Site icon Vistara News

Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ

jogi book cheers

ಅಂತೋಣಿ ನೀರಿನಲ್ಲಿ ಮುಳುಗಿ ಸಾಯುವುದಕ್ಕೆ ಮೊದಲು ಏನು ಹೇಳಿದ ಅನ್ನುವುದು ಮಹದೇವನಿಗೆ ಒಗಟಾಗಿಯೇ ಉಳಿದಿದೆ. ಮೂರನೇ ಸಲ ನೀರಿನಿಂದ ಮೇಲೇಳುವ ಹೊತ್ತಿಗೆ ಅಂತೋಣಿಯ ಶ್ವಾಸಕೋಶದೊಳಗೆ ನೀರು ಹೊಕ್ಕಿತ್ತು. ಅವನು ಕೈ ಮೇಲಕ್ಕೆತ್ತಿ ಮಹದೇವನ ಕಡೆ ಕಣ್ಣು ತಿರುಗಿಸಿ ಏನೋ ಹೇಳಿದ. ಅದು ನೀರೊಳಗೆ ಉಸಿರುಬಿಟ್ಟಂತೆ ಗುಳುಗುಳಗುಳುಗುಳ ಸದ್ದು ಮಾಡಿತೇ ಹೊರತು, ಮಹದೇವನಿಗೆ ಒಂಚೂರೂ ಅರ್ಥವಾಗಿರಲಿಲ್ಲ. ಅದಾದ ಕೂಡಲೇ ಮತ್ತೊಂದು ಸಲ ನೀರಲ್ಲಿ ಮುಳುಗಿದ ಅಂತೋಣಿ ಮೇಲೆ ಬರಲಿಲ್ಲ.

ಈ ಘಟನೆ ನಡೆದಾಗ ಮಹದೇವನಿಗೆ ಹತ್ತೊಂಬತ್ತು, ಅಂತೋಣಿಗೆ ಇಪ್ಪತ್ತೇಳು. ಮಹದೇವ ಹದಿನಾಲ್ಕು ವರ್ಷದವನಿದ್ದಾಗ ಅವನಿಗೆ ಅಂತೋಣಿ ಸಿಕ್ಕಿದ್ದ. ಮಹದೇವನಿಗೆ ಅಂತೋಣಿ ಇಷ್ಟವಾಗಲಿಕ್ಕೆ ಕಾರಣ ಅವನು ಹೇಳುತ್ತಿದ್ದ ಪೋಲಿ ಕತೆಗಳು. ಅವನು ಹೊಟ್ಟೆಯೊಳಗೆ ಅಡಗಿಸಿಟ್ಟುಕೊಂಡು ತೋರಿಸುತ್ತಿದ್ದ ಬೆತ್ತಲೆ ಪುಸ್ತಕ. ಅದನ್ನು ಮಹದೇವನ ಕಣ್ಣೆದುರು ಹಿಡಿದು ಅಂತೋಣಿ ಮಹದೇವನಿಗೆ ಹೊಟ್ಟೆ ತೊಳಸುವಂತೆ ಮಾಡುತ್ತಿದ್ದ. ಆದರೂ ಮತ್ತೆ ಮತ್ತೆ ಅದನ್ನು ನೋಡಬೇಕು ಅಂತ ಮಹದೇವನಿಗೆ ಅನ್ನಿಸುತ್ತಿತ್ತು.

ಮಹದೇವ ಶಾಲೆ ಮುಗಿಸಿ ಬರುವಾಗೆಲ್ಲ ಅಂತೋಣಿ ಸಿಗುತ್ತಿದ್ದ. ಶಾನುಭೋಗರ ಮನೆಯ ಗೇಟಿನ ಪಕ್ಕದಲ್ಲಿರುವ ಕಲ್ಲುಬೆಂಚಿನಲ್ಲಿ ಬೀಡಿ ಸೇದುತ್ತಾ ಕೂತಿರುತ್ತಿದ್ದ. ಆ ದಾರಿಯಲ್ಲಿ ಮಹದೇವನನ್ನು ಬಿಟ್ಟರೆ ಮತ್ಯಾರೂ ಬರುತ್ತಿರಲಿಲ್ಲ. ಅಂತೋಣಿಗೂ ಮಾತಾಡಿಸಲು ಯಾರೂ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ ಅಂತೋಣಿ ದಾರಿಯಲ್ಲಿಯೇ ಕಾಯುತ್ತಾ ಇರುತ್ತಿದ್ದ. ಮಹದೇವ ಬರುತ್ತಿದ್ದಂತೆ ಅವನ ಜತೆಗೇ ಹೆಜ್ಜೆ ಹಾಕುತ್ತಿದ್ದ. ಇಬ್ಬರೂ ಮಾತಾಡುತ್ತಾ ಮಹದೇವನ ಮನೆಯ ಕಡೆ ನಡೆಯುತ್ತಿದ್ದರು.

ಮಹದೇವನ ಮನೆ ಶಾಲೆಯಿಂದ ಮೂರು ಮೈಲು ದೂರವಿತ್ತು. ಅಂತೋಣಿಯ ಮನೆ ಮಹದೇವನ ಮನೆಗಿಂತ ಒಂದು ಮೈಲು ಮೊದಲೇ ಬರುತ್ತಿತ್ತು. ಆದರೂ ಅಂತೋಣಿ ಅವನ ಜತೆಗೇ ಹೋಗಿ, ಮಹದೇವನನ್ನು ಮನೆ ಸೇರಿಸಿಯೇ ವಾಪಸ್ಸು ಬರುತ್ತಿದ್ದ. ಹಾಗಂತ ಮಹದೇವನ ಮನೆಗಾಗಲೀ, ಮನೆಯ ಹತ್ತಿರವಾಗಲೀ ಸುಳಿಯುತ್ತಿರಲಿಲ್ಲ. ಇನ್ನೇನು ಮನೆ ಕಣ್ಣಿಗೆ ಬೀಳುತ್ತದೆ ಅನ್ನುವಷ್ಟರಲ್ಲಿ ವಾಪಸ್ಸು ಹೊರಟು ಹೋಗುತ್ತಿದ್ದ.

ಮೊದಲ ದಿನ ಅಂತೋಣಿಯನ್ನು ನೋಡಿದಾಗ ಮಹದೇವನಿಗೆ ಹೆದರಿಕೆಯಾಗಿತ್ತು. ಶಾನುಭೋಗರ ಮನೆಯ ಕಲ್ಲುಬೆಂಚಿನಲ್ಲಿ ಕೂತು ಬೀಡಿ ಸೇದುತ್ತಿದ್ದ ಅಂತೋಣಿಯನ್ನು ದೂರದಿಂದಲೇ ನೋಡಿ, ತಲೆತಗ್ಗಿಸಿಕೊಂಡು ಹೊರಟ ಮಹದೇವನನ್ನು ಅಂತೋಣಿ ಚಪ್ಪಾಳೆ ತಟ್ಟಿ ಕರೆದಿದ್ದ. ಮಹದೇವ ಭಯದಿಂದ ಹಿಂತಿರುಗಿ ನೋಡಿರಲಿಲ್ಲ. ಅವನು ಮತ್ತೊಮ್ಮೆ ಚಪ್ಪಾಳೆ ತಟ್ಟುತ್ತಿದ್ದಂತೆ ಕೊಂಚ ವೇಗವಾಗಿ ನಡೆದು, ಅವನಿಗೆ ಕಾಣುವುದಿಲ್ಲ ಅಂತ ಅಂದಾಜಾಗುತ್ತಿದ್ದಂತೆ ಓಡಲು ಶುರುಮಾಡಿದ್ದ. ಮನೆಯ ತನಕವೂ ಓಡುತ್ತಾ ಹೋಗಿದ್ದ.

ಮಾರನೇ ದಿನ ಶಾಲೆಯಿಂದ ಬರುವಾಗ ಅವನು ಸಿಗುತ್ತಾನೇನೋ ಅನ್ನುವ ಭಯದಲ್ಲಿಯೇ ಇದ್ದ ಮಹದೇವನಿಗೆ ಕಲ್ಲು ಬೆಂಚಿನ ಮೇಲೆ ಕೂತಿದ್ದ ಅಂತೋಣಿ ಕಣ್ಣಿಗೆ ಬಿದ್ದಿರಲಿಲ್ಲ. ಆದರೂ ಯಾವುದಕ್ಕೂ ಅಲ್ಲಿಂದ ಬೇಗ ಕಣ್ಮರೆಯಾಗಬೇಕು ಅಂತ ಓಡುವುದಕ್ಕೆ ಶುರುಮಾಡಿದ್ದ. ಅಂತೋಣಿ ಅವನಿಗೋಸ್ಕರ ಮುಂದಿನ ತಿರುವಿನಲ್ಲಿ ಕಾಯುತ್ತಿದ್ದ. ಓಡುತ್ತಿದ್ದ ಮಹದೇವನ ಕೈ ಹಿಡಿದು ನಿಲ್ಲಿಸಿದ್ದ. ಓಡುತ್ತಿದ್ದವನನ್ನು ಥಟ್ಟನೆ ಹಿಡಿದು ನಿಲ್ಲಿಸಿದ ರಭಸಕ್ಕೆ ಮೊಳಕೈಯ ಕೀಲು ತಪ್ಪಿದಷ್ಟು ನೋವಾಗಿತ್ತು. ಭಯದಿಂದ ಅಂತೋಣಿಯನ್ನು ನೋಡುತ್ತಾ ಇನ್ನೇನು ಅತ್ತುಬಿಡಬೇಕು ಅನ್ನುವಷ್ಟರಲ್ಲಿ ಅಂತೋಣಿ ಅವನನ್ನು ಮಾತಾಡಿಸಿದ್ದ.

ಅಂತೋಣಿ ಅರ್ಧತೆಂಗಿನಮರದಷ್ಟು ಎತ್ತರ ಇದ್ದ. ಕಪ್ಪು ಬೆಲ್ ಬಾಟಮ್ ಪ್ಯಾಂಟು ಹಾಕಿದ್ದ, ಅಲ್ಲಲ್ಲಿ ಬಣ್ಣಗೆಟ್ಟ ಕೆಂಪು ಬಣ್ಣದ ಶೂ ಹಾಕಿಕೊಂಡಿದ್ದ. ಎಡಗೈಯಲ್ಲಿ ಹೊಳೆಯುವ ವಾಚು, ಅರ್ಧಹೊಟ್ಟೆ ಕಾಣುವಂತೆ ಹಾಕಿಕೊಂಡ ಶರಟು. ಅದರೊಳಗಿನಿಂದ ಇಣುಕುತ್ತಿದ್ದ ಬೆಳ್ಳಿ ಸರವನ್ನೆಲ್ಲ ನೋಡುತ್ತದ್ದಂತೆ ಅವನ ಹತ್ತಿರ ಚೂರಿಯೂ ಇರಬಹುದು ಅಂತ ಮಹದೇವನಿಗೆ ಅನುಮಾನ ಬಂದಿತ್ತು. ಚಂದಮಾಮದಲ್ಲಿ ಓದಿದ ಕಣಿವೆಯ ದರೋಡೆಕೋರರ ನಾಯಕನಂತೆ ಕಾಣುತ್ತಿದ್ದ ಅಂತೋಣಿಯ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಂತೆ ಅಂತೋಣಿ `ಎಂಥದಾ.. ನೀನು ಹೆದರುವುದು ಎಂಥಕಾ’ ಅಂತ ಥೇಟ್ ಕೊಂಕಣಿ ಮಾತಾಡುವ ಶೈಲಿಯಲ್ಲಿ ಕೇಳಿದ್ದ. ಅಂತೋಣಿಯ ಭೀಮಕಾಯಕ್ಕೆ ತಕ್ಕ ಸ್ವರ ಅವನಿಗೆ ಇರಲಿಲ್ಲ. ಮಾತು ಮೃದುವಾಗಿಯೂ ರಾಗವಾಗಿಯೂ ಇತ್ತು. ಅದನ್ನು ಕೇಳುತ್ತಿದ್ದಂತೆ ಮಹದೇವನ ಭಯ ಅರ್ಧ ಹೊರಟುಹೋಗಿತ್ತು.

ಆವತ್ತಿನಿಂದ ಮಹದೇವನ ಸಂಜೆಯ ಸಂಗಾತಿಯಾಗಿ ಅಂತೋಣಿ ಜತೆಯಾಗುತ್ತಿದ್ದ. ಮಹದೇವನ ಜಗತ್ತನ್ನು ವಿಸ್ತರಿಸಿದ್ದೇ ಅಂತೋಣಿ. ಬೆಂಗಳೂರಿನಲ್ಲಿರುವ ಡಬಲ್ ಡೆಕರ್ ಬಸ್ಸು, ಮಂಗಳೂರಿನ ಬಂದರಿಗೆ ಬಂದು ಹಡಗನ್ನೇ ಮಗುಚಿಹಾಕಿದ ತಿಮಿಂಗಿಲ, ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಇನ್ನೇನು ರಥ ನೆಲಕ್ಕೆ ಬೀಳಬೇಕು ಅನ್ನುವಷ್ಟರಲ್ಲಿ ಓಡಿ ಬಂದು ಬೆನ್ನುಕೊಟ್ಟು ಎತ್ತಿದ ಉಜಿರೆಯ ಆನೆಯ ಕತೆ, ಹಡಗು ಬಂದಾಗ ಎದ್ದು ದಾರಿಕೊಡುವ ಇಂಗ್ಲೆಂಡಿನ ಸೇತುವೆ -ಹೀಗೆ ನೂರೆಂಟು ಸಂಗತಿಗಳು ಅಂತೋಣಿಗೆ ಗೊತ್ತಿದ್ದವು.

ಇವೆಲ್ಲದರ ಜತೆಗೆ ಅಂತೋಣಿ ವಿಚಿತ್ರವಾದ ಕತೆಗಳನ್ನೂ ಹೇಳುತ್ತಿದ್ದ. ಮಡಿಕೇರಿಯಲ್ಲಿರುವ ಕಾಲು ಕಳೆದುಕೊಂಡ ಸೈನಿಕನ ಹೆಂಡತಿ, ಮತ್ತೊಬ್ಬ ಗೆಳೆಯನ ಜತೆ ಓಡಾಡುತ್ತಿದ್ದದ್ದು. ಅದು ಗಂಡನಿಗೆ ಗೊತ್ತಾಗುತ್ತಿದ್ದಂತೆ ಅವಳು ಗುಡ್ಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು, ತಾನು ಸಾಯುವಾಗ ಅವನನ್ನೂ ಜತೆಗೇ ಎಳೆದುಕೊಂಡು ಬೆಟ್ಟದಿಂದ ಹಾರಿದ್ದು- ಇದನ್ನೆಲ್ಲ ಕಣ್ಮುಂದೆ ನಡೆದಂತೆ ಹೇಳುತ್ತಿದ್ದ. ಅದನ್ನೆಲ್ಲ ಮಹದೇವ ನಿಜ ಎಂದೇ ನಂಬುತ್ತಿದ್ದ. ಎಷ್ಟೋ ವರ್ಷಗಳ ನಂತರವಷ್ಚೇ ಮಹದೇವನಿಗೆ ಅಂತೋಣಿ ಹೇಳಿದ್ದು ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಕತೆ ಅಂತ ಗೊತ್ತಾಗಿತ್ತು.

ಅಂತೋಣಿಗೆ ಕತೆಗೂ ಬದುಕಿಗೂ ವ್ಯತ್ಯಾಸವೇ ಇರಲಿಲ್ಲ. ತಾನು ನೋಡಿದ, ಓದಿದ, ಕೇಳಿದ ಕತೆಯನ್ನೆಲ್ಲ ನಡೆದಿದೆ ಎಂಬಂತೆ ಅವನು ಹೇಳುತ್ತಿದ್ದುದನ್ನು ಬೆರಗಿನಿಂದ ಕೇಳಿಸಿಕೊಳ್ಳುತ್ತಾ ಮಹದೇವನ ಒಳಗೊಂದು ಹೊಸದೇ ಲೋಕ ಸೃಷ್ಟಿಯಾಗುತ್ತಾ ಹೋಯಿತು.

ಮಹದೇವನ ಮನೆ ಇದ್ದದ್ದು ಊರಿನಿಂದ ಹೊರಗೆ. ಅವನ ಅಪ್ಪ ಶಾನುಭೋಗರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾನುಭೋಗರ ಮುಂದೆ ಕೈ ಮುಗಿದು ನಿಲ್ಲುತ್ತಿದ್ದ ಅಪ್ಪನನ್ನು ಮಹದೇವ ನೋಡಿದ್ದ. ಶಾನುಭೋಗರ ಬಗ್ಗೆ ಮಹದೇವನಿಗೂ ಆಗ ಆರಾಧನಾ ಭಾವ ಇತ್ತು. ಅವರು ದೇವರ ಪ್ರತಿರೂಪ ಎಂದೇ ಅವನೂ ನಂಬಿದ್ದ.

ಅಂಥ ಭಾವನೆಯನ್ನು ಕಿತ್ತು ಎಸೆದಿದ್ದ ಅಂತೋಣಿ.  

ದೇವರ ಕಣ್ಣಲ್ಲಿ ಎಲ್ಲರೂ ಸಮಾನರು. ಎಲ್ಲಾ ಮನುಷ್ಯರೂ ಒಂದೇ. ಇಲ್ಲಿ ದೊಡ್ಡವರು ಸಣ್ಣವರು ಅಂತ ಆಗುವುದು ದುಡ್ಡಿನಿಂದ. ಜಾಸ್ತಿ ದುಡ್ಡಿದ್ದವನು ದೊಡ್ಡ ಮನುಷ್ಯ. ಅವನಿಗೆ ಎಲ್ಲರೂ ನಮಸ್ಕಾರ ಮಾಡುತ್ತಾರೆ. ನೀನೇ ದೇವರು ಅನ್ನುತ್ತಾರೆ. ಆದರೆ ಇದು ನಮ್ಮ ಧರ್ಮದಲ್ಲಿ ಮಾತ್ರ. ನಿಮ್ಮ ಧರ್ಮದಲ್ಲಿ ಎಷ್ಟು ದುಡ್ಡು ಸಂಪಾದನೆ ಮಾಡಿದರೂ ಜಾತಿಯನ್ನು ಕಳೆದುಕೊಳ್ಳಲಿಕ್ಕೆ ಆಗುವುದಿಲ್ಲ. ನಿನ್ನ ಜಾತಿ ಯಾವುದು ಅಂತ ಕೇಳುತ್ತಾರೆ. ನಿನ್ನನ್ನು ಗರ್ಭಗುಡಿಯ ಒಳಗೆ ಬಿಡುವುದಿಲ್ಲ. ಸ್ವಂತ ಸಾಧನೆಯಿಂದ ಸಮಾನತೆ ಸಾಧಿಸುವುದಕ್ಕೆ ನಿಮ್ಮ ಧರ್ಮದಲ್ಲಿ ಅವಕಾಶ ಇಲ್ಲ. ನಮ್ಮಲ್ಲಿ ಅದು ಸಾಧ್ಯ ಉಂಟು. ನಾನು ಮನಸ್ಸು ಮಾಡಿದರೆ ನಮ್ಮ ಚರ್ಚಿನ ಫಾದರ್ ಆಗಬಹುದು. ನೀನು ದೇವಸ್ಥಾನದ ಪೂಜಾರಿ ಆಗಲಿಕ್ಕೆ ಸಾಧ್ಯ ಇಲ್ಲ. ಹಾಗೇನಾದರೂ ಆಗಬೇಕಾದರೆ ನೀನು ಮತ್ತೊಂದು ಸಲ ಹುಟ್ಟಿ ಬರಬೇಕು. ಅದೂ ಅವರ ಜಾತಿಯಲ್ಲಿ ಹುಟ್ಟಬೇಕು.

ಹೀಗೆ ಮಾತಾಡುತ್ತಿದ್ದ ಅಂತೋಣಿಯನ್ನು ಕ್ರಮೇಣ ಮಹದೇವ ಆರಾಧಿಸಲು ಆರಂಭಿಸಿದ್ದ. ತನಗೆ ಬೇಕಾಗಿದ್ದ ಬಿಡುಗಡೆ ಅವನಿಂದ ಸಿಕ್ಕಿದೆ ಅಂತ ಮಹದೇವನಿಗೆ ಅನ್ನಿಸತೊಡಗಿತ್ತು. ಶಾಲೆಯಲ್ಲಿ ಕಲಿಯುತ್ತಿದ್ದ ಪಾಠ ಅರ್ಥವಾಗಲು ಬೇಕಾದ ಬದುಕಿನ ಜ್ಞಾನವನ್ನು ಅಂತೋಣಿ ಹೇಳಿಕೊಡುತ್ತಿದ್ದ. ಅಂತೋಣಿ ಇಲ್ಲದೇ ಹೋಗಿದ್ದರೆ ತಾನು ಹೇಗಿರುತ್ತಿದ್ದೆ ಅನ್ನುವುದನ್ನು ಮಹದೇವನಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

-2-

ಮಹದೇವ ಮುಂಬಯಿಗೆ ಬಂದು ಮೂವತ್ತು ವರ್ಷಗಳಾದ ನಂತರವೂ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಅವನಿಗೆ ಅಂತೋಣಿ ನೆನಪಾಗುತ್ತಾನೆ. ಮನಸ್ಸಿನಲ್ಲಿ ಅಂತೋಣಿಯನ್ನು ನೆನೆದೇ ಅವನು ಇಕ್ಕಟ್ಟಿನ ಸಂದರ್ಭಗಳಲ್ಲಿ ಒಂದು ತೀರ್ಮಾನಕ್ಕೆ ಬರುವುದು. ಹಾಗೆ ಮಾಡಿದಾಗೆಲ್ಲ ಅವನು ಗೆದ್ದಿದ್ದಾನೆ

ಮಹದೇವ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್. ದಕ್ಷಿಣ ವಲಯದ ಮುಖ್ಯಸ್ಥನಾಗಿದ್ದ ಅವನು ಮೂರು ಸಾವಿರ ಡ್ರೈವರುಗಳನ್ನು ನಿಭಾಯಿಸಬೇಕಾಗಿತ್ತು. ಒಮ್ಮೆ ಒಬ್ಬ ಡ್ರೈವರ್ ಕುಡಿದು ಲಾರಿ ಓಡಿಸಿದನೆಂದು ಅವನನ್ನು ಅವನ ಮೇಲಧಿಕಾರಿ ಕೆಲಸದಿಂದ ತೆಗೆದಿದ್ದ. ದುರದೃಷ್ಟವಶಾತ್ ಅವನು ಲಾರಿ ಡ್ರೈವರುಗಳ ಸಂಘದ ಅಧ್ಯಕ್ಷನಾಗಿದ್ದ.ಡ್ರೈವರುಗಳನ್ನೆಲ್ಲ ಸೇರಿಸಿ ಅವನು ಧರಣಿ ಕೂತ. ಲಾರಿಗಳು ಎಲ್ಲಿದ್ದವೋ ಅಲ್ಲೇ ಹೇಗಿದ್ದವೋ ಹಾಗೆ ರಸ್ತೆ ಬದಿಯಲ್ಲಿ ನಿಂತುಬಿಟ್ಟವು. ಕನ್‌ಸೈನುಮೆಂಟುಗಳು ತಲುಪಬೇಕಾದ ಜಾಗವನ್ನು ಸರಿಯಾದ ಹೊತ್ತಲ್ಲಿ ತಲುಪದೇ ಹೋದರೆ ಸಂಸ್ಥೆಯ ಹೆಸರು, ಹಣ ಎರಡೂ ನಷ್ಟವಾಗುತ್ತಿತ್ತು.

ಈ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆಯಲು ಚೇರ್‌ಮನ್ ಮಹದೇವನ ತಲೆಗೆ ಕಟ್ಟಿದರು. ಮಹದೇವ ತನ್ನ ಅಧಿಕಾರಿಗಳನ್ನು ಕರೆಸಿ ಮೀಟಿಂಗ್ ನಡೆಸಿದಾಗ, ಡ್ರೈವರುಗಳೆಲ್ಲ ಯಾವುದಕ್ಕೂ ಬಗ್ಗುವುದಿಲ್ಲ ಅನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕಂಗಾಲಾಗಿ ಹೋಗಿದ್ದರು. ಬೇರೆ ಬೇರೆ ಕಂಪೆನಿಗಳಿಂದ ಕರೆ ಬರುವುದಕ್ಕೆ ಶುರುವಾಗಿತ್ತು. ಲಾರಿಗಳು ರಸ್ತೆ ಬದಿಯಲ್ಲಿ ನಿಂತಿವೆ ಅನ್ನುವ ಕಾರಣಕ್ಕೆ ಪೊಲೀಸರು ಕೇಸು ಜಡಿಯುತ್ತಿದ್ದರು. ಎಷ್ಟೋ ಕಡೆ ಪುಂಡರು ಲಾರಿಯಲ್ಲಿರುವ ವಸ್ತುಗಳನ್ನೆಲ್ಲ ದೋಚಲು ಆರಂಭಿಸಿದ್ದರು.

ಮಹದೇವ ಮೀಟಿಂಗಿನಿಂದ ಎದ್ದು ಹೋಗಿ ಹತ್ತು ನಿಮಿಷ ಮೌನವಾಗಿ ನಿಂತು ಅಂತೋಣಿಯನ್ನು ನೆನೆದಿದ್ದ. ನಂತರ ಒಳಗೆ ಬಂದು ಸಸ್ಪೆಂಡ್ ಆಗಿದ್ದ ಡ್ರೈವರ್ ಜತೆಗೆ ಮುಷ್ಕರ ಹೂಡಿದ್ದ ಅಷ್ಟೂ ಮಂದಿಯನ್ನು ಸಸ್ಪೆಂಡ್ ಮಾಡುವ ನಿರ್ಧಾರ ಕೈಗೊಂಡಿದ್ದ. ಆ ಲಾರಿಗಳನ್ನು ಓಡಿಸಲು ಆಯಾ ಊರಿನಲ್ಲಿರುವ ನಿವೃತ್ತ ಡ್ರೈವರುಗಳಿಗೆ ಹೇಳುವುದೆಂದು ತೀರ್ಮಾನಿಸಿದ್ದ. ನೂರು ವರ್ಷ ಕಳೆಯ ಕಂಪೆನಿ ಆಗಿದ್ದರಿಂದ ಪ್ರತಿ ಊರಲ್ಲೂ ಒಬ್ಬರೋ ಇಬ್ಬರೋ ನಿವೃತ್ತ ಡ್ರೈವರುಗಳು ಇದ್ದೇ ಇದ್ದರು. ಕಂಪೆನಿಯ ಡಾಟಾಬೇಸ್ ತರಿಸಿ, ಡ್ರೈವರುಗಳ ನಂಬರ್ ಹುಡುಕಿ, ಅವರನ್ನು ತಕ್ಷಣವೇ ಹಂಗಾಮಿಯಾಗಿ ಕೆಲಸಕ್ಕೆ ತೆಗೆದುಕೊಂಡು ಲಾರಿಗಳು ಚಾಲೂ ಆಗುವಂತೆ ಮಾಡಿದ್ದ. ನಾಲ್ಕೈದು ಮಂದಿ ಹಲ್ಲೆ ಮಾಡಲು ಮುಂದಾದಾಗ ಪೊಲೀಸರ ಮೂಲಕ ಅವರನ್ನು ಹತ್ತಿಕ್ಕಿದ್ದ.

ಒಂದೆರಡು ಕಡೆ ನಿವೃತ್ತ ಡ್ರೈವರುಗಳು ಲಾರಿ ಹೊರಡಿಸುತ್ತಿದ್ದಂತೆ, ಮಿಕ್ಕ ಡ್ರೈವರುಗಳೆಲ್ಲ ತಾವಾಗಿಯೇ ಮುಷ್ಕರ ನಿಲ್ಲಿಸಿದರು. ಅರ್ಧದಿನದೊಳಗೆ ಸಮಸ್ಯೆ ಕರಗಿಹೋಗಿತ್ತು. ಎಲ್ಲರೂ ಅವನ ನಿರ್ಧಾರವನ್ನು ಕೊಂಡಾಡಿದ್ದರು. ಚೇರ್ಮನ್ ಮಾತ್ರ ಅಸಮಾಧಾನಗೊಂಡಿದ್ದರು.

`ಅಲ್ರೀ, ಎಲ್ಲರೂ ರಾಜೀನಾಮೆ ಕೊಟ್ಟಿದ್ರೆ ಏನು ಮಾಡ್ತಿದ್ರಿ. ಇಂಥ ರಿಸ್ಕ್ ತಗೋಬಾರದು. ನಾನಾಗಿದ್ರೆ ಸಸ್ಪೆಂಡ್ ಮಾಡಿದ್ದ ಡ್ರೈವರನ್ನು ವಾಪಸ್ ತಗೋತಿದ್ದೆ. ಎಲ್ಲಾ ಸರಿಹೋಗಿರೋದು’ ಅಂದಿದ್ದರು. ಅದಕ್ಕೆ ಮಹದೇವ ಅಷ್ಟೇ ಸ್ಪಷ್ಟವಾಗಿ `ಅವನು ಸಸ್ಪೆಂಡ್ ಆಗಿರೋದು ಕುಡಿದು ಡ್ರೈವ್ ಮಾಡಿದ್ದಕ್ಕೆ. ಅವನನ್ನು ಸಸ್ಪೆಂಡ್ ಮಾಡಿರೋದು ನಮ್ಮ ವಿಜಿಲೆನ್ಸ್ ಟೀಮ್. ಈಗ ಅವನನ್ನು ವಾಪಸ್ ತೆಗೆದುಕೊಂಡರೆ ಎಲ್ಲರಿಗೂ ಯಾವ ಮೆಸೇಜ್ ಹೋಗುತ್ತೆ ಯೋಚನೆ ಮಾಡಿ. ನಾಳೆ ಎಲ್ಲರೂ ಕುಡಿದು ಡ್ರೈವ್ ಮಾಡೋಕೆ ಶುರು ಮಾಡ್ತಾರೆ. ಎಲ್ಲರ ಮೊರೇಲೂ ಹಾಳಾಗುತ್ತೆ. ಅದು ಆಗಬಾರದು ಅಂದ್ರೆ ನಾವು ಗಟ್ಟಿಯಾಗಿ ನಿಲ್ಲಬೇಕು’ ಅಂದಿದ್ದ.

ಆ ಪ್ರಕರಣದಿಂದಾಗಿ ಚೇರ್ಮನ್ನಿಗೂ ಅವನಿಗೂ ಅಂತರ ಬೆಳೆಯಿತು. ಆದರೆ ಕಂಪೆನಿಯಲ್ಲಿ ಅವನ ಬಗ್ಗೆ ಗೌರವ ಹೆಚ್ಚಾಯಿತು. ಬೇರೆ ಸಂಸ್ಥೆಗಳ ಮೀಟಿಂಗಿನಲ್ಲಿ ಈ ಕುರಿತು ಚರ್ಚೆಯಾಯಿತು. ಮಿಕ್ಕ ಟ್ರಾನ್ಸ್ ಪೋರ್ಟ್ ಕಂಪೆನಿಗಳು ಕೂಡ ಕಟ್ಟುಪಾಡುಗಳನ್ನು ಬಿಗಿಗೊಳಿಸಿದವು. ಎಲ್ಲಕ್ಕಿಂತ ಹೆಚ್ಚಾಗಿ ಫ್ಯಾಮಿಲಿ ಮೀಟ್ ದಿನದಂದು ಡ್ರೈವರುಗಳ ಹೆಂಡತಿ ಮಕ್ಕಳೆಲ್ಲ ಮಹದೇವನ ನಿರ್ಧಾರವನ್ನು ಮೆಚ್ಚಿಕೊಂಡು ನಾಲ್ಕು ಮಾತಾಡಿದ್ದರು.

ನಮ್ಮ ಮನಸ್ಸಿನ ವಿರುದ್ಧ ಹೋಗಬಾರದು. ಆದರೆ ಅದಕ್ಕಿಂತ ಮುಖ್ಯವಾಗಿ ತತ್ವದ ವಿರುದ್ಧ ಹೋಗಬಾರದು. ಮನಸ್ಸಿನ ಮಾತು ಕೇಳದೇ ಹೋದರೆ ನಮಗೆ ಮಾತ್ರ ಸಮಸ್ಯೆಯಾಗುತ್ತದೆ. ತತ್ವದ ಮಾತಿಗೆ ಕಿವಿಗೊಡದೇ ಇದ್ದರೆ ಒಂದು ಸಮುದಾಯವೇ ತೊಂದರೆಗೆ ಒಳಗಾಗುತ್ತದೆ. ಅದಾಗಲಿಕ್ಕೆ ಯಾವತ್ತೂ ಅವಕಾಶ ಕೊಡಬಾರದು. ಅದು ನಿಜವಾದ ನಾಯಕನ ಲಕ್ಷಣ.

ಹಾಗಂತ ಅಂತೋಣಿ ಹೇಳಿದ್ದು ಮಹದೇವನಿಗೆ ಅಸ್ಪಷ್ಟವಾಗಿ ನೆನಪಿದೆ. ಹತ್ತೊಂಬತ್ತನೆಯ ವಯಸ್ಸಿನಲ್ಲಿ ಅಂತೋಣಿ ತುಂಬಿದ ಆತ್ಮವಿಶ್ವಾಸ, ಧೈರ್ಯ ಎರಡನ್ನೂ ಮಹದೇವ ಧಾರಾಳವಾಗಿ ಖರ್ಚು ಮಾಡುತ್ತಾ ಬಂದಿದ್ದಾನೆ. ಕಷ್ಟ ಎದುರಾದಾಗ ಅಂತೋಣಿಯನ್ನು ನೆನೆಯುತ್ತಾನೆ. ಸಂದಿಗ್ಧ ಬಂದಾಗ ಅಂತೋಣಿಯ ನೆನಪು ಮಾಡಿಕೊಳ್ಳುತ್ತಾನೆ. ಯಾರಾದರೂ ಗೊತ್ತಿಲ್ಲದ ಪ್ರಶ್ನೆ ಕೇಳಿದಾಗ, ಅಂತೋಣಿ ಸರ್ ಹತ್ರ ಕೇಳಿ ಹೇಳುತ್ತೇನೆ ಅನ್ನುತ್ತಾನೆ. ಅವನ ಗೆಳೆಯರು, ಹೆಂಡತಿ, ಮಕ್ಕಳು, ಸಹೋದ್ಯೋಗಿಗಳೆಲ್ಲ ಅಂತೋಣಿ ಎಂಬ ಮಹಾಮಹಿಮ ಎಲ್ಲೋ ಇದ್ದಾನೆ. ಅವನು ಮಹಾ ಪ್ರತಿಭಾವಂತ, ಮಹದೇವನ ಮ್ಯಾನೇಜ್‌ಮೆಂಟ್ ಗುರು ಎಂದು ನಂಬಿದ್ದಾರೆ.

-3-

ಅಂತೋಣಿ ಹೊಳೆಯಲ್ಲಿ ಮುಳುಗಿ ಸಾಯುವ ಮೊದಲು ಆಡಿದ ಮಾತನ್ನು ಮಾತ್ರ ಮಹದೇವನಿಗೆ ಡೀಕೋಡ್ ಮಾಡಲು ಸಾಧ್ಯವಾಗಿಲ್ಲ. ಎರಡು ಮೂರು ದಿನಗಳಿಂದ ಅಂತೋಣಿ ಸಪ್ಪಗಿದ್ದದ್ದು ಮಹದೇವನ ಗಮನಕ್ಕೂ ಬಂದಿತ್ತು. ದಿನಕ್ಕೊಂದು ಪೋಲಿ ಕತೆ ಹೇಳುತ್ತಿದ್ದ ಅಂತೋಣಿ, ಆ ಎರಡು ದಿನ ಮಾತ್ರ ಒಂಚೂರು ನಕ್ಕಿರಲಿಲ್ಲ. ಎಂದಿನಂತೆ ಅವನ ಬೆರಳುಗಳ ನಡುವೆ ಸಿಗರೇಟು ಉರಿಯುತ್ತಿರಲಿಲ್ಲ. ಅವನು ಶಾನುಭೋಗರ ಮನೆಯ ಗೇಟಿನ ಸಮೀಪದ ಕಲ್ಲುಬೆಂಚಿನ ಮೇಲೆ ಕುಳಿತಿರಲಿಲ್ಲ.

ಅವನಿಗೇನೋ ಆಗಿದೆ ಅಂತ ಮಹದೇವನಿಗೆ ಅನ್ನಿಸಿದ್ದರೂ ಮೊದಲ ದಿನ ಕೇಳುವುದಕ್ಕೆ ಧೈರ್ಯವಾಗಿರಲಿಲ್ಲ. ಅಂತೋಣಿ ಯಾವತ್ತೂ ಖಾಸಗಿ ವಿಷಯಗಳ ಕುರಿತು ಮಾತಾಡುತ್ತಲೇ ಇರಲಿಲ್ಲ. ಮಹದೇವ ಪಿಯು ಕಾಲೇಜಿನಿಂದ ಬರುತ್ತಿದ್ದ ಹಾಗೇ, ಸಿಗರೇಟು ಹೊಸಕಿ, ಅವನತ್ತ ನಡೆದುಬರುತ್ತಿದ್ದ ಅಂತೋಣಿ ಮುಗುಳ್ನಕ್ಕರೆ ಅದೇ ನಮಸ್ಕಾರ. ನಂತರ ಇದ್ದಕ್ಕಿದ್ದಂತೆ ಮಾತು ಶುರುಮಾಡುತ್ತಿದ್ದ `ಸೂರ್ಯಗ್ರಹಣದ ದಿನ ಸೂರ್ಯನನ್ನು ರಾಹು ನುಂಗುತ್ತದೆ, ಕೇತು ನುಂಗುತ್ತದೆ ಅಂತ ನಂಬಿದ್ದರಲ್ಲ. ಅದು ಸುಳ್ಳು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಕೇತು ನುಂಗುತ್ತದೆ ಅಂತ ಹೇಳಿಲ್ಲ. ಆವರಿಸಿಕೊಳ್ಳುತ್ತದೆ ಅಂತ ಬರೆದಿದ್ದಾರೆ. ಅದು ಸುಲಭವಾಗಿ ಅರ್ಥವಾಗಲಿ ಅಂತ ನುಂಗುತ್ತದೆ ಅಂತ ಮಕ್ಕಳಿಗೆ ಹೇಳಿಕೊಟ್ಟಿರ್ತಾರೆ. ಮುಟ್ಟಾದಾಗ ಕಾಗೆ ಮುಟ್ಟಿತು ಅಂತ ಹೇಳೋದಿಲ್ಲವ? ಅದು ಕಾಗೆ ಮುಟ್ಟುವುದಲ್ಲ ಅಂತ ಗೊತ್ತಿದ್ದರೂ ಹಾಗೆ ಹೇಳ್ತಾರಲ್ಲ, ಇದೂ ಹಾಗೆಯೇ. ಇದನ್ನು ಜನಪದದ ನುಡಿಗಟ್ಟು ಅಂತಾರೆ’ ಅಂತ ಹಿಂದುಮುಂದಿಲ್ಲದೇ ಮಾತು ಶುರುಮಾಡುತ್ತಿದ್ದ ಅಂತೋಣಿ, ಅದನ್ನೆಲ್ಲ ಹೇಳಲೆಂದೇ ಕಂಠಪಾಠ ಮಾಡಿಕೊಂಡು ಕಾಯುತ್ತಿದ್ದನೇನೋ ಅಂತ ಯಾರಿಗೇ ಆದರೂ ಅನ್ನಿಸುತ್ತಿತ್ತು.

ಆ ಎರಡು ದಿನ ಅಂತೋಣಿ ಯಾಕೆ ಏನೂ ಮಾತಾಡದೇ ಸುಮ್ಮನಿದ್ದ ಅನ್ನುವುದು ಮಹದೇವನಿಗೆ ಗೊತ್ತಾಗದೇ ಹೋದರೂ, ಮೌನವಾಗಿರುವ ಅಂತೋಣಿಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವುದು ಮಾತ್ರ ಅರಿವಾಯಿತು. ಒಳ್ಳೆಯವರ ಮೌನವನ್ನೂ ಕೆಟ್ಟವರ ಮಾತನ್ನೂ ತಡಕೊಳ್ಳುವುದು ಕಷ್ಟ ಅಂತ ಹಿಂದೊಮ್ಮೆ ಅಂತೋಣಿಯೇ ಹೇಳಿದ್ದು ನೆನಪಾಗಿತ್ತು. ಅಂತೋಣಿಯ ಹತ್ತಿರ ನಿನಗೇನಾಗಿದೆ ಅಂತ ಕೇಳುವುದೋ ಬೇಡವೋ ಅನ್ನುವ ಗೊಂದಲದಲ್ಲೇ ಎರಡು ದಿನ ಕಳೆದಿತ್ತು.

ಮೂರನೆಯ ದಿನ ಶಾನುಭೋಗರ ಮನೆಯ ಗೇಟಿನ ಮುಂದೆ  ಮೂರೋ ನಾಲ್ಕೋ ಮಂದಿ ಅಪರಿಚಿತರು ನಿಂತಿದ್ದರು. ಅವರನ್ನು ಮಹದೇವ ಆ ಮೊದಲು ಎಲ್ಲೂ ನೋಡಿರಲಿಲ್ಲ. ಆವತ್ತು ಮಹದೇವ ಮನೆಗೆ ಹೋಗುತ್ತಲೇ ಅಪ್ಪ ಆತಂಕದ ಸ್ವರದಲ್ಲಿ ನಿನಗೆ ಅಂತೋಣಿ ಗೊತ್ತಿದ್ದಾನಾ ಕೇಳಿದ್ದರು. ಮಹದೇವ ಕಣ್ಣೋಜಿಯಂತೆ ಅಂಟೋಣಿಯಾ, ಯಾರದು ಅಂತ ಕೇಳಿದ್ದ. ಗೊತ್ತಿಲ್ಲ ಅಲ್ವಾ.. ಅಷ್ಟು ಸಾಕು ಅಂದಿದ್ದರು ಅಪ್ಪ. ಅಂತೋಣಿಯ ಮೇಲೆ ಯಾವುದೋ ಅಪರಾಧದ ನೆರಳು ಬಿದ್ದಿದೆ ಅಂತ ಮಹದೇವನಿಗೆ ಅಸ್ಪಷ್ಟವಾಗಿ ಅನ್ನಿಸತೊಡಗಿತ್ತು.

ಅದಾದ ನಂತರ ಅಂತೋಣಿ ಇದ್ದಕ್ಕಿದ್ದಂತೆ ಊರು ತುಂಬ ಹಬ್ಬಿದ. ಎಲ್ಲರೂ ಅವನ ಕುರಿತೇ ಮಾತಾಡುತ್ತಿದ್ದರು. ಅಂತೋಣಿ ಹುಡುಗರನ್ನೂ ಹುಡುಗಿಯರನ್ನೂ ಮತಾಂತರ ಮಾಡಿಸುತ್ತಾನೆ ಅಂತ ಒಂದು ಗುಂಪು ಹೇಳುತ್ತಿತ್ತು. ಅವನು ಗಾಂಜಾ ಮಾರುತ್ತಾನೆ. ಅದಕ್ಕಾಗಿಯೇ ಅವನು ಈ ಊರಿಗೆ ಬಂದಿದ್ದಾನೆ ಅಂತ ಮತ್ತೊಂದಷ್ಟು ಜನ ಹೇಳುತ್ತಿದ್ದರು. ಅವನು ಶಾನುಭೋಗರ ಮಗಳು ಗೀತಾಳಿಗೆ ಲವ್ ಲೆಟರ್ ಬರೆದುಕೊಟ್ಟಿದ್ದಾನೆ ಅನ್ನುವ ಸುದ್ದಿಯೂ ಹಬ್ಬಿತು. ಇವೆಲ್ಲಕ್ಕೂ ಮೀರಿದ ಒಂದು ಸುದ್ದಿ ಅಂತೋಣಿಯ ಅಸ್ತಿತ್ವಕ್ಕೇ ಮುಳುವಾಗುವಂತೆ ಊರನ್ನು ಸುತ್ತತೊಡಗಿತು.

ಅಂತೋಣಿಯ ಅಪ್ಪ ಆಲ್ಬರ್ಟ್  ಅದೇ ಊರಿನವನು. ಆ ಊರಲ್ಲಿರುವುದೆಲ್ಲ ಆಲ್ಬರ್ಟ್ ಆಸ್ತಿಯೇ. ಬ್ರಿಟಿಷರ ಕಾಲಕ್ಕೆ ಆ ಊರು ಬ್ರಿಟಿಷರು ಕುದುರೆಗಳನ್ನು ಮೇಯಿಸುವ ಜಾಗವಾಗಿತ್ತು. ಕುದುರೆ ಮೇಯಿಸುತ್ತಿದ್ದ ಫ್ರಾನ್ಸಿಸ್ ಅನ್ನುವವನಿಗೆ ಇಡೀ ಜಾಗವನ್ನು ಬ್ರಿಟಿಷರು ಬರೆದು ಕೊಟ್ಟಿದ್ದರು. ಫ್ರಾನ್ಸಿಸ್ ನಂತರ ಆ ಜಾಗ ಅವನ ಮಗ ಜಾನ್ಸನ್‌ಗೆ ಬಂತು. ನಂತರ ಅವನ ಮಗ ಅಲ್ಬರ್ಟ್‌ಗೆ ಬಂತು. ಕುಡುಕನೂ ಸ್ತ್ರೀವ್ಯಾಮೋಹಿಯೂ ಆಗಿದ್ದ ಆಲ್ಬರ್ಟ್ ಆ ಜಾಗವನ್ನು ಕಂಡಕಂಡವರಿಗೆ ಹಂಚಿದ್ದ. ಆಲ್ಬರ್ಟ್ ಹೆಂಡತಿ ಅವನ ಅವತಾರ ತಾಳಲಾರದೆ, ಒಂದು ದಿನ ಪುಟ್ಟ ಮಗುವನ್ನು ಕರಕೊಂಡು ತವರು ಮನೆಗೆ ಹೋದ ನಂತರ, ಆಲ್ಬರ್ಟ್ ಕಾಟ ಮತ್ತೂ ಹೆಚ್ಚಾಯಿತು.

ಆಲ್ಬರ್ಟ್ ಆರೂವರೆ ಅಡಿ ಎತ್ತರವಿದ್ದ. ಅವನ ತೋಳುಗಳು ಒನಕೆಯಂತಿದ್ದವು. ಕುಳಿತರೆ ಎರಡು ಕೇಜಿ ಹಂದಿಯನ್ನು ಲೀಲಾಜಾಲವಾಗಿ ತಿನ್ನುತ್ತಿದ್ದ. ಲೀಟರ್‌ಗಟ್ಟಲೆ ಹೆಂಡ ಕುಡಿಯುತ್ತಿದ್ದ. ನಂತರ ಅವನ ಬೇಟೆ ಶುರುವಾಗುತ್ತಿತ್ತು. ಹೆಣ್ಣುಗಳನ್ನು ಹುಡುಕಿಕೊಂಡು ಹೊರಡುತ್ತಿದ್ದ. ಅವನ ಮೇಲೆ ಊರಿನ ಮಂದಿಗೆ ಅಪಾರ ಸಿಟ್ಟಿತ್ತು. ಆದರೆ ಅವನು ಹಂಚುತ್ತಿದ್ದ ಭೂಮಿಯ ಮೇಲಿನ ಮೋಹವೂ ಇತ್ತು. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ, ಮನಸ್ಸಿದ್ದರೂ ಮನಸ್ಸಿಲ್ಲದಂತೆ ನಟಿಸುತ್ತಾ ಅವನನ್ನು ಸಹಿಸಿಕೊಳ್ಳುತ್ತಿದ್ದರು. ಕೂಲಿನಾಲಿ ಮಾಡುತ್ತಿದ್ದವರೆಲ್ಲ ಆಲ್ಬರ್ಟ್ ದೆಸೆಯಿಂದ ಗದ್ದೆ, ತೋಟ, ಮನೆ ಮಾಡಿಕೊಂಡರು.

ಇದ್ದಕ್ಕಿದ್ದಂತೆ ಒಂದು ದಿನ ಆಲ್ಬರ್ಟ್ ಕಾಣೆಯಾದ. ಅವನು ಎಲ್ಲಿಗೆ ಹೋದ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಅವನನ್ನು ಹುಡುಕುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಆಲ್ಬರ್ಟ್ ಮನೆ ಮತ್ತು ಮನೆಯ ಸುತ್ತಮುತ್ತ ಇದ್ದ ಹತ್ತಾರು ಎಕರೆಯನ್ನು ಶಾನುಭೋಗರು ತಮ್ಮದನ್ನಾಗಿ ಮಾಡಿಕೊಂಡರು.

ಇದೆಲ್ಲ ಆಗಿ ಹದಿನೈದು ವರ್ಷಗಳ ನಂತರ, ಆ ಊರಲ್ಲಿ ಅಂತೋಣಿ ಕಾಣಿಸಿಕೊಂಡಿದ್ದ. ಅವನ ಮೇಲೆ ಊರ ಮಂದಿ ನೂರಾರು ಆರೋಪಗಳನ್ನು ಮಾಡಲು ಮುಖ್ಯ ಕಾರಣ ಅವನು ಆಲ್ಬರ್ಟ್ ಮಗ ಅನ್ನುವುದೇ ಆಗಿತ್ತು. ಅಂತೋಣಿ ಊರಿಗೆ ಬಂದಿರುವುದೇ ಅಪ್ಪನ ಆಸ್ತಿಗೋಸ್ಕರ. ಆಸ್ತಿ ಪತ್ರ ಅವನ ಹತ್ತಿರ ಇದೆ. ಅದನ್ನಿಟ್ಟುಕೊಂಡು ಅವನು ಕೋರ್ಟಿಗೆ ಹೋದರೆ ಊರಿಗೆ ಊರೇ ತಾವಿರುವ ಜಾಗ ಮನೆ ಬಿಡಬೇಕಾಗುತ್ತದೆ ಎಂಬ ಸುದ್ದಿ ಹಬ್ಬಿದ್ದೇ ತಡ, ಅಂತೋಣಿಯನ್ನು ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸಲಿಕ್ಕೆ ಜನ ಕಾಯತೊಡಗಿದರು.

ಇದೆಲ್ಲ ಎಷ್ಟು ಸೂಕ್ಷ್ಮವಾಗಿ ನಡೆಯಿತು ಅಂತ ಮಹದೇವನಿಗೆ ಆಶ್ಚರ್ಯವಾಗುತ್ತದೆ. ಈ ಪ್ರಸಂಗವೆಲ್ಲ ಮಹದೇವನಿಗೆ ಗೊತ್ತಾದದ್ದು ಅಂತೋಣಿ ಸತ್ತ ನಂತರವೇ. ಆದರೆ ಅಂತೋಣಿ ಇದ್ದಾಗಲೇ ಜನ ಒಳಗೊಳಗೇ ಅವನನ್ನು ಹಿಂಬಾಲಿಸುತ್ತಿದ್ದರು. ಅವನ ಚಲನವಲನಗಳನ್ನು ಗುಟ್ಟಾಗಿ ಗಮನಿಸುತ್ತಿದ್ದರು ಅಂತ ಮಹದೇವನಿಗೆ ಆಮೇಲಾಮೇಲೆ ಅರಿವಾಯಿತು.

ಇದನ್ನೂ ಓದಿ: Sunday Read: ಚಿಂತಾಮಣಿ ಕೊಡ್ಲೆಕೆರೆ ಕಥಾ ಸಂಕಲನ ʼಭರತದ ಮಧ್ಯಾಹ್ನʼ

ಅಂತೋಣಿ ಸಾಯುವ ಹಿಂದಿನ ದಿನ ಮಹದೇವನಿಗೆ ಒಂದು ಚೀಟಿ ಸಿಕ್ಕಿತ್ತು. ಮಹದೇವ ನಡೆದುಹೋಗುವ ದಾರಿಯಲ್ಲಿ ಆ ಚೀಟಿಯನ್ನು ಒಂದು ಕಲ್ಲಿಗೆ ಸುತ್ತಿ ಅವರಿಬ್ಬರೂ ಕುಳಿತುಕೊಳ್ಳುತ್ತಿದ್ದ ಮರದ ಕೊಂಬೆಗೆ ಸಿಕ್ಕಿಸಿದ್ದ. ಉದಾಸೀನದಿಂದ ನಡೆದುಕೊಂಡು ಬರುತ್ತಿದ್ದ ಮಹದೇವನಿಗೆ ಆ ಕಲ್ಲೂ ಚೀಟಿಯೂ ಕಣ್ಣಿಗೆ ಬಿದ್ದು, ಓದಿ ನೋಡಿದರೆ `ನಾಳೆ ಸಂಜೆ ಐದು ಗಂಟೆಗೆ ಹೊಳೆಯ ಹತ್ತಿರ ಬಾ. ಮಾತಾಡುವುದಿದೆ’ ಅಂತ ಅಂತೋಣಿ ಬರೆದಿಟ್ಟಿದ್ದ.

-4-

ಮಹಾದೇವನನ್ನು ಮುಂದೆ ಕೂರಿಸಿಕೊಂಡು ಅವರೆಲ್ಲ ಕೊತಕೊತ ಕುದಿಯುತ್ತಾ ಕೂತಿದ್ದರು. `ಗೊತ್ತಿದ್ದರೆ ಹೇಳಪ್ಪಿ. ನಿಂಗೆ ಯಾವ ಸೀಮೆ ಫ್ರೆಂಡು ಅಂವ. ಫಟಿಂಗ. ನಮ್ಮನ್ನೆಲ್ಲ ಹಾಳು ಮಾಡಲಿಕ್ಕೇ ಬಂದವನು’.

`ಹೇಳ್ತಾನೆ ಬಿಡ್ರೀ. ಮಹದೇವ ನಮ್ಮೂರಿನ ಹುಡುಗ. ನಮ್ಮೂರಿನ ಮೇಲೆ ಅವನಿಗೆ ಪ್ರೀತಿ ಇರಬೇಕು.ಇದೆ. ಯಾರೋ ಬಂದು ನಮ್ಮನ್ನೆಲ್ಲ ಊರು ಬಿಡಿಸ್ತಾರೆ ಅಂದ್ರೆ ನಮ್ಮ ಮಹದೇವ ಸುಮ್ನಿರೋದಿಲ್ಲ’

‘ಹೇಳ್ಲಿಲ್ಲ ಅಂದ್ರೆ ಅವನಿಗೆ ಏನು ಮಾಡಬೇಕೂಂತ ಇದ್ವೋ ಅದನ್ನೇ ನಿಂಗೂ ಮಾಡ್ತೀವಿ’

‘ಹಾಗೆಲ್ಲ ಮಾತಾಡಬಾರದು. ಸುಮ್ನಿರೋ. ಮಹದೇವ ನಮ್ಮವನು..’

ಹೊಳೆಬದಿಗೆ ಅವರೆಲ್ಲ ಹೋದರು. ಮಹದೇವ ಹೋಗಲಿಲ್ಲ

-5-

ಆ ರಾತ್ರಿ ಕನಸಲ್ಲಿ ಅಂತೋಣಿ ಬಂದಿದ್ದ.

ಅವನನು ನೀರಲ್ಲಿ ಎರಡು ಸಲ ಮುಳುಗಿ, ಮೂರನೇ ಸಲ ಮೇಲೆ ಬಂದು ಮಹದೇವನ ಕಡೆ ಕೊಂಚವೇ ತಿರುಗಿ ಏನೋ ಹೇಳಲು ಯತ್ನಿಸಿದ. ಅವನ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಮಾತುಗಳು ಕೇಳಿಸುತ್ತಿರಲಿಲ್ಲ. ಅಸ್ಪಷ್ಟವಾಗಿ ಗುಳುಗುಳಗುಳುಗುಳ ಅಂತೇನೋ ಕೇಳಿಸಿತು. ಮತ್ತೊಮ್ಮೆ ಅದನ್ನು ಕೇಳಿಸಿಕೊಂಡರೆ ಅರ್ಥವಾದೀತೇನೋ ಅಂತ ಮಹದೇವ ಆ ಕನಸಿಗಾಗಿ ಕಾಯುತ್ತಲೇ ಇದ್ದಾನೆ. ಅವನಿಗೆ ಇದುವರೆಗೂ ಅಂತೋಣಿಯ ಕನಸು ಬಿದ್ದಿಲ್ಲ.

ಅಂತೋಣಿಯ ಮಾತುಗಳನ್ನು ಡೀಕೋಡ್ ಮಾಡಲು ಮಹದೇವ ಪ್ರಯತ್ನಪಡುತ್ತಲೇ ಇದ್ದಾನೆ. ಆದರೆ ಪ್ರತಿಸಲವೂ ಸೋಲುತ್ತಾನೆ. ಮೀಟಿಂಗು ನಡೆಯುತ್ತಿದ್ದಾಗ, ಊಟ ಮಾಡುವಾಗ, ಪ್ರೇಮಿಸುವಾಗ ಅಂತೋಣಿಯ ಕೊನೆಯ ಮಾತು ಕಿವಿಗೆ ಬೀಳುತ್ತದೆ.

ಅಂತೋಣಿಯ ಕೊನೆಯ ಮಾತು ಏನಿರಬಹುದು ಎಂದು ತಿಳಿಯಲು ಮಹದೇವ ಸಾಕಷ್ಟು ಪ್ರಯತ್ನಪಟ್ಟು ಸೋತಿದ್ದಾನೆ. ಮನೋವೈದ್ಯರನ್ನು ಭೇಟಿಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡವರು ಬರೆದಿಟ್ಟ ಡೆತ್ ನೋಟ್, ಸಾಯುವವರ ಕೊನೆಯಾಸೆಗಳು, ನೇಣಿಗೆ ಹಾಕುವಾಗ ಎದುರಲ್ಲಿದ್ದ ಪೊಲೀಸ್ ಅಧಿಕಾರಿಗಳ ನೆನಪುಗಳನ್ನೆಲ್ಲ ಜಾಲಾಡಿಸಿದರೂ ಅವನಿಗೆ ಉತ್ತರ ಸಿಕ್ಕಿಲ್ಲ. ಮಹದೇವ ಮತ್ತೆ ಮತ್ತೆ ಕೇಳಿದಾಗ ಅವನ ಹೆಂಡತಿ ಉಮಾಳಿಗೆ ಸಿಟ್ಟು ನೆತ್ತಿಗೆ ಹತ್ತಿ, ‘ನೀವೊಂದು ಸಲ ಹೊಳೆಗೆ ಹಾರಿ. ಮೂರನೇ ಸಲ ಮೇಲೆ ಬರುವಾಗ ಏನು ಹೇಳ್ತೀರಿ ಅಂತ ನಿಮಗೇ ಗೊತ್ತಾಗ್ತದೆ’ ಅಂದ ನಂತರ, ಮಹದೇವ ಆ ಬಗ್ಗೆ ಮನೆಯಲ್ಲಿ ಮಾತಾಡುವುದನ್ನು ನಿಲ್ಲಿಸಿದ್ದಾನೆ.

ಮಹದೇವ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಂತ ಯಾವತ್ತೋ ಪತ್ರಿಕೆಯಲ್ಲಿ ಬಂದರೆ, ಈ ಕತೆ ಓದಿದ ನೀವೂ ನಾನೂ ಅವನು ಹೊಳೆಗೆ ಹಾರಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ, ನೀರಿನಲ್ಲಿ ಮುಳುಗಿ ಸಾಯುವವನು ಮೂರನೇ ಸಲ ಮೇಲೆ ಬಂದಾಗ ಏನು ಹೇಳುತ್ತಾನೆ ಅನ್ನುವುದನ್ನು ತಿಳಿದುಕೊಳ್ಳುವ ಅದಮ್ಯ ಆಸೆಯಿಂದ ಎಂದು ತೀರ್ಮಾನಿಸಬಹುದು.

ಪುಸ್ತಕ: ಚಿಯರ್ಸ್‌, drink life like a fish
ಲೇಖಕ: ಜೋಗಿ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: 150 ರೂ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಚ್‌.ಎಸ್‌ ವೆಂಕಟೇಶಮೂರ್ತಿ ಹೊಸ ಕವನ ಸಂಕಲನದ ಕವಿತೆ: ಕಾಂಚನಜುಂಗ

Exit mobile version