ಇರಾನಿಯನ್ ಮಹಿಳಾ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ (Iranian activist Narges Mohammadi) ಅವರಿಗೆ 2023ರ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿ (Nobel peace Prize) ಸಂದಿದೆ. ಕಟ್ಟರ್ ಇಸ್ಲಾಮಿಕ್ ರಾಷ್ಟ್ರದಲ್ಲಿ ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿ ಜೈಲು ಪಾಲಾಗಿರುವ ನರ್ಗೀಸ್ ಮೊಹಮ್ಮದಿ, ವಿಶ್ವದಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಇರಾನ್‌ನಲ್ಲಿ (Iran) ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ಇರಾನ್ ಕಾರ್ಯಕರ್ತೆ ನರ್ಗೀಸ್ ಮೊಹಮ್ಮದಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಟಾಕ್‌ಹೋಮ್‌ನಲ್ಲಿರುವ ಸ್ವೀಡಿಷ್ ಅಕಾಡೆಮಿ (Swedish Academy) ಶುಕ್ರವಾರ ಪ್ರಕಟಿಸಿದೆ. ಈ ಮಾತುಗಳಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಜೈಲಿನಲ್ಲಿದ್ದರೂ, ಹಲವು ನಿರ್ಬಂಧಗಳ ಹೊರತಾಗಿಯೂ ನರ್ಗೀಸ್ ಮೊಹಮ್ಮದಿ ಅವರು ಲೇಖನಗಳನ್ನು ಪ್ರಕಟಿಸುವ ಮೂಲಕ ತಮ್ಮ ಹೋರಾಟವನ್ನು ಜಾರಿಯಲ್ಲಿಟ್ಟಿದ್ದಾರೆ.
ನರ್ಗೀಸ್ ಮೊಹಮ್ಮದಿ ಅವರ ಕೆಚ್ಚೆದೆಯ ಹೋರಾಟವು ಅಪಾರ ವೈಯಕ್ತಿಕ ತ್ಯಾಗದಿಂದಲೇ ಆರಂಭವಾಗಿದೆ. ಒಟ್ಟಾರೆಯಾಗಿ, ಸರ್ಕಾರವು ಅವರನ್ನು 13 ಬಾರಿ ಬಂಧಿಸಿದೆ, ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅವರಿಗೆ ಒಟ್ಟು 31 ವರ್ಷಗಳ ಜೈಲು ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಈಗಲೂ ಅವರು ಜೈಲಿನಲ್ಲೇ ಇದ್ದಾರೆ ಎಂದು ಅಕಾಡೆಮಿ ಹೇಳಿದೆ.
ಮಹ್ಸಾ ಅಮಿನಿ ಘಟನೆ ನೆನಪಿದೆಯಲ್ಲ?
ಕಳೆದ ವರ್ಷ, ಇರಾನ್‌ನ ನೈತಿಕ ಪೊಲೀಸ್ ವಶದಲ್ಲಿ ಖುರ್ದಿಶ್ ಯುವತಿ ಮಹ್ಸಾ ಅಮಿನಿ ಅವರು ಹತ್ಯೆಯಾದಾಗ ಇರಾನ್‌ನಲ್ಲಿ ಮಹಿಳೆಯರ ದೊಡ್ಡ ಪ್ರತಿಭಟನೆ ನಡೆಯಿತು. ಬಹಳಷ್ಟು ಮಹಿಳೆಯರು ತಮ್ಮ ಕೂದಲುಗಳನ್ನು ಕತ್ತರಿಸಿ, ಅಮಿನಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ, ಮಹಿಳಾ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ನೀಡಿದರು ನರ್ಗೀಸ್ ಮೊಹಮ್ಮದಿ ಅವರು. ಸಹ ಕೈದಿಗಳ ನಡುವೆ ಸಮನ್ವಯ ಸಾಧಿಸಿ, ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಪರಿಣಾಮ, ಜೈಲು ಅಧಿಕಾರಿಗಳು ನರ್ಗೀಸ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದರು. ಅವರಿಗೆ ಕರೆಗಳನ್ನು ಸ್ವೀಕರಿಸುವುದಾಗಲಿ, ಹೊರಗಿನ ವ್ಯಕ್ತಿಗಳನ್ನು ಭೇಟಿ ಮಾಡುವುದಕ್ಕೆ ಕಿಂಚಿತ್ ಅವಕಾಶವನ್ನು ನೀಡಲಿಲ್ಲ. ಆದಾಗ್ಯೂ, ಮಹ್ಸಾ ಅಮಿನ್ ಹತ್ಯೆ ಒಂದು ವರ್ಷದ ನೆನಪಿಗೆ ನರ್ಗೀಸ್ ಅವರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ರಹಸ್ಯವಾಗಿ ಲೇಖನ ಬರೆಯುವಲ್ಲಿ ಯಶಸ್ವಿಯಾಗಿದ್ದರು!
ವೃತ್ತಿಯಲ್ಲಿ ಎಂಜಿನಿಯರ್
ಇರಾನ್‌ನ ಝಂಜಾನ್ ನಗರದಲ್ಲಿ ಜನಿಸಿದ ನರ್ಗೀಸ್. ಸ್ಥಳೀಯವಾಗಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಭೌತಶಾಸ್ತ್ರದಲ್ಲಿ ಪದವಿ ಪಡೆದುಕೊಂಡು ಎಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ವ್ಯಾಸಂಗದ ಸಮಯದಲ್ಲೇ ನರ್ಗೀಸ್ ಹೋರಾಟದ ಮನೋಭಾವ ಪ್ರದರ್ಶಿಸಿದರು. ಸಮಾನತೆ ಮತ್ತು ಮಹಿಳಾ ಹಕ್ಕುಗಳ ಪರವಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕುರಿತು ಸ್ಟೂಡೆಂಟ್ ನ್ಯೂಸ್‌ಪೇಪರ್‌ಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಪಾಲಿಟಿಕಲ್ ಸ್ಟೂಡೆಂಟ್ ಗ್ರೂಪ್‌ನ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ನರ್ಗಿಸ್ ಬಂಧನಕ್ಕೆ ಒಳಗಾಗಿದ್ದರು. ಆದರೆ, ಜೈಲು ಶಿಕ್ಷೆಯಿಂದಾಗಿ ಅವರು ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ಕಳೆದುಕೊಳ್ಳಬೇಕಾಯಿತು.
ನರ್ಗೀಸ್ ಪತ್ರಕರ್ತೆಯೂ ಹೌದು
ಎಲ್ಲ ಹೋರಾಟಗಾರರಂತೆ ನರ್ಗೀಸ್ ಮೊಹಮ್ಮದಿ ಕೂಡ ಪತ್ರಿಕೆಗಳ ಮೂಲಕವೇ ತಮ್ಮ ವಿಚಾರಗಳನ್ನು ಹೊರ ಪ್ರಪಂಚಕ್ಕೆ ದಾಟಿಸಿದರು. ಸುಧಾರಣಾ ನೀತಿಗಳನ್ನು ಅನುಸರಿಸುವ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಪತ್ರಕರ್ತೆಯಾಗಿ ಕೆಲಸ ಮಾಡಿದರು. ಪ್ರತಿಭಟನಾ ಹಕ್ಕು, ಮಹಿಳಾ ಹಕ್ಕಗಳು ಮತ್ತು ಗಲ್ಲು ಶಿಕ್ಷೆ ವಿರುದ್ಧ ಹೋರಾಟ ನಡೆಸಿದರು. ಆ ಕುರಿತು ಲೇಖನಗಳನ್ನು ಬರೆದು ಗಮನ ಸೆಳೆದರು.
ಪುಸ್ತಕ ಬರೆದರು ನರ್ಗೀಸ್
ಹಲವು ವರ್ಷಗಳ ಕಾಲ ಸಾಮಾಜಿಕ ಸುಧಾರಣೆಗಾಗಿ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ಹೊರ ತಂದರು. ದಿ ರಿಫಾರ್ಮ್ಸ್, ದಿ ಸ್ಟ್ರಾಟಜಿ ಮತ್ತು ಟ್ಯಾಕ್ಟಿಕ್ಸ್ ಎಂಬ ಪ್ರಬಂಧ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕ ‘ವೈಟ್ ಟಾರ್ಚರ್: ಇಂಟರ್‌ವ್ಯೂಸ್ ವಿತ್ ಇರಾನಿಯನ್ ವುಮೆನ್ ಪ್ರಿಜನರ್ಸ್’ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಮಾನವ ಹಕ್ಕುಗಳ ವೇದಿಕೆಯಲ್ಲಿ ವರದಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
2011ರಲ್ಲಿ ಮೊದಲ ಬಾರಿಗೆ ಶಿಕ್ಷೆ
ನೊಬೆಲ್ ಪುರಸ್ಕೃತ ಸಾಹಿತಿ ಶಿರಿನ್ ಎಬಾದಿ ಅವರು ಆರಂಭಿಸಿದ ಡಿಫೇಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನೊಂದಿಗೆ ನರ್ಗೀಸ್ 2003ರಿಂದಲೂ ಗುರುತಿಸಿಕೊಂಡಿದ್ದಾರೆ. ಬಂಧಿತ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗೆ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು ನರ್ಗೀಸ್ ಅವರನ್ನು 2011ರಲ್ಲಿ ಮೊದಲ ಬಾರಿಗೆ ಬಂಧಿಸಿ ಜೈಲಿಗೆ ಕಳುಹಿಸಿತು.
ಪತಿ ಕೂಡ ಕಾರ್ಯಕರ್ತ, ಗಡೀಪಾರು
ನರ್ಗೀಸ್ ಮೊಹಮ್ಮದಿ ತನ್ನ ಸಹ ಕಾರ್ಯಕರ್ತರಾಗಿದ್ದ ತಘಿ ರಹಮಾನಿ ಅವರನ್ನು 1999ರಲ್ಲಿ ವಿವಾಹವಾದವು. ಅವರೂ ಕೂಡ ಜೈಲುಪಾಲಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೇಶಭ್ರಷ್ಟರಾಗಿರುವ ರಹಮಾನಿ ಅವರು ತಮ್ಮ ಎರಡು ಮಕ್ಕಳೊಂದಿಗೆ ಫ್ರಾನ್ಸ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 14 ವರ್ಷಗಳ ಜೈಲು ಶಿಕ್ಷೆ ಘೋಷಿಸಿದ ಬೆನ್ನಲ್ಲೇ ರಹಮಾನಿ ಅವರು ದೇಶವನ್ನು ತೊರೆದರೆ, ಪತ್ನಿ ಮೊಹಮ್ಮದಿ ಮಾತ್ರ ಇರಾನ್‌ನಲ್ಲೇ ಉಳಿದುಕೊಂಡು ಹೋರಾಟ ನಡೆಸುವ ನಿರ್ಧಾರ ಮಾಡಿದರು.
ಶಾಂತಿ ನೊಬೆಲ್ ಪಡೆದ 19ನೇ ಮಹಿಳೆ
ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ಶಾಂತಿಗಾಗಿ ಈವರೆಗೆ 18 ಮಹಿಳೆಯರು ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ನರ್ಗಿಸ್ ಮೊಹಮ್ಮದಿ ಅವರು 19ನೇ ಮಹಿಳೆಯಾಗಿದ್ದಾರೆ. 2003ರಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಶಿರಿನ್ ಎಬಾದಿ ಅವರ ಬಳಿಕ ಶಾಂತಿ ನೊಬೆಲ್ ಪ್ರಶಸ್ತಿ ಗೆದ್ದ ಎರಡನೇ ಇರಾನ್ ವ್ಯಕ್ತಿಯಾಗಿದ್ದಾರೆ. 122 ವರ್ಷಗಳ ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲೇ ಐದನೇ ಬಾರಿಗೆ ಜೈಲಿನಲ್ಲಿರುವ ಅಥವಾ ಗೃಹ ಬಂಧನದಲ್ಲಿರುವ ವ್ಯಕ್ತಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ.
ಡಿಫೇಂಡರ್ಸ್ ಆಫ್ ಹ್ಯೂಮನ್ ರೈಟ್ ಸೆಂಟರ್
2003ರಲ್ಲಿ ಶಿರಿನ್ ಇಬಾದಿ ನೇತೃತ್ವದ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ಗೆ ಸೇರಿದ ನರ್ಗೀಸ್ ಕೊನೆಗೆ ಆ ಸಂಸ್ಥೆಯ ಸಂಸ್ಥೆಯ ಉಪಾಧ್ಯಕ್ಷರಾದರು. ಈ ಗುಂಪು ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯತ್ವವನ್ನು ಪಡೆದುಕೊಂಡಿದೆ. ಈ ಗುಂಪಿಗೆ ಫ್ರೆಂಚ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 2003 ಮಾನವ ಹಕ್ಕುಗಳ ಪ್ರಶಸ್ತಿಯನ್ನು ನೀಡಲಾಗಿದೆ.
ಮತ್ಯಾವ ಪ್ರಶಸ್ತಿಗಳು ಸಂದಿವೆ?
ದಿಟ್ಟೆ ಹೋರಾಟಗಾರ್ತಿ ನರ್ಗೀಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಮಾತ್ರವಲ್ಲದೇ, ಅಲೆಕ್ಸಾಂಡರ್ ಲ್ಯಾಂಗರ್ ಅವಾರ್ಡ್, UNESCO/Guillermo Cano ವರ್ಲ್ಡ್ ಪ್ರೆಸ್ ಫ್ರೀಡಂ ಪ್ರೈಜ್, Olof Palme ಪ್ರಶಸ್ತಿ ಸಂದಿವೆ. ಜತೆಗೆ, 2010ರಲ್ಲಿ ಶಿರಿನ್ ಎಬಾದಿ ಅವರು ತಮಗೆ ಸಂದಿದ್ದ ಫೆಲಿಕ್ಸ್ ಎರ್ಮಾಕೋರಾ ಮಾನವ ಹಕ್ಕುಗಳ ಪ್ರಶಸ್ತಿಯನ್ನು ನರ್ಗೀಸ್ ಅವರಿಗೆ ಅರ್ಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?
ನರ್ಗೀಸ್ ಬಿಡುಗಡೆ ಹೋರಾಟಕ್ಕೆ ಶಕ್ತಿ
ಜೈಲಿನಲ್ಲಿರುವ ನರ್ಗೀಸ್ ಮೊಹಮ್ಮದಿ ಅವರನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ಇರಾನ್‌ನ ಮಾನವ ಹಕ್ಕುಗಳು ಹೋರಾಟಗಾರರು ಮೊದಲಿನಿಂದಲೂ ಹಾಕುತ್ತಿದ್ದಾರೆ. ಹಾಗೆಯೇ, ಅಂತಾರಾಷ್ಟ್ರೀಯವಾಗಿ ಈ ಬಗ್ಗೆ ಒತ್ತಡವಿದೆ. ಈಗ ನರ್ಗೀಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆತಿರುವುದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂಬ ಹೋರಾಟಕ್ಕೆ, ಒತ್ತಾಯಕ್ಕೆ ಇನ್ನಷ್ಟು ಬಲ ಬರಲಿದೆ. ಪುರಸ್ಕಾರ ಪ್ರಕಟವಾದ ಬೆನ್ನಲ್ಲೇ, ನಾವು ಮತ್ತು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ವ್ಯವಸ್ಥೆಯ ಇತರ ಪಾಲುದಾರರು, ನರ್ಗಿಸ್ ಬಿಡುಗಡೆಗೆ ಪದೇ ಪದೇ ಕರೆ ನೀಡಿದ್ದೇವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ತಿಳಿಸಿದ್ದಾರೆ.
BREAKING NEWS
— The Nobel Prize (@NobelPrize) October 6, 2023
The Norwegian Nobel Committee has decided to award the 2023 #NobelPeacePrize to Narges Mohammadi for her fight against the oppression of women in Iran and her fight to promote human rights and freedom for all.#NobelPrize pic.twitter.com/2fyzoYkHyf