ಅದೊಂದು ಹೊಲ; ನೀರಾವರಿ ಜಮೀನಲ್ಲ. ಖುಷ್ಕಿ ಬೇಸಾಯದ ಹೊಲ. ಅದರ ಬೇಲಿಯಲ್ಲಿ ಕತ್ತಾಳೆ ಗಿಡಗಳೇ ಜಾಸ್ತಿ; ಜೊತೆಗೆ ಮುಳ್ಳಿನ ಗಿಡಗಳು. ಹೊಲದೊಳಗೆ ಮೂರ್ನಾಲ್ಕು ಜಾಲಿಯ ಮರಗಳು; ಒಂದು ಬೇವಿನ ಮರ. ತೊಗರಿ, ಕಡ್ಲೇಕಾಯಿ ಗಿಡಗಳು ತುಂಬಿದ ಹೊಲದ ಒಂದು ಮರದ ಕೆಳಗೆ – ಬೇವಿನಮರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ – ಮಗುವೊಂದು ಅಳುತ್ತಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಎದ್ದು ಬಂದು ಮಗುವನ್ನು ಸಂತೈಸಿ ಮತ್ತೆ ಕೆಲಸದಲ್ಲಿ ತೊಡಗುತ್ತಾರೆ.
ಆ ಬೇವಿನ ಮರದ ಕೆಳಗೆ ಅಳುತ್ತಿದ್ದ ಮಗು ಬೇರಾರೂ ಅಲ್ಲ; ನಾನೇ. ಆ ತಾಯಿ ನನ್ನಮ್ಮ ಕೆಂಚಮ್ಮ. ನನ್ನಮ್ಮನೇ ಈ ವಿಷಯವನ್ನು ನಾನು ಬೆಳೆದ ಮೇಲೆ ಹೇಳಿದ್ದುಂಟು. ಬೇವಿನ ಮರದ ಕೆಳಗೆ ಅಳುತ್ತಿದ್ದ ಮಗುವಿಗೆ ಮುಂದೆಯೂ ಅಳು ಅಂಟಿಕೊಂಡು ಬಂದಿತ್ತು. ನನ್ನ ಕೆಲವು ಗೆಳೆಯರು ನನ್ನನ್ನು ಕಿಚಾಯಿಸಿ ಅಳಿಸುತ್ತಿದ್ದರು. ‘ಈಗ ಅಳ್ತೀಯ ನೋಡು ಅಳ್ತೀಯ’ ಎಂದು ಛೇಡಿಸಿ ಕಣ್ಣಲ್ಲಿ ನೀರು ಬರುವವರೆಗೂ ಬಿಡುತ್ತಿರಲಿಲ್ಲ. ಆದರೆ ಆನಂತರ ಅಳುವನ್ನು ಗೆಲ್ಲುವ ಗುರಿಯನ್ನು ಬದುಕು ಕಲಿಸಿತ್ತು. ಚಿಕ್ಕಂದಿನಲ್ಲೇ ಎದಿರೇಟು ನೀಡಿ ಎದೆಯುಬ್ಬಿಸಿ ನಿಲ್ಲುವ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ. ಇಂಥದೊಂದು ಆತ್ಮವಿಶ್ವಾಸವನ್ನು ಬೆಳೆಸಿದವರಲ್ಲಿ ನನ್ನ ಮಾಧ್ಯಮಿಕ ಶಾಲೆಯ (ಈಗಿನ ಹಿರಿಯ ಪ್ರಾಥಮಿಕ ಶಾಲೆ) ಗುರುಗಳಾಗಿದ್ದ ಶ್ರೀ ಟಿ.ವೈ. ನಾಗಭೂಷಣರಾವ್ ಅವರ ಪಾತ್ರ ದೊಡ್ಡದು. ಜೊತೆಗೆ ನನ್ನ ಸಂಕಲ್ಪ ಸಿದ್ಧ ಶಿಕ್ಷಣದ ಬದ್ಧತೆಯೂ ಪ್ರೇರಣೆ ನೀಡಿತ್ತು. ನಾನು ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲಿಷ್ಠವಲ್ಲದ ಕುಟುಂಬದ ಕೂಸು. ಚೆನ್ನಾಗಿ ಓದುವ ಮೂಲಕವೇ ನಾನು ಗುರುತಿಸಿಕೊಳ್ಳಬೇಕಿತ್ತು. ಚೆನ್ನಾಗಿ ಓದುತ್ತ ತರಗತಿಗೇ ಮೊದಲನೆಯವನಾದಾಗ ಮೂಡಿದ ಹೆಮ್ಮೆ ಮತ್ತು ಆತ್ಮವಿಶ್ವಾಸ ಒಂದು ಕಡೆಯಾದರೆ, ಗುರುಗಳು ನನ್ನ ಶೈಕ್ಷಣಿಕ ಬದ್ಧತೆಯನ್ನು ಗುರುತಿಸಿ, ಮುಂದಡಿ ಯಿಡಲು ನೀಡಿದ ಪೆÇ್ರೀತ್ಸಾಹ, ತುಂಬಿದ ಧೈರ್ಯ ಇನ್ನೊಂದು ಕಡೆ. ಗುರುಗಳು ಹೇಳಿದರು: ‘‘ನೀನು ತರಗತಿಗೇ ಫಸ್ಟ್. ಇನ್ನು ಯಾರೂ ನಿನ್ನನ್ನು ಕಿಚಾಯಿಸೊಲ್ಲ. ನಿನ್ನನ್ನೇ ಕ್ಲಾಸ್ ಮಾನಿಟರ್ ಮಾಡ್ತೇನೆ’’. ಹೌದು, ಅದರಂತೆ ನಾನು ಕ್ಲಾಸ್ ಮಾನಿಟರ್ ಆದೆ.
ಮಾನಿಟರ್ ಎಂದರೆ ಗುರುಗಳ ಗೈರು ಹಾಜರಿಯಲ್ಲಿ ತರಗತಿಯನ್ನು ನಿಯಂತ್ರಿಸ ಬೇಕು. ಯಾರಾದರೂ ಗಲಾಟೆ ಮಾಡುತ್ತಿದ್ದರೆ ಹೆಸರು ಬರೆದು ಗುರುಗಳಿಗೆ ಕೊಡಬೇಕು. ನಾನಂತೂ ಈ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತ ಬಂದೆ. ಒಂದೆರಡು ತಕರಾರನ್ನು ಎದುರಿಸಿದೆ. ಊರಿನ ಒಂದಿಬ್ಬರು ಶ್ರೀಮಂತರ ಮನೆಯವರು ಅವರ ಮಕ್ಕಳ ಹೆಸರು ಬರೆದು ಗುರುಗಳಿಗೆ ಕೊಟ್ಟಿದ್ದಕ್ಕೆ ಆಕ್ಷೇಪಿಸಿದರು. ಆಕ್ಷೇಪದಲ್ಲಿ ಎಚ್ಚರಿಕೆಯ ಧಾಟಿಯೂ ಇತ್ತು. ಆದರೆ ‘ಅದು ನನ್ನ ಡ್ಯೂಟಿ’ ಎಂದು ಧೈರ್ಯವಾಗಿ ಉತ್ತರಿಸಿದ್ದೆ. ನಮ್ಮಮ್ಮನಿಗೆ ಇದು ಗೊತ್ತಾಗಿ ‘‘ಅಂತೋರ್ ವಿರೋಧ ಕಟ್ಕೋಬಾರ್ದು’’ ಎಂದು ಕಿವಿಮಾತು ಹೇಳಿದ್ದುಂಟು. ನಾನು ಮಾತ್ರ ತರಗತಿಯಲ್ಲಿ ನನ್ನ ‘ಡ್ಯೂಟಿ’ ನಿರ್ವಹಿಸುತ್ತ ಬಂದೆ. ಹಾಗೆಂದು ಯಾರಿಗೂ ವೃಥಾ ತೊಂದರೆ ಆಗೋ ಹಾಗೆ ನಡೆದುಕೊಳ್ಳಲಿಲ್ಲ. ಆ ವೇಳೆಗಾಗಲೇ ಗಾಂಧೀಜಿ ಪಾಠದಿಂದ ‘ಸುಳ್ಳು ಹೇಳಬಾರದು’ ಎಂಬುದನ್ನು ರೂಢಿಸಿ ಕೊಂಡಿದ್ದೆ. ತರಗತಿಯ ಸಹಪಾಠಿಗಳ ಸ್ನೇಹವನ್ನು ಕೆಡಿಸಿಕೊಳ್ಳದೆ ‘ಮಾನಿಟರ್’ ಆಗಿದ್ದೆ. ‘‘ನಾನು ಮಾನಿಟರ್’’ ಅನ್ನೋ ಅಹಮ್ಮು ಬರದಂತೆ ನೋಡಿಕೊಂಡಿದ್ದೆ.
ನಮ್ಮ ಬರಗೂರಿನ ಮಾಧ್ಯಮಿಕ ಶಾಲೆಯಲ್ಲಿ ಗುರುಗಳು ಪ್ರತಿ ಶನಿವಾರ ಚರ್ಚಾಕೂಟ, ಭಾಷಣ ಏರ್ಪಡಿಸುತ್ತಿದ್ದರು. ನನಗೋ ಎದ್ದು ನಿಂತು ಮಾತಾಡಲು ಭಯ, ಕಾಲುಗಳು ಗಡಗಡ ನಡುಗುತ್ತಿದ್ದವು. ಅಧ್ಯಾಪಕರ ಒತ್ತಾಯಕ್ಕೆ ಮಣಿದು ಒಂದೆರಡು ಬಾರಿ ಮಾತಾಡಲು ಹೋಗಿ ಅರ್ಧಕ್ಕೇ ನಿಲ್ಲಿಸಿದ್ದೆ. ತರಗತಿಯ ಮಾನಿಟರ್‍ಗೆ ಮಾತು ಹೊರಡದಿದ್ದರೆ ಹೇಗೆ? ಅವಮಾನ ಎನ್ನಿಸಿತು. ಗುರುಗಳಾದ ಟಿ.ವೈ. ನಾಗ ಭೂಷಣರಾವ್ ಅವರು ಪ್ರತ್ಯೇಕ ಕರೆದು ಧೈರ್ಯ ತುಂಬಿದರು. ಮುಂದೊಮ್ಮೆ ಮಾತಾಡುವಾಗ ಮೊದಲೇ ತಾಲೀಮು ಮಾಡಿಕೊಂಡು ಕಣ್ಣುಮುಚ್ಚಿ ಭಾಷಣ ಮಾಡಿದೆ. ಬರಬರುತ್ತ ಮೂರ್ನಾಲ್ಕು ನಿಮಿಷ ಧೈರ್ಯವಾಗಿ ಭಾಷಣ ಮಾಡುತ್ತ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸತೊಡಗಿದೆ.
ಒಮ್ಮೆ ನಮ್ಮ ಮನೆಯಲ್ಲಿ ಹಳೇ ಪೆಟ್ಟಿಗೆಯೊಂದರಲ್ಲಿ ಒಂದು ದೊಡ್ಡ ಪುಸ್ತಕ ಸಿಕ್ಕಿತು. ಅದು ‘ಜೈಮಿನಿ ಭಾರತ’. ಬಹುಶಃ ನನ್ನ ಅಪ್ಪ ತಂದಿಟ್ಟಿರಬೇಕು. ನನ್ನ ಅಪ್ಪ ರಂಗದಾಸಪ್ಪ 8ನೆಯ ತರಗತಿಯವರೆಗೆ ಓದಿದ್ದರು. 8ನೆಯ ತರಗತಿಯನ್ನು ಪೂರೈಸಿದರೆ ‘ಲೋಯರ್ ಸೆಕೆಂಡರಿ ಪಾಸ್’ ಎಂಬ ಹೆಗ್ಗಳಿಕೆ ಇತ್ತು. ಆಗ ಅದು ಪಬ್ಲಿಕ್ ಪರೀಕ್ಷೆಯಂತೆ. ನನ್ನ ಅಪ್ಪನ ಅಣ್ಣಂದಿರು ಅನಕ್ಷರಸ್ಥರು. ಕಿರಿಯ ತಮ್ಮನನ್ನು ಅಕ್ಕರೆಯಿಂದ ಓದಿಸಿದ್ದರು. ನನ್ನ ಅಪ್ಪ ಆನಂತರ ‘ಕೂಲಿ ಮಠದ ಮೇಷ್ಟ್ರು’ ಆಗಿದ್ದರಂತೆ. ‘ಕೂಲಿಮಠ’ ಎಂದರೆ ಕ್ರಮಬದ್ಧ ಶಿಕ್ಷಣದ ಶಾಲೆಯಲ್ಲ. ನಮ್ಮಲ್ಲಿ ಶಾಲೆಯನ್ನೂ ‘ಇಸ್ಕೂಲ್ ಮಠ’ ಎನ್ನುತ್ತಿದ್ದರು. ಆದರೆ ‘ಕೂಲಿ ಮಠ’ ಅನ್ನೋದು ಸರ್ಕಾರದ ಮನ್ನಣೆಯಿಲ್ಲದ ಖಾಸಗಿ ಕಲಿಕೆ. ಕಲಿಯಲು ಆಸಕ್ತಿ ಇದ್ದವರಿಗೆ ಅಕ್ಷರಾಭ್ಯಾಸ ಮಾಡಿಸುವುದು; ಕೆಲವು ಕನ್ನಡ ಪದಗಳನ್ನು ಕಲಿಸುವುದು; ಇತ್ಯಾದಿ. ಮರಳು ಗುಡ್ಡೆ ಮೇಲೆ ಅಕ್ಷರ ಬರೆದು ಹೇಳಿಕೊಡುತ್ತಿದ್ದುದೂ ಉಂಟಂತೆ. ಹೀಗೆ ಕಲಿಸಿದವರಿಗೆ ಮಕ್ಕಳ ಪೆÇೀಷಕರು ಒಂದಷ್ಟು ಹಣ ಕೊಡುತ್ತಿದ್ದರು. ಈ ಹಣವೇ ಕಲಿಸಿದ ಮೇಷ್ಟ್ರಿಗೆ ‘ಕೂಲಿ’. ಕಲಿಸುವ ತಾಣವೇ ಕೂಲಿಮಠ! ಕಲಿಸಿದವರು ಕೂಲಿಮಠದ ಮೇಷ್ಟ್ರು!
ಹೀಗೆ ಕೂಲಿಮಠದ ಮೇಷ್ಟ್ರಾಗಿದ್ದ ನನ್ನಪ್ಪನನ್ನು ಮುಂದೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಧ್ಯಾಪಕನಾಗಿ ನೇಮಿಸಿಕೊಂಡರು. ಸರ್ಕಾರಿ ಸಂಬಳ ಬರಲಾರಂಭಿಸಿತು. ಹೇಗಿದ್ದರೂ ಸಂಬಳ ಬರುತ್ತೆ ಅಂತ ಅಪ್ಪನ ಅಣ್ಣಂದಿರು ಭಾಗವಾಗುವಾಗ-ಅಂದರೆ- ಪ್ರತ್ಯೇಕವಾಗುವಾಗ, ನೀರಾವರಿ ಜಮೀನನ್ನು ಅವರು ಇಟ್ಟುಕೊಂಡು ಖುಷ್ಕಿ ಜಮೀನನ್ನು (ನೀರಿನ ಆಸರೆಯಿಲ್ಲದ ಹೊಲ) ಅಪ್ಪನಿಗೆ ಕೊಟ್ಟರೆಂದು ಮನೆಯಲ್ಲಿ ಮಾತಾಡಿ ಕೊಂಡದ್ದನ್ನು ಕೇಳಿಸಿಕೊಂಡಿದ್ದೆ. ಇದಕ್ಕೆ ಅಪ್ಪನ ಸಂಪೂರ್ಣ ಸಮ್ಮತಿ ಇತ್ತಂತೆ. ಮುಂದೊಂದು ದಿನ ನಾವೆಲ್ಲ ದೊಡ್ಡವರಾದಾಗ ನಮ್ಮಪ್ಪ ಜಮೀನು, ಮನೆ, ಸಾಲ- ಎಲ್ಲಾ ಭಾಗ ಮಾಡಿದರು. ನನಗೆ ಬಂದ ಆರು ಎಕರೆ ಜಮೀನನ್ನು ಹಿರಿಯ ಅಣ್ಣನಿಗೆ ಬರೆದುಕೊಟ್ಟುಬಿಟ್ಟೆ! ನಾನು ಹೇಗಿದ್ದರೂ ತಿಂಗಳ ಸಂಬಳ ಪಡೀತಿದ್ದೇನೆ. ಅಣ್ಣನಿಗೆ ಮಕ್ಕಳು ಜಾಸ್ತಿ. ಅವರಿಗೇ ಇರಲಿ ಎಂಬ ಭಾವನೆ ನನ್ನದಾಗಿತ್ತು. ನನ್ನ ಇಬ್ಬರು ಅಣ್ಣಂದಿರೂ ಪ್ರಾಥಮಿಕ ಶಾಲೆ ಅಧ್ಯಾಪಕರು. ಹಿರಿಯಣ್ಣನ ಹೆಸರು-ಚಿಕ್ಕರಂಗಪ್ಪ, ಎರಡನೇ ಅಣ್ಣನ ಹೆಸರು- ಜಯರಾಮಯ್ಯ. ಜಯರಾಮಯ್ಯನವರು ಈಗ ನನ್ನ ಹೆಸರಿನ ಪ್ರತಿಷ್ಠಾನಕ್ಕೆ ಕಲಾಭವನ ಕಟ್ಟಿಸಲು ತಮ್ಮ ಜಮೀನಿನಲ್ಲೇ ಅಗತ್ಯವಾದಷ್ಟು ಜಾಗವನ್ನು ಉಚಿತವಾಗಿ ಕೊಟ್ಟಿದ್ದಾರೆ. ಅವರ ದೊಡ್ಡ ಮನಸ್ಸಿಗೆ ಇದೋ ನಮಸ್ಕರಿಸುವೆ. ಹಿರಿಯಣ್ಣ ಈಗಿಲ್ಲ. ಅವರ ಮಕ್ಕಳು ನನ್ನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವು ದನ್ನೂ ಇಲ್ಲಿಯೇ ನೆನೆಯುವೆ. ಹಾಗೆಯೇ ನನ್ನ ಹೆಸರಿನ ಪ್ರತಿಷ್ಠಾನದ ಗೆಳೆಯರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುವೆ.
ಇಲ್ಲಿಯೇ ಇನ್ನೊಂದು ವಿಷಯ ಹೇಳಬೇಕು. ಶಾಲೆಗೆ ಸೇರುವುದಕ್ಕೆ ಮುಂಚೆ ಮಕ್ಕಳಿಗೆ ಅಕ್ಷರಗಳು, ಪದಗಳು ಗೊತ್ತಿದ್ದು ಓದಲು ಸಾಧ್ಯವಾಗಿದ್ದರೆ ‘ಡಬಲ್ ಪ್ರಮೋಷನ್’ ಎಂಬ ಹೆಸರಿನಲ್ಲಿ ಏಕ್‍ದಂ ಎರಡನೇ ತರಗತಿಗೋ ಮೂರನೇ ತರಗತಿಗೋ ಸೇರಿಸಿ ಕೊಳ್ಳುತ್ತಿದ್ದರು. ನನ್ನನ್ನು ‘ಡಬಲ್ ಪ್ರಮೋಷನ್’ ಅನ್ವಯ ಆರಂಭದಲ್ಲೇ ಮೂರನೇ ತರಗತಿಗೆ ಸೇರಿಸಿಕೊಂಡಿದ್ದರಂತೆ. ಅದಕ್ಕನುಗುಣವಾಗಿ ಜನ್ಮ ದಿನವನ್ನೂ ಕೊಟ್ಟಿದ್ದರಂತೆ!
ಇರಲಿ, ಈಗ ‘ಜೈಮಿನಿ ಭಾರತ’ದ ವಿಷಯಕ್ಕೆ ಬರುತ್ತೇನೆ. ಆ ದೊಡ್ಡ ಪುಸ್ತಕವನ್ನು ಮುಟ್ಟಿಯೇ ನನಗೆ ರೋಮಾಂಚನವಾಯಿತು. ಅದು ಕಾವ್ಯ. ಕಷ್ಟಪಟ್ಟರೂ ಒಂದು ಪುಟ ಓದಲು ಅದೆಷ್ಟೋ ಸಮಯ ಹಿಡಿಸುವ ಪದ್ಯಗಳು. ಅಷ್ಟಿಷ್ಟು ಓದಿದರೂ ಅರ್ಥ ವಾಗದ ಸ್ಥಿತಿ. ಅರ್ಥವಾಗದಿದ್ದರೇನಂತೆ, ಸಿಕ್ಕಿದ ಕೃತಿಯನ್ನು ವ್ಯರ್ಥ ಮಾಡಬಾರದು! ಕೈಗೆತ್ತಿಕೊಂಡೆ. ಮಾನಿಟರ್ ಆಗಿ ತಮ್ಮ ಮಕ್ಕಳನ್ನು ಗಲಾಟೆ ಮಾಡುವವರೆಂದು ಬೋರ್ಡ್ ಮೇಲೆ ಹೆಸರನ್ನು ಬರೆದದ್ದು ಯಾಕೆ ಎಂದು ಗದರಿಸಿದ್ದವರನ್ನು ಜ್ಞಾಪಿಸಿ ಕೊಂಡೆ. ಜೈಮಿನಿ ಭಾರತದ ಬೃಹತ್ ಕೃತಿಯನ್ನು ಭದ್ರವಾಗಿ ಹಿಡಿದುಕೊಂಡೆ. ಹಾಗೆ ಗದರಿಸಿದ ಶ್ರೀಮಂತರ ಮನೆಯ ಮುಂದೆ ಅತ್ತಿತ್ತ ಓಡಾಡಿದೆ. ಅವರು ನನ್ನನ್ನೂ, ನಾನು ಕಂಕುಳಲ್ಲಿಟ್ಟುಕೊಂಡಿದ್ದ ಬೃಹತ್ ಕೃತಿಯನ್ನೂ ನೋಡುವವರೆಗೂ ಓಡಾಡಿದೆ. ಒಬ್ಬರ ಮನೆಯಾದ ಮೇಲೆ ಇನ್ನೊಬ್ಬರ ಮನೆ. ಕಡೆಗೆ ಅವರು ‘ಯಾವ್ದೊ ಚಂದ್ರ ಆ ಪುಸ್ತಕ?’ ಎಂದು ಕೇಳುವವರೆಗೂ ಕದಲಲಿಲ್ಲ (ನನ್ನನ್ನು ನಮ್ಮ ಮನೆಯಲ್ಲಿ ‘ಚಂದ್ರಣ್ಣ’ ಎನ್ನುತ್ತಿದ್ದರು. ಊರಿನ ಬಹುಪಾಲು ಜನರ ಬಾಯಲ್ಲಿ ನಾನು ಪ್ರೀತಿಯ ಚಂದ್ರಣ್ಣನೇ ಆಗಿದ್ದೆ). ಇವರು ‘ಚಂದ್ರ’ ಎಂದರೆಂದು ಬೇಸರವನ್ನೇನೂ ಪಡದೆ ಈ ಬೃಹತ್ ಕೃತಿ ಬಗ್ಗೆ ಪುಟ್ಟ ಭಾಷಣ ಬಿಗಿದೆ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ
ಏನೋ ಓದಿಯೇ ಬಿಟ್ಟಿದ್ದೇನೇನೊ ಎಂಬಂತೆ ಮಾತಾಡಿದ ನನ್ನ ವೈಖರಿಗೆ ಅವರು ‘ಹೌದೇನಪ್ಪ ಚಂದ್ರಣ್ಣ. ನೀನ್ ಬಿಡು ಬಲೇ ಬುದ್ಧಿವಂತ’ ಎಂದರು. ನಾನು ಮುಖವರಳಿಸಿ ಅದೇ ಹೆಮ್ಮೆಯಲ್ಲಿ ಊರಿನ ಸಂದಿಗೊಂದಿಗಳಲ್ಲೆಲ್ಲ ಓಡಾಡಿ ಸಿಕ್ಕಿದವರಿಗೆಲ್ಲ ಈ ಕೃತಿಯ ಬಗ್ಗೆ ಹೇಳಿದ್ದೆ! ನನಗೆ ಸರಿಯಾಗಿ ಗೊತ್ತಿದ್ದದ್ದು ಕೃತಿ ಮತ್ತು ಕವಿಯ ಹೆಸರು ಲಕ್ಷ್ಮೀಶ ಎಂಬುದು ಮಾತ್ರ. ಅದಷ್ಟನ್ನೇ ಇಟ್ಟುಕೊಂಡು ಹಳೆಯ ಕೃತಿಗಳ ಮಹತ್ವ ಹೇಳಿ ಅವರಲ್ಲೆಲ್ಲ ಬೆರಗು ಮೂಡಿಸಿದ್ದೆ. ನಾನು ‘ಬಲು ಬುದ್ಧಿವಂತ’ ಎಂಬ ಪ್ರಶಂಸೆಗೆ ಪಾತ್ರವಾಗಿದ್ದೆ! ಅಂದಿನಿಂದ ಯಾರೊಬ್ಬರೂ ನನ್ನ ‘ಮಾನಿಟರ್‌ಗಿರಿ’ ಬಗ್ಗೆ ಆಕ್ಷೇಪದ ಮಾತು ಆಡಲಿಲ್ಲ! ಏನಾದರೂ ತಮ್ಮ ಮಕ್ಕಳಿಗೆ ಅರ್ಥವಾಗದಿದ್ದರೆ ‘ಚಂದ್ರಣ್ಣನ್ ಕೇಳ್ರಿ’ ಎನ್ನುವಷ್ಟರ ಮಟ್ಟಿಗೆ ‘ಖ್ಯಾತಿ’ ಪಡೆದುಬಿಟ್ಟಿದ್ದೆ. ಇದಕ್ಕೆ ಲಕ್ಷ್ಮೀಶ ಕವಿಯ ಕಾವ್ಯವೂ ಸೇರಿದಂತೆ ನಾನು ಅಂಕ ಗಳಿಕೆಯಲ್ಲಿ ಮೊದಲನೇ ಸ್ಥಾನದಲ್ಲೇ ಸದಾ ಇದ್ದದ್ದೂ ಕಾರಣವಾಗಿತ್ತೆಂದು ಕಾಣುತ್ತದೆ.
ಕೃತಿ: ಕಾಗೆ ಕಾರುಣ್ಯದ ಕಣ್ಣು
ಲೇಖಕ: ಬರಗೂರು ರಾಮಚಂದ್ರಪ್ಪ (ಆಯ್ದ ಅನುಭವಗಳ ಕಥನ)
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 395 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ