Site icon Vistara News

Sunday Read: ಹೊಸ ಪುಸ್ತಕ: ಕನ್ನಡದ ಸವಾಲುಗಳು: ಕನ್ನಡ ನುಡಿಯ ಬೆಳವಣಿಗೆಯ ಹಾದಿ

kannada book

: ಗಿರೀಶ್‌ ಮತ್ತೇರ

ಗಿರೀಶ್‌ ಮತ್ತೇರ

(ಲಿಪಿ ಸುಧಾರಣೆಯ ಭಾಗವಾಗಿ ಈ ಲೇಖನದಲ್ಲಿ ಮಹಾಪ್ರಾಣ ಅಕ್ಷರಗಳಾದ ಖ, ಘ, ಛ, ಝ, ಠ, ಢ, ಥ, ಧ, ಫ, ಭ ಅಂತೆಯೇ ಷ ಅಕ್ಷರಗಳನ್ನು ಬಳಸಿರುವುದಿಲ್ಲ)

ಸಾವಿರಾರು ವರ್ಶಗಳ ಇತಿಹಾಸವನ್ನು ಹೊಂದಿರುವ ಕನ್ನಡ ಬಾಶೆ ವಿವಿದ ಹಂತಗಳನ್ನು ಹಾದುಬಂದಿದೆ. ಕನ್ನಡದಲ್ಲಿ ದೊರೆತಿರುವ ಮೊದಲ ಅದಿಕ್ರುತ ಬರಹ ಕ್ರಿ.ಶ. 450ರಲ್ಲಿ ದೊರೆತ ಹಲ್ಮಡಿ ಶಾಸನವಾದರೆ ದೊರೆತಿರುವ ಮೊದಲ ಕ್ರುತಿ ಕ್ರಿ.ಶ. 850ರ ಕಾಲದ ಕವಿರಾಜಮಾರ್ಗ. ಕನ್ನಡ ಸಾಹಿತ್ಯ ಹಾಗು ಬಾಶೆಯನ್ನು ಸ್ತೂಲವಾಗಿ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಎಂದು ಗುರುತಿಸಬಹುದು. ಹಳೆಗನ್ನಡದಲ್ಲಿ ಮುಕ್ಯವಾಗಿ ಪಂಪನ ವಿಕ್ರಮಾರ್ಜುನ ವಿಜಯ ಹಾಗು ಆದಿಪುರಾಣ, ರನ್ನನ ಸಾಹಸಭೀಮ ವಿಜಯ ಹಾಗು ಅಜಿತ ಪುರಾಣ, ಪೊನ್ನನ ಶಾಂತಿ ಪುರಾಣ, ಶಿವಕೋಟ್ಯಾಚಾರ್ಯರ ವಡ್ಡಾರಾದನೆ ಮೊದಲಾದವುಗಳನ್ನು ಗುರುತಿಸಬಹುದು. ಬಹುತೇಕ ಚಂಪೂಶೈಲಿಯಲ್ಲಿ ರಚನೆಯಾಗಿರುವ ಈ ಕಾಲದ ಕನ್ನಡ ಸಾಹಿತ್ಯ ಆರಂಬದ ಸುವರ್ಣ ಯುಗವಾಗಿದೆ. ಈ ಕವಿಗಳೆಲ್ಲರೂ ಏಕಕಾಲದಲ್ಲಿ ಕನ್ನಡ ಹಾಗು ಸಂಸ್ಕ್ರುತ ವಿದ್ವಾಂಸರು. ಅಂತೆಯೇ ಇವರಿಗೆ ಸಂಸ್ಕ್ರುತ ಬಾಶೆಯಿಂದಲೇ ಕನ್ನಡ ಬಾಶೆ ಹುಟ್ಟಿದೆ ಎಂಬ ತಪ್ಪು ತಿಳುವಳಿಕೆಯಿತ್ತು. ಈ ಹಿನ್ನೆಲೆಯಲ್ಲಿ ಅವರು ಹೆಚ್ಚು ಹೆಚ್ಚಾಗಿ ಸಂಸ್ಕ್ರುತ ಪದಗಳನ್ನು ತಮ್ಮ ಕ್ರುತಿಗಳಲ್ಲಿ ಬಳಸಿದ್ದಾರೆ. ಇವುಗಳನ್ನು ಶ್ರೀಸಾಮಾನ್ಯರು ಅರ್ತ ಮಾಡಿಕೊಳ್ಳಲು ಕಷ್ಟವಿದೆ.

ಹನ್ನರಡನೇ ಶತಮಾನ ಕನ್ನಡ ಬಾಶೆ ಸಾಹಿತ್ಯ ಹಾಗು ವೈಚಾರಿಕತೆಯ ಹಿನ್ನೆಲೆಯಲ್ಲಿ ತಿರುವಿನ ಕಾಲವಾಗಿದೆ. ಇದುವರೆಗೂ ಇದ್ದ ಸಂಸ್ಕ್ರುತ ಪದಗಳಿಂದ ಬಿಡುಗಡೆ ಹೊಂದಿ ಬಾಶೆ ಸರಳವಾಗತೊಡಗಿತು. ಬಸವಣ್ಣ, ಅಲ್ಲಮಪ್ರಬು, ಅಕ್ಕಮಹಾದೇವಿ ಮೊದಲಾದ ಶಿವಶರಣರು ಜನರಾಡುವ ಮಾತುಗಳಲ್ಲಿಯೇ ತಮ್ಮ ವಚನಗಳನ್ನು ಬರೆದರು. ಕಾವ್ಯ ರಾಜ ಬೀದಿಗಳನ್ನು ಬಿಟ್ಟು ಸಣ್ಣ ಸಣ್ಣ ಓಣಿಗಳಲ್ಲಿ ನುಗ್ಗಿತು. ಇದುವರೆಗೂ ವಿದ್ವಾಂಸರಿಗಾಗಿ ಬರೆಯುತ್ತಿದ್ದ ಸಾಹಿತ್ಯ ಈಗ ಜನಸಾಮಾನ್ಯರಿಗಾಗಿ ಬರೆಯಲ್ಪಟ್ಟಿತು.

ಉದಾ:-
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರಹೊನ್ನ ಕಳಸವಯ್ಯ
ಕೂಡಲ ಸಂಗಮದೇವ ಕೇಳಯ್ಯ
ಸಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಕಲ್ಯಾಣದಲ್ಲಿ ಸ್ತಾಪನೆಯಾದ ಅನುಬವ ಮಂಟಪವಂತೂ ವಿಶ್ವದಲ್ಲಿಯೇ ಒಂದು ಅಪೂರ್ವ ಪರಿಕಲ್ಪನೆ. ವಿಶ್ವದ ಮೊದಲ ಸಂಸತ್ತು ಶಿವಶರಣರ ಅಡುಂಬೊಲ. ಈ ನಡುಗನ್ನಡ ಸಾಹಿತ್ಯದ ಹಾದಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯದಿಂದ ಹಿಡಿದು ಹತ್ತೊಂಬತ್ತನೇ ಶತಮಾನದವರೆಗೂ ಹಿಗ್ಗಿದೆ. ಹರಿಹರನ ಶಿವಗಣದ ರಗಳೆಗಳು ಸರಳವಾದ ಬಾಶೆಯಲ್ಲಿ ರಚನೆಯಾದವು. ಕುಮಾರವ್ಯಾಸ, ರಾಗವಾಂಕ, ಲಕ್ಷ್ಮೀಶ, ಮೊದಲಾದವರು ಶಟ್ಪದಿಗಳಲ್ಲಿ ಅಂತಯೇ ರತ್ನಾಕರವರ್ಣಿಯು ತನ್ನ ಬರತೇಶ ವೈಭವವನ್ನು ಸಾಂಗತ್ಯದಲ್ಲಿ ಬರೆಯುವ ಮೂಲಕ ಕನ್ನಡ ಸಾಹಿತ್ಯದ ಬಾಶೆಯನ್ನು ಸುಲಬಗೊಳಿಸಲು ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ದಾಸಸಾಹಿತ್ಯದ ಪಾತ್ರವು ಮಹತ್ತರವಾದುದು. ಪುರಂದರದಾಸ ಕನಕದಾಸ ಮೊದಲಾದ ದಾಸವರೇಣ್ಯರು ವಚನಕಾರರ ನಂತರ ಜನರಾಡುವ ನುಡಿಯಲ್ಲಿ ಕೀರ್ತನೆಗಳನ್ನು ರಚಿಸಿದರು.

ಉದಾ:- ಬಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ
ಸೌಬಾಗ್ಯದ ಲಕ್ಷ್ಮಿ ಬಾರಮ್ಮ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆಕಾಲ್ಗಳ ದನಿಯ ತೋರುತ
ಸಜ್ಜನ ಸಾದು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂದದಿ

ಇಪ್ಪತ್ತನೇ ಶತಮಾನದ ಅರಂಬದ ಬಾಗ ಕನ್ನಡ ಬಾಶೆಯ ಬೆಳವಣಿಯ ದ್ರುಶ್ಟಿಯಿಂದ ಮಹತ್ವದ ಕಾಲ. ಹೊಸಗನ್ನಡದ ಹುಟ್ಟಿನ ಕಾಲ. ಈ ಕಾಲದ ಸಾಹಿತಿಗಳು ಆದುನಿಕ ಇಂಗ್ಲೀಶ್ ಸಾಹಿತ್ಯದ ಜನಪ್ರಿಯ ರೂಪಗಳನ್ನು ಕನ್ನಡದಲ್ಲಿಯೂ ತರಲು ಪ್ರಯತ್ನಿಸಿದರು. 1921ರಲ್ಲಿ ಬಿ.ಎಂ.ಶ್ರೀ ಅವರು ತಮ್ಮ ಇಂಗ್ಲೀಶ್ ಗೀತಗಳು ಕವನ ಸಂಕಲನದ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಕನ್ನಡ ಸಾಹಿತ್ಯದ ಬಾಶೆಗೆ ಹೊಸ ರಕ್ತ ಸಂಚಾರವಾದಂತಾಯಿತು. ಕನ್ನಡದ ದೇಶಿಯ ನುಡಿಗಟ್ಟುಗಳು ವ್ಯಾಪಕವಾಗಿ ಬಳಕೆಯಾಗತೊಡಗಿದವು. ಶ್ರೀಯುತರು ಒಂದು ಪರಂಪರೆಯನ್ನು ಸ್ರುಶ್ಟಿಸಿದರು.ಕುವೆಂಪು, ದ.ರಾ.ಬೇಂದ್ರೆ, ಪು.ತಿ.ನ ಮೊದಲಾದವರು ಬಿ.ಎಂ.ಶ್ರೀ ಅವರನ್ನು ಅನುಸರಿಸಿದರು.

ಇಂಗ್ಲೀಶ್ ಸಾಹಿತ್ಯದಲ್ಲಿ ಜನಪ್ರಿಯವಾಗಿದ್ದ ಕಾದಂಬರಿ ಹಾಗು ಸಣ್ಣಕತೆಗಳ ಪ್ರಕಾರಗಳೂ ಸಹ ಕನ್ನಡದಲ್ಲಿ ಪ್ರಚುರಗೊಂಡವು. ಕನ್ನಡ ನುಡಿ ನವೋದಯ ಸಾಹಿತ್ಯಕ್ಕೆ ಸಾಕ್ಶಿ ಆಯಿತು. ಶಿವರಾಮ ಕಾರಂತ, ಕುವೆಂಪು ಮೊದಲಾದವರು ಈ ನಿಟ್ಟಿನಲ್ಲಿ ಕೆಲಸ ಮಾಡಿದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಸಣ್ಣಕತಾ ಪ್ರಕಾರದಲ್ಲಿ ಅಪೂರ್ವ ಸಾದನೆಯನ್ನೇ ಮಾಡಿದರು. ಹೀಗೆ ಇಂಗ್ಲೀಶ್‌ನ ಆದುನಿಕ ಸಾಹಿತ್ಯದ ಪ್ರಕಾರಗಳೆಲ್ಲವೂ ಕನ್ನಡದಲ್ಲಿ ಜನಪ್ರಿಯಗೊಂಡವು. 1975ರಲ್ಲಿ ಪ್ರಕಟವಾದ ಮಹಾಕವಿ ಸಿದ್ದಲಿಂಗಯ್ಯನವರ ಹೊಲೆಮಾದಿಗರ ಹಾಡು ಶೋಶಿತ ಜಾತಿ ಸಮುದಾಯಗಳ ಸಂವಿದಾನವಾಯಿತು. ಜನರಾಡುವ ಅತ್ಯಂತ ಜೀವಂತ ಬಾಶೆ ಅದರಲ್ಲಿ ಅಭಿವ್ಯಕ್ತವಾಗಿತ್ತು. ಇಕ್ರಲಾ ವದೀರ್ಲಾ ಇಂತಹ ಪದಗಳು ಕನ್ನಡ ಕಾವ್ಯವನ್ನು ಹಾಗೂ ಬಾಶೆಯನ್ನು ಹೊಸ ಪರಿಬಾಶೆಯಿಂದ ನೋಡುವಂತೆ ಮಾಡಿತು. ಇಪ್ಪತ್ತನೇ ಶತಮಾನದ ಆರಂಬದ ದಶಕಗಳಲ್ಲಿ ಬಿ.ಎಂ.ಶ್ರೀಯವರು ಕನ್ನಡ ಕಾವ್ಯ-ಸಾಹಿತ್ಯದ ಜಗತ್ತಿನಲ್ಲಿ ಮನ್ವಂತರಕ್ಕೆ ಕಾರಣರಾದರೆ ಕೊನೆಯ ದಶಕಗಳಲ್ಲಿ ಸಿದ್ದಲಿಂಗಯ್ಯನವರ ಹೊಲೆಮಾದಿಗರ ಹಾಡು ಆ ಕೆಲಸವನ್ನು ಮಾಡಿತು. ಅವರ ಉಳಿದ ಕವನ ಸಂಕಲನಗಳು ಹಾಗೂ ಇತರೆ ಸಾಹಿತ್ಯ ಪ್ರಕಾರಗಳೂ ಸಹ ಇದೇ ದಿಕ್ಕಿನಲ್ಲಿ ಸಾಗಿದವು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ತುಷಾರ ಹಾರ

ಈ ಪರಂಪರೆಯಲ್ಲಿ ಬಂದ ದಲಿತ ಬಂಡಾಯದ ಬಹುತೇಕ ಸಾಹಿತಿಗಳು ಇವರನ್ನು ಅನುಸರಿಸಿದರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ಅತ್ಯಂತ ಹೆಚ್ಚು ಅಚ್ಚಗನ್ನಡ ಪದಗಳು ಬಳಕೆಯಾದದ್ದು ಇವರ ಸಾಹಿತ್ಯದಲ್ಲಿ ಎಂದು ಹೇಳಬಹುದು. ಮೊದಲ ಬಾರಿಗೆ ಅಕ್ಕರಗಳನ್ನು ಕಲಿತ ಶೋಶಿತ ಜಾತಿ ಸಮುದಾಯಗಳ ಜನರು ತುಂಬ ಬೆರಗಿನಿಂದ ಸಾಹಿತ್ಯದಲ್ಲಿ ತಮ್ಮ ಅಕ್ಕರಗಳನ್ನು ಮೂಡಿಸಿ ಸಂಭ್ರಮಿಸಿದರು. ಹೇಳಬೇಕಾದುದನ್ನು ನೇರವಾಗಿ ಸರಳವಾಗಿ ಹೇಳುತ್ತಾ ಹಾಡುತ್ತಾ ಸಾಗಿದರು. ಕನ್ನಡ ಸಾಹಿತ್ಯದಲ್ಲಿ ಇದ್ದ ಅರ್ತವಾಗದಿರುವ ಕಶ್ಟದ ಪದಗಳ ಭಾರವನ್ನು ಬಹುತೇಕ ಕಡಿಮೆ ಮಾಡಿದರು. ಇದು ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ನೆನಪಿಸುತ್ತದೆ. ಈ ಸಮುದಾಯದವರು ಹನ್ನೆರಡನೇ ಶತಮಾನ ಬಿಟ್ಟರೆ ದೊಡ್ಡ ಮಟ್ಟದಲ್ಲಿ ವೈಚಾರಿಕ ಪ್ರಪಂಚಕ್ಕೆ ತೆರೆದುಕೊಂಡದ್ದು ಇಪ್ಪತ್ತನೇ ಶತಮಾನದ ಕೊನೆಯ ಭಾಗದಲ್ಲಿ ಎಂದು ಕಾಣುತ್ತದೆ.

ಕನ್ನಡ ಸಾಹಿತ್ಯದ ಬಾಶೆ ಸರಳವಾದದ್ದೇನೋ ನಿಜ. ಆದರೆ ಕನ್ನಡದ ವಿಜ್ಞಾನ ತಂತ್ರಜ್ಞಾನದ ಬಾಶೆ ಇಂದಿಗೂ ಜಟಿಲವಾಗಿಯೇ ಇದೆ. ಕನ್ನಡ ಮಾದ್ಯಮದ ವಿಜ್ಞಾನ ಪಟ್ಯಪುಸ್ತಕಗಳಲ್ಲಿರುವ ಪದಗಳನ್ನಂತೂ ಹೇಳುವುದೇ ಬೇಡ. ಪೀನ ಮಸೂರ, ನಿಮ್ನ ಮಸೂರ, ಗ್ರುಹತ್ಯಾಜ್ಯ, ಆರೋಹಣ, ಪುಶ್ಪಪತ್ರ, ಅಂಡಜ, ಸಂಪೀಡನ, ವ್ಯಾಕೋಚನ ಇವೇ ಮೊದಲಾದ ಪದಗಳಿವೆ. ಮಕ್ಕಳಿಗೆ ಸುಲಬವಾಗಿ ಅರ್ತವಾಗದ ಇಂತಹ ಪದಗಳಿಗೆ ಬದಲಾಗಿ ಉಬ್ಬುಗನ್ನಡಿ, ತಗ್ಗುಗನ್ನಡಿ, ಮನೆಕಸ, ಏರಿಕೆ, ಹೂವಿನೆಲೆ, ಮೊಟ್ಟೆಯಿಡುವ, ಒತ್ತುವಿಕೆ, ಹರಡುವಿಕೆ ಇಂತಹ ಪದಗಳನ್ನು ಬಳಸಬೇಕಿದೆ. ಇಂದಿಗೂ ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಬಾಗವನ್ನು ಕನ್ನಡ ಮಾದ್ಯಮದಲ್ಲಿ ಯಶಸ್ವಿಯಾಗಿ ಕೊಡಲು ಸಾದ್ಯವಾಗದಿರುವುದಕ್ಕೆ ಇದೇ ಪ್ರಮುಕ ತೊಡಕಾಗಿದೆ.

ಕೃತಿ: ಕನ್ನಡದ ಸವಾಲುಗಳು (ಭಾರತೀಯ ಭಾಷೆಗ
ಲೇಖಕ: ಗಿರೀಶ್‌ ಮತ್ತೇರ
ಪ್ರಕಾಶನ: ನೇಸರ ಪ್ರಕಾಶನ, ಚನ್ನಗಿರಿ
ಬೆಲೆ: 100/-

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಯೋಗತಾರಾವಳಿ- ಒಂದು ಅವಲೋಕನ

Exit mobile version