ಕಲೆ/ಸಾಹಿತ್ಯ
ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ
ಕಾದಂಬರಿಕಾರ ಕೆ.ಎನ್ ಗಣೇಶಯ್ಯ ಅವರ ಹೊಸ ರೋಚಕ ಕಾದಂಬರಿ ʼಜಲ ಜಾಲʼ ಇತ್ತೀಚೆಗೆ ಬಿಡುಗಡೆಯಾಗಿದೆ. ಅದರಿಂದ ಆಯ್ದ ಒಂದು ಭಾಗ ಇಲ್ಲಿದೆ.
ಆಗಸ್ಟ್ 21, 2023
ಮುಂಜಾನೆ 5:00 ಗಂಟೆ
ಹಿಂದೂ ಮಹಾಸಾಗರ
ಅಂದು ಮುಂಜಾನೆಯ ಮುಸುಕು ಇನ್ನೂ ತೆರೆಯದ ಸಮಯದಲ್ಲಿ ಭಾರತದ ವ್ಯಾಪಾರಿ ಹಡಗೊಂದು ಹಿಂದೂ ಮಹಾಸಾಗರದಲ್ಲಿ ಸಾಗುತ್ತಿತ್ತು. ಅದು ಸೀಶೆಲ್ಸ್ ದ್ವೀಪ ಸಮೂಹಕ್ಕೆ ಸರಕನ್ನು ಹೊತ್ತೊಯ್ದು ತಲುಪಿಸಿ, ಭಾರತಕ್ಕೆ ಹಿಂದಿರುಗುತ್ತಿತ್ತು. ಆಗ ತಾನೆ ರಾತ್ರಿ ಕಳೆದು ಹಗಲು ಮೂಡುತ್ತಿದ್ದು, ಮಂದ ಬೆಳಕು ಸುತ್ತಲೂ ಹರಡುತ್ತಿತ್ತು. ಹಡಗಿನಲ್ಲಿದ್ದ 20 ಮಂದಿ ಸಿಬ್ಬಂದಿಯಲ್ಲಿ ಕೆಲವರು ಆಗಲೆ ಎದ್ದು ಜೋಲಾಡುತ್ತಿದ್ದ ಹಡಗಿನ ಮೇಲೆ ಅತ್ತಿತ್ತ ಅಡ್ಡಾಡುತ್ತ ರಾತ್ರಿ ನಿದ್ದೆಯ ಮೈಜೋಮನ್ನು ಇಳಿಸುತ್ತಿದ್ದರು. ರಾತ್ರಿಯೆಲ್ಲ ಹಡಗನ್ನು ನಡೆಸಿದ್ದ ನಾವಿಕ ಮತ್ತು ಆತನ ಸಹಪಾಠಿಯನ್ನು ವಿಶ್ರಾಂತಿ ಪಡೆಯಲು ಕಳುಹಿಸಿದ ಮತ್ತೊಬ್ಬ ನಾವಿಕ ಮತ್ತು ಆತನ ಸಹಾಯಕ, ಈಗಾಗಲೆ ಹಡಗನ್ನು ತಮ್ಮ ಹತೋಟಿಗೆ ಪಡೆದಿದ್ದರು. ಆಗ ತಾನೆ ಮೇಲೇಳುತ್ತಿದ್ದ ಎಳೆ ಸೂರ್ಯ ನಿಂದಾಗಿ ಪೂರ್ವದ ಆಕಾಶದಲ್ಲಿ ಚಿಮ್ಮಿ ಹರಡಿದ್ದ ಹೊಂಬೆಳಕಿನಿಂದ, ಸಮುದ್ರವೂ ಕೆಂಪಾಗಿ ಕಾಣುತ್ತಿದ್ದು, ಅಲೆಗಳಲ್ಲಿ ಆ ಕೆಂಬಣ್ಣವು ಮತ್ತೆ ಮತ್ತೆ ಒಡೆದು ಮತ್ತೆ ಮತ್ತೆ ಮೂಡುತ್ತಿತ್ತು. ಆ ಮಸುಕಾದ ಕೆಂಪು ಬೆಳಕಿನಲ್ಲಿ ಸಮುದ್ರದ ನೀರಿನ ಮೇಲೆ ಹಡಗಿನ ಕೆಲವು ಸಿಬ್ಬಂದಿಗೆ ತುಸುದೂರದಲ್ಲಿ ಏನೋ ವಿಚಿತ್ರವಾಗಿ ತೇಲುತ್ತಿರುವುದು ಕಂಡುಬಂತು. ಕಣ್ಣು ದಿಟ್ಟಿಸಿ ನೋಡಿದರು. ಹಡಗು ಅತ್ತಲೇ ಸಾಗುತ್ತಿತ್ತು ಕೂಡ.
ಒಬ್ಬರಿಂದ ಒಬ್ಬರಿಗೆ ಆ ಸುದ್ದಿ ಹರಡಿ, ಎಲ್ಲರೂ ಅದನ್ನೇ ದಿಟ್ಟಿಸಿ ನೋಡುತ್ತ ಸೂಕ್ಷ್ಮವಾಗಿ ಅದರ ಚಲನೆಯನ್ನು ಪರಿಶೀಲಿಸಿದರು. ಸಾಗರಯಾನದಲ್ಲಿ ಪರಿಣತಿ ಹೊಂದಿರುವ ಅವರಿಗೆ ಸಮುದ್ರದ ಮೇಲಿನ ಆ ವಿಚಿತ್ರವು ಅತೀ ಸುಲಭವಾಗಿ ಕಾಣತೊಡಗಿತ್ತು. ಆ ಸುದ್ದಿ ಕ್ಯಾಪ್ಟನ್‍ಗೂ ತಲುಪಿ, ಆತ ತನ್ನ ಮುಂದಿದ್ದ ಟೆಲಿಸ್ಕೋಪ್ ಅನ್ನು ಆ ಕಡೆಗೆ ತಿರುಗಿಸಿ ಅದರ ಮೂಲಕ ವೀಕ್ಷಿಸಿದ. ಅನುಮಾನವೇ ಇರಲಿಲ್ಲ. ಅಲ್ಲೊಂದು ಮಾನವ ದೇಹ ತೇಲುತ್ತಿತ್ತು. ಆ ಸುದ್ದಿಯನ್ನು ತನ್ನ ಸಿಬ್ಬಂದಿಯೊಂದಿಗೆ ಹಂಚಿಕೊಂಡ ಕ್ಯಾಪ್ಟನ್, ಏನು ಮಾಡಬೇಕೆನ್ನುವುದರ ಬಗ್ಗೆ ತೀರ್ಮಾನಿಸಲಾರದಾದ. ಎಲ್ಲರೂ ಕ್ಯಾಪ್ಟನ್‍ನ ತೀರ್ಮಾನಕ್ಕೆ ಕಾತರದಿಂದ ಕಾಯುತ್ತಿದ್ದಂತೆ, ಹಡಗನ್ನು ನಿಲ್ಲಿಸಿ ಆ ದೇಹ ವನ್ನು ಪರೀಕ್ಷಿಸಬೇಕೋ ಬೇಡವೋ ಎಂಬ ತುಮುಲದಲ್ಲಿ ಸಿಕ್ಕಿಕೊಂಡ ಕ್ಯಾಪ್ಟನ್ ಅದನ್ನು ತನ್ನ ಮುಖದಲ್ಲಿಯೂ ವ್ಯಕ್ತಪಡಿಸುತ್ತ ಎಲ್ಲರತ್ತ ನೋಡಿದ. ಸಿಬ್ಬಂದಿಯೂ ಏನೂ ಹೇಳದೆ ಮೌನವಾಗಿದ್ದರು. ಯಾವುದನ್ನೂ ತೀರ್ಮಾನಿಸಲಾರದೆ ನಾವಿಕ ಏಕಾಏಕಿ ಹಡಗನ್ನು ಬೇರೆಡೆಗೆ ತಿರುಗಿಸತೊಡಗಿದ. ಕಾರಣ ಆ ದೇಹವು ಕಡಲ್ಗಳ್ಳರ ಷಡ್ಯಂತ್ರದ ಒಂದು ಭಾಗ ಇರಬಹುದು ಎಂಬ ಸಂಶಯ ಮತ್ತು ಅಂಜಿಕೆ ಅವರೆಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು.
ಕೊಚ್ಚಿನ್‍ನಿಂದ ನೈರುತ್ಯದಲ್ಲಿರುವ ಸೀಶೆಲ್ಸ್ ದ್ವೀಪ ಸಮೂಹದಿಂದ ಹಿಂದಿರುಗುವ ಭಾರತದ ಹಡಗುಗಳು ಸಾಮಾನ್ಯವಾಗಿ ಉತ್ತರಕ್ಕೆ ಹೊರಟು, ಅರಬ್ಬೀ ಸಮುದ್ರದ ಮೂಲಕ ನೇರವಾಗಿ ಭಾರತಕ್ಕೆ ಬರುವುದೇ ಹತ್ತಿರದ ಹಾದಿ. ಆದರೆ, ಬಹುಪಾಲು ವ್ಯಾಪಾರಿ ಹಡುಗುಗಳು, ವಿಶೇಷವಾಗಿ ಮಧ್ಯಮ ಗಾತ್ರದ ಹಡಗುಗಳು, ಆ ಹಾದಿಯಲ್ಲಿ ಸಾಗಿ ಬರುತ್ತಿರಲಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ ಅರಬ್ಬೀ ಸಮುದ್ರದಲ್ಲಿ ಸದಾ ಕಾಡುವ ಸೊಮಾಲಿಯಾದ ಕಡಲ್ಗಳ್ಳರ ಕಾಟ. ಮಧ್ಯಮ ಗಾತ್ರದ ವ್ಯಾಪಾರೀ ಹಡಗುಗಳು ಈ ಕಡಲ್ಗಳ್ಳರ ವಿರುದ್ಧ ತಮ್ಮದೇ ರಕ್ಷಣಾವ್ಯವಸ್ಥೆ ಹೊಂದಿರಲು ಸಾಧ್ಯವಿಲ್ಲದ ಕಾರಣ, ಅವು ಉತ್ತರಕ್ಕೆ ಅರಬ್ಬೀ ಸಮುದ್ರದತ್ತ ಸಾಗದೆ, ಹಿಂದೂ ಮಹಾಸಾಗರದಲ್ಲಿಯೇ ಪೂರ್ವದತ್ತ ಹೊರಟು, ಮಾಲ್ಡೀವ್ ದ್ವೀಪ ಸಮೂಹದ ಸುತ್ತ ಹಾದು, ಭಾರತಕ್ಕೆ ಹಿಂದಿರುಗುವುದು ರೂಢಿ. ಈ ಹಾದಿಯ ಪ್ರಯಾಣ ದೂರವಾದರೂ ಅದು ಸುರಕ್ಷಿತವಾಗಿದ್ದುದರಿಂದ ಎಲ್ಲರೂ ಅದನ್ನೇ ಅನುಸರಿಸುತ್ತಿದ್ದರು. ಜೊತೆಗೆ, ಸೀಶೆಲ್ಸ್‌ನಲ್ಲಿ ಸಿಗುವ ಅತೀ ಅಗ್ಗವಾದ ಹೆಪ್ಪುಗಟ್ಟಿಸಿದ ಮೀನನ್ನು ಹೊತ್ತು, ಮಾಲ್ಡೀವ್ ದ್ವೀಪಕ್ಕೆ ಸಾಗಿಸಿ ಮಾರಾಟ ಮಾಡುವುದರಿಂದ ಈ ದೂರದ ಹಾದಿಯ ವೆಚ್ಚವನ್ನು ಸರಿದೂಗಿಸುವುದಷ್ಟೇ ಅಲ್ಲದೆ ಸಾಕಷ್ಟು ಲಾಭವನ್ನೂ ಪಡೆಯಬಹುದಾಗಿತ್ತು.
ಮಾಲ್ಡೀವ್‍ನ ಸುತ್ತಲೂ ಕೂಡ ಸಾಕಷ್ಟು ಮೀನು ಸಿಗುತ್ತಿದ್ದರೂ, ಇತ್ತೀಚೆಗೆ ಅಲ್ಲಿ ಹೆಚ್ಚಾಗಿರುವ ಪ್ರವಾಸೋದ್ಯಮದಿಂದಾಗಿ, ಮೀನುಗಾರರೆಲ್ಲರೂ ತಮ್ಮ ಮೂಲ ಕಸುಬು ಬಿಟ್ಟು ಹೋಟೆಲ್ ಮತ್ತು ಪ್ರವಾಸಕ್ಕೆ ಸಂಬಂಧಪಟ್ಟ ಹಲವು ವಿಧದ ಉದ್ಯಮಗಳಲ್ಲಿ ತೊಡಗಿಕೊಂಡಿರುವುದರಿಂದ, ಮೀನಿನ ಸರಬರಾಜು ಕಡಿಮೆಯಾಗಿ ಅದಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಹಾಗೆ ಹೆಚ್ಚಿದ ಬೇಡಿಕೆ ಕೂಡ ಸೊಮಾಲಿಯದಿಂದ ಹೊರಡುವ ಭಾರತದ ಹಡಗುಗಳನ್ನು ಈ ಹಾದಿಯತ್ತ ಆಕರ್ಷಿಸಿತ್ತು. ಸೊಮಾಲಿಯದಿಂದ ಅತೀ ದೂರದಲ್ಲಿದ್ದ ಮಾಲ್ಡೀವ್ ಕಡೆಯ ಈ ಹಾದಿಯಲ್ಲಿ ಕಡಲ್ಗಳ್ಳರ ಕಾಟ ಇರಲಿಲ್ಲವಾದರೂ ಸಮುದ್ರದ ಮೇಲೆ ತೇಲುತ್ತಿದ್ದ ಆ ದೇಹದ ಬಗ್ಗೆ ಖಚಿತವಾಗಿ ತೀರ್ಮಾನಿಸಲಾಗದೆ ಕ್ಯಾಪ್ಟನ್ ಹಡಗನ್ನು ಬೇರೆಡೆಗೆ ತಿರುಗಿಸಿದ್ದ.
ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಎಲ್ಲ ಕಡೆಗೂ ದೃಷ್ಟಿ ಹಾಯಿಸಿ ಪರೀಕ್ಷಿಸಿದ ಸಿಬ್ಬಂದಿ, ಸುತ್ತಲೆಲ್ಲೂ ಕಡಲ್ಗಳ್ಳರ ಸುಳಿವು ಕಾಣದೆ, ಆ ದೇಹ ಏಕಾಂಗಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು, ಕ್ಯಾಪ್ಟನ್‍ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಇದ್ದಕ್ಕಿದ್ದಂತೆ ಸಮುದ್ರದ ಮೇಲೆ ಆ ದೇಹ ಚಲಿಸಿದಂತೆ ತೋರಿತು. ಆ ದೇಹ ಬದುಕಲು ಹೆಣಗಾಡುತ್ತಿರುವುದನ್ನು ಗಮನಿಸಿದ ಎಲ್ಲರಲ್ಲೂ ಕರುಣಾಭಾವ ಮೂಡಿತ್ತು. ತಕ್ಷಣ ಎಲ್ಲರೂ ಒಕ್ಕೊರಳಿನಲ್ಲಿ ಕ್ಯಾಪ್ಟನ್‍ನ ಗಮನವನ್ನು ಸೆಳೆದು ಹಡಗನ್ನು ಆ ದೇಹದತ್ತ ನಡೆಸಲು ಬಲವಂತ ಪಡಿಸಿದರು. ಕಡಲ ಸಂಚಾರದ ದುರಂತಗಳನ್ನು ಅರಿತಿದ್ದ ಅವರೆಲ್ಲರೂ ಅಲ್ಲಿ ಬದುಕಲು ಒದ್ದಾಡುತ್ತಿದ್ದ ಜೀವದಲ್ಲಿ ತಮ್ಮನ್ನೇ ಕಾಣತೊಡಗಿದ್ದರು. ಎಲ್ಲರ ಮನೋ ಇಚ್ಛೆ ಅರಿತ ಕ್ಯಾಪ್ಟನ್ ಹಡಗನ್ನು ಆ ದೇಹದತ್ತ ತಿರುಗಿಸಿದ. ಸ್ವಲ್ಪ ದೂರ ಚಲಿಸುತ್ತಿದ್ದಂತೆ ಆ ದೇಹದ ಜೀವವೂ ತನ್ನನ್ನು ಕಾಪಾಡಿ ಎಂದು ಕೈ ಎತ್ತಿ ಕರೆಯುತ್ತಿದ್ದದ್ದು ಕಂಡಿತು.
ಹತ್ತಿರ ಸಾಗಿ, ಹೇಗೋ ಆತನನ್ನು ಹಡಗಿನ ಮೇಲೆ ಎಳೆದುಕೊಂಡರು. ಮೇಲೆ ಬರುತ್ತಿದ್ದಂತೆಯೇ ಆತ ದೊಪ್ಪನೆ ಕುಸಿದ- ತಾನು ಬದುಕಿದೆ ಅಷ್ಟು ಸಾಕು ಎನ್ನುವಂತೆ. ಆದರೆ, ಆತನಿಗೆ ಉಸಿರಾಡಲೂ ಕಷ್ಟ ಎನಿಸುವಷ್ಟು ಸುಸ್ತಾಗಿದ್ದ. ಮೈ ಎಲ್ಲ ಈಗಾಗಲೆ ತಣ್ಣಗಾಗಿತ್ತು. ಆರೂವರೆ ಅಡಿ ಎತ್ತರದ, ದಷ್ಟಪುಷ್ಟವಾದ ಮೈಕಟ್ಟಿನ, ಕಪ್ಪು ಮೈ ಬಣ್ಣದ ಆ ವ್ಯಕ್ತಿಯ ಮೈ ಮೇಲೆ ಒಂದು ಬನಿಯನ್ ಮತ್ತು ಚಡ್ಡಿಯ ಹೊರತಾಗಿ ಮತ್ತೇನೂ ಇರಲಿಲ್ಲ. ಆಫ್ರಿಕಾದವನಂತೆ ಕಂಡರೂ, ಆತನ ಬನಿಯನ್‍ನ ಒಳಗೆ ಅದರ ಮಾರಾಟದ ಕಂಪನಿಯನ್ನು ಪರೀಕ್ಷಿಸಿದ ನಾವಿಕನಿಗೆ ಆತ ಆಫ್ರಿಕಾ ಖಂಡದವನಿರಲಿಕ್ಕಿಲ್ಲ ಅನಿಸಿತು. ತನ್ನ ಸಿಬ್ಬಂದಿಗೆ ಆತನನ್ನು ಒಳಗೆ ಒಯ್ದು, ಶುಶ್ರೂಷೆ ಮಾಡಲು ಸೂಚಿಸಿದ. ಅದರಂತೆ ಎಲ್ಲರೂ ಆತನನ್ನು ತರಾತುರಿಯಿಂದ ಒಳಗೆ ಒಯ್ದರು- ತಾವು ಎದುರಿಸಬೇಕಿರುವ ಸವಾಲುಗಳ ಅರಿವಿಲ್ಲದೆ.
ಇದನ್ನೂ ಓದಿ : Sunday read | ಹೊಸ ಪುಸ್ತಕ | ಸಣ್ಣಕಥೆ | ಹೊಸ ಶಿಕಾರಿ
ಒಳಗೆ ಬಟ್ಟೆಗಳಲ್ಲಿ ಸುತ್ತಿ ಆತನ ಮೈ ಬೆಚ್ಚಗೆ ಮಾಡಿ, ಮೈಕೈ ಉಜ್ಜಿದರು. ಸ್ವಲ್ಪ ಹೊತ್ತಿನಲ್ಲಿಯೇ ಆತ ಕಣ್ಣು ತೆರೆದ. ಆತನನ್ನು ಎತ್ತಿ ಕೂರಿಸಿ ಬಿಸಿಯಾದ ಕಾಫಿ ಕೊಟ್ಟರು. ಎಲ್ಲರಲ್ಲೂ ನಗೆ ಮೂಡಿತ್ತು. ಆದರೆ ತಾವು ಕಾಪಾಡಿದ ಆ ವ್ಯಕ್ತಿ ಪ್ರಪಂಚದ ಒಂದು ಅತೀ ಕಠೋರ ಯೋಜನೆಯೊಂದನ್ನು ತನ್ನೊಂದಿಗೆ ಹೊತ್ತು ತಂದಿದ್ದಾನೆ ಎಂಬ ಬಗ್ಗೆ ಅವರು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? ಒಂದು ರೀತಿಯಲ್ಲಿ ಆತನನ್ನು ಕಾಪಾಡುವುದರ ಮೂಲಕ, ಅವರು ಪ್ರಪಂಚದ ಲಕ್ಷಾಂತರ ಜನರನ್ನು ಕಾಪಾಡಿದ್ದರು ಎನ್ನಬಹುದು. ಒಂದು ಕ್ರೂರ ಯೋಜನೆಗೆ ಕಡಿವಾಣ ಹಾಕಿದ್ದರು. ದುರಂತವೆಂದರೆ ಆತನನ್ನು ಕಾಪಾಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ಹಡಗಿನಿಂದ ಅವನನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದು ಅವರಿಗೆ ಆ ಸದ್ಯಕ್ಕೆ ಹೊಳೆಯಲಿಲ್ಲ.
ಕೃತಿ: ಜಲ- ಜಾಲ (ರೋಚಕ ಕಾದಂಬರಿ)
ಲೇಖಕ: ಡಾ.ಕೆ.ಎನ್ ಗಣೇಶಯ್ಯ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 170 ರೂ.
ಹೊಸ ಪುಸ್ತಕ ವಿಭಾಗದಲ್ಲಿ ಇನ್ನಷ್ಟು
ಕರ್ನಾಟಕ
Literature Award: ಕತೆಗಾರ ದಯಾನಂದ ರಚನೆಯ ‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ
Literature Award: ಕತೆಗಾರ ದಯಾನಂದ ಅವರಿಗೆ ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏಪ್ರಿಲ್ 8ರಂದು ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಬೆಳಗಾವಿ: ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 2022ನೇ ಸಾಲಿನ ‘ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ’ಕ್ಕೆ (Literature Award) ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏಪ್ರಿಲ್ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಗುರುಪಾದ ಮರಿಗುದ್ದಿ, ಡಾ. ವಿ.ಎನ್.ಮಾಳಿ ಹಾಗೂ ಪ್ರೊ. ಸಿ.ಎಸ್.ಭೀಮರಾಯ ನಿರ್ಣಾಯಕರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಹುಬ್ಬಳ್ಳಿ: ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2021 ಮತ್ತು 2022ನೇ ಸಾಲಿನ ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿಗಾಗಿ (Book Award) ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 3 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಇದರೊಂದಿಗೆ 2021ರ ಮತ್ತು 2022ನೇ ಸಾಲಿನ ಎರಡೂ ವರ್ಷಗಳಿಗೆ ಪ್ರತ್ಯೇಕ ಐದು ಪುಸ್ತಕಗಳಿಗೆ ಪ್ರೋತ್ಸಾಹಕ ಪ್ರಶಸ್ತಿ (ನಗದು ರಹಿತ)ಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಮತ್ತು ಗೌರವ ಸಮರ್ಪಣೆಯನ್ನು ಒಳಗೊಂಡಿರುತ್ತವೆ.
ಏಪ್ರಿಲ್, ಮೇ ನಂತರ ಬೆಳಗಾವಿಯಲ್ಲಿ ನಡೆಯುವ ಭಾವ ಸಂಗಮ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಳ್ಳುವುದು ಕಡ್ಡಾಯ. ಆದರೆ, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಹಾಜರಾಗದಿದ್ದಲ್ಲಿ ಪುರಸ್ಕೃತರ ಮನೆಗೆ ತೆರಳಿ ಪ್ರದಾನ ಮಾಡುವ, ಅಂಚೆಯಲ್ಲಿ ಕಳುಹಿಸುವ ಔಪಚಾರಿಕತೆಗೆ ಅವಕಾಶ ಇಲ್ಲ. ಅವರ ಪ್ರಶಸ್ತಿ ರದ್ದಾಗುತ್ತದೆ ಎಂದು ಫೌಂಡೇಶನ್ ತಿಳಿಸಿದೆ.
2021 ಮತ್ತು 2022ನೇ ಸಾಲಿನಲ್ಲಿ ಪ್ರಕಾಶನಗೊಂಡ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ಚುಟುಕು ಸಂಕಲನ, ಗಜಲ್ ಸಂಕಲನ, ಹಾಯ್ಕು ಸಂಕಲನ, ಟಂಕಾ ಸಂಕಲನ, ವಿಮರ್ಶಾ ಕೃತಿ, ವ್ಯಂಗ್ಯ ಚಿತ್ರ ಸಂಕಲನ, ವ್ಯಕ್ತಿಚಿತ್ರ, ಲಲಿತ ಪ್ರಬಂಧ, ಸಂಪಾದಿತ ಕೃತಿ, ಲೇಖನ ಸಂಕಲನ , ಅನುವಾದ, ಮಕ್ಕಳ ಸಾಹಿತ್ಯ ಮತ್ತು ಎಲ್ಲ ಪ್ರಕಾರದ ಕೃತಿಗಳನ್ನು (ತಲಾ 1 ಪ್ರತಿ ಮಾತ್ರ) 2023 ಏಪ್ರಿಲ್ 30ರೊಳಗೆ ತಲುಪಿಸಬೇಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
ಪುಸ್ತಕವನ್ನು ” ರಾಜೇಂದ್ರ ಪಾಟೀಲ, ನಂ.101, ಮೊದಲ ಮಹಡಿ, ಶ್ರೀ ಗುರೂಜಿ ಎನ್ಕ್ಲೇವ್ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ, ಹುಬ್ಬಳ್ಳಿ-580023 ( ಮೊ: 9148391546) ಈ ವಿಳಾಸಕ್ಕೆ ಕಡ್ಡಾಯವಾಗಿ ರಿಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕವೇ ಕಳುಹಿಸಲು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರು ಕೋರಿದ್ದಾರೆ.
ಕಲೆ/ಸಾಹಿತ್ಯ
Ram Navami 2023: ಮಾ.31ರಂದು ಜಯನಗರದಲ್ಲಿ ಕರ್ನಾಟಕ ಸಂಗೀತ ಗಾಯನ ಕಛೇರಿ
Ram Navami 2023: ಶ್ರೀರಾಮ ನವಮಿ ಪ್ರಯುಕ್ತ ಜಯನಗರದ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಕರ್ನಾಟಕ ಸಂಗೀತ ಗಾಯನ ಕಛೇರಿಯನ್ನು ಆಯೋಜಿಸಲಾಗಿದೆ.
ಬೆಂಗಳೂರು: ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಜಯನಗರ 4ನೇ ʼಟಿʼ ಬ್ಲಾಕ್‌ನ 13ನೇ ಮುಖ್ಯರಸ್ತೆ 35ನೇ ಅಡ್ಡರಸ್ತೆಯ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಮಾರ್ಚ್ 31ರಂದು ಸಂಜೆ 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿಯನ್ನು ಹಮ್ಮಿಕೊಳ್ಳಲಾಗಿದೆ.
ಗಾಯಕ ವಿದ್ವಾನ್ ಶಿರೀಶ್ ಕೃಷ್ಣ, ಪಿಟೀಲು ವಾದಕ ವಿ.ಡಿ. ಕೃಷ್ಣ ಕಶ್ಯಪ್, ಮೃದಂಗ ವಾದಕ ವಿದ್ವಾನ್ ಕಾರ್ತಿಕ್ ಹಾಗೂ ಖಂಜೀರ ವಾದಕ ವಿದ್ವಾನ್ ಭಾರ್ಘವ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ | Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ
ಕ ಸಾ ಪ
Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ
Literary Award: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ʼನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಅವರಿಗೆ ಹಾಗೂ 2022ನೇ ಸಾಲಿನ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು (Literary Award) ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನ್ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.
ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ, ನನ್ನ ಜತೆ ಜತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿರುವ ಹಿರಿಯ ಸಾಹಿತಿ ವೈದೇಹಿಗೆ ಅಭಿನಂದನೆಗಳು. ನಾವು ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡವನ್ನು ಮರೆತು ಹೋಗಿದ್ದೇವೆ. ಮಾತೃಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಸೃಜನಶೀಲವಾಗಿರುವುದು ಸಾಧ್ಯ. ಅನ್ಯ ಭಾಷೆಯಲ್ಲಿ ಏನೇ ವಿಷಯವನ್ನು ಮಂಡಿಸಿದರೂ ಅದು ಕೇವಲ ಕಂಠಪಾಠ ಮಾತ್ರ ಆಗುತ್ತದೆ. ನಮ್ಮ ಸೃಜನಶೀಲತೆ ಉಳಿಯಲು ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೆಕು. ಅದಕ್ಕೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯೇ ಪ್ರಮಾಣವಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರು ಮಾತನಾಡಿ, ಇವತ್ತಿನ ದಿನಮಾನದಲ್ಲಿ ಪುಸ್ತಕಗಳ ಓದುವ ಪದ್ಧತಿಗಳು ಕಾಣೆಯಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಇರುವ ಕನ್ನಡ ಕ್ರಿಯಾ ಸಮಿತಿ ಎಲ್ಲರ ಮೆಚ್ಚುಗೆಯ ಸಮಿತಿಯಾಗಿದೆ. ಕನ್ನಡವನ್ನು ಕಲಿಕೆಯಲ್ಲಿ, ಆಟದಲ್ಲಿ, ದಿನ ನಿತ್ಯದ ವ್ಯವಹಾರದಲ್ಲಿ ಮಕ್ಕಳು ನಿರಂತರವಾಗಿ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಕಷ್ಟವಾಗುತ್ತಿರುವುದು ಕಂಡು ಬರುತ್ತಿದೆ, ಸರಳ ಕನ್ನಡ ಬಳಸುವ ಕಲಿಸುವ ಪುಸ್ತಕಗಳು ಸಿದ್ಧವಾಗಬೇಕಿದೆ. ಬಾಲ್ಯದಲ್ಲಿಯೇ ಸಮರ್ಥವಾಗಿ ಭಾಷೆ ಕಲಿಸಿದರೆ ಅದರ ನಂಟು ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ ಮಾತನಾಡಿ, ಮಹಿಳಾ ಸಾಹಿತ್ಯದ ಶ್ರೇಷ್ಠ ಪ್ರತಿನಿಧಿ ವೈದೇಹಿ ಅವರು ಎಂದು ಗುರುತಿಸಿ ಅವರ ಕೊಡುಗೆ ಸಾರಸ್ವತ ಲೋಕಕ್ಕೆ ಅಪಾರ ಎಂದು ಬಣ್ಣಿಸಿದರು. ಹೊಸಬರ ಚಿಂತನೆಯಲ್ಲಿ ಹೊಸತನ ಇರುತ್ತದೆ. ಅದೇ ರೀತಿ ಯುವ ಬರಹಗಾರರು ಸಾಹಿತ್ಯ ಲೋಕದ ಹೊಸತನ ರಚಿಸುವ ನಕ್ಷತ್ರಗಳಾಗಿ ಬೆಳಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ʻಕನ್ನಡದ ಜ್ಞಾನಪೀಠʼ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. 7 ಲಕ್ಷದ 1 ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ವೈದೇಹಿಯವರ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರಹಗಾರ್ತಿ ವೈದೇಹಿ, ನಮ್ಮ ಕಾಲದಲ್ಲಿ ಮಾತ್ರ ಭಾಷೆಗೆ ಮಹತ್ವವಿತ್ತು. ಅದರಲ್ಲಿ ಮಿಂದು ಎದ್ದವರಿಗೆ ಆಡಿಪಾಡಿ ಬೆಳೆದವರಿಗಷ್ಟೇ ಕನ್ನಡದ ಚೆಲುವು ಅರಿಯಲು ಸಾಧ್ಯ. ಕನ್ನಡ ನಮ್ಮಲ್ಲಿ ನಿಗಿ ನಿಗಿಯಾಗಿ ಸೇರಿಕೊಂಡಿದ್ದು, ಅದು ಮಾತಿಗೆ, ಬರವಣಿಗೆಗೆ, ಜಗಳಕ್ಕೆ ಜೀವನಕ್ಕೆ ಹೀಗೆ ಎಲ್ಲದಕ್ಕೂ ನಮ್ಮ ಮಧ್ಯದಲ್ಲಿ ಅದು ಹಾಸು ಹೊಕ್ಕಾಗಿ ಹೋಗಿದೆ. ನಾನು ನಾನಾಗಿಯೇ ಬರಹಗಾರ್ತಿ ಆಗಲಿಲ್ಲ, ಕನ್ನಡವನ್ನೇ ನಂಬಿದ ನನಗೆ ಯಕ್ಷಗಾನದ ಕನ್ನಡದ ಜ್ಞಾನ ಶಬ್ದ ಭಂಡಾರ, ಕುಂದಾಪುರದ ಕುಂದ ಕನ್ನಡ ನನ್ನೊಳಗಿದ್ದ ಬರಹಗಾರ್ತಿಯನ್ನು ಜಾಗೃತಗೊಳಿಸಿತು. ಈ ಕನ್ನಡ ನೆಲವೇ ನನಗೆ ಬರಹಗಾರ್ತಿಯನ್ನಾಗಿ ಮಾಡಿತು. ಆದರೆ ಈಗ ಭಾಷೆ ಎನ್ನುವುದು ಸೌಹಾರ್ದದ ಸೇತುವೆಯಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯವುದು ಹೊಣೆ ನಮ್ಮೆಲರದ್ದು ಎಂಬ ಜವಾಬ್ದಾರಿಯುತ ಮಾತನ್ನು ಹಂಚಿಕೊಂಡರು.
ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿ, ಧಾರಣಾ ಶಕ್ತಿ ಇರುವ ಬೀಜ ಬಿತ್ತಿದಾಗ ಮಾತ್ರ ಅದು ಸಸಿಯಾಗುವಂತೆ ಹಿರಿಯ ಸಾಹಿತಿಗಳು ಬಿತ್ತಿದ ಸಾಹಿತ್ಯ ಬೀಜವೇ ಇಂದು ಯುವ ಸಾಹಿತಿಗಳು ಹುಟ್ಟುವುದಕ್ಕೆ ಕಾರಣವಾಗಿದೆ. ಕನ್ನಡದ ಪ್ರಜ್ಞೆ ಮೂಡಿಸುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಹಿರಿಯ ಕವಯತ್ರಿ ಸವಿತಾ ನಾಗಭೂಷಣ, ಕ.ರಾ.ರ.ಸಾ.ಸಂ. ಕೇಂದ್ರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು, ಪರಿಷತ್ ಪ್ರಕಟಣಾ ಸಮಿತಿ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ, ಪರಿಷತ್ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮತ್ತಿತರರು ಇದ್ದರು.
ಕರ್ನಾಟಕ
Samskruta Yuvajanotsava: ಸಂಸ್ಕೃತ ತಳಪಾಯದಿಂದಲೇ ಭಾರತೀಯ ಸಾಹಿತ್ಯ ಸೌಧ ಸುಭದ್ರ: ಎಂ.ಎಸ್. ನರಸಿಂಹಮೂರ್ತಿ
Samskruta Yuvajanotsava: ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಂಸ್ಕೃತವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ತಿಳಿಸಿದ್ದಾರೆ.
ಬೆಂಗಳೂರು: ಸಂಸ್ಕೃತವು (Samskruta Yuvajanotsava) ಎಲ್ಲ ಭಾಷೆಗಳ ಸಾಹಿತ್ಯಕ್ಕೆ ಅಡಿಪಾಯವಾಗಿದ್ದು, ಅದರಿಂದಲೇ ಭಾರತೀಯ ಸಾಹಿತ್ಯವು ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ ಎಂದು ಹೆಸರಾಂತ ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಮಲ್ಲೇಶ್ವರದ ಎಂಇಎಸ್ ಮಹವಿದ್ಯಾಲಯದ ಕಲಾವೇದಿ ವೇದಿಕೆಯಲ್ಲಿ ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಂಸ್ಕೃತ ಯುವಜನೋತ್ಸವ’ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಜನ್ಯ ಪದಗಳನ್ನು ಅನೇಕ ಪ್ರಸಂಗಗಳಲ್ಲಿ ತಪ್ಪಾಗಿ ಬಳಸಲಾಗುತ್ತದೆ. ಇದರಿಂದ ಅಪಾರ್ಥವು ಬರುವ ಸಾಧ್ಯತೆಯೇ ಹೆಚ್ಚು. ಸಂಸ್ಕೃತ ಅಧ್ಯಯನದಿಂದ ಮಾತ್ರವೇ ಭಾಷಾ ಶುದ್ಧತೆಯ ಅರಿವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರೂ ಸಂಸ್ಕೃತವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ತಿಳಿಸಿದರು.
ಇದನ್ನೂ ಓದಿ | Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಸುಬ್ರಹ್ಮಣ್ಯ ಕುಳೇದು ಅವರು ಮಾತನಾಡಿ, ಇಂದು ಆಂಗ್ಲ ಶಿಕ್ಷಣವು ಬದುಕುವ ಕಲೆಯನ್ನು ಕಲಿಸಿಕೊಡುತ್ತಿಲ್ಲ. ಹಾಗಾಗಿ ಈ ನೆಲದಲ್ಲಿ ಹುಟ್ಟಿ, ವಿದ್ಯಾಭ್ಯಾಸವನ್ನು ಕಲಿತು ನೌಕರಿಗಾಗಿ ವಿದೇಶಕ್ಕೆ ತೆರಳುವ ಯುವಕರು ಮಕ್ಕಳ ಲಾಲನೆಯ ಕೆಲಸ ಬಂದಾಗ ತಮ್ಮ ಪೋಷಕರನ್ನು ತಾವಿರುವಲ್ಲಿಗೆ ಕರೆಸಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ, ಅಂಕಣಕಾರ ಡಾ. ಗಣಪತಿ ಹೆಗಡೆ ಅವರ ‘ಮನಸು ಅರಳಲಿ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಸಂಸ್ಕೃತ ಕಾರ್ಯಾಗಾರದಲ್ಲಿ ಇಡೀ ದಿನ ಸಂಸ್ಕೃತದಲ್ಲಿ ವಿಜ್ಞಾನ ವಿಷಯದ ಕುರಿತು ಡಾ. ಮುರಳೀಧರ ಶರ್ಮಾ, ಆಯುರ್ವೇದದ ಕುರಿತು ಡಾ. ನಿರಂಜನ ಯಳ್ಳೂರು ಸವಿವರವಾಗಿ ತಿಳಿಸಿಕೊಟ್ಟರು. ಕಲಾವಿದೆ ಭವಾನಿ ಹೆಗಡೆ ಹಾಗೂ ತಂಡದವರು ಪ್ರಸ್ತುತಪಡಿಸಿದ ಸಂಸ್ಕೃತ ಗೀತೆಗಳ ‘ಸಾಮರಸ್ಯಮ್’ ಆರ್ಕೆಸ್ಟ್ರಾ ಪಾಲ್ಗೊಂಡವರ ಮನಸನ್ನು ತಣಿಸಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಐಐಎಸ್‌ಸಿ ನಿವೃತ್ತ ವಿಜ್ಞಾನಿ ಡಾ. ಕೆ. ಜೆ. ರಾವ್ ಮಾತನಾಡಿ, ವಿಷ್ಣು ಸಹಸ್ರನಾಮ, ಭಗವದ್ಗೀತೆಯು ಹೇಳಿಕೊಡುವ ವಿಜ್ಞಾನವನ್ನು ವೈಜ್ಞಾನಿಕವೆನಿಸಿದ ಈ ಯುಗದ ಯಾವ ಜ್ಞಾನಶಾಖೆಯೂ ತಿಳಿಸಿಕೊಡುವುದಿಲ್ಲ. ಇಂದಿನ ವಿಜ್ಞಾನವು ಕಂಡುಕೊಳ್ಳದ ಎಷ್ಟೋ ಸಂಗತಿಗಳನ್ನು ಭಗವಂತನು ಮನುಷ್ಯನ ದೇಹದಲ್ಲಿಯೇ ಇರಿಸಿದ್ದಾನೆ ಎಂದು ವಿವರಿಸಿದರು.
ಚಲನಚಿತ್ರ ನಟ. ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಮೇಲೆ ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷಾ ಪ್ರಭಾವವು ಉಂಟಾಗುತ್ತಿದೆ. ಇತ್ತೀಚೆಗೆ ಅನೇಕರು ತಮ್ಮ ಚಿತ್ರಗಳ ಶೀರ್ಷಿಕೆಗಾಗಿ ಸಂಸ್ಕೃತ ಭಾಷೆಯ ಪದಗಳ ಮೊರೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಕ್ಷೇತ್ರದಲ್ಲಿ 70ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರಾದ ಪ್ರೊ. ಶೇಷಾದ್ರಿ ಅಯ್ಯಂಗಾರ್ ಅವರನ್ನು ಹಾಗೂ ಸಂಸ್ಕೃತ ಕಾರ್ಯಕ್ಷೇತ್ರದಲ್ಲಿ ಪದೋನ್ನತಿ ಹೊಂದಿದ ವಿದ್ವಾನ್ ನಾರಾಯಣ ಅನಂತ ಭಟ್ಟ, ವಿ.ಡಿ. ಭಟ್, ಡಾ. ಕೃಷ್ಣಮೂರ್ತಿ ಮಯ್ಯ ಅವರನ್ನು ಮೈತ್ರೀ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ | ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಕಾರ್ಯಾಗಾರದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. 200ಕ್ಕೂ ಹೆಚ್ಚು ಸಂಸ್ಕೃತಾಸಕ್ತರು ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮೈತ್ರೀ ಪ್ರತಿಷ್ಠಾನದ ಸಂಸ್ಥಾಪಕ ಡಾ. ಗಣಪತಿ ಹೆಗಡೆ, ವಿಕ್ರಮ ಪ್ರಕಾಶನದ ಹರಿಪ್ರಸಾದ್, ಖ್ಯಾತ ಬರಹಗಾರ ಡಾ. ಗಣಪತಿ ಆರ್ ಭಟ್, ಚಿಂತಕ ಜೋತಿಶ್ವರ ಮತ್ತಿತ್ತರರು ಉಪಸ್ಥಿತರಿದ್ದರು.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ11 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್