Site icon Vistara News

KT Gatti : ಖ್ಯಾತ ಕಾದಂಬರಿಕಾರ, ವಿದೇಶದಲ್ಲೂ ಶಿಕ್ಷಕರಾಗಿದ್ದ ಸಾಹಿತಿ ಕೆ.ಟಿ. ಗಟ್ಟಿ ಇನ್ನಿಲ್ಲ

KT Gatti death News

ಮಂಗಳೂರು: ಹತ್ತಾರು ಕನ್ನಡ ಕಾದಂಬರಿಗಳು, ನಾಟಕಗಳು, ಇಂಗ್ಲಿಷ್‌ ಭಾಷೆಯ ಮೇಲೆ ಅಪಾರವಾದ ಹಿಡಿತ, ವಿದೇಶದಲ್ಲಿ ಅಧ್ಯಾಪನ.. ಹೀಗೆ ಅಪರೂಪದ ಜೀವನ, ಜೀವನಾನುಭವಗಳೊಂದಿಗೆ ಬದುಕಿದ ಖ್ಯಾತ ಕಾದಂಬರಿಕಾರ (Popular Novelist) ಕೆ.ಟಿ. ಗಟ್ಟಿ (KT Gatti) ಇನ್ನಿಲ್ಲ.

ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಹುಟ್ಟಿ, ಲಂಡನ್‌, ಆಕ್ಸ್‌ಫರ್ಡ್‌ನಲ್ಲಿ ಕಲಿತು, ಮಣಿಪಾಲದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ (English Lecturer), ಇಥಿಯೋಪಿಯಾದಲ್ಲೂ ಶಿಕ್ಷಕರಾಗಿ ದುಡಿದು ಅಂತಿಮವಾಗಿ ನಾನೇನೂ ಅಲ್ಲ ಎಂಬಂತೆ ಉಜಿರೆಯಲ್ಲಿ ಮನೆ ಮಾಡಿ ತನ್ನ ಪಾಡಿಗೆ ತಣ್ಣಗೆ ಸಾಹಿತ್ಯ ಮತ್ತು ಕೃಷಿಯಲ್ಲಿ ತೊಡಗಿದ್ದ ಅವರು ಫೆ. 19ರಂದು ಸೋಮವಾರ ಕೊನೆಯುಸಿರೆಳೆದರು (Death News). ಅವರಿಗೆ 86 ವರ್ಷವಾಗಿತ್ತು.

ಕೂಡ್ಲು ತಿಮ್ಮಪ್ಪ ಗಟ್ಟಿ ಎಂಬ ಗಟ್ಟಿ ಬರಹಗಾರ, ವೈಚಾರಿಕ ಚಿಂತಕ

ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಅವರು‌ ಒಬ್ಬ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರು. ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ 1938ರ ಜುಲೈ 22ರಂದು. ಅವರ ಧೂಮಪ್ಪ ಗಟ್ಟಿಯವರು, ತಾಯಿ ಪರಮೇಶ್ವರಿ.

KT Gatti death News

ಧೂಮಪ್ಪ ಗಟ್ಟಿ ಅವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಹೀಗಾಗಿ ಸಾಹಿತ್ಯದ ಒಲವು ಹುಟ್ಟಿನಿಂದಲೇ ಜಾಗೃತವಾಗಿತ್ತು ಕೆ.ಟಿ. ಗಟ್ಟಿ ಅವರಿಗೆ.

ಕಾಸರಗೋಡಿನಲ್ಲಿ ಎಂಟನೆಯ ತರಗತಿಯವರೆಗೆ ಶಿಕ್ಷಣ ಪಡೆದ ಅವರು, ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾಗಿ ಕಾಸರಗೋಡಿನ ಕನ್ನಡ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕೇರಳ ವಿಶ್ವವಿದ್ಯಾಲಯದಿಂದ ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಪಡೆದರು.

ಮುಂದೆ ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದರು. ಮತ್ತು ತಲಚೇರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್‌. ಪದವಿ ಪಡೆದು ಕಾಸರಗೋಡಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು.

ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾಲಯದಿಂದ ಪಡೆದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದ ಅವರು 1986ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಗೆ ಇಂಗ್ಲಿಷ್‌ ಉಪನ್ಯಾಸಕರಾಗಿ ಸೇರಿದರು. ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿದ್ದರು.

ಇದನ್ನೂ ಓದಿ : Vishnu Naik: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಷ್ಣು ನಾಯ್ಕ ನಿಧನ

ಇಥಿಯೋಪಿಯಾದಲ್ಲಿ ಪ್ರಾಧ್ಯಾಪಕರಾದರು ಗಟ್ಟಿ

ಗಟ್ಟಿ ಅವರು ಸುಮ್ಮನೆ ಕುಳಿತವರೇ ಅಲ್ಲ. ಕಲಿಕೆ ಮತ್ತು ಅಧ್ಯಾಪನದ ಅವಕಾಶಗಳು ಎಲ್ಲೆಲ್ಲಿ ಸಿಗುತ್ತವೋ ಅಲ್ಲೆಲ್ಲ ಬಾಚಿಕೊಂಡರು. ಅವರ ಪ್ರಯತ್ನದ ಫಲವಾಗಿ ಭಾರತ ಸರಕಾರದಿಂದ ಇಥಿಯೋಪಿಯಾದಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತರಾದರು.

ಇಥಿಯೋಪಿಯಾದಲ್ಲಿ ಇದ್ದಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಪಡೆದ ಡಿಪ್ಲೊಮ ಪದವಿಗಳನ್ನು ಪಡೆದರು.

1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ಯಕ್ಷಗಾನ ಪ್ರಿಯರಾದ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿ (ಮಂಗಳೂರು)ಯೊಡನೆ ಊರೂರು ಸುತ್ತುತ್ತಿದ್ದರಂತೆ. ಸಿಕ್ಕಿದ ಪುಸ್ತಕಗಳನ್ನು ಮನೆಗೆ ತಂದಿಡುತ್ತಿದ್ದುದು ಗಟ್ಟಿಯವರಿಗೆ ಓದಲು ಪ್ರಚೋದನೆ ನೀಡಿತು. ಮತ್ತು ತಾಯಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಬೆಳೆಯುವಂತೆ ಮಾಡಿದವು.

ಕಾದಂಬರಿಗಳ ಮಹಾ ಲೋಕ ಪ್ರವೇಶ

ಕೆ.ಟಿ. ಗಟ್ಟಿ ಅವರು ತಮ್ಮ ಅನುಭವ, ಓದಿನ ಶಕ್ತಿಗಳನ್ನು ಬೆರೆಸಿ ಕಾದಂಬರಿಗಳನ್ನೇ ಬರೆಯಲು ತೊಡಗಿದರು. ಇವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 1976ರಲ್ಲೇ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಕಾದಂಬರಿ ಭಾರಿ ಜನಪ್ರಿಯವಾಗಿತ್ತು. ಬಳಿಕ ಮುದ್ರಣ ಕಂಡು ನಾಲ್ಕು ಬಾರಿ ಮರು ಮುದ್ರಣಕ್ಕೂ ಒಳಗಾಯಿತು.

1978ರಲ್ಲಿ ಅವರು ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಬಹುಶಃ ಒಬ್ಬ ಲೇಖಕರದ್ದೇ ಇಷ್ಟೊಂದು ಕಾದಂಬರಿಗಳು ಧಾರಾವಾಹಿಯಾಗಿ ಒಂದೇ ಪತ್ರಿಕೆಯಲ್ಲಿ ಪ್ರಕಟವಾಗಿರುವುದೂ ದಾಖಲೆಯೇ ಆಗಿರಬಹುದು.

ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಮುಂತಾದವುಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ವಿದೇಶಕ್ಕೆ ಹೋಗುವ ಮುನ್ನ ಇವರು ರಚಿಸಿದ ಒಟ್ಟು ಕಾದಂಬರಿಗಳ ಸಂಖ್ಯೆ 46.

ವಿದೇಶ, ಮಣ್ಣು, ಕುರಿ ಸೇರಿ ಅರಗಿನ ಅರಮನೆ!

ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ನಡೆದ ಘಟನೆ ಇವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆ ಗಿಡವನ್ನು ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ ಕಾಡಿದ ಪ್ರಶ್ನೆ. ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ-ನಾನು ಓಡಿಸಿದ್ದು ಸರಿಯಾ? ಅನುಭವಿಸಿದ ಈ ಗೊಂದಲದಿಂದ ಹುಟ್ಟಿ ಬಂದದ್ದೇ ‘ಅರಗಿನ ಅರಮನೆ’ ಕಾದಂಬರಿ.

ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು (1982) ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿದರು. ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡರು.

ಆಗಾಗ್ಗೆ ಪತ್ರಿಕೆಗೆ ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’,‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ.

ಶಿಕ್ಷಣ, ಸಾಹಿತ್ಯ, ಸಾಮಾಜಿಕ ಈ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಹಲವಾರು ಮೌಲಿಕ ಲೇಖನಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ನಮ್ಮೊಳಗಿನ ಆಕಾಶ, ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ.

‘ಝೇಂಕಾರದ ಹಕ್ಕಿ’ ಇವರ ಕವನಗಳ ಸಂಗ್ರಹವು ೧೯೯೪ ರಲ್ಲಿ ಪ್ರಕಟಗೊಂಡಿದ್ದು ಇಂಗ್ಲಿಷ್‌ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ (೨೦೦೧) ರಲ್ಲಿ ಪ್ರಕಟವಾಗಿದೆ.

ಕಾದಂಬರಿ, ಕತೆ, ಕವನದ ಜತೆಗೆ ನಾಟಕ

ತಂದೆತಾಯಿಯಿಂದ ಬಂದ ಬಳುವಳಿಯಾಗಿ ರಂಗಭೂಮಿಯ ಬಗ್ಗೆ ವಿಶೇಷ ಒಲವಿದ್ದು ರಚಿಸಿದ ನಾಟಕ ಕೃತಿಗಳೆಂದರೆ ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಮುಂತಾದ ೧೮ ನಾಟಕಗಳು ಪ್ರಕಟವಾಗಿದ್ದು ಇವುಗಳಲ್ಲಿ ಕೆಲವು ಬಾನುಲಿಯಲ್ಲೂ ಪ್ರಸಾರಗೊಂಡು ಜನಪ್ರಿಯ ನಾಟಕಗಳೆನಿಸಿವೆ.

ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ 30 ನಾಟಕಗಳನ್ನೂ ರಚಿಸಿದ್ದು ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೂ ಅನುವಾದಗೊಂಡಿವೆ.

Exit mobile version