ಗ್ರಂಥಗಳಿಗೆ ಹಣ ಕೊಟ್ಟಿಲ್ಲ. ಹೀಗೆ ಮಾಡಿದರೆ ಪುಸ್ತಕೋದ್ಯಮ ಬೆಳೆಯುವುದು ಹೇಗೆ? ಗ್ರಂಥಾಲಯ ಸೆಸ್ ಎಂದು ಸರ್ಕಾರ ವಿಧಿಸುವ ಆರು ಶೇಕಡ ಹಣವನ್ನು ಗ್ರಂಥಾಲಯ ಅಭಿವೃದ್ಧಿ, ಪುಸ್ತಕ ಖರೀದಿಗಳಿಗೇ ಬಳಸಬೇಕು. ಕಸದ ರಾಶಿಯ ವಿಲೇವಾರಿಗೆ ಅದನ್ನು ಬಳಸುತ್ತಿದ್ದೇವೆ ಎಂಬಂಥ ಕಾರಣಗಳನ್ನು ಕೊಡುವುದು, ದುರ್ಬಳಕೆ ಮಾಡುವುದು ಸರಿಯಲ್ಲ. ಖರೀದಿಯೂ ಕಡಿಮೆ ಇದೆ. ಪಕ್ಕದ ತಮಿಳುನಾಡಿನಲ್ಲಿ ಒಂದು ಪುಸ್ತಕದ 500 ಪ್ರತಿ ಖರೀದಿಸುತ್ತಾರೆ. ಕೇರಳದಲ್ಲೂ ಅಷ್ಟೆ. ಆದರೆ ನಮ್ಮಲ್ಲಿ 300 ಮಾತ್ರ. ಇದು ಯಾಕೆ? ಉದ್ದೇಶಿತ ಏಕಗವಾಕ್ಷಿ ಸ್ಕೀಮ್ ನನೆಗುದಿಗೆ ಬಿದ್ದಿದೆ.
ಸಂ: ನೀವು ಪರಿಷತ್ ಸದಸ್ಯರಾಗಿ ಅಧಿಕಾರಶಾಹಿಯನ್ನು ಹತ್ತಿರದಿಂದ ನೋಡಿದ್ದೀರಿ. ಇಲ್ಲಿ ಕನ್ನಡದ ಒಲವು ಮೂಡಿಸಬಹುದು ಎನ್ನುತ್ತೀರಾ?
ದೊರಂಗೌ: ಕನ್ನಡ ಮೂಲದ ಅಧಿಕಾರಿಗಳು ಕನ್ನಡ ಬಳಸಬೇಕು. ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬ ಹೊರಗಿನ ಅಧಿಕಾರಿಯೂ ಮೂರು ತಿಂಗಳ ಕಾಲ ಕನ್ನಡ ಭಾಷಾ ಬಳಕೆಯ ತರಬೇತಿ ಕಡ್ಡಾಯವಾಗಿ ಪಡೆಯಬೇಕು. ಇದನ್ನು ಕಸಾಪ, ಪ್ರಾಧಿಕಾರಗಳು ಮಾಡಬಹುದು. ಒಟ್ಟಾರೆಯಾಗಿ ಕನ್ನಡದಲ್ಲಿ ವ್ಯವಹರಿಸುವ ಸಾಮಾನ್ಯನ ಪರವಾಗಿರಬೇಕು. ಇನ್ನು ಹೊರಗಿನಿಂದ ಬಂದು ಇಲ್ಲಿ ಉದ್ಯಮ ನಡೆಸುವವರು ಕನ್ನಡ ಫಲಕ ಹಾಕಬೇಕು, ಕನ್ನಡದಲ್ಲಿ ವ್ಯವಹಾರ ನಡೆಸಬೇಕು. ಆದರೆ ಸುಮಾರು ಮಂದಿ ಉದ್ಧಟತನದಿಂದ ನಡೆದುಕೊಳ್ಳುತ್ತಾರೆ, ಬೇಕಿದ್ದರೆ ದಂಡ ಕಟ್ಟುತ್ತೇನೆ, ಕನ್ನಡ ಮಾತಾಡುವುದಿಲ್ಲ ಎನ್ನುವವರಿದ್ದಾರೆ. ಇಂಥವರ ಲೈಸೆನ್ಸ್ ರದ್ದುಪಡಿಸಬೇಕು. ಕನ್ನಡದಲ್ಲಿ ನಡೆಸುತ್ತೇವೆ ಎಂದು ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವ ಮಾಲೀಕರನ್ನೂ ಪತ್ತೆಹಚ್ಚಿ ಶಿಕ್ಷಿಸಬೇಕು. ಇಂಥವರಲ್ಲಿ ದೊಡ್ಡ ರಾಜಕಾರಣಿಗಳೂ ಇದ್ದಾರೆ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಲಂಚ ರುಷುವತ್ತುಗಳು ನಡೆಯುತ್ತಿವೆ. ವಶೀಲಿಬಾಜಿ ಮಾಡಿದವರಿಗೆ ವಿಶೇಷ ಸೌಲಭ್ಯವೂ ಉಂಟು. ಇದು ತಪ್ಪಬೇಕು.
ಸಂ: ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ಒಂದು ಗೋಷ್ಠಿ ನಡೆಸುವುದು ಒಳ್ಳೆಯ ರೂಢಿ. ಆದರೆ ಈ ಬಾರಿ ಅದಿಲ್ಲ. ಇದೇಕೆ ಹೀಗೆ?
ದೊರಂಗೌ: ಹೌದು, ನನ್ನ ಸಾಹಿತ್ಯದ ಚರ್ಚೆ ಆಗಬೇಕಾದ್ದು ಅಗತ್ಯವಿತ್ತು. ಆದರೆ ನಡೆಯುತ್ತಿಲ್ಲ ಎಂಬ ಬೇಸರ ನನಗೂ ಇದೆ. ನಾನು ಮುಖ್ಯವಾಗಿ ಕವಿ. ನನ್ನ ಕಾವ್ಯದ ವಿಮರ್ಶೆ ಆಗಬೇಕು. ʼಮಣ್ಣಿನ ಹಣತೆಗಳುʼ ಎಂಬ ನನ್ನ ಹೊಸ ಕಾವ್ಯ ಸಂಕಲನವೂ ಈ ಬಾರಿ ಬಿಡುಗಡೆಯಾಗುತ್ತಿದೆ. ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಬಗ್ಗೆ ಚರ್ಚೆಯಾದಾಗ, ಅಧ್ಯಕ್ಷತೆಗೆ ಅವರ ಯೋಗ್ಯತೆಯನ್ನು ದೃಢೀಕರಿಸಿದಂತಾಗುತ್ತದೆ. ಅದಾಗಬೇಕಿತ್ತು.
ಸಂ: ಆದರೆ ಚಿತ್ರಗೀತ ರಚನೆಕಾರರಾಗಿ ನಿಮಗೆ ಬಂದ ಜನಪ್ರಿಯತೆ, ಕತೆಗಾರ- ವಿಮರ್ಶಕರಾಗಿ ಬರಲಿಲ್ಲ.
ದೊರಂಗೌ: ಆ ಜನಪ್ರಿಯತೆ ನನಗೆ ಬಹಳಷ್ಟನ್ನು ಕೊಟ್ಟಿದೆ. ಆದರೆ ಅದು ಶಾಪವೂ ಆಗಿದೆ. ವಿಮರ್ಶಕರು ನನ್ನನ್ನು ಕಡೆಗಣಿಸಿದ್ದಾರೆ ಎಂದು ನಾನು ಆಕ್ಷೇಪಿಸುವುದಿಲ್ಲ. ಯಾಕೆಂದರೆ ಅಲ್ಲೂ ಸಾಕಷ್ಟು ಒಳರಾಜಕೀಯವಿದೆ. ನಾನು ಗೀತ ರಚನೆಕಾರನಾಗಿರುವಂತೆಯೇ ವಿಮರ್ಶಕ ಕೂಡ. ಸಾಕಷ್ಟು ಕತೆಗಳನ್ನು ಬರೆದಿದ್ದೇನೆ. ಆದರೆ ಸಾಹಿತ್ಯ ವಲಯ ನನ್ನನ್ನು ಸಿನಿಮಾ ಹಾಡು ಬರೆಯುವವನೆಂದು ದೂರವಿಟ್ಟಿತು. ಆದರೆ ಜನರ ಪ್ರೀತಿ ಸಿಕ್ಕಿತು. ಸಾಮಾಜಿಕ ಪ್ರಜ್ಞೆಯನ್ನು ಹೊಂದಿರುವ ನನ್ನ ʼಯುಗವಾಣಿʼ ಕವನ ಸಂಕಲನ ಸಮಾಜದಲ್ಲಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತದೆ. ಅದು ಇಂಗ್ಲಿಷ್, ಮಲಯಾಳಕ್ಕೆ ಅನುವಾದವಾಗಿದೆ, ಈಗ ತಮಿಳಿಗೂ ಆಗುತ್ತಿದೆ. ಮಲಯಾಳದಲ್ಲಿ ಅದಕ್ಕೆ ಶ್ರೇಷ್ಠ ಸಾಹಿತಿ ಒಎನ್‌ವಿ ಕುರುಪ್ ಮುನ್ನುಡಿ ಬರೆದರು. ನನ್ನ ʼಗೀತವೈಭವʼ ಹಿಂದಿಗೆ ಅನುವಾದವಾಗಿದೆ. ನನ್ನಷ್ಟು ʻಪ್ರಗಾಥʼ (ode)ಗಳನ್ನು ಕನ್ನಡದಲ್ಲಿ ಇನ್ಯಾರೂ ಬರೆದಿಲ್ಲ. ಇವೆಲ್ಲವೂ ಚರ್ಚೆಯಾಗಬಾರದಾ? ಕವಿಯಾಗಿ ನನ್ನದು ಮಾನವೀಯ ಪಂಥ. ಕುವೆಂಪು ಬೇಂದ್ರೆ ಕಾರಂತ ಮುಂತಾದ ದೊಡ್ಡ ಆದರ್ಶಗಳು ನನ್ನ ಕಣ್ಣ ಮುಂದಿದ್ದವು. ಅವೇ ನನ್ನನ್ನು ಮುನ್ನಡೆಸಿವೆ. ಎಲ್ಲರನ್ನೂ ನೋಡಿ, ಮಾತಾಡಿಸಿದವನು ನಾನು.
ಸಂ: ನಿಮ್ಮ ಅಧ್ಯಕ್ಷತೆಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿರುವಾಗ, ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ನಿಮಗೆ ಮುಜುಗರವಾಗುವುದಿಲ್ಲವೇ?
ದೊರಂಗೌ: ಹಾಗೇನಿಲ್ಲ. ಬಂಡಾಯ ಅಥವಾ ಪರ್ಯಾಯ ಎಂಬುದು ಆಗಾಗ ನಡೆಯುತ್ತಲೇ ಬಂದಿದೆ. ದೇಜಗೌ 1970ರಲ್ಲಿ ಬೆಂಗಳೂರಿನಲ್ಲಿ ದೇಜಗೌ ಅಧ್ಯಕ್ಷರಾಗಿದ್ದ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿ ಚಂಪಾ ಮುಂತಾದವರು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದ್ದರು. ಮುಂದೆ ಚಂಪಾ ಅವರೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದಾಗಲೂ ಪ್ರತಿರೋಧ ಉಂಟಾಗಿತ್ತು. ಆದರೆ ನಮ್ಮ ಆಶಯದಲ್ಲಿ ಕನ್ನಡವೇ ಮುಖ್ಯವಾಗಿರಬೇಕು. ಸ್ವ ಹಿತಾಸಕ್ತಿ ಮುಖ್ಯವಾದರೆ ಸರಿಯಲ್ಲ. ಆದರೆ ಈಗ ನಡೆಯುತ್ತಿರುವುದು ಸ್ವ ಹಿತಾಸಕ್ತಿಯ, ಅತೃಪ್ತ ಆತ್ಮಗಳ ಸಮ್ಮೇಳನ. ಮುಸ್ಲಿಮರಿಗೆ ಎಷ್ಟು ಅವಕಾಶ ಸಿಕ್ಕಿದೆ ಎಂಬುದನ್ನು ಕಸಾಪ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ನಾನು ಹೇಳುವುದೇನೂ ಇಲ್ಲ. ಆದರೆ ಅದರಲ್ಲಿ ದೊಡ್ಡ ದೊಡ್ಡವರೂ ಸೇರಿಕೊಂಡಿದ್ದಾರೆ. ಇದು ಜನರಲ್ಲಿ ಗೊಂದಲ ಮೂಡಿಸುತ್ತದೆ.
ಸಂ: ಉಪನ್ಯಾಸಕ, ಲೇಖಕರಾಗಿದ್ದ ನೀವು ಸಿನಿಮಾಕ್ಕೆ ಹೋದದ್ದು ಆಕಸ್ಮಿಕವೇ?
ದೊರಂಗೌ: ಬೇಂದ್ರೆಯವರ ಬಗ್ಗೆ ಒಂದು ಉಪನ್ಯಾಸ ನೀಡಬೇಕು ಎಂದು ಜಿಎಸ್‌ಎಸ್ ಅವರು ನನಗೆ ಕೇಳಿದ್ದರು. ಹಾಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ನಾನು ಮಾಡಿದ ಬೇಂದ್ರೆ ಕುರಿತ ಭಾಷಣ ಕೇಳಿ ಚಿತ್ರನಿರ್ದೇಶಕ ರವಿ (ಕೆಎಸ್‌ಎಲ್ ಸ್ವಾಮಿ) ನನ್ನ ಬಳಿ ಬಂದು ಸಿನಿಮಾ ಹಾಡು ಬರೀತೀರಾ ಅಂತ ಕೇಳಿದರು. ಹಾಗೆ ʼಮಾಗಿಯ ಕನಸುʼ ಚಿತ್ರಕ್ಕೆ ಹಾಡು ಬರೆಯುವ ಮೂಲಕ ನನ್ನ ಸಿನಿಮಾ ಪಯಣ ಆರಂಭವಾಯಿತು. ಅದೇ ಫಿಲಂಗೆ ಕಂಬಾರ ಅವರೂ ಹಾಡು ಬರೆದಿದ್ದಾರೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಾಮಿಯಾನ ಗುತ್ತಿಗೆ ನೀಡದ್ದಕ್ಕೆ ಪುರುಷೋತ್ತಮ ಬಿಳಿಮಲೆ ಸುಳ್ಳು ಆರೋಪ: ಡಾ. ಮಹೇಶ್ ಜೋಶಿ ಹೇಳಿಕೆ