Site icon Vistara News

ಪುಸ್ತಕಗಳು ಮನುಕುಲ ಉಳಿಸಿಕೊಳ್ಳುವ ಜ್ಞಾನನಿಧಿಗಳು: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

book realese

ಸಪ್ನಾ ಬುಕ್‌ ಹೌಸ್‌ನಿಂದ 67 ಕೃತಿ ಲೋಕಾರ್ಪಣೆ

ಬೆಂಗಳೂರು: ಮಾನವ, ದಾನವನಾಗುವುದನ್ನು ತಪ್ಪಿಸುವಲ್ಲಿ ಒಳ್ಳೆಯ ಪುಸ್ತಕಗಳ ಕೊಡುಗೆ ಗಣನೀಯವಾದುದು. ಪುಸ್ತಕಗಳು ನಮ್ಮ ಚಿಂತನೆಗಳನ್ನು ರೂಪಿಸಿದ್ದು, ಇವುಗಳ ಸಂಗದಲ್ಲಿ ಸಮಯ ಕಳೆಯುವುದು ಚೇತೋಹಾರಿ ಎಂದು ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಪ್ರತಿಷ್ಠಿತ ಸಪ್ನಾ ಬುಕ್‌ ಹೌಸ್‌ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಹಾಗೂ 67 ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನನ್ನು ನಾಶ ಮಾಡಲು ರೋಬೋಟ್‌ಗಳು ಬೇಕಿಲ್ಲ. ಮನುಷ್ಯನೇ ಸಾಕು. ಮನುಕುಲವನ್ನು ಉಳಿಸಿಕೊಳ್ಳುವಂಥ ಜ್ಞಾನನಿಧಿಗಳು ನಮಗೆ ಬೇಕಿವೆ ಎಂದವರು ನುಡಿದರು.

ತಾಯಿನುಡಿಯಲ್ಲಿ ಓದುವ ಮಗುವಿನ ಬೌದ್ಧಿಕ ಬೆಳವಣಿಗೆ ಚುರುಕಾಗಿ ಆಗುತ್ತದೆ. ಆದ್ದರಿಂದ ಅದಕ್ಕೆ ಪೂರಕವಾದ ಮಕ್ಕಳ, ತಾರುಣ್ಯದ ಪುಸ್ತಕಗಳು ಬರಬೇಕಿವೆ ಎಂದು ಪುಸ್ತಕಗಳ ಲೋಕಾರ್ಪಣೆ ಮಾಡಿದ ಲೇಖಕಿ, ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಪುಸ್ತಕಗಳು ಕನ್ನಡ ಸಂಸ್ಕೃತಿಯನ್ನು ವಿಸ್ತರಿಸುವ ಕಾಯಕದಲ್ಲಿ ತೊಡಗಿಕೊಂಡಿವೆ. ಇಂದು ಬಿಡುಗಡೆಯಾದ ಪುಸ್ತಕಗಳು ನಾಡಿನ ಎಲ್ಲ ಕಡೆಯ ಲೇಖಕರನ್ನೂ ಹೊಂದಿದ್ದು, ಸಮಗ್ರ ನಾಡಿನ ಸಂಸ್ಕೃತಿಯನ್ನು ಪ್ರಾತಿನಿಧಿಕವಾಗಿ ಬಿಂಬಿಸಿವೆ. ಇಂಥ ಪರಂಪರೆ ಮುಂದುವರಿಯಲಿ ಎಂದು ಪುಸ್ತಕ ಪರಿಚಯ ಮಾಡಿದ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ ನುಡಿದರು.

ಇದನ್ನೂ ಓದಿ | Kannada Sahitya Sammelana | ಸಮ್ಮೇಳನದ ಪ್ರತಿನಿಧಿ ನೋಂದಣಿ, ಪುಸ್ತಕ, ವಾಣಿಜ್ಯ ಮಳಿಗೆಗಳ ನೋಂದಣಿಗೆ ಚಾಲನೆ

ಕನ್ನಡ ಪುಸ್ತಕ ಸಂಸ್ಕೃತಿ ಬೆಳವಣಿಗೆ ಕಾಣುತ್ತಿದ್ದು, ಇಷ್ಟೊಂದು ಕೃತಿಗಳು ಬೆಳಕು ಕಾಣುತ್ತಿರುವುದು ನಮ್ಮಲ್ಲಿ ಓದಿನ ರೂಢಿ ಬೆಳೆಯುತ್ತಿರುವುದನ್ನು ಸೂಚಿಸುತ್ತಿದೆ. ಇದನ್ನು ನಮ್ಮ ಹಾಗೂ ಮುಂದಿನ ತಲೆಮಾರಿನವರು ಪೋಷಿಸದಿದ್ದರೆ ಪಶ್ಚಾತ್ತಾಪಪಡಬೇಕಾಗುತ್ತದೆ ಎಂದು ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ನುಡಿದರು. ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಮಾತನಾಡಿ, ನಾಡಿನ ಪುಸ್ತಕೋದ್ಯಮಕ್ಕೆ ಸಪ್ನಾ ಬುಕ್‌ ಹೌಸ್‌ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಸಪ್ನಾ ಬುಕ್‌ ಹೌಸ್‌ನ ಸಂಸ್ಥಾಪಕರಾದ ನಿತಿನ್‌ ಶಾ, ವ್ಯವಸ್ಥಾಪಕರಾದ ದೊಡ್ಡೇಗೌಡ, ಹಿರಿಯ ಸಾಹಿತಿಗಳಾದ ಹಂಪನಾ, ಕಮಲಾ ಹಂಪನಾ, ಎಚ್‌ಎಸ್‌ವಿ, ಬಿಆರ್‌ ಲಕ್ಷ್ಮಣರಾವ್‌, ಟಿಎನ್‌ ಸೀತಾರಾಂ, ಮುಂತಾದವರಿದ್ದರು. ಕುಂವೀ, ಜೋಗಿ, ಎಚ್‌ಎಸ್‌ವಿ, ವಿಶ್ವೇಶ್ವರ ಭಟ್‌, ದೊಡ್ಡರಂಗೇಗೌಡ, ಬಿಆರ್‌ಎಲ್‌, ರಾಘವೇಂದ್ರ ಪಾಟೀಲ, ಸುಧಾ ಮೂರ್ತಿ, ಜಗದೀಶ ಶರ್ಮ ಸೇರಿದಂತೆ 67 ಲೇಖಕರ ಕೃತಿಗಳು ಲೋಕಾರ್ಪಣೆಗೊಂಡವು.

ಇದನ್ನೂ ಓದಿ | Kannada books | ಪುಸ್ತಕ ಖರೀದಿಯ ಬಾಕಿ ಮೊತ್ತ ಬಿಡುಗಡೆಗೆ ಕ್ರಮ ಕೈಗೊಳ್ಳಿ; ಬಿಎಸ್‌ವೈಗೆ ಪ್ರಕಾಶಕರ ಸಂಘ ಮನವಿ

Exit mobile version