ಬೆಂಗಳೂರು: ಹಿರಿಯ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ ಅವರು ಗುರುವಾರ ನಿಧನರಾಗಿದ್ದಾರೆ.
ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ಡಿ.ಎಸ್.ನಾಗಭೂಷಣ ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯ ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಅವರು ಪತ್ನಿ, ಕವಯತ್ರಿ ಸವಿತಾ ನಾಗಭೂಷಣ್ ಅವರನ್ನು ಅಗಲಿದ್ದಾರೆ.
ನಾಗಭೂಷಣ್ ಅವರು ಪ್ರಖರ ಸಮಾಜವಾದಿ ಚಿಂತಕರಾಗಿದ್ದರು, ಅವರು ಬರೆದ ʼಗಾಂಧಿ ಕಥನʼ ಕೃತಿಗೆ ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು. ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹಾಗೂ ಮಹಾತ್ಮ ಗಾಂಧಿ ಅವರ ವಿಚಾರಗಳನ್ನು ಸದಾ ಪ್ರತಿಪಾದಿಸುತ್ತಿದ್ದರು.
ನಾಗಭೂಷಣ ಅವರ ಸಂಪಾದಕತ್ವದಲ್ಲಿ ಸಮಾಜವಾದಿ ಮಾಸಿಕ ʼಹೊಸ ಮನುಷ್ಯ’ ಪ್ರಕಟವಾಗುತ್ತಿತ್ತು. ನೇರ ನಡೆ, ನುಡಿ, ನಿಷ್ಠುರ ವಿಮರ್ಶೆಗೆ ಹೆಸರಾಗಿದ್ದ ನಾಗಭೂಷಣ್, ಕುವೆಂಪು ಅವರ ಸಾಹಿತ್ಯದ ಬಗ್ಗೆ ಕೂಡ ವಿಸ್ತಾರವಾದ ಅಧ್ಯಯನ ನಡೆಸಿ ಕೃತಿಯನ್ನು ರಚಿಸಿದ್ದಾರೆ. ಪ್ರತಿವರ್ಷ ಅಕ್ಟೋಬರ್‌ನಲ್ಲಿ ಲೋಹಿಯಾ ಪ್ರತಿಷ್ಠಾನದ ಮೂಲಕ ಕುಪ್ಪಳ್ಳಿಯಲ್ಲಿ ಅವರು ʼಸಮಾಜವಾದಿ ಅಧ್ಯಯನ ಶಿಬಿರʼವನ್ನು ಸಂಘಟಿಸಿ, ಆ ಮೂಲಕ ಗಾಂಧಿ, ಲೋಹಿಯಾ. ಅಂಬೇಡ್ಕರ್, ಜೆ.ಪಿ. ಚಿಂತನೆಗಳನ್ನು ಪ್ರಸಾರ ಮಾಡುವ ಕೆಲಸ ಮಾಡುತ್ತಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ತಿಮ್ಮಸಂದ್ರದಲ್ಲಿ ಜನಿಸಿದ ನಾಗಭೂಷಣ ಗಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ನಂತರ ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದರು. ಗಮನ, ಅನೇಕ, ಈ ಭೂಮಿಯಿಂದ ಆ ಆಕಾಶದವರೆಗೆ, ಕುವೆಂಪು ಸಾಹಿತ್ಯ ದರ್ಶನ, ಲೋಹಿಯಾ ಸಮಾಜವಾದ ದರ್ಶನ, ಬೇರು ಬಿಳಲು, ಇದು ಭಾರತ ಇದು ಭಾರತ, ಇಲ್ಲಿ ಯಾರೂ ಮುಖ್ಯರಲ್ಲ, ಕನ್ನಡ–ಕರ್ನಾಟಕ ಮುಂತಾದವು ಅವರ ಪ್ರಮುಖ ಕೃತಿಗಳು.