Site icon Vistara News

Sunday Read: ಹೊಸ ಪುಸ್ತಕ: ದಶಕಂಠ ರಾವಣನ ಪುಷ್ಪಕ ವಿಮಾನ

ravana book

:: ಜಗದೀಶ ಶರ್ಮಾ ಸಂಪ

ದಶಕಂಠ ಅಣ್ಣ ಕುಬೇರನನ್ನು ಗೆದ್ದ ಸಂತೋಷದಲ್ಲಿದ್ದ. ಗೆದ್ದ ಕುರುಹಿಗೆ ಏನಾದರೂ ಬೇಕೆನಿಸಿತು. ಅಣ್ಣನ ಪುಷ್ಪಕವಿಮಾನವನ್ನು ತೆಗೆದುಕೊಂಡ.

ಪುಷ್ಪಕ ವಿಮಾನಕ್ಕೆ ಬಂಗಾರದ ಕಂಬಗಳಿದ್ದವು. ವೈಡೂರ್ಯಮಣಿಗಳ ತೋರಣವಿತ್ತು. ಮುತ್ತಿನ ಅಲಂಕಾರವಿತ್ತು. ಮಣಿಮಯವಾದ ಬಂಗಾರದ ಮೆಟ್ಟಿಲುಗಳಿದ್ದವು. ಚಿನ್ನದ ವೇದಿಕೆಯಿತ್ತು. ಅಲ್ಲಲ್ಲಿ ಚಿತ್ರಗಳಿದ್ದವು. ಅದರಲ್ಲಿ ಕಲ್ಪವೃಕ್ಷವಿತ್ತು. ಅದು ಬೇಡಿದ್ದನ್ನೆಲ್ಲ ಕೊಡುತ್ತಿತ್ತು. ಅದಕ್ಕೆ ಮನಸ್ಸಿನ ವೇಗವಿತ್ತು. ಹೇಳಿದಲ್ಲಿಗೆ ಹೇಳಿದ ಕ್ಷಣದಲ್ಲಿ ಒಯ್ಯುತ್ತಿತ್ತು. ಅದಕ್ಕೆ ನಿರ್ದಿಷ್ಟವಾದ ಆಕಾರವೇ ಇರಲಿಲ್ಲ. ಬಯಸಿದಾಗ ಬಯಸಿದ ಆಕೃತಿಯಲ್ಲಿರುತ್ತಿತ್ತು. ದೇವತೆಗಳ ವಾಹನ ಅದು. ಅದಕ್ಕೆ ನಾಶವೇ ಇರಲಿಲ್ಲ. ಎಲ್ಲ ಹೊತ್ತಿನಲ್ಲೂ ಕಣ್ಮನಗಳಿಗೆ ಖುಷಿ ನೀಡುತ್ತಿತ್ತು. ಅದರಲ್ಲಿ ಅದೆಷ್ಟೋ ಅಚ್ಚರಿಗಳಿದ್ದವು. ಬ್ರಹ್ಮನೇ ಹೇಳಿ ನಿರ್ಮಿಸಿದ್ದಾಗಿತ್ತು ಅದು. ಅದರಲ್ಲಿ ಚಳಿಯಾಗುತ್ತಿರಲಿಲ್ಲ, ಸೆಖೆಯೂ ಆಗುತ್ತಿರಲಿಲ್ಲ. ಎಲ್ಲ ಋತುವಲ್ಲೂ ಅದು ಸುಖ ಕೊಡುತ್ತಿತ್ತು.

ದಶಕಂಠ ಅದನ್ನೇರಿದ. ಸಚಿವರೂ ವಿಮಾನವೇರಿದರು. ಪರಾಕ್ರಮದಿಂದ ಗೆದ್ದುಕೊಂಡೆ ಎಂಬ ಭಾವವಿತ್ತು ಅವನಿಗೆ. ಈ ಗೆಲುವು ಅವನ ದರ್ಪವನ್ನು ಹೆಚ್ಚಿಸಿತ್ತು. ತ್ರಿಭುವನಗಳನ್ನೇ ಗೆದ್ದೆ ಎಂದು ಅಂದುಕೊಂಡ. ವೈಭವದ ಉಡುಗೆ-ತೊಡುಗೆ ತೊಟ್ಟ. ವಿಮಾನದಲ್ಲಿ ತ್ರಿಭುವನಾಧಿಪತಿಯಂತೆ ವಿರಾಜಿಸಿದ.

ಪಕ್ಕದ ಶರವಣಕ್ಕೆ ಹೋಗಬೇಕೆಂದುಕೊಂಡ. ಪುಷ್ಪಕ ಹಾರಿತು. ಅದು ಸುಬ್ರಹ್ಮಣ್ಯ ಜನಿಸಿದ ಸ್ಥಳ. ಆ ಪ್ರದೇಶವೇ ಬಂಗಾರದ್ದಾಗಿತ್ತು. ಅದರಿಂದ ಸೂರ್ಯಕಿರಣದಂಥ ಪ್ರಭೆ ಹೊರಹೊಮ್ಮುತ್ತಿತ್ತು. ವಿಮಾನದಲ್ಲಿ ಕುಳಿತೇ ಅದನ್ನೆಲ್ಲ ನೋಡಿದ. ಮತ್ತೊಂದು ಪರ್ವತವೇರಿದ. ಅದು ಅತ್ಯಂತ ರಮ್ಯವಾಗಿತ್ತು.

ಅಲ್ಲಿಂದ ಇನ್ನೊಂದು ಪರ್ವತಕ್ಕೆ ಹೊರಟ. ಇದ್ದಕ್ಕಿದ್ದಂತೆ ಪುಷ್ಪಕ ವಿಮಾನ ಸ್ತಬ್ಧವಾಯಿತು.

ಏನಾಯಿತೆಂದೇ ತಿಳಿಯದಾಯಿತು. ದಶಕಂಠ ಸಚಿವರೊಂದಿಗೆ ಸಮಾಲೋಚನೆ ನಡೆಸಿದ. ‘ಏನಾಗಿರಬಹುದು? ನನ್ನ ಇಷ್ಟದಂತೆ ಇದು ಸಾಗಬೇಕಿತ್ತಲ್ಲ. ನಾನು ನಿಲ್ಲಲಿ ಎಂದುಕೊಂಡಾಗಷ್ಟೆ ನಿಲ್ಲಬೇಕಿತ್ತು. ಈ ಪರ್ವತದ ಮೇಲೆ ಯಾರೋ ಇದ್ದಿರಬೇಕು. ಅವನೇ ತಡೆದು ನಿಲ್ಲಿಸಿರಬೇಕು’ ಎಂದ.

‘ಕಾರಣವಿಲ್ಲದೆ ಇದು ನಿಲ್ಲದು. ಏನೋ ದೊಡ್ಡ ಕಾರಣವೇ ಇದೆ ಇಲ್ಲಿ. ಅಥವಾ ಇದು ಕುಬೇರನಿಗೆ ಮಾತ್ರ ವಾಹನವಿದ್ದೀತೇ? ಅವನು ಏರಿದರೆ ಮಾತ್ರ ಹಾರುತ್ತದೆಯೇ?’ ಎಂದು ಮಾರೀಚ ಹೊಸ ಯೋಚನೆ ಹರಿಬಿಟ್ಟ.

ಇವರು ಮಾತನಾಡುತ್ತಿದ್ದಾಗ ಹೊರಗೆ ಅವನು ಕಾಣಿಸಿಕೊಂಡ. ಭಯಂಕರವಾಗಿದ್ದ. ಕಪ್ಪು ಮತ್ತು ಕಂದು ಮಿಶ್ರಿತ ಮೈಬಣ್ಣ. ಕುಳ್ಳ ಆಕೃತಿ. ವಿಕಟವಾಗಿದ್ದ. ತಲೆಯಲ್ಲಿ ಕೂದಲಿರಲಿಲ್ಲ. ಗಿಡ್ಡ ಕೈಗಳು. ಮಂಗದ ಮುಖ. ಕೈಯಲ್ಲಿ ಶೂಲ ಹಿಡಿದಿದ್ದ.

ಅವನು ನಂದಿ. ಶಿವನ ಅನುಚರ.

‘ದಶಕಂಠ, ಹಿಂದೆ ಹೋಗು. ಪರ್ವತದ ಮೇಲೆ ಶಂಕರ ವಿಹರಿಸುತ್ತಿದ್ದಾನೆ. ನೀನಲ್ಲ, ಇಲ್ಲಿಗೆ ಈಗ ಯಾರೂ ಬರುವಂತಿಲ್ಲ. ಗರುಡ, ನಾಗ, ಯಕ್ಷ, ದೇವ, ಗಂಧರ್ವ, ರಾಕ್ಷಸ ಎಲ್ಲರಿಗೂ ಇಲ್ಲೀಗ ಪ್ರವೇಶ ನಿಷಿದ್ಧ. ದುರ್ಬುದ್ಧಿ ಮಾಡಿದರೆ ಸಾಯುವೆ’ ಎಂದ.

ನಂದಿಯ ಮಾತಿಗೆ ದಶಕಂಠ ಕೆಂಡಾಮಂಡಲವಾದ. ಕಣ್ಣು ಕೆಂಪಾಯಿತು. ಕರ್ಣಕುಂಡಲ ಅದುರಿತು. ರೋಷದಿಂದ ಪುಷ್ಪಕವಿಳಿದ. ‘ಯಾರವನು ಶಂಕರ?’ ಎಂದು ಘರ್ಜಿಸಿದ. ಪರ್ವತದ ಬುಡದತ್ತ ತೆರಳಿದ. ಅಲ್ಲಿ ಅವನಿಗೆ ನಂದಿ ಕಾಣಿಸಿದ. ಕಪಿಮುಖ ಕಂಡು ನಗು ಉಕ್ಕಿತು ಅವನಿಗೆ. ಅಪಹಾಸ್ಯದಿಂದ ಜೋರಾಗಿ ನಕ್ಕ.

ನಂದಿ ಸಿಟ್ಟಾದ. ‘ದಶಕಂಠ, ನನ್ನ ಕಪಿಮುಖ ನಿನಗೆ ಹಾಸ್ಯದ ವಸ್ತುವಾಯಿತೇ? ಅಪಹಾಸ್ಯ ಮಾಡಿದೆ. ನನ್ನಂತೆ ಇರುವವರೇ ನಿನ್ನ ಕುಲದ ನಾಶಕ್ಕೆ ಹುಟ್ಟಿ ಬರಲಿ. ಅವರಿಗೆ ನನ್ನಷ್ಟೇ ಬಲವಿರಲಿ. ಅವರು ಮನೋವೇಗಿಗಳಾಗಿರಲಿ. ಉಗುರು, ಹಲ್ಲುಗಳೇ ಅವರ ಆಯುಧವಾಗಲಿ. ಯುದ್ಧೋನ್ಮತ್ತರಾಗಿರಲಿ. ಸಂಚರಿಸುವ ಬೆಟ್ಟಗಳಂತಿರಲಿ. ನಿನ್ನ ದರ್ಪವನ್ನು ಅವರು ಮುರಿಯುತ್ತಾರೆ. ನಿನ್ನ ಆಟಾಟೋಪವನ್ನು ಕೊನೆ ಮಾಡುತ್ತಾರೆ. ನಿನ್ನ ಸಚಿವರು, ಸಂತಾನ ಎಲ್ಲರ ನಾಶಕ್ಕೂ ಕಾರಣರಾಗುತ್ತಾರೆ. ನಿನ್ನನ್ನು ಈಗಲೇ ಕೊಲ್ಲಬಲ್ಲೆ. ಆದರೆ ಸತ್ತವರನ್ನು ಕೊಲ್ಲುವ ಅಭ್ಯಾಸ ನನಗಿಲ್ಲ. ನಿನ್ನ ದುಷ್ಕೃತ್ಯಗಳಿಂದಾಗಿ ಈಗಾಗಲೇ ಸತ್ತಾಗಿದೆ ನೀನು’ ಎಂದು ಗುಡುಗಿದ.

ಆಗ ದೇವದುಂದುಭಿ ಮೊಳಗಿತು. ಅಂಬರದಿಂದ ಹೂಮಳೆಯಾಯಿತು.

ದಶಕಂಠ ನಂದಿಯ ಮಾತನ್ನು ಲೆಕ್ಕಿಸಲಿಲ್ಲ. ಪರ್ವತದ ಬಳಿಗೆ ಹೋದ.

‘ಶಂಕರ ಪುಷ್ಪಕದ ಚಲನೆಯನ್ನು ತಡೆದಿದ್ದಾನೆ. ಅದರಿಂದಾಗಿ ನನಗೂ ತಡೆಯೊಡ್ಡಿದ್ದಾನೆ. ಅವನು ವಿಹಾರ ಮಾಡುತ್ತಿರುವ ಬೆಟ್ಟ ಇದು ಎಂದೆಯಲ್ಲವೇ? ಇದನ್ನೇ ಕಿತ್ತೆಸೆಯುತ್ತೇನೆ. ತಾನೇ ಮಹಾರಾಜ ಎಂದುಕೊಂಡಿರಬೇಕು ಅವನು. ಏನವನ ಸಾಮರ್ಥ್ಯ ಎಂದು ಅವನಿಗೆ ತಿಳಿಯಬೇಕಲ್ಲ! ಅವನಿಗೆಂಥ ವಿಪತ್ತು ಬಂದಿದೆ ಎಂದು ಅವನಿಗಿನ್ನೂ ತಿಳಿದಿಲ್ಲ’ ಎಂದ.

ತನ್ನ ತೋಳುಗಳನ್ನು ಚಾಚಿದ. ಬಲವಾಗಿ ಕೈಲಾಸ ಪರ್ವತವನ್ನು ಹಿಡಿದ. ಒಮ್ಮೆಲೆ ಅದನ್ನು ಮೇಲೆತ್ತಿದ.

ಕೈಲಾಸ ಕಂಪಿಸಿತು. ಮೇಲಿದ್ದ ಶಿವಗಣಗಳು ನಡುಗಿದರು. ಪಾರ್ವತಿಯೂ ಕಂಪಿಸಿದಳು. ಶಿವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಶಿವನಿಗೆ ನಡೆದದ್ದು ತಿಳಿಯದೇ? ತನ್ನ ಕಾಲಬೆರಳಿನಿಂದ ಪರ್ವತವನ್ನು ಒತ್ತಿದ. ಅವನು ಅದನ್ನು ಲೀಲಾಜಾಲವಾಗಿ ಮಾಡಿದ್ದ. ಸಮಸ್ಯೆ ಆದದ್ದು ಕೆಳಗಿದ್ದವನಿಗೆ. ಪರ್ವತದ ಅಡಿಯಲ್ಲಿ ದಶಕಂಠನ ತೋಳುಗಳು ಸಿಲುಕಿಕೊಂಡವು.

ತಾಳಲಾಗದ ನೋವು. ಎತ್ತಲಾಗದ ಆಕ್ರೋಶ. ದಶಕಂಠ ಜೋರಾಗಿ ಅರಚಿದ. ಅದು ಮೂರು ಲೋಕವೂ ನಡುಗುವಷ್ಟು. ಪ್ರಳಯದ ಸಿಡಿಲ ಅಬ್ಬರ ಎನಿಸಿತು ಅವನ ಸಚಿವರಿಗೆ. ಅವರು ದಿಗ್ಭ್ರಾಂತರಾಗಿದ್ದರು. ಇಂದ್ರ ಮೊದಲಾದ ದೇವತೆಗಳೇ ವಿಚಲಿತರಾಗಿದ್ದರು. ಸಮುದ್ರಗಳು ಉಕ್ಕೇರಿದವು. ಗಿರಿಗಳು ನಡುಗಿದವು. ಯಕ್ಷರು, ವಿದ್ಯಾಧರರು, ಸಿದ್ಧರು ಇದೇನಾಯಿತೆಂದು ಕಂಗಾಲಾದರು.

ರಾವಣ ಕೂಗುತ್ತಲೇ ಇದ್ದ. ದಿಗ್ಭ್ರಾಂತಿಯಲ್ಲಿದ್ದ ಸಚಿವರು ಒಂದು ಸಲಹೆ ಕೊಟ್ಟರು: ‘ಶಿವನಿಗೆ ಶರಣಾಗು. ನಮಗೆ ಬೇರೆ ದಾರಿ ಕಾಣುತ್ತಿಲ್ಲ. ಅವನ ಸ್ತುತಿ ಮಾಡು. ಅವನನ್ನು ಸಂತೋಷಪಡಿಸು. ಅವನು ಕರುಣಾಳು. ಅನುಗ್ರಹ ಮಾಡುತ್ತಾನೆ’ ಎಂದರು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಘಾಂದ್ರುಕ್‌ ಕಾದಂಬರಿಯ ಪುಟಗಳು

ರಾವಣನಿಗೆ ನೋವು ತಡೆಯದಾಯಿತು. ದೀನನಾದ. ಶಿವನನ್ನು ಬೇಡಿಕೊಳ್ಳಲು ಆರಂಭಿಸಿದ. ಸ್ತುತಿ ಮಾಡಿದ. ಸಾಮಗಾನ ಮಾಡಿದ. ಅರಚಾಟ ಅಳು ಕೂಡಾ ಹಾಗೆಯೇ ಇತ್ತು. ಒಂದು ದಿನವಲ್ಲ, ಎರಡು ದಿನವಲ್ಲ. ಕೂಗು, ಸ್ತೋತ್ರ ಒಟ್ಟೊಟ್ಟಿಗೇ ಸಾಗಿತು. ಅವನ ಆ ದಾರುಣ ಕೂಗು ಲೋಕಕ್ಕೆ ಪೀಡೆಯೇ ಆಗಿತ್ತು.

ಹೀಗೆ ಒಂದು ಸಾವಿರ ವರ್ಷ ಕಳೆಯಿತು. ಕೊನೆಗೆ ಶಿವ ಕರಗಿದ. ಸಿಕ್ಕಿಕೊಂಡಿದ್ದ ದಶಕಂಠನ ತೋಳುಗಳಿಗೆ ಬಿಡುಗಡೆಯಿತ್ತ.

‘ನಿನ್ನ ಸ್ತುತಿಗೆ ಮೆಚ್ಚಿದೆ ದಶಕಂಠ. ನಿನ್ನ ಪರಾಕ್ರಮವೂ ಇಷ್ಟವಾಯಿತು. ತೋಳು ಸಿಲುಕಿಕೊಂಡ ನೋವಿಗೆ ಒಂದು ಸಾವಿರ ವರ್ಷ ಕೂಗಿದೆಯಲ್ಲ! ದಾರುಣವಾಗಿ ಕೂಗುತ್ತಿದ್ದೆ. ಲೋಕ ನಿನ್ನ ಕೂಗಿನಿಂದ ತಲ್ಲಣಗೊಂಡಿತ್ತು, ಭಯಗೊಂಡಿತ್ತು. ನಿರಂತರ ಕೂಗುತ್ತಾ, ಕೂಗಿನಿಂದಲೇ ಲೋಕವನ್ನು ಪೀಡಿಸಿದವನಾದೆ. ಇನ್ನು ಮುಂದೆ ಲೋಕ ನಿನ್ನನ್ನು ‘ರಾವಣ’ ಎಂದೇ ಗುರುತಿಸುತ್ತದೆ. ಲೋಕರಾವಣ ನೀನು. ನೀನಿನ್ನು ಮನಸ್ಸು ಬಂದಲ್ಲಿಗೆ ಹೋಗಬಹುದು. ಹೊರಡಲು ಅನುಮತಿ ನೀಡಿದ್ದೇನೆ’ ಎಂದ.

{ರಾವ = ಶಬ್ದ, ಕೂಗು. ಕೂಗಿದವ; ಕೂಗನ್ನು ಕೇಳಿಸಿದವ; ಕೂಗಿ, ಕೂಗುವಂತೆ ಮಾಡಿದವ.}

‘ಮಹಾದೇವ, ನಿನಗೆ ಮೆಚ್ಚುಗೆಯಾದರೆ ನನಗೆ ವರ ನೀಡು. ದೇವತೆಗಳು, ಗಂಧರ್ವರು, ದಾನವರು, ರಾಕ್ಷಸರು, ಯಕ್ಷರು, ನಾಗರು ಮತ್ತಿತರ ಬಲಿಷ್ಠರಿಂದ ನನಗೆ ಸಾವಿಲ್ಲ. ಅಂತಹ ವರವನ್ನು ಮೊದಲೇ ಪಡೆದಾಗಿದೆ. ಮನುಷ್ಯರು ನನಗೆ ಲೆಕ್ಕಕ್ಕೇ ಇಲ್ಲ. ಅಲ್ಪಬಲರು ಅವರು. ಬ್ರಹ್ಮದೇವ ದೀರ್ಘಾಯುಷ್ಯವನ್ನು ನೀಡಿದ್ದಾನೆ. ನಿನ್ನಿಂದ ಇನ್ನಷ್ಟು ದೀರ್ಘಾಯುಷ್ಯವನ್ನು ಬಯಸಿದ್ದೇನೆ. ಒಂದು ವಿಶಿಷ್ಟವಾದ ಶಸ್ತ್ರದ ಅಪೇಕ್ಷೆಯೂ ಇದೆ’ ಎಂದ ರಾವಣ.

ಶಿವ ಒಪ್ಪಿದ. ಅವನಿಗೆ ಇನ್ನಷ್ಟು ಆಯುಷ್ಯವಿತ್ತ. ಚಂದ್ರಹಾಸ ಎನ್ನುವ ಖಡ್ಗವನ್ನು ಕೊಟ್ಟ. ಅದು ತೇಜಸ್ಸಿನಿಂದ ಬೆಳಗುತ್ತಿತ್ತು. ಕೊಟ್ಟವ ಸೂಚನೆಯನ್ನೂ ಇತ್ತ. ‘ಈ ಖಡ್ಗವನ್ನು ಅಸಡ್ಡೆ ಮಾಡಬೇಡ. ಅಸಡ್ಡೆ ಮಾಡಿದರೆ ಇದು ಹಿಂದಿರುಗಿ ನನ್ನನ್ನೇ ಸೇರುತ್ತದೆ’ ಎಂದ.

ಇದನ್ನೂ ಓದಿ: Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ

ರಾವಣನಿಗೆ ಅಪರಿಮಿತ ಸಂತಸವಾಗಿತ್ತು. ಶಿವನಿಗೆ ನಮಿಸಿ ಪುಷ್ಪಕವೇರಿದ.

ಸನ್ನಿವೇಶ ಯಾವುದೇ ಇದ್ದರೂ, ಅದು ತನಗೆ ವಿರುದ್ಧವಾಗಿಯೇ ಇದ್ದರೂ ಕೊನೆಯಲ್ಲಿ ತನಗೇ ಲಾಭವಾಗುವಂತೆ ಮಾಡಿಕೊಳ್ಳುವುದು ಜಾಣ್ಮೆ. ಅದು ರಾವಣನಿಗಿತ್ತು.

ಕೃತಿ: ದಶಕಂಠ ರಾವಣ (ಪಾಪ, ಶಾಪ, ಪ್ರತಾಪ, ಪರಿತಾಪ)
ಲೇಖಕ: ಜಗದೀಶ ಶರ್ಮಾ ಸಂಪ
ಪ್ರಕಾಶನ: ಸಾವಣ್ಣ ಪ್ರಕಾಶನ
ಬೆಲೆ: ರೂ.350


Exit mobile version