ಬೆಂಗಳೂರು: ʻಜೈಪುರ್ ಸಾಹಿತ್ಯ ಉತ್ಸವʼದ ಮಾದರಿಯಲ್ಲಿ, ತಲಾ ಅರ್ಧ ಗಂಟೆಯ 5 ವಿಭಿನ್ನ ಗೋಷ್ಠಿಗಳ ಮೂಲಕ ಕಥೆಕೂಟದ 6ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈಗ ಕನ್ನಡದಲ್ಲಿ ಬರೆಯುತ್ತಿರುವ ಹಲವು ಯುವ ಕಥೆಗಾರರು ಈ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಕತೆಗಾರಿಕೆಯ ವೈವಿಧ್ಯಮಯ ಅನಿಸಿಕೆಗಳನ್ನು ಹಂಚಿಕೊಂಡರು.
ಕಥೆಕೂಟ ಎಂಬ ವಾಟ್ಸಾಪ್ ಗುಂಪಿನ 4ನೇ ಸಮಾವೇಶ ಇದಾಗಿದ್ದು ವಿಭಿನ್ನ ಹಾಗೂ ವಿಶಿಷ್ಟವಾಗಿ ಸಂಪನ್ನಗೊಂಡಿತು. ಕಥೆಗಾರರೇ ಇರುವ ಕತೆಕೂಟ ಎಂಬ ವಾಟ್ಸಾಪ್ ಗುಂಪಿನ ಸಮಾವೇಶವನ್ನು ನೆಲಮಂಗಲದ ಗುಬ್ಬಿಗೂಡು ರೆಸಾರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಹಿತ್ಯ ಪ್ರಿಯರಿರುವ ಸಮಾನ ಮನಸ್ಕರ ಈ ತಂಡದ ಸಮಾವೇಶ ಜೂನ್ 26 ಬೆಳಗ್ಗೆ ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಬಿ.ಎಸ್ ಲಿಂಗದೇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಹಿತ್ಯ ಹಾಗೂ ಸಿನಿಮಾ ಲೋಕದ ಅವಿನಾಭಾವ ಸಂಬಂಧದ ಮಹತಿಯನ್ನು ಸಾರಿದರು. ಕಥೆಕೂಟದಿಂದ ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿಗೆ ಹೇಗೆ ನೆರವಾಯಿತು ಎಂದು ತಿಳಿಸಿದರು. ಈ ಕೂಟದಿಂದ ಒಂದು ಕಥೆಯನ್ನು ಅಥವಾ ಸಿನಿಮಾವನ್ನು ಹೇಗೆ ಒಳನೋಟದಿಂದ ಗುರುತಿಸಬೇಕು ಎಂಬುದನ್ನು ಕಲಿತಿದ್ದೇನೆ. ಸಿನಿಮಾ ಮಾಡುವ ವೇಳೆಗೆ ಅಥವಾ ಒಂದು ಸಿನಿಮಾಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಯಾವ ಅಂಶಗಳನ್ನು ಗಮನಿಸಬೇಕು ಎಂಬುದಕ್ಕೆ ಹಿರಿಯರ ಮಾರ್ಗದರ್ಶನ ಅನುಕೂಲವಾಯಿತು ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡರು.
ಖ್ಯಾತ ಸಾಹಿತಿ ಹಾಗೂ ಕಥೆಗಾರ ಜೋಗಿ ಅವರು ʼಕತೆ ಮತ್ತು ನಾನುʼ ಎಂಬ ವಿಷಯದ ಕುರಿತು ಮಾತನಾಡಿದರು. ಒಂದು ಕಥೆ ಹುಟ್ಟುವ ಬಗೆಯನ್ನು ಹಾಗೂ ಕತೆ ಕಟ್ಟುವ ಕೌಶಲದ ಬಗ್ಗೆ ಅವರು ಒಂದು ಕಥೆಯ ಮೂಲಕವೇ ವಿವರಿಸಿದರು. ಕಥೆಕೂಟ ಎಂಬ ವಾಟ್ಸಾಪ್ ಗುಂಪಿನ ಅಡ್ಮಿನ್ ಹಾಗೂ ಸಂಸ್ಥಾಪಕರಾದ ಗೋಪಾಲಕೃಷ್ಣ ಕುಂಟಿನಿ ಮಾತನಾಡಿ ಈ ಗುಂಪು ಈವರೆಗೆ ನಡೆದುಬಂದ ಹಾದಿಯನ್ನು ಅವಲೋಕಿಸಿದರು ಹಾಗೂ, ಮುಂದಿನ ಕನಸನ್ನು ತಿಳಿಸಿದರು. ಈ ಕೂಟವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಕಟ್ಟಿ ಕನ್ನಡ ಸಾರಸ್ವತ ಲೋಕಕ್ಕೆ ಒಳ್ಳೆಯ ಸಾಹಿತ್ಯ ನೀಡಬೇಕು ಎಂಬ ಆಶಯವನ್ನು ಹೇಳಿದರು.
5 ವಿಶಿಷ್ಠ ಗೋಷ್ಠಿಗಳ ವಿವರ:
ಕತೆಯ ಕಷ್ಟಸುಖ: ಕತೆಗಾರರಾದ ಈರಯ್ಯ ದೂಂತೂರು, ಪ್ರಮೋದ ಮೋಹನ ಹೆಗಡೆ, ಅನನ್ಯ ತುಷಿರ, ಮಾರುತಿ ಎನ್ ಎನ್ ಹಾಗೂ ವಾಣಿ ಸುರೇಶ್ ಮಾತನಾಡಿ, ಒಂದು ಕಥೆಯನ್ನು ಬರೆಯುವಾಗ ಏನೇನು ಕಷ್ಟಗಳು ಎದುರಾಗುತ್ತವೆ, ಕತೆ ಬರೆಯುವಾಗ ಮನದಲ್ಲಿ ಏನಾಗುತ್ತದೆ ಎಂಬುದನ್ನು ವಿಶ್ಲೇಷಿಸಿದರು.
ನಮ್ಮೊಳಗೂ ಕತೆಗಳಿವೆ: ವಿದ್ಯಾ ಹೆಗಡೆ, ಭಾಗ್ಯಜ್ಯೋತಿ, ಪೂರ್ಣಿಮಾ ಮಾಳಗಿಮನಿ, ಶ್ರೀರಕ್ಷಾ ಪುನರೂರು, ಸುಧಾ ದೇಶಪಾಂಡೆ ಇದರಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ಕಥೆಗಳಿರುತ್ತವೆ ಹಾಗೂ ಅವುಗಳು ಹೇಗೆ ಹೊರಬರುತ್ತವೆ ಎಂದು ಚರ್ಚೆ ನಡೆಸಿದರು.
ಹುಟ್ಟಿದ ಕತೆ, ಕಟ್ಟಿದ ಕತೆ: ಈ ಗೋಷ್ಠಿಯಲ್ಲಿ ಮೇಘನಾ ಸುಧೀಂದ್ರ, ಶ್ರೀನಿವಾಸ ದೇಶಪಾಂಡೆ, ನೀಲಿ ಚಿಟ್ಟೆ, ಹರೀಶ್ ಕೇರ ಮಾತನಾಡಿ ಕಥೆ ಹೇಗೆ ಹುಟ್ಟುತ್ತದೆ, ಅದನ್ನು ಕಟ್ಟುವ ಪ್ರಕ್ರಿಯೆ ಹೇಗಿರುತ್ತದೆ ಎಂದು ತಿಳಿಸಿದರು. ಒಂದು ಹುಟ್ಟಿದ ಕಥೆಯಲ್ಲೂ ಕಟ್ಟುವಿಕೆ ಎಷ್ಟು ಮುಖ್ಯ ಹಾಗೂ ಕಟ್ಟಿದ ಕಥೆಯಲ್ಲೂ ಹುಟ್ಟುವಿಕೆ ಹೇಗೆ ಒಳಗೊಂಡಿರುತ್ತದೆ ಎಂದು ವಿಶ್ಲೇಷಿಸಲಾಯಿತು.
ಓದು ಜನಮೇಜಯ: ರಾಜೇಶ್ ಶೆಟ್ಟಿ, ಪ್ರಿಯಾ ಕೆರ್ವಾಶೆ, ಜಗದೀಶ ಶರ್ಮ, ಸಚಿನ್ ತೀರ್ಥಹಳ್ಳಿ ಹಾಗೂ ರಂಜನಿ ಕೀರ್ತಿ ಮಾತನಾಡಿ ಬೆಳೆಯುತ್ತಿರುವ ಕಥೆಗಾರರಿಗೆ ನಾನಾ ಬಗೆಯ ಕಥೆಗಳ ಓದು ಹೇಗೆ ಉಪಯೋಗಕಾರಿ, ಯಾಕೆ ಓದಬೇಕು? ಎಂಬ ಪ್ರಶ್ನೆಗೆ ಉತ್ತರ ನೀಡಿದರು. ಒಂದು ಪುಸ್ತಕ ಹೇಗೆ ಮನುಷ್ಯನನ್ನು ಉತ್ತಮಗೊಳಿಸುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲಿದರು.
ಅಪರಾಹ್ನದ ಕಥಾ ಪ್ರಸಂಗ: ಲೋಹಿತ್ ಶರ್ಮ, ರೂಪಲ್ ಶೆಟ್ಟಿ, ಸುಶಾಂತ್ ಮುಂಗರವಳ್ಳಿ, ಶ್ರೀಕಂಠಮೂರ್ತಿ ಹಾಗೂ ವಿಕಾಸ್ ನೇಗಿಲೋಣಿ ಕತೆಯ ಕುರಿತು ಮಾತನಾಡಿ, ಕಥೆಯಾಗುವ ವಸ್ತು ಸಂಗತಿಗಳು, ಅದು ಮನದಲ್ಲಿ ಕಾಡುವ ಬಗೆ, ಕತೆಗಾರನಿಗೆ ಇರಬೇಕಾದ ಸ್ಪಂದನಶೀಲತೆ ಇತ್ಯಾದಿಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಕಥೆಕೂಟದ ಸದಸ್ಯರು ಹಾಗೂ ಕಥೆಕೂಟದ ಆಚೆಯ ಸಾಹಿತ್ಯಾಸಕ್ತರೂ ಭಾಗವಹಿಸಿದರು. ಖ್ಯಾತ ನಟಿ ಸುಷ್ಮಾ ಭಾರಧ್ವಾಜ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾದರು. ರಂಜನಿ ಕೀರ್ತಿ ಅವರ ಸೊಗಸಾದ ಲವಲವಿಕೆಯ ನಿರೂಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿಸಿತು. ಸುಮಾರು 3 ಗಂಟೆಗಳ ಕಾಲ ನಡೆದ ಈ ವಿಭಿನ್ನ ಕಾರ್ಯಕ್ರಮವನ್ನು ಬುಕ್‌ಬ್ರಹ್ಮ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ನೀಡಲಾಗಿತ್ತು.
ಇದನ್ನೂ ಓದಿ: ಕಥೆಕೂಟ ಎಂಬ ಗುಂಪಿಗೆ ಆರು ವರ್ಷಗಳ ಸಂಭ್ರಮದಲ್ಲಿ ಸಮಾವೇಶ