Site icon Vistara News

Book Exerpt: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?

mannina kanasu

ಸಂಸ್ಕೃತದ ʼಸ್ವಪ್ನವಾಸವದತ್ತʼ ಮತ್ತು ʼಮೃಚ್ಛಕಟಿಕʼ ನಾಟಕಗಳನ್ನು ಆಧರಿಸಿ ಶತಾವಧಾನಿ ಆರ್.ಗಣೇಶ್‌ ಸುದೀರ್ಘವಾದ ʼಮಣ್ಣಿನ ಕನಸುʼ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇದನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ಸಂಸ್ಕೃತ ಕಾವ್ಯ ನಾಟಕಗಳ ಪದಪ್ರಯೋಗಗಳಿಂದ ಪರಿಪುಷ್ಟವಾದ ಕನ್ನಡ ಭಾಷಾ ಶೈಲಿ, ಸುಲಭ ಗದ್ಯ, ಭಾರತೀಯ ಭೌಗೋಲಿಕತೆ ಇತಿಹಾಸದ ಒಳನೋಟಗಳನ್ನು ಹೊಂದಿರುವ ಈ ಕಾದಂಬರಿಯ ಆಯ್ದಭಾಗವೊಂದು ಇಲ್ಲಿದೆ:

ಶತಾವಧಾನಿ ಆರ್.ಗಣೇಶ್‌

ಈ ಮುನ್ನ ರೇಭಿಲನ ಮನೆಯ ಕಲಾಮೇಳಗಳೂ ಸೇರಿದಂತೆ ಉಜ್ಜಯಿನಿಯ ಎಷ್ಟೋ ನಾಗರಕಗೋಷ್ಠಿಗಳಲ್ಲಿ, ಸಾರ್ವಜನಿಕ ಮಹೋತ್ಸವಗಳಲ್ಲಿ ಚಾರುದತ್ತನನ್ನು ಸಾಕಷ್ಟು ಹತ್ತಿರದಿಂದಲೇ ಕಂಡಿದ್ದಳು. ಎಲ್ಲೆಲ್ಲಿಯೂ ಅವನ ಕಲಾಪ್ರೀತಿ, ಔದಾರ್ಯ ಮತ್ತು ಸಜ್ಜನಿಕೆಗಳನ್ನು ಗಮನಿಸಿದ್ದಳು. ಅವನ ಅಂದ-ಚಂದಗಳು ಅವಂತಿಜನಪದದ ಹೆಣ್ಣುಗಳ ಹೃದಯಗಳಲ್ಲಿ ಮಧುರಭಾವನೆಗಳನ್ನು ಹುಟ್ಟಿಸುತ್ತಿದ್ದ ಕತೆಗಳನ್ನು ಕೂಡ ಆಗೀಗ ಕೇಳಿದ್ದಳು. ಚೆನ್ನೆಯರನ್ನು ಕಂಡಿದ್ದಳು. ಹೀಗಿದ್ದರೂ ತಾನು ಮಾತ್ರ ಚಾರುದತ್ತನಲ್ಲಿ ಅದು ಹೇಗೋ ತನ್ನ ಪರಿಚಿತರಾದ ಗಣಿಕೆಯರ ವಲಯಗಳಲ್ಲಿಯೂ ಅವನತ್ತ ಹಾತೊರೆಯುವ ಆಸಕ್ತಳಾಗಿರಲಿಲ್ಲ. ಆದರೆ ಅದು ಇಂದಿನವರೆಗೂ ಸಂದ ಸತ್ಯ. ಇನ್ನು ಮುಂದೆ ಆ ಸಂಗತಿಯೇ ಬೇರಾಗಲಿತ್ತು. ವಸಂತಸೇನೆ ಉಪಧಾನದಲ್ಲಿಯೇ ಮುಖ ಹುದುಗಿಸಿ ತನ್ನೊಳಗೇ ಕೇಳಿಕೊಳ್ಳುತ್ತಿದ್ದಳು: ತಾನೇಕೆ ಈವರೆಗೆ ಚಾರುದತ್ತನನ್ನು ಪ್ರೀತಿಸಲಿಲ್ಲ? ನಿಲುಕದ ನಕ್ಷತ್ರವೆಂದೇ? ಉಹುಂ, ಅಂಥ ಊಹೆ ಕೂಡ ಈ ಮೊದಲು ಇರಲಿಲ್ಲ. ಸದ್ಯ ಆಗಿದ್ದದ್ದೇ ಒಳಿತಾಯಿತು… ಇಲ್ಲವಾದರೆ ಅಂಥ ಪ್ರಣಯವೈಫಲ್ಯದ ಸಂಕಟವನ್ನು ಹೊರುವುದಾದರೂ ಹೇಗೆ? ಹೊರಬರುವುದಾದರೂ ಹೇಗೆ? ಅಷ್ಟೇಕೆ, ಆಗ ಆಮ್ರಪಾಲಿಯ ಬಳಿ ಕಲಿತು ಬರಲೂ ನೆಮ್ಮದಿ ಉಳಿಯುತ್ತಿರಲಿಲ್ಲ… ಇಂದು ಚಾರುದತ್ತ ತನ್ನತ್ತ ಆಕರ್ಷಿತನಾದದ್ದು ಅಕ್ಕ ಆಮ್ರಪಾಲಿಯ ಅನುಗ್ರಹದಿಂದ… ಅವಳ ಆದರ್ಶವೇ ತನಗಿನ್ನು ದಾರಿ ತೋರಬೇಕು, ಗುರಿ ಸೇರಿಸಬೇಕು.

ಚಾರುದತ್ತ ತನಗೇ ಒಲಿದನೇ ಅಥವಾ ತನ್ನ ಕಲೆಯನ್ನು ಮಾತ್ರ ಮೆಚ್ಚಿದನೇ ಎಂಬ ಸಂದೇಹ ವಸಂತಸೇನೆಗೆ ಮತ್ತೆ ಮತ್ತೆ ಮೂಡಿತು. ಆದರೆ ಅವನು ಬರಿಯ ಕಲೆಯನ್ನಲ್ಲ. ತನ್ನನ್ನೂ ಮೆಚ್ಚಿದನೆಂಬುದು ಅವಳಿಗೆ ತರ್ಕಾತೀತವಾಗಿ ಸ್ಪುರಿಸುತ್ತಿತ್ತು. ಆದರೆ ಕಾತರದಲ್ಲಿರುವಾಗ ತರ್ಕಕ್ಕಿರುವ ಮನ್ನಣೆ ಸ್ಪುರಣೆಗಿಲ್ಲ ತಾನೆ! ಹೀಗಾಗಿ ಅವಳು
ಮನೋಮಥನದಲ್ಲಿ ಕಳೆದುಹೋಗುತ್ತಿದ್ದಳು. ಆಲೋಚನೆಗಳ ಅಲೆಗಳ ನಡುವೆ ಈಜಿ, ಮುಳುಗಿ ಬುದ್ಧಿ ಬಳಲಿತು. ಹೇಗಾದರೂ ನೆಮ್ಮದಿಯ ದಡ ಸೇರಬೇಕೆಂಬ ಅರ್ತಿಯಿಂದ ಹತ್ತಿರದಲ್ಲಿಯೇ ಮಲಗಿದ್ದ ಮದನಿಕೆಯನ್ನು ಎಬ್ಬಿಸಿದಳು. ದಣಿದು ನಿದ್ರಿಸಿದ ಅವಳನ್ನು ಎಬ್ಬಿಸುವುದಕ್ಕೆ ಮನಸ್ಸಿಲ್ಲದಿದ್ದರೂ ಗತ್ಯಂತರವಿಲ್ಲದೆ ನಿದ್ರಾಭಂಗ ಮಾಡಿದ್ದಳು. ಕಾತರದಿಂದ ಎದ್ದ ಅವಳಿಗೆ ವಸಂತಸೇನೆ ತನ್ನ ಮನದ ಹೊಯ್ದಾಟವನ್ನೆಲ್ಲ ಸೂಕ್ಷ್ಮವಾಗಿ ಹೇಳಿಕೊಂಡಳು. ಅದನ್ನು ಆಲಿಸಿದ ಮದನಿಕೆ ತನ್ನ ಊಹೆ ತಪ್ಪಲಿಲ್ಲವೆಂಬ ಹೆಮ್ಮೆಯ ತೃಪ್ತಿ ಒಂದು ಕ್ಷಣ ಮೂಡಿತ್ತಾದರೂ ತನ್ನ ಒಡತಿಯ ಪ್ರಣಯಕ್ಕಿರುವ ಪ್ರಧಾನವಾದ ತೊಡಕು ಆಕೆಯಲ್ಲಿ ಸ್ವಲ್ಪ ಕಳವಳ ತಂದಿತು. ಪ್ರಣಯದ ಸೆಳವಿಗೆ ಸಿಕ್ಕವರು ಅದೆಷ್ಟು ಜಾಣರಾಗಿದ್ದರೂ ಕೆಲವೊಮ್ಮೆ ಮುಖ್ಯವಾದ ಸಂಗತಿಗಳನ್ನೇ ಗಮನಿಸದೆ ಹೋಗುವರಲ್ಲಾ ಎಂಬ ಖೇದವೂ ಮೂಡಿತು: “ಅಕ್ಕ, ಇದನ್ನೆಲ್ಲ ನಾನು ಆಗಲೇ ಗಮನಿಸಿ ಸ್ವಲ್ಪ ಊಹೆ ಕೂಡ ಮಾಡಿದ್ದೆ. ನಾನಾಗಿ ಯಾಕೆ ಆ ಮಾತು ಎತ್ತಬೇಕು; ಅದೂ ಅಲ್ಲದೆ ಅವೇಳೆ ಅಂತ ಸುಮ್ಮನಾದೆ. ನೀನು ಈ
ದಿಕ್ಕಿನಲ್ಲಿ ಏನೆಲ್ಲ ಆಲೋಚನೆ ಮಾಡುವಾಗಲೂ ಅವರಿಗೆ ಈಚೆಗೆ ಬಂದ ಬಡತನದ ಬಗ್ಗೆ ಚಿಂತೆ ಮಾಡಿದ ಹಾಗೆ ತೋರಲಿಲ್ಲ. ನನಗನ್ನಿಸುತ್ತೆ, ಇದೇ ದೊಡ್ಡ ಸಮಸ್ಯೆ ಅಂತ…ʼʼ

ಆ ಮುನ್ನ ವಸಂತಸೇನೆಗೆ ಚಾರುದತ್ತನ ಬಡತನದ ನೆನಪು ಒಮ್ಮೆ ಕೂಡ ಆಗಿರಲಿಲ್ಲ. ಆದರೆ ಈಗ ಆ ಅಂಶ ಮುನ್ನೆಲೆಗೆ ಬಂದೊಡನೆಯೇ ಅವನೊಡನೆ ತನ್ನ ಪ್ರಣಯ ಸುಸೂತ್ರವಾಗಿ ಸಾಗೀತೇ ಎಂಬ ಪ್ರಶ್ನೆ ಪೆಡಂಭೂತದಂತೆ ಎದ್ದು ಕೆರಳಿತು, ದಿಟವೇ, ತಾನು ಹಣಕ್ಕೆ ಹಿರಿದಾದ ಮನ್ನಣೆ ನೀಡುವಂಥವಳಲ್ಲ. ಆದರೆ ಬೆಲೆವೆಣ್ಣೆಂದು ಲೋಕದ ಅಳತೆಯಲ್ಲಿ ನಿಶ್ಚಿತಳಾದ ತನ್ನನ್ನು ಚಾರುದತ್ತನಾದರೂ ಹಾಗೆ ತಾನೆ ಭಾವಿಸಬೇಕು. ಅವನು ಸಹಜವಾಗಿಯೇ ಉದಾರಿ, ಸ್ವಾಭಿಮಾನಿ, ಸಂಯಮಿ ಕೂಡ. ಇದೀಗ ಬಡತನದ ಕಾರಣ ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದಾನೆ. ಹೀಗಿರುವಾಗ ತನ್ನದಾದ ಆಸ್ತಿಯಾಗಿ ಉಳಿದಿರುವ ಸಂಯಮ-ಸ್ವಾಭಿಮಾನಗಳನ್ನೇ ಕಾಪಾಡಿಕೊಳ್ಳಲು ಹೆಣಗುತ್ತಾನೆ. ಇಂಥ ವ್ಯಕ್ತಿ ಗಣಿಕೆಯಾದ ತನ್ನ ಪ್ರೇಮವನ್ನು ಹೇಗೆ ತಾನೆ ಗಮನಿಸಿಯಾನು? ಒಂದು ವೇಳೆ ಗಮನಿಸಿದರೂ ಯಾವ ರೀತಿಯಿಂದ ಅದನ್ನು ಪುರಸ್ಕರಿಸಿಯಾನು? ಛೇ! ಸೂಳೆ ಬಡವನಿಗೆ ಮನಸೋಲಬಾರದು. ಬಡಹೆಣ್ಣಿಗೆ ಸಿರಿವಂತ ಗಂಡಿನ ಸಂಗ ಅಸಾಧ್ಯವಾಗದು. ಆದರೆ ಸಿರಿಯುಳ್ಳ ಹೆಣ್ಣನ್ನು ಬಡಗಂಡು ಗೆಲ್ಲುವುದು ಕಷ್ಟ. ಅಂಥ ಹೆಣ್ಣು ತಾನಾಗಿ ಸೋತರೂ ಬಡಗಂಡಿಗೆ ಸ್ವಾಭಿಮಾನ ಅಡ್ಡಿಯಾಗುತ್ತದೆ. ತಾನು ಗಂಡಾದ ಕಾರಣ ಗೆಲ್ಲಲೇಬೇಕೆಂಬ ನಿರ್ಬಂಧವನ್ನು ಹಾಳು ಪ್ರಕೃತಿಯೇ ಅವನಿಗೆ ವಿಧಿಸಿದಂತೆ ತೋರುತ್ತದೆ. ಈ ಹಮ್ಮು-ಬಿಮ್ಮುಗಳ ನಡುವೆ ಸೋತುಹೋಗುವುದು ಪ್ರೀತಿ ಮಾತ್ರ… ವಸಂತಸೇನೆಯ ಮನಸ್ಸು ಗೊಂದಲದ ಗೂಡಾಗಿತ್ತು.

ಬಾನಿಗೇ ತೆರೆದುಕೊಂಡ ಆ ಚಂದ್ರಶಾಲೆಯನ್ನೆಲ್ಲ ಪರರಾತ್ರದ ಚಂದ್ರ ಬೆಳಗುತ್ತಿದ್ದ. ಅವನ ಬೆಳಕಿನಲ್ಲಿ ಒಡತಿಯ ಮುಖದ ಮೇಲಣ ಚಿಂತೆ ಮದನಿಕೆಗೆ ಮತ್ತಷ್ಟು ಎದ್ದು ಕಂಡಿತು. ಹೇಗೋ ನೆಮ್ಮದಿಯ ಭ್ರಮೆಯಲ್ಲಿ ನಿದ್ರಿಸಲಿದ್ದ ಅವಳನ್ನು ತನ್ನ ಮಾತೇ ನಿದ್ರೆಗೆಡುವಂತೆ ಮಾಡಿತೆಂಬ ನೋವು ಮೂಡಿತು. ಆದರೇನು ಮಾಡುವುದು? ವಯಸ್ಸಿನಿಂದ ಚಿಕ್ಕವಳಾದರೂ ಪ್ರಣಯದಲ್ಲಿ ಹೆಚ್ಚಿನ ಅನುಭವ ಮದನಿಕೆಗುಂಟು. ಅದಕ್ಕೆ ಹೆಗಲೆಣೆಯಾಗಿ ಇತ್ತೀಚೆಗೆ ಆಕೆಗೆ ದಕ್ಕಿದ ವೇಶ್ಯಾವಾಟಿಕೆಯ ಗೆಮ್ಮೆ ಅವಳಲ್ಲಿ ಮೊದಲಿಂದ ಇರುವ, ಕಷ್ಟ-ನಷ್ಟಗಳೂ ಪೋಷಿಸಿದ ವಾಸ್ತವಪ್ರಜ್ಞೆಯನ್ನು ಮತ್ತಷ್ಟು ಮೊನಚಾಗಿಸಿತ್ತು. ಇವೆಲ್ಲ ಅವಳ ವಿಚಾರಕ್ರಮವನ್ನು ಬಲಪಡಿಸದಿರಲು ಹೇಗೆ ತಾನೆ ಸಾಧ್ಯ? ಇಬ್ಬರೂ ಸ್ವಲ್ಪ ಹೊತ್ತು ಗಾಢಮೌನದಲ್ಲಿ ಮುಳುಗಿದ್ದರು. ಇರುಳ ಕತ್ತಲೆಯೆಲ್ಲ ಅವರಿಬ್ಬರ ಮೌನದಲ್ಲಿಯೇ ತನ್ನ ಘನಸಾಂದ್ರತೆಯನ್ನು ಕಂಡುಕೊಂಡಂತಿತ್ತು. ಬಳಿಕ ಏನನ್ನೋ ನೆನಪಿಸಿಕೊಂಡವಳಂತೆ ವಸಂತಸೇನೆ ಕೇಳಿದಳು: “ಹಲಾ, ಆರ್ಯ ಚಾರುದತ್ತ ನನ್ನತ್ತ ಆಕರ್ಷಿತನಾದದ್ದು ದಿಟವೋ ಸಟೆಯೋ? ನಾನೇನೂ ಸುಮ್ಮನೆ ಭ್ರಮೆಗೆ ತುತ್ತಾಗಿ ಇಲ್ಲದ್ದು ಸಲ್ಲದ್ದನ್ನು ಕಲ್ಪಿಸಿಕೊಳಿಲ್ಲ ತಾನೆ? ನಿನಗೆ ಅನ್ನಿಸಿದ್ದನ್ನ ನೀನು ಸಾವಧಾನವಾಗಿ, ಸಮಾಧಾನವಾಗಿ ಹೇಳು.”
“ಒಡತಿ, ನಾನು ಅವರ ಮುಖವನ್ನ ತೀರ ಹತ್ತಿರದಿಂದೇನೂ ನೋಡಲಿಲ್ಲ… ಆದರೆ ಸ್ವಲ್ಪ ದೂರದಲ್ಲಿದ್ದ ನನಗೂ ಅವರ ಕಣ್ಣುಗಳಲ್ಲಿ ತುಂಬಿ ತುಳುಕಾಡ್ತಾ ಇದ್ದ ಮೆಚ್ಚುಗೆ ಸ್ಪಷ್ಟವಾಗಿ ಕಾಣಿಸ್ತು.ʼʼ ಮದನಿಕೆ ತಾನು ಕಂಡದ್ದನ್ನು ಮತ್ತೊಮ್ಮೆ ಕಾಣುತ್ತಿರುವಂಥ ಏಕಾಗ್ರತೆಯಿಂದ ನುಡಿದಳು.

“ಅವರು ನನ್ನ ಕಲೆಗೆ ಮಾತ್ರ ಮೆಚ್ಚುಗೆ ಸೂಚಿಸ್ತಾ ಇದ್ದರೋ? ಅಥವಾ ನನ್ನನ್ನೇ ಮೆಚ್ಚಿಕೊಳ್ತಾ ಇದ್ದರೋ? ಇದು ನನಗೆ ಸ್ಪಷ್ಟವಾಗಬೇಕು!” ಬಾಣದಂತೆ ಬಂದಿತ್ತು ವಸಂತಸೇನೆಯ ಮಾತು.

“ಎರಡನ್ನೂ ಮೆಚ್ಚಿಕೊಳ್ತಿದ್ದರು…” ಮದನಿಕೆ ಮೆಲ್ಲನೆ ಉಸುರಿದಳು. “ಉಹುಂ, ಈ ಅಡ್ಡಗೋಡೆ ಮೇಲಿನ ದೀಪದ ಮಾತು ನನಗೆ ಬೇಡ. ಯಾವುದು ಹೆಚ್ಚಾಗಿ ಕಾಣ್ತಾ ಇತ್ತು?” ತಣ್ಣಗಿದ್ದರೂ ತೀವ್ರವಾದ ಸ್ವರದಲ್ಲಿ ವಸಂತಸೇನೆ ಕೇಳಿದ್ದಳು. ಅವಳ ಮಾತಿನ ಅಡಿಯಲ್ಲಿ ಆವೇಗದ ಬುಗ್ಗೆ ನುಗ್ಗುತ್ತಿತ್ತು.

“ಇದನ್ನ ಹೇಳೋದು ಸ್ವಲ್ಪ ಕಷ್ಟ, ಒಡತಿ…” ಮದನಿಕೆಯ ಮಾತು ಸ್ವಲ್ಪ ಹಿಂಗಿತು. ಅವಳಿಗೆ ಯಾವುದು ಒಲವಿನ ನೋಟ ಮತ್ತಾವುದು ಮೆಚ್ಚುಗೆಯ ನೋಟ ತನ್ನ ಪ್ರಣಯಾನುಭವದ ಮೂಲಕ ತಿಳಿದಿತ್ತಾದರೂ ಅದು ಅವರವರ ಪ್ರಣಯಗಳಲ್ಲಿಯೇ ಸ್ಪುಟವಾಗಿ ಗುರುತಿಸಿಕೊಳ್ಳಬಹುದಾದ ಸಂಗತಿ; ಮತ್ತಿದು ತರ್ಕಕ್ಕಿಂತ ಸ್ಪುರಣೆಯ ಮೇಲೆಯೇ ಹೆಚ್ಚಾಗಿ ನಿಲ್ಲುವ ಕಾರಣ ನಿರ್ಧಾರಾತ್ಮಕವಾಗಿ ಹೇಳಬಹುದೋ ಬೇಡವೋ ಎಂಬ ಅಳ ಕಾಡಿತು. ಆದರೆ ತಾನಿನ್ನು ಸ್ವಲ್ಪ ಹೊತ್ತು ಹಿಂಜರಿದರೂ ತನ್ನ ಸಖಿಯೇ ಆದ ಪ್ರೀತಿಯ ಒಡತಿ ಕಂಬನಿಯಲ್ಲಿ ಕೊಚ್ಚಿಹೋಗುವಳೆಂದರಿತು ಮನಸ್ಸನ್ನು ಗಟ್ಟಿಯಾಗಿಸಿಕೊಂಡು ದೃಢವಾದರೂ ಮೃದುವಾದ ದನಿಯಲ್ಲಿ ಮುಂದುವರಿದಳು: “ಒಡತಿ, ಅದು ಪ್ರೀತಿಯೇ!”

ವಸಂತಸೇನೆಯ ಮುಖ ಇನ್ನೊಂದು ಜಾವದೊಳಗೆ ಮುಳುಗಲಿದ್ದ ಚಂದ್ರನಿಗೆ ಮತ್ತೊಂದು ಹುಟ್ಟನ್ನು ಕೊಟ್ಟಂತೆ ದೇದೀಪ್ಯಮಾನವಾಗಿ ಬೆಳಗಿತು. ಅವಳಿಗೆ ನಿಜಕ್ಕೂ ಬೇಕಾಗಿದ್ದುದು ತನ್ನ ಮನದಾಳದ ಮಾತಿಗೆ ಮತ್ತೊಂದು ಉಪಶ್ರುತಿ ಮಾತ್ರ. ಹೀಗಾಗಿಯೇ ಮತ್ತೊಮ್ಮೆ ಅವಳನ್ನು ಪ್ರಶ್ನಿಸಿ ತನ್ನ ಅಭಿಮತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲೂ ಬಯಸಲಿಲ್ಲ. ಅಂಥ ಇನ್ನೊಂದು ಯತ್ನ ಬೇರೊಂದು ಅಭಿಪ್ರಾಯವನ್ನೂ ಹುಟ್ಟಿಸಬಹುದೆಂಬ ಅಳುಕೂ ಅವಳನ್ನು ಕಾಡಿರಬಹುದು. ಅಂತೂ ಬೆಟ್ಟದ ಮಗಳು ಪಾರ್ವತಿ ಮಾಡಿದ ಬೆಟ್ಟದಂಥ ಗಟ್ಟಿಯಾದ ನಿರ್ಧಾರವನ್ನು ತಾನೂ ಮಾಡಿಕೊಂಡಳು: ತಾನಿನ್ನು ಈ ವಿಷಯದಲ್ಲಿ ಹಿಂದೆಗೆಯುವುದಿಲ್ಲ. ತನ್ನಿಂದ ಚಾರುದತ್ತನೆಷ್ಟು ಹಿಂಜರಿದರೂ ತನ್ನನ್ನು ಲೋಕವೆಷ್ಟು ಬಗೆಯಿಂದ ಜರಿದರೂ ಜಾರಿಹೋಗಲಾರೆ. ತಾನಿನ್ನು ಪ್ರೇಮದ ಸಮರವನ್ನೇ ಸಾರುವುದು ಸತ್ಯ…

ಕೃತಿ: ಮಣ್ಣಿನ ಕನಸು

ಕೃತಿಕಾರ: ಶತಾವಧಾನಿ ಆರ್.ಗಣೇಶ್‌

ಪ್ರಕಾಶಕರು: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ

ವಿಜಯನಗರ ಸಾಮ್ರಾಜ್ಯ ಬಗ್ಗೆ ವೀರ ಸಾವರ್ಕರ್‌ ಹೀಗೆ ಬರೆದಿದ್ದರು!

Exit mobile version