Site icon Vistara News

Sunday read | ಹೊಸ ಪುಸ್ತಕ | ಎಲ್ಲರೂ ಕುರುಡರಾದಾಗ ಉಳಿದ ಒಬ್ಬಳೇ ಮಹಿಳೆಯ ಕಥೆ

blindness

ವಿಶ್ವ ವಿಖ್ಯಾತ ಪೋರ್ಚುಗೀಸ್ ಲೇಖಕ ಜೋಸೆ ಸರಮಾಗೋ ಒಂದು ಬಡ ಕುಟುಂಬದಲ್ಲಿ ಜನಿಸಿದ. ಬಾಲ್ಯದಲ್ಲಿ ಹಂದಿಗಳನ್ನು ಮೇಯಿಸುತ್ತಿದ್ದ. ತನ್ನ ಹಂದಿಗಳ ಹೊಟ್ಟೆ ತುಂಬಿಸಲು ಬೇರೆಯವರ ಹೊಲಗಳಿಂದ ಹುಲ್ಲನ್ನು ಕದ್ದು ತರುತ್ತಿದ್ದ. ಮನೆಯ ಹಿತ್ತಲಲ್ಲಿ ತರಕಾರಿ ಬೆಳೆಯುತ್ತಿದ್ದ. ಅಡಿಗೆಗೆ ಬೇಕಾದ ಸೌದೆಯನ್ನು ತಾನೇ ಸ್ವತಃ ಕಡಿದು ತರುತ್ತಿದ್ದ ಪಂಪ್ ಮಾಡಿ ನೀರು ತರುತ್ತಿದ್ದ, ಓದಿನಲ್ಲಿ ಬಹಳ ಚುರುಕಾಗಿದ್ದ ಬರವಣಿಗೆಯಲ್ಲಿ, ಎಲ್ಲಿಯೂ ತಪ್ಪುಗಳನ್ನು ಮಾಡುತ್ತಿರಲಿಲ್ಲ. ಮೂರನೇ ತರಗತಿಯಿಂದ, ಐದನೇ ತರಗತಿಗೆ ಬಹಳ ಬುದ್ಧಿವಂತನೆಂಬ ಕಾರಣಕ್ಕೆ ಡಬಲ್ ಪ್ರಮೋಷನ್ ಪಡೆದವನಾದರೂ ಬಡತನದ ಕಾರಣದಿಂದ, ಮುಂದೆ ಓದಲಾಗಲಿಲ್ಲ. ಚಪ್ಪಲಿಕೊಳ್ಳಲು ಬಿಡಿಗಾಸೂ ಇರುತ್ತಿರಲಿಲ್ಲ. ಅದಕ್ಕಾಗಿ ಬರಿಗಾಲಲ್ಲೇ ನಡೆಯುವ ಅಭ್ಯಾಸವನ್ನು ರೂಢಿಸಿಕೊಂಡ. ಹತ್ತೊಂಬತ್ತನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಒಂದು ಪುಸ್ತಕವನ್ನು, ಗೆಳೆಯನಿಂದ ಸಾಲ ಮಾಡಿ ಕೊಂಡುಕೊಂಡ. ಓದು ಬರಹವೆಂದರೆ ಅವನಿಗೆ ಪ್ರಾಣ. ಸದಾ ಓದಿನಲ್ಲಿಯೇ ತಲ್ಲೀನನಾಗಿರುತ್ತಿದ್ದ.

ಜೋಸೆ ಸರಮಾಗೋ

ಓದಿನಲ್ಲಿದ್ದ ಉತ್ಸಾಹ, ಇಚ್ಛಾಶಕ್ತಿಗಳಿಂದಾಗಿ, ನಿರಂತರವಾಗಿ ಪುಸ್ತಕಗಳ ಜೊತೆಯಲ್ಲಿನ ಒಡನಾಟ, ಅವನನ್ನು ಸುಸಂಸ್ಕೃತನಾಗಿ, ವಿದ್ಯಾವಂತನನ್ನಾಗಿ ರೂಪಿಸಿತು. ಮನೆಯಲ್ಲಿಯೇ ಒಂದು ಪುಟ್ಟ ಗ್ರಂಥಾಲಯವನ್ನೂ ಸ್ಥಾಪಿಸಿದ. ಆರ್ಥಿಕ ಮುಗ್ಗಟ್ಟಿನಿಂದ ಬದುಕುವುದೇ ಸಮಸ್ಯೆಯಾಗಿದ್ದಾಗಲೂ ಅವನ ಪ್ರತಿಭೆ ಅದ್ಭುತವಾಗಿತ್ತು. ಅವನು ರೂಢಿಸಿಕೊಂಡಿದ್ದ ಸಾಹಿತ್ಯಾಸಕ್ತಿ, ಅವನನ್ನು ನೊಬೆಲ್ ಪುರಸ್ಕಾರ ಪಡೆಯುವ ಎತ್ತರಕ್ಕೆ ಬೆಳೆಸಿದ್ದು. ನಿಜವಾಗಿಯೂ ಒಂದು ಅದ್ಭುತ ಪವಾಡವೇ ಆಗಿತ್ತು.

ಸರಮಾಗೋನ ಬಾಲ್ಯ, ಅಭಾವ, ಸಂಕಷ್ಟಗಳು, ತೀರಾ ಬಡತನದ ನಡುವೆ ಕಳೆಯಿತು. ೧೬ನೇ ನವೆಂಬರ್, ೧೯೨೨ರಲ್ಲಿ ಪೋರ್ಚುಗಲ್ಲಿನ ಅಲೆಮಾಂಡೋ ನದಿಯಿಂದ ನೂರು ಕಿಲೋಮೀಟರ್ ದೂರದಲ್ಲಿದ್ದ ಅಜಿನ್‌ಹಾಗಾ ಗ್ರಾಮವೊಂದರಲ್ಲಿ ಜನಿಸಿದ. ತಂದೆ ಜೋಸ್ ಡಿ ಡಿಸೋಜ ಮತ್ತು ತಾಯಿ ಮಾರಿಯಾ ಡಿ ಪಿಯದಾದೆ, ಇಬ್ಬರೂ ಹೊಲಗದ್ದೆಯಲ್ಲಿ ದುಡಿಯುತ್ತಿದ್ದರು. ೭ನೇ ವಯಸ್ಸಿನಲ್ಲಿ ಸರಮಾಗೋ ಶಾಲೆ ಸೇರಿದ ೧೯೨೪ರಲ್ಲಿ, ವ್ಯವಸಾಯವನ್ನು ಬಿಟ್ಟು ಲಿಸ್ಬೆನ್‌ನಲ್ಲಿ ನೆಲೆಸಿದ. ಕೆಲ ಸಮಯದ ನಂತರ, ಅವರ ಮೇಲೆ ಕಷ್ಟಗಳ ಪರ್ವತವೇ ಬಿತ್ತು. ಜೋಸೆ ಸರಮಾಗೋನ ಅಣ್ಣ ಫ್ರಾನ್ಸಿಸ್ಕೋ ತೀರಿಕೊಂಡ.

ಬಾಲ್ಯದಲ್ಲಿಯೇ ಅಜ್ಜಿಯ ಆಶ್ರಯದಲ್ಲಿ, ಅತ್ಯಲ್ಪ ಆದಾಯದಿಂದ ಜೀವನ ನಡೆಸಬೇಕಾಗಿ ಬಂತು. ಅಜ್ಜನ ಆಸ್ತಿಯೆಂದರೆ, ಒಂದರ್ಧ ಡಜನ್ ಹಂದಿಗಳಾಗಿದ್ದವು. ಸರಮಾಗೋ ಅವುಗಳ ಒಡನಾಟದಲ್ಲಿ ಬೆಳೆದ. ಚಳಿಗಾಲದ ಚಳಿಯನ್ನು ಹತ್ತಿಕ್ಕಿಕೊಳ್ಳಲು ಹಂದಿ ಮರಿಗಳನ್ನು ಪಕ್ಕದಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಅಜ್ಜ-ಅಜ್ಜಿಯರ ಜೀವನ ವಿಧಾನ, ಕಷ್ಟಕಾಲದಲ್ಲಿ ಜೀವನ ಹೇಗೆ ಮಿತವಾಗಿ ನಡೆಸಬೇಕೆಂಬುದನ್ನು ಅವರಿಂದಲೇ ಕಲಿತ. ಅಜ್ಜ ವಿದ್ಯಾವಂತನಲ್ಲದಿದ್ದರೂ ಬುದ್ಧಿವಂತನಾಗಿದ್ದ. ಅಜ್ಜ-ಅಜ್ಜಿಯರು ಕೇಳಿಸುತ್ತಿದ್ದ ಕಥೆಗಳು, ಮುಂದೆ ಸರಮಾಗೋ ಸಾಹಿತ್ಯಕ್ಕೆ ಪ್ರೇರಣೆಯಾಯಿತು. ಅಜ್ಜ ತೀರಿಕೊಂಡ ಮೇಲೆ, ಅಜ್ಜಿಯೇ ಅವನಿಗೆ ಸರ್ವಸ್ವವಾಗಿದ್ದಳು. ಪ್ರಕೃತಿಯ ಪರಿಸರದಲ್ಲಿ ಜೀವಿಸುತ್ತಾ, ಅದರಿಂದ ಅನೇಕ ಮೌಲಿಕ ವಿಚಾರಗಳನ್ನು ಕಲಿತರು. ಹಾಗೆಯೇ ಅನಿವರ‍್ಯವಾದ ವಿದ್ಯಾಭ್ಯಾಸವನ್ನೂ ಸಾಧಿಸಿಕೊಂಡರು. ಕೇವಲ ಪುಸ್ತಕಗಳು ಮಾತ್ರವೇ ಅವರ ಬೌದ್ಧಿಕತೆಯ ಬೆಳವಣಿಗೆಗೆ ಕಾರಣವಾಗಲಿಲ್ಲ. ಸ್ವಚಿಂತನ ಮಂಥನಗಳು ಬೌದ್ಧಿಕ ತೀಕ್ಷ÷್ಣತೆಗೆ ಅನುವಾದವು.

ಡಾ.ವಿಜಯಾ ಸುಬ್ಬರಾಜ್

೧೯೬೯ರಲ್ಲಿ, ನಿಷೇಧಿಸಲಾಗಿದ್ದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯತ್ವವನ್ನು ಸ್ವೀಕರಿಸಿದ ಮತ್ತು ಕಟ್ಟಕಡೆಯ ತನಕ ಅದರ ಪ್ರಮುಖ ಸಲಹಾಕಾರನೂ, ಆಲೋಚಕನೂ ಆಗಿದ್ದ. ಪಾರ್ಟಿಯ ನಿಷ್ಠಾವಂತ ಸದಸ್ಯನಾಗಿದ್ದು, ಜನಪರಧ್ವನಿಯಾಗಿ ಕೆಲಸ ಮಾಡಿದ. ಕಮ್ಯುನಿಸ್ಟ್ ಸಿದ್ಧಾಂತಗಳು, ಅವನ ಆಲೋಚನೆಗಳಿಗೆ ಸಮಾನವಾಗಿತ್ತಾಗಿ, ಅದರ ಬಗ್ಗೆ ಅತ್ಯಂತ ವಿಶ್ವಾಸ ಮತ್ತು ಬದ್ಧತೆಗಳನ್ನು ಇರಿಸಿಕೊಂಡಿದ್ದ. ಹಸಿವು, ಯುದ್ಧ, ಶೋಷಣೆಗಳ ವಿರುದ್ಧ, ಪ್ರತಿಭಟನಾತ್ಮಕ ನಿಲುವನ್ನು ತಳೆದಿದ್ದ. ಆದ್ದರಿಂದ ಅವನನ್ನು ನಿಷ್ಠುರ ಕಮ್ಯುನಿಸ್ಟ್‌ ವಾದಿಯೆಂದು, ಧರ್ಮ ವಿರೋಧಿಯೆಂದೂ ಜನ ಗುರುತಿಸಿದ್ದರು.

೧೯೪೪ರಲ್ಲಿ ಮದುವೆಯಾದಾಗ, ಸರಮಾಗೋ ಅಡ್ಮಿನಿಸ್ಟ್ರೇಟಿವ್ ಸರ್ವೀಸ್‌ನಲ್ಲಿದ್ದರೆ. ಹೆಂಡತಿ ರೈಲ್ವೆ ಕಂಪನಿಯೊAದರಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಮುಂದೆ ಅತ್ಯಂತ ಖ್ಯಾತಿವೆತ್ತಿ ಶಿಲ್ಪಕಾರಳೆಂದು ಗುರುತಿಸಿಕೊಂಡಳು. ಆದರೆ ಅತ್ಯಂತ ದುರಂತದ ಸಂಗತಿಯೆAದರೆ, ಮದುವೆಯಾದ ಮೂರು ವರ್ಷಗಳಲ್ಲೇ, ಹೆರಿಗೆಯಾದ ಸಮಯದಲ್ಲಿಯೇ ತೀರಿಕೊಂಡಳು. ೧೯೮೬ರಲ್ಲಿ ಸ್ಪಾನಿಷ್ ಪತ್ರಕರ್ತೆಯಾದ ಪಿಲಾರ್ ಡೆಲ್‌ರಿಯೋ ಎಂಬಾಕೆಯನ್ನು ಮದುವೆಯಾದ. ಮುಂದೆ ಇವಳು, ಗಂಡನ ಸಾಹಿತ್ಯ ಕೃತಿಗಳ ಅನುವಾದಕಿಯೂ ಆದಳು. ಸಾಹಿತ್ಯದ ಕಡೆಗೆ ಹೊರಳುವುದಕ್ಕೆ ಮೊದಲು ಸಣ್ಣ ಸಣ್ಣ ಕೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಿದ್ದ. ಅಕಾಡೆಮಿಕ್ ವಿದ್ಯಾಭ್ಯಾಸವನ್ನು ಪೂರೈಸಲಾಗದೆ, ಮೆಕ್ಯಾನಿಕ್ ತರಬೇತಿಯನ್ನು ಪಡೆದು, ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಐವತ್ತನೆ ವಯಸ್ಸಿನಲ್ಲಿ ಸಾಹಿತ್ಯದ ಕಡೆ ಮುಖ ಮಾಡಿದ. ಮತ್ತು ಅವನಲ್ಲಿದ್ದ ಹುಟ್ಟು ಪ್ರತಿಭೆಯಿಂದಾಗಿ, ಸಾಕಷ್ಟು ಸಾಧನೆ ಮತ್ತು ಸಫಲತೆಗಳನ್ನು ಗಳಿಸಿದ. ಅರವತ್ತನೆ ವಯಸ್ಸಿನಲ್ಲಿ ಎರಡು ಕಾದಂಬರಿಗಳನ್ನು ಬರೆದನಾದರೂ ಅವನಿಗೆ ಯಶಸ್ಸು ಸಿಗಲಿಲ್ಲ.

ಇದನ್ನೂ ಓದಿ: Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ

ಆದರೆ ನಾಲ್ಕನೇ ಕಾದಂಬರಿಯಾದ ‘ಮೆಮೋರಿಯಲ್ ಆಫ್ ದಿ ಕನ್ರ‍್ಟರ್’ಗೆ ಸಾಕಷ್ಟು ಮಾನ್ಯತೆ ದೊರೆಯಿತು. ಇದರ ವಸ್ತು ೧೮ನೇ ಶತಮಾನದಲ್ಲಿ ನಡೆದ ‘ಇನ್ಕ್ವಿಸಿಷನ್’ ಕುರಿತಾಗಿದೆ. ಅತೀಂದ್ರಿಯ ದೃಷ್ಟಿಯಿಳ್ಳ ಅಂಗವಿಕಲ ದಂಪತಿಗಳನ್ನು ಕುರಿತ ಕಥೆಯಾಗಿದೆ. ನಂತರ ೧೯೯೦ರಲ್ಲಿ ‘ಬಾಲ್ಟಸಾರ್ ಮತ್ತು ಬ್ಲಿಮುಂಡಾ’ ಎಂಬ ಕಾದಂಬರಿ ರಚಿಸಿದ. ಈ ಕಾದಂಬರಿ ‘ಅಪೆರಾ’ ಆಗಿ ರೂಪಾಂತರಗೊಂಡು ಬಹಳ ಮೆಚ್ಚಿಗೆ ಪಡೆಯಿತು. ಇದರ ನಂತರ ಈ ಲೇಖಕ ಬೇರೆಲ್ಲ ಚಟುವಟಿಕೆಗಳನ್ನು ಬದಿಗಿಟ್ಟು ಪೂರ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು, ಕಾದಂಬರಿಗಳು, ನಾಟಕಗಳು, ಲೇಖನಗಳು, ಸ್ಮೃತಿ ಚಿತ್ರಗಳು ಜೀವನ ಚರಿತ್ರೆಗಳು ಇತ್ಯಾದಿಯಾಗಿ ವೈವಿಧ್ಯಮಯ ಸಾಹಿತ್ಯ ಕೃತಿಗಳನ್ನು ರಚಿಸಿ ವಿಶ್ವಖ್ಯಾತಿಯ ಎತ್ತರಕ್ಕೆ ಬೆಳೆದ. ಇವನ ಕೃತಿಗಳಲ್ಲಿನ ವಿಶಿಷ್ಟ ಶೈಲಿ, ಇಡೀ ಯೂರೋಪಿನಲ್ಲಿ ಮಹತ್ವಪೂರ್ಣ ಲೇಖಕನಾಗಿ ಗುರುತಿಸಿಕೊಳ್ಳುವಂತೆ ಮಾಡಿತು.

ಎಂದೂ ಎಲ್ಲಿಯೂ ಕಂಡೂ ಕೇಳಿಯೂ ಅರಿಯದ ಬಿಳಿ ಕುರುಡು ಸೋಂಕಿನ ಕಥೆಯನ್ನು ಕಲ್ಪನೆಯ ಹಿನ್ನೆಲೆಯೊಂದಿಗೆ ಹೆಣೆದು ಅದನ್ನೊಂದು ರೂಪಕವಾಗಿಸಿ, ಅದ್ಭುತವಾದ, ಭೀಭತ್ಸನಾದ, ಭಯಾನಕವಾದ ಸನ್ನಿವೇಶಗಳೊಂದಿಗೆ, ವಿಶಿಷ್ಟವಾಗಿಯೂ ವಿಭಿನ್ನವಾಗಿಯೂ ಕಾಣಿಸುವುದರ ಜೊತೆಗೆ, ಅದನ್ನೊಂದು ದಾರ್ಶನಿಕ ನೆಲೆಗೆ ಕೊಂಡೊಯ್ದಿದ್ದಾನೆ. ಮೊದಲೇ ಪ್ರಸ್ತಾಪಿಸಿದಂತೆ, ಕಥೆ ಕಲ್ಪನೆಯಿಂದ ಹುಟ್ಟುವುದಾದರೂ, ವಾಸ್ತವಿಕತೆಯ ಸನ್ನಿವೇಶಗಳು, ಸಂವೇದನೆಗಳು, ಭಾವನೆಗಳು ವಿಸ್ತೃತವಾದ ಹರವಿನಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ಬರುವ ಪಾತ್ರಗಳಿಗೆ, ಪ್ರದೇಶಗಳಿಗೆ ಹೆಸರಿಲ್ಲ. ಇಲ್ಲಿನ ಕಥೆಯಲ್ಲಿ, ಒಂದು ಅನಾಮಧೇಯ ನಗರದಲ್ಲಿ ದಿಢೀರನೆ ಬಿಳಿ ಕುರುಡಿನ ಸೋಂಕು ಹರಡಿ, ಇಡೀ ನಗರದ ಪ್ರಜೆಗಳ ಬದುಕು. ಸಮಾಜ, ಸರಕಾರ, ಆರ್ಥಿಕತೆ – ಹೀಗೆ ಎಲ್ಲ ರಂಗಗಳಲ್ಲಿ ಅವ್ಯವಸ್ಥೆ, ಅರಾಜಕತೆ ತಾಂಡವವಾಡಿ, ಎಲ್ಲರ ಬದುಕಿನಲ್ಲಿ ಸಂಭವಿಸುವ ದುರಂತ, ಸಾವು ನೋವುಗಳು, ಅನ್ನಕ್ಕಾಗಿ, ವಸತಿಗಾಗಿ, ಸೃಷ್ಟಿಯಾಗುವ ಹಾಹಾಕಾರ, ಬಡಪಾಯಿ ಕುರುಡರ ಮೇಲೆ ನಡೆಯುವ ದೌರ್ಜನ್ಯ. ದಬ್ಬಾಳಿಕೆ, ಸುಲಿಗೆ, ಅತ್ಯಾಚಾರ, ಹಿಂಸೆ ಮುಂತಾದವುಗಳ ಚಿತ್ರಣ ಕರುಳು ಹಿಂಡುತ್ತದೆ. ರಕ್ತ ಹೆಪ್ಪುಗಟ್ಟುತ್ತದೆ.

ಭೌತಿಕವಾಗಿ ಮಾನಸಿಕವಾಗಿ ಯಾತನೆ ಅನುಭವಿಸುವುದು, ಮನುಷ್ಯನಲ್ಲಿನ ಎರಡು ಪ್ರವೃತ್ತಿಗಳಲ್ಲಿ, ಮಾನವ ಪ್ರವೃತ್ತಿ ಅಥವಾ ಮಾನವತ್ವ ಹಿಂದೆ ಸರಿದು ರಾಕ್ಷಸ ಪ್ರವೃತ್ತಿಯ ಲಕ್ಷಣವಾದ ಕ್ರೌರ್ಯ ವಿಜೃಂಭಿಸುತ್ತದೆ. ಇಲ್ಲಿನ ಒಂದು ವ್ಯಂಗ್ಯವೆನ್ನುವಂತೆ, ನಗರದ ಪ್ರಜೆಗಳೆಲ್ಲ ಸೋಂಕಿಗೆ ಒಳಗಾಗಿ, ಕೇವಲ ಒಬ್ಬ ಮಹಿಳೆ ಮಾತ್ರವೇ ಸೋಂಕಿನಿಂದ ಪಾರಾಗುತ್ತಾಳೆ. ಇಡೀ ಕಾದಂಬರಿಯ ನಿರೂಪಕಿ ಇವಳೇ. ಅಲ್ಲದೆ, ಇಂತಹ ವಿಪತ್ತಿನಿಂದಾಗಿ ಉಂಟಾದ ಪರಿಣಾಮಗಳು, ಪ್ರಜೆಗಳ ಬದುಕುಗಳಲ್ಲಿ ಉಂಟಾದ ಸ್ಥಿತ್ಯಂತರಗಳು, ಕುರುಡು ಸೋಂಕಿಗೆ ಒಳಗಾದವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ನಲ್ಲಿ ಇದ್ದವರು ಅನುಭವಿಸುವ, ನರಕಯಾತನೆ ಇತ್ಯಾದಿಗಳಿಗೆಲ್ಲ ಇವಳೇ ಸಾಕ್ಷೀ ಪ್ರಜ್ಞೆಯಾಗಿಯೂ ನಿಲ್ಲುತ್ತಾಳೆ. ಅಂಧತ್ವವೆನ್ನುವುದು, ಕುರುಡು ಸೋಂಕಿನ ರೋಗಿಗಳಿಗೆ ಮಹಾವಿನಾಶಕಾರಿ ಪ್ರಳಯವಾಗಿಯೂ, ಚಂಡಮಾರುತವಾಗಿಯೂ ಪರಿಣಮಿಸಿ, ನಗರಗಳಲ್ಲಿ, ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಬದುಕುವುದೂ ಸಾಧ್ಯವಾಗುವುದಿಲ್ಲ. ಮನೆ, ಮಠ ಆಸ್ತಿಪಾಸ್ತಿ, ಆಹಾರ, ತನ್ನದು, ಅವರದು ಎನ್ನುವುದಿಲ್ಲ. ತಡವರಿಸುತ್ತಲೇ ಕುರುಡರು ಗುಂಪು ಗುಂಪುಗಳಾಗಿ ಓಡಾಡುತ್ತಾರೆ. ಖಾಲಿ ಬಿದ್ದ ಮಾಲ್‌ಗಳಲ್ಲಿ, ಅಂಗಡಿಗಳಲ್ಲಿ, ಕೇಳುವವರಿಲ್ಲದೆ ಇದ್ದುದರಿಂದ, ಅಲ್ಲಿ ಧಾಳಿ ಮಾಡಿ, ಅಲ್ಲಿನ ಆಹಾರ ಪದಾರ್ಥಗಳನ್ನು ಲೂಟಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ, ಕಂಡ ಕಂಡ ಕಡೆ ಮಲಗುತ್ತಾರೆ.

ಇದನ್ನೂ ಓದಿ: Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ

ಈ ಸ್ಥಿತಿಯಲ್ಲಿ ಜಾತಿ, ಮತ, ಧರ್ಮ ಅಧಿಕಾರ, ಅಂತಸ್ತು ಇತ್ಯಾದಿ ಯಾವುದೇ ರೀತಿಯ ತಾರತಮ್ಯಗಳಿಲ್ಲ. ಬದುಕುವುದು. ಅಸ್ತಿತ್ವವನ್ನು ಉಳಿಸಿಕೊಳ್ಳುವುದು, ಅಷ್ಟೇ ಮುಖ್ಯ. ಮನುಷ್ಯ ಸಂಬಂಧಗಳ ಚಹರೆಗಳೇ ಬದಲಾಗಿ ಬಿಡುತ್ತವೆ. ಕೇವಲ ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಮಾತ್ರವೇ ಊನವಾದಾಗ, ಮನುಷ್ಯಜಾತಿಗಳ ಅಸ್ತಿತ್ವವೇ ಒಂದು ಸವಾಲಾಗಿ ಬಿಡುತ್ತದೆ. ಪರಸ್ಪರರ ನಡುವೆ ದಯೆ, ದಾಕ್ಷಿಣ್ಯ, ಸೌಹಾರ್ದತೆಗಳೇ ಸತ್ತು ಹೋಗುತ್ತವೆ. ಕ್ವಾರಂಟೈನ್‌ನಲ್ಲಿನ ಕುರುಡು ರೋಗಿಗಳ ಮೇಲ್ವಿಚಾರಣೆಗೆಂದು ನೇಮಕಗೊಂಡ ಮಿಲ್ಟ್ರೀ ಸಿಬ್ಬಂದಿಯವರೂ ಕುರುಡಾಗಿದ್ದರೂ, ಒಂದಿಷ್ಟೂ ಪಾಪ ಪ್ರಜ್ಞೆಯಿಲ್ಲದ ಆ ಗಂಡಸರು ಮಹಿಳೆಯರ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ ಅತ್ಯಂತ ಭಯಾನಕವೂ ಭೀಭತ್ಸವೂ ಆಗಿರುವುದು ಒಂದು ನೆಲೆಯಾದರೆ, ಊಟದ ವ್ಯವಸ್ಥೆ ಮುಫತ್ತಾಗಿ ಮಾಡಬೇಕಾಗಿದ್ದರೂ, ವಾರ್ಡುಗಳಲ್ಲಿ, ಒಳರೋಗಿಗಳಾಗಿ ಇರುವವರಿಂದ, ಅವರು ಉಳಿಸಿಕೊಂಡಿರುವ ಹಣವನ್ನು, ವಸ್ತುಗಳನ್ನೂ, ದೋಚಿಕೊಂಡು, ಊಟದ ಲೆಕ್ಕಕ್ಕೆ ಹೊಂದಿಸಿಕೊಳ್ಳುವ ಅವರು ರಾಕ್ಷಸರಿಗಿಂತಲೂ ಕೀಳಾಗಿ ವರ್ತಿಸುವುದನ್ನು ನೋಡಿದಾಗ, ಮಾನವ ವಿಕಾಸದ ಅವಧಿಯಲ್ಲಿನ ಆದಿಮಾನವರ ಬದುಕನ್ನು ನೆನಪಿಸುತ್ತದೆ. ನಾಗರಿಕತೆ, ಸಭ್ಯತೆ, ಸೌಜನ್ಯಗಳೆಲ್ಲವೂ ಈ ಕುರುಡುತನದ ವಿಪತ್ತಿನ ಸಂದರ್ಭದಲ್ಲಿ ಕಾಣಿಸಿಕೊಂಡು, ಮಾನವೀಯತೆ, ಮನುಷ್ಯತ್ವಗಳನ್ನು ಮರುವಿವೇಚನೆಗೆ ಒಳಪಡಿಸಬೇಕಾಗುತ್ತದೆ. ಇಂಥ ಭಯಾನಕ ಪರಿಸರದಲ್ಲಿ, ಅವರನ್ನು ಮನುಷ್ಯವರ್ಗದಿಂದ ದೂರವಿರಿಸಲೇಬೇಕೆನಿಸುತ್ತದೆ. ಕರುಳ ಸಂಬಂಧಗಳೂ ಕತ್ತರಿಸಿ ಹೋಗುತ್ತವೆ. ಕ್ವಾರಂಟೈನ್‌ಗಾಗಿ ಬಂದ ಮೊದಲ ವಾರ್ಡಿನ ಕುರುಡರ ಜೊತೆಗಿನ ಹುಡುಗ, ತನ್ನ ಅಮ್ಮನಿಂದಲೇ ದೂರವಾಗಿ ಬಿಡುತ್ತಾನೆ. ಮೊದ ಮೊದಲು, ಅಮ್ಮನಿಗಾಗಿ ಅತ್ತವನು, ಕಡೆ ಕಡೆಗೆ ಅಮ್ಮನ ನೆನಪೂ ಇಲ್ಲದಂತಿರುತ್ತಾನೆ.

ಮಾನವೀಯತೆಯೆನ್ನುವುದೇ ಅಳಿಸಿ ಹೋಗುತ್ತದೆ. ಕುರುಡರನ್ನು ಕ್ವಾರಂಟೈನ್ ಮಾಡಿ ನೋಡಿಕೊಳ್ಳಬೇಕಾದ ಸರಕಾರವೂ ಅಸಹಾಯಕ ವಾಗುತ್ತದೆ. ಕೇವಲ ತನ್ನ ಘೋಷಣೆಗಳನ್ನು ಕೇಳಿಸುವುದಕ್ಕಷ್ಟೇ ಸೀಮಿತ ವಾಗುತ್ತದೆ. ಹುಚ್ಚರ ಆಸ್ಪತ್ರೆಯನ್ನೇ ಕುರುಡರ ಆಶ್ರಯಧಾಮವನ್ನಾಗಿ ರೂಪಾಂತರಿಸಲಾಗುತ್ತದೆಯೇ ಹೊರತಾಗಿ, ನೀರಿನ, ಆಹಾರದ ವ್ಯವಸ್ಥೆಯಾಗಲೀ, ನೈರ್ಮಲ್ಯದ ವ್ಯವಸ್ಥೆಯಾಗಲೀ ಇಲ್ಲದೆ ಕೇವಲ ಕೊಳಕು, ಹೇಸಿಗೆಗಳಿಂದ ತುಂಬಿದ ನರಕ ಸದೃಶ ಪ್ರದೇಶದಲ್ಲಿ, ಪ್ರಾಣಿಗಳಂತೆ ಇರುವ ಪರಿಸರ ನಿರ್ಮಿಸುತ್ತದೆ. ಸರಕಾರ ತನ್ನ ನಿಲುವುಗಳನ್ನು ಪ್ರತಿಬಾರಿಯೂ ಬದಲಾಯಿಸುತ್ತಾ, ಸುಳ್ಳು ಭರವಸೆಗಳನ್ನು ನೀಡುತ್ತಾ, ಮೋಸ ಮಾಡುತ್ತದೆ. ಬ್ಯಾಂಕುಗಳೆಲ್ಲ ಲೂಟಿಯಾಗಿ, ದಿವಾಳಿತನವೇ ಎದ್ದೆದ್ದು ಕಾಣಿಸುತ್ತದೆ.

ಕೇವಲ ಕುರುಡತನ ಮಾತ್ರದಿಂದಲೇ, ಜಗತ್ತೇ ನರಕವಾಗಿ ರೂಪಾಂತರವಾಗಿ, ಕುರುಡರು, ಸಮಾಜದಲ್ಲಿ, ಪ್ರಾಣಿಗಳಿಗಿಂತ ಹೀನ ಬದುಕನ್ನು ಬದುಕಬೇಕಾಗುತ್ತದೆ. ಕಾಲ್ಪನಿಕ ಕುರುಡತನ ಸೃಷ್ಟಿಸಿದ ಈ ಅವಾಂತರಗಳು, ಮನುಷ್ಯ ಸಮಾಜದ ವಿಕೃತತೆ, ಮನುಷ್ಯನ ಕ್ರೌರ್ಯ, ಬದುಕಿನಲ್ಲಿನ ಹೇಸಿಗೆತನಗಳನ್ನು ನೋಡಿದವರಿಗೆ, ಒಂದು ವೇಳೆ ಈ ಸೋಂಕು ನಿಜವೇ ಆದರೆ, ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಧೈರ್ಯ ಸಾಲುವುದಿಲ್ಲ.

ಇಂತಹ ನಿರಾಶಾದಾಯಕವಾದ ಮತ್ತು ಮನುಷ್ಯನ ಘನತೆ, ಗೌರವಗಳಿಗೆ ಕಾಸಿನ ಬೆಲೆಯೂ ಇಲ್ಲದಂತಾಗಿಸಿದ ಈ ಕಾದಂಬರಿಯ ವಸ್ತು, ಕ್ರಿಯೆ, ದುರಂತ ಸನ್ನಿವೇಶಗಳು – ಇವುಗಳ ನಡುವೆಯೂ ಒಂದು ಭರವಸೆಯ ಆಶಾಕಿರಣ, ಒಂದು ಗುಂಪಿನ ಕುರುಡು ವ್ಯಕ್ತಿಗಳ, ನಡೆ, ನುಡಿ, ಆತ್ಮೀಯತೆ, ಸ್ನೇಹ, ಪರೋಪಕಾರಿ ಮನೋಭಾವ, ಸಂಘಟಿತವಾಗಿ ಬದುಕುವ ಪ್ರಯತ್ನಗಳು, ಡಾಕ್ಟರನ ಹೆಂಡತಿ, ಕಪ್ಪು ಕನ್ನಡಕದ ಹುಡುಗಿ, ಇವರ ವರ್ತನೆಯಲ್ಲಿ, ಎದ್ದು ಕಾಣುತ್ತದೆ. ಡಾಕ್ಟರನ ಹೆಂಡತಿ, ಗುಂಪಿನ ಸಂಘಟಿತ ಬದುಕನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಕಪ್ಪು ಕನ್ನಡಕದ ಹುಡುಗಿ, ತನ್ನ ಪಾಲಿನ ಆಹಾರವನ್ನೂ ಹುಡುಗನಿಗೆ ನೀಡುತ್ತಾಳೆ. ಅಲ್ಲದೆ, ಪ್ರೀತಿಗಾಗಿ, ಗುಂಪನ್ನು ತೊರೆಯಲು ಮುಂದಾಗುತ್ತಾಳೆ. ಡಾಕ್ಟರನ ಹೆಂಡತಿಯಂತೂ ತನ್ನ ಗುಂಪಿನ ಪ್ರತಿಯೊಬ್ಬರ ಅಗತ್ಯಗಳನ್ನೂ ಪೂರೈಸುತ್ತಾಳೆ. ತನ್ನ ಮನೆಯಲ್ಲಿಯೇ ಇರಿಸಿಕೊಂಡು, ತಾನೇ ಸ್ವತಃ ಆಹಾರವನ್ನು ಹುಡುಕಿಕೊಂಡು ಹೋಗಿ ಎಷ್ಟೋ ಅಪಾಯಗಳನ್ನು ಎದುರಿಸುತ್ತಾ, ಆಹಾರ ತಂದು ಗುಂಪಿನ ಸದಸ್ಯರೆಲ್ಲರ ಹೊಟ್ಟೆ ತುಂಬಿಸುತ್ತಾಳೆ. ಅವರಿಗೆ ಬಟ್ಟೆ ಬರೆ ಒದಗಿಸುತ್ತಾಳೆ. ಇನ್ನೂ ಅವಳಲ್ಲಿ ಮನುಷ್ಯತ್ವ ಬದುಕಿದೆ ಎನ್ನುವುದು ಸತ್ಯವೇ ಆದರೂ, ಅವಳಿಗೆ ಕಣ್ಣಿದೆ, ದೃಷ್ಟಿ ಇದೆ. ಆದರೆ ದೃಷ್ಟಿ ಮಾತ್ರದಿಂದಲೇ ಮಾನವೀಯ ಸಂವೇದನೆಗಳು, ಭಾವನೆಗಳು ಸಾಧ್ಯವಾಗುವುದಿಲ್ಲ ಎನ್ನುವ ಮಾತೂ ಸತ್ಯ. ಈ ಕಾದಂಬರಿಯ ವಸ್ತು, ಸ್ವರೂಪ, ರಚನೆ, ಸಂವಿಧಾನ ಆಶಯ ಇತ್ಯಾದಿಗಳನ್ನು ಅರ್ಥಮಾಡಿಕೊಂಡು ಅನುವಾದಿಸುವುದೂ ಓದುವುದೂ – ಎರಡೂ ಬಹುದೊಡ್ಡ ಸವಾಲು. ಇಲ್ಲಿಯ ವರೆಗಿನ ನನ್ನ ಅನುವಾದಗಳು ಸಾಕಷ್ಟು ಇದ್ದು, ಒಳ್ಳೆಯ ಪ್ರತಿಕ್ರಿಯೆಗಳಿಸಿದೆಯಾದರೂ. ಈ ಕಾದಂಬರಿಯ ಸವಾಲು, ಯಾವ ರೀತಿಯ ಪ್ರತಿಕ್ರಿಯೆಗೆ ಒಳಗಾಗುವುದೋ ಕಾದು ನೋಡಬೇಕು, ಎನಿಸುತ್ತಿದೆ.

ಕೃತಿ: ಕುರುಡು
ಮೂಲ: ಜೋಸೆ ಸೆರಮಾಗೋ
ಅನುವಾದ: ಡಾ.ವಿಜಯಾ ಸುಬ್ಬರಾಜ್‌
ಪ್ರಕಾಶನ: ಸೃಷ್ಟಿ ಪಬ್ಲಿಕೇಶನ್ಸ್‌
ಪುಟ: 326, ಬೆಲೆ: 325

Exit mobile version