Site icon Vistara News

Sunday Read | ಹೋಗಲೇಬೇಕಾದ ಬುಕ್‌ ಕೆಫೆಗಳಿವು: ಇಲ್ಲಿ ಕಾಫಿ ಹೀರಿ, ಪುಸ್ತಕ ಓದಿ, ಕೊಳ್ಳಿ!

bibliophilia

ಪುಸ್ತಕಕ್ಕೂ ಕಾಫಿಗೂ ಒಂದು ವಿಚಿತ್ರ ಸಂಬಂಧವಿದೆ. ಓದಲು ಆಸಕ್ತಿಯಿರುವ ಯಾರಿಗೇ ಆದರೂ, ಖಂಡಿತ ಒಂದು ಕಪ್‌ ಕಾಫಿಯೋ, ಚಹಾವೋ ಪಕ್ಕದಲ್ಲಿ ಬಿಸಿಬಿಸಿ ಹಬೆಯಾಡುತ್ತಿರಬೇಕು ಹಾಗೂ ಅದನ್ನು ಹಾಗೇ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಹೀರುತ್ತಾ ಪುಸ್ತಕದ ಹೂರಣವನ್ನೂ ಮಸ್ತಕದೊಳಗೇರಿಸುತ್ತಾ ಪುಟ ತಿರುವಬೇಕು ಎಂಬ ಚಟವಂತೂ ಇದ್ದೇ ಇರುತ್ತದೆ. ಇದೊಂದು ಚಂದದ ಚಟವೆಂದು ನಮಗೆ ನಾವೇ ಖಷಿಪಡುತ್ತಾ ಪುಸ್ತಕಪ್ರಿಯರು ಇಂಥದ್ದೊಂದು ಜಾಗ ಎಲ್ಲೇ ಸಿಕ್ಕರೂ ಮೂಲೆಯೊಂದನ್ನು ಹಿಡಿದು ಗಂಟೆಗಟ್ಟಲೆ ಕೂತು ಪುಸ್ತಕದೊಳಗೆ ತಲೆತೂರುವುದು ಖಂಡಿತ. ಭಾರತದಲ್ಲೂ ಅಂತಹ ಕೆಲವು ಅದ್ಭುತ ಜಾಗಗಳಿವೆ. ಇಲ್ಲಿ ಗಂಟೆಗಟ್ಟಲೆ ಕೂತು ಪುಸ್ತಕ ಓದುತ್ತಾ ಕಾಫಿ, ಚಹಾ ಜೊತೆಗೆ ಮೆಲ್ಲಲು ಕಪ್‌ ಕೇಕ್‌, ಕುರುಕಲು ಆರ್ಡರ್‌ ಮಾಡಿದರೆ ಮುಗೀತು. ಹಾಗಾದರೆ ಅಂತಹ ಬುಕ್‌ ಕೆಫೆಗಳವ್ಯಾವುವು ನೋಡೋಣ.

೧. ಲಿಟರೆಟಿ, ಗೋವಾ: ನೀವು ಗೋವಾಕ್ಕೆ ಹೋದರೆ, ಸಮುದ್ರ ತೀರದಲ್ಲಿ ಮಿಂದೆದ್ದ ಹಾಗೆಯೇ, ಉತ್ತರ ಗೋವಾದಲ್ಲಿರುವ ಲಿಟರೆಟಿಗೂ ಒಮ್ಮೆ ಭೇಟಿ ಕೊಡಬೇಕು. ಇಲ್ಲಿರುವ ಪುಸ್ತಕಗಳ ಸಂಗ್ರಹ ಬಹಳ ಇಂಟರೆಸ್ಟಿಂಗ್‌ ಆಗಿವೆ. ಹಲವು ಬಗೆಯ ವಿವಿಧ ವಿಭಾಗಗಳಿಗೆ ಹೊಂದುವ ಹಳೆಯ ಹೊಸ ಪುಸ್ತಕಗಳ ಅತ್ಯುತ್ತಮ ಕಲೆಕ್ಷನ್‌ ಇಲ್ಲಿದೆ. ಇಲ್ಲಿ ಕೂತು, ಕಾಫಿಯೋ ಚಹಾವೋ ಹೀರುತ್ತಾ, ಬೇಕಾದ್ದು ತಿಂದು ಒಂದಷ್ಟು ಪುಸ್ತಕಗಳ ಮೇಲೆ ಗಂಟೆಗಟ್ಟಲೆ ಕಣ್ಣಾಡಿಸಿ ಇಷ್ಟವಾದ ಪುಸ್ತಕಗಳನ್ನು ಕೊಂಡು, ಬಿಲ್‌ ಕೊಟ್ಟು ಒಂದು ಚಂದನೆಯ ದಿನ ಕಳೆದ ಖುಷಿಯಲ್ಲಿ ಮರಳಬಹುದು. ಯಾರಿಗ್ಗೊತ್ತು, ನೀವು ಹೋದ ದಿನ, ಯಾರದ್ದೋ ಸಾಹಿತಿಯ ಪುಸ್ತಕ ಬಿಡುಗಡೆಯೂ ಇಲ್ಲಿರಬಹುದು!

೨. ಕೆಫೆ ಸ್ಟೋರಿ, ಕೋಲ್ಕತ್ತಾ: ಓದಿ, ತಿನ್ನಿ ಹಾಗೂ ಶಾಪಿಂಗ್‌ ಮಾಡಿ, ಒಂದೇ ಸೂರಿನಡಿ! ಕೆಫೆ ಸ್ಟೋರಿಯ ಕಥೆ ಹೀಗೆ. ಪ್ರತಿ ಬಾರಿಯೂ ಇದರ ಒಳಹೊಕ್ಕರೆ ಹೊರ ಬರಲು ಮನಸ್ಸಾಗುವುದಿಲ್ಲ. ನೀವೊಬ್ಬ ಕಲಾರಾಧಕರೂ ಆಗಿದ್ದರೆ ಕಥೆ ಮುಗಿದಂತೆಯೇ. ದಿನವಿಡೀ ಇಲ್ಲಿ ಆರಾಮವಾಗಿ ಕೂತು ನೋಡಬಹುದು, ಕೊಳ್ಳಬಹುದು, ಓದಬಹುದು. ಹೊಟ್ಟೆಗೆ ರುಚಿಕಟ್ಟಾದ ಬಗೆಬಗೆಯ ಪಾಸ್ತಾಗಳು, ಸಾಲಡ್‌ಗಳೂ ಇಲ್ಲಿನ ಪ್ಲಸ್‌ ಪಾಯಿಂಟ್‌!

೩. ಕೆಫೆ ಟರ್ಟಲ್‌, ದೆಹಲಿ: ಖಾನ್‌ ಮಾರ್ಕೆಟ್‌ ಎಂಬ ಗಿಜಿಗುಡುವ ಏರಿಯಾದಲ್ಲಿ ಕೆಫೆ ಟರ್ಟಲ್‌ ಎಂಬ ನಾಮಧೇಯವನ್ನಿಟ್ಟುಕೊಂಡು ಪುಸ್ತಕ ಪ್ರೇಮಿಗಳಿಗೂ ತಿಂಡಿ ಪ್ರೇಮಿಗಳಿಗೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಕೆಫೆ ಇದು. ಮನಸೋ ಇಚ್ಛೆ ಬಹಳಷ್ಟು ವೆರೈಟಿ ಪುಸ್ತಕಗಳನ್ನಿಲ್ಲಿ ಕೂತು ನೋಡಿ ಕೊಳ್ಳಬಹುದು. ಇದಲ್ಲದೆ ದೆಹಲಿಯಲ್ಲಿರುವ ಇನ್ನೊಂದು ಚಂದದ ಬುಕ್‌ ಕೆಫೆ ಕುನ್‌ಝುಂ ಕೆಫೆ. ಮಾನವೀಯ ಕಥೆಗಳ, ಪ್ರವಾಸ ಕಥನಗಳ ಭಾರೀ ಕಲೆಕ್ಷನ್‌ ಇರುವ ಇದು ದೆಹಲಿಯ ಪುಸ್ತಕ ಪ್ರಿಯರ ಇನ್ನೊಂದು ಸ್ವರ್ಗ.

ಇದನ್ನೂ ಓದಿ : ಹೊಸ ಪುಸ್ತಕ | ಪ್ರೀತಿಯಿಂದ ರಮೇಶ್‌ | ನಿಮ್ಮಲ್ಲಿರುವ ಅತಿ ದೊಡ್ಡ ರಿಯಲ್‌ ಎಸ್ಟೇಟ್‌ ಯಾವುದು ಗೊತ್ತೆ?

೪. ಕಿತಾಬ್‌ ಖಾನಾ, ಫುಡ್‌ ಫಾರ್‌ ಥಾಟ್‌, ಮುಂಬೈ: ಮುಂಬೈಯ ಬಹಳ ಸುಂದರ ಬುಕ್‌ ಶಾಪ್‌ಗಳಲ್ಲಿ ಕಿತಾಬ್‌ ಖಾನಾ ಕೂಡಾ ಒಂದು. ಯಾಕೆಂದರೆ ಇಲ್ಲೊಂದು ಹಳೆಯ ಜಗತ್ತಿನ ದೇಸೀ ಸೊಗಡಿನ ವಾಸನೆಯಿದೆ. ಸಾಕಷ್ಟು ಉತ್ತಮ ಕಲೆಕ್ಷನ್‌ ಇರುವ ಈ ಕೆಫೆಯಲ್ಲಿ ಆರಾಮವಾಗಿ ಕೂತು ಹೊಟ್ಟೆ ತುಂಬ ಉಂಡು, ಪುಸ್ತಕವನ್ನೂ ಓದಿ ಇನ್ನಷ್ಟು ಹೊಟ್ಟೆಯನ್ನೂ ತುಂಬಿಕೊಳ್ಳಬಹುದು. ಇಷ್ಟವಾದ ಪುಸ್ತಕಗಳನ್ನು ಖರೀದಿಸಿ ಮರಳಬಹುದು.

೫. ಲೀಪಿಂಗ್‌ ವಿಂಡೋಸ್‌, ಬೆಂಗಳೂರು: ಕಾಮಿಕ್‌ ಪುಸ್ತಕಗಳ ಹುಚ್ಚಿರುವ ಮಂದಿಗೆ ಈ ಕೆಫೆ ಹಬ್ಬ! ಇಲ್ಲಿನ ಪುಸ್ತಕಗಳನ್ನು ಕೊಳ್ಳಲು ಸದಾ ಗಿಜಿಗುಟ್ಟುವ ಜನರಿದ್ದರೂ, ಮೂಲೆಯಲ್ಲಿ ಕೂತು ಕಾಫಿ ಹೀರುತ್ತಾ ಕಾಮಿಕ್‌ ತಿರುವಿ ಹಾಕಲು ಯಾರೂ ನಿಮ್ಮನ್ನು ಅಡ್ಡಿಪಡಿಸುವುದಿಲ್ಲ. ಇಲ್ಲಿ ಬಹಳಷ್ಟು ಹಳೆಯ, ಎಲ್ಲೂ ಸಿಗದಂತಹ ಕಾಮಿಕ್‌ ಪುಸ್ತಕಗಳನ್ನೂ ಕಾಣಬಹುದೆಂಬುದು ವಿಶೇಷ. ಕೈಗೆಟಕುವ ದರದ ತಿಂಡಿ, ಕಾಫಿ ಸಿಗುವ ಇಲ್ಲಿಯ ಬುಕ್‌ ಹಾಗೂ ಫುಡ್‌ ಎರಡೂ ಅದ್ಭುತವೇ.

ಕೇವಲ ಇವಿಷ್ಟೇ ಅಲ್ಲದೆ, ಆಕ್ಸ್‌ಫರ್ಡ್‌ ಬುಕ್‌ ಸ್ಟೋರ್ಸ್‌ನ ಬಹುತೇಕ ಎಲ್ಲ ನಗರಗಳಲ್ಲೂ ಇರುವ ಚಾ ಬಾರ್‌, ಮೆಕ್‌ಲೋದ್‌ಗಂಜ್‌ನಲ್ಲಿರುವ ಇಲ್ಲಿಟರೇಟಿ, ಗುವಾಹತಿಯ ಬಿಬ್ಲಿಯೋಫಿಲಿಯಾ ಕೆಫೆ, ಪುಣೆಯ ಪಗ್ದಂದಿ ಹೀಗೆ ಅನೇಕ ಬುಕ್‌ ಕೆಫೆಗಳು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ, ಮುಖ್ಯವಾಗಿ ತನ್ನ ವಿಭಿನ್ನತೆಯಿಂದಾಗಿಯೇ ಯುವಜನರನ್ನೂ ಸೆಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ!

ಇದನ್ನೂ ಓದಿ | Sunday Read | ಹೊಸ ಪುಸ್ತಕ | ಇದಿರು ನೋಟದ ಪ್ರತಿಮೆಗಳು

Exit mobile version