ಆಗಸ್ಟ್ 21, 2023
ಮುಂಜಾನೆ 5:00 ಗಂಟೆ
ಹಿಂದೂ ಮಹಾಸಾಗರ
ಅಂದು ಮುಂಜಾನೆಯ ಮುಸುಕು ಇನ್ನೂ ತೆರೆಯದ ಸಮಯದಲ್ಲಿ ಭಾರತದ ವ್ಯಾಪಾರಿ ಹಡಗೊಂದು ಹಿಂದೂ ಮಹಾಸಾಗರದಲ್ಲಿ ಸಾಗುತ್ತಿತ್ತು. ಅದು ಸೀಶೆಲ್ಸ್ ದ್ವೀಪ ಸಮೂಹಕ್ಕೆ ಸರಕನ್ನು ಹೊತ್ತೊಯ್ದು ತಲುಪಿಸಿ, ಭಾರತಕ್ಕೆ ಹಿಂದಿರುಗುತ್ತಿತ್ತು. ಆಗ ತಾನೆ ರಾತ್ರಿ ಕಳೆದು ಹಗಲು ಮೂಡುತ್ತಿದ್ದು, ಮಂದ ಬೆಳಕು ಸುತ್ತಲೂ ಹರಡುತ್ತಿತ್ತು. ಹಡಗಿನಲ್ಲಿದ್ದ 20 ಮಂದಿ ಸಿಬ್ಬಂದಿಯಲ್ಲಿ ಕೆಲವರು ಆಗಲೆ ಎದ್ದು ಜೋಲಾಡುತ್ತಿದ್ದ ಹಡಗಿನ ಮೇಲೆ ಅತ್ತಿತ್ತ ಅಡ್ಡಾಡುತ್ತ ರಾತ್ರಿ ನಿದ್ದೆಯ ಮೈಜೋಮನ್ನು ಇಳಿಸುತ್ತಿದ್ದರು. ರಾತ್ರಿಯೆಲ್ಲ ಹಡಗನ್ನು ನಡೆಸಿದ್ದ ನಾವಿಕ ಮತ್ತು ಆತನ ಸಹಪಾಠಿಯನ್ನು ವಿಶ್ರಾಂತಿ ಪಡೆಯಲು ಕಳುಹಿಸಿದ ಮತ್ತೊಬ್ಬ ನಾವಿಕ ಮತ್ತು ಆತನ ಸಹಾಯಕ, ಈಗಾಗಲೆ ಹಡಗನ್ನು ತಮ್ಮ ಹತೋಟಿಗೆ ಪಡೆದಿದ್ದರು. ಆಗ ತಾನೆ ಮೇಲೇಳುತ್ತಿದ್ದ ಎಳೆ ಸೂರ್ಯ ನಿಂದಾಗಿ ಪೂರ್ವದ ಆಕಾಶದಲ್ಲಿ ಚಿಮ್ಮಿ ಹರಡಿದ್ದ ಹೊಂಬೆಳಕಿನಿಂದ, ಸಮುದ್ರವೂ ಕೆಂಪಾಗಿ ಕಾಣುತ್ತಿದ್ದು, ಅಲೆಗಳಲ್ಲಿ ಆ ಕೆಂಬಣ್ಣವು ಮತ್ತೆ ಮತ್ತೆ ಒಡೆದು ಮತ್ತೆ ಮತ್ತೆ ಮೂಡುತ್ತಿತ್ತು. ಆ ಮಸುಕಾದ ಕೆಂಪು ಬೆಳಕಿನಲ್ಲಿ ಸಮುದ್ರದ ನೀರಿನ ಮೇಲೆ ಹಡಗಿನ ಕೆಲವು ಸಿಬ್ಬಂದಿಗೆ ತುಸುದೂರದಲ್ಲಿ ಏನೋ ವಿಚಿತ್ರವಾಗಿ ತೇಲುತ್ತಿರುವುದು ಕಂಡುಬಂತು. ಕಣ್ಣು ದಿಟ್ಟಿಸಿ ನೋಡಿದರು. ಹಡಗು ಅತ್ತಲೇ ಸಾಗುತ್ತಿತ್ತು ಕೂಡ.
ಒಬ್ಬರಿಂದ ಒಬ್ಬರಿಗೆ ಆ ಸುದ್ದಿ ಹರಡಿ, ಎಲ್ಲರೂ ಅದನ್ನೇ ದಿಟ್ಟಿಸಿ ನೋಡುತ್ತ ಸೂಕ್ಷ್ಮವಾಗಿ ಅದರ ಚಲನೆಯನ್ನು ಪರಿಶೀಲಿಸಿದರು. ಸಾಗರಯಾನದಲ್ಲಿ ಪರಿಣತಿ ಹೊಂದಿರುವ ಅವರಿಗೆ ಸಮುದ್ರದ ಮೇಲಿನ ಆ ವಿಚಿತ್ರವು ಅತೀ ಸುಲಭವಾಗಿ ಕಾಣತೊಡಗಿತ್ತು. ಆ ಸುದ್ದಿ ಕ್ಯಾಪ್ಟನ್‍ಗೂ ತಲುಪಿ, ಆತ ತನ್ನ ಮುಂದಿದ್ದ ಟೆಲಿಸ್ಕೋಪ್ ಅನ್ನು ಆ ಕಡೆಗೆ ತಿರುಗಿಸಿ ಅದರ ಮೂಲಕ ವೀಕ್ಷಿಸಿದ. ಅನುಮಾನವೇ ಇರಲಿಲ್ಲ. ಅಲ್ಲೊಂದು ಮಾನವ ದೇಹ ತೇಲುತ್ತಿತ್ತು. ಆ ಸುದ್ದಿಯನ್ನು ತನ್ನ ಸಿಬ್ಬಂದಿಯೊಂದಿಗೆ ಹಂಚಿಕೊಂಡ ಕ್ಯಾಪ್ಟನ್, ಏನು ಮಾಡಬೇಕೆನ್ನುವುದರ ಬಗ್ಗೆ ತೀರ್ಮಾನಿಸಲಾರದಾದ. ಎಲ್ಲರೂ ಕ್ಯಾಪ್ಟನ್‍ನ ತೀರ್ಮಾನಕ್ಕೆ ಕಾತರದಿಂದ ಕಾಯುತ್ತಿದ್ದಂತೆ, ಹಡಗನ್ನು ನಿಲ್ಲಿಸಿ ಆ ದೇಹ ವನ್ನು ಪರೀಕ್ಷಿಸಬೇಕೋ ಬೇಡವೋ ಎಂಬ ತುಮುಲದಲ್ಲಿ ಸಿಕ್ಕಿಕೊಂಡ ಕ್ಯಾಪ್ಟನ್ ಅದನ್ನು ತನ್ನ ಮುಖದಲ್ಲಿಯೂ ವ್ಯಕ್ತಪಡಿಸುತ್ತ ಎಲ್ಲರತ್ತ ನೋಡಿದ. ಸಿಬ್ಬಂದಿಯೂ ಏನೂ ಹೇಳದೆ ಮೌನವಾಗಿದ್ದರು. ಯಾವುದನ್ನೂ ತೀರ್ಮಾನಿಸಲಾರದೆ ನಾವಿಕ ಏಕಾಏಕಿ ಹಡಗನ್ನು ಬೇರೆಡೆಗೆ ತಿರುಗಿಸತೊಡಗಿದ. ಕಾರಣ ಆ ದೇಹವು ಕಡಲ್ಗಳ್ಳರ ಷಡ್ಯಂತ್ರದ ಒಂದು ಭಾಗ ಇರಬಹುದು ಎಂಬ ಸಂಶಯ ಮತ್ತು ಅಂಜಿಕೆ ಅವರೆಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು.
ಕೊಚ್ಚಿನ್‍ನಿಂದ ನೈರುತ್ಯದಲ್ಲಿರುವ ಸೀಶೆಲ್ಸ್ ದ್ವೀಪ ಸಮೂಹದಿಂದ ಹಿಂದಿರುಗುವ ಭಾರತದ ಹಡಗುಗಳು ಸಾಮಾನ್ಯವಾಗಿ ಉತ್ತರಕ್ಕೆ ಹೊರಟು, ಅರಬ್ಬೀ ಸಮುದ್ರದ ಮೂಲಕ ನೇರವಾಗಿ ಭಾರತಕ್ಕೆ ಬರುವುದೇ ಹತ್ತಿರದ ಹಾದಿ. ಆದರೆ, ಬಹುಪಾಲು ವ್ಯಾಪಾರಿ ಹಡುಗುಗಳು, ವಿಶೇಷವಾಗಿ ಮಧ್ಯಮ ಗಾತ್ರದ ಹಡಗುಗಳು, ಆ ಹಾದಿಯಲ್ಲಿ ಸಾಗಿ ಬರುತ್ತಿರಲಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ ಅರಬ್ಬೀ ಸಮುದ್ರದಲ್ಲಿ ಸದಾ ಕಾಡುವ ಸೊಮಾಲಿಯಾದ ಕಡಲ್ಗಳ್ಳರ ಕಾಟ. ಮಧ್ಯಮ ಗಾತ್ರದ ವ್ಯಾಪಾರೀ ಹಡಗುಗಳು ಈ ಕಡಲ್ಗಳ್ಳರ ವಿರುದ್ಧ ತಮ್ಮದೇ ರಕ್ಷಣಾವ್ಯವಸ್ಥೆ ಹೊಂದಿರಲು ಸಾಧ್ಯವಿಲ್ಲದ ಕಾರಣ, ಅವು ಉತ್ತರಕ್ಕೆ ಅರಬ್ಬೀ ಸಮುದ್ರದತ್ತ ಸಾಗದೆ, ಹಿಂದೂ ಮಹಾಸಾಗರದಲ್ಲಿಯೇ ಪೂರ್ವದತ್ತ ಹೊರಟು, ಮಾಲ್ಡೀವ್ ದ್ವೀಪ ಸಮೂಹದ ಸುತ್ತ ಹಾದು, ಭಾರತಕ್ಕೆ ಹಿಂದಿರುಗುವುದು ರೂಢಿ. ಈ ಹಾದಿಯ ಪ್ರಯಾಣ ದೂರವಾದರೂ ಅದು ಸುರಕ್ಷಿತವಾಗಿದ್ದುದರಿಂದ ಎಲ್ಲರೂ ಅದನ್ನೇ ಅನುಸರಿಸುತ್ತಿದ್ದರು. ಜೊತೆಗೆ, ಸೀಶೆಲ್ಸ್‌ನಲ್ಲಿ ಸಿಗುವ ಅತೀ ಅಗ್ಗವಾದ ಹೆಪ್ಪುಗಟ್ಟಿಸಿದ ಮೀನನ್ನು ಹೊತ್ತು, ಮಾಲ್ಡೀವ್ ದ್ವೀಪಕ್ಕೆ ಸಾಗಿಸಿ ಮಾರಾಟ ಮಾಡುವುದರಿಂದ ಈ ದೂರದ ಹಾದಿಯ ವೆಚ್ಚವನ್ನು ಸರಿದೂಗಿಸುವುದಷ್ಟೇ ಅಲ್ಲದೆ ಸಾಕಷ್ಟು ಲಾಭವನ್ನೂ ಪಡೆಯಬಹುದಾಗಿತ್ತು.
ಮಾಲ್ಡೀವ್‍ನ ಸುತ್ತಲೂ ಕೂಡ ಸಾಕಷ್ಟು ಮೀನು ಸಿಗುತ್ತಿದ್ದರೂ, ಇತ್ತೀಚೆಗೆ ಅಲ್ಲಿ ಹೆಚ್ಚಾಗಿರುವ ಪ್ರವಾಸೋದ್ಯಮದಿಂದಾಗಿ, ಮೀನುಗಾರರೆಲ್ಲರೂ ತಮ್ಮ ಮೂಲ ಕಸುಬು ಬಿಟ್ಟು ಹೋಟೆಲ್ ಮತ್ತು ಪ್ರವಾಸಕ್ಕೆ ಸಂಬಂಧಪಟ್ಟ ಹಲವು ವಿಧದ ಉದ್ಯಮಗಳಲ್ಲಿ ತೊಡಗಿಕೊಂಡಿರುವುದರಿಂದ, ಮೀನಿನ ಸರಬರಾಜು ಕಡಿಮೆಯಾಗಿ ಅದಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಹಾಗೆ ಹೆಚ್ಚಿದ ಬೇಡಿಕೆ ಕೂಡ ಸೊಮಾಲಿಯದಿಂದ ಹೊರಡುವ ಭಾರತದ ಹಡಗುಗಳನ್ನು ಈ ಹಾದಿಯತ್ತ ಆಕರ್ಷಿಸಿತ್ತು. ಸೊಮಾಲಿಯದಿಂದ ಅತೀ ದೂರದಲ್ಲಿದ್ದ ಮಾಲ್ಡೀವ್ ಕಡೆಯ ಈ ಹಾದಿಯಲ್ಲಿ ಕಡಲ್ಗಳ್ಳರ ಕಾಟ ಇರಲಿಲ್ಲವಾದರೂ ಸಮುದ್ರದ ಮೇಲೆ ತೇಲುತ್ತಿದ್ದ ಆ ದೇಹದ ಬಗ್ಗೆ ಖಚಿತವಾಗಿ ತೀರ್ಮಾನಿಸಲಾಗದೆ ಕ್ಯಾಪ್ಟನ್ ಹಡಗನ್ನು ಬೇರೆಡೆಗೆ ತಿರುಗಿಸಿದ್ದ.
ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಎಲ್ಲ ಕಡೆಗೂ ದೃಷ್ಟಿ ಹಾಯಿಸಿ ಪರೀಕ್ಷಿಸಿದ ಸಿಬ್ಬಂದಿ, ಸುತ್ತಲೆಲ್ಲೂ ಕಡಲ್ಗಳ್ಳರ ಸುಳಿವು ಕಾಣದೆ, ಆ ದೇಹ ಏಕಾಂಗಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು, ಕ್ಯಾಪ್ಟನ್‍ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಇದ್ದಕ್ಕಿದ್ದಂತೆ ಸಮುದ್ರದ ಮೇಲೆ ಆ ದೇಹ ಚಲಿಸಿದಂತೆ ತೋರಿತು. ಆ ದೇಹ ಬದುಕಲು ಹೆಣಗಾಡುತ್ತಿರುವುದನ್ನು ಗಮನಿಸಿದ ಎಲ್ಲರಲ್ಲೂ ಕರುಣಾಭಾವ ಮೂಡಿತ್ತು. ತಕ್ಷಣ ಎಲ್ಲರೂ ಒಕ್ಕೊರಳಿನಲ್ಲಿ ಕ್ಯಾಪ್ಟನ್‍ನ ಗಮನವನ್ನು ಸೆಳೆದು ಹಡಗನ್ನು ಆ ದೇಹದತ್ತ ನಡೆಸಲು ಬಲವಂತ ಪಡಿಸಿದರು. ಕಡಲ ಸಂಚಾರದ ದುರಂತಗಳನ್ನು ಅರಿತಿದ್ದ ಅವರೆಲ್ಲರೂ ಅಲ್ಲಿ ಬದುಕಲು ಒದ್ದಾಡುತ್ತಿದ್ದ ಜೀವದಲ್ಲಿ ತಮ್ಮನ್ನೇ ಕಾಣತೊಡಗಿದ್ದರು. ಎಲ್ಲರ ಮನೋ ಇಚ್ಛೆ ಅರಿತ ಕ್ಯಾಪ್ಟನ್ ಹಡಗನ್ನು ಆ ದೇಹದತ್ತ ತಿರುಗಿಸಿದ. ಸ್ವಲ್ಪ ದೂರ ಚಲಿಸುತ್ತಿದ್ದಂತೆ ಆ ದೇಹದ ಜೀವವೂ ತನ್ನನ್ನು ಕಾಪಾಡಿ ಎಂದು ಕೈ ಎತ್ತಿ ಕರೆಯುತ್ತಿದ್ದದ್ದು ಕಂಡಿತು.
ಹತ್ತಿರ ಸಾಗಿ, ಹೇಗೋ ಆತನನ್ನು ಹಡಗಿನ ಮೇಲೆ ಎಳೆದುಕೊಂಡರು. ಮೇಲೆ ಬರುತ್ತಿದ್ದಂತೆಯೇ ಆತ ದೊಪ್ಪನೆ ಕುಸಿದ- ತಾನು ಬದುಕಿದೆ ಅಷ್ಟು ಸಾಕು ಎನ್ನುವಂತೆ. ಆದರೆ, ಆತನಿಗೆ ಉಸಿರಾಡಲೂ ಕಷ್ಟ ಎನಿಸುವಷ್ಟು ಸುಸ್ತಾಗಿದ್ದ. ಮೈ ಎಲ್ಲ ಈಗಾಗಲೆ ತಣ್ಣಗಾಗಿತ್ತು. ಆರೂವರೆ ಅಡಿ ಎತ್ತರದ, ದಷ್ಟಪುಷ್ಟವಾದ ಮೈಕಟ್ಟಿನ, ಕಪ್ಪು ಮೈ ಬಣ್ಣದ ಆ ವ್ಯಕ್ತಿಯ ಮೈ ಮೇಲೆ ಒಂದು ಬನಿಯನ್ ಮತ್ತು ಚಡ್ಡಿಯ ಹೊರತಾಗಿ ಮತ್ತೇನೂ ಇರಲಿಲ್ಲ. ಆಫ್ರಿಕಾದವನಂತೆ ಕಂಡರೂ, ಆತನ ಬನಿಯನ್‍ನ ಒಳಗೆ ಅದರ ಮಾರಾಟದ ಕಂಪನಿಯನ್ನು ಪರೀಕ್ಷಿಸಿದ ನಾವಿಕನಿಗೆ ಆತ ಆಫ್ರಿಕಾ ಖಂಡದವನಿರಲಿಕ್ಕಿಲ್ಲ ಅನಿಸಿತು. ತನ್ನ ಸಿಬ್ಬಂದಿಗೆ ಆತನನ್ನು ಒಳಗೆ ಒಯ್ದು, ಶುಶ್ರೂಷೆ ಮಾಡಲು ಸೂಚಿಸಿದ. ಅದರಂತೆ ಎಲ್ಲರೂ ಆತನನ್ನು ತರಾತುರಿಯಿಂದ ಒಳಗೆ ಒಯ್ದರು- ತಾವು ಎದುರಿಸಬೇಕಿರುವ ಸವಾಲುಗಳ ಅರಿವಿಲ್ಲದೆ.
ಇದನ್ನೂ ಓದಿ : Sunday read | ಹೊಸ ಪುಸ್ತಕ | ಸಣ್ಣಕಥೆ | ಹೊಸ ಶಿಕಾರಿ
ಒಳಗೆ ಬಟ್ಟೆಗಳಲ್ಲಿ ಸುತ್ತಿ ಆತನ ಮೈ ಬೆಚ್ಚಗೆ ಮಾಡಿ, ಮೈಕೈ ಉಜ್ಜಿದರು. ಸ್ವಲ್ಪ ಹೊತ್ತಿನಲ್ಲಿಯೇ ಆತ ಕಣ್ಣು ತೆರೆದ. ಆತನನ್ನು ಎತ್ತಿ ಕೂರಿಸಿ ಬಿಸಿಯಾದ ಕಾಫಿ ಕೊಟ್ಟರು. ಎಲ್ಲರಲ್ಲೂ ನಗೆ ಮೂಡಿತ್ತು. ಆದರೆ ತಾವು ಕಾಪಾಡಿದ ಆ ವ್ಯಕ್ತಿ ಪ್ರಪಂಚದ ಒಂದು ಅತೀ ಕಠೋರ ಯೋಜನೆಯೊಂದನ್ನು ತನ್ನೊಂದಿಗೆ ಹೊತ್ತು ತಂದಿದ್ದಾನೆ ಎಂಬ ಬಗ್ಗೆ ಅವರು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? ಒಂದು ರೀತಿಯಲ್ಲಿ ಆತನನ್ನು ಕಾಪಾಡುವುದರ ಮೂಲಕ, ಅವರು ಪ್ರಪಂಚದ ಲಕ್ಷಾಂತರ ಜನರನ್ನು ಕಾಪಾಡಿದ್ದರು ಎನ್ನಬಹುದು. ಒಂದು ಕ್ರೂರ ಯೋಜನೆಗೆ ಕಡಿವಾಣ ಹಾಕಿದ್ದರು. ದುರಂತವೆಂದರೆ ಆತನನ್ನು ಕಾಪಾಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ಹಡಗಿನಿಂದ ಅವನನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದು ಅವರಿಗೆ ಆ ಸದ್ಯಕ್ಕೆ ಹೊಳೆಯಲಿಲ್ಲ.
ಕೃತಿ: ಜಲ- ಜಾಲ (ರೋಚಕ ಕಾದಂಬರಿ)
ಲೇಖಕ: ಡಾ.ಕೆ.ಎನ್ ಗಣೇಶಯ್ಯ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 170 ರೂ.