ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ʻಕಂಪ್ಯೂಟರ್ ಕಾಗುಣಿತʼ ಕೃತಿ ನಾಳೆ (ಜುಲೈ 8) ಬಿಡುಗಡೆಯಾಗಲಿದೆ. ಕನ್ನಡದ ನಾನಾ ವಿಜ್ಞಾನ- ತಂತ್ರಜ್ಞಾನ ಬರಹಗಾರರು ಬರೆದಿರುವ ಲೇಖನಗಳ್ನು ಹೊಂದಿರುವ ಈ ಕೃತಿಯನ್ನು ವಿಜ್ಞಾನ ಲೇಖಕ, ಅಂಕಣಕಾರ ಟಿ.ಜಿ.ಶ್ರೀನಿಧಿ ಸಂಪಾದಿಸಿದ್ದಾರೆ.
ಕೃತಿಯು ಪ್ರಾಧಿಕಾರದ ʻಕನ್ನಡ ಕಾಯಕ ಮಾಲೆʼಯಲ್ಲಿ ಪ್ರಕಾಶಿತವಾಗುತ್ತಿದ್ದು, ಜುಲೈ 8ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ.
ಮುಖ್ಯವಾಗಿ ಕನ್ನಡದಲ್ಲಿ ಕಂಪ್ಯೂಟರ್‌ಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ, ಮೂಲಭೂತ ತಂತ್ರಜ್ಞಾನ ವಿಚಾರಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಕೃತಿಯ ರಚನೆಯಾಗಿದೆ. ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಎಲ್ಲ ಹಂತಗಳಲ್ಲೂ ಕನ್ನಡದಲ್ಲೇ ದೊರೆಯಬೇಕಾದ ಅಗತ್ಯವಿದೆ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ಜತೆಗೆ ನಡೆಸಿದ ಚರ್ಚೆಯ ಫಲವಾಗಿ ಈ ಕೃತಿ ಮೈದಾಳಿದೆ ಎಂದು ಟಿ.ಜಿ.ಶ್ರೀನಿಧಿ ತಿಳಿಸಿದ್ದಾರೆ.
ಈ ಕೃತಿಯಲ್ಲಿ ಕನ್ನಡದ ಹಿರಿಯ ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ, ಬೇಳೂರು ಸುದರ್ಶನ, ಯು.ಬಿ.ಪವನಜ, ಕೊಳ್ಳೇಗಾಲ ಶರ್ಮ, ಉದಯಶಂಕರ ಪುರಾಣಿಕ, ಸಿ.ಪಿ.ರವಿಕುಮಾರ್. ಶ್ರೀಧರ ಬಾಣಾವರ, ಓ ಶಿವಪ್ರಕಾಶ್, ಸುಧೀಂದ್ರ ಹಾಲ್ದೊಡ್ಡೇರಿ, ಎ.ಸತ್ಯನಾರಾಯಣ ಮುಂತಾದವರ ಬರಹಗಳಿವೆ. ರಘುಪತಿ ಶೃಂಗೇರಿ ಅವರ ಚಿತ್ರಗಳು, ಕುಮಾರ್ ಅವರ ವಿನ್ಯಾಸ ಕೃತಿಯನ್ನು ಸಿಂಗರಿಸಿವೆ. 1960-90ರ ಅವಧಿಯಲ್ಲಿ ಕನ್ನಡದ ಕೃತಿಗಳಲ್ಲಿ, ಮಾಧ್ಯಮಗಳಲ್ಲಿ ಕಂಪ್ಯೂಟರ್ ಕುರಿತು ಪ್ರಕಟವಾದ ಮಾಹಿತಿಯ ಆಯ್ದ ತುಣುಕುಗಳೂ ಈ ಸಂಕಲನದಲ್ಲಿ ಸೇರಿವೆ. ಶಿವರಾಮ ಕಾರಂತರಂಥ ಅತಿ ಹಿರಿಯ ಬರಹಗಾರರು ಕೂಡ ಕಂಪ್ಯೂಟರ್ ಕುರಿತು ಬರೆದಿದ್ದರು ಎಂಬ ಅಚ್ಚರಿದಾಯಕ ವಿಷಯ ಹಾಗೂ ಅದರ ತುಣುಕು ಇಲ್ಲಿದೆ.
ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಯಬಯಸುವ ಮಕ್ಕಳಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಕ್ಕಳಿಗೆ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇದು ಹೆಚ್ಚು ಉಪಯುಕ್ತವೆನಿಸಲಿದೆ. ಸರಕಾರಿ ಶಾಲೆಗಳಿಗೆ, ಗ್ರಂಥಾಲಯಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಕೃತಿಯನ್ನು ಹಂಚುವ ಚಿಂತನೆ ಇದೆ. ಆಧುನಿಕ ಯುಗದಲ್ಲಿ ಅನಿವಾರ್ಯವಾಗುತ್ತಿರುವ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಜಾಗ್ರತಿಯನ್ನು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಶ್ರೀನಿಧಿ ಹೇಳಿದ್ದಾರೆ.
ಇದನ್ನೂ ಓದಿ: 86,500 ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಫೇಲ್ !