ʻಶಿಲೆಗಳಲ್ಲಡಗಿದ ಸತ್ಯʼ ʻಮಿಹಿರಕುಲಿʼ ಮುಂತಾದ ಕೃತಿಗಳ ಮೂಲಕ ಹೆಸರುವಾಸಿಯಾದ ಸದ್ಯೋಜಾತ ಭಟ್ಟ ಅವರ ಹೊಸ ಪುಸ್ತಕ ʻಮಾಗಧೇಯʼ. ಭಾರತದ ಇತಿಹಾಸವನ್ನು ಮಗಧ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಅವರು ಇಲ್ಲಿ ಮಾಡಿದ್ದಾರೆ. ವೇದ ಪುರಾಣಗಳ ಉಲ್ಲೇಖಗಳು, ಶಾಸನಗಳು, ಸಂಸ್ಕೃತ ಕಾವ್ಯಗಳ ಉಲ್ಲೇಖ, ವಿದೇಶಿ ಪ್ರವಾಸಿ ಬರಹಗಾರರ ಬರಹಗಳು ಇತ್ಯಾದಿಗಳನ್ನು ಉಲ್ಲೇಖಿಸಿ, ಪ್ರಾಚೀನ ಭಾರತದ ವೈಭವಪೂರ್ಣ ಇತಿಹಾಸವನ್ನು ಕಟ್ಟಿಕೊಡುತ್ತಾರೆ. ಮಹಾಭಾರತದ ಜರಾಸಂಧನಿಂದ ಅಲೆಕ್ಸಾಂಡರ್‌ವರೆಗೆ, ಆರ್ಯರಿಂದ ಸಾಮ್ರಾಟ್ ಸಮುದ್ರಗುಪ್ತನವರೆಗೆ ಈ ಪುಸ್ತಕದ ಹರಹು ಚಾಚಿದೆ. ಅದರಿಂದ ಆಯ್ದ ಒಂದು ಭಾಗ ಇಲ್ಲಿದೆ.
ಇರಾನಿಯನರು ಮತ್ತು ಭಾರತೀಯ ಧಾರ್ಮಿಕ ನಂಬಿಕೆಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ. ಆದರೆ ಈ ಎರಡು ಧರ್ಮದ ಪ್ರಾಚೀನ ಗ್ರಂಥಗಳಲ್ಲಿನ ಪದ ಬಳಕೆ ಒಂದಕ್ಕೊಂದು ವಿರುದ್ಧವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ಉದಾಹರಣೆಗೆ ದೇವ ಎಂಬ ಪದ ಸಂಸ್ಕೃತದಲ್ಲಿ ಹೊಳೆಯುವ, ಆರಾಧಿಸುವ ಎನ್ನುವಂಥ ಅರ್ಥ ಹೊಂದಿದ್ದರೂ ಇರಾನಿಯನರ ಅವೆಸ್ತಾದಲ್ಲಿ ರಾಕ್ಷಸಿ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಹಾಗೆ ಅಸುರ ಎಂಬುದು ಭಾರತೀಯ ಬದುಕಿನಲ್ಲಿ ಕೆಟ್ಟ ಶಕ್ತಿ ಎಂಬರ್ಥದಲ್ಲಿ ಬಳಸಲ್ಪಟ್ಟರೆ ಇರಾನಿಯನ್ ಗ್ರಂಥಗಳಲ್ಲಿ ದೈವೀ ಶಕ್ತಿ ಎಂಬಂತೆ ಬಳಕೆಯಾಗಿದೆ. ಪ್ರಾಚೀನ ಋಗ್ವದದಲ್ಲಿಯೂ ಅಸುರ ಎಂಬುದಕ್ಕೆ ಅತಿಮಾನುಷ ಶಕ್ತಿ ಎಂಬರ್ಥದಲ್ಲಿ ಬಳಕೆಯಾಗಿದ್ದು ಕಂಡು ಬರುತ್ತದೆ. ಹಾಗೆಯೇ ಋಗ್ವೇದದ ಹಲವಾರು ಕಡೆಗಳಲ್ಲಿನ ಬಳಕೆಯಲ್ಲಿ ಅಸುರ ಪದ ಇಂದ್ರ, ಅಗ್ನಿ, ವಾಯು ದೇವತೆಗಳಿಗೆ ಉತ್ಕೃಷ್ಟ ಶಕ್ತಿ, ಜೀವಕಾರಕ ಶಕ್ತಿ ಎಂಬಂತೆ ಬಳಸಿದ ನಿದರ್ಶನಗಳು ಕಂಡು ಬರುತ್ತವೆ. ಹಾಗಾಗಿ ಒಂದು ಕಾಲಘಟ್ಟದಲ್ಲಿ ಇರಾನಿಯನರು ಮತ್ತು ಭಾರತೀಯರು ಸಹಬಾಳ್ವೆ ನಡೆಸಿದರೆಂದೂ ಕಾಲ ಕ್ರಮೇಣ ಇಂತಹ ಕೆಲ ಪದಗಳು ವಿರುದ್ಧಾರ್ಥಕ ಅರ್ಥ ಪಡೆದುಕೊಂಡಿರಬೇಕೆಂಬ ಅಂಶಗಳು ಸ್ಪಷ್ಟವಾಗುತ್ತದೆ. ಇರಾನಿಯನ್ ಕೃತಿಗಳ ರಚನೆಯ ಸಮಯದಲ್ಲಿ ದೇವತೆಗಳು ಮತ್ತು ಅಸುರರ ನಡುವಿನ ವೈಮನಸ್ಸು ತಾರಕಕ್ಕೇರಿದ ಕಾಲವಾದ್ದರಿಂದ ಅವರ ಗ್ರಂಥಗಳಲ್ಲಿ ವಿರುದ್ಧ ಅರ್ಥದಲ್ಲಿ ಬಳಸಲ್ಪಟ್ಟಿರಬೇಕೆಂಬ ಭಾವನೆ ಮೂಡುತ್ತದೆ.
ಭಾರತೀಯರು ಮತ್ತು ಇರಾನಿಯವರು ಇಬ್ಬರೂ ಯಜ್ಞ ಮತ್ತು ಅಗ್ನಿಯ ಆರಾಧಕರು. ಭಾರತೀಯರ ಹೋಮ, ಇರಾನಿಯನ್ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಸೋಮ ಅಗ್ನಿ ಆರಾಧನೆಯ ಜೊತೆ ಜೊತೆಗೆ ಅಗ್ನಿಯಲ್ಲಿ ಆಹುತಿ ಕೊಟ್ಟು ಯಜ್ಞವನ್ನು ಆಚರಿಸುವ ಪ್ರತಿಪಾದನೆ ಮಾಡುತ್ತವೆ. ಕಾಲ ಕ್ರಮೇಣ ಅವರವರ ನಂಬಿಕೆಗಳಲ್ಲಿ ವ್ಯತ್ಯಾಸಗಳು ಬಂದು, ಸಂಘರ್ಷಗಳು ಉಂಟಾಗಿ ಈ ಆಚರಣೆಗಳಲ್ಲಿ ಭಿನ್ನತೆ ಹುಟ್ಟಿರಬೇಕು. ಇಂದ್ರನ ಆರಾಧಕರಾದ ಭಾರತೀಯರು ಮೂಲ ಆರ್ಯ ಸಂಪ್ರದಾಯ ಉಳಿಸಿಕೊಂಡರೆ, ಇರಾನಿಯನರು ಮಾರ್ಪಾಡು ಮಾಡಿಕೊಂಡು ಪ್ರಾಣಿ ಬಲಿ, ಮಾಂಸದ ಆಹುತಿ ಇತ್ಯಾದಿ ಆಚರಣೆಗಳನ್ನು ನಿಲ್ಲಿಸಿರಬೇಕೆಂಬ ಅಭಿಪ್ರಾಯ ಕಂಡು ಬರುತ್ತದೆ. ಯೇಸು ಕ್ರಿಸ್ತನಿಂದ ಪ್ರಭಾವಿತರಾದ ಯಹೂದಿಗಳು ಇದೇ ರೀತಿ ಪ್ರಾಣಿಬಲಿ ನಿಲ್ಲಿಸಿದ್ದು ಕೂಡ ಎಂಬುದರತ್ತ ಇತಿಹಾಸದ ಹಲವು ದಾಖಲೆಗಳು ಬೆಳಕು ಬೀರುತ್ತದೆ.
ಭಾರತೀಯ ಇತಿಹಾಸ ಯಾವುದೇ ಐತಿಹಾಸಿಕ ಸಾಕ್ಷಿಯಿಲ್ಲದೆ, ತಾತ್ವಿಕ ನೆಲಗಟ್ಟಿಲ್ಲದ ವೈದಿಕ ಪರಂಪರೆಯ ಆಧಾರದಲ್ಲಿ ನಿಂತಿದೆ ಎಂಬ ಎಫ್.ಇ. ಪರ್ಗಿಟರ್ ಮಂಡಿಸಿದ ವಾದದ ಆಧಾರದಲ್ಲಿ ಅನೇಕ ಪಾಶ್ಚಾತ್ಯ ಇತಿಹಾಸಜ್ಞರು ಭಾರತೀಯ ಇತಿಹಾಸ ಅಧ್ಯಯನಕ್ಕೆ ತೊಡಗುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಸಂಸ್ಕೃತಿಯ ತಳಹದಿಯಾದ ಶ್ರುತಿ ಅನೇಕ ನಿಖರ ಐತಿಹಾಸಿಕ ನಿದರ್ಶನಗಳನ್ನು ತೆರೆದಿಡುತ್ತದೆ. ಮಹಾಭಾರತವೂ ಇತಿಹಾಸ ಪುರಾಣದ ಆಧಾರದಲ್ಲಿಯೇ ವೇದ ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯುವುದಲ್ಲದೇ ಉತ್ಕೃಷ್ಟ ಜೀವನ ಮೌಲ್ಯಗಳನ್ನು ಜನ ಮಾನಸಕ್ಕೆ ತಲುಪಿಸುತ್ತದೆ.
ಎಫ್. ಇ. ಪರ್ಗಿಟರ್‌ನ ಐಲಾ-ಆರ್ಯವಾದದ ಪ್ರಕಾರ ಇಂದಿನ ಅಲಹಾಬಾದ್ ಪ್ರದೇಶದಲ್ಲಿದ್ದ (ಗಂಗಾ, ಯಮುನಾ) ತಟದ ಜನರೇ ಪುರಾತನ ಭಾರತೀಯ ಐಲರು. ಇವರನ್ನೇ ಪ್ರಾಚೀನ ಭಾರತೀಯ ಇತಿಹಾಸ ಆರ್ಯರೆಂದು ಗುರುತಿಸುತ್ತದೆ. ಅಲಹಾಬಾದ್ ಪ್ರಾಂತ್ಯದಿಂದ ಕಾಲಕ್ರಮೇಣ ಈ ಜನರು ಇತರೆಡೆಗೆ ವಲಸೆ ಹೋದರು ಎನ್ನಲಾಗುತ್ತದೆ. ಆದರೆ ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಅಫ್ಘಾನ್ ಅಥವಾ ಪೂರ್ವ ಪ್ರಾಂತ್ಯದಿಂದ ಭಾರತೀಯರ ಮೇಲೆ ಆರ್ಯರ ಆಕ್ರಮಣ ನಡೆದ ದಾಖಲೆಗಳು ಸಿಗುವುದಿಲ್ಲವಾದರೂ, ಐಲರು ಕಾಲಕ್ರಮೇಣ ವಾಯುವ್ಯ ಭಾಗದತ್ತ ವಲಸೆ ಹೋಗಿ ತಮ್ಮ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡರು ಎಂಬ ಧೃಡೀಕರಣ ಪರ್ಗಿಟರ್ ವ್ಯಕ್ತಪಡಿಸುತ್ತಾನೆ. ಋಗ್ವೇದದಲ್ಲಿ ಮತ್ತು ಪರಿಯಾತ್ರ ಶಿಖರದ (ಅರಾವಳೀ ಬೆಟ್ಟ) ಉಲ್ಲೇಖವಿಲ್ಲವೆಂದು ಪರ್ಗಿಟರ್ ಹೇಳಿದರೂ, ಇತ್ತೀಚಿನ ವಾದಗಳ ಪ್ರಕಾರ ಆರ್ಯರು ಅರಾವಳೀ ಬೆಟ್ಟದ ಪ್ರದೇಶ ತಲುಪಿದ ದಾಖಲೆಗಳು ಕಂಡುಬರುತ್ತವೆ. ಋಗ್ವೇದದ ಬಹುಭಾಗ ಬ್ರಾಹ್ಮಣ್ಯದ ಪ್ರಭಾವದಲ್ಲಿ ರಚಿಸಲ್ಪಟ್ಟಿದ್ದು, ಆ ಸಮಯದಲ್ಲಿ ಭರತನೆಂಬ ದೊರೆಯ ಆಡಳಿತವಿತ್ತು. ಋಗ್ವೇದದ ಭಾಷೆ ಶುದ್ಧ ಆರ್ಯನ್ನರ ಭಾಷೆಯಾಗಿತ್ತು ಎಂಬ ಸರ್ ಜಾರ್ಜ್ ಗ್ರಿರೇಸನ್ ಅವರ ಅಭಿಪ್ರಾಯ ಆಧರಿಸಿ, ಆ ಭಾಷೆ ಗಂಗಾ ಯಮುನಾ ತಟದ ಅಂದಿನ ಭಾಷೆಗೆ ಹೋಲುತಿತ್ತು ಎಂಬ ತರ್ಕದತ್ತ ಆರ್ಯ-ಐಲಾ ವಾದ ಹೊರಳುತ್ತದೆ.
ಐಲರು ಮಧ್ಯ ಹಿಮಾಲಯದ ಮೂಲಕ ಉತ್ತರದ ಇಳಾವೃತ್ತದಿಂದ ಭಾರತ ಪ್ರವೇಶಿಸಿರಬೇಕೆಂಬ ವಾದ ಮೂಡಿದರೂ, ಪುರೂರವ ಎಂಬ ಐಲರ ಹೆಸರು ಋಗ್ವೇದದಲ್ಲಿ ಪ್ರಸ್ತಾಪಗೊಳ್ಳುವುದು ಬಿಟ್ಟರೆ, ಆಗ್ನೆಯ ಭಾರತದ ಪ್ರದೇಶಗಳಲ್ಲಿ ಪ್ರಾಚೀನ ಪವಿತ್ರತೆಯ ಉಲ್ಲೇಖಗಳು ಎಲ್ಲಿಯೂ ಸ್ಪಷ್ಟವಾಗುವದಿಲ್ಲ. ಆದರೆ ವೇದದಲ್ಲಿ ಕಾಣಿಸಿಕೊಳ್ಳುವ ದಾಶರಾಜ್ಞ ಯುದ್ಧದಲ್ಲಿ ಭಾಗವಹಿಸಿ ಸುದಾಸನ ಎದುರು ಸೋತು ವಿಪಾಶಾ ಮತ್ತು ಶತಧ್ರು ನದಿಯ ತೀರಗಳಿಂದ ಪಲಾಯನ ಮಾಡಿದ ಶಾಪಗ್ರಸ್ತ ರಾಜರಾದ ಯಯಾತಿಯ ಮಕ್ಕಳು ಮಧ್ಯಪ್ರಾಚ್ಯದ ಕಡೆಗೆ ಹೋಗುತ್ತಾರೆ. ಹೀಗೆ ಇರಾನಿನತ್ತ ವಲಸೆ ಹೋದ ಐಲರು ದ್ರುಹ್ಯ-druids ಸಂತತಿಯವರು ಸೂರ್ಯಾರಾಧಕರಾಗಿದ್ದು ಭೋಜ, ಭೋಜಕರೆಂದು ಕರೆಯಲ್ಪಡುತ್ತಿದ್ದರು. ಆದುದರಿಂದ ಇರಾನಿಯನ್ನರು ಭಾರತೀಯ ಮೂಲದಿಂದಲೇ ಹುಟ್ಟಿಬಂದ ಜನರೆಂಬ ಅಭಿಪ್ರಾಯಕ್ಕೆ ಬರಲಾಗುತ್ತದೆ. ಇದು ವಾಸ್ತವಕ್ಕೆ ಅತ್ಯಂತ ಸಮೀಪ ಮತ್ತು ನಿಜವೂ ಹೌದು. ಯಾಕೆಂದರೆ ಇಂದಿಗೂ ಸಹ ಡೂಯಿಡ್‌ಗಳ ಸಂಸ್ಕಾರ ಭಾರತದ್ದೇ. ಮತ್ತು ಅವರನ್ನು ಅಲ್ಲಿನ ಜನರು ಗೌರವಿಸುವುದು ಸಹ ಉತ್ತಮ ಸಂಸ್ಕಾರದ ಪುರೋಹಿತರು ಅಂತ. ಇವೆಲ್ಲವನ್ನೂ ಗಮನಿಸಿದಾಗ ಇಲ್ಲಿನ ಜನರೇ ವಿದೇಶಕ್ಕೆ ತೆರಳಿದ್ದು ನಿಜವೆನ್ನಿಸುತ್ತದೆ.
ಇದನ್ನು ನಿರಾಕರಿಸುವ ಜನ ಹೇಳುವಂತೆ ಐಲಾ ಎಂಬ ಪದ ಯಾವುದೇ ರೀತಿಯಲ್ಲಿ ಆರ್ಯ ಪದಕ್ಕೆ ಹೋಲುವುದಿಲ್ಲ. ಸಂಸ್ಕೃತದ ಇಳಾ ಪದ (ಭೂಮಿ)ಯ ಅಪಭ್ರಂಶವಿದ್ದಿರಬೇಕು. ಪರ್ಶಿಯನ್ ಭಾಷೆಯಲ್ಲಿ ಇಲಾ ಎಂಬುದು ʻಭೂಮಿಯ ಮೇಲೆ ಹುಟ್ಟಿದ” ಎಂಬ ಅರ್ಥ ಕೊಡುವ ಆಡಮ್ ಅನ್ನು ಸೂಚಿಸುತ್ತದೆ. ಋಗ್ವೇದದ ರಚನೆ ಪ್ರಯಾಗ (ಮಧ್ಯಭಾಗದಲ್ಲಿ) ಆಗಿದ್ದಿರಬಹುದಾದರೂ, ಹಿಮಾಲಯದಂತಹ ಬಲಿಷ್ಠ ಪ್ರಾಕೃತಿಕ ಅಡೆ ತಡೆ ದಾಟಿಕೊಂಡು ಉತ್ತರದ ಹಿಮಪ್ರದೇಶದಿಂದ ಆರ್ಯರು
ವಲಸೆ ಬಂದಿದ್ದ ಸಾಧ್ಯತೆ ಕಡಿಮೆ ಅನಿಸುತ್ತದೆ. ಬಹುತೇಕ ಯುರೋಪಿನ ಇತಿಹಾಸಜ್ಞರ ಪ್ರಕಾರ ಆರ್ಯನರು ವಲಸಿಗರಲ್ಲ, ಬಯಲು ಪ್ರದೇಶದಲ್ಲಿ ನೆಲೆನಿಂತು ಕೃಷಿಯಲ್ಲಿ ತೊಡಗಿಕೊಂಡ ಸಮುದಾಯ ಎಂಬ ನಿರ್ಣಯಕ್ಕೆ ತಲುಪುತ್ತಾರೆ. ಕೃಷಿಯನ್ನು ಹೊಗಳುವ ಅನೇಕ ಋಕ್ಕುಗಳು ಮತ್ತು ಸೂಕ್ತಗಳು ಋಗ್ವೇದದಲ್ಲಿ ಕಂಡು ಬರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಈ ಆಧಾರದಲ್ಲಿ ಎ. ಸೋಮಯಾಜಲು ಎನ್ನುವವರು ಆರ್ಯರು ದಕ್ಷಿಣ ಭಾರತದ ಫಲವತ್ತಿನ ಬಯಲಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಸಮೂಹ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಆರ್ಯರು ಹೊರಗಿನಿಂದ ಬಂದವರೆಂಬ ಯಾವುದೇ ಸ್ಪಷ್ಟ ಸಾಕ್ಷಿ, ಉಲ್ಲೇಖಗಳು ಭಾರತೀಯ ಸ್ಮೃತಿ, ವೇದ, ಪುರಾಣಗಳಲ್ಲಿ ಸಿಗುವುದಿಲ್ಲ. ಆದುದರಿಂದ ಭಾರತೀಯ ಸಂಸ್ಕೃತಿಯ ತಳಹದಿಯಾದ ಸನಾತನ ಸಂಸ್ಕೃತಿ, ವೇದ, ಪುರಾಣಗಳ ಆಧಾರದಲ್ಲಿ ಮನುಕುಲದ ಉಗಮದ ಅಧ್ಯಯನವೂ ಅವಶ್ಯವೆನಿಸುತ್ತದೆ.
ಇದನ್ನೂ ಓದಿ: ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ
ನದಿಗಳ ಮಾಹಿತಿಯ ಆಧಾರದ ವಿಶ್ಲೇಷಣೆ
ಋಗ್ವೇದದಲ್ಲಿ ಉಲ್ಲೇಖಿಸಲಾಗುವ ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಕ್ರಮವಾಗಿ ಪೂರ್ವದಿಂದ ವಾಯುವ್ಯಕ್ಕೆ ಹೆಸರಿಸಲಾಗುತ್ತದೆ. ಆರ್ಯರು ಖೈಬರ್ ಪಾಸ್ ಮೂಲಕ ಭಾರತದತ್ತ ಬಂದಿದ್ದಾದರೆ ಈ ಉಲ್ಲೇಖ ವಾಯುವ್ಯದಿಂದ ಪೂರ್ವಕ್ಕೆ ಅನುಕ್ರಮವಾಗಿರಬೇಕಿತ್ತು. ವಲಸೆ ಯಾವಾಗಲೂ ಸೂರ್ಯನ ಚಲನೆಯ ಪಥದ ಅನುಕ್ರಮವಾಗಿ ನಡೆಯುತ್ತದೆ ಎನ್ನುವ ಇನ್ನೊಂದು ವಲಸೆ ಸಿದ್ಧಾಂತದ ಪ್ರಕಾರ ನೋಡಿದರೂ ಆರ್ಯರು ಪೂರ್ವದಿಂದ ಪಶ್ಚಿಮದತ್ತ ಕಾಲಕ್ರಮೇಣ ವಲಸೆ ಹೋದರು ಎಂಬ ಅಂಶಕ್ಕೆ ಸಮರ್ಥನೆ ದೊರೆಯುತ್ತದೆ. ಋಗ್ವೇದದಲ್ಲಿನ ನದಿಗಳ ಉಲ್ಲೇಖದಲ್ಲಿ ನನ್ನ ಗಂಗೆ, ನನ್ನ ಯಮುನೆ, ನನ್ನ ಸರಸ್ವತಿ ಎಂಬ ನಮ್ಮದೆಂಬ ಕಲ್ಪನೆ, ಈ ಜನರು ಹೊರಗಿನವರಲ್ಲ ಬದಲಾಗಿ ಸ್ಥಳೀಯರೇ ಇರಬೇಕೆಂಬ ಸ್ಪಷ್ಟತೆ ಮೂಡಿಸುತ್ತದೆ. ಜೀವ ಉಗಮದ ಸ್ಥಾನವನ್ನು ಋಗ್ವೇದದಲ್ಲಿ ಭಗವಂತ ಸೃಷ್ಟಿಸಿದ ʻವುಲ್ವ’ ಎನ್ನಲಾಗುತ್ತದೆ. ಋಗ್ವೇದ ಮತ್ತು ಮನುವಿನ ಉಲ್ಲೇಖದಲ್ಲಿ ಕಾಣಿಸುವ ಸರಸ್ವತಿ ಮತ್ತು ದೃಶದ್ವತಿ ಎಂಬ ದೈವೀ ಸ್ವರೂಪಿ ನದಿಗಳ ನಡುವಿನ ಭಗವಂತ ಸೃಷ್ಟಿಸಿದ ಭೂಭಾಗದ ಕಲ್ಪನೆ ಕೂಡ ಇದನ್ನೇ ಹೋಲುತ್ತದೆ. ದೈವ ಸೃಷ್ಟಿಯ ಸ್ವರ್ಗ ಬ್ರಹ್ಮಾವರ್ತ, ಅಲ್ಲಿನ ಜೀವ ಉಗಮದ ಉಲ್ಲೇಖಗಳು ಇದನ್ನು ಸಮರ್ಥಿಸುತ್ತವೆ.
ವೇದ ಸಂಹಿತೆ ಕೂಡ ಆಧುನಿಕ ಜೀವ ವಿಕಾಸದ ಸಿದ್ಧಾಂತವನ್ನು ಬೆಂಬಲಿಸುತ್ತದೆ. ವೇದ ಸಂಹಿತೆ ಹೇಗೆ ಬ್ರಹ್ಮಾಂಡದ ರಚನೆಯಾಯಿತು ಎಂದು ಹೇಳುತ್ತದೆಯೋ ಬೈಬಲ್ ಕೂಡ ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಮೊತ್ತ ಮೊದಲ ಉಗಮವಾಗಿದ್ದು ಮೂಲಿಕೆ ಮತ್ತು ಹುಲ್ಲು ಎಂದು ತಿಳಿಸುತ್ತದೆ. ಅನಂತರ ಇನ್ನಿತರ ಸಸ್ಯ ಸಂಕುಲಗಳು, ಪಶು ಪಕ್ಷಿಗಳ ಉಗಮವಾಗಿ ತದನಂತರ ಮನುಷ್ಯರ ಜೀವ ವಿಕಾಸವಾಗಿರಬೇಕೆಂಬ ಅಂಶ ಇಲ್ಲಿ ವ್ಯಕ್ತವಾಗಿದೆ. ವೇದ ಸಂಹಿತೆಯ ಜೀವ ವಿಕಾಸ ಉಲ್ಲೇಖದಲ್ಲಿ ಮೊತ್ತ ಮೊದಲ ಜೀವಿಗಳ ಉಗಮ ಸರಸ್ವತಿ ನದಿ ತಟದ ಎತ್ತರದ ಭೂಭಾಗದಲ್ಲಾಯಿತು ಎಂಬ ಅಂಶ ಕಾಣಿಸುತ್ತದೆ. ಕಳೆದ ಶತಮಾನದ ದೊಡ್ಡ ವಿದ್ವಾಂಸ ಸ್ವಾಮಿ ದಯಾನಂದರು ಈ ಎತ್ತರದ ಭೂಭಾಗ ಇಂದಿನ ಟಿಬೆಟ್ (ತ್ರಿವಿಷ್ಟಪಮ್) ಇರಬೇಕೆಂದು ಮತ್ತು ಇದೇ ಆರ್ಯರ ಮೂಲವಾಗಿರಬೇಕೆಂದು ಅಭಿಪ್ರಾಯ ಪಟ್ಟರೆ, ಇನ್ನು ಕೆಲ ಐರೋಪ್ಯ ವಿದ್ವಾಂಸರು ಎತ್ತರದ ಹಿಮಾಲಯ ಪರ್ವತಗಳೇ ಈ ಎತ್ತರದ ಭೂಭಾಗವಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಇದರಿಂದ ಸಸ್ಯ ಸಂಕುಲ ಮತ್ತು ಪಶು ಪಕ್ಷಿಗಳಾದಿಯಾಗಿ ಮೊತ್ತ ಮೊದಲ ಜೀವ ಉಗಮದ ಸರಸ್ವತಿ ನದಿ ತಟದ ಎತ್ತರದ ಟೆಬೆಟ್ ಮತ್ತು ಪಾಮಿರ್ ಪ್ರಾಂತ್ಯವಿರಬೇಕೆಂದು ಕಂಡು ಬರುತ್ತದೆ.
ಪುಸ್ತಕ: ಮಾಗಧೇಯ
ಲೇಖಕ: ಸದ್ಯೋಜಾತ ಭಟ್ಟ
ಪುಟ ೩೧೦, ಬೆಲೆ ೩೦೦ ರೂ.
ಪ್ರಕಾಶನ: ಸಮನ್ವಿತ, ಬೆಂಗಳೂರು
ಇದನ್ನೂ ಓದಿ: ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…