Site icon Vistara News

ಹೊಸ ಪುಸ್ತಕ | ಸಾವು | ಚರಮಗೀತೆಗಳ ಸೊಗಸು

death

ಒಮ್ಮೆ ಭೋಜರಾಜನಿಗೆ ಒಂದು ಆಸೆಯಾಗುತ್ತದೆ. ಎಷ್ಟೊಳ್ಳೇ ಕವಿ ಕಾಳಿದಾಸ. ಎಲ್ಲರೂ ಸತ್ತಾಗ ಒಳ್ಳೆಯ ಪದ್ಯ ಬರೆಯುತ್ತಾನೆ. ತಾನು ಸತ್ತಾಗ ಅವನು ಏನು ಬರೆಯಬಹುದು ಎಂಬ ಕುತೂಹಲದಿಂದ ಅವನು ಕಾಳಿದಾಸನಿಗೆ ಅದನ್ನು ಹೇಳುತ್ತಾನೆ. ಕಾಳಿದಾಸ ಅದಕ್ಕೆ ಒಪ್ಪುವುದಿಲ್ಲ. ಅವನ ಮೇಲೆ ಸಿಟ್ಟಾದ ಭೋಜರಾಜ ಅವನನ್ನು ಆಸ್ಥಾನದಿಂದ ಹೊರಗಟ್ಟುತ್ತಾನೆ.

ಜೋಗಿ

ಎಷ್ಟೋ ದಿನಗಳ ನಂತರ ಭೋಜರಾಜ ತೀರಿಕೊಂಡ ಸುದ್ದಿ ಕಾಳಿದಾಸನಿಗೆ ಗೊತ್ತಾಗುತ್ತದೆ. ಅವನು ಕೂಡಲೇ ಅರಮನೆಗೆ ಬಂದು ಒಂದು ಚರಮ ಗೀತೆಯನ್ನು ಹಾಡುತ್ತಾನೆ:

ಅದ್ಯ ಧಾರಾ ನಿರಾಧಾರಾ
ನಿರಾಲಂಬಾ ಸರಸ್ವತೀ |
ಪಂಡಿತಾ: ಖಂಡಿತಾ: ಸರ್ವೇ
ಭೋಜರಾಜೇ ದಿವಂಗತೇ ||

ಧಾರಾನಗರಿಯ ಆಧಾರ ತಪ್ಪಿತು. ಸರಸ್ವತಿ ಆಶ್ರಯ ಕಳಕೊಂಡಳು. ಪಂಡಿತರು ಸಮ್ಮಾನದಿಂದ ವಂಚಿತರಾದರು ಎಂಬುದು ಇದರ ಅರ್ಥ. ಇದನ್ನು ಹಾಡುವ ಹೊತ್ತಿಗೆ ಭೋಜರಾಜ ಬದುಕಿಯೇ ಇದ್ದನೆಂದೂ ಈ ಚರಮ ಗೀತೆ ಕೇಳಿದ ತಕ್ಷಣ ಅವನು ಪ್ರಾಣಬಿಟ್ಟನೆಂದೂ ಮತ್ತೊಂದು ಗೀತೆ ಹಾಡಿ ಕಾಳಿದಾಸ ಅವನನ್ನು ಬದುಕಿಸಿದನೆಂದೂ ಕತೆ.

ಅಂದರೆ ಚರಮಗೀತೆಗಳನ್ನು ಹಾಡಲಾಗುತ್ತಿತ್ತು ಎನ್ನುವುದಂತೂ ನಿಜ. ಸತ್ತವರಿಗೆ ಕವಿತೆಯ ಮೂಲಕ ಗೌರವ ಅರ್ಪಿಸುವುದು ಒಂದು ರೀತಿಯಾದರೆ, ಸಾಯುವ ಮುಂಚೆ ವ್ಯಕ್ತಿಯೇ ಚರಮಗೀತೆ ಬರೆದಿಟ್ಟು ಸಾಯುವುದೂ ಇದೆ. ಇಂಗ್ಲಿಷಿನಲ್ಲಿ ಅಂಥವುಗಳನ್ನು ಎಪಿಟಾಪ್ಸ್ ಎನ್ನುತ್ತಾರೆ. ಅವು ಗೀತೆಗಳೇ ಆಗಿರಬೇಕಾಗಿಲ್ಲ. ಅದ್ಭುತವಾದ ಒಂದು ಸಾಲು, ವ್ಯಕ್ತಿತ್ವವನ್ನು ವರ್ಣಿಸುವ ಪದಗಳಾಗಿದ್ದರೂ ಸರಿಯೇ.

ಇಂಗ್ಲಿಷಿನಲ್ಲಿ ಲಕ್ಷಾಂತರ ಎಪಿಟಾಪ್‌ಗಳಿವೆ. ಅವುಗಳು ಸತ್ತವರಿಗೆ ಸಲ್ಲಿಸಿದ ಅಕ್ಷರ ನಮನದಂತೆ ಕಾಣುತ್ತವೆ. ಅವುಗಳ ಪೈಕಿ ತಮಾಷೆಯ ಎಪಿಟಾಪ್‌ಗಳೂ ಇವೆ. ಸತ್ತವರನ್ನು ಸಣ್ಣಗೆ ಗೇಲಿ ಮಾಡುವ ಇಂಥ ಚರಮಗೀತೆಗಳು ಸಾವನ್ನು ಕೂಡ ಹಗುರವಾಗಿ ಕಾಣುವ ನಮ್ಮ ಸ್ವಭಾವಕ್ಕೆ ಸಾಕ್ಷಿ.

ಮಜವಾಗಿರುವ ಒಂದಷ್ಟು ಚರಮಗೀತೆಗಳನ್ನು ನೋಡಿ.

ಸುಳ್ಳನ್ನೇ ಹೇಳುವ ಒಬ್ಬನ ಕುರಿತು ಈ ಎಪಿಟಾಪ್:
Here Lies Pecos Bill
He always Lied
And Always Will
He once Lied Loud
He Now lies Still.

ಸಮುದ್ರಯಾನಕ್ಕೆ ಹೋಗಿ ಮರಳಿ ಬರದವನ ಚರಮಗೀತೆ ಹೀಗೆ:
Underneath this Stone
Lied poor John Round
Lost at Sea
And never found

ಸ್ಟ್ರೇಂಜ್ ಹೆಸರಿನ ವಕೀಲನೊಬ್ಬ ಸತ್ತಾಗ ಬರೆದ ಚರಮ ಗೀತೆ
Here lies an
Honest Lawyer
That is Strange.

ಜಾನ್ ರೋಸ್ ಮತ್ತು ಕುಟುಂಬದ ಸಮಾಧಿಯ ಮೇಲೆ ಬರೆದಿತ್ತು
This Grave is
A bed of Roses.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಭೀಷ್ಮರು ಹೇಳಿದ ಕಥೆ | ಕರುಣೆ ಅಸಾಮರ್ಥ್ಯವಲ್ಲ

ಅಷ್ಟೇನೂ ಒಳ್ಳೆಯವನು ಅನ್ನಿಸಿಕೊಳ್ಳದ ಒಬ್ಬ ಸುಂದರಿಯ ಗೋರಿಯ ಮೇಲಿನ ಸಾಲು:
Here Lies
Hermina Kuntz
To virtue quite unknown
Jesus, Rejoice
At Last
He Sleeps Alone

ಇಲ್ಲಿ ಮಲಗಿದ್ದಾಳೆ ಹರ್ಮಿನಾ ಲಮಾನಿ
ಅವಳ ಸಚ್ಚಾರಿತ್ರ್ಯದ ಕುರಿತು ಸದಾ ಗುಮಾನಿ
ಸಂತೋಷ ಪಡು ದೇವರೇ
ಕೊನೆಗೂ ಅವಳು ಮಲಗಿದ್ದಾಳೆ ಒಬ್ಬಳೇ.

ಹುಡುಕಿದರೆ ಇಂಥ ನೂರಾರು ಚರಮಗೀತೆಗಳು ಸಿಗುತ್ತವೆ. ಗಂಭೀರವಾದ ಹಾಡುಗಳ ನಡುವೆ ತಮಾಷೆಯೂ ಬೇಕಾದಷ್ಟಿದೆ. ಒಬ್ಬಾತ ಬರೆಯುತ್ತಾನೆ.
ಬಿಕ್ಕಿ ಬಿಕ್ಕಿ ಅತ್ತರೆ ಮರಳಿ
ಬರುತ್ತಾಳೇನು ಹೋದ ಮಡದಿ.
ಇಲ್ಲ, ಖಂಡಿತಾ ಇಲ್ಲ, ಅದಕ್ಕೆಂದೇ
ಅಳುತ್ತಿರುವೆ ತಪ್ಪು ತಿಳಿಯದಿರಿ.

ಕೃತಿ: ಸಾವು- The art of dying
ಲೇಖಕ: ಜೋಗಿ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: 300
ರೂ.

ಇದನ್ನೂ ಓದಿ |ಹೊಸ ಪುಸ್ತಕ | ಪ್ರವಾದಿ ಪೈಗಂಬರರ ಕಾಲದಲ್ಲಿದ್ದ ಹುಸೇನಿ ಬ್ರಾಹ್ಮಣರು!

Exit mobile version