Site icon Vistara News

ಮೈಲ್ಯಾಂಗ್ ಆಡಿಯೋ ಕತೆಗಳು | ಯುವ ತಲೆಮಾರನ್ನು ಓದಿನತ್ತ ತರುವ ಒಂದು ಪ್ರಯತ್ನ

kannada stories

ಹೊಸ ತಲೆಮಾರಿನ ಕನ್ನಡಿಗರನ್ನು ಮತ್ತೆ ಓದಿನತ್ತ ಕರೆ ತರಲು ಮೈಲ್ಯಾಂಗ್ ಶುರು ಮಾಡಿರುವ ಹೊಸ ಅಭಿಯಾನವೇ “ಮೈಲ್ಯಾಂಗ್ ಆಡಿಯೋ ಕತೆಗಳು”. ಸಮಯವಿಲ್ಲದ ಈ ಪೀಳಿಗೆಗೆ ಕೇವಲ 15-20 ನಿಮಿಷಗಳಲ್ಲಿ ಕೇಳಿ ಮುಗಿಸುವಂತಹ, ಮುಗಿಸಿದ ತೃಪ್ತಿಯನ್ನು ನೀಡುವಂತಹ ನೂರಾರು ಆಡಿಯೋ ಕತೆಗಳನ್ನು ಮೈಲ್ಯಾಂಗ್ ಉಚಿತವಾಗಿ ತಂದಿದೆ.

ಕನ್ನಡ ನಮ್ಮ ನಿಮ್ಮೆಲ್ಲರ ಭಾಷೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಬರವಣಿಗೆಯ ಇತಿಹಾಸ ಇರುವ ಪ್ರಪಂಚದ ಅತ್ಯಂತ ಹಳೆಯ ನುಡಿಗಳಲ್ಲಿ ಒಂದು ನಮ್ಮ ಕನ್ನಡ. ಇಂತಹ ಹಿರಿಮೆ-ಗರಿಮೆ ಇರುವ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅತ್ಯದ್ಭುತವಾದ ಕತೆ, ಕಾದಂಬರಿ, ಜನಪದ, ಕಾವ್ಯ ಎಲ್ಲವೂ ರಚನೆಗೊಳ್ಳುತ್ತ ನಮ್ಮ ನುಡಿಯ ಶ್ರೀಮಂತಿಕೆಯನ್ನು ಹೆಚ್ಚಿಸುವುದರ ಜೊತೆ ಕನ್ನಡಿಗರಿಗೊಂದು ಭವ್ಯವಾದ ಇತಿಹಾಸದ ಪರಂಪರೆಯನ್ನು ಕಟ್ಟಿ ಕೊಟ್ಟಿದೆ.

kannada stories

ಇದು ಡಿಜಿಟಲ್ ಯುಗ. ಮೊಬೈಲು, ಸಾಮಾಜಿಕ ಜಾಲತಾಣಗಳು, ಇಂಟರ‍್ನೆಟ್ ಎಲ್ಲವೂ ನಾವು ಮಾಹಿತಿ ಮತ್ತು ಮನರಂಜನೆಯನ್ನು ಪಡೆಯುವ ರೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಕೋಟಿಗಟ್ಟಲೆ ಕನ್ನಡ ಭಾಷಿಕರು ಇಂದು ಈ ಡಿಜಿಟಲ್ ಸಾಧ್ಯತೆಗಳ ಮೂಲಕ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಕನ್ನಡ ಪುಸ್ತಕಗಳೂ ಡಿಜಿಟಲ್ ಸ್ಪರ್ಷ ಪಡೆದು ಕಾಲಕ್ಕೆ ತಕ್ಕಂತೆ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಇಬುಕ್ ಇಲ್ಲವೇ ಆಡಿಯೋಪುಸ್ತಕದ ರೂಪದಲ್ಲಿ ಜನರನ್ನು ತಲುಪಿಸುವ ಪ್ರಯತ್ನವನ್ನು ಮಾಡಿ ಸಾವಿರಾರು ಹೊಸ ಓದುಗರನ್ನು ಕನ್ನಡಕ್ಕೆ ತಂದಿದೆ ಕನ್ನಡಿಗರೇ ಸೇರಿ ಕಟ್ಟಿರುವ ಮೈಲ್ಯಾಂಗ್ ಮೊಬೈಲ್ ಅಪ್ಲಿಕೇಶನ್. ಕನ್ನಡದ ಎಲ್ಲ ಮೇರು ಬರಹಗಾರರು, ಪ್ರತಿಷ್ಟಿತ ಪ್ರಕಾಶಕರು, ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಪ್ರಪಂಚದ ಎಲ್ಲಿಂದ, ಯಾವಾಗ ಬೇಕಿದ್ದರೂ ಮೊಬೈಲ್ ಮೂಲಕ ಓದುವ, ಕೇಳುವ ಆಯ್ಕೆ ಮೈಲ್ಯಾಂಗ್ ಕಲ್ಪಿಸಿದೆ. ಶುರುವಾದ ಎರಡು ವರ್ಷಗಳಲ್ಲಿ ಸಾವಿರಾರು ಹೊಸ ಓದುಗರನ್ನು ಡಿಜಿಟಲ್ ಮಾಧ್ಯಮದ ಮೂಲಕ ಕನ್ನಡಕ್ಕೆ ತಂದಿರುವುದು ಮೈಲ್ಯಾಂಗ್ ಹೆಗ್ಗಳಿಕೆ.

ಇದೀಗ ಅಂತರ್ಜಾಲದಲ್ಲಿ ಕಳೆದು ಹೋಗಿರುವ ಹೊಸ ತಲೆಮಾರಿನ ಕನ್ನಡಿಗರನ್ನು ಮತ್ತೆ ಓದಿನತ್ತ ಕರೆ ತರಲು ಮೈಲ್ಯಾಂಗ್ ಶುರು ಮಾಡಿರುವ ಹೊಸ ಅಭಿಯಾನವೇ “ಮೈಲ್ಯಾಂಗ್ ಆಡಿಯೋ ಕತೆಗಳು”. ಸಮಯವಿಲ್ಲದ ಈ ಪೀಳಿಗೆಗೆ ಕೇವಲ 15-20 ನಿಮಿಷಗಳಲ್ಲಿ ಕೇಳಿ ಮುಗಿಸುವಂತಹ, ಮುಗಿಸಿದ ತೃಪ್ತಿಯನ್ನು ನೀಡುವಂತಹ ನೂರಾರು ಆಡಿಯೋ ಕತೆಗಳನ್ನು ಮೈಲ್ಯಾಂಗ್ ಉಚಿತವಾಗಿ ತಂದಿದೆ. ಕರ್ನಾಟಕದ ಉದ್ದಗಲದ ನೂರಾರು ಕತೆಗಾರರು, ಕತೆಗಾರ್ತಿಯರು ಬರೆದ ಕತೆಗಳನ್ನು ನಾಡಿನ ಮೂಲೆ ಮೂಲೆಯ ದನಿ ಕಲಾವಿದರು ತಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿದ ನಂತರ ಅದಕ್ಕೆ ಸೂಕ್ತ ಹಿನ್ನೆಲೆ ಸಂಗೀತ, ಸೌಂಡ್ ಸೇರಿಸಿ ಒಂದು ಅದ್ಭುತವಾದ ಸಿನೆಮಾ ನೋಡುವ ಅನುಭವ ನೀಡುವ ಆಡಿಯೋಕತೆಯಾಗಿಸಿ ಅದನ್ನು ಜನರಿಗೆ ಉಚಿತವಾಗಿ ಈ ಯೋಜನೆಯಡಿ ತಲುಪಿಸಲಾಗುತ್ತಿದೆ.

ಇದನ್ನೂ ಓದಿ | ವಾಕಿಂಗ್‌ ಚಿತ್ರಗಳು ಅಂಕಣ | ಕೋಪದಿಂದ ಮೂಗು ಕೊಯ್ದುಕೊಂಡರೆ ಅಪಾಯವಿಲ್ಲ!

ಹೆಚ್ಚು ಸಮಯ ಬೇಡದ, ಆಡಿಯೋ ರೂಪದಲ್ಲಿರುವ, ಉಚಿತವಾಗಿರುವ ಈ ಕತೆಗಳನ್ನು ಕೇಳುತ್ತ ನೂರಾರು ಜನರು ಮತ್ತೆ ಓದಿನ ದಾರಿಯತ್ತ ಸರಿಯುತ್ತಿರುವುದು ಕಂಡುಬರುತ್ತಿದೆ. ನಾಡಿನ ಮೂಲೆ ಮೂಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ಕತೆಗಾರರು ಮತ್ತು ದನಿ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸುವುದರ ಜೊತೆ ಅವರಿಗೆ ಸಾವಿರಾರು ಹೊಸ ಓದುಗರ ಮನ್ನಣೆ, ಪ್ರೀತಿಯನ್ನೂ ಈ ಅಭಿಯಾನ ಗಳಿಸಿ ಕೊಡುತ್ತಿದೆ. ಶುರುವಾಗಿ ನಾಲ್ಕು ತಿಂಗಳಲ್ಲಿ ಇಲ್ಲಿ ಐನೂರಕ್ಕೂ ಹೆಚ್ಚು ಆಡಿಯೋ ಕತೆಗಳು ಹರಿದು ಬಂದಿರುವುದು ಈ ಅಭಿಯಾನಕ್ಕೆ ಸಿಗುತ್ತಿರುವ ಮನ್ನಣೆಯನ್ನು ತೋರುತ್ತಿದೆ.

ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಹೀಗೆ ಕರ್ನಾಟಕದ ಮೂಲೆ ಮೂಲೆಯ ಕತೆಗಳು ಇಲ್ಲಿ ಆಡಿಯೋ ರೂಪ ಪಡೆದು ಓದುಗರನ್ನು ತಲುಪುತ್ತ, ಕನ್ನಡದ ನಡೆ-ನುಡಿಯ ಪರಿಚಯವನ್ನು ಹರಡುತ್ತ, ಡಿಜಿಟಲ್ ಸಾಧ್ಯತೆಗಳ ಮೂಲಕ ಕನ್ನಡಕ್ಕೆ ಹೊಸ ಓದುಗರನ್ನು ಸೆಳೆಯುವ ಪುಟ್ಟ ಹೆಜ್ಜೆ ಇರಿಸಿದೆ.

ಆಸಕ್ತ ಬರಹಗಾರ/ಬರಹಗಾರ್ತಿಯರು, ದನಿ ಕಲಾವಿದರು www.mylang.in ಗೆ ಭೇಟಿ ನೀಡುವ ಮೂಲಕ ಈ ಯೋಜನೆಯಲ್ಲಿ ಕೈ ಜೋಡಿಸಬಹುದು.

Exit mobile version