ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2023-24ನೇ ಸಾಲಿನ ಆಯವ್ಯಯದಲ್ಲಿ( Karnataka Budget 2023) ಒಟ್ಟು ಆರು ವಲಯಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಈ ಪೈಕಿ ಕೆಲವೊಂದು ಶೀರ್ಷಿಕೆಗಳನ್ನು ಆರಂಭಿಸುವ ಮುನ್ನ ನಾಡಿನ ಖ್ಯಾತ ಕವಿಗಳ ಕವಿತೆಗಳನ್ನು ಬಳಸಿಕೊಂಡಿದ್ದಾರೆ.
ಬಜೆಟ್ ಭಾಷಣದ ಆರಂಬದಲ್ಲಿ ಮೊದಲಿಗೆ ರಾಷ್ಟ್ರಕವಿ ಕುವೆಂಪು ಅವರ ಕವಿತೆಯನ್ನು ಬಳಸಲಾಗಿದೆ.
ಹೋಗುತಿದೆ ಹಳೆಯ ಕಾಲ, ಹೊಸ ಕಾಲ ಬರುತಲಿದೆ
ಬರುತಲಿದೆ ಹೊಸ ದೃಷ್ಟಿ, ಹೊಸ ಬಯಕೆಗಳಲಿ
ಹೋಗುತಿದೆ ಹಳೆ ಬಾಳು, ಹೊಸ ಬಾಳು ಬರುತಲಿದೆ
-ಕುವೆಂಪು
ಮೊದಲನೇ ವಲಯವಾದ ಕೃಷಿ ಮತ್ತು ಪೂರಕ ಚಟುವಟಿಕೆಗಳ ಕುರಿತು ಘೋಷಣೆ ಮಾಡುವ ಮುನ್ನ ಕೆ.ಎಸ್. ನರಸಿಂಹಸ್ವಾಮಿ ಅವರ ಕವಿತೆಯನ್ನು ಬಳಸಲಾಗಿದೆ.
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.
– ಕೆ. ಎಸ್. ನರಸಿಂಹಸ್ವಾಮಿ
ಎರಡನೇ ವಲಯವಾದ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕುರಿತು ಘೋಷಣೆ ಮಾಡುವ ಮುನ್ನ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಯನ್ನು ಬಳಸಲಾಗಿದೆ.
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಟ್ಟೋಣ
ಮತಗಳೆಲ್ಲವು ಪಥಗಳು ಎನ್ನುವ
ಹೊಸ ಎಚ್ಚರದಲ್ಲಿ ಬದುಕೋಣ.
-ಡಾ. ಜಿ.ಎಸ್. ಶಿವರುದ್ರಪ್ಪ
ಆರನೇ ವಲಯವಾದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ಕುರಿತು ಘೋಷಣೆ ಮಾಡುವ ಮುನ್ನ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಬಳಸಲಾಗಿದೆ.
ಜಾನಪದಗಳು, ರಾಜ್ಯ ಸಾಮ್ರಾಜ್ಯಗಳು
ಗುರು ಸ್ಥಾನಗಳು, ಧರ್ಮಗಳು, ಭಾಷೆ ವಿದ್ಯೆಗಳು
ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ
ಮಾನವತೆ ನಿಂತಿಹುದು ಮಂಕುತಿಮ್ಮ.
-ಡಿ.ವಿ.ಜಿ.