ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡಲಾಗುವ 2022ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ₹ 10,000 ಬಹುಮಾನ ಧನ ಹಾಗೂ ಪ್ರಶಸ್ತಿ ಫಲಕವನ್ನು ಈ ಪ್ರಶಸ್ತಿಯು ಒಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಸೇಡಿಯಾಪು ಕೃಷ್ಣ ಭಟ್ಟರ ಸ್ಮರಣಾರ್ಥ ಪ್ರಶಸ್ತಿಯನ್ನು ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವವರಿಗೆ ನೀಡಲಾಗುತ್ತದೆ.
ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರು 1952ರಲ್ಲಿ ಜನಿಸಿ, ಕನ್ನಡ ಹಾಗೂ ಸಂಸ್ಕೃತದಲ್ಲಿ ಎಂ.ಎ ಪದವಿಯನ್ನು ಮೈಸೂರು ವಿವಿಯಲ್ಲಿ ಪಡೆದು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕರಾಗಿ 1992ರಲ್ಲಿ ನೇಮಕವಾದರು. ಅಧ್ಯಯನಾಂಗದ ನಿರ್ದೇಶಕರಾಗಿ, ಕುಲಸಚಿವರಾಗಿ, ಡೀನ್ ಆಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಪ್ರಥಮ ಕುಲಪತಿಗಳಾದರು. ಇಲ್ಲಿಯವರೆಗೆ ಅವರು 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಅವರ ಸಾಹಿತ್ಯ ಸೇವೆ ಹಾಗೂ ಸಂಶೋಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವಿ.ಎಂ.ಇನಾಂದಾರ್ ಪ್ರಶಸ್ತಿ, ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ, ಸಂಸ್ಕೃತಿ ಸಮ್ಮಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ: ಕವಿ ಬಿ.ಆರ್. ಲಕ್ಷ್ಮಣರಾವ್‌ಗೆ ಸಾಹಿತ್ಯ ಕಲ್ಪತರು ಪ್ರಶಸ್ತಿ