Site icon Vistara News

Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ

chalam

ಮದ್ರಾಸಿನ ಸಮುದ್ರದ ತೀರದಲ್ಲಿ ಕುಳಿತಿದ್ದಾರೆ ಒಬ್ಬ ಯುವಕ, ಯುವತಿ.
ಸೂರ್ಯೋದಯಕ್ಕೆ ಎದುರಾಗಿ, ದೂರದಿಂದ ಸೂರ್ಯನು ತನ್ನೊಳಗಿನಿಂದ ತೀರಕ್ಕೆ ಹೊರಳಿಸುತ್ತಿರುವ ಬೆಳಕಿನ ಎಳೆಗಳನ್ನು ನೋಡುತ್ತ, ಇಬ್ಬರೂ ಬಡ ಯುವಕರು, ಲೋಕವೆಂದರೆ ಅಷ್ಟಾಗಿ ತಿಳಿಯದೆ ಯಾರು ಹೇಳುತ್ತಾರೆಂದು ಹುಡುಕುವ ಅಮಾಯಕರು.
“ಹೋಗೋಣವಾ” ಎಂದಳು ಆಕೆ.
“ಹೋಗಬೇಕಾ?” …… ಎಂದನು ಆತ.
ಏಳಲು ಹೋಗಿ, ಇನ್ನೂ ಹತ್ತಿರಕ್ಕೆ ಕುಸಿದು ಬಿದ್ದ ಮರಳಿನಲ್ಲಿ. ಆಕೆಯ ಬೆರಳುಗಳು ಆತನ ಬೆರಳಿನೊಳಗೆ ಸಂಧಿಸಿದವು. ತನ್ನನ್ನು ಲೋಕದಿಂದ ರಕ್ಷಿಸೆಂಬಂತೆ ಕೇಳುತ್ತಿರುವಂತಿದೆ. ಅಷ್ಟೇ ಮತ್ತೆ ಕುಳಿತುಕೊಂಡರು.
“ನೀನು ಹೊರಟು ಹೋಗುವೆಯಾ?” ಕಣ್ಣೀರಿನೊಂದಿಗೆ ತಲೆಯನ್ನು ತಗ್ಗಿಸಿಕೊಂಡಳು ಆಕೆ.
ಸೊಂಟದ ಸುತ್ತಾ ಕೈಯಾಕಿ ಆಕೆಯನ್ನು ತನ್ನೆಡೆಗೆ ಒತ್ತಿಕೊಂಡ. ಆಕೆಯ ತಲೆ ಆತನ ಭುಜವನ್ನು ಮುದ್ದು ಮಾಡುತ್ತಿದೆ. ಪಶ್ಚಿಮದ ಗಾಳಿ ಆಕೆಯ ಜುಟ್ಟಿನೊಂದಿಗೆ ಆತನ ಕತ್ತನ್ನು ಮಧುರವಾಗಿ ಕಚಗುಳಿಯಿಡುತ್ತಿದೆ. ಆತನು ಆಕೆಯ ಮುಖದ ಮೇಲಕ್ಕೆ ಬಗ್ಗಿ ಮೃದುವಾಗಿ ಸೂರ್ಯಕಿರಣವನ್ನು ತೊಲಗಿಸಿ ಮುತ್ತಿಟ್ಟುಕೊಂಡ. ಆಕೆಯ ತುಟಿಗಳು ಅಷ್ಟೊಂದು ನಾಜೂಕಾಗಿ ಆತನ ತುಟಿಗಳ ಕೆಳಗೆ ಕದಲಿದವು. ಇನ್ನು ಆಕೆಯನ್ನು ಸಂರಕ್ಷಿಸುವೆಯೆಂದು (ದೇಹವನಲ್ಲ) ಕೋರಿಕೆಯಿಂದ ಆಕೆಯ ಮನಸನ್ನು ಕೆಡಿಸುವೆನೆಂಬ ಭಯದಿಂದ ನಡುಗಿದ. “ಹೋಗೋಣ ಬಾ” ಎಂದು ಎದ್ದ ದೃಢವಾಗಿ. ಕೈಯಲ್ಲಿ ಕೈಯನ್ನು ಹಿಡಿದುಕೊಂಡು ಇಬ್ಬರೂ ಪಟ್ಟಣದ ಕಡೆ ನಡೆದರು.
“ಯಾವೊತ್ತಿಗೂ ಈ ಕೈಯನ್ನು ಬಿಡಬೇಡ” ಎಂದ ಆತ. ರೋಡಿನ ಪಕ್ಕದಲ್ಲಿರುವ ಗಿಡಗಳ ಮೊನೆಗಳು ಪಕಪಕನೆ ನಕ್ಕವು ವಿಷಾದದಿಂದ. ಅಂದಿನ ಮದ್ರಾಸು ನಗರದ ಒಂಟಿ ಬೀದಿಯಲ್ಲಿ ಏಕಾಂತವಾಗಿ ತಿರುಗಿ ಅಪ್ಪಿಕೊಂಡರು. ಅಂದಿನಿಂದ ಇಂದಿನವರೆಗೂ ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ, ಪರ್ವತದ ಶಿಲೆಗಳ ನೆರಳಲ್ಲಿ, ಹೊಳೆಯ ನೀರಿನ ಮೇಲೆ, ಬಾಗಿರುವ ಗಿಡಗಳ ಕೆಳಗೆ ಸಾಗಿತು.
“ನಿಮ್ಮವರು ನಿನಗೆ ಮದುವೆ ಮಾಡುತ್ತಾರೆ?”
“ಮಾಡುವುದಿಲ್ಲ. ಯಾಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ?”
“ಏನು ಮಾಡುತ್ತೀಯಾ ಮನೆಯಲ್ಲಿ ಕುಳಿತುಕೊಂಡು”
ನೊಂದುಕೊಳ್ಳುತ್ತಾಳೆ ಆಕೆ. “ತಿಳಿಯದಾ?” ಎಂದಳು.
ಅಲೋಚಿಸುತ್ತಿದ್ದಾಳೆ. ಕ್ರಮವಾಗಿ ಆತನ ಕಡೆಗೆ ನೋಡುತ್ತ ಸ್ವಲ್ಪ ದೂರ ನಡೆದಳು. ಮುಖದ ಮೇಲೆ ಬಂದು ಹಿಂದಕ್ಕೆ ಹೋಗುತ್ತಿವೆ ಅಲೆಗಳಂತಹ ಗಿಡಗಳ ನೆರಳುಗಳು. ಈಕೆ ತನಗೆ ದೂರವಾಗಿ ಹೋದರೆ ತಾನು ಹೇಗೆ ಕಾಲ ಕಳೆಯುವುದು?


“ನಾನು ಬಂದರೆ ನನ್ನನ್ನು ಓದಿಸುವೆಯಾ ಚಲಂ (ವೆಂಕಟಾಚಲಂ)?”
“ತಪ್ಪದೆ ಓದಿಸುತ್ತೇನೆ- ಅಲ್ಲ ನಾನು ಓದು ಹೇಳಿಕೊಡುತ್ತೇನೆ”.
“ಹೇಳುವೆಯಾ? ನಾನು ಡಾಕ್ಟರ್ ಆಗಬೇಕೆಂದಿರುವೆ”.
“ಹ್ಞೂ!!!”
ಈಕೆಗೇನು ವಾಗ್ದಾನ ಮಾಡುತ್ತಿದ್ದೇನೆ, ಇಂಗ್ಲೀಷ್ ಒಂದು ಮಾತೂ ಕೂಡಾ ಬರದ ಈಕೆಗೆ ತಾನು ಬದುಕುವುದು ಹೇಗೆ ಎಂದು ಗೊತ್ತಿರದ ನಾನು, ಈಕೆಯನ್ನು ಡಾಕ್ಟರ್ ಮಾಡುತ್ತೀನಾ?
ಆದರೆ ಸ್ತ್ರೀಯರ ಕುರಿತಾಗಿ, ಮಕ್ಕಳ ಕುರಿತಾಗಿ ಆತನ ಸಾಹಸಕ್ಕೆ ಕೊನೆಯಿಲ್ಲ. ಹಾಗೆ ಕಾಪಾಡುತ್ತಿದ್ದಾನೆ ಈಶ್ವರನು ಇಂದಿನವರೆಗೂ ಕೂಡಾ.
“ಓದಿಸುತ್ತೇನೆ”
ಯಾಕೆ ನಂಬಿದಳು? ಆತನನ್ನು ಈಕೆ. ಇಂದಿಗೂ ಆತನನ್ನು ಯಾಕೆ ನಂಬುತ್ತಾರೆ? ಆಕೆ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆಕೆ ಸಣ್ಣ ಕೈಗಳ ಮೇಲೆಯೇ ಎಷ್ಟೋ ಜನ ದಿಕ್ಕಿಲದ ಸ್ತ್ರೀಯರು, ಆಪತ್ತಿನಲ್ಲಿರುವವರು, ದುಃಖಿತರು, ಸಮಾಧಾನಕ್ಕಾಗಿ ಹಪತಪಿಸುವವರು, ನನಗೊಬ್ಬ ತಾಯಿ ಇರುವುದಿಲ್ಲವಾ ಎಂದು ಅಳುವವರು, ಈ ಲೋಕದಲ್ಲಿ ಎಲ್ಲಿಯೂ ದಿಕ್ಕೆಂಬುದು ಇಲ್ಲದ ದೀನರು, ಸಮಾಜದ ಬಹಿಷ್ಕೃತರು. ಎಷ್ಟೋ ಜನ ಸ್ತ್ರೀಯರು, ತಾಯಿಯರನ್ನು ಬಿಟ್ಟು ಬಂದ ಮಕ್ಕಳು, ನನ್ನನ್ನು ತೆಗೆದುಕೊಳ್ಳಿ ಎಂದು ಗರ್ಭದಲ್ಲಿಯೇ ಕೈಗಳನ್ನು ಚಾಚುವ ಶಿಶುಗಳು. ಎಷ್ಟೊಂದು ಸಂತೋಷದಲ್ಲಿ ಅವರ ಬದುಕುಗಳು ಒಂದು ದೊಡ್ಡ fulfilment ನಡೆದಂತೆ ತೃಪ್ತಿಪಟ್ಟರು!


ಬೆಳಿಗ್ಗೆ ತೋಟದಲ್ಲಿ ದಾಳಿಂಬೆ ಹೂವಿನ ಗಿಡದ ಕೆಳಗೆ ಧ್ಯಾನದಲ್ಲಿ ಕುಳಿತಿರುವಾಗ ಮತ್ತೆ ಆ ಕೈ ನನ್ನ ಕೈಗಳಿಗೆ ತಗುಲಿತು. ಕಣ್ಣು ತೆರೆದು ನೋಡಿದೆ. ಹೊಸ ಕಣ್ಣುಗಳಿಂದ ಮಾಸಿ ಹೋದ ಸೀರೆ, ಕೆದರಿದ ಜುಟ್ಟು, ಕಿರುನಗೆಯಿಂದ ನಡುಗುತ್ತಿರುವ ತುಟಿಗಳು, ಅಮಾಯಕವಾದ ನೋಟಗಳು.
“ಯಾರೂ? ಯಾರು?”
“ಬಂದಿರುವೆ”
“ಬಂದೆಯಾ? ನಿಜವಾಗಿಯೂ ಬಂದೆಯಾ?” ಎಂದೆ. ಆದರೆ ಧ್ಯಾನದಿಂದ ಇನ್ನೂ ಹೊರಗೆ ಬರದೆ ಮೆದುಳು ಆಗಲೇ ಒರಟು ಆಲೋಚನೆಗಳನ್ನು ಪ್ರಾರಂಭಿಸಿತು. ಅರ್ಥವಾಗುತ್ತಿದೆ ಆಕೆಗೆ, ನಾನು ನಿಂತಿದ್ದೇನೆ. ಆಕೆಯೂ ಕೂಡಾ ನಿಂತಿದ್ದಾಳೆ. ದೂರದಲ್ಲಿ ದುಷ್ಯಂತನ ಸಭೆಯಲ್ಲಿ ಶಕುಂತಲೆಯಂತೆ, ಮಾತುಗಳಿಲ್ಲದೆ ನಡೆಯುತ್ತಿದ್ದೇವೆ. ಆಕೆ ತನ್ನಲ್ಲಿಲ್ಲದ ಉತ್ಸಾಹವನ್ನು ತಂದುಕೊಳ್ಳುತ್ತಿದ್ದಾಳೆ.
“ಬರುವಾಗ ನನ್ನನ್ನು ಉಟ್ಟುಬಟ್ಟೆಯಿಂದ ಕಳುಹಿಸಿದರು. ಹಣ ಕಳುಹಿಸುತ್ತೇನೆಂದರು. ಆದರೆ ಕಳುಹಿಸುತ್ತಾರಾ?” ಸುತ್ತಲೂ ನೋಡಿದಳು.
“ಇಲ್ಲ ನೀನು ಇರುತ್ತೀಯಾ?”
“ಎಷ್ಟೊಂದು ದೊಡ್ಡದಾಗಿದೆಯೋ! ಆದರೆ ಆಕೆ ಯಾರು? ಆಕೆಯೂ ಕೂಡಾ ನಿನ್ನೊಂದಿಗೆ ಇರುತ್ತಾಳಾ?” ನಾನು ಕೇಳಿಸಿಕೊಳ್ಳುತ್ತಿಲ್ಲ.
ಈಕೆಯೊಂದಿಗೆ ಇಲ್ಲಿ ಹೇಗೆ? ಹೇಗೆ?
“ಯಾರು ಇರುತ್ತಾರೆ ಇಲ್ಲಿ ವೆಂಕಟಾಚಲಂ?”
“ನಿನ್ನ ಮನೆಯಲ್ಲವಾ….. ಮಾತನಾಡುತ್ತಿಲ್ಲವೇಕೆ?” ಎನ್ನುತ್ತಾಳೆ ಭಯದಿಂದ.
“ಈ ಊರಿಗೆ ಬಂದ ಮೇಲೆ ನಿನ್ನನ್ನು ಬೇಟಿಯಾಗುವುದಕ್ಕೆ ಎಷ್ಟು ಕಷ್ಟವಾಯಿತೆಂದು ಕೊಂಡೆ?” ಎಂದು ಆಕೆಯನ್ನು ಕೇಳಿದೆ.
“ವೆಂಕಟಾಚಲಂ ಇದ್ದಾನಾ ಎಂದು?”
“ವೆಂಕಟಾಚಲಂ, ವೆಂಕಟಾಚಲಂ?”
“ಯಾರು ನೀನು?”
“ನಾನು ವೊಯ್ಯಿʼʼ
“ಓ !”
“ಎಲ್ಲಿದ್ದಾನೆ?”
“ನನಗೇನು ಗೊತ್ತು ಎಲ್ಲಿದ್ದಾನೋ? ಹಾಗೆ ಹೋಗಿ ಆ ಕಾಡಿನಲ್ಲಿ ಹುಡುಕು” ಎಂದಳು. ನಿರ್ಲಕ್ಷö್ಯವಾಗಿ. ಎಷ್ಟೊಂದು ಅಳು ಬಂತೋ!
ಗಿಡಗಳ ಮೇಲಕ್ಕೆ ಹರಡಿಕೊಂಡಿರುವ ಆ ಮುಂಜಾನೆಯ ಬಿಸಿಲಲ್ಲಿ ಇಬ್ಬರೂ ನಡೆಯುತ್ತಿದ್ದೇವೆ. ಮದ್ರಾಸಿನಲ್ಲಿ ನಾವಿಬ್ಬರು ಎಲ್ಲಿ ಬೇರೆಯಾಗಿ ಬಿಟ್ಟು ಹೋದೆವೋ, ಆ ಕಥೆಯನ್ನು ಮತ್ತೆ ಪಡೆದುಕೊಳ್ಳುವಂತಿದೆ. ಏಕತಾರಿಯನ್ನು ಹಿಡಿದುಕೊಂಡು ಭವಿಷ್ಯತ್ತಿನ ಸಂಗತಿಯನ್ನು ಆಲೋಚಿಸುತ್ತಾ ನಾನು, ನನ್ನ ಕೈಯನ್ನು ಹಿಡಿದುಕೊಂಡು ಎಲ್ಲಿಯೂ ಹಗೆಯಿಲ್ಲದ ವಿಶ್ವಾಸದಿಂದ ಆಗಾಗ ನನ್ನ ಮುಖದ ಕಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತ ನಡೆಯುತ್ತಿದ್ದಾಳೆ ವೊಯ್ಯಿ. ಇಬ್ಬರೂ ದರಿದ್ರರು. ದಿಕ್ಕಿಲ್ಲದವರು. ಲೋಕ ಬಹಿಷ್ಕೃತರು. ಆದರೆ ಈ ದಿನದಿಂದ ನಮ್ಮ ಬದುಕಿನಲ್ಲಿ ಒಂದು ಉಜ್ವಲವಾದ ಕಾಂತಿಯೊಳಗಿನಿಂದ ನಡೆಯುತ್ತಿರುವೆಯೆಂದು ಗೊತ್ತಿಲ್ಲವಲ್ಲ.
“ನೀನು ಎಲ್ಲಿರುವುದು?”
ಪರಧ್ಯಾನದಲ್ಲಿ ನಾನು “ಹ್ಞೂ” ಎಂದೆ. ಎರಡು ನಿಮಿಷಗಳ ನಂತರ ಆಕೆ.
“ಚಿಟ್ಟಿ, ರವಿ ಎಲ್ಲಿ”
“ತೆನಾಲಿಗೆ ಹೋಗಿದ್ದಾರೆ”
“ಯಾಕೆ?”
“ನಮಗೆ ಯಾರೂ ಈ ಊರಿನಲ್ಲಿ ಮನೆ ಕೊಡುವುದಿಲ್ಲ. ಈಕೆ ನಮ್ಮ ಅಬ್ಬತ್ತೆ. ಈ ತೋಟದವರು ಆಕೆಗೆ ರಕ್ಷಣೆ ಕೊಟ್ಟರು. ಈಕೆ ನಮಗೆ ರಕ್ಷಣೆ ಕೊಟ್ಟಿದ್ದಾಳೆ” ನಾನು ಆಲೋಚಿಸುತ್ತಿದ್ದೇನೆ.
“ನಾನು ಬರುವುದು ನಿನಗೆ ತೊಂದರೇನಾ?”
“ನೀನು ಬರುವುದರಿಂದ ನನ್ನೊಳಗೆ, ಈ ತೋಟದ ಒಳಗೆ ಕಾಂತಿಯೊAದನ್ನು ಬೆಳಗಿಸಿದೆ”.
ತದನಂತರ ಮಾತನಾಡದೆ ಮನೆಗೆ ಬಂದೆವು. ಅಬ್ಬತ್ತೆ ಬಾಗಿಲಲ್ಲಿ ನಿಂತಿದ್ದಾಳೆ.
“ಇವಳೇ ನನ್ನ ವೊಯ್ಯಿ” ಎಂದೆ.
ಅಬ್ಬತ್ತೆ ಆಕೆಯ ಸುತ್ತಾ ಕೈ ಹಾಕಿದಳು.
“ಬಾರಮ್ಮ! ಒಳಗೆ ಬಾ! ನಮ್ಮವನ್ನು ಹೇಳಿದ್ದಾನೆ ನಿನ್ನ ವಿಷಯ”
ಮಾರನೇಯ ದಿನ ವೊಯ್ಯಿಗೆ ಪಾಠಗಳನ್ನು ಹೇಳಲು ಪ್ರಾರಂಭಿಸಿದೆ.


ಅಂದಿನಿಂದ ಪ್ರಾರಂಭವಾಯಿತು ನನ್ನ ಬದುಕಿಗೆಲ್ಲಾ ಉಜ್ವಲವಾದ ಕಾಲ. ನೆನಪು ಮಾಡಿಕೊಳ್ಳೋಣವೆಂದರೆ, ನೆನಪು ಮಾಡಿಕೊಳ್ಳುವುದಕ್ಕೆ ಏನೂ ಇಲ್ಲ. ಅಸಲು ಆನಂದವೆಂದರೆ ಏನು, ಏನು ಇಲ್ಲದೆಯಿರುವುದೇ ಆನಂದ. ಇದರಿಂದ ಆನಂದ ಬಂದಿದೆಯೆಂದರೆ ಅದು ಆನಂದದಲ್ಲಿ ಲೋಪವೆ. ಚಿಕ್ಕ ಮಕ್ಕಳು ಸಂತೋಷದಿಂದ ಕಳೆಯುತ್ತಾರೆ ದಿನಗಳನ್ನು, ಮುಖ್ಯವಾಗಿ ಬೀದಿ ಮಕ್ಕಳು. ಎಲೆಗಳೊಂದಿಗೆ, ಕಡ್ಡಿಗಳೊಂದಿಗೆ, ಕಲ್ಲುಗಳೊಂದಿಗೆ ಕೆಲಸವಿಲ್ಲದೆ ಕಳೆಯುತ್ತಾರೆ ಕ್ಷಣಗಳನ್ನು. ಈಡೆನ್‌ನಲ್ಲಿ ಆಡಂ ಈವ್ ಹಾಗೆಯೆ ಕಳೆದಿರುತ್ತಾರೆ ಬದುಕನ್ನು. Forbidden apple ತಿನ್ನುವವರೆಗೂ.
ಅಬ್ಬತ್ತೆ ಏನು ಬೇಯಿಸಿಡುತ್ತಾಳೋ ಅದನ್ನು ತಿಂದು, ಎಲ್ಲ ನಿದ್ದೆ ಮಾಡುತ್ತಿದ್ದೆವೊ, ಏನು ಮಾತನಾಡಿಕೊಳ್ಳುತ್ತಿದ್ದೆವೊ ನೆನಪಿಲ್ಲ. ಕೆಲವು ಎಕರೆಗಳ ದೊಡ್ಡ ತೋಟದಲ್ಲಿ ಹೂಗಳು, ಹಣ್ಣುಗಳು, ಬೆಚ್ಚಗಾಗಿಸುವ ಬಿಸಿಲು, ಉದಯಿಸುವ ಸೂರ್ಯನಿಗೆ Good bye ಹೇಳುವ ನಕ್ಷತ್ರಗಳು ಇಷ್ಟೇ ನೆನಪು. ತೊಡುವ ಎರಡು ಜೊತೆ ಬಟ್ಟೆಯ ಹೊರತು ನಮಗೆ ಆಸ್ತಿಯಿಲ್ಲ. ಕಾಲೇಜಿಗೆ ಹೋದರೂ ಹೋದಂತಿರುತ್ತಿರಲಿಲ್ಲ. ನನ್ನ ಮನಸು ಆಕೆಯ ಸೀರೆಯ ನೆರಿಗೆಗಳಲ್ಲಿ ಬಚ್ಚಿಟ್ಟುಕೊಂಡಿರುತ್ತಿತ್ತು. ಅಷ್ಟೂ ಹೊತ್ತು ಕಾಲೇಜು ಮುಗಿಯುತ್ತಿರುವಂತೆ, ಯಾವುದಾದರೂ ಗಿಡದ ಕೊಂಬೆಯಲ್ಲಿಯೊ ಕುಳಿತುಕೊಂಡು ನನಗಾಗಿ ಎದುರುನೋಡುವ ಆಕೆಗಾಗಿ ಕೈಗಳೊಳಗೆ ಮುಖವನ್ನು ಹುದುಗಿಸುತ್ತಿದ್ದೆ. ಮನುಷ್ಯ ಸಂಚಾರವಿಲ್ಲದ ಕಾಡಿನಂತಹ ಅಷ್ಟು ದೊಡ್ಡ ತೋಟವನ್ನು ನಮಗಾಗಿಯೇ ನಿರ್ಮಿಸಿರಬಹುದೆಂಬ ಕೃತಜ್ಞತೆಯಿಂದ ತುಂಬಿಹೋಗುತ್ತಿತ್ತು ನನ್ನ ಹೃದಯ. ಇದೆಲ್ಲಾ ನಿಜಾನಾ? ಕನಸಾ? ಇಂತಹ ಆನಂದ ಅಸಲು ಇದೆಯಾ ಪ್ರಪಂಚದಲ್ಲಿ? ಹೀಗೆಯೇ ಇದು ಬಿಡುವುದಕ್ಕೆ ಸಾಧ್ಯನಾ? ಇದಕ್ಕೂ ಮೊದಲು ಅಸಲು ಬದುಕಿರುವೆವಾ? ಎಂದು ಬಣ್ಣದ ನೆರಳಿನಂತಹ ಆಲೋಚನೆಗಳು ಮಾತ್ರ ಬರುತ್ತಿತ್ತು. ಏನನ್ನು ತಿನ್ನುತ್ತಿರುವೆವೊ! ಏನನ್ನು ಉಡುತ್ತಿರುವೆವೊ ನೆನಪಿಲ್ಲ;
ಒಂದು ದಿನ ಪ್ರಿನ್ಸಿಪಾಲ್ ನನ್ನನ್ನು ಕರೆದು, “ಏನು ಈ ಬಟ್ಟೆಗಳು? ನಿನ್ನನ್ನು ಪಾಠ ಹೇಳಲು ಹೇಗೆ ಕ್ಲಾಸ್‌ಗೆ ಕಳುಹಿಸಲಿ?ʼʼ ಎಂದು ಕೇಳುವವರೆಗೂ, ಅಲ್ಲಿಯವರೆಗೂ ನನಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ.
“ಬದಲಾಯಿಸಬೇಕಾ? ಯಾಕೆ? ಹೇಗೆ ಬದಲಾಯಿಸಬೇಕು?” ಎಂದು ಕೇಳಿದೆ.
ಆತ ಜಂಟಲ್‌ಮನ್‌, ನನ್ನ ಕುರಿತು ದಯೆ ಇರುವವನು. “ನನಗೆ ಅದೆಲ್ಲಾ ಗೊತ್ತಿಲ್ಲ. ನೀನು ಬದಲಾಯಿಸಿಕೊಳ್ಳಬೇಕು” ಎಂದು ಹೊರಟು ಹೋದರು.
ಒಂದು ದಿನ ಕಾಲೇಜಿಗೆ ಹೋದ ನಂತರ ಕಾಲೇಜಿಗೆ ರಜೆ ಎಂದರು. ಪೂರ್ವ ಸಿದ್ಧತೆಯಿಲ್ಲದೆ, ಆಕಸ್ಮಾತ್ತಾಗಿ ಮನೆಗೆ ಬಂದೆ. ಮನೆಯೊಳಗಿನಿಂದ ಅಬ್ಬತ್ತೆಯ ಅಳು ಕೇಳಿಸಿತು. ನಿಂತು ಕೇಳಿದೆ. ಅದು ತನ್ನ ಸ್ವಂತ ದುಃಖ, ನಡು-ನಡುವೆ ಯಾರನ್ನೋ ಬಯ್ಯುತ್ತಿದ್ದಾಳೆ. ಇದಕ್ಕೂ ಮೊದಲು ಆಗಾಗ ಅಳುತ್ತಿದ್ದರೂ, ನಾನು ವೊಯ್ಯಿ ಹೋಗಿ ನಮ್ಮ-ನಮ್ಮ ಸಂತೋಷಗಳಿಂದ ಆಕೆಯನ್ನು ನಗಿಸುತ್ತಿದ್ದೇವು. ವೊಯ್ಯಿ ಹೇಳುತ್ತಿದ್ದಳು. ನಾನು ಇಲ್ಲದೆಯಿರುವಾಗ ಆಗಾಗ ಹೀಗೆ ಅಳುತ್ತಿರುತ್ತಾಳೆ. ಲೋಕವನ್ನೆಲ್ಲಾ ಮರೆತರೆ ಮರೆಯುತ್ತೇನೆ. ಆದರೆ ಯಾರೊಂದಿಗೆ ಬದುಕುತ್ತಿರುವೆವೊ ಆ ಅಬ್ಬತ್ತೆಯನ್ನು, ಕಮಲಳನ್ನು ಮರೆತು ತಿರುಗುತ್ತಿರುವೆಯೆಂದು ನನಗೆ ತುಂಬಾ ನಾಚಿಕೆಯಾಯಿತು. ಗಬಗಬನೆ ಓಡುತ್ತ ಹೋಗಿ ಅಬ್ಬತ್ತೆಯ ಕತ್ತನ್ನು ತಲೆಯನ್ನು ತಬ್ಬಿಕೊಂಡೆ.
“ಯಾಕೆ ಅಬ್ಬತ್ತೆ, ಏನಿದು?”
“ಏನೂ ಇಲ್ಲ ಬಿಡಪ್ಪ” ಎಂದು ಕಣ್ಣನ್ನು ಒರೆಸಿಕೊಂಡಳು.
“ಏನಿದು ದುಃಖ? ಹೇಳು ಅತ್ತೆ”
ಅಷ್ಟೊಂದು ಉಕ್ಕಿ ಬರುವ ಆನಂದದಲ್ಲಿ ಬದುಕುತ್ತಿದ್ದ ನಾನು ಇನ್ನೊಬ್ಬರ ಕಷ್ಟವನ್ನು ಒಳಗೆ ತೆಗೆದುಕೊಳ್ಳಲಾರದೆ ಹೋದೆ. ಲೋಕವೆಲ್ಲಾ ಆನಂದದಿಂದ ಕಾಣಿಸುತ್ತಿದೆ” ಒಂದು ಹೊತ್ತು ಅಬ್ಬತ್ತೆ ಊಟ ಮಾಡಿ ಬಡಿಸದೆ ಹೋದರೆ, ಕಮಲ ಸ್ನಾನಕ್ಕೆ ನೀರು ಇಡದೇ ಹೋದರೆ, ತಿಳಿಯುತ್ತಿತ್ತು ನನ್ನ ಆನಂದ ಎಂತಹದೆAದು. ಈ ಗಾಳಿ, ಬಿಸಿಲು, ಹಗಲು, ರಾತ್ರಿ, ಗಿಡಗಳು ನೆರಳು, ಬೆಳದಿಂಗಳು ಎಲ್ಲವನ್ನು ಪ್ರಶ್ನೆಯಿಲ್ಲದೆ ಅನುಭವಿಸುತ್ತ, ಯಾವ ಒಂದರಲ್ಲಿ ಯಾವ ಲೋಪ ಬಂದರೂ ಬಯ್ಯಲು ಪ್ರಾರಂಭಿಸುತ್ತೇವೆ. ವಿಧಿಯನ್ನೋ, ವಿಧಾತನನ್ನೋ, ಎಷ್ಟೊಂದು ದೊಡ್ಡದಾದ ಈ ಲೋಕದಲ್ಲಿ ಶೃಂಗಾರಕ್ಕೆ ಹಿಡಿದು ತುಂಬಾ ದೊಡ್ಡ ಲೋಪವಿದು. ಪ್ರಿಯರು ಒಬ್ಬರಲ್ಲಿ ಒಬ್ಬರು ತನ್ಮಯರಾಗಿರುವಾಗ ಈ ಲೋಕವನ್ನೇ ಮರೆಯುತ್ತಾರೆ. ಹಾಗೆ ಮರೆಯದೆ ಹೋದರೆ ಅದು ದೊಡ್ಡ ಶೃಂಗಾರವಾಗುವುದಿಲ್ಲ.
ಆ ಬೆಳಗ್ಗೆ ಇಷ್ಟೊಂದು ಆನಂದಮಯವಾದ ಕಾಲದಲ್ಲಿ ಅಬ್ಬತ್ತೆ ಯಾಕೆ ಅಳುತ್ತಿರುವಳೆಂದು ನನಗೆ ಆಶ್ಚರ್ಯವಾಯಿತು. ಆಸ್ತಿಯೆಲ್ಲಾ ಹೋಗಿ ಲೋಕದಲ್ಲಿ ಎಲ್ಲಿಯೂ ದಿಕ್ಕಿಲ್ಲದೆ, ಮುಂದೆ ತನ್ನ ಜೀವನ ಏನಾಗುತ್ತದೆಯೋ ತಿಳಿಯದೆ ಬೆಳೆಯುತ್ತಿರುವ ಕಮಲಳನ್ನು ಏನು ಮಾಡಬೇಕೆಂದು ಅರ್ಥವಾಗದೆ ಹಾಗೆ ಕುಗ್ಗಿ ಹೋಗುತ್ತಿದ್ದರೆ ನನಗೆ ಆಶ್ಚರ್ಯ. ನಾನು ಮನೆಗೆ ಬರುವಾಗ ಹೋಗುವಾಗ ನನ್ನಿಂದ ಒಂದು ಸಣ್ಣ ದಯೆಯಿರುವ ಮಾತಿಗೆ ಬಾಗಿಲು ಹಿಡಿದುಕೊಂಡು ಎದುರು ನೋಡುತ್ತ ನಿಂತಿರುವ ಕಮಲಳ ಕಡೆಗೆ ನಾನು ಕಣ್ಣೆತ್ತಿ ನೋಡಿದೆನಾ? ಅಬ್ಬತ್ತೆಗೆ ನಮ್ಮ ಮೇಲಿನ ನಿರ್ವಾಜ್ಯ ಕರುಣೆಗೆ ಯಾವಾಗಲಾದರು ಎದುರು ಮಾತನಾಡಿದೆನಾ? ಆದರೂ ನನ್ನ ಜೀವನದಲ್ಲಿ ಬಹುದೊಡ್ಡ ಕಾಲವದು.
ಮತ್ತೆ ಮೊದಲು ಜಾರಿಬೀಳುವ ನಕ್ಷತ್ರಗಳ ಕಾಂತಿ. ಬೆಳದಿಂಗಳಲ್ಲಿ ಗುರುತಿಲ್ಲದೆ ಕರಗಿ ಹೋಗುವಂತೆ ನಮ್ಮ ಕಾಲವೆಲ್ಲಾ ಪ್ರೀತಿಯ ಮಾಧುರ್ಯದಲ್ಲಿ ತೇಲಿ ಹೋಯಿತು. ಆದರೆ ಎಷ್ಟು ಕಾಲ ಸಾಗುತ್ತದೆ? ನನ್ನ ಕಾಲೇಜಿನ ಪರೀಕ್ಷೆ ಮುಗಿಯುತ್ತಿರುವಂತೆ ನಾನು ಮೊಯ್ಯಿ ಹೊರಟು ಹೋಗಬೇಕು. ಅತ್ತ ತದನಂತರ ಅಬ್ಬತ್ತೆ ಏನಾಗುತ್ತಾಳೆ? ಎಂಬ ಆಲೋಚನೆಯಿಲ್ಲ. ಆ ಮುಂಜಾನೆ ಆಲೋಚಿಸುವುದು ತಪ್ಪಲಿಲ್ಲ. ನಾನೂ ವೊಯ್ಯಿ ಊಟ ಮಾಡುತ್ತಿದ್ದೇವೆ. ನಾವು ಏನು ತಿನ್ನುತ್ತಿರುವೆಂದು ನಮಗೆ ನೆನಪಿಲ್ಲ. ಕಿರುನಗೆಯಿಂದ ಬಡಿಸುತ್ತಿದ್ದಾಳೆ ಕಮಲ ನಮ್ಮ ಸಂತೋಷವನ್ನೆ ತನ್ನ ಸಂತೋಷ ಮಾಡಿಕೊಂಡು ಎಷ್ಟು ಹೊತ್ತಿಗೋ ನಮ್ಮ ನೋಟ ನಮ್ಮ ಸುತ್ತಲಿರುವ ತೋಟದ ಮೇಲೆ ನೆನ್ನೆ ರಾತ್ರಿ ಸುರಿದ ಮಳೆಯ ಹನಿಗಳು ಬಿಸಿಲಿನಲ್ಲಿ ಹೊಳೆಯುತ್ತ ಗಾಳಿಯಲ್ಲಿ ತಣ್ಣಗೆ ಎಲೆಗಳ ಮೇಲೆಯಿಂದ ಜಾರಿಹೋಗುತ್ತಿವೆ. ಇನ್ನೂ ಬರಲಿಲ್ಲವಲ್ಲಾ? ಎಂಬ ಕೇಕೆಗಳು ಮಾಡುತ್ತಿವೆ ಪಕ್ಷಿಗಳು ಕಮಲ ಭಯದಿಂದ “ಈ ಹೊತ್ತಿಗೆ ಈ ಸಾರು, ಮಜ್ಜಿಗೆ” ಎಂದಳು.
ತಲೆಯೆತ್ತಿ ನೋಡಿದೆ, ಏನೋ ಹೇಳುತ್ತಿದ್ದಾಳೆ.
“ಪಲ್ಯ ಮಾಡಲಿಲ್ಲ”
“ಪಲ್ಯ? ಪಲ್ಯ ಇಲ್ಲದಿದ್ದರೇನಂತೆ?” ಎಂದಳು ವೊಯ್ಯಿ.
ಮಜ್ಜಿಗೆ ಅನ್ನದ ಕೈಯನ್ನು ತೊಳೆದುಕೊಂಡು ತೋಟದ ಒಳಗೆ ಓಡಿದೆವು.

ಇದನ್ನೂ ಓದಿ: Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ
“ಪಲ್ಯಕ್ಕೆ ಬೇಕಾದ ಸೊಪ್ಪು ಕೊಳ್ಳಲು ಅವರ ಬಳಿ ಹಣವಿಲ್ಲ” ಎಂದಳು ವೊಯ್ಯಿ.
ಎಷ್ಟೊಂದು ಕುರುಡ ನಾನು. ನಮ್ಮೀಬ್ಬರಿಗೆ ಯಾಕೆ ಊಟವಿಡುತ್ತಾಳೆ ಅಬ್ಬತ್ತೆ? ಯಾಕಿಡಬೇಕು ಆಕೆ? ನಮ್ಮಿಂದ ಹಣವಿಲ್ಲ. ಸರಿ, ಒಂದು ಒಳ್ಳೇಯ ಮಾತು, ಒಂದು ಕಿರುನಗೆಯೂ ಕೂಡಾ! ತಕ್ಷಣ ಏನೇನೋ ನೆನಪಿಗೆ ಬಂದು ದೊಡ್ಡ ಪಶ್ಚಾತ್ತಾಪದಿಂದ ಅಬ್ಬತ್ತೆಯ ಬಳಿಗೆ ಓಡಿದೆ. ನಾವು ಹೋಗಿ ನೋಡುವ ಹೊತ್ತಿಗೆ ಅರ್ಧ ತಿಂದ ಸಾರು. ಅನ್ನ ತಟ್ಟೆಯ ಮುಂದೆ ಇಟ್ಟುಕೊಂಡು ನಿಶ್ಯಬ್ಧವಾಗಿ ಅಳುತ್ತಿದದ್ದಾಳೆ. ಆ ತಟ್ಟೆ ಒಂದು ಬಟ್ಟಲು ನಾನು ಎಷ್ಟು ಗೋಗೆರೆದರೂ ಅಳು ನಿಲ್ಲಿಸಲಿಲ್ಲ ಎಷ್ಟು ಆಕೆ ಪ್ರಯತ್ನಿಸಿದರೂ ಅಳುವನ್ನು ನಿಲ್ಲಿಸಲಾಗುತ್ತಿಲ್ಲ. ಆಕೆಗೆ, ಕೊನೆಗೆ “ನೋಡಪ್ಪ! ಸಮಯ ಬರುವ ಹೊತ್ತಿಗೆ ನನ್ನ ಬಳಿಗೆ ಸೇರಿದ ನನ್ನ ಸೋದರಳಿಯನಿಗೆ ತಿಂಡಿ ಇಡುವುದಕ್ಕೂ ಕೂಡಾ ಏನೂ ಇಲ್ಲದಂತೆ ಮಾಡಿದನವನು”.
ಅವನೆಂದರೆ ತನ್ನ ಆಸ್ತಿಯನ್ನೆಲ್ಲಾ ಕಬಳಿಸಿದ ಆ ಮೂರನೇಯ ಗಂಡ. ಅಷ್ಟೊಂದು ಆಸ್ತಿಯನ್ನು ಈಕೆಯ ಅನುಮತಿಯಿಲ್ಲದೆ ಆತ ಹೇಗೆ ಕಬಳಿಸಿದನೋ ಯಾರಿಗೂ ಗೊತ್ತಿಲ್ಲ!
ಬಿಡುವಾಗಿ ಕುಳಿತುಕೊಂಡು ವಿರಾಮವಾಗಿ ಸುತ್ತಲೂ ನೋಡಿದೆ.
“ನಿನ್ನ ಹತ್ತಿರ ಹಣವಿಲ್ಲವೇ ಅಬ್ಬತ್ತೆ?”
“ನಿನಗೇಕೆ ತಂದೆ ಈ ತಗಾದೆಯಲ್ಲಾ” ಎಂದಳು. ನನಗೆ ಗಟ್ಟಿಯಾದ ಅನುಮಾನ ವುಂಟಾಗಿ, ಕಮಲಳನ್ನು ಕೇಳಿ, ತಿಳಿದುಕೊಂಡೆ. ಕ್ರಮವಾಗಿ ಅಬ್ಬತ್ತೆ ಅಡುಗೆಯ ಬಟ್ಟಲುಗಳನ್ನು ಮಾರಿಕೊಳ್ಳುತ್ತಾಳೆ. ಅದರ ಬದಲಾಗಿ ಮಣ್ಣಿನ ಪಾತ್ರೆಗಳನ್ನು ಕೊಂಡು ಕೊಳ್ಳುತ್ತಾಳೆ. ನಮ್ಮಿಬ್ಬರಿಗೆ ಒಳ್ಳೇಯ ಊಟವನ್ನಿಟ್ಟು ತಾನು, ಕಮಲ ಸಾರು, ಗಂಜಿಯನ್ನು ಸುರಿದುಕೊಂಡು ತಿನ್ನುತ್ತಿದ್ದಾರೆ. ಆಕೆ ಬರುವ ಅಳಿಯನಿಗೆ ವರದಕ್ಷಿಣೆಗೆಂದು ನಾಯ್ಡು ರವರು ಆಕೆಯ ನಗಾನಾಣ್ಯಗಳನ್ನು ಭದ್ರಪಡಿಸಿದ್ದಾರೆ. ಪ್ರತಿ ತಿಂಗಳೂ ಇಬ್ಬರಿಗೂ ಸರಿ ಹೊಂದುವ ಅಕ್ಕಿಯ ಖರ್ಚನ್ನು ಕೊಡುತ್ತಾರಂತೆ. ಮೂರು ಮದುವೆಗಳ್ಳನ್ನಾದ ಆಕೆಯ ನೈತಿಕ ನಿಲುವು ಆತನ ದೃಷ್ಟಿಯಲ್ಲಿ ಅಷ್ಟೇ ಇರಬಹುದು. ನನ್ನ ಸಂಪಾದನೆ ರೂ.೧೫, ಆಕೆಗೆ ಸ್ವಲ್ಪ ಕೊಡಲು ಹೋದೆ. “ಯಾಕಪ್ಪಾ” ಇವು ನನಗೆ? ನನ್ನ ಸೋದರಳಿಯನಿಗೆ ತಿಂಡಿಯನ್ನೂ ಕೂಡಾ ಕೊಡಲಾಗದ ದರಿದ್ರದ ಮುಂಡೆಯಾಗಿ ಮಾಡಿಟ್ಟ ಆ ಮುಂಡೆಮಗ. ಇದನ್ನೆಲ್ಲಾ ಅವನಿಂದ ಪಡದೇ ಪಡೆಯುತ್ತೇನೆ. ನೀನು ಯಾಕೆ ಕೊಡುವುದು? ನಿನಗೆಷ್ಟಿದೆ? ಎಂದು ನನ್ನ ಭುಜದ ಮೇಲೆ ಬಿದ್ದು ಅತ್ತಳು. ಅಂದಿನಿಂದ ಯಾವುದೋ ಒಂದು ಸಮಯದಲ್ಲಿ ಪ್ರತಿದಿನ ಅಳುತ್ತಿದ್ದಳು. ನಾನು ಪ್ರತಿ ಸಾರಿ ಮುದ್ದು ಮಾಡಿ, ತಲೆನೆವರಿ ಸಮಾಧಾನಗೊಳಿಸುವವರೆಗೂ ಅಳುತ್ತಿದ್ದಳು.
“ಅಳಬೇಡ ಅಬ್ಬತ್ತೆ! ಡಿಗ್ರಿ ಮುಗಿಯುತ್ತಿರುವಂತೆ ನಿನ್ನನ್ನು ನನ್ನ ಹತ್ತಿರವಿಟ್ಟುಕೊಂಡು ಹಾಯಾಗಿರಿಸುತ್ತೇನೆ”.
“ನಿಜಾನಾ ತಂದೆ!” ಎನ್ನುತ್ತಿದ್ದಳು.
ತನ್ನ ಕಷ್ಟಗಳು ಬಗೆಹರಿದವೆಂದಲ್ಲ. ನನ್ನೊಂದಿಗೆ ತನ್ನ ಉನ್ನತವಾದ ಭವಿಷ್ಯತ್ತನ್ನು eಟಿರಿoಥಿ ಮಾಡುತ್ತಿರುವಂತೆ, ನನ್ನ ಜೀವನದಲ್ಲಿ ನನಗೆ ನಾನು ಮಾಡಿಕೊಳ್ಳಬೇಕೆಂದಿರುವಲ್ಲಿ ಇತರರಿಗೆ ಮಾಡಬೇಕೆಂದಿರುವುಗಳಲ್ಲಿ ತುಂಬಾ ಮಟ್ಟಿಗೆ ನೆರವೇರಲಿಲ್ಲ. ಆದರೆ ಅಬ್ಬತ್ತೆ ವಿಷಯದಲ್ಲಿ ನಾನೂ ವೊಯ್ಯಿ ಇಷ್ಟರಲ್ಲಿಯೇ ಎಷ್ಟು ಸಾರಿ ಉಪಕಾರ ಮಾಡಲಾದಿತೋ ನೆನಪಿಸಿಕೊಂಡು ಆಶ್ಚರ್ಯವಾಗುತ್ತದೆ.


ಚಳಿಗಾಲ ಬರುತ್ತಿದೆ. ಕೋಗಿಲೆಗಳು ಹವೆಯ ಪ್ರದೇಶಗಳಿಗೆ ಹೊರಟು ಹೋಗಿವೆ. ಮುಂಜಾನೆಯೆ ಪಾರಿಜಾತ ಹೂಗಳು ಬಿಳಿಯಾಗಿ ಗಿಡದ ಕೆಳಗೆ ಹರಡಿಕೊಂಡಿವೆ. ಚಿಗುರು ಬೆಳದಿಂಗಳು ಸೂಸುತ್ತಿದೆ. ದೂರದಲ್ಲಿ ಊರಿನಿಂದ ಪಟಾಕಿಗಳ ಸದ್ದು ಕೇಳಿ ಬರುತ್ತಿದೆ. ಗಿಡಗಳ, ಮೇಲೆ ಸೀತಾಫಲಗಳು ಬಿರಿದುಕೊಳ್ಳುತ್ತಿವೆ. ಮತ್ತೆ ನಮ್ಮ ಸಂತೋಷದಲ್ಲಿ ಎಲ್ಲವನ್ನು ಮರೆತು ಹೋದೆವು. ಗಿಡಗಳ ಕೊಂಬೆಗಳ ಮೇಲೆ ಮಲಗಿಕೊಂಡು ಮೇಲಕ್ಕೆ ನೋಡುತ್ತಿದ್ದರೆ ತೇಜೋವಂತನಾದ ಆ ನೀಲಿಯೆಲ್ಲಾ ಕಣ್ಣುಗಳು ಕಲ್ಪಿಸಿಕೊಂಡಿರುವ ಭ್ರಮೆಯೇನಾ? ಅಲ್ಲಿ ಏನೂ ಇಲ್ಲವಾ? ಎಂದು ಆಶ್ಚರ್ಯವಾಗುತ್ತದೆ. ಇಷ್ಟರಲ್ಲಿ ಒಂದು ದಿನ ಅಬ್ಬತ್ತೆ ಆಕಸ್ಮಾತ್ತಾಗಿ “ಇನ್ನು ಸಾಕು ಹೊರಟು ಹೋಗಿಯಪ್ಪ” ಎಂದಳು. ಸಿಡಿಲು ಬಡಿದಂತೆ ಅಲ್ಲಿಯೇ ಕುಸಿದುಬಿದ್ದೆ. ಕಾರಣವೇನೆಂದು ಆಲೋಚಿಸಲಿಲ್ಲ. ಈಗ ಎಲ್ಲಿಗೆ ಹೋಗುವುದು? ನನಗೆ ಮನೆ ಯಾರು ಕೊಡುತ್ತಾರೆ? ತಿಂಡಿ ಯಾರು ಇಡುತ್ತಾರೆ. ತೋಟದೊಳಗೆ ಹೋಗಿ ವೊಯ್ಯಿಗೆ ಹೇಳಿದೆ.
“ಇಷ್ಟೇನಾ! ಯಾವುದಾದರೂ ಗುಡಿಸಲಿಗೆ ಹೋಗೋಣ” ಎಂದಳು.
“ರವಿ ಬರುತ್ತಿರುವನೆಂದು ಭಯಪಟ್ಟಳೇನೊ’ ಹೌದು ರವಿ ಬರುತ್ತಿದ್ದಾನೆಂದು ಪತ್ರ ಬಂದಿತು. ಒಳ್ಳೇಯ ಮಾತು ಹೇಳಿದೆಯೆಂದು ಅರ್ಧಗಂಟೆಯಲ್ಲಿ ಹೊರಗಡೆಗೆ ಹೋಗಿ, ಲಕ್ಷ್ಮಿವಾರಪೇಟೆಯಲ್ಲಿ, ಹೊಲೆಯರ ಗುಡಿಸಲಿನಲ್ಲಿ ಖಾಲಿಯಿರುವ ಕುಟೀರವೊಂದು ಏರ್ಪಡಿಸಿಕೊಂಡು ಬಂದೆನು. ನಮಗೇನಾದರು ಸಾಮಾನುಗಳಾ? ಏನಾದರೂನಾ? ಎರಡು ಬಟ್ಟೆಗಳು ಎರಡು ಪುಸ್ತಕಗಳನ್ನು ಹಿಡಿದುಕೊಂಡು ನಗುತ್ತಾ.
“ಹೋಗುತ್ತಿದ್ದೇವೆ ಅಬ್ಬತ್ತೆ” ಎಂದು ಹೇಳಿ ಹೊರಟು ಹೋದೆವು.
ಕಣ್ಣೀರಿನೊಂದಿಗೆ ನಮ್ಮ ಕಮಲ ನಮ್ಮ ಕಡೆಗೆ ಹಾಗೆಯೇ ನೋಡುತ್ತ ನಿಂತಿದ್ದಳು. ನಮ್ಮ ಮನೆಯ ಪಕ್ಕದಲ್ಲಿಯೆ ನಮ್ಮ ಕ್ಯಾಂಟೀನು, ಮುಂಜಾನೆಯ ಹೊತ್ತಿಗೆಲ್ಲಾ, ದಮ್ಮಡಿಗೆ ಒಂದು ಸಣ್ಣ ಇಡ್ಲಿ. ಒಂದು ಪಾವ್ ಬಜ್ಜಿ ತಿನ್ನುತ್ತಿದ್ದೆವು. ಮತ್ತೆ ನಾನು ಕಾಲೇಜಿಗೆ, ವೊಯ್ಯಿ ಸ್ಕೂಲಿಗೆ ಹೋಗುವ ಮೊದಲು ಗೋದಾವರಿ ರೈಲ್ವೆ ಸ್ಟೇಷನ್‌ನ ರೋಡ್ ಪಕ್ಕದಲ್ಲಿ ಮಾರುವ ಉದ್ದಿನ ರೊಟ್ಟಿಯ ಎರಡು ಚೂರುಗಳನ್ನು ತಿನ್ನುತ್ತಿದ್ದೆವು. ರವಿಗೆ ಇಡುತ್ತಿದ್ದೆವು.

ಕೃತಿ: ಚಲಂ (ಆತ್ಮಕತೆ)

ಮೂಲ ಲೇಖಕ: ವೆಂಕಟಾಚಲಂ, ತೆಲುಗು

ಅನುವಾದ: ಲಕ್ಕೂರು ಸಿ. ಆನಂದ

ಪ್ರಕಾಶನ: ಸೃಷ್ಟಿ ಪ್ರಕಾಶನ, ಬೆಂಗಳೂರು

ಪುಟ 360, ಬೆಲೆ 350 ರೂ.

ಇದನ್ನೂ ಓದಿ: ಹೊಸ ಪುಸ್ತಕ | ಇಂಗ್ಲಿಷ್‌ ನಾಮಫಲಕ ತೆಗೆಯಿರಿ ಎಂದು ಬಿಎಂಶ್ರೀಗೆ ಹೇಳಿದ ದಿಟ್ಟ ವ್ಯಕ್ತಿ ಇವರು!

Exit mobile version