ಹಾವೇರಿ: ಇಲ್ಲಿ ನಡೆಯಲಿರುವ ಮೂರು ದಿನಗಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮಗಳು ಮೇಳೈಸಲಿವೆ.
ಹಾವೇರಿಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. 86ನೇ ಸಾಹಿತ್ಯ ಸಮ್ಮೇಳನದಲ್ಲಿ ವೇಳೆಗೆ ಹೆಚ್ಚು ಮಹತ್ವ ನೀಡಲಾಗಿದೆ. ನಿಗದಿತ ವೇಳೆಗೆ ಕಾರ್ಯಕ್ರಮಗಳು ಆರಂಭವಾಗಲಿವೆ ಮತ್ತು ನಡೆಯಲಿವೆ ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನ ನಡೆಯುವ 6,7 ಮತ್ತು 8ರಂದು ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅದ್ಯತೆ ನೀಡಲಾಗಿದೆ ಎಂದು ಜೋಶಿ ತಿಳಿಸಿದರು.
ಪುನೀತ್ ಸ್ಮರಣೆಯ ಗೀತೆ
ʼನಾವಾಡುವ ನುಡಿಯೇ ಕನ್ನಡ ನುಡಿʼ ಶೀರ್ಷಿಕೆಯಲ್ಲಿ ಚಲನಚಿತ್ರಗಳಲ್ಲಿ ಕವಿಗಳು ರಚಿಸಿದ ಕವನಗಳನ್ನು ಈ ಕಾರ್ಯಕ್ರಮದಲ್ಲಿ ಬಳಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ದಿವಂಗತ ಪುನೀತ ರಾಜಕುಮಾರ್ ಸ್ಮರಣಿಗೆ ಒಂದು ಗೀತೆ ಮೀಸಲಿಡಲಾಗಿದೆ. ಒಂದು ದಿನ ಅಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌ರಿಂದ ನಗೆಹನಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾವೇರಿ ಜಿಲ್ಲೆಯಿಂದ ವಿವಿಧ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಹನುಮಂತ ಲಮಾಣಿ, ರುಬೀನಾ ಮತ್ತು ಖಾಸಿಂ ಅವರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಜೋಶಿ ತಿಳಿಸಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಷಹಜಾನ್ ತಯಾರಿಸಿದ ದರ್ಬಾರ್ ರಥದಲ್ಲಿ ಸಾಗಲಿದ್ದಾರೆ ಸಮ್ಮೇಳನಾಧ್ಯಕ್ಷರು
ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 128 ಎಕರೆ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿದೆ. ಇದರ ಜೊತೆಗೆ ಸಮಾನಾಂತರ ವೇದಿಕೆ ನಿರ್ಮಿಸಲಾಗಿದ್ದು ಅಲ್ಲಿಯೂ ಸಹ ಸಾವಿರಾರು ಜನರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
600 ಮಳಿಗೆ ನಿರ್ಮಾಣ
ಪುಸ್ತಕ ಮತ್ತು ವಾಣಿಜ್ಯ ಬಳಕೆಗೆ ಸುಮಾರು 600 ಮಳಿಗೆಗಳನ್ನು ಸಿದ್ದಪಡಿಸಲಾಗಿದೆ. ಪ್ರಮುಖವಾಗಿ ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ, ಎರಡನೆಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೆಯದರಲ್ಲಿ ಕಸಾಪ ಪ್ರಕಟಣೆಗಳು ಇರುತ್ತವೆ. ಮಾಧ್ಯಮದವರಿಗಾಗಿ ವಿಶೇಷ ಮೀಡಿಯಾ ಸೆಂಟರ್ ಸಿದ್ಧಪಡಿಸಲಾಗಿದೆ. ರಾಜ್ಯದ ವಿವಿಧಡೆಯಿಂದ ಬರುವ ವರದಿಗಾರರು ಮಾಧ್ಯಮ ಕೇಂದ್ರದಿಂದ ವರದಿ ಕಳಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಬಾಡದ ಕನಕದಾಸರ ಅರಮನೆ ಮಾದರಿ ಕೋರಲಿದೆ ಸ್ವಾಗತ