Site icon Vistara News

ಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ, ಪ್ರಕಾಶಕರ ಬೆಂಬಲ

Literary Conference by Vistara News on May 27, 28 : Support from publishers

#image_title

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 27 ಮತ್ತು 28ರಂದು ನಡೆಯಲಿರುವ ವಿಸ್ತಾರ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿಸ್ತಾರ ನ್ಯೂಸ್ ಕಚೇರಿಯಲ್ಲಿ ಶುಕ್ರವಾರ ಪ್ರಕಾಶಕರ ಸಭೆ ನಡೆಯಿತು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಸಾಹಿತ್ಯ ಸಂಭ್ರಮದ ರೂಪುರೇಷೆಗಳನ್ನು ವಿವರಿಸಿದರು.

ವಿಸ್ತಾರ ವಾಹಿನಿಯು ಕನ್ನಡ ನಾಡು-ನುಡಿ, ಸಂಸ್ಕೃತಿಗಳನ್ನು ಬಿಂಬಿಸುವ, ಈ ಮೂಲಕ ಕಲಾಸಕ್ತರನ್ನು ಬೆಸೆಯುವ ʼಸಾಹಿತ್ಯ ಸಂಭ್ರಮ’ ಆಯೋಜಿಸುತ್ತಿದೆ. ವಾಹಿನಿಯೊಂದು ಸಾಹಿತ್ಯೋತ್ಸವ ಆಯೋಜಿಸುತ್ತಿರುವುದು ಇದೇ ಮೊದಲು. ಜೈಪುರ ಲಿಟರೇಚರ್ ಫೆಸ್ಟಿವಲ್ ಸೇರಿದಂತೆ ದೇಶಾದ್ಯಂತ ಹಲವು ಸಾಹಿತ್ಯೋತ್ಸವಗಳು ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಮಹತ್ವದ ಸಾಹಿತ್ಯೋತ್ಸವ ಆಯೋಜಿಸುವುದು ವಿಸ್ತಾರದ ಆಶಯ ಎಂದವರು ತಿಳಿಸಿದರು.

ವಿಸ್ತಾರದ ಈ ಉತ್ಸವದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಸಿನೆಮಾ, ರಾಜಕೀಯ, ಕ್ರೀಡೆ ಮುಂತಾದ ಹಲವಾರು ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಾಜ್ಯದ ಪ್ರತಿ ತಾಲೂಕಿನಿಂದ ಮತ್ತು ದೇಶ – ವಿದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಮಕ್ಕಳ ಆಟ, ಪರಿಸರ ಪಾಠ, ಆಹಾರ ವೈವಿಧ್ಯ, ಪುಸ್ತಕ ಮೇಳ ಮುಂತಾದ ಅನೇಕ ಆಕರ್ಷಣೆಗಳಿರುತ್ತವೆ. ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಖುಷಿಯಿಂದ ಭಾಗವಹಿಸಬಹುದಾದ ಪರಿಸರ ನಿರ್ಮಾಣವಾಗಲಿದೆ ಎಂದು ಅವರು ವಿವರಿಸಿದರು.

ಈ ಸಭೆಯಲ್ಲಿ ಪ್ರಕಾಶಕರು ಉಪಯುಕ್ತ ಸಲಹೆಗಳನ್ನು ನೀಡಿದರು ಮತ್ತು ಈ ವಿಶಿಷ್ಟ ಸಾಹಿತ್ಯ ಹಬ್ಬಕ್ಕೆ ತಮ್ಮ ಸಂಪೂರ್ಣ ಬೆಂಬಲ ಪ್ರಕಟಿಸಿದರು.

ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಮಾತನಾಡಿ, ವಿಸ್ತಾರ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಮೇಳಕ್ಕೆ ಅವಕಾಶ ನೀಡುತ್ತಿರುವುದು ಖುಷಿಯ ಸಂಗತಿ ಎಂದರು.

ಸ್ವಪ್ನ ಬುಕ್‌ ಹೌಸ್‌ನ ದೊಡ್ಡೇಗೌಡ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕೂಡ ಪ್ರಕಾಶಕರನ್ನು ಕರೆದು ಸಲಹೆ ಪಡೆಯುವುದಿಲ್ಲ. ಆದರೆ ವಿಸ್ತಾರ ನ್ಯೂಸ್‌ ಎಲ್ಲ ಪ್ರಕಾಶಕರನ್ನು ಕರೆದು ಚರ್ಚೆ ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.

ಇಂಥ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪೀಳಿಗೆಯ ಬರಹಗಾರರು ಮತ್ತು ಓದುಗರಿಗೆ ಸ್ಫೂರ್ತಿ ತುಂಬುವಂತಹ ಕಾರ್ಯಕ್ರಮ ರೂಪಿಸಬೇಕು ಎಂದು ಛಂದ ಪುಸ್ತಕದ ವಸುಧೇಂದ್ರ ಅವರು ಸಲಹೆ ನೀಡಿದರು.

ಮಾಧ್ಯಮ ಸಹಯೋಗ ಮುಖ್ಯ…

ಮಲಯಾಳ, ಬೆಂಗಾಲಿ, ಮರಾಠಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿಯಾಗಿ ನಡೆಯಲು ಮಾಧ್ಯಮದ ಸಹಯೋಗವೇ ಮುಖ್ಯ ಕಾರಣ. ಮಲಯಾಳ ಸಾಹಿತ್ಯ ಕಾರ್ಯಕ್ರಮಕ್ಕೆ ಮಲಯಾಳ ಮನೋರಮಾ, ಮಾತೃಭೂಮಿಯಂಥ ಮಾಧ್ಯಮ ಸಂಸ್ಥೆಗಳು ಸಾಥ್‌ ನೀಡುತ್ತವೆ. ಹಾಗೆಯೇ ಜೈಪುರ ಸಾಹಿತ್ಯ ಹಬ್ಬಕ್ಕೆ ರಾಷ್ಟ್ರ ಮಟ್ಟದ ಹಲವು ಮಾಧ್ಯಮಗಳ ಪ್ರಾಯೋಜಕತ್ವ ಇರುತ್ತವೆ. ಈ ಹಿನ್ನೆಲೆಯಲ್ಲಿ ವಿಸ್ತಾರ ಸಾಹಿತ್ಯ ಸಂಭ್ರಮ ಆಶಾದಾಯಕ ಎಂದು ಬಹುರೂಪಿ ಪ್ರಕಾಶನದ ಜಿ ಎನ್‌ ಮೋಹನ್‌ ಅವರು ಹೇಳಿದರು.

ಕನ್ನಡದಲ್ಲೂ ಓದುಗರ ಸಂಖ್ಯೆ ಕಡಿಮೆಯೇನಿಲ್ಲ. ಕೋವಿಡ್‌ ಅವಧಿಯಲ್ಲೂ ನಾವು 20 ಸಾವಿರ ಪ್ರತಿ ಮಾರಿದ್ದೇವೆ. ನಮ್ಮ ಪುಸ್ತಕ ಮಳಿಗೆ ಮುಂದೆ ಓದುಗರು ಕ್ಯೂ ನಿಂತಿದ್ದನ್ನೂ ನೋಡಿದ್ದೇನೆ. ಗುಣಮಟ್ಟದ ಸಾಹಿತ್ಯ ಹಬ್ಬವನ್ನು ನಾವು ರೂಪಿಸಬೇಕಿದೆ ಎಂದವರು ಸಲಹೆ ನೀಡಿದರು.

ಸ್ನೇಹ ಬುಕ್ ಹೌಸ್ ನ ಪರಶಿವಪ್ಪ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಹರಿವು ಪ್ರಕಾಶನದ ರಿತೇಶ್, ಸಾವಣ್ಣ ಪ್ರಕಾಶನದ ಜಮೀಲ್, ವಸಂತ ಪ್ರಕಾಶನದ ಮುರಳಿ, ಗೀತಾಂಜಲಿ ಪ್ರಕಾಶನದ ವಿಜಯ್‌, ಸಾಹಿತ್ಯ ಭಂಡಾರದ ಅರುಣ್‌, ರಾವ್ಸ್‌ ಅಕಾಡೆಮಿಯ ಸುಧೀಂದ್ರ ರಾವ್, ಕಾನ್‌ಕೇವ್‌ ಪ್ರಕಾಶನದ ನಂದೀಶ್‌, ಸಹನ ಪ್ರಕಾಶನದ ಆರ್ಯ, ಅನ್ನಪೂರ್ಣ ಪ್ರಕಾಶನದ ಸುರೇಶ್‌, ನಿಂಗರಾಜ್‌ ಚಿತ್ತಣ್ಣವರ್‌, ಕ್ರಿಯಾ ಮಾಧ್ಯಮದ ಚಂದ್ರಶೇಖರ್‌ ಮತ್ತಿತರರು ಭಾಗವಹಿಸಿದ್ದರು.

ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್‌) ವಿನಯ್‌ ಶೇಷಗಿರಿ, ಸಿಒಒ ಪರಶುರಾಮ್‌, ವಿಸ್ತಾರ ನ್ಯೂಸ್‌ ಡಿಜಿಟಲ್‌ ವಿಭಾಗದ ಸಂಪಾದಕ ರಮೇಶ್‌ ಕುಮಾರ್‌ ನಾಯಕ್‌, ಸ್ಪೆಷಲ್‌ ಆಪರೇಷನ್ ಎಡಿಟರ್‌ ಕಿರಣ್‌ ಕುಮಾರ್‌ ಡಿ ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್‌ ಹೆಡ್‌ ಕುಸುಮಾ ಆಯರಹಳ್ಳಿ ಜತೆಗಿದ್ದರು.

Exit mobile version