Site icon Vistara News

Salman Rushdie: ಚೂರಿ ಇರಿತದ 6 ತಿಂಗಳ ಬಳಿಕ ಸಲ್ಮಾನ್‌ ರಶ್ದಿಯ ಹೊಸ ಕಾದಂಬರಿ ʼವಿಕ್ಟರಿ ಸಿಟಿʼ ಬಿಡುಗಡೆ

Salman Rushdie victory city

ಬೆಂಗಳೂರು: ದುಷ್ಕರ್ಮಿಯಿಂದ ಚೂರಿ ಇರಿತಕ್ಕೊಳಗಾದ ಆರು ತಿಂಗಳ ನಂತರ, ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ತಮ್ಮ ಹೊಸ ಕಾದಂಬರಿ ʻವಿಕ್ಟರಿ ಸಿಟಿʼಯನ್ನು ಪ್ರಕಟಿಸಿದ್ದಾರೆ. ಪಿತೃಪ್ರಧಾನ ಜಗತ್ತನ್ನು ವಿರೋಧಿಸಿ ಒಂದು ನಗರವನ್ನು ಆಳಲು ಹೊರಟ 14ನೇ ಶತಮಾನದ ಮಹಿಳೆಯ ಕಥೆಯನ್ನು ಹೊಂದಿರುವ ಮಹಾಕಾವ್ಯ ಮಾದರಿಯ ಕಾದಂಬರಿ ಇದಾಗಿದೆ.

ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಈ ಭಾರತೀಯ ಸಂಜಾತ ಲೇಖಕನ ಮೇಲೆ ಮತಾಂಧನೊಬ್ಬ ಚೂರಿಯಿಂದ ದಾಳಿ ಮಾಡಿದ್ದ. ಇದಕ್ಕೂ ಮುನ್ನವೇ ಈ ಕಾದಂಬರಿಯ ರಚನೆಯಾಗಿತ್ತು. ಮೂಲತಃ ಸಂಸ್ಕೃತದಲ್ಲಿ ಬರೆಯಲಾದ ಐತಿಹಾಸಿಕ ಮಹಾಕಾವ್ಯದ ಇಂಗ್ಲಿಷ್ ರೂಪ ಇದಾಗಿದೆ. ಈ ಬಹು ನಿರೀಕ್ಷಿತ ಕೃತಿಯ ನಾಯಕಿ, ಯುವ ಅನಾಥ ಹುಡುಗಿ ಪಂಪಾ ಕಂಪನ ಮಾಂತ್ರಿಕ ಶಕ್ತಿಗಳನ್ನು ಹೊಂದಿರುವ ದೇವತೆಯಿಂದ ರಕ್ಷಿತಳಾದವಳು. ಆಧುನಿಕ ಭಾರತದಲ್ಲಿ ಬಿಸ್ನಾಗ ನಗರವನ್ನು ಸ್ಥಾಪಿಸಿದವಳು. ಹಾಗೆಂದರೆ ʼವಿಜಯ ನಗರʼ ಎಂದರ್ಥ.

75 ವರ್ಷದ ಸಲ್ಮಾನ್‌ ರಶ್ದಿ ಅವರು ಅನಾರೋಗ್ಯದಿಂದಾಗಿ ತಮ್ಮ 15ನೇ ಕಾದಂಬರಿಯ ಬಹಿರಂಗ ಪ್ರಚಾರಕ್ಕೆ ಮುಂದಾಗುತ್ತಿಲ್ಲ. ಆದರೆ, ಅವರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅವರ ಏಜೆಂಟ್ ಆಂಡ್ರ್ಯೂ ವೈಲಿ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 12ರಂದು ನ್ಯೂಯಾರ್ಕ್‌ನ ಚೌಟೌಕ್ವಾದಲ್ಲಿ ಸಮಾವೇಶದಲ್ಲಿ ಮಾತನಾಡಲು ಮುಂದಾದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. ಇರಾನ್‌ನ ಧಾರ್ಮಿಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ರಶ್ದಿಯ “ದಿ ಸೆಟಾನಿಕ್ ವರ್ಸಸ್”ನಲ್ಲಿ ಧರ್ಮನಿಂದನೆ ಆಗಿದೆ ಎಂದು ಅವರ ತಲೆದಂಡಕ್ಕೆ ಫತ್ವಾ ಹೊರಡಿಸಿದ್ದರು. ನಂತರ ರಶ್ದಿ ಅನೇಕ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು. ಇವರ ಮೇಲೆ ದಾಳಿ ಮಾಡಿದ ಹಡಿ ಮ್ಯಾಟರ್‌ ಎಂಬ ವ್ಯಕ್ತಿ ಲೆಬನಾನ್‌ ಮೂಲದವನಾಗಿದ್ದಾನೆ.

ಇದನ್ನೂ ಓದಿ: Salman Rushdie attack | ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ, ವೆಂಟಿಲೇಟರ್‌ ತೆರವು

Exit mobile version