Site icon Vistara News

ಆರ್. ರಾಜು, ಸುಭಾಷ್ ಚಂದ್ರ ಸೇರಿ ಆರು ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ನೀಡಲಾಗುವ 2021-22ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಶ್ರೇಷ್ಠ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, 50ನೇ ವಾರ್ಷಿಕ ಕಲಾ ಪ್ರದರ್ಶನದ ಅಂಗವಾಗಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಮೂರರಿಂದ ಆರಕ್ಕೆ ಹೆಚ್ಚಿಸಲಾಗಿದೆ.
ಚಿತ್ರಕಲಾ ಕ್ಷೇತ್ರದಲ್ಲಿ ವಿಶಿಷ್ಠ ಛಾಪು ಮೂಡಿಸಿರುವ ಕಲಾವಿದರಾದ ಆರ್. ರಾಜು (ಬೆಂಗಳೂರು), ಸುಭಾಷ್ ಚಂದ್ರ ಕೆಂಬಾವಿ (ವಿಜಯಪುರ), ಅನಿರುದ್ಧ ಜೋಶಿ (ಬೀದರ್), ಜಿ. ಜಯಕುಮಾರ್ (ಬೆಂಗಳೂರು), ಸ್ಮಿತಾ ಕಾರಿಯಪ್ಪ (ಕೊಡಗು) ಹಾಗೂ ಬಿ. ದೇವರಾಜ (ರಾಮನಗರ) 2021-22ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಕಾಡೆಮಿ ವತಿಯಿಂದ ಪ್ರತಿವರ್ಷ ಮೂವರಿಗೆ ಮಾತ್ರ ವಾರ್ಷಿಕ ಗೌರವ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಬಾರಿ 50ನೇ ವಾರ್ಷಿಕ ಕಲಾ ಪ್ರದರ್ಶನದ ಅಂಗವಾಗಿ ಹೆಚ್ಚುವರಿ ಮೂವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಪತ್ರ ಸ್ಮರಣಿಕೆ ಹಾಗೂ ಪಾರಿತೋಷಕ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

10 ಕಲಾಕೃತಿಗಳಿಗೆ ಬಹುಮಾನ

50ನೇ ವರ್ಷದ ಅಂಗವಾಗಿ ಸುವರ್ಣ ವಾರ್ಷಿಕ ಕಲಾಬಹುಮಾನ ಸ್ಪರ್ಧೆಯಲ್ಲಿ 85 ಕಲಾಕೃತಿಗಳ ಪೈಕಿ 10 ಉತ್ತಮ ಕಲಾಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿದ್ದು, ಜತೆಗೆ 5 ಕಲಾಕೃತಿಗಳು ವಿಶೇಷ ಮನ್ನಣೆ ಪಡೆದುಕೊಂಡಿವೆ. ಇವೆರೆಡೂ ಸೇರಿ 15 ಕಲಾವಿದರಿಗೆ ಪ್ರಶಸ್ತಿಪತ್ರ, ಸ್ಮರಣಿಕೆ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು. ವಿಶೇಷ ಮನ್ನಣೆ ಹೊತರು ಪಡಿಸಿ ಆಯ್ಕೆಯಾಗಿರುವ 10 ಉತ್ತಮ ಕಲಾಕೃತಿಗಳಿಗೆ ತಲಾ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಜಿನದತ್ತ ದೇಸಾಯಿ, ಮೊಗಸಾಲೆ, ಸರಸ್ವತಿ ಚಿಮ್ಮಲಗಿ ಸೇರಿ 15 ಸಾಧಕರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

50ನೇ ವಾರ್ಷಿಕ ಕಲಾಪ್ರದರ್ಶನದ ವಿಜೇತರು

ಬಿ. ನವೀನ್ ಕುಮಾರ್, ಜಿ.ಎಸ್. ಬಿ. ಅಗ್ನಿಹೋತ್ರಿ, ರಮೇಶ್‌ ಪರಸಪ್ಪ ಗಾರವಾಡ, ಕೆ.ವಿ.ಕಾಳೆ, ಪಿ.ನವೀನ್ ಕುಮಾರ್, ರಾಮಕೃಷ್ಣ ನಾಯಕ್, ಶಿವಯೋಗಿ ಅಣ್ಣನವರ್, ಎಚ್.ಎಂ. ವಿಶ್ವನಾಥ, ಮಡಿವಾಳಪ್ಪೆಸ್. ಲಂಗೋಟಿ, ಸುನಿಲ್ ಮಿಶ್ರ ಅವರು ಕಲಾಪ್ರದರ್ಶನದ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಮೆಚ್ಚುಗೆ ಪಡೆದ ಕಲಾಕೃತಿಗಳು

ಕೆ.ವಿಶಾಲ, ಲಕ್ಷ್ಮಣ ಕಬಾಡಿ, ಡಿ. ಪವನ್ ಕುಮಾರ್, ನರಸಿಂಹ ಮೂರ್ತಿ ಮತ್ತು ಅಂಬರಾಯ ಚಿನ್ನಮಳಿ ಅವರು ಕಲಾಕೃತಿಗಳು ವಿಶೇಷ ಮನ್ನಣೆ ಪಡೆದುಕೊಂಡಿವೆ.

ಕಲಾ ಪ್ರದರ್ಶನ

ಅಕಾಡೆಮಿಯ 50ನೇ ವಾರ್ಷಿಕ ಕಲಾ ಪ್ರದರ್ಶನದ ಅಂಗವಾಗಿ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಾಗೂ ನಂತರ ನವದೆಹಲಿಯಲ್ಲಿ ಹದಿನೈದು ದಿನಗಳ ಕಾಲ ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದರು.

ಕಲಾ ಶಿಬಿರ:

ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆದ 75 ಪ್ರದೇಶಗಳಲ್ಲಿ ಕಲಾ ಶಿಬಿರ ಆಯೋಜಿಸಲಾಗುವುದು. ಈ ವೇಳೆ ಕಲಾವಿದರು ಸ್ವಾತಂತ್ರ್ಯ ಸಂಗ್ರಾಮದ ಕಲ್ಪನೆಯ ಚಿತ್ರಕಲೆ ಬಿಡಿಸುವ ಮೂಲಕ ಜನರಲ್ಲಿ ದೇಶಾಭಿಮಾನ ಮೂಡಿಸಲಿದ್ದಾರೆ. 2022ರ ಆಗಸ್ಟ್ ನಿಂದ 2023ರ ಆಗಸ್ಟ್ ವರೆಗೆ ಈ ಶಿಬಿರ ನಡೆಯಲಿದೆ ಎಂದರು.
ಇದೇ ಅಲ್ಲದೆ ಎಸ್‌ಟಿ ಎಸ್‌ಸಿ ವಿಶೇಷ ಘಟಕ ಯೋಜನೆಯಡಿ ತಿಥಿ ಮತಿಯಲ್ಲಿ ಹಾಗೂ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಗಿರಿಜನರು ವಾಸಿಸುವ ಕಡೆಗಳಲ್ಲಿ ಶಾಲಾ ಮಕ್ಕಳಿಗೆ ಭಿತ್ತಿ ಚಿತ್ರ ತರಬೇತಿ ಶಿಬಿರ ನೀಡಲಾಗುವುದು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾಹಿತಿ ನೀಡಿದರು.

Exit mobile version