Site icon Vistara News

Pustaka Sante: ಫೆ. 10, 11ರಂದು ತಪ್ಪದೇ ಬನ್ನಿ ʼಪುಸ್ತಕ ಸಂತೆʼಗೆ!

CM Siddaramaiah released pustaka sante poster

ಬೆಂಗಳೂರು: ಪುಸ್ತಕೋದ್ಯಮದಲ್ಲಿ ಉಪಯುಕ್ತ ಪ್ರಯೋಗ ಮಾಡುತ್ತ ಓದುಗರ ಮನ ಗೆಲ್ಲುತ್ತಿರುವ ʼವೀರಲೋಕʼ (Veeraloka) ಸಂಸ್ಥೆಯು ಬೆಂಗಳೂರಿನ ಎಚ್‌.ಎಸ್‌.ಆರ್‌. ಲೇಔಟ್‌ನ ಸ್ವಾಭಿಮಾನಿ ಉದ್ಯಾನವನದಲ್ಲಿ ಫೆ. 10 ಮತ್ತು 11ರಂದು ʼಪುಸ್ತಕ ಸಂತೆʼ (Pustaka Sante) ಆಯೋಜಿಸಿದೆ. ಹತ್ತಕ್ಕೂ ಹೆಚ್ಚು ಪ್ರಮುಖ ಪ್ರಕಾಶನಗಳ ಸಾವಿರಾರು ಪುಸ್ತಕಗಳು ಈ ಸಂತೆಯಲ್ಲಿ ಓದುಗರಿಗೆ ಲಭ್ಯವಾಗಲಿವೆ.

ಪುಸ್ತಕ ಬಿಡುಗಡೆಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಹತ್ತು ಲೇಖಕರು ಈಗಾಗಲೇ ಪುಸ್ತಕ ಬಿಡುಗಡೆಗೆ ಹೆಸರು ನೋಂದಾಯಿಸಿದ್ದಾರೆ. ಪುಸ್ತಕ ಸಂತೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ. ಕನ್ನಡ ಪುಸ್ತಕ ಲೋಕದಲ್ಲಿ ಇದೊಂದು ಶ್ಲಾಘನಾರ್ಹ ಪ್ರಯತ್ನ ಎಂಬ ಅಭಿಪ್ರಾಯ ಓದುಗರಿಂದ ವ್ಯಕ್ತವಾಗಿದೆ. ವಿಸ್ತಾರ ಪ್ರಕಾಶನ ಕೂಡ ಈ ಪುಸ್ತಕ ಸಂತೆಯಲ್ಲಿ ಭಾಗವಹಿಸಲಿದ್ದು, ವಿಸ್ತಾರ ನ್ಯೂಸ್‌ ಈ ಅರ್ಥಪೂರ್ಣ ಆಯೋಜನೆಗೆ ಸಾಥ್‌ ನೀಡಿದೆ.

ವೀರಲೋಕ ಪ್ರಕಾಶನದ ರೂವಾರಿಯಾಗಿರುವ ವೀರಕಪುತ್ರ ಶ್ರೀನಿವಾಸ ಅವರು ಈ ಪುಸ್ತಕ ಸಂತೆಯ ಬಗ್ಗೆ ಹೀಗೆನ್ನುತ್ತಾರೆ: ”ಇದು ಪುಸ್ತಕೋದ್ಯಮಕ್ಕೆ ಕಸುವು ತುಂಬುವ ಪ್ರಯತ್ನ. ಸಾಹಿತ್ಯಲೋಕ ಪ್ರಕಾಶಿಸುವ ಮುನ್ನ ಪ್ರಕಾಶಕ ಪ್ರಕಾಶಿಸಬೇಕು. ದೊಡ್ಡದೊಡ್ಡ ಪ್ರಕಾಶಕರಿಗೆ ಇದರ ಅಗತ್ಯವಿಲ್ಲದೇ ಇರಬಹುದು. ಆದರೆ ಅದೆಷ್ಟೊ ಕನಸುಗಳನ್ನಿಟ್ಟುಕೊಂಡು ಪುಟ್ಟ ಪ್ರಕಾಶನ ಸಂಸ್ಥೆ ಆರಂಭಿಸಿದವರಿಗೆ, ತಮ್ಮ ಪುಸ್ತಕವನ್ನು ತಾವೇ ಪ್ರಕಾಶಿಸಿಕೊಂಡವರಿಗೆ, ತಮ್ಮ ಚೊಚ್ಚಲ ಕೃತಿಗೆ ಓದುಗರನ್ನು ಹುಡುಕುತ್ತಿರುವವರಿಗೆ ಈ ಸಂತೆ ನಿಜಕ್ಕೂ ನೆರವಾಗಬಲ್ಲದು. ನಮ್ಮ ಉದ್ದೇಶವನ್ನು ಅರಿತಿರುವ ಮಾಧ್ಯಮಗಳು, ಪ್ರಮುಖ ಪ್ರಕಾಶನ ಸಂಸ್ಥೆಗಳು ಈಗಾಗಲೇ ನಮ್ಮ ಕೈಜೋಡಿಸಿವೆ. ಸಪ್ನ, ಅಂಕಿತ, ನವಕರ್ನಾಟಕದಂತಹ ಹಿರಿಯ ಪ್ರಕಾಶಕರಂತೂ ವ್ಯಾಪಾರವಾಗದಿದ್ದರೂ ಪರವಾಗಿಲ್ಲ, ಕನ್ನಡ ಪುಸ್ತಕಗಳು ಜನರಿಗೆ ಕಾಣುವಂತೆ ಮಾಡುತ್ತಿರುವ ಈ ಪ್ರಯತ್ನದ ಜೊತೆಗೆ ನಾವಿದ್ದೇವೆ” ಎಂದು ತಿಳಿಸಿದ್ದಾರೆ.

ಸಾಹಿತ್ಯಲೋಕದಲ್ಲಿ ನೂರಾರು ಸಮಸ್ಯೆಗಳಿವೆ. ನಾವು ಸಮಸ್ಯೆಯ ಭಾಗವಾಗಬೇಕೆಂದುಕೊಂಡವರಲ್ಲ! ಪರಿಹಾರದ ಭಾಗವಾಗಬೇಕು ಎಂದುಕೊಂಡವರು. ನಿಮ್ಮದೂ ಅದೇ ಉದ್ದೇಶವಾಗಿದ್ದರೆ ನಮ್ಮ ಜೊತೆಯಾಗಿ. ಈ ಪುಸ್ತಕ ಸಂತೆ ಪ್ರತಿ ಜಿಲ್ಲೆಯಲ್ಲೂ ಮಾಡುವ ಉದ್ದೇಶವಿದೆ. ಆ ಎಲ್ಲಾ ಸಂತೆಗಳು ಗೆಲ್ಲಬೇಕೆಂದರೆ, ಈ ಮೊದಲ ಸಂತೆ ಗೆಲ್ಲಬೇಕಿದೆ ಎಂದು ವೀರಕಪುತ್ರ ಶ್ರೀನಿವಾಸ್‌ ಅವರು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡಿದ್ದಾರೆ.

ಈ ಪುಸ್ತಕ ಸಂತೆಯಲ್ಲಿ ಹಳೆಯ ಮತ್ತು ಹೊಚ್ಚಹೊಸ ಪುಸ್ತಕಗಳು ರಿಯಾಯಿತಿ ದರದಲ್ಲಿ ಓದುಗರಿಗೆ ಲಭ್ಯವಾಗಲಿವೆ. ಫೆ.10 ಮತ್ತು 11ರ ದಿನಾಂಕವನ್ನು ಈಗಲೇ ನಿಮ್ಮ ಕ್ಯಾಲೆಂಡರ್‌ನಲ್ಲಿ ಗುರುತು ಮಾಡಿಕೊಳ್ಳಿ. ಪುಸ್ತಕ ಸಂತೆಗೆ ಮರೆಯದೇ ಬನ್ನಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7022122121, 8861212172

ಇದನ್ನೂ ಓದಿ: ವೀರಲೋಕದಿಂದ ವಿಶಿಷ್ಟ ಪುಸ್ತಕ ರಾತ್ರಿ; ಹೊಸ ವರ್ಷವನ್ನು ಪುಸ್ತಕಗಳೊಂದಿಗೆ ಸ್ವಾಗತಿಸಿ!

Exit mobile version