Site icon Vistara News

ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

academy award

ನವ ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ ಆಯ್ಕೆಯಾಗಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಅನುವಾದ ಪ್ರಶಸ್ತಿ ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿದೆ. ʼಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ವಿವಿಧ ಪ್ರಬಂಧಗಳ ಸಂಕಲನವಾಗಿದ್ದು ಇದನ್ನು ಗದಗದ ಲಡಾಯಿ ಪ್ರಕಾಶನವು ಪ್ರಕಟಿಸಿದೆ. ಪದ್ಮರಾಜ ದಂಡಾವತಿ ಅವರು ದೇವದತ್ತ ಪಟ್ಟನಾಯಕ ಅವರ ʼಸೀತಾ’ ಕೃತಿಯನ್ನು ಇಂಗ್ಲಿಷನಿಂದ ಕನ್ನಡಕ್ಕೆ ಅನುವಾದಿಸಿದ್ದು ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ.ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಈ ಪ್ರಶಸ್ತಿ ಆಯ್ಕೆಯು ನಡೆಯಿತು. ಅನುವಾದ ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಜಗದೀಶ್ ಕೊಪ್ಪ, ಕಮಲಾಕರ ಭಟ್ಟ ಹಾಗೂ ಮೋಹನ್ ಕುಂಟಾರ್ ಕೆಲಸ ನಿರ್ವಹಿಸಿದ್ದರೆ ಮುಖ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಸಿ. ನಾಗಣ್ಣ, ಪದ್ಮರಾಜ ದಂಡಾವತಿ‌, ಚಂದ್ರಶೇಖರ ವಸ್ತ್ರದ ಅವರು ಜ್ಯೂರಿಗಳಾಗಿದ್ದರು.

ಇದನ್ನೂ ಓದಿ | Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಪರೀಕ್ಷೆ

Exit mobile version