Site icon Vistara News

ಹೊಸ ಪುಸ್ತಕ | ಪ್ರವಾದಿ ಪೈಗಂಬರರ ಕಾಲದಲ್ಲಿದ್ದ ಹುಸೇನಿ ಬ್ರಾಹ್ಮಣರು!

new kannada book

ಇದು ನಿಜವೇ? ಮೊಹೈಲ್ ಬ್ರಾಹ್ಮಣರೆಂದು ಹೆಸರಾಗಿದ್ದ ಈ ಹುಸೇನಿ ಬ್ರಾಹ್ಮಣರು, ಪ್ರವಾದಿ ಪೈಗಂಬರರ ಕಾಲದಲ್ಲಿ, ಕ್ರಿ.ಶ 6-7ನೇ ಶತಮಾನದಲ್ಲಿ ಅರಬ್ ಭಾಗದಲ್ಲಿ ನೆಲೆಸಿದ್ದರೇ? ಯುದ್ಧಗಳಲ್ಲಿ ಭಾಗವಹಿಸುವಷ್ಟು, ಪರಾಕ್ರಮಿಗಳೆಂದು ಕರೆಸಿಕೊಳ್ಳುವಷ್ಟು ಅವರು ಶಕ್ತಿವಂತರಾಗಿದ್ದರೇ? ಇದು ಹೇಗಾದರೂ ಸಾಧ್ಯ? 21ನೇ ಶತಮಾನದ ನಮ್ಮಂತವರಿಗೆ ಈ ಪ್ರಶ್ನೆಗಳು ಸಹಜ. ಇವಕ್ಕೆ ಉತ್ತರಗಳೂ ಇವೆ. ಇದಕ್ಕಾಗಿ ಒಂದಿಷ್ಟು ಚರಿತ್ರೆ ಹೇಳಬೇಕಾಗಿದೆ.

ಮಧ್ಯ ಏಷಿಯಾದಿಂದ ಈ ಭೂಭಾಗಕ್ಕೆ ತಂಡೋಪತಂಡವಾಗಿ ವಲಸೆ ಬಂದ ಜನ ಸಿಂಧೂ ನದಿಯ ಸಂಸ್ಕೃತಿಯ ಭಾಗವಾಗಿ ಇಲ್ಲಿ ನೆಲೆಸಲು ಆರಂಭವಾಗಿ, ರಹಬ ದತ್ತನ ವಂಶಜರು ಹಿಂದೂಸ್ತಾನಕ್ಕೆ ಮರಳಿ ಬರುವ ಕಾಲಕ್ಕೆ ಐದು ಸಾವಿರ ವರ್ಷವಾಗಿತ್ತು. ಹೆಸರಿಲ್ಲದ ಈ ಭೂ ಪ್ರದೇಶ ಹಿಂದುಸ್ತಾನದ ಚರಿತ್ರೆ ಪಡೆದಿತ್ತು. ಆರ್ಯರೇ ಜಾತಿ ಪದ್ಧತಿಯನ್ನು ರೂಢಿಸಿದ್ದು ಎಂಬುದು ದಿಟವಾದರೆ ರಹಬ ದತ್ತನ ಜಾತಿಸೂಚಕವೂ ಈ ಐದು ಸಾವಿರ ವರ್ಷಗಳ ಉತ್ಪನ್ನವೇ.

ಮಧ್ಯ ಏಷಿಯಾದವರ ವಲಸೆಗೆ ವೈಜ್ಞಾನಿಕ ಆಧಾರಗಳು ಕಳೆದ ಇಪ್ಪತ್ತು ವರ್ಷಗಳಿಂದ ಹೇರಳವಾಗಿ ಲಭಿಸಿದ್ದು, ಇದಕ್ಕೆ ಯಾವ ಮುಜುಗರಗಳಾಗಲೀ, ಮಿತಿಗಳಾಗಲೀ ಇಲ್ಲ. ಅರೇಬಿಯಾ ಪ್ರದೇಶಕ್ಕೆ ಇಲ್ಲಿಂದ ರಸ್ತೆಯಿತ್ತು, ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಬರುವುದು ಹೋಗುವುದು ಸಾಮಾನ್ಯವಾಗಿತ್ತು. ಇಸ್ಲಾಮಿಕರಣದವರೆಗೆ ಇರಾಕ್, ಅರೇಬಿಯಾ ಪ್ರದೇಶಗಳನ್ನೊಳಗೊಂಡ ಮೆಸೆಪಟೊಮಿಯಾ ಸಂಸ್ಕೃತಿಯೆಂದು ಹೆಸರಾಗಿದ್ದ ಪರ್ಷಿಯಾ, ಸಣ್ಣ ಪುಟ್ಟ ಗುಡ್ಡಗಾಡುಗಳ, ಪುಟ್ಟ ಪುಟ್ಟ ಪಾಳೇಗಾರರ, ಸಾವಿರದೆಂಟು ಪಂಗಡಗಳ, ಬಿಡಿ ಬಿಡಿ ಸಂಸ್ಕೃತಿಗಳ, ಬದುಕಿನ ಕ್ರಮಗಳ ನಾಡಾಗಿತ್ತು. ಆ ಕಾಲದಲ್ಲಿ ವಿಜ್ಞಾನ, ಖಗೋಳಶಾಸ್ತ್ರ, ದರ್ಶನಶಾಸ್ತ್ರ, ಗಣಿತ ಶಾಸ್ತ್ರಗಳನ್ನೊಳಗೊಂಡ ಅರೇಬಿಯಾ ಮತ್ತು ಗ್ರೀಕ್ ಸಂಸ್ಕೃತಿಗಳ ಅನುಸಂಧಾನ ಇಡೀ ವಿಶ್ವದ ಕೇಂದ್ರವಾಗಿತ್ತು. ಯುರೋಪಿನ ಸಂಸ್ಕೃತಿ ಇನ್ನೂ ಭ್ರೂಣಾವಸ್ಥೆಯನ್ನು ಪಡೆದಿರದ ಕಾಲ ಅದಾಗಿತ್ತು. ಸಂಸ್ಕೃತಿ, ವಿಜ್ಞಾನ, ವೈದ್ಯಕೀಯ, ಗಣಿತ, ಲೋಹ ವಿಜ್ಞಾನ, ಸಂಬಾರ ಪದಾರ್ಥಗಳು, ರೇಷ್ಮೆ, ಹತ್ತಿಗಳಿಗೆ ಹೆಸರಾದ ಈ ಪರ್ಷಿಯಾ ವಿಶ್ವದ ಪೂರ್ವ ಭಾಗಕ್ಕೆ ಹೆಬ್ಬಾಗಿಲಾಗಿತ್ತು.

ಮುಖ್ಯವಾಗಿ ಕ್ರಿ.ಪೂ. 130ರಲ್ಲೇ ಚೈನಾ-ಮಂಗೋಲಿಯಾದಿಂದ ಆರಂಭವಾಗಿ ಹಿಂದೂಸ್ತಾನದ ಈಶಾನ್ಯ-ವಾಯುವ್ಯ ಭಾಗಗಳ ಮೂಲಕ ಹಾದು ಪರ್ಷಿಯಾ ಮೂಲಕ ಯೂರೋಪನ್ನು ತಲಪುತ್ತಿದ್ದ ಸಿಲ್ಕ್ ರೋಡ್-ರೇಷ್ಮೆ ರಸ್ತೆ, ಅಸ್ತಿತ್ವಕ್ಕೆ ಬಂದಿತ್ತು. ನಿಜವಾದ ಅರ್ಥದಲ್ಲಿ ಕಗ್ಗತ್ತಲ ಖಂಡವಾಗಿದ್ದ ಇಡೀ ಯೂರೋಪು ಆಗಿನ ಚೀನಾದ ಸಂಶೋಧನೆಗಳಾದ ಕಾಗದ, ಸಿಡಿಮದ್ದು ಪುಡಿಗಳು, ರೇಷ್ಮೆ; ಹಿಂದೂಸ್ತಾನದ ಹತ್ತಿ, ಚಿನ್ನ-ವಜ್ರ, ನೀಲಿ ಬಣ್ಣದ ಪುಡಿಗಳಿಗೆ ಯೂರೋಪು ಖಂಡ ಬೆಕ್ಕಸವಾಗಿತ್ತು. ಇಡೀ ಯೂರೋಪು ಇವುಗಳಿಗಾಗಿ ಹಪಹಪಿಸುವ ಕಾಲ ಅದಾಗಿತ್ತು.

ಮಧ್ಯ ಏಷಿಯಾ, ಪಶ್ಚಿಮ ಏಷಿಯಾ, ಯೂರೋಪ್ ಹಾಗೂ ಹಿಂದೂಸ್ತಾನ, ಚೀನ ನಡುವೆ ನಡೆಯುತ್ತಿದ್ದ ಲೇನಾದೇನಾಗಳಲ್ಲಿ ತರಕಾರಿ, ಹಣ್ಣು, ಒಣಹಣ್ಣು, ಚರ್ಮ, ಜಾನುವಾರುಗಳು, ಅನೇಕ ರೀತಿಯ ಸಲಕರಣೆಗಳು ಮಾತ್ರವಲ್ಲ; ಧರ್ಮ, ವಿಜ್ಞಾನ, ಗಣಿತ, ದರ್ಶನ ಶಾಸ್ತ್ರ, ಖಗೋಳ ಶಾಸ್ತ್ರ, ವೈದ್ಯಕೀಯ ಶಾಸ್ತ್ರಗಳೂ ಇದ್ದವು. ಕೇವಲ ವ್ಯಾಪಾರಿಗಳು ಮಾತ್ರವಲ್ಲ, ವಿಜ್ಞಾನಿಗಳು, ಸಂತರು, ದಾರ್ಶನಿಕರು, ವಿದ್ವಾಂಸರು, ರಾಯಭಾರಿಗಳು, ಚರಿತ್ರಾಕಾರರು, ಪ್ರವಾಸಿಗರು, ಧರ್ಮ ಪ್ರಚಾರಕರೂ ಇಲ್ಲಿಂದ ಆ ಭಾಗಗಳಿಗೆ ಹೋಗುತ್ತಿದ್ದರು. ಆ ಭಾಗದವರು ಇಲ್ಲಿಗೆ ಬರುತ್ತಿದ್ದರು ಕೂಡ. ಇಡೀ ಜಗತ್ತಿಗೆ ಚೀನಾ ಕೊಟ್ಟದ್ದು ಕಾಗದವಾದರೆ, ಗಾಜನ್ನು ಕೊಟ್ಟದ್ದು ಇಂದಿನ ಇಸ್ಲಾಮಿ ಪ್ರದೇಶಗಳು, ಕ್ರಿಸ್ತಪೂರ್ವದ ಕಾಲದಲ್ಲೇ ಆ ಭಾಗದಲ್ಲಿ ಗಾಜಿನ ಬಳಕೆಯಿತ್ತು. ಈಜಿಪ್ಟ್‌ನಲ್ಲಿ ಕ್ರಿ.ಪೂ. 2000ದ ವೇಳೆಗೆ ಗಾಜು ಬಳಕೆಯಲ್ಲಿತು ಎಂಬುದು ಪ್ರಚಲಿತದಲ್ಲಿದೆ.

ಸಮುದ್ರಯಾನದ ಆವಿಷ್ಕಾರಗಳು ಬೃಹತ್ ಮಟ್ಟದಲ್ಲಿ ನಡೆಯುವ 13-14ನೇ ಶತಮಾನದವರೆಗೂ ಹಿಂದೂಸ್ತಾನದ ದಕ್ಷಿಣ ಭಾಗದ ಸಂಬಾರ ಪದಾರ್ಥಗಳು ಯೂರೋಪು ತಲುಪುತ್ತಿದ್ದದ್ದು ಇದೇ ಹಾದಿಯಲ್ಲೇ. ಮುಂದೆ ಬ್ರಿಟಿಷರು, ಡಚ್ಚರು, ಫ್ರೆಂಚರು, ಪೋರ್ಚುಗೀಸರು ಸಮುದ್ರಯಾನದಲ್ಲಿ ನಡೆಸಿದ ಅತಿ ದೊಡ್ಡ ಪ್ರಯೋಗಗಳು, ಸಮುದ್ರ ದಂಡಯಾತ್ರೆಗೆಂದು ಈ ದೇಶಗಳ ಪ್ರಭುತ್ವ ಸುರಿದ ಬೃಹತ್ ಬಂಡವಾಳದಿಂದಾಗಿ ಹಿಂದೂಸ್ತಾನಕ್ಕೆ ಸಮುದ್ರದ ಮೂಲಕ ಬಂದ ಅವರು ಇಲ್ಲಿ ನೆಲೆಸಿದ್ದು, ಆಕ್ರಮಿಸಿದ್ದು, ಆಳಿದ್ದು ಮತ್ತೊಂದು ಇತಿಹಾಸ. ಈ ಸಮುದ್ರಯಾನಗಳಿಂದಲೇ, ಪರ್ಷಿಯಾ, ಈಜಿಪ್ಟ್, ಅರಬ್ ಪ್ರದೇಶಗಳು ತಮ್ಮ ವ್ಯಾಪಾರದ ಖ್ಯಾತಿ ಕಳೆದುಕೊಂಡು ವ್ಯಾವಹಾರಿಕವಾಗಿ ಮರುಭೂಮಿಗಳಾಗಿದ್ದು. ಭೌಗೋಳಿಕವಾಗಿ ಇದ್ದ ನಿಕಟತೆ, ಸಾಂಸ್ಕೃತಿಕ ಸಾಮ್ಯತೆ, ನಾಗರಿಕತೆಯ ನಾಜೂಕುಗಳಿಂದಾಗಿ; ಅರಬ್, ಗ್ರೀಸ್, ಪರ್ಷಿಯಾ ಪ್ರದೇಶಗಳಲ್ಲಿ ‘ಚಿನ್ನದ ಪಕ್ಷಿಗಳ’ ನಾಡೆಂದು ಹೆಸರಾಗಿದ್ದರಿಂದಲೇ ಯೂರೋಪಿಯನ್ನರಿಗೂ ಮೊದಲೇ ಗ್ರೀಕರ ಅಲೆಕ್ಸಾಂಡರ್ ಸಿಂಧೂ ನದಿಯತ್ತ ದಂಡಯಾತ್ರೆ ನಡೆಸಿದ್ದು, ಅದು ಕ್ರಿಪೂ 327ರಲ್ಲಿ. ಆಗ ಆತನ ವಯಸ್ಸು ಕೇವಲ ಮೂವತ್ತು. ಇದನ್ನು ಹೇಳಬೇಕಾಗಿರುವುದು, ತಾರುಣ್ಯ ಉಕ್ಕುವ ದೇಹಗಳಿಗೆ ಹಿಂದೂಸ್ತಾನ ಕನಸಾಗಿತ್ತು ಎಂಬುದಕ್ಕಾಗಿ. ಹುಸೇನಿ ಬ್ರಾಹ್ಮಣರ ಚರಿತ್ರೆಗೆ ಅಲೆಕ್ಸಾಂಡರ್ ಬೇಕಾಗಿದ್ದರಿಂದ ಈ ಪೀಠಿಕೆ ಅಗತ್ಯವಾಗಿದೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಭೀಷ್ಮರು ಹೇಳಿದ ಕಥೆ | ಕರುಣೆ ಅಸಾಮರ್ಥ್ಯವಲ್ಲ

ಮುಂದೆ ಚರಿತ್ರೆಯಲ್ಲಿ ನಡೆದಿದ್ದೆಲ್ಲವೂ ತಿಳಿದದ್ದೇ. ದಂಡೆತ್ತಿ ಬಂದ ಅಲೆಕ್ಸಾಂಡರ್, ಇಂದಿನ ಪಾಕಿಸ್ತಾನದಲ್ಲಿರುವ ತಕ್ಷಶಿಲಾ ಗಡಿಯಲ್ಲಿ ಹಿಂದೂಸ್ತಾನದ ರಾಜ ಪುರೂರವನನ್ನು ಎದುರಿಸಿದ್ದು, ರಾವಿ ನದಿ ತಟದಲ್ಲಿ ನಡೆದ ಉಗ್ರ ಯುದ್ಧದಲ್ಲಿ ಗೆದ್ದದ್ದು ಪುರೂರವನೋ ಅಥವಾ ಅಲೆಕ್ಸಾಂಡರನೋ ಎಂಬುದು ಇಲ್ಲಿ ಅಪ್ರಸ್ತುತ. ಹಿಂದು ಚರಿತ್ರಾಕಾರರು ಎದೆ ತಟ್ಟಿ ಹೇಳುವುದು, ಸೋತಿದ್ದರಿಂದಲೇ ಅಲೆಕ್ಸಾಂಡರ್ ವಾಪಸ್ ಹೊರಟದ್ದು ಎಂದು. ಆದರೆ ಚರಿತ್ರೆ ಹೇಳುವುದು, ಅವನು ಹಿಂತಿರುಗಿದ್ದು, ತನ್ನ ಸೈನಿಕರ ಬಂಡಾಯದಿಂದಾಗಿ. ಮನೆ ಮಠ, ಹೆಂಡತಿ ಮಕ್ಕಳು, ನೆಂಟರಿಷ್ಟರು, ಊರು ಕೇರಿಗಳನ್ನು ಬಿಟ್ಟು ಹದಿನೈದು ವರ್ಷವಾಗಿದ್ದು; ಮರಳುಗಾಡು, ಗುಡ್ಡಗಾಡು ರಸ್ತೆಗಳು, ಏರುವ ಜಾರುವ ಕಣಿವೆಗಳ ಪ್ರಯಾಣ, ಬಿಡುವಿಲ್ಲದೆ ನಡೆಯುತ್ತಿದ್ದ ಯುದ್ಧಗಳಿಂದಾಗಿ ರೋಸಿ ಹೋಗಿದ್ದ ಅವನ ಸೈನಿಕರು ಬಂಡೆದ್ದರು. ಶಸ್ತ್ರಗಳನ್ನು ನೆಲಕ್ಕಿಟ್ಟರು. ಇನ್ನು ಮುಂದೆ ಯುದ್ಧ ಸಾಧ್ಯವಿಲ್ಲ ಎಂದರು. ಅಲೆಕ್ಸಾಂಡರ್ ಹಿಂತಿರುಗಲೇ ಬೇಕಾಯಿತು. ಅವನು ಹಿಂತಿರುಗಿದ್ದು ಸೋತ ರಾಜರಂತೆ ಬಂದ ದಾರಿಯಲ್ಲಲ್ಲ. ಬದಲಾಗಿ ಮುಂದುವರೆಯುತ್ತಾ ಗೆದ್ದ ರಾಜನಂತೆ ಪುರೂರವನ ಪ್ರದೇಶಗಳಲ್ಲೇ ಹಾದು, ಝೀಲಂ ನದಿಯ ತಟದಲ್ಲೇ ಸಾಗಿ, ಕರಾಚಿಯ ಬಂದರಿನ ಮೂಲಕ ಗಾಯಗೊಂಡು ನಡೆಯಲಾರದ ಸೈನಿಕರ ಹಡಗು ಪ್ರಯಾಣಕ್ಕೆ ವ್ಯವಸ್ಥೆ ಮಾಡಿ, ಉಳಿದವರನ್ನು ಮತ್ತೊಂದಯ ರಸ್ತೆಯ ಮೂಲಕ ನಡೆಸುತ್ತಾ ಹಿಂತಿರುಗುತ್ತಾನೆ. ಸೋತ ರಾಜರು ಹಿಂತಿರುಗುವುದು ಬಂದ ದಾರಿಯಲ್ಲೇ. ಹೀಗಾಗಿ ಅಲೆಕ್ಸಾಂಡರ್‌ ಸೋತಿರಲಿಲ್ಲ ಎಂಬುದು ನಿಜಕ್ಕೆ ಹತ್ತಿರವಾದದ್ದು.

ಹುಸೇನಿ ಬ್ರಾಹ್ಮಣರ ಅಧಿಕೃತ ಚರಿತ್ರೆಯ ಆರಂಭವಾಗುವುದು ಈ ಅಲೆಕ್ಸಾಂಡರನ ಕಾಲದಿಂದಲೇ, ಚರಿತ್ರೆಯ ದೀರ್ಘ ಪೀಠಿಕೆ ಬೇಕಾದದ್ದು ಇದೇ ಕಾರಣದಿಂದ, ಮೊಹೈಲ್ ಬ್ರಾಹ್ಮಣರ ಚರಿತ್ರಾಕಾರರ ಪ್ರಕಾರ ಅವರು ಬ್ರಾಹ್ಮಣರಾಗಿದ್ದು ಹೆಸರಿನಲ್ಲಷ್ಟೇ. ವೃತ್ತಿಯಿಂದ, ದೇಹಬಲದಿಂದ ಅವರು ಕ್ಷತ್ರಿಯರು. ಅವರು ತಮ್ಮನ್ನು ಬ್ರಹ್ಮಕ್ಷತ್ರಿಯರೆಂದೂ ಕರೆದುಕೊಳ್ಳುತ್ತಾರೆ. ಜೊತೆಗೆ ಕ್ಷಾತ್ರ ಬ್ರಾಹ್ಮಣರೆಂದೂ ಕೂಡ. ಇವರು ರಾಜ, ಅರಸು, ಸಾಮ್ರಾಟರೂ ಆಗಿದ್ದರು. ಇಸ್ಲಾಂ ಪೂರ್ವದ ಆಫ್ಘಾನಿಸ್ತಾನ, ಬಲೂಚಿಸ್ತಾನದ ಬಹು ಭಾಗದ ರಾಜ್ಯತ್ವಗಳಿದ್ದದ್ದು ಇವರ ಅಧೀನದಲ್ಲೇ. ಈಗಿನ ಸಮಸ್ತ ಪಾಕಿಸ್ತಾನ ಪ್ರದೇಶವೂ ಇದ್ದದ್ದು ಇವರ ಆಳ್ವಿಕೆಯಲ್ಲೇ, ಅಲೆಕ್ಸಾಂಡರನನ್ನು ಎದುರಿಸಿದ ಪುರೂರವ, ಪುರೂರವನ ವಿರುದ್ಧದ ಯುದ್ಧಕ್ಕೆ ಅಲೆಕ್ಸಾಂಡರನಿಗೆ ನೆರವು ನೀಡಿದ ರಾಜ ಅಂಬಿ- ಇಬ್ಬರೂ ಮೊಹೈಲ್ ಬ್ರಾಹ್ಮಣರೇ. ಮೊಹೈಲ್ ಎನ್ನುವುದು ಮಹಿಪಾಲ ಎನ್ನುವುದರ ಅಪಭ್ರಂಶ ಎನ್ನುವುದು ಇವರ ಚರಿತ್ರೆ. ಅಷ್ಟೇಕೆ, ಕ್ರಿಶ. 712ರಲ್ಲಿ ಮುಸ್ಲಿಮರು ಹಿಂದ್ ಪ್ರದೇಶದಲ್ಲಿ ನಡೆಸಿದ ಮೊದಲ ಯುದ್ಧದಲ್ಲಿ, ಮೊಹಮದ್ ಬಿನ್ ಖಾಸಿಂ ಸೋಲಿಸಿದ ಸಿಂಧ್ಯ ಪ್ರದೇಶದ ರಾಜಾ ದಹಿರ್ ಕೂಡ ಇದೇ ಮೊಹೈಲ್ ಬ್ರಾಹ್ಮಣ ಕುಲದವನು ಎನ್ನುತ್ತದೆ ಅವರ ಚರಿತ್ರೆ. ಈ ಮೊಹೈಲ್ ಬ್ರಾಹ್ಮಣರ ಕುರಿತು ಅವರ ಕುಲದವರೇ ಬರೆದ ಚರಿತ್ರೆಯ ಪ್ರಕಾರ ಈ ಬ್ರಾಹ್ಮಣರು ಪುರೋಹಿತ, ಪೂಜಾರಿಗಳಲ್ಲ. ಬ್ರಾಹ್ಮಣರ ನಿಷಿದ್ಧದ ಪಟ್ಟಿಯಲ್ಲಿದ್ದದ್ದನ್ನು ಇವರು ಧಾರಾಳವಾಗೇ ಅನುಸರಿಸಿದ್ದರು. ಶಸ್ತ್ರವಿದ್ಯೆ, ಯುದ್ಧ, ಮಾಂಸಾಹಾರ, ರಾಜ್ಯಾಡಳಿತ ಇತ್ಯಾದಿ.

ಇದನ್ನೂ ಓದಿ | ಹೊಸ ಪುಸ್ತಕ | LTTE ಮೂರ್ತಿ Calling | ನೈಜ ಘಟನೆಯ ರೋಚಕ ಕಥೆ

ಇದು ಅಸಾಧ್ಯ, ಅಸಂಭವವೇನಲ್ಲ. ಕ್ರಿಶ ಏಳೆಂಟನೆಯ ಶತಮಾನಗಳವರೆಗೆ ಅಷ್ಟು ಕ್ರೂರವಾಗಿರಲಿಲ್ಲದ ಜಾತಿ ಪದ್ಧತಿ, ಸಾಮಾಜಿಕ ಚಲನೆಗೆ, ಸಾಮಾಜಿಕ ಅನುಸಂಧಾನ, ಪರಸ್ಪರ ಬದಲಾವಣೆಗಳಿಗೆ ಅನುವು ಮಾಡಿಕೊಟ್ಟಿತ್ತು. ಪರಸ್ಪರ ಒಳಗೊಳ್ಳುವಿಕೆಗೆ ಆಸ್ಪದವಿತ್ತು. ತೋಳ್ಬಲ, ಪರಾಕ್ರಮಗಳೇ ನಾಯಕತ್ವದ ಮೂಲವಾಗಿದ್ದ ಆ ಕಾಲದಲ್ಲಿ, ದಷ್ಟಪುಷ್ಟವಿದ್ದ, ಕತ್ತಿಯಿಂದ ತಲೆ ಕತ್ತರಿಸಬಲ್ಲ ಪರಾಕ್ರಮವಿದ್ದ, ಸಾವಿಗೆ ಅಂಜದಿದ್ದ, ಪಡೆಗಳನ್ನು ಕಟ್ಟಬಲ್ಲ ಚಾಕಚಕ್ಯತೆಯಿದ್ದ, ದಂಡೆತ್ತಿ ಮುನ್ನುಗ್ಗಬಲ್ಲ ಹುಮ್ಮಸ್ಸಿನವನು ಕ್ಷತ್ರಿಯನಾಗಬಹುದಾಗಿದ್ದ ಕಾಲ ಅದಾಗಿತ್ತು. ಚರಿತ್ರೆಯಲ್ಲಿ ಕ್ಷತ್ರಿಯ, ಬ್ರಾಹ್ಮಣರಷ್ಟೇ ಅಲ್ಲ ವೈಶ್ಯ ಮತ್ತಿತರ ಜಾತಿಯವರೂ ರಾಜರಾಗಬಹುದಿತ್ತು. ಶೂದ್ರ ದಲಿತರೂ ರಾಜ್ಯವಾಳಿದ್ದರ ದಾಖಲೆ ಅಲ್ಲಲ್ಲಿದೆ. ಮಾಂಸಾಹಾರ ಬಹುತೇಕರ ರುಚಿಯಾಗಿದ್ದು, ಸಾತ್ವಿಕ,
ತಾಮಸಗಳ ನಡುವಿನ ಅಂತರ ಅತ್ತಿತ್ತ ಜಿಗಿಯುವಷ್ಟು ಸುಲಭದಲ್ಲಿತ್ತು.

ಬ್ರಾಹ್ಮಣರ ಪಟ್ಟಿಯಲ್ಲಿ ಅನೇಕ ರಾಜರಿದ್ದಾರೆ. ಶುಂಗರ ಪುಷ್ಯಮಿತ್ರ ಶಾತವಾಹನ, ಕರ್ನಾಟಕದ ಕದಂಬ, ಮರಾಠಿಗರ ಪೇಶ್ವೆಗಳು, ದೇಶಸ್ಥರು ಹೀಗೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಮುಖ್ಯವಾದವರು ಕಾಬುಲ್ ಶಾಹಿಗಳೆಂದು ಹೆಸರಾಗಿದ್ದ ಸಿಂದ್ ಪ್ರದೇಶದ ಚಾಚ್ ಸಂತತಿ, ಈ ಕಾಬುಲ್ ಶಾಹಿಯೇ ಮೊಹೈಲ್ ಬ್ರಾಹ್ಮಣರದ್ದು. ಅಷ್ಟೇಕೆ, ಚಂದ್ರಗುಪ್ತ ಮೌರ್ಯನ ವಂಶಸ್ಥರು ಇಂದು ಬನಿಯಾಗಳಾಗಿರುವುದು.

Exit mobile version