: ಹರೀಶ್ ಕೇರ, ಬೆಂಗಳೂರು
ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ʼಕನ್ನಡದ ಸಣ್ಣಕಥೆಗಳ ಜನಕʼ ಎಂಬ ಹೆಗ್ಗಳಿಕೆಯನ್ನು ನೀಡುವ ಬಗ್ಗೆ ಸಾಹಿತ್ಯ ವಲಯದಲ್ಲಿ ಸಣ್ಣ ತಕರಾರು ಇದೆ. ಕನ್ನಡದ ಮೊದಲ ಸಣ್ಣಕಥೆ ಬರೆದವರು ಪಂಜೆ ಮಂಗೇಶರಾಯರು (ನನ್ನ ಚಿಕ್ಕತಾಯಿ- 1900- ಸುವಾಸಿನಿ ಪತ್ರಿಕೆಯಲ್ಲಿ). ಇದೇ ಅವಧಿಯಲ್ಲಿ ಕೆರೂರು ವಾಸುದೇವಾಚಾರ್ಯರು, ಬಾಗಲೋಡಿ ದೇವರಾಯ ಮುಂತಾದವರೂ ಬರೆದಿದ್ದಾರೆ. ಆದರೆ ಕನ್ನಡದ ಸಣ್ಣಕಥೆಗೊಂದು ಸ್ವರೂಪ ನೀಡಿ, ಅದನ್ನೇ ತಮ್ಮ ಮಾಧ್ಯಮವಾಗಿ ಮಾಡಿಕೊಂಡು ಜನಪ್ರಿಯಗೊಳಿಸಿದವರು ಮಾಸ್ತಿ ಅನ್ನುವ ಬಗ್ಗೆ ಯಾರ ತಕರಾರೂ ಇಲ್ಲ. ಮಾಸ್ತಿಯವರು ನಡೆಸಿದ ʼಜೀವನʼ ಮಾಸಪತ್ರಿಕೆಯಲ್ಲಿ ಕಥೆಗಳನ್ನು ತರಿಸಿ ಛಾಪಿಸುತ್ತಿದ್ದರು. ಆದರೆ ಕನ್ನಡದ ಸಣ್ಣಕಥೆಗಳ ಸ್ಪರ್ಧೆ ಮೊದಲು ಮಾಡಿದವರು ಯಾರು ಎಂಬ ಬಗ್ಗೆ ಎಲ್ಲಿಯೂ ಯಾವ ಉಲ್ಲೇಖವೂ ಇಲ್ಲ.
1960ರ ದಶಕದಿಂದ ಕನ್ನಡದ ಸಣ್ಣಕಥೆಗಳ ಸ್ಪರ್ಧೆ ಆರಂಭವಾಗಿರಬಹುದು. ಸೆಂಟ್ರಲ್ ಕಾಲೇಜು ಕನ್ನಡ ಸಂಘದಿಂದ 1915ರ ಸುಮಾರಿಗೆ ನಡೆಸಲ್ಪಟ್ಟ ಕವನ ಸ್ಪರ್ಧೆಯೇ ಕನ್ನಡದ ಸಾಹಿತ್ಯದ ಮೊದಲ ಸ್ಪರ್ಧೆ ಎನ್ನಬಹುದು ಎಂದು ಗುರುತಿಸುತ್ತಾರೆ ಕವಿ ಡಿ.ವಿ. ಪ್ರಹ್ಲಾದ್. ಇವರು ಬಹುಕಾಲ ʼಸಂಚಯʼ ಎಂಬ ಸಣ್ಣ ಸಾಹಿತ್ಯ ಪತ್ರಿಕೆ ನಡೆಸಿದವರು ಹಾಗೂ ಕವನ- ಲೇಖನ ಸ್ಪರ್ಧೆಗಳನ್ನೂ ನಡೆಸಿದವರು. ಕನ್ನಡದ ಮೊದಲ ಸಾಹಿತ್ಯ ಪತ್ರಿಕೆ ವಾಗ್ಭೂಷಣ- 1896ರಲ್ಲಿ ಆಲೂರು ವೆಂಕಟರಾಯರಿಂದ ಶುರುವಾಯಿತು. ಅವರು ಕವನ- ಕತೆಗಳನ್ನು ಪ್ರಕಟಿಸಲು ಆರಂಭಿಸಿದರು. ಬಹುಶಃ ಅನಕೃ ಅವರು ಕತೆಗಳಿಗಾಗಿಯೇ 1933ರಲ್ಲಿ ಆರಂಭಿಸಿದ ʼಕತೆಗಾರʼ ಪತ್ರಿಕೆ ಆರಂಭಿಸಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಪ್ರಹ್ಲಾದ್.
ಕಥಾ ಸ್ಪರ್ಧೆಗಳು ಮತ್ತು ಕನ್ನಡ ಪತ್ರಿಕೋದ್ಯಮಕ್ಕೆ ಅವಿನಾಭಾವ ಇತಿಹಾಸ. ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕೆಗಳು ಸಣ್ಣಕಥಾಸ್ಪರ್ಧೆಯನ್ನು ನಡೆಸುತ್ತ ಬಂದಿವೆ. ಸಾಮಾನ್ಯವಾಗಿ ಇವು ದೀಪಾವಳಿ ಅಥವಾ ಯುಗಾದಿ ಸಂದರ್ಭದಲ್ಲಿ ನಡೆಯುವುದು ವಾಡಿಕೆ. ದೀಪಾವಳಿ ಮತ್ತು ಯುಗಾದಿ ಸಂದರ್ಭದಲ್ಲಿ ವಿಶೇಷಾಂಕಗಳನ್ನು ರೂಪಿಸಲಾಗುತ್ತದೆ. ಸಾಮಾನ್ಯವಾಗಿ ಮೊದಲ ಮೂರು ಬಹುಮಾನ ಪಡೆದ ಕಥೆಗಳು ಈ ವಿಶೇಷಾಂಕದಲ್ಲಿ ಪ್ರಕಟವಾಗುತ್ತವೆ. ಮೆಚ್ಚುಗೆ ಪಡೆದ ಕಥೆಗಳು ನಂತರದ ದಿನಗಳಲ್ಲಿ ಪ್ರಕಟವಾಗುತ್ತ ಹೋಗುತ್ತವೆ. ಇದು ವಾಡಿಕೆಯಾಗಿ ನಡೆದುಬಂದಿದೆ. ಕೆಲವು ಪತ್ರಿಕೆಗಳು ಸಂಕ್ರಾಂತಿಗೆ, ಜನವರಿ ಒಂದರಂದೂ ವಿಶೇಷಾಂಕ ತರುವುದುಂಟು. ಆದರೆ ವಿಶೇಷಾಂಕ ಹೊರತರದ ಹಾಗೂ ಸ್ಪರ್ಧೆ ನಡೆಸದ ಪತ್ರಿಕೆಗಳೇ ಇಲ್ಲ ಎನ್ನಬಹುದೇನೋ. ಹೀಗೆ ಪತ್ರಿಕೆಗಳ ವಿಶೇಷಾಂಕಗಳೂ, ಸಣ್ಣಕಥೆ ಸ್ಪರ್ಧೆಗಳೂ ಕನ್ನಡದ ಓದುಗರ ಮನಸ್ಸಿನ ಭಾಗವೇ ಆಗಿಹೋಗಿವೆ. ಕೆಲವೊಮ್ಮೆ ಸಣ್ಣಕಥೆಯ ಬದಲು ಲಲಿತಪ್ರಬಂಧ, ನಗೆಬರಹ, ಪ್ರೇಮಪತ್ರ ಇತ್ಯಾದಿ ಸ್ಪರ್ಧೆಗಳೂ ನಡೆದುದುಂಟು. ಆದರೆ ಇವು ಅಪರೂಪ.
1957ರಿಂದಲೇ ಪ್ರಜಾವಾಣಿ ಕಥಾ ಸ್ಪರ್ಧೆ…
ಪ್ರಜಾವಾಣಿ ಪತ್ರಿಕೆ 1957ರಷ್ಟು ಹಿಂದಿನಿಂದಲೇ ಸಣ್ಣಕಥಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಿತ ಕತೆಗಳನ್ನು ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸುತ್ತಿದೆ. ಇವತ್ತಿನವರೆಗೂ ನಿರಂತರವಾಗಿ ಮುನ್ನಡೆಸಿದೆ. ಈ ಪತ್ರಿಕೆಯ ಕಥಾಸ್ಪರ್ಧೆಯ ಮೂಲಕ ಬೆಳಕಿಗೆ ಬಂದು ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ ಅನೇಕರು ಇದ್ದಾರೆ. ಕಳೆದ ಅರವತ್ತು ವರ್ಷಗಳ ಅವಧಿಯಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಗೆದ್ದ ಎಲ್ಲ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಪ್ರಜಾವಾಣಿಯ ಸಂಪಾದಕ ಬಳಗ ಮಾಡಿದೆ. ಒಟ್ಟು ಮೂರು ಸಂಪುಟಗಳ ಈ ಯೋಜನೆಯಲ್ಲಿ ಮೊದಲ ಪುಸ್ತಕ ʼಹೊನ್ನ ಕಣಜʼ ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರಲ್ಲಿ 1957ರಿಂದ 2016ರ ಅವಧಿಯಲ್ಲಿ ಪ್ರಕಟವಾದ 50 ಕಥೆಗಳಿವೆ. ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ರಾಮಚಂದ್ರ ಶರ್ಮ, ಭಾರತೀಸುತ, ಶ್ರೀಕೃಷ್ಣ ಆಲನಹಳ್ಳಿ, ವೈದೇಹಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಕೆ.ಟಿ.ಗಟ್ಟಿ, ಎಸ್.ದಿವಾಕರ್ ಮುಂತಾದ ಘಟಾನುಘಟಿಗಳು ಇದರಲ್ಲಿರುವುದು ವಿಶೇಷ. ಇದೊಂದು ಅಧ್ಯಯನ ಗ್ರಂಥವೂ ಹೌದು.
1990ರಲ್ಲಿ 10 ಸಾವಿರ ಬಹುಮಾನ ಕೊಟ್ಟಿದ್ದ ತರಂಗ…
ಬಹುಮಾನದ ಮೊತ್ತವನ್ನು 1990ರಲ್ಲಿ ʼತರಂಗʼ ವಾರಪತ್ರಿಕೆ 10 ಸಾವಿರ ರೂ.ಗಳಿಗೆ ಏರಿಸಿತು. ಇದು ಆ ಕಾಲದ ಬಹುದೊಡ್ಡ ಮೊತ್ತ. ಹಾಗಾಗಿ ಸಾಹಿತಿಗಳ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಾಸ್ತಿ ಜನ್ಮ ಶತಾಬ್ದಿ ಸಂದರ್ಭದಲ್ಲಿ ತರಂಗ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ 10 ಸಾವಿರ, ಎರಡನೇ ಬಹುಮಾನ 7,500 ರೂ., ಮೂರನೇ ಬಹುಮಾನ 5000 ರೂ. ಇಡಲಾಗಿತ್ತು. ಬಹುಮಾನಗಳನ್ನು ಕ್ರಮವಾಗಿ ರವಿ ಬೆಳಗೆರೆ (ವಂಧ್ಯಾ), ಎಂ.ಎಸ್ ವೇದಾ (ಕುರುಕ್ಷೇತ್ರವೂ ಕುಂಯನೆಂಬ ಬಾಲನ ಕತ್ತಲ ಲೋಕವೂ) ಗೆದ್ದುಕೊಂಡಿದ್ದರು.
ಇದನ್ನೂ ಓದಿ: Vistara Kathaspardhe: ಇದು ಪ್ಯಾನ್ ಇಂಡಿಯಾ ಸ್ಪರ್ಧೆಯಾಗಲಿ: ವಿಸ್ತಾರ ನ್ಯೂಸ್ ಕಥಾಸ್ಪರ್ಧೆಗೆ ಸಾಹಿತ್ಯಲೋಕ ಮೆಚ್ಚುಗೆ
ಹಲವು ಪತ್ರಿಕೆಗಳಿಂದ ಸ್ಪರ್ಧೆ…
ಪ್ರಜಾವಾಣಿಯಂತೆಯೇ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ ಮುಂತಾದ ದಿನಪತ್ರಿಕೆಗಳೂ, ತರಂಗ, ಸುಧಾ ಮುಂತಾದ ವಾರಪತ್ರಿಕೆಗಳೂ, ಮಯೂರ, ತುಷಾರ, ಉತ್ಥಾನ, ಕಸ್ತೂರಿ ಮುಂತಾದ ಮಾಸಪತ್ರಿಕೆಗಳೂ ಸ್ಪರ್ಧೆಗಳನ್ನು ನಡೆಸಿವೆ. ಸಂಚಯ, ಸಂಕ್ರಮಣ ಮುಂತಾದ ಸಣ್ಣ ಸಾಹಿತ್ಯ ಪತ್ರಿಕೆಗಳೂ ಸ್ಪರ್ಧೆಗಳನ್ನು ನಡೆಸಿದವು. ಚಿ. ಶ್ರೀನಿವಾಸರಾಜು ಮುಂತಾದವರು ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಇತ್ಯಾದಿ ಸಂಘಟನೆಗಳ ಮೂಲಕವೂ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಹಿತ್ಯ ಸ್ಪರ್ಧೆ ನಡೆಸಿದ್ದಾರೆ. ಈ ಮೂಲಕ ನೂರಾರು ವಿದ್ಯಾರ್ಥಿ ಬರಹಗಾರರನ್ನು ಬೆಳಕಿಗೆ ತಂದಿದ್ದಾರೆ. ಇವೆಲ್ಲವೂ ಬಹುಮಾನದ ಗಾತ್ರದಲ್ಲಿ ಅಲ್ಲದೆ ಹೋದರೂ ಸಾಹಿತ್ಯವಲಯದಲ್ಲಿ ಪ್ರತಿಷ್ಠಿತವಾಗಿದ್ದವು. ಚಿ. ಶ್ರೀನಿವಾಸರಾಜು ಅವರು ವಿದ್ಯಾರ್ಥಿ ಬರಹಗಾರರಿಗೆ ಬಹುಮಾನವಾಗಿ ಚೀಲಗಟ್ಟಲೆ ಪುಸ್ತಕ ಕೊಟ್ಟು ಕಳುಹಿಸುತ್ತಿದ್ದರು.
ಪಿ. ಲಂಕೇಶ್ ಅವರು ʼಲಂಕೇಶ್ ಪತ್ರಿಕೆʼ ಮೂಲಕ ಒಂದೇ ಒಂದು ಬಾರಿ ಕಥಾಸ್ಪರ್ಧೆ ನಡೆಸಿದ್ದರು ಎಂಬ ಕುತೂಹಲಕಾರಿ ಮಾಹಿತಿಯನ್ನು ಕಥೆಗಾರ ಕೇಶವ ಮಳಗಿ ಹಂಚಿಕೊಳ್ಳುತ್ತಾರೆ. 1987ರಲ್ಲಿ ಅವರು ನಡೆಸಿದ ಕಥಾಸ್ಪರ್ಧೆಯಲ್ಲಿ ಸ್ವತಃ ಕೇಶವ ಮಳಗಿ ಮತ್ತಿತರರು ಬಹುಮಾನ ಪಡೆದಿದ್ದರು.
ಬಹುಮಾನ ಮೊತ್ತ 25 ಸಾವಿರಕ್ಕೆ ಏರಿಸಿದ ವಿಜಯ ಕರ್ನಾಟಕ
ಸುಮಾರು 10,000ದ ಆಸುಪಾಸಿನಲ್ಲಿದ್ದ ಕಥಾಸ್ಪರ್ಧೆಯ ಮೊದಲ ಬಹುಮಾನದ ಮೊತ್ತಕ್ಕೆ ಮೊದಲ ಬಾರಿಗೆ ದೊಡ್ಡ ಮೊತ್ತದ ಶಾಕ್ ಕೊಟ್ಟದ್ದು ವಿಜಯ ಕರ್ನಾಟಕ. ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕತೆಗಳನ್ನು ಆಯಾ ವರ್ಷವೇ ಪುಸ್ತಕವಾಗಿ ಪ್ರಕಟಿಸುವ ಪರಂಪರೆ ಆರಂಭಿಸಿದ್ದೂ ವಿಜಯ ಕರ್ನಾಟಕ ಮತ್ತು ಅದರ ಜತೆಗೆ ಸಹಯೋಗ ನೀಡಿದ ಅಂಕಿತ ಪ್ರಕಾಶನ. 2002ರಲ್ಲಿ ನಡೆಸಿದ ದೀಪಾವಳಿ ಕಥಾಸ್ಪರ್ಧೆಯಲ್ಲಿ 25,000 ರೂ.ಗಳ ದೊಡ್ಡ ಮೊತ್ತದ ಮೊದಲ ಬಹುಮಾನ ಇಡಲಾಯಿತು. ಆಗಿನ ಕಾಲಕ್ಕೆ ಅದೇ ಗರಿಷ್ಠ ಮೊತ್ತ. ಕಥೆಗಾರ್ತಿ ಸುಮಂಗಲಾ ಆ ವರ್ಷ ಮೊದಲ ಬಹುಮಾನ ಗಳಿಸಿದರು. ರಘುನಾಥ ಚ.ಹ., ಮೊಗಳ್ಳಿ ಗಣೇಶ ಮುಂತಾದವರು ಬಹುಮಾನಿತರ ಸಾಲಿನಲ್ಲಿದ್ದರು. ಈ ಕಥೆಗಳು ʼಚೌಕಟ್ಟಿನಿಂದ ಹೊರಬಂದ ಚಿತ್ರʼ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಮುಂದೆ ಪ್ರತಿವರ್ಷ ಹೀಗೆ ಸ್ಪರ್ಧೆ ಹಾಗೂ ಅದನ್ನು ಪುಸ್ತಕವಾಗಿ ಪ್ರಕಟಿಸುವುದನ್ನು ವಿಜಯ ಕರ್ನಾಟಕ ರೂಢಿಸಿಕೊಂಡಿದೆ. ಬಹುಮಾನ ಪ್ರಾಯೋಜಕರು ಬದಲಾಗುತ್ತ ಬಂದಿದ್ದಾರೆ.
ಇದನ್ನೂ ಓದಿ: Vistara Kathaspardhe : ವಿಸ್ತಾರ ನ್ಯೂಸ್‌ನಿಂದ ಯುಗಾದಿ-2023 ಕಥಾ ಸ್ಪರ್ಧೆ; 1 ಲಕ್ಷ ರೂ. ಬಹುಮಾನ!
ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳ ಜತೆಗೆ ಸಾಹಿತ್ಯ ವೆಬ್‌ಸೈಟ್‌ಗಳೂ ಕಥಾ ಸ್ಪರ್ಧೆಗಳನ್ನು ನಡೆಸತೊಡಗಿವೆ. ಸಾಕಷ್ಟು ಬಹುಮಾನದ ಹಣವನ್ನೂ ನೀಡಲಾಗುತ್ತಿದೆ. ಇವುಗಳ ಪಾಲಿಗೆ ಹೊಸ ಸೇರ್ಪಡೆ ವಿಸ್ತಾರ ನ್ಯೂಸ್. ಇದು ಕನ್ನಡ ಕಥಾಲೋಕದಲ್ಲಿ ಟಿವಿ ಮಾಧ್ಯಮವೊಂದು ನಡೆಸುತ್ತಿರುವ ಮೊತ್ತ ಮೊದಲ ಕಥಾಸ್ಪರ್ಧೆ ಎಂದೂ ದಾಖಲಾಗಿದೆ. ಹೀಗೆಯೇ ಕಥಾಸ್ಪರ್ಧೆ ನಡೆಸುವವರ ಜತೆ ಪ್ರಕಾಶಕರು ಕೈ ಸೇರಿಸಿ ಬಹುಮಾನದ ಮೊತ್ತವನ್ನು ಪ್ರಾಯೋಜಿಸುವ ರೂಢಿಯೂ ಹೆಚ್ಚಿದೆ.
ಈ ಸ್ಪರ್ಧೆಯ ವೈಖರಿಯನ್ನು ಕತೆಗಾರ ವಸುಧೇಂದ್ರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಒಯ್ದರು. ʼಛಂದ ಪುಸ್ತಕʼದ ಮೂಲಕ ಕತೆ ಸಂಕಲನಗಳನ್ನೇ ಆಹ್ವಾನಿಸಿ, ಸ್ಪರ್ಧೆ ನಡೆಸಿ, ಗೆದ್ದ ಕೃತಿಯನ್ನು ಪ್ರಕಟಿಸಿ ಅದಕ್ಕೆ ಮೌಲಿಕ ಬಹುಮಾನಗಳನ್ನು ಕೊಟ್ಟರು.
50 ಸಾವಿರ ರೂ. ಬಹುಮಾನ ಇಟ್ಟಿದ್ದ ಬುಕ್ ಬ್ರಹ್ಮ
2022ರಲ್ಲಿ ಬುಕ್‌ಬ್ರಹ್ಮ ಪೋರ್ಟಲ್, 50,000 ರೂ. ಮೊದಲ ಬಹುಮಾನ ಮೊತ್ತದ ಸಣ್ಣಕಥೆ ಸ್ಪರ್ಧೆಯನ್ನು ಇಟ್ಟು ಇನ್ನೊಂದು ಸುತ್ತಿನ ಮೆಗಾ ಕಥಾ ಸ್ಪರ್ಧೆಗಳಿಗೆ ನಾಂದಿ ಹಾಡಿತು. ಈ ಸ್ಪರ್ಧೆಯಲ್ಲಿ ಪೂರ್ಣಿಮಾ ಮಾಳಗಿಮನಿ ಅವರ ʼವಿನ್ನರ್ ವಿನ್ನರ್ ಚಿಕನ್ ಡಿನ್ನರ್ʼ ಕಥೆ ಮೊದಲ ಬಹುಮಾನ ಗೆದ್ದಿತು. ಎರಡನೆಯ ಹಾಗೂ ಮೂರನೇ ಬಹುಮಾನಗಳು ಕ್ರಮವಾಗಿ ಬಸವಣ್ಣೆಪ್ಪ ಕಂಬಾರ ಹಾಗೂ ಸಂದೀಪ ನಾಯಕರ ಪಾಲಾದವು. ಇದೀಗ ಬುಕ್‌ಬ್ರಹ್ಮ ಒಂದು ಲಕ್ಷ ರೂಪಾಯಿ ಮೊದಲ ಬಹುಮಾನದ ಕಾದಂಬರಿ ಸ್ಪರ್ಧೆಯನ್ನೂ ಘೋಷಿಸಿದೆ. ಜತೆಗೆ 50 ಸಾವಿರ ಮೊತ್ತದ ಕಥಾ ಸ್ಪರ್ಧೆಯೂ ಇದೆ.
ವಿಸ್ತಾರ ನ್ಯೂಸ್ ಈಗ ಕಥಾ ಸ್ಪರ್ಧೆಗೆ ಒಟ್ಟು 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಮೊದಲ ಬಹುಮಾನ 55 ಸಾವಿರ ರೂ. ಈವರೆಗಿನ ಗರಿಷ್ಠ ಮೊತ್ತವಾಗಿದೆ.
ಆಯ್ಕೆಯೂ ಕುತೂಹಲಕರ…
ಕಥೆ ಸ್ಪರ್ಧೆಯಲ್ಲಿ ಗೆಲ್ಲುವವರು, ಸ್ಪರ್ಧೆಯ ತೀರ್ಪುಗಾರರ ಆಯ್ಕೆ ಕೂಡ ಕುತೂಹಲಕಾರಿಯಾಗಿರುತ್ತದೆ ಎಂಬುದನ್ನು ಗಮನಿಸಬಹುದು. ಪ್ರಜಾವಾಣಿ- ಕನ್ನಡಪ್ರಭಗಳಲ್ಲಿ ಮೊದಮೊದಲ ಕಥೆ ಸ್ಪರ್ಧೆಗಳಲ್ಲಿ ಗೆದ್ದುಕೊಂಡವರು ನಂತರ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತಿಗಳಾಗಿ ಮಿಂಚಿದ್ದು, ಅಂಥ ಸ್ಪರ್ಧೆಗಳ ತೀರ್ಪುಗಾರರಾಗಿ ಇಂದು ಮನ್ನಣೆ ಪಡೆಯುತ್ತಿದ್ದಾರೆ. ಅಮರೇಶ ನುಗಡೋಣಿ, ವಸುಧೇಂದ್ರ, ಸುನಂದಾ ಕಡಮೆ, ಕೇಶವ ಮಳಗಿ ಮುಂತಾದವರನ್ನು ಇದರಲ್ಲಿ ಗುರುತಿಸಬಹುದು. ವಿಮರ್ಶಕರಾಗಿಯೇ ಗುರುತಿಸಲ್ಪಟ್ಟಿರುವ ಎಚ್ ಎಸ್ ರಾಘವೇಂದ್ರ ರಾವ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಂ.ಎಸ್ ಆಶಾದೇವಿ ಮುಂತಾದವರೂ ತೀರ್ಪುಗಾರರಾಗಿದ್ದಾರೆ.
ಯಾವುದೇ ರೀತಿಯಲ್ಲಿ, ಯಾವುದೇ ಮಾಧ್ಯಮದಲ್ಲಿ ಕಥಾಸ್ಪರ್ಧೆ ನಡೆಯಲಿ; ಅದು ಕನ್ನಡ ಕಥಾಲೋಕಕ್ಕೆ ಭರಪೂರ ಕೊಡುಗೆಯನ್ನಂತೂ ನೀಡುತ್ತ ಬಂದಿದೆ. ಕಥೆಗಳ ಗುಣಮಟ್ಟ, ಸಂಖ್ಯೆ, ಕಥೆಗಾರರ ಆಗಮನ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವೃದ್ಧಿಸಲಿದೆ.