Site icon Vistara News

ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ

abbe novel shashidhar halady
ನಾರಾಯಣ ಯಾಜಿ

| ನಾರಾಯಣ ಯಾಜಿ

ಶಶಿಧರ ಹಾಲಾಡಿಯವರು ಮೂಲತಃ ಪರಿಸರವನ್ನು ಪ್ರೀತಿಸುವ ಕವಿಹೃದಯವನ್ನು ಹೊಂದಿರುವವರು. ಅದೇ ರೀತಿ ಅವರು ಇತಿಹಾಸವನ್ನೂ ಸಹ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿಮರ್ಶಿಸುವಾಗ ಲಭ್ಯವಿರುವ ಕಥೆಗಳನ್ನು ಹೇಳದೇ ಕಾಲಗರ್ಭದಲ್ಲಿ ಇಣುಕಿ ಮಹತ್ವದ ಸಾಧನೆಯನ್ನು ಮಾಡಿಯೂ ಯಾರ ಕಣ್ಣಿಗೂ ಬೀಳದೇ ಅವಿತು ಹೋದವರ ಸಂಗತಿಗಳನ್ನು ಅಥವಾ ಮಹತ್ವದ ಹೋರಾಟಗಳನ್ನು ತಮ್ಮ ಅಂಕಣದಲ್ಲಿ ದಾಖಲಿಸಿದ್ದಾರೆ. ಅಂಕಣಕಾರ ಘಟನೆಯನ್ನು ದಾಖಲಿಸುವತ್ತಲೇ ತನ್ನ ಬರಹದ ಕಡೆಗೆ ಲಕ್ಷ್ಯ ವಹಿಸುತ್ತಾನೆ. ಆತನಿಗೆ ಬರೆಯುವದು ಮತ್ತು ಆ ಕಾರಣಕ್ಕಾಗಿ ಹೊಸ ಹೊಸ ಓದನ್ನು ರೂಢಿಸಿಕೊಳ್ಳುವದು ಅಭ್ಯಾಸವಾಗಿರುತ್ತದೆ. ಈ ಬರೆಯುವ ಕ್ರಿಯೆಯಲ್ಲಿ ಅವನಿಗೆ ಅರಿವಿಲ್ಲದಂತೆಯೇ ಕಥನ ಕಟ್ಟುವ ಒಂದು ಚೌಕಟ್ಟು ರೂಪುಗೊಂಡಿರುತ್ತದೆ. ಆ ಮಿತಿಯನ್ನು ಮೀರದೇ ವಿಷಯಗಳನ್ನು ಅಚ್ಚುಕಟ್ಟಾಗಿ ಹೇಳುವ ತವಕ ಅಂಕಣಕಾರನಿಗೆ ಯಾವಾಗಲೂ ಇರುತ್ತದೆ.

ಆದರೆ ಕಾದಂಬರಿಯಲ್ಲಿ ಹಾಗಲ್ಲ. ಈ ಬೇಲಿಯನ್ನು ಮುರಿಯಲು ಆತನಿಗೆ ಸ್ವಚ್ಛಂದ ಅವಕಾಶಗಳಿರುತ್ತವೆಯಾದರೂ ಅಭ್ಯಾಸಬಲದಿಂದ ವಿಷಯಗಳು ಒಂದು ಚೌಕಟ್ಟಿನೊಳಗೇ ವಿಹರಿಸಲು ತೊಡಗುತ್ತವೆ. ಅಂಕಣ ವಿಸ್ತ್ರತ ಸಾಹಿತ್ಯವಾಗುವದಿಲ್ಲ. ವಿಸ್ತ್ರತ ಸಾಹಿತ್ಯಕ್ಕೆ ಅದು ಬುನಾದಿಯನ್ನು ಹಾಕಿಕೊಡಬಹುದು. ಈ ಹಿನ್ನೆಲೆಯಲ್ಲಿ ಹಾಲಾಡಿಯವರ ಎರಡನೇ ಕಾದಂಬರಿ “ಅಬ್ಬೆ”ಯನ್ನು ಓದಿದರೆ ಇದು ಪರಿಸರವನ್ನು ಅಧರಿಸಿದ ಕಾದಂಬರಿಯಾದರೂ ಪರಿಸರದಲ್ಲಿಯೇ ಬದುಕುವ ಮನುಷ್ಯ, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೇಗೆ ಅಪಾಯವನ್ನು ತರಬಲ್ಲ ಎಂದು ಹೇಳಲು ಹೊರಟಿದ್ದಾರೆ. ಮನುಷ್ಯನ ಕ್ರೌರ್ಯ ಮತ್ತು ಹಿಂಸೆಯ ವಿಜೃಂಭಣೆ ಅನಾವರಣಗೊಳ್ಳಲು ಕಾರಣವೇ ಬೇಕಿಲ್ಲ. ಅಬ್ಬೆಯೆನ್ನುವುದು ಒಂದು ಪ್ರಕಾರದ ಜೇಡ. ತುಂಬಾ ವಿಷದ ಪ್ರಾಣಿ. ಅದು ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟೂ ಸಮಯವಿಲ್ಲದೇ ಕಚ್ಚಿಸಿಕೊಂಡ ವ್ಯಕ್ತಿ ಸಾಯುತ್ತಾನೆ ಎನ್ನುವ ನಂಬಿಕೆ ಇಂದಿಗೂ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಇಂತಹ ಜೇಡಕ್ಕೆ ಕೆಲವು ಕಡೆ ಅಬ್ಬೆ ಎನ್ನುತ್ತಾರೆ, ಇನ್ನು ಕೆಲವು ಕಡೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಹಾಗಂತ ಅದು ಕಚ್ಚಿರುವದನ್ನು ನೇರವಾಗಿ ಯಾರೂ ನೋಡಿಲ್ಲ. ಅಕಸ್ಮಾತ್ತಾಗಿ ಯಾರಾದರೂ ಸತ್ತರೂ ಹಾಗೇ ಸತ್ತವನ ಸುತ್ತಮುತ್ತ ಎಲ್ಲಿಯಾದರೂ ವಿಲಕ್ಷಣವಾದ ಜೇಡ ಕಾಣಿಸಿತು ಎಂದರೆ ಅದು ಅಬ್ಬೆ ಕಡಿದು ಆದ ಸಾವು ಎನ್ನುವುದನ್ನು ನಂಬುತ್ತಾರೆ. ಕಂಡ ಕಂಡ ಜೇಡಗಳ ಮಾರಣಹೋಮ ನಡೆಯುತ್ತದೆ.

ಶಶಿಧರ ಹಾಲಾಡಿ

ಉತ್ತರ ಕನ್ನಡದ ಕೆಲವೆಡೆ ಮದ್ದು ಹಾಕುವದು ಎನ್ನುವ ನಂಬಿಕೆ ಇದೆ. ಇಲ್ಲಿನ ಹಳ್ಳಿಗಳಲ್ಲಿ ಯಾವುದಾದರೂ ಒಂದು ಮನೆಗೆ ಮದ್ದು ಹಾಕುವವರ ಮನೆ ಎನ್ನುವ ಅಭಿಶಾಪವಿರುತ್ತದೆ. ಗೊತ್ತಿಲ್ಲದೇ ಆ ಮನೆಗೆ ಹೋದ ಅಂತ ಇಟ್ಟುಕೊಳ್ಳಿ. ಆ ಮನೆಯ ಯಾವುದೋ ಹೆಂಗಸು ಆತನ ಊಟದಲ್ಲಿ ಸತ್ತ ಉಡದ್ದೋ ಅಥವಾ ಹಲ್ಲಿಯದ್ದೋ ಅಥವಾ ಅನಾಮಧೇಯ ಪ್ರಾಣಿಯದ್ದೋ ದೇಹದಿಂದ ತೆಗೆದ ವಿಷದ ಪುಡಿಯನ್ನು ತನ್ನ ಕೈ ಉಗುರಿನಲ್ಲಿಯೋ ಎಲ್ಲೋ ಬಚ್ಚಿಟ್ಟು ಚಿಟಿಕೆ ಉದುರಿಸಿಬಿಡುತ್ತಾಳಂತೆ. ಆ ಹೆಂಗಸು ಯಾರೆಂದು ಆ ಮನೆಯವರಿಗೂ ತಿಳಿದಿಲ್ಲದ ಗೂಢ ವಿಷಯ. ಅಲ್ಲಿ ಊಟ ಮಾಡಿದವನನ್ನು ನಿಶ್ಯಕ್ತಿ ಕಾಡಿ ದೈಹಿಕವಾಗಿ ಸೊರಗುತ್ತಾನೆ. ಡಾಕ್ಟರುಗಳಿಗೂ ಈ ವಿಷವನ್ನು ಕಂಡುಹಿಂಡಿಯಲಾಗುವುದಿಲ್ಲ. ಅದೇ ಊರಿನಲ್ಲಿ ಇಂತಹ ವಿಷವನ್ನು ವಾಂತಿ ಮಾಡಿ ತೆಗೆಯುವ ಮನೆಯಿರುತ್ತದೆ. ಆ ಮನೆಯವರು ವಾಂತಿ ಮಾಡಿಸಿದರೆ ಹಸಿರು ಬಣ್ಣದ ವಾಂತಿ ಬಂತೋ, ಅದು ಮದ್ದು ಹಾಕಿದುದರ ಪರಿಣಾಮ ಎನ್ನುವುದು ಖಾತ್ರಿಯಾಗುತ್ತದೆ. ಇದಕ್ಕೂ ಆಧಾರವಿಲ್ಲ. ಹೀಗೆ ತಳವಿಲ್ಲದ ಅನೇಕ ನಂಬಿಕೆಗಳು ಹಳ್ಳಿಗಳಲ್ಲಿವೆ. ಅಂತಹ ಕಥೆಗಳಲ್ಲಿ ಅಬ್ಬೆ ಜೇಡದ ಕಥೆಯೂ ಒಂದು.

ಇಲ್ಲಿನ ನಾಯಕ ಶಿವರಾಂ ಕರಾವಳಿಯಿಂದ ಕಲ್ಕೆರೆ ಎನ್ನುವ ಬಯಲುಸೀಮೆಯ ಕಡೆ ಹೊಸತಾಗಿ ಬ್ಯಾಂಕಿನ ನೌಕರಿಗೆ ಹೋಗುತ್ತಾನೆ. ಸುಮಾರು 1980ರ ದಶಕದಲ್ಲಿ ಲೇಖಕರು ಬ್ಯಾಂಕಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲದಲ್ಲಿ ನಡೆದಿರಬಹುದಾಗಿರುವ ಘಟನೆಗಳನ್ನು ಆಧರಿಸಿದ ಸಂಗತಿಗಳು ಇಲ್ಲಿವೆ. ಕಲ್ಕೆರೆ ಮಲೆನಾಡಿನಂತೆ ಅಲ್ಲವೇ ಅಲ್ಲ, ಹಾಗಂತ ಬಯಲುಸೀಮೆಯೂ ಅಲ್ಲ. ಶಿವರಾಂನಿಗೆ ಕುತೂಹಲಕ್ಕೆ ಕಾರಣವಾಗುವದು ಉದ್ಯೋಗಕ್ಕೆ ಸೇರುವ ದಿವಸ ಬಸ್ಸಿನಲ್ಲಿ ಬರುವಾಗಲೇ ನೋಡಿದ “ಗರುಡನಗಿರಿ ರಕ್ಷಿತಾರಣ್ಯ” ಎನ್ನುವ ಬ್ರಿಟಿಷರ ಕಾಲದ ಮಸುಕು ಮಸುಕಾಗಿದ್ದ ಬೋರ್ಡ್. ಈಗೊಂದಿನ್ನೂರು ವರ್ಷಗಳಲ್ಲಿ ದಟ್ಟಕಾಡಿನ ಪ್ರದೇಶವೊಂದು ಹೇಗೆ ಮನುಷ್ಯನ ದಾಳಿಗೆ ಸಿಕ್ಕು ಬೋಳಾಗಿಹೋಗಿದೆ ಎನ್ನುವದರ ಕುರುಹನ್ನು ಪ್ರಾರಂಭದಲ್ಲಿಯೇ ತೋರಿಸಿಬಿಡುತ್ತಾರೆ.

ಬ್ಯಾಂಕಿನ ಲೋಕವೆನ್ನುವದು ಹೊರಗಿನಿಂದ ಅಂದವಾಗಿ ಕಾಣಿಸುತ್ತದೆ. ಆದರೆ ಅಲ್ಲಿ ಹಣದ ವ್ಯವಹಾರವಿರುವ ಕಡೆ ಅನೇಕ ದುರ್ಬಲ ಮನಸ್ಸುಗಳನ್ನು ಚಂಚಲಚಿತ್ತರನ್ನಾಗಿಸಿ ದುರ್ಬಳಕೆಗೆ ಪ್ರೇರೇಪಿಸುವ ಅನೇಕ ಘಟನೆಗಳು ಆಗುತ್ತಲೇ ಇರುತ್ತವೆ. ಹಣದ ಒಂದು ಗುಣವೆಂದರೆ ಅದು ಯಾರನ್ನೂ ನಂಬಲು ಆಸ್ಪದ ಮಾಡಿಕೊಡುವದಿಲ್ಲ. ಎಲ್ಲರನ್ನೂ ಸಂಶಯದಿಂದಲೇ ನೋಡುವ ಸ್ವಭಾವ ಹಾಗೂ ತಮ್ಮ ತಪ್ಪನ್ನು ಇನ್ನೊಬ್ಬರ ತಲೆಗೆ ತಣ್ಣಗೆ ದಾಟಿಸಿ ಅವರನ್ನು ಹೊಂಡಕ್ಕೆ ಹಾಕಿ ತಾವು ಸಂಭಾವಿತರಂತೆ ಇದ್ದುಬಿಡುವ ಅನೇಕ ವ್ಯಕ್ತಿಗಳು ಅಲ್ಲಿ ಸಿಗುತ್ತಾರೆ. ಕಲ್ಕೆರೆಗೆ ಬಂದ ಶಿವರಾಮನಿಗೆ ಮ್ಯಾನೇಜರನ ಅಸಹನೆಯ ಸ್ವಾಗತ, ಸಿಬ್ಬಂದಿಗಳೆಲ್ಲರ ಹಿತಮಿತವಾದ ಮಾತುಗಳು ಅಧೈರ್ಯವನ್ನು ಹುಟ್ಟಿಸಿಬಿಟ್ಟಿದೆ. ಆದರೂ ಉದ್ಯೋಗವೆನ್ನುವದು ಅನಿವಾರ್ಯವಾದ ಕಾರಣ ಸಹಿಸಿಕೊಂಡು ಇರಬೇಕಾಗಿದೆ. ಇಡೀ ಬ್ಯಾಂಕೇ ತನ್ನ ತಲೆಯ ಮೇಲೇ ಇದೆಯೇನೋ ಎಂದು ಸದಾ ಒದ್ದಾಡುತ್ತಾ ಉಳಿದವರ ಮೇಲೆ ಸಿಡುಕುವ ಮ್ಯಾನೇಜರ್ ಕೈ, ಬಾಯಿ, ದೇಹ ಎಲ್ಲವೂ ಸಡಿಲವಾಗಿರುವ ವ್ಯಕ್ತಿ, ಕ್ಯಾಷಿಯರ್, ಮತ್ತೋರ್ವ ಕ್ಲರ್ಕ್ ಹಾಗೂ ಅರೆಕಾಲಿಕ ಸಿಬ್ಬಂದಿಗಳು ಈ ಎಲ್ಲರೂ ಕಥಾನಾಯಕ ಶಿವರಾಮನಿಗೆ ಒಗಟಾಗಿಯೇ ತೋರುತ್ತಾರೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

ಹಳ್ಳಿಯಾದುದರಿಂದ ಎಲ್ಲರೂ ಅವರವರ ಸಂಸಾರವನ್ನು ಎಲ್ಲಿಯೋ ಬಿಟ್ಟು ಇಲ್ಲಿ ಅಂಕೆ ತಪ್ಪಿ ರಾತ್ರಿ ಹೊತ್ತು ಕಳೆಯಲು ರೂಢಿಸಿಕೊಂಡ ಚಟಗಳು; ಇವೆಲ್ಲವುಗಳಿಂದ ಪಾರಾಗುವ ಚಿಂತೆಯ ಜೊತೆಗೆ ಅನನುಭವಿಯನ್ನು ಶಾಖೆಗೆ ಹಾಕಿದ್ದಾರೆಂದು ಸಿಡುಕುವ ಮ್ಯಾನೇಜರ್ ಮತ್ತೊಂದು ಕಡೆ. ಈ ಎಲ್ಲದರ ಜೊತೆಗೆ ಏಗುತ್ತಿರುವಾಗಲೇ ಕುಪ್ಪೂರು ತಿಮ್ಮಪ್ಪನ ನಿಗೂಢ ಸಾವಾಗುತ್ತದೆ. ಅದನ್ನು ಸರಳವಾಗಿ ಆತ್ಮಹತ್ಯೆಯೆಂದು ಮುಚ್ಚಿಹಾಕುವ ವ್ಯವಸ್ಥೆಗಳೆಲ್ಲಾ ಸಲೀಸಾಗಿ ಮೂಡಿಬಂದಿದೆ. ತಿಮ್ಮಪ್ಪನ ಸಾವಿನೊಂದಿಗೆ ಊರಿನ ಫಾಸಲೆಯಲ್ಲಿ ಮರಗಳನ್ನು ಕಡಿದು ಕಳ್ಳಸಾಗಾಟ ಮಾಡುವ ಮತ್ತು ಅದಕ್ಕೆ ಇಡೀ ಊರಿಗೆ ಊರೇ ಇಂತಹ ಕೆಲಸ ಒಂದು ಅಪರಾಧವೆಂದು ಗ್ರಹಿಸದ ವ್ಯವಸ್ಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿರುವಂತೆ ಪರಿಸರದ ಜೊತೆ ಬೆಳೆದ ನಾಯಕನಿಗೆ ಅಚ್ಚರಿಯ ಜೊತೆಗೆ ಅದನ್ನು ತಡೆಯಬೇಕೆನ್ನುವ ಹಂಬಲವೂ ಜಾಸ್ತಿಯಾಗುತ್ತಾ ಹೋಗುತ್ತದೆ. ಇದೇ ಹೊತ್ತಿನಲ್ಲಿ ಅದೇ ಕುಪ್ಪೂರು ತಿಮ್ಮಪ್ಪನ ಮಗನ ಮದುವೆಯಲ್ಲಿ ಪಾರ್ಟಿ ಮುಗಿಸಿ ಹೋಗುವಾಗ ಧರ್ಮ ಎನ್ನುವವನ ಅಸಹಜ ಸಾವನ್ನು “ಅಬ್ಬೆ ಕಚ್ಚಿ ಆತ ಸತ್ತʼʼ ಎನ್ನುವ ತೀರ್ಮಾನಕ್ಕೆ ಬಂದಾಗ ಶಿವರಾಮನಿಗೆ ಅಬ್ಬೆ ಎನ್ನುವ ಜೇಡದ ಕುರಿತು ಮೊದಲ ಸುದ್ದಿ ತಿಳಿಯುತ್ತದೆ.

ಅಬ್ಬೆ ಕಚ್ಚಿದರೆ ತಕ್ಷಣವೇ ಸಾವು ಬರುತ್ತದೆ; ಆದರೆ ಯಾರೂ ಪ್ರತ್ಯಕ್ಷವಾಗಿ ಅಬ್ಬೆ ಕಡಿಯುವದನ್ನು ನೋಡಿರುವದಿಲ್ಲ. ಅಲ್ಲಿದ್ದ ಅಮಾಯಕ ಜೇಡಗಳನ್ನು ಈ ಕಾರಣಕ್ಕಾಗಿ ಕೊಂದು ಹಾಕಲಾಗುತ್ತದೆ. ಅದೇ ರೀತಿ ಕಲ್ಕೆರೆಯ ಪರಿಸರವನ್ನೂ ಸಹ ಅವರಿಗರಿವಿಲ್ಲದೇ ನಾಶ ಮಾಡುವತ್ತ ಕೇವಲ ಊರಿನ ಜನ ಮಾತ್ರವಲ್ಲ. ಅಲ್ಲಿಗೆ ಆ ಕಾರಣಕ್ಕಾಗಿಯೇ ಬರುವ ಬಳ್ಳಾರಿಯ ಕಡೆಯ ಕೆಂಚಪ್ಪನಂತಹವರಿಗೆ ಚಿಪ್ಪುಹಂದಿಯನ್ನು ಹಿಡಿದು ಮಾರಿ ಹಣ ಮಾಡುವ ಧಾವಂತ. ಅನಕ್ಷರಸ್ಥನಾದ ಆತನ ಹತ್ತಿರ ಬ್ಯಾಂಕಿನ ಸಿಬ್ಬಂದಿಗಳಿಗಿಂತಲೂ ಜಾಸ್ತಿ ಹಣವಿದೆ. ಪರಿಸರ ನಾಶಕ್ಕೆ ತೊಡಗಿದವರಿಗೆ ತಾವು ಚಿನ್ನದ ಕೋಳಿಯ ಕತ್ತನ್ನು ಕೊಯ್ಯುತ್ತೇವೆನ್ನುವ ಅರಿವಿಲ್ಲ. ಬ್ಯಾಂಕಿನವರೆಲ್ಲ ಬಿಡುವಿನ ಸಮಯದಲ್ಲಿ ಇಸ್ಪೀಟು ಅದೂ ಇದೂ ಅಂತ ಕಾಲಕ್ಷೇಪ ಮಾಡುತ್ತಿದ್ದರೆ ಶಿವರಾಮ ಪಡ್ಡೆ ಹುಡುಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾ ಇರುವುದು ಮ್ಯಾನೇಜರನ ಅಸಹನೆಗೆ ಕಾರಣ. ಇದೇ ಹೊತ್ತಿಗೆ ಅಲ್ಲಿನ ಕಾಲೇಜೊಂದಕ್ಕೆ ಪ್ರಿನ್ಸಿಪಾಲ್ ಆಗಿ ಬರುವ ಡಾ. ಕಲ್ಲೂರಾಯರು ಸಹ ಕರಾವಳಿ ಕಡೆಯವರೇ. ಜೀವಶಾಸ್ತ್ರ, ಸಸ್ಯಶಾಸ್ತ್ರವೆಲ್ಲವನ್ನೂ ಓದಿಕೊಂಡಿದ್ದಾರೆ. ಅವರೂ ಸಹ ಈ ಅಬ್ಬೆ ಕಚ್ಚಿದರೆ ಸಾಯುವದು ಎನ್ನುವದು ಕೇವಲ ಭ್ರಮೆ ಎನ್ನುತ್ತಾರೆ. ಹುಡುಗರೊಂದಿಗೆ ಹಿರೇಕಲ್ಲು ಗುಡ್ಡ ಗರುಡನಗಿರಿಯ ಬೆಟ್ಟಕ್ಕೆ ಚಾರಣ ಹೋಗುವ ಅವರು ಅಲ್ಲಿನ ಸಸ್ಯಗಳ ವೈವಿಧ್ಯಗಳನ್ನು ನೋಡಿ ಅಪೂರ್ವ ಸಸ್ಯ ಸಂಪತ್ತು ನಾಶವಾಗುವ ಕುರಿತು ಖೇದ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

ಬ್ಯಾಂಕಿನ ನೀರಸ ಬದುಕು, ಊರವರ ಹಣ ಮಾಡುವ ಮತ್ತು ವಿದ್ಯಾವಂತರಾದವರೆಲ್ಲ ಊರು ಬಿಡುವವರ ನಡುವೆ ಅರಣ್ಯ ಬರಿದಾಗಿದೆ. ಮೊದಲು ಕೇವಲ ಗರುಡನಗಿರಿ ಬೆಟ್ಟ ನಾಶವಾಗಿ ಹೋಗಿದೆ. ಈಗ ಹಿರೇಕಲ್ಲು ಗುಡ್ಡದಲ್ಲಿನ ಪ್ರಾಣಿಗಳ ಸಹಿತ ಅರಣ್ಯನಾಶವಾಗಲು ಹೆಚ್ಚಿನ ಸಮಯವಿಲ್ಲ ಎನ್ನುವ ಅರಿವಾಗುತ್ತ ಇದ್ದಕ್ಕಿದ್ದಂತೆ ಪರಿಸರದ ಹುಡುಕಾಟದ ತೇಜಸ್ವಿಯವರ ಕಾದಂಬರಿಯನ್ನು ನೆನಪಿಸುವ ಜಾಡಿನಲ್ಲಿ ಸಾಗುತ್ತದೆ. ಕಲ್ಲೂರಾಯರಿಗೆ ಇಲ್ಲಿನ ಸಸ್ಯ ವೈವಿದ್ಯತೆಯನ್ನು ಹೊರಜಗತ್ತಿಗೆ ತಿಳಿಸುವುದು ಮುಖ್ಯ. ಹಣಕ್ಕಾಗಿ ಹೌದಾದರೂ ಅರೆಕಾಲಿಕ ಉದ್ಯೋಗದಲ್ಲಿರುವ ಅವರಿಗೆ ಹಣವನ್ನು ಹೇಗೋ ಹೇಗೋ ಗಳಿಸುವ ಹುಚ್ಚಿಲ್ಲ. ಕಾಣದ ಅಬ್ಬೆಗಿಂತ ಪಕ್ಕದಲ್ಲಿರುವ ಜನರ ಅಸೂಯೆಯ ವಿಷವೇ ಹೆಚ್ಚಿನ ಅಪಾಯಕಾರಿ ಎನ್ನುವ ಮಾತುಗಳು ಶಿವರಾಮನನ್ನು ಎಚ್ಚರಿಸುತ್ತಿರುತ್ತವೆ. ಅಸೂಯೆ ದ್ವೇಷವೆನ್ನುವುದು ಹೆಣ್ಣಿನ ರೂಪದಲ್ಲಿ ಶಿವರಾಮನ ಮೇಲೆ ಮ್ಯಾನೇಜರ್ ಮಸಲತ್ತು ಮಾಡಿಸುವದು ಈ ಹೊತ್ತಿನಲ್ಲಿ ಬ್ಯಾಂಕಿನ ಯೂನಿಯನ್ನಿನ ಪ್ರತಿನಿಧಿಯಾದ ಕ್ಯಾಷಿಯರ್ ಸಹಾಯಕ್ಕೆ ಬಂದು ಅದನ್ನು ತಪ್ಪಿಸುವ ಘಟನೆಗಳು ಚೆನ್ನಾಗಿ ಬಂದಿವೆ. ಪರಿಸರದ ಹುಡುಕಾಟದಲ್ಲಿ ಇನ್ನೇನು ಬಿಜಿಎಲ್ ಸ್ವಾಮಿಯವರ ಹಸಿರು ಹೊನ್ನು ಅಥವಾ ತೇಜಸ್ವಿಯವರ ಕರ್ವಾಲೋ ತರಹದ ಹುಡುಕಾಟ ಪ್ರಾರಂಭವಾಗುತ್ತದೆ ಎನ್ನುವಾಗ ಮತ್ತೆ ಬ್ಯಾಂಕಿನ ಸಮಸ್ಯೆಗಳಲ್ಲಿ ಸಿಕ್ಕು ಅದರಿಂದ ಪಾರಾಗಲು ಒದ್ದಾಡುವ ನಾಯಕನ ಸುತ್ತಲೇ ಕಥೆ ಸುತ್ತುತ್ತದೆ. ಇದು ಕಾದಂಬರಿಯ ಮಿತಿಯೂ ಹೌದು.

ಹಿರೇಕಲ್ಲು ಗುಡ್ಡವೆನ್ನುವದು ಭೂವೈವಿಧ್ಯದ ಪಳೆಯುಳಿಕೆ ಎನ್ನುವುದನ್ನು ತಿಳಿಸುವಲ್ಲಿ ಕಾದಂಬರಿ ಯಶಸ್ವಿಯಾದರೂ ಏಕಕಾಲದಲ್ಲಿ ಕಥೆ, ಉದ್ಯೋಗ ಮತ್ತು ಒಂದು ಕಾಲದ ರಕ್ಷಿತಾರಣ್ಯವಾದ ಗರುಡನಗಿರಿಯ ಮಸುಕಾದ ಬೋರ್ಡು, ಪಾಳು ಬಂಗಲೆ, ಎಲ್ಲಿಂದಲೋ ಬರುವ ಸಂನ್ಯಾಸಿಗಳು, ಮುಕುಂದೂರು ಸ್ವಾಮಿಗಳು, ಅಮಾಯಕನಾಗಿ ನಟಿಸುವ ಕೆಂಚಪ್ಪ ಈ ನಡುವೆ ಪೂಜಾರಿಯು ಸಾಲಮೇಳ ಹೇಗೆ ದಿಕ್ಕು ತಪ್ಪಿತೆನ್ನುವುದನ್ನು ವಿವರಿಸುವ ರೀತಿ ಇವುಗಳ ದೊಡ್ಡ ಬೀಸಿನಲ್ಲಿ ಕಥೆ ಸಾಗುತ್ತಾ ಹೋಗುತ್ತದೆ. ಊರಿನಲ್ಲಿ ತನಗಿಂತ ಶಿವರಾಮ ಜನಪ್ರಿಯನಾಗುವುದನ್ನು ಸಹಿಸದ ಮ್ಯಾನೇಜರ್ ಆತನ ಪ್ರೊಬೇಷನರಿಯನ್ನು ಮುಂದುವರಿಸಲು ಶಿಫಾರಸು ಮಾಡುತ್ತಾನೆ. ಆ ಚಿಂತೆ ಶಿವರಾಮನನ್ನು ತೀವ್ರವಾಗಿ ಕಾಡುವಂತೆ ಅನಿಸಿದರೂ ಅಬ್ಬೆ ಕಚ್ಚುವದು ಎನ್ನುವದು ಕೇವಲ ಭ್ರಮೆ ಎನ್ನುವದನ್ನು ಮೊದಲೇ ಸಾರುತ್ತಾ ಹೋಗುವುದರಿಂದ ಕಥೆ ಬ್ಯಾಂಕಿನಲ್ಲಿ ಇರುವ ವಿಷವ್ಯೂಹದಲ್ಲಿ ಸಿಲುಕಿಸುತ್ತದೆ. ಹೃದಯಾಘಾತದಿಂದ ಆದ ಸಾವನ್ನು ಅಬ್ಬೆಯ ತಲೆಗೆ ಕಟ್ಟುವುದನ್ನು ವಿವರಿಸುತ್ತಾ ಪ್ರಯತ್ನ ಪೂರ್ವಕವಾಗಿ ಓದುಗರನ್ನು ಕಥೆಯ ಬಂಧಕ್ಕೆ ತಂದು ಕೂರಿಸುತ್ತಾರೆ. ಒಂದು ಕಾಲಕ್ಕೆ ಸಮೃದ್ಧ ಮಳೆಯ ಪ್ರದೇಶವಾಗಿದ್ದ ಕಲ್ಕೆರೆಯಂತಹ ಪ್ರದೇಶ ಇಂದು ಮಳೆಯ ನೆರಳಿನ (Rain Shade) ಪ್ರದೇಶವಾಗಿ ಬದಲಾಗಿರುವದರ ಸೂಕ್ಷ್ಮತೆಯನ್ನು ವಿವರಿಸುತ್ತಾ ಹೋಗುವಾಗ ಮೂಲತಃ ಪ್ರಕೃತಿಯನ್ನು ಪ್ರೀತಿಸುವ ಹಾಲಾಡಿಯವರ ಸಾತ್ವಿಕ ನೋವು ಎದ್ದು ಕಾಣಿಸುತ್ತದೆ. ಓದುಗ ಇಲ್ಲಿ ಕಥಾನಾಯಕನೊಂದಿಗೆ ತಾನೂ ಮಿಳಿತವಾಗುತ್ತಾನೆ. ಊರಿನಲ್ಲಿ ಮರಗಳೊಟ್ಟಿಗೆ ಚಿನ್ನದ ನಿಧಿಯೂ ಇರುವ ವಿಷಯಗಳೆಲ್ಲವೂ ಬಂದು ಹಳ್ಳಿಯ ವ್ಯವಸ್ಥೆಯಲ್ಲಿ ಇವೆಲ್ಲ ಮಾಮೂಲು ಎಂದು ಅಷ್ಟೇ ವೇಗವಾಗಿ ಅವೆಲ್ಲವೂ ಮುಚ್ಚಿಹೋಗಿಬಿಡುತ್ತವೆ. ಇದು ಕಲ್ಕೆರೆಯಲ್ಲಿ ವಿದ್ಯುತ್ ಇದ್ದೂ ಇಲ್ಲದಂತಿರುವ ವಿವರಣೆಗೆ ಪೂರಕವಾಗುತ್ತದೆ. ಕಾರಣವಿಲ್ಲದೇ ಮ್ಯಾನೇಜರ್ ಇವರನ್ನು ದ್ವೇಷಿಸುವುದಕ್ಕೆ ನರಸಿಂಹಯ್ಯನವರ ಬಾಯಿಯಿಂದ ಜನ್ಮಾಂತರದ ಸಂಚಿತ ಕರ್ಮದ ಸಮಾಧಾನವಿಲ್ಲದೇ ಇದ್ದಿದ್ದರೆ ಒಳ್ಳೆಯದಿತ್ತು. ಕೆಲವೊಮ್ಮೆ ಕೆಲವು ಜನರ Maladaptive behavior (ಅಸಮರ್ಪಕ ನಿರ್ವಹಣೆ) ಇಂತಹುದಕ್ಕೆಲ್ಲಾ ಕಾರಣವಾಗುತ್ತದೆ. ನಾಗರ ಹಾವನ್ನೂ, ಅಮಾಯಕ ಜೇಡವನ್ನೂ ಕಂಡಕಂಡಲ್ಲಿ ಜಜ್ಜಿ ಕೊಲ್ಲುವ ವಿಷಯಗಳೆಲ್ಲವೂ ಇಲ್ಲಿ ಸಾಂಕೇತಿಕವಾಗಿ ಬಂದಿರುವದರಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಹೇಳದೇ ಹಾಗೇ ಬಿಡುವದು ಒಳ್ಳೆಯದು.

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ಗರುಡನಗಿರಿ ರಕ್ಷಿತಾರಣ್ಯವಾಗಿರುವದು ಬರಡುಗಿರಿ ರಕ್ಷಿತಾರಣ್ಯವಾಗಿ ಬದಲಾಗಿರುವ ವರದಿ ಪತ್ರಿಕೆಗಳಲ್ಲಿ ಬಂದಿರುವದು ಕಥೆಗೆ ಕೊಡುವ ಬಹುಮುಖ್ಯ ತಿರುವು. ಶಿವರಾಮ ಊರಿನವರ ಯಾರ ಸಂಗಡವೂ ವಿರೋಧ ಕಟ್ಟಿಕೊಳ್ಳದೇ ಅವರೆಲ್ಲರಿಗೂ ತಮ್ಮ ತಪ್ಪುಗಳನ್ನು ಅರಿಯಲು ಸಹಾಯ ಮಾಡಿರುವುದು, ಊರಲ್ಲಿ ಧನಾತ್ಮಕ ಗುಣಗಳುಳ್ಳವರು ತುಂಬಾ ಜನರಿದ್ದಾರೆ. ಕೆಲವೊಂದಿಷ್ಟು ಪುಂಡರು ತಮ್ಮ ಸ್ವಾರ್ಥಕ್ಕೋಸ್ಕರ ಮಾಡುವ ಆಟದಲ್ಲಿ ಇವರ ಮೌನ ಹೇಗೆ ಸಹಕಾರಿಯಾಗುತ್ತದೆ ಎನ್ನುವದನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ತನ್ನದಲ್ಲದ ಊರಿನಲ್ಲಿ ಶಿವರಾಮನಿಗೆ ಯಾವ ಬಂಧನವೂ ಇಲ್ಲ; ಆದರೂ ದೂರದ ಅಂಡಮಾನಿಗೆ ವರ್ಗವನ್ನು ಮ್ಯಾನೇಜರ್ ಮಾಡಿಸಿದಾಗ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲು ಯತ್ನಿಸುತ್ತಾನೆ. ಈತನಿಗೆ ತೊಂದರೆ ಕೊಟ್ಟ ಮ್ಯಾನೇಜರ್ ಸಹ ದೂರದ ಕಲ್ಕತ್ತಾಕ್ಕೆ ವರ್ಗವಾಗುವ ಕ್ರಿಯೆಯಲ್ಲಿ Karma hits back ಎನ್ನುವುದು ನೆನಪಿಗೆ ಬರುತ್ತದೆ. ಬೋಳಾದ ಕಾಡಿಗಿಂತ ಜೀವ ವೈವಿಧ್ಯತೆಯಿಂದ ತುಂಬಿರುವ ಅಂಡಮಾನ್ ದ್ವೀಪವನ್ನು ನಾಯಕ ಸಮಾಧಾನದಿಂದಲೇ ಸ್ವೀಕರಿಸುವದು ಒಂದು ಆಶಾವಾದದ ಸೂಚನೆಯೂ ಹೌದು.

ಅಬ್ಬೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷಕ್ಕೆ ಕಾರಣವಾಗುವದಿಲ್ಲ. ಆದರೆ ಮಾನವನ ಅಜ್ಞಾನವೆನ್ನುವುದು ಅವನಿಗೆ ಅರಿಯದೇ ವಿನಾಶಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ. ಸಮಸ್ಯೆಯನ್ನು ಎದುರಿಸಲು ತಾನೊಬ್ಬ ಏನು ಮಾಡಬಲ್ಲೆ ಎನ್ನುವುದಕ್ಕಿಂತ ಯಾರಾದರೂ ಒಬ್ಬರು ಪ್ರಾರಂಬಿಸುವುದು ಒಳ್ಳೆಯದು; ನಂತರ ಅದು ಹೇಗೋ ಮುಂದುವರಿಯುವುದು ಎನ್ನುವುದನ್ನು ಶಿವರಾಮ ಕಲ್ಕೆರೆಯಿಂದ ಹೊರಡುವ ಸಮಯಕ್ಕೆ ಅರಣ್ಯ ಇಲಾಖೆಯವರು ಗರುಡನಗಿರಿಗೆ ಬೇಲಿ ಹಾಕಲು ಬರುವುದನ್ನು ನೋಡಿ ಸಮಾಧಾನ ಪಡುತ್ತಾನೆ.

ಈ ಕಾದಂಬರಿಯಲ್ಲಿ ಪಾತ್ರಗಳ ಸಂಘರ್ಷ ಅಥವಾ ಮುಖಾಮುಖಿಯಿಲ್ಲ. ಆದರೆ ಪ್ರಸ್ತುತ ಸಮಾಜದಲ್ಲಿ ಕಾಡುವ ಸಮಸ್ಯೆಗಳತ್ತ ಗಮನ ಸೆಳೆಯುವ ತುಡಿತವಿದೆ. ಜೀವವೈವಿಧ್ಯದ ವಿವರಗಳಿರುವ ವಸ್ತುಗಳ ಕೊರತೆಯಿರುವ ವರ್ತಮಾನದಲ್ಲಿ ಶಶಿಧರ ಹಾಲಾಡಿಯವರು ಆ ಕುರಿತು ಹೇಳುವ ಮನಸ್ಸು ಮಾಡಿದ್ದಾರೆ. ಎಲ್ಲಿಯೂ ನೀರಸ ಅಂತ ಅನಿಸುವದಿಲ್ಲ. ಹಣದ ಹಿಂದೆ ಸಾಗುವ ಆಧುನಿಕ ವರ್ತಮಾನದ ಪ್ರತಿನಿಧಿಯಾಗಿ ಬ್ಯಾಂಕು ಇದ್ದರೆ; ಕೊನೆಗೆ ಬರುವ ಅರಣ್ಯ ಅಧಿಕಾರಿಗಳು ಬೇಲಿ ಹಾಕಲು ಬಂದು ಕಳೆದು ಹೋದ ಮಾನವನ್ನು ಪುನರುಜ್ಜೀವನಗೊಳಿಸುವ ಸಂಕೇತವಾಗಿ ಆಶಾವಾದದ ಮುಕ್ತಾಯವನ್ನು ಕೊಟ್ಟಿದ್ದಾರೆ.

Exit mobile version