ಆಯ್ದ ಭಾಗ
ಲುಫ್ತಾನ್ಸ್ ವಿಮಾನ
ಜೂನ್ 20, 2022
ರಾತ್ರಿ 10:00 ಗಂಟೆ
ಅರಬ್ಬಿ ಸಮುದ್ರದ ಮೇಲೆ ಹಾರುತ್ತಿದ್ದ ಏರ್ ಇಂಡಿಯ ವಿಮಾನದಲ್ಲಿ ಶಂಕರದೇವ ಗುರುಗಳು ಫಸ್ಟ್ ಕ್ಲಾಸ್‍ನಲ್ಲಿ ಕೂತಿದ್ದರೂ ಪರಿಚಾರಿಕೆಯರ ಔಪಚಾರಿಕ ಕ್ರಮಗಳಿಂದಾಗಿ ತಮ್ಮ ಯೋಚನೆಯಲ್ಲಿ ಮಗ್ನರಾಗಲು ಇನ್ನೂ ಸಾಧ್ಯವಾಗಿರಲಿಲ್ಲ. ವಿಮಾನ ಮುಂಬಯಿ ಯಿಂದ ಹೊರಟ ನಂತರದ ಒಂದೂವರೆ ಗಂಟೆಯವರೆಗೂ ಪ್ರಯಾಣಿಕರಿಗೆ ನೀಡುವ ರಕ್ಷಣಾ ಸೂಚನೆಗಳ ಸರಮಾಲೆ, ಅದಕ್ಕೆ ಸಂಬಂಧಿಸಿದ ರಕ್ಷಣಾ-ವೀಕ್ಷಣೆ, ಅದರ ಬೆನ್ನಲ್ಲಿಯೇ ಪ್ರಾರಂಭಿಸಿದ ಲಘು ಊಟದ ವಿತರಣೆ ಮುಂತಾದವು ಸತತವಾಗಿ ಅವರ ಏಕಾಗ್ರತೆಯನ್ನು ಕದಡಿದ್ದರಿಂದ ತಮ್ಮ ಯೋಚನೆಯಲ್ಲಿ ತೊಡಗಿಕೊಳ್ಳಲು ಕಷ್ಟವಾಗಿತ್ತು. ಕೊನೆಗೆ ಎಲ್ಲಾ ಔಪಚಾರಿಕ ಕ್ರಮಗಳು ಮುಗಿದು ವಿಮಾನದ ಒಳಗೆ ದೀಪಗಳು ಆರಿದ ಮೇಲೆ ತಮ್ಮ ಸೀಟನ್ನು ಹಿಂದಕ್ಕೆ ತಳ್ಳಿ ಮಲಗುವ ಸ್ಥಿತಿಗೆ ಒರಗಿ, ತಮ್ಮ ಪ್ರಯಾಣದ ಉದ್ದೇಶದ ಬಗ್ಗೆ ಕಣ್ಣುಮುಚ್ಚಿ ಯೋಚಿಸತೊಡಗಿದರು. ಹಲವಾರು ದಿನಗಳಿಂದ ಯೋಚಿಸುತ್ತಲೇ ಇದ್ದರು.
ಹದಿನೈದು ದಿನಗಳ ಹಿಂದೆ ಅವರಿಗೊಂದು ಮಿಂಚಂಚೆ ಬಂದಾಗಿನಿಂದಲೇ ಅವರನ್ನು ಆ ಪ್ರಶ್ನೆಗಳು ಕಾಡುತ್ತಿದ್ದವು ಎಂದೆ ಹೇಳಬಹುದು. ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ವಿಜ್ಞಾನ ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ’ ಎಂಬ ಅಂತರರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಲೆಂದು ಕೋರಿ, ಅದರ ನಿರ್ವಾಹಕ ಮಂಡಲಿಯ ಮುಖ್ಯಸ್ಥ ರಿಂದಲೇ ಬಂದಿದ್ದ ಆ ಆಹ್ವಾನ ಕರೆಯಲ್ಲಿ, ಎಲ್ಲ ವೆಚ್ಚಗಳನ್ನೂ ತಾವೇ ಭರಿಸುವು ದಾಗಿಯೂ,ತಮ್ಮ ಇರುವಿಕೆಯೇ ನಮ್ಮ ಭಾಗ್ಯ’ ಎಂದೂ ತಿಳಿಸಿ, ಶಂಕರದೇವರನ್ನು ತಪ್ಪದೆ ಬರಬೇಕೆಂದು ಒತ್ತಾಯಿಸಿ ಆಹ್ವಾನಿಸಲಾಗಿತ್ತು. ಹಲವಾರು ಅಂತಾರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಿ, ಉಪನ್ಯಾಸಗಳನ್ನು ನೀಡಿದ್ದ ಶಂಕರದೇವ ಅವರಿಗೆ ಆ ಆಹ್ವಾನ ಹಲವು ದೃಷ್ಟಿಯಲ್ಲಿ ವಿಚಿತ್ರವಾಗಿ ಕಂಡಿತ್ತು:
ಒಂದು: ಸಾಮಾನ್ಯವಾಗಿ ಅಂತರರಾಷ್ಟ್ರೀಯ ವಿಚಾರವೇದಿಕೆಗಳ ವ್ಯವಸ್ಥಾಪಕರು ಕನಿಷ್ಠ ಹಲವಾರು ತಿಂಗಳುಗಳ ಹಿಂದೆಯೇ, ಕೆಲವೊಮ್ಮೆ ವರ್ಷಗಳ ಹಿಂದೆಯೇ ಕಾರ್ಯಕ್ರಮಗಳನ್ನು ನಿಗದಿಪಡಿಸಿ, ಎಲ್ಲ ವ್ಯವಸ್ಥೆಗಳನ್ನೂ, ಪ್ರಚಾರವನ್ನೂ ಪ್ರಾರಂಭಿಸಿ, ಆಹ್ವಾನ ಕರೆಗಳನ್ನೂ ಅತೀ ಮುಂಚಿತವಾಗಿಯೇ ಕಳುಹಿಸುತ್ತಾರೆ. ಹಾಗಾಗಿ ಕೇವಲ ಹದಿನೈದು ದಿನಗಳಲ್ಲಿ ಪ್ರಾರಂಭವಾಗುತ್ತಿರುವ ಕಮ್ಮಟಕ್ಕೆ ತಮ್ಮನ್ನು ಆಹ್ವಾನಿಸಿ ಬಂದಿದ್ದ ಆ ಕರೆ ಅತೀ ಆಶ್ಚರ್ಯವಾಗಿ ಕಂಡಿತ್ತು. ಆ ಕಮ್ಮಟದ ವಿವರಗಳನ್ನು ವೆಬ್‍ಸೈಟ್‍ನಲ್ಲಿ ಪರಿಶೀಲಿಸಿದ ತಮ್ಮ ಸೆಕ್ರೆಟರಿ ಅದರ ಪ್ರಚಾರ ಮತ್ತು ಕಾರ್ಯಕ್ರಮಗಳು ಎರಡು ವರ್ಷದ ಹಿಂದೆಯೇ ಪ್ರಾರಂಭವಾಗಿವೆ ಎಂದು ತಿಳಿಸಿದ ಮೇಲಂತೂ ಆ ಆಹ್ವಾನದ ಹಿಂದಿನ ಉದ್ದೇಶವೇ ಅರ್ಥವಾಗಲಿಲ್ಲ.
ಎರಡು: ಅಂತಹ ಕಮ್ಮಟಗಳ ಚರ್ಚಾಕೂಟಗಳು ಮತ್ತು ಅದರಲ್ಲಿ ಭಾಗವಹಿಸುವ ಪ್ರಮುಖರ ವಿವರಗಳು ಕೂಡ ಬಹಳಷ್ಟು ತಿಂಗಳುಗಳ ಹಿಂದೆಯೇ ತೀರ್ಮಾನ ವಾಗಿರುತ್ತವೆ. ಹಾಗಾಗಿ ಆಹ್ವಾನಿತಗೊಂಡಿದ್ದ ಯಾರೋ ಪರಿಣಿತರು ಬರಲಾಗದ ಕಾರಣ, ಕೊನೆಯ ಗಳಿಗೆಯಲ್ಲಿ ಅವರಿಗೆ ಪರ್ಯಾಯವಾಗಿ ತಮ್ಮನ್ನು ಆಹ್ವಾನಿಸಲಾಗು ತ್ತಿದೆಯೇ ಎಂಬ ಅನುಮಾನವೂ ಕಾಡತೊಡಗಿತ್ತು. ಜೊತೆಗೆ ವೆಬ್‍ಸೈಟ್‍ನಲ್ಲಿ ತಮ್ಮನ್ನು ಒಳಗೊಂಡ ಚರ್ಚಾಕೂಟದ ಬಗ್ಗೆ ಯಾವುದೇ ಸುದ್ದಿ ಇನ್ನೂ ಪ್ರಚುರಪಡಿಸಿರಲಿಲ್ಲವಾಗಿ ಈ ಆಹ್ವಾನದ ಬಗ್ಗೆಯೇ ಒಮ್ಮೆ ಶಂಕೆ ಉಂಟಾಗಿತ್ತು.
ಇದೆಲ್ಲ ಕಾರಣಗಳಿಂದ ಅದನ್ನು ಗಂಭೀರವಾಗಿ ಪರಿಗಣಿಸದೆ, ಮರೆಗೆ ತಳ್ಳಲು ತೀರ್ಮಾನಿಸುತ್ತಿದ್ದಂತೆ ಅವರಿಗೊಂದು ಅಂತರರಾಷ್ಟ್ರೀಯ ಕರೆ ಬಂದಿತ್ತು. ನಿರ್ವಾಹಕ ಮಂಡಲಿಯ ಮುಖ್ಯಸ್ಥರಾದ ಡೇವಿಡ್ ಕ್ಲಾರ್ಕ್ ಅವರೇ ಕರೆಮಾಡಿ, ತಡವಾಗಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಕೋರಿ, ಒಂದು ಪ್ರಮುಖವಾದ, ಆದರೆ ಅತೀ ಸಾಂದರ್ಭಿಕ ವಾದ ಧಾರ್ಮಿಕ ವಿಷಯದ ಬಗ್ಗೆ ಚರ್ಚಾಕೂಟವನ್ನು ನಡೆಸಲು ಕೇವಲ ಇಪ್ಪತ್ತು ದಿನಗಳ ಹಿಂದೆ ತೀರ್ಮಾನಿಸಲಾದ ಕಾರಣ, ಎಲ್ಲ ವ್ಯವಸ್ಥೆಗಳನ್ನೂ ತರಾತುರಿಯಲ್ಲಿ ಕೈಗೊಳ್ಳುತ್ತಿದ್ದೇವೆಂದು ತಿಳಿಹೇಳಿದ್ದರು. ಶಂಕರದೇವ ಗುರು ಅವರಿಂದ ಮತ್ತು ಇಟಲಿಯ ಪೋಪ್ ಕಡೆಯಿಂದ ಒಬ್ಬ ಪ್ರತಿನಿಧಿಯ ಒಪ್ಪಿಗೆಗಾಗಿ ಮಾತ್ರವೇ ತಾವು ಕಾಯುತ್ತಿದ್ದು ಇಬ್ಬರಿಂದಲೂ ಒಪ್ಪಿಗೆ ಸಿಕ್ಕ ಮರುಕ್ಷಣವೇ ಈ ಚರ್ಚಾಕೂಟದ ಎಲ್ಲ ವಿವರಗಳನ್ನೂ ಪ್ರಚುರಪಡಿಸಿ ತಿಳಿಸುವುದಾಗಿ ಹೇಳಿದ್ದರು. ಹಾಗೆ ವೈಯಕ್ತಿಕವಾಗಿ ಬಂದ ಫೋನ್ ಕರೆಯಿಂದಾಗಿ ಆ ಆಹ್ವಾನವನ್ನು ತಿರಸ್ಕರಿಸಲಾಗದೆ, ಒಂದು ರೀತಿಯಲ್ಲಿ ಒತ್ತಾಯಕ್ಕೆ ಮಣಿದೇ ನ್ಯೂಯಾರ್ಕ್‍ಗೆ ತೆರಳಲು ತೀರ್ಮಾನಿಸಿದ್ದರು.
ಆದರೆ ಆ ಚರ್ಚಾಕೂಟದಲ್ಲಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯ ಬಗೆಗಿನ ಅಸ್ಪಷ್ಟತೆಯೂ ಅವರನ್ನು ಚಿಂತೆಯಾಗಿ ಕಾಡಿತ್ತು: ಪ್ರಯಾಣಕ್ಕೆ ತಯಾರಿ ನಡೆಸು ತ್ತಿದ್ದಂತೆಯೇ ಕ್ಲಾರ್ಕ್‍ರನ್ನು ಚರ್ಚಾಕೂಟದ ವಿಷಯದ ಬಗ್ಗೆ, ಅಲ್ಲಿ ತಮ್ಮ ಕರ್ತವ್ಯದ ಬಗ್ಗೆ ತಿಳಿಹೇಳಲು ಕೋರಿದ್ದರು. ಅದಕ್ಕೆ ಬಂದ ಉತ್ತರವಂತೂ ಇನ್ನೂ ವಿಚಿತ್ರ ವಾಗಿತ್ತು.
ಕೇವಲ ನಾಲ್ಕು ವಿಜ್ಞಾನಿಗಳು, ನಾಲ್ಕು ಧಾರ್ಮಿಕ ಮುಖಂಡರು ಹಾಗೂ ನಾಲ್ಕು ಆಧ್ಯಾತ್ಮಿಕತೆಯ ಧುರೀಣರು ಭಾಗವಹಿಸುತ್ತಿರುವ ಈ ಚರ್ಚೆಯು ವ್ಯಕ್ತಿ ಮತ್ತು ವ್ಯಕ್ತಿತ್ವ’ ಎಂಬ ವಿಷಯದ ಸುತ್ತ ನಡೆಸಲು ಯೋಚಿಸಿರುವುದಾಗಿಯೂ, ಅದನ್ನು ಕೆಲವೇ ಸೀಮಿತ ಪರಿಣಿತರ ನಡುವೆ, ಕ್ಲೋಸ್ಡ್ ರೂಮ್’ ಚರ್ಚೆಯಾಗಿಯೇ ನಡೆಸುತ್ತಿರುವ ಕಾರಣ ಎಲ್ಲರೂ ಮುಕ್ತವಾಗಿ ಆ ವಿಷಯಗಳ ಬಗ್ಗೆ ಮಾತನಾಡಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಚರ್ಚಿಸಲು ಅವಕಾಶ ಇದೆ ಎಂದೂ, ಭಾರತದಲ್ಲಿ ಧಾರ್ಮಿಕತೆ ಮತ್ತು ಅಧ್ಯಾತ್ಮ ಚಿಂತನೆಗಳು ಅತೀ ಸುಂದರವಾಗಿ ಮಿಳಿತ ಗೊಂಡಿರುವ ಕಾರಣ ಶಂಕರದೇವ ಅವರನ್ನು ಆ ಎರಡೂ ವಿಭಾಗಗಳ ಪ್ರತಿನಿಧಿಯಾಗಿ ಆಹ್ವಾನಿಸಲಾಗುತ್ತಿದೆ ಎಂದಷ್ಟೆ ತಿಳಿಸಲಾಗಿತ್ತು.
`ವ್ಯಕ್ತಿ ಮತ್ತು ವ್ಯಕ್ತಿತ್ವ’ದ ಬಗ್ಗೆ ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಭಿಪ್ರಾಯಗಳ ಬಗ್ಗೆ ಮಾತನಾಡಬೇಕಾದರೆ ಅದಕ್ಕೆ ಮಿತಿಯೇ ಇಲ್ಲದಾಗುತ್ತದೆ ಎಂದು ಅರಿತಿದ್ದ ಶಂಕರದೇವ, ಚರ್ಚೆಯಲ್ಲಿ ಯಾವ ವಿಶೇಷ ದೃಷ್ಟಿಕೋನವನ್ನು ಮಂಡಿಸಬೇಕು ಎನ್ನು ವುದರ ಬಗ್ಗೆ ಚಿಂತೆಗೀಡಾಗಿದ್ದರು. ಆ ಬಗ್ಗೆ ಪೂರ್ಣ ಸ್ಪಷ್ಟತೆ ಇಲ್ಲದೆಯೇ ಈ ಪ್ರಯಾಣ ಕೈಗೊಂಡಿರುವುದು ಅವರಿಗೆ ಆತಂಕವನ್ನೂ ಬೇಸರವನ್ನೂ ತಂದಿದ್ದವು. ಆದರೂ ಸಂದರ್ಭ ಮತ್ತು ಅವಕಾಶ ಒದಗಿಬಂದಂತೆ, ತಾವು ಸ್ವತಂತ್ರವಾಗಿ ವಿಷಯದ ಬಗ್ಗೆ ಭಾರತೀಯ ಮೀಮಾಂಸೆಗಳನ್ನು ಮಂಡಿಸಲು ತಮ್ಮಲ್ಲಿಯೇ ಯೋಚಿಸುತ್ತ ನಿದ್ದೆಗೆ ಜಾರಿದರು.
ಕೃತಿ: ಹೊಕ್ಕಳ ಮೆದುಳು (ಕಥಾಂಬರಿ)
ಲೇಖಕ: ಕೆ.ಎನ್. ಗಣೇಶಯ್ಯ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 150 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಸರಿಗನ್ನಡಂ ಗೆಲ್ಗೆ: ಸೊಗಸಿನ ಕನ್ನಡದ ಪರಿ, ಕುರಿತೋದಿದರೆ ಸರಿ!