Site icon Vistara News

ರವೀಂದ್ರನಾಥ ಟಾಗೋರ್‌ ಜನ್ಮದಿನಕ್ಕೆ ಅವರ 7 ಪುಟ್ಟ ಕವನಗಳು

ಒಂದು

ಯಾವ ಹಾಡನ್ನು ಹಾಡಲೆಂದು ನಾನು ಬಂದೆನೋ ಅದನ್ನು ಇದುವರೆಗೂ ಹಾಡಲೇ ಇಲ್ಲ. ತನ್ನ ತಂಬೂರಿಯನ್ನು ಶ್ರುತಿಗೊಳಿಸುತ್ತ, ತಂತಿಗಳನ್ನು ಬಿಡಿಸುತ್ತ ಸೇರಿಸುತ್ತಲೇ ದಿನಗಳನ್ನು ಕಳೆದೆ. ಸಮಯ ಬಂದಿಲ್ಲ ಇನ್ನೂ, ಸರಿಯಾದ ಪದಗಳೂ ಸಿಕ್ಕಿಲ್ಲ. ಹಾತೊರೆಯುತ್ತಿರುವ ಹೃದಯ ಮಾತ್ರ ಯಾತನೆಯಲ್ಲಿದೆ. ಅವನ ಮುಖವನ್ನು ನಾನು ನೋಡಿಲ್ಲ, ಅವನ ದನಿಯನ್ನೂ ಕೇಳಿಲ್ಲ. ಆದರೆ ಮನೆಯ ಮುಂದಿನ ಹಾದಿಯಲ್ಲಿ ಅವನ ಹೆಜ್ಜೆಯ ಸಪ್ಪಳ ಕೇಳಿರುವೆ. ಮನೆಯೊಳಗೆ ದೀಪ ಹೊತ್ತಿಸಿಲ್ಲ, ಮನೆಯೊಳಗೆ ಕರೆದಿಲ್ಲ. ಅವನ ಭೇಟಿ ಮಾಡುವ ಭರವಸೆಯಲ್ಲೇ ಬದುಕಿರುವೆ, ಆ ಕ್ಷಣ ಬಂದಿಲ್ಲ.

ಎರಡು

ಮನಸ್ಸಿಗೆ ಎಲ್ಲಿ ಅಳುಕು ಇಲ್ಲವೋ, ನಿರ್ಭೀತಿಯಿಂದ ತಲೆಯೆತ್ತಿ ನಿಲ್ಲಬಲ್ಲೆವೋ, ಎಲ್ಲಿ ಜ್ಞಾನವು ಮುಕ್ತವಾಗಿರುವುದೋ, ಎಲ್ಲಿ ಕ್ಷುಲ್ಲಕ ಗೋಡೆಗಳ ನಡುವೆ ಜಗತ್ತು ಛಿದ್ರವಾಗಿ ಚದುರಿಲ್ಲವೋ, ಎಲ್ಲಿ ಆಳವಾದ ಸತ್ಯದ ಅರಿವಿನಿಂದ ಮಾತುಗಳು ಹೊರ ಬರುವವೋ, ಎಲ್ಲಿ ಪರಿಪೂರ್ಣತೆಯತ್ತ ಬಳಲಿಕೆಯಿಲ್ಲದೆ ಕಾಯಕದ ತೋಳುಗಳು ಮುಂದೊತ್ತುವುದೋ, ಎಲ್ಲಿ ನಿಸ್ತೇಜ ಜಡ ರೂಢಿಗಳ ಮರುಭೂಮಿಯ ನಡುವೆ ಕಳೆದುಹೋಗದೆ ಸಧಿಟಿಕ ಶುದ್ಧ ತಿಳಿವಿನ ತೊರೆ ಹರಿಯುವುದೋ, ವಿಸ್ತರದ ಚಿಂತನೆ ಮತ್ತು ಕ್ರಿಯೆಗಳ ವಿವೇಕದಿಂದ ಇವೆಲ್ಲ ಮುನ್ನಡೆದಿರುವಲ್ಲಿ, ಸ್ವಾತಂತ್ರ್ಯದ ಸ್ವರ್ಗದಲ್ಲಿ, ಓ ತಂದೆಯೇ ನಮ್ಮ ರಾಷ್ಟ್ರವು ಎಚ್ಚರವಾಗಲಿ.

ಮೂರು

ದಿನದಿನವೂ ನಾನು ನನ್ನ ಕಾಗದದ ದೋಣಿಗಳ ತೊರೆಯಲ್ಲಿ ತೇಲಿಬಿಡುವೆ. ದೊಡ್ಡ ಕಪ್ಪು ಅಕ್ಷರಗಳಲ್ಲಿ ನನ್ನ ಮತ್ತು ನಾನು ವಾಸಿಸುವ ಊರಿನ ಹೆಸರನ್ನು ಅದರಲ್ಲಿ ಬರೆಯುವೆ. ಎಲ್ಲೋ ಯಾವುದೋ ವಿಚಿತ್ರ ಊರಲ್ಲಿ ಯಾರೋ ಒಬ್ಬ ನನ್ನನ್ನು ಕಂಡುಹಿಡಿಯುವನೆಂಬ ಭರವಸೆ. ಆ ದೋಣಿಗಳಲ್ಲಿ ನನ್ನ ಉದ್ಯಾನದ ಪುಟ್ಟ ಹೂಗಳ ತುಂಬಿಸುವೆ. ಮುಂಜಾನೆ ಅರಳಿದ ಈ ಹೂಗಳು ರಾತ್ರಿ ಸುರಕ್ಷಿತವಾಗಿ ತಲುಪುವುದೆಂಬ ಆಸೆ. ದೋಣಿಗಳ ಬಿಡುವಾಗ ತಲೆ ಮೇಲೆತ್ತಿ ಆಕಾಶವನ್ನು ನೋಡುವೆ, ಪುಟ್ಟ ಮೋಡಗಳು ಒಟ್ಟಾಗಿ ದೊಡ್ಡ ಹಾಯಿಪಟದ ಹಡಗಾಗುವುದನ್ನು. ಆಕಾಶದಲ್ಲಿ ನನ್ನ ಜೊತೆ ಸ್ಪರ್ಧಿಸುತ್ತಿರುವ ಆ ಜೊತೆಗಾರ ಗಾಳಿಯಲ್ಲಿ ಅವುಗಳನ್ನು ತೇಲಿಬಿಡುವನು. ರಾತ್ರಿಯಾದಾಗ ತೋಳುಗಳಲ್ಲಿ ಮುಖ ಹುದುಗಿಸಿ, ತಾರೆಗಳ ಬೆಳಕಿನಲ್ಲಿ ತೇಲುವ ಕಾಗದದ ದೋಣಿಗಳ ಕನಸು ಕಾಣುವೆ. ಬುಟ್ಟಿಗಳಲ್ಲಿ ಕನಸುಗಳ ತುಂಬಿಕೊಂಡ ನಿದ್ರೆಯ ದೇವತೆಗಳು ಅವುಗಳಲ್ಲಿ ಚಲಿಸುತ್ತಿರುವರು.

ನಾಲ್ಕು

ನೀನು ನನ್ನನ್ನು ಕೊನೆಯಿಲ್ಲದಂತೆ ಮುದಗೊಳಿಸಿರುವೆ. ಈ ಒಡಕು ಪಾತ್ರೆ ಮತ್ತೆ ಮತ್ತೆ ಖಾಲಿಯಾಗುತ್ತಲೇ ಇದೆ, ನೀನು ತಾಜಾ ಬದುಕನ್ನು ಅದಕ್ಕೆ ತುಂಬುತ್ತಲೇ ಇರುವೆ. ಒಂಟಿ ತೂತಿನ ಈ ಪುಟ್ಟ ಕೊಳಲನ್ನು ನೀನು ಬೆಟ್ಟಗಳಲ್ಲಿ ಮರುಭೂಮಿಗಳಲ್ಲಿ ಒಯ್ಯುತ್ತಿರುವೆ, ನಿತ್ಯ ಹೊಸ ಮೃದುಮಧುರ ರಾಗಗಳಲ್ಲಿ ಉಸಿರೂಡುತ್ತಿರುವೆ. ನಿನ್ನ ಶಾಶ್ವತ ಸ್ಪರ್ಶದಲ್ಲಿ ಈ ಪುಟ್ಟ ಹೃದಯ ತನ್ನ ಎಲ್ಲೆಗಳ ದಾಟಿ ಅನಿರ್ವಚನೀಯ ಸಂತಸದಲ್ಲಿ ಮೀಯುತ್ತಿದೆ. ನನ್ನ ಪುಟ್ಟ ಕೈಗಳಿಗೇ ಕೊನೆಯಿಲ್ಲದೆ ಬಂದು ಬೀಳುತ್ತಿರುವ ಉಡುಗೊರೆಗಳು. ಯುಗಗಳೇ ಕಳೆದರೂ ನೀನು ಸುರಿಯುತ್ತಲೇ ಇರುವೆ, ಆದರಿನ್ನೂ ಜಾಗವಿದೆ ತುಂಬಲು.

ಐದು

ಹಗಲು ರಾತ್ರಿಗಳಲ್ಲಿ ನನ್ನ ಧಮನಿಗಳಲ್ಲಿ ಹರಿಯುತ್ತಿರುವ ಜೀವನದ ತೊರೆಯೇ ಜಗತ್ತಿನಲ್ಲಿ ಅಂತರ್ಯಾಮಿಯಾಗಿ ಲಯಬದ್ಧವಾಗಿ ನರ್ತಿಸುತ್ತ ಚಲಿಸುತ್ತಿದೆ. ಅಸಂಖ್ಯ ಹುಲ್ಲಿನ ದಳಗಳಲ್ಲಿ ಧರೆಯ ಧೂಳಾಗಿ ಮೇಲಕ್ಕೆದ್ದು ಕೂತಿರುವ, ಎಲೆಗಳಲ್ಲೂ ಹೂವುಗಳಲ್ಲೂ ತುರುಸಿನ ಅಲೆಯಾಗಿ ಹರಿದಿರುವ ಜೀವನವೇ ಅದು. ಕಡಲಿನ ತೊಟ್ಟಿಲಿನಲ್ಲಿ ತೂಗುಯ್ಯಾಲೆಯಾಡುತ್ತಿರುವ ಜನನ ಮರಣಗಳ ಭರತವಿಳಿತಗಳ ಜೀವನವೇ ಅದು. ಈ ಜೀವನದ ತೊರೆಯ ಸ್ಪರ್ಶದಿಂದಲೇ ನನ್ನ ತೋಳುಗಳು ವಿಜಯಿಯಾಗಿವೆ. ನನ್ನ ರಕ್ತದಲ್ಲಿ ಕುಣಿಯುತ್ತಿರುವ ಈ ಜೀವಶಕ್ತಿಯಿಂದಲೇ ನನ್ನ ಹೆಮ್ಮೆ ತಲೆಯೆತ್ತಿದೆ.

ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?

ಆರು

ನಿನ್ನ ಕೈಯಲ್ಲಿ ಸಮಯ ಕೊನೆಯಿಲ್ಲದ್ದು ದೊರೆಯೇ, ನಿಮಿಷಗಳ ಲೆಕ್ಕ ಹಾಕಲು ಅಲ್ಲಿ ಯಾರೂ ಇಲ್ಲ. ದಿನರಾತ್ರಿಗಳು ಕಳೆಯುತ್ತಿವೆ, ಯುಗಗಳು ಅರಳಿ ಮುದುಡುತ್ತಿವೆ ಹೂಗಳಂತೆ. ಕಾಯುವುದು ಹೇಗೆಂದು ನೀನು ಬಲ್ಲೆ. ಸಣ್ಣ ಕಾಡು ಹೂವೊಂದನ್ನು ನೇರ್ಪುಗೊಳಿಸುತ್ತ ನೀನು ಶತಮಾನಗಳ ಕಳೆಯಬಲ್ಲೆ. ಕಳೆಯಲು ನಮ್ಮ ಬಳಿ ಸಮಯವೇ ಇಲ್ಲ; ಒಂದು ಆಯ್ಕೆಗಾಗಿ ಕಾಯುವವರಂತೆ ನಾವು ತಡ ಮಾಡಲಾರದ ಬಡವರು. ಪರಚಾಡುವ ಮನುಷ್ಯರಿಗಾಗಿ ನನ್ನ ಸಮಯವೆಲ್ಲ ಸಂದುಹೋಗಿದೆ; ನಿನ್ನ ಮೇಜಿನ ಮೇಲೆ ಎಲ್ಲ ಕೊಡುಗೆಗಳು ಬರಿದಾಗಿವೆ. ದಿನದ ಕೊನೆಯಲ್ಲಿ ನಿನ್ನ ಬಾಗಿಲು ಎಲ್ಲಿ ಮುಚ್ಚುವುದೋ ಎಂಬ ಭೀತಿ; ಸಮಯವಿದೆ ಇನ್ನೂ ಎಂಬ ಆಸೆ. ಒಂದು ಪ್ರೀತಿಯ ಜೀವವನ್ನು ಕಳೆದುಕೊಂಡಾಗ ನಾನಿದನ್ನು ಮರೆಯದಿರಲಿ.

ಏಳು

ಕತ್ತಲು ಗಾಢವಾಗಿದೆ ಹಾಗೂ ಕಾಡಿಗೆ ಎಲ್ಲೆಯೇ ಇಲ್ಲ. ಲಕ್ಷಾಂತರ ಜನ ಅವರದೇ ರೀತಿಯಲ್ಲಿ ಹಾದುಹೋಗಿದ್ದಾರೆ ಇಲ್ಲಿ. ಕತ್ತಲಲ್ಲಿ ಮುನ್ನಡೆಯಲೇಬೇಕಿರುವ ವಿಧಿ ನಮಗಿದೆ; ಆದರೆ ಯಾರ ಜೊತೆಗೆ ಹಾಗೂ ಎಲ್ಲಿಗೆ ಎಂಬುದು ಮಾತ್ರ ನಿಗೂಢ. ಆದರೆ ನಮಗೊಂದು ನಂಬಿಕೆ- ಜೀವಮಾನದ ವರ ಯಾವುದೇ ಕ್ಷಣದಲ್ಲಿ ಮುಗುಳುನಗೆಯೊಂದಿಗೆ ಎದುರಾಗಬಹುದು. ಪರಿಮಳ, ಸ್ಪರ್ಶ, ಧ್ವನಿ, ಗೀತಗಳ ಪಲುಕು ನಮ್ಮ ತಾಕಿ ಪ್ರಫುಲ್ಲ ಪುಳಕಗಳ ಮೂಡಿಸುವುವು. ಒಂದು ಮಿಂಚಿನ ಬೆಳಕಿನಲ್ಲಿ ಕ್ಷಣ ಅವನ ಕಂಡು ಪ್ರೀತಿಗೆ ಬೀಳುವೆ. ಅವನ ಕರೆಕರೆದು, ನಿನ್ನ ದರ್ಶನಕ್ಕಾಗಿಯೇ ಇಷ್ಟು ದೂರ ಬಂದೆನೆಂದು ಕೂಗುವೆ. ಹತ್ತಿರ ಬಂದವರು ಅಷ್ಟೇ ವೇಗವಾಗಿ ಕತ್ತಲಲ್ಲಿ ಕರಗುವರು; ಅವರು ಇದ್ದರೋ ಇಲ್ಲವೋ ಎಂಬಂತೆ.

ಇದನ್ನೂ ಓದಿ: World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

Exit mobile version