ಸಂತೂರ್ ವಾದಕ, ಪದ್ಮವಿಭೂಷಣ ಪುರಸ್ಕೃತ ಪಂಡಿತ್ ಶಿವಕುಮಾರ್ ಶರ್ಮಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಒಂದು ಕಾಲದಲ್ಲಿ ಅಪರಿಚಿತವಾಗಿದ್ದ ಸಂತೂರ್ ವಾದ್ಯಕ್ಕೆ ಅವರು ತಮ್ಮ ಪಾಂಡಿತ್ಯ ಹಾಗೂ ಪ್ರತಿಭೆಯಿಂದ ಜನಪ್ರಿಯತೆ ತಂದುಕೊಟ್ಟಿದ್ದರು.
ಶಿವಕುಮಾರ್ ಶರ್ಮಾ ಅವರು 1938ರಲ್ಲಿ ಜಮ್ಮುವಿನಲ್ಲಿ ಜನಿಸಿದರು. ಸಂತೂರ್ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತವನ್ನು ನುಡಿಸಿದ ಮೊದಲ ಸಂಗೀತಗಾರ ಇವರು. ಶಿವಕುಮಾರ್ ಶರ್ಮಾ ಅವರು ಹದಿಮೂರನೆಯ ವಯಸ್ಸಿನಲ್ಲಿ ಸಂತೂರ್ ಕಲಿಯಲು ಪ್ರಾರಂಭಿಸಿದರು. ಅವರ ಮೊದಲ ಸಾರ್ವಜನಿಕ ಪ್ರದರ್ಶನ 1955ರಲ್ಲಿ ಮುಂಬೈನಲ್ಲಿ ನಡೆಯಿತು. ದೇಶವಿದೇಶಗಳಲ್ಲಿ ಸಂತೂರ್‌ನ ಸಾವಿರಾರು ಕಛೇರಿಗಳನ್ನು ಅವರು ನೀಡಿದ್ದಾರೆ. ಅವರ ಸಂತೂರ್ ಹಾಗೂ ಉಸ್ತಾದ್ ಝಾಕಿರ್ ಹುಸೇನ್ ಅವರ ತಬಲಾ ಜೋಡಿ ಪ್ರಖ್ಯಾತವಾಗಿತ್ತು.
ಶಿವಕುಮಾರ್ ಶರ್ಮಾ ಅವರು 1956ರ ಝಣಕ್ ಝಣಕ್ ಪಾಯಲ್ ಬಾಜೆ ಚಿತ್ರದ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿದರು. ನಾಲ್ಕು ವರ್ಷಗಳ ನಂತರ ಅವರ ಮೊದಲ ಏಕವ್ಯಕ್ತಿ ಆಲ್ಬಂ ಅನ್ನು ಹೊರತಂದರು. ಶರ್ಮಾ 1967ರಲ್ಲಿ ಕೊಳಲುವಾದಕ ಹರಿಪ್ರಸಾದ್ ಚೌರಾಸಿಯಾ ಮತ್ತು ಗಿಟಾರ್ ವಾದಕ ಬ್ರಿಜ್ ಭೂಷಣ್ ಕಾಬ್ರಾ ಅವರೊಂದಿಗೆ ಸೇರಿ ʼಕಾಲ್ ಆಫ್ ದಿ ವ್ಯಾಲಿʼ ಎಂಬ ಜನಪ್ರಿಯ ಸಂಗೀತ ಆಲ್ಬಂ ಅನ್ನು ಹೊರತಂದರು. ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ, ಶರ್ಮಾ ಅವರು ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಶರ್ಮಾ ಅವರು 1991ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳನ್ನು ಪಡೆದರು. ಕಿಡ್ನಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರೂ ಅವರು ಚುರುಕಾಗಿದ್ದರು. ಮುಂದಿನ ವಾರ ಭೋಪಾಲ್‌ನಲ್ಲಿ ಅವರ ಕಛೇರಿ ನಿಗದಿಯಾಗಿತ್ತು ಎಂದು ಅವರ ಕುಟುಂಬ ಹೇಳಿದೆ.
ಶರ್ಮಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು, ಸಂಗೀತಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಭಾರತದ ಡ್ಯಾನಿಶ್ ಸಿದ್ದಿಕಿಗೆ ಮರಣೋತ್ತರ Pulitzer Award