Site icon Vistara News

ಸಂಡೇ ರೀಡ್:‌ ಪ್ರಕೃತಿಯೇ ನಮ್ಮ ಮನೆ ಅನ್ನುವ ರಸ್ಕಿನ್‌ ಬಾಂಡ್

Ruskin bond

ಭಾರತೀಯ ಸಾಹಿತ್ಯಪ್ರಿಯರ ಪಾಲಿಗೆ ರಸ್ಕಿನ್‌ ಬಾಂಡ್‌ ದೊಡ್ಡ ಹೆಸರು. ನೂರಾರು ಸಣ್ಣ ಕಥೆಗಳು, ಪ್ರಬಂಧಗಳು, ಕಾದಂಬರಿಗಳು, ಮಕ್ಕಳ ಕತೆಗಳು ಹೀಗೆ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕೊಡುಗೆ ನೀಡಿದ ಅಪೂರ್ವ ಸಾಹಿತಿ ರಸ್ಕಿನ್‌ ಬಾಂಡ್.‌ ೧೯೯೯ರಲ್ಲಿ ಪದ್ಮಶ್ರೀ, ೨೦೧೪ರಲ್ಲಿ ಪದ್ಮಭೂಷಣ ಪಡೆದ ಇವರ ʻದಿ ರೂಂ ಆನ್‌ ದಿ ರೂಫ್‌ʼ, ʻಅವರ್‌ ಟ್ರೀಸ್‌ ಸ್ಟಿಲ್‌ ಗ್ರೋ ಇನ್‌ ಡೆಹ್ರಾʼ, ʻದಿ ಬ್ಲೂ ಅಂಬ್ರೆಲ್ಲಾʼ, ʻಅ ಫೈಟ್‌ ಆಫ್‌ ಪಿಜನ್ಸ್‌ʼ ಮತ್ತಿತರ ಕೃತಿಗಳು ಮಹತ್ತರವಾದುದು. ಇವರ ಕೃತಿಗಳು ಕಲಿಸುವ ಬದುಕಿನ ಪಾಠಗಳು ಹಲವು. ಅವರು ಕೃತಿಗಳ ಮೂಲಕ ಹೇಳಿದ ಬದುಕಿನ ಪಾಠಗಳು ಈ ಕೆಳಗಿವೆ.

. ಪ್ರಕೃತಿಯೇ ನಮ್ಮ ಮನೆ!:  ಬಾಂಡ್‌ ಅವರ ೧೯೯೦ರ ಕೃತಿ ʻಡಸ್ಟ್‌ ಆನ್‌ ದಿ ಮೌಂಟೇನ್‌ʼ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಆಧುನೀಕರಣದಿಂದಾಗಿ ಅರಣ್ಯನಾಶದಂತಹ ಸಮಸ್ಯೆ ಇಂದು ಪರ್ವತ ಪ್ರದೇಶಗಳಲ್ಲಿ ಎಷ್ಟು ಹೆಚ್ಚಿದೆ ಎಂಬುದು ಹಾಗೂ ನಾವು ಇಂದು ಪ್ರಕೃತಿಯೆಡೆಗೆ ಮರಳುವ ಅಗತ್ಯ ಅಷ್ಟೇ ಹೆಚ್ಚಿದೆ ಎಂಬ ಜಿಜ್ಞಾಸೆಯನ್ನು ತಮ್ಮ ಕೃತಿಯ ಮೂಲಕ ತಂದಿದ್ದಾರೆ. ಒಮ್ಮೆ ನೀವು ಪರ್ವತದೊಂದಿಗೆ ಕೊಂಚ ಕಾಲವಾದರೂ ಬದುಕಿದ್ದೀರಿ ಎಂದಾದಲ್ಲಿ ನೀವು ಮತ್ತೆ ಮತ್ತೆ ಪರ್ವತಗೆಡೆಗೆ ಮರಳಲೇ ಬೇಕಾಗುತ್ತದೆ ಎಂದು ಬಾಂಡ್‌ ಹೇಳಿದ್ದಾರೆ. ಬಾಂಡ್‌ ಅವರ ವೈಯಕ್ತಿಕ ಬದುಕೂ ಅವರ ಬರವಣಿಗೆಯ ಹಾಗೆ. ಪ್ರಕೃತಿಯೇ ನಮ್ಮ ಮನೆಯೆಂದು ಭಾವಿಸುವ ಅವರ ನೀತಿಯಂತೆಯೇ ಅವರನ್ನು ಜೀವನ ಪರ್ಯಂತ ಮಸ್ಸೂರಿಯಲ್ಲಿ ಕಳೆಯುವ ಮೂಲಕ ಸಾಬೀತು ಪಡಿಸಿದ್ದಾರೆ.

೨. ಉತ್ಕೃಷ್ಟತೆಗಾಗಿ ಹಂಬಲಿಸಿ: ಬದುಕಿನಲ್ಲಿ ಉತ್ಕೃಷ್ಟತೆಗಾಗಿ ನಾವು ಹಂಬಲಿಸಬೇಕು. ಉತ್ಕೃಷ್ಟವಾಗಿಲ್ಲದರ ಜೊತೆ ನಮ್ಮನ್ನು ನಾವು ರಾಜಿ ಮಾಡಿಕೊಳ್ಳಬಾರದು. ಇದು ಬಾಂಡ್‌ ಅವರ ೧೯೫೬ರ ಕಾದಂಬರಿ ʻದಿ ರೂಂ ಆನ್‌ ದಿ ರೂಫ್‌ʼನಲ್ಲಿ ನಾವು ಕಂಡುಕೊಳ್ಳಬೇಕಾದ ಸತ್ಯ. ಈ ಕೃತಿಯ ಪಾತ್ರ ರಸ್ಟಿ ಎಂಬ ಹದಿನೇಳರ ಹರೆಯದ ಆಂಗ್ಲೋ ಇಂಡಿಯನ್‌ ಹುಡುಗ ತನ್ನ ಭಾರತೀಯ ಮಿತ್ರರ ಜೊತೆ ವಾಸಿಸಲು ಮನೆ ಬಿಡುತ್ತಾನೆ. ಈ ಹುಡುಗನ ಮೂಲಕ ಬಾಂಡ್‌ ಆಡಿಸುವ ಮಾತುಗಳು ಇಲ್ಲಿ ಪ್ರಮುಖವಾಗುತ್ತದೆ. ʻನಾನು ಯಾರಾದರೊಬ್ಬ ಅಥವಾ ಯಾರೂ ಆಗದಿರಲು ಇಷ್ಟಪಡುತ್ತೇನೆ. ಆದರೆ, ಯಾರು ಬೇಕಾದರೊಬ್ಬ ಮಾತ್ರ ಆಗಲಾರೆʼ ಎಂಬ ಮಾತುಗಳು ಉತ್ಕೃಷ್ಟತೆಗೆ ಹಂಬಲಿಸುವ ಎಲ್ಲ ಜೀವಗಳಿಗೂ ತಟ್ಟುತ್ತದೆ.

೩. ಆತ್ಮವಿಶ್ವಾಸದ ಮುಂದೆ ಯಾವ ಅಡೆತಡೆಯೂ ದೊಡ್ಡದಲ್ಲ!: ಮಕ್ಕಳಾಗಿ ನಾವು ಕಲಿಯುವ ಬದುಕಿನ ಪಾಠವಿದು. ಬಾಂಡ್‌ ಅವರ ೧೯೮೫ರ ಕಾದಂಬರಿ ʻಗೆಟ್ಟಿಂಗ್‌ ಗ್ರಾನೀಸ್‌ ಗ್ಲಾಸಸ್‌ʼ ಇದೇ ವಿಷಯವನ್ನು ಹೇಳುತ್ತದೆ. ಅಜ್ಜಿಯ ಹಳೆಯ ಗೀರುಬಿದ್ದ ಕನ್ನಡಕವನ್ನು ಬಿಟ್ಟು ಹೊಸ ಕನ್ನಡಕ ಖರೀದಿಸಲು ಹೋಗುವ ಕಥೆಯಿದು. ಆದರೆ, ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಪ್ರೀತಿಯಿಂದ ಮಾಡಬೇಕಾದ್ದೆಲ್ಲವನ್ನು ತನ್ನ ಕಣ್ಣಿನ ತೊಂದರೆಯಿದ್ದೂ ಮಾಡುವ ಅಜ್ಜಿಯ ಗುಣ ಈ ಸಂದೇಶವನ್ನು ಓದುಗರಿಗೆ ಸಮರ್ಥವಾಗಿ ದಾಟಿಸುತ್ತದೆ.

೪. ಅರಣ್ಯನಾಶದ ದುಷ್ಪರಿಣಾಮಗಳು: ʻಒಂದು ಮರ ಬಿದ್ದರೆ ಎರಡು ಸಸಿ ನೆಡಿ. ಹೀಗೆ ಮಾಡದಿದ್ದರೆ ಒಂದು ದಿನ ಕಾಡುಗಳೇ ಇಲ್ಲವಾಗಿ ನಾವೆಲ್ಲ ಮರುಭೂಮಿಯಲ್ಲಿ ವಾಸಿಸಬೇಕಾಗುತ್ತದೆʼ ಇದು ಬಾಂಡ್‌ ಅವರ ೨೦೦೯ರ ಕೃತಿ ʻದಿ ರೂಂ ಆಫ್‌ ಮೆನೀ ಕಲರ್ಸ್‌ʼನಲ್ಲಿ ಬರುವ ಸಾಲುಗಳು. ಮನುಷ್ಯನ ದುರಾಸೆಯಿಂದಾಗಿ ಇಂದು ಪ್ರಕೃತಿ ಅನುಭವಿಸುತ್ತಿರುವ ತೊಂದರೆಗಳೆಲ್ಲವೂ ಈ ಕೃತಿಯಲ್ಲಿದೆ.

೫. ಬದಲಾವಣೆಯೇ ಬದುಕಿನ ಸೌಂದರ್ಯ: ʻಬದುಕಿನ ಸೌಂದರ್ಯ ಅಡಗಿರುವುದು ಬದಲಾವಣೆಯಲ್ಲಿʼ ಈ ಸಾಲುಗಳಿರುವುದು ಬಾಂಡ್‌ ಅವರ ೧೯೬೬ರ ಕೃತಿ ʻದಿ ಹಿಡನ್‌ ಪೂಲ್‌ʼನಲ್ಲಿ. ಹೊಸ ಬಣ್ಣ, ಹೊಸ ಸಂಗೀತ, ಹೊಸ ಬದುಕು ನೀಡುವ ಖುಷಿ ಬದುಕಿಗೆ ಅಗತ್ಯ ಬೇಕಾದವುಗಳು. ಈ ಕೃತಿಯಲ್ಲಿ ಬರುವ ಲಾರಿ ಎಂಬ ಆಂಗ್ಲ ಹುಡುಗ ಅನಿಲ್‌ ಎಂಬ ಭಾರತೀಯ ಹುಡುಗನ ಜೊತೆ ಮಾಡುವ ಸ್ನೇಹ ಇವರನ್ನು ಎಲ್ಲಿಂದೆಲ್ಲಿಗೋ ಕೊಂಡೊಯ್ಯುತ್ತದೆ. ಸಣ್ಣ ಹಳ್ಳಿಯ ಈ ಹುಡುಗರು ಯಾರೂ ಹೋಗದ ಹಿಮಾಲಯದ ನೀರ್ಗಲ್ಲುಗಳನ್ನು ಕಂಡು ಬರುವ ಮೈನವಿರೇಳಿಸುವ ಕಥೆಯಿದು. ಬದುಕು ಅಚಾನಕ್‌ ತಂದೊಡ್ಡುವ ಬದಲಾವಣೆಗಳನ್ನು ಕತೆಯ ಮೂಲಕ ಹೇಳುತ್ತಾರೆ.

ಇದನ್ನೂ ಓದಿ: Book Exerpt: ಅವನ ನೋಟ ಕಲೆಗೆ ಮೆಚ್ಚುಗೆಯೋ, ನನ್ನ ಮೇಲಿನ ಪ್ರೀತಿಯೋ?

Exit mobile version