| ಡಾ. ಡಿ. ವಿ. ಗುರುಪ್ರಸಾದ್ (ನಿವೃತ್ತ ಡಿಜಿಪಿ)
ಫೆಬ್ರವರಿ 6ರಂದು ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯ ಎಂಬಲ್ಲಿ ಪೊಲೀಸ್ ಎನ್‌ಕೌಂಟರ್ ನಡೆದು ಇಬ್ಬರು ನಕ್ಸಲರು ಹತ್ಯೆಗೀಡಾದರೆಂದೂ ಅವರಲ್ಲಿ ಒಬ್ಬ ಕರ್ನಾಟಕ ರಾಜ್ಯದ ನಕ್ಸಲ್ ಸಂಘಟನೆಯ ಮುಖ್ಯಸ್ಥ ಸಾಕೇತ್ ರಾಜನ್ ಎಂದು ಚಿಕ್ಕಮಗಳೂರಿನ ಎಸ್.ಪಿ ಬಿ.ಕೆ.ಸಿಂಗ್ ನನಗೆ ದೂರವಾಣಿ ಮೂಲಕ ತಿಳಿಸಿದಾಗ, ಕೂಡಲೇ ಈ ವಿಷಯವನ್ನು ನಾನು ಮುಖ್ಯಮಂತ್ರಿಗೆ ತಿಳಿಸಿದೆ.
ನಮ್ಮ ರಾಜ್ಯದಲ್ಲಿ 1970ರಿಂದಲೇ ನಕ್ಸಲ್ ಚಟುವಟಿಕೆಗಳು ಗರಿಗೆದರತೊಡಗಿದ್ದ ಬಗ್ಗೆ ಈಗಾಗಲೇ ಹಿಂದಿನ ಅಧ್ಯಾಯದಲ್ಲಿ ಪ್ರಸ್ತಾಪಿಸಿದ್ದೇನೆ. ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಬಂದ ನಕ್ಸಲರು ಗುಲ್ಬರ್ಗಾ, ರಾಯಚೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೊದಲಿಗೆ ಕಾಣತೊಡಗಿದರು. 19ನೇ ಜೂನ್ 1999ರಂದು ರಾಯಚೂರು ನಗರದ ಅಕ್ಕೂರ ಸಿದ್ಧನಗೌಡ ಎಂಬ ಶ್ರೀಮಂತನನ್ನು ರಮೇಶ್ ಎನ್ನುವವನ ಮುಂದಾಳತ್ವದ ಆರು ಜನರ ನಕ್ಸಲರ ಗುಂಪು ಹಾಡಹಗಲೇ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿ ರಮೇಶ್‌ನ ಪತ್ನಿ ಪಾರ್ವತಿ 2003ರ ನವೆಂಬರ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಳು. ಈ ಎರಡೂ ಘಟನೆಗಳಿಂದ ನಕ್ಸಲ್ ಸಂಘಟನೆ ರಾಜ್ಯದ ಈಶಾನ್ಯ ಜಿಲ್ಲೆಗಳಿಂದ ಮಲೆನಾಡು ಪ್ರದೇಶಕ್ಕೆ ಕಾಲಿಟ್ಟಿದ್ದು ವಿದಿತವಾಗಿತ್ತು.
2000ರ ಆದಿಯ ವೇಳೆಗೆ ಕುಂಟುತ್ತಾ ಸಾಗುತ್ತಿದ್ದ ನಕ್ಸಲ್ ಚಳುವಳಿಗೆ ಹೊಸ ಆಯಾಮವನ್ನು ಕೊಟ್ಟವನೇ ಸಾಕೇತ್ ರಾಜನ್. ಮೈಸೂರಿನ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ರಾಜನ್ ದೆಹಲಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ, 1985ರ ಸುಮಾರಿಗೆ ಸಂಪೂರ್ಣವಾಗಿ ನಕ್ಸಲೀಯ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಈತ
ಚರಿತ್ರೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಕರ್ನಾಟಕದಲ್ಲಿ ನಕ್ಸಲೀಯರು ಆಂಧ್ರ ಪ್ರದೇಶದ ಗಡಿಭಾಗವನ್ನು ಮರೆತು ಮಲೆನಾಡಿನ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಪ್ರತಿಪಾದಿಸಿದ. ಮಲೆನಾಡಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿದ್ವತ್ಪೂರ್ಣ ಗ್ರಂಥವೊಂದನ್ನು ಬರೆದ ಅವನ ಪ್ರಯತ್ನದ ಫಲವಾಗಿ ನಕ್ಸಲ್ ಚಟುವಟಿಕೆ ಮಲೆನಾಡಿನಲ್ಲಿ ಕೇಂದ್ರೀಕೃತವಾಯಿತು.
ಮಿತಭಾಷಿ ಹಾಗೂ ನಾಚಿಕೆ ಸ್ವಭಾವದವನಾಗಿದ್ದ ಸಾಕೇತ್ ರಾಜನ್ ಬಂದೂಕು ಹಿಡಿಯುವ ತಂಡದ ನಾಯಕ ಹೇಗೆ ಆದ ಎನ್ನುವುದೇ ಅವನ ಸ್ನೇಹಿತರಿಗೆ ಆಶ್ಚರ್ಯ ತರಿಸಿತ್ತು. ರಾಜ್ಯದ ಅನೇಕ ಪತ್ರಕರ್ತರು ಸಾಕೇತ್ ರಾಜನ್‌ರ ಮಿತ್ರರಾಗಿದ್ದರು. ಒಮ್ಮೆ ಸಾಕೇತ್ ರಾಜನ್ ಬೆಂಗಳೂರಿನ ಪತ್ರಕರ್ತರ ತಂಡವೊಂದನ್ನು ತಾನು ನಡೆಸುತ್ತಿದ್ದ ನಕ್ಸಲ್ ತರಬೇತಿ ಶಿಬಿರಕ್ಕೆ ಕರೆದೊಯ್ದ ಬಗ್ಗೆ ಗುಪ್ತಚರ ಇಲಾಖೆಗೆ ವರದಿ ಬಂದಿತ್ತು. ಸಾಕೇತ್ ರಾಜನ್ ಮಿತ್ರರಲ್ಲಿ ಗೌರಿ ಲಂಕೇಶ್ ಸಹ ಒಬ್ಬರಾಗಿದ್ದರು ಎನ್ನುವುದು ನಮಗೆ ತಿಳಿದಿತ್ತು. ನಕ್ಸಲ್ ಸಂಘಟನೆಯಲ್ಲಿ ರಾಜನ್‌ಗೆ ಪ್ರೇಮ್ ಎಂಬ ಅನ್ವರ್ಥನಾಮವಿತ್ತು.
ರಾಜ್ಯದ ನಕ್ಸಲರ ಹಿರಿಯ ನಾಯಕನ ಸಾವಿನಿಂದ ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ಹಿನ್ನಡೆಯನ್ನು ಕಾಣುತ್ತವೆ ಎಂದು ನಾನು ಊಹಿಸಿ ಅದೇ ರೀತಿಯಾಗಿ ವರದಿಯನ್ನು ನೀಡಿದೆ. ಫೆಬ್ರವರಿ 6ರ ಮಧ್ಯಾಹ್ನವೇ ಮುಖ್ಯಮಂತ್ರಿ ಧರ್ಮಸಿಂಗ್ ಸಮಾರಂಭವೊಂದಕ್ಕಾಗಿ ಮಂಗಳೂರಿಗೆ ಹೊರಟಿದ್ದರಿಂದ ನಾನೂ ಅವರ ಜೊತೆ ವಿಮಾನದಲ್ಲಿ ಮಂಗಳೂರಿಗೆ ಹೋದೆ. ಅಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಸತೀಶನನ್ನು ಭೇಟಿ ಮಾಡಿದೆ. ಸತೀಶನ ತೊಡೆಯಿಂದ ಎರಡು ಗುಂಡುಗಳನ್ನು ವೈದ್ಯರು ಹೊರತೆಗೆದಿದ್ದರು. ಎನ್‌ಕೌಂಟರ್ ಹೇಗೆ ನಡೆಯಿತು ಎಂದು ನಾನು ಅವನನ್ನು ವಿಚಾರಿಸಿದೆ.
“ಸರ್, ಮೆಣಸಿನಹಾಡ್ಯದಲ್ಲಿ ಶೇಷಪ್ಪ ಎನ್ನುವವನ ಮನೆಗೆ ನಕ್ಸಲರು ಬರುತ್ತಾರೆ ಎಂಬ ಸುದ್ದಿ ನಮಗೆ ಬಂದಿತು. ಹೀಗಾಗಿ ಡಿವೈ.ಎಸ್.ಪಿ ಶಿವಕುಮಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ನಕ್ಸಲರಿಗಾಗಿ ಹೊಂಚು ಹಾಕಿ ಕುಳಿತಿದ್ದೆವು. ನಾನು ನಮ್ಮ ಇನ್ಸ್ಪೆಕ್ಟರ್ ಶ್ರೀನಿಧಿ ಇವರ ಪಕ್ಕದಲ್ಲಿ ಕುಳಿತಿದ್ದೆ. ಇನ್ನೇನು ಬೆಳಕು ಹರಿಯಬೇಕು ಎನ್ನವಷ್ಟರಲ್ಲಿ ಎದುರಿನ ಗುಡ್ಡದಲ್ಲಿ ಕೆಲವರು ವ್ಯಕ್ತಿಗಳು ಶಸ್ತ್ರಗಳನ್ನು ಹಿಡಿದುಕೊಂಡು ಒಬ್ಬರ ಹಿಂದೆ ಒಬ್ಬರು ನಡೆದು ಹೋಗುತ್ತಿರುವುದು ಕಾಣಿಸಿತು. ನಾವು ಅವರಿಗೆ ನಿಲ್ಲಲು ಹೇಳಿದೆವು. ಉತ್ತರವಾಗಿ ಅವರು ನಮ್ಮ ಮೇಲೆ ಗುಂಡು ಹಾರಿಸಿದರು. ನನಗೆ ಗುಂಡೇಟು ಬಡಿದು ಪ್ರಜ್ಞೆ ತಪ್ಪಿತು. ಮುಂದೇನಾಯಿತು ಎನ್ನುವುದು ನನಗೆ ಗೊತ್ತಿಲ್ಲ” ಎಂದ. ಅವನಿಗೆ ಶೀಘ್ರ ಗುಣಮುಖವಾಗಲೆಂದು ಹಾರೈಸಿ ಆ ರಾತ್ರಿ ಕುದುರೆಮುಖಕ್ಕೆ ಹೋಗಿ ವಾಸ್ತವ್ಯ ಮಾಡಿದೆ.
ಮಾರನೆಯ ಬೆಳಿಗ್ಗೆಯೇ ಎನ್‌ಕೌಂಟರ್ ನಡೆದ ಜಾಗಕ್ಕೆ ಹೋಗಿ ಅಲ್ಲಿ ಹಾಜರಿದ್ದ ಎಸ್.ಪಿಯವರೊಡನೆ ಎನ್‌ಕೌಂಟರ್‌ನ ವಿವರಗಳನ್ನು ಪಡೆದೆ. ನಾನು ಸ್ಥಳಕ್ಕೆ ಹೋಗುವಷ್ಟರಲ್ಲಿ ಮೃತರಾಗಿದ್ದ ಸಾಕೇತ್ ರಾಜನ್ ಹಾಗೂ ಶಿವಲಿಂಗು (ಈತ ರಾಯಚೂರಿನವನು) ಇವರ ದೇಹಗಳನ್ನು ಎರಡನೆಯ ಮರಣೋತ್ತರ ಪರೀಕ್ಷೆಗೆಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕಳುಹಿಸಲಾಗಿತ್ತು.
ಮಂಗಳೂರಿಗೆ ಹಿಂತಿರುಗಿ ಮುಖ್ಯಮಂತ್ರಿ ಧರ್ಮಸಿಂಗ್‌ರವರ ಜೊತೆಯೇ ಬೆಂಗಳೂರಿಗೆ ವಾಪಸ್ ಬಂದೆ. ಹಾದಿಯಲ್ಲಿ ಅವರಿಗೆ ನಾನು ಎನ್‌ಕೌಂಟರ್ ಬಗ್ಗೆ ವಿವರಗಳನ್ನು ನೀಡಿದೆ. ಬೆಂಗಳೂರಿನಲ್ಲಿ ವಿಮಾನದಿಂದ ಇಳಿದ ಕೂಡಲೇ ನಾವಿಬ್ಬರೂ ಮಲ್ಯ ಆಸ್ಪತ್ರೆಗೆ ಹೋದೆವು. ಈ ಆಸ್ಪತ್ರೆಯಲ್ಲಿ ಇನ್ಸ್‌ಪೆಕ್ಟರ್ ಶ್ರೀನಿಧಿಯವರನ್ನು ದಾಖಲು ಮಾಡಲಾಗಿತ್ತು. ಮುಖ್ಯಮಂತ್ರಿ ಶ್ರೀನಿಧಿಯಿಂದ ಎನ್‌ಕೌಂಟರ್ ಬಗ್ಗೆ ವಿವರಗಳನ್ನು ಕೇಳಿ ಅವರಿಗೆ ಶೀಘ್ರ ಗುಣಮುಖರಾಗಲು ಹಾರೈಸಿದರು. ನಾವಿಬ್ಬರೂ ಆಸ್ಪತ್ರೆಯಿಂದ ವಿಧಾನಸೌಧಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದರು. ಇದಕ್ಕಿದ್ದ ಕಾರಣ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಫೆಬ್ರವರಿ 11ನೇ ತಾರೀಖಿನಂದು ಬೆಂಗಳೂರಿಗೆ ಬರುವವರಿದ್ದರು. ಅವರಿಗೆ ಭದ್ರತೆಯ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಇದಲ್ಲದೇ ನಕ್ಸಲ್ ಎನ್‌ಕೌಂಟರ್‌ನಿಂದಾಗುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಬೇಕಾಗಿತ್ತು.
ಫೆಬ್ರವರಿ 8ರಂದು ಹತ ನಕ್ಸಲರ ದೇಹಗಳ ಮೇಲೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಎರಡನೆಯ ಮರಣೋತ್ತರ ಪರೀಕ್ಷೆ ನಡೆಯಿತು (ಪ್ರತಿ ಎನ್‌ಕೌಂಟರ್ ಪ್ರಕರಣದಲ್ಲಿಯೂ ಎರಡು ಮರಣೋತ್ತರ ಪರೀಕ್ಷೆ ನಡೆಸುವುದು ಅನಿವಾರ್ಯ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸೂಚಿಸಿದೆ). ಮರಣೋತ್ತರ ಪರೀಕ್ಷೆ ನಡೆದ ನಂತರ ʻಸಿಟಿಜನ್ ಇನಿಷಿಯೇಟಿವ್ ಫಾರ್ ಪೀಸ್’ ಎನ್ನುವ ಸಂಘಟನೆಯೊಂದು ಗೌರಿ ಲಂಕೇಶ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೃತ ನಕ್ಸಲರ ದೇಹಗಳನ್ನು ಅಂತ್ಯಕ್ರಿಯೆಗಾಗಿ ತಮಗೆ ಒಪ್ಪಿಸಿಬೇಕು ಎಂದು ಕೋರಿತು. ಧರ್ಮಸಿಂಗ್ ಈ ಕೋರಿಕೆಗೆ ಒಪ್ಪಿದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಈ ನಿಲುವು ಒಪ್ಪಿಗೆಯಾಗಲಿಲ್ಲ. ಕಾನೂನಿನ ಅನ್ವಯ ಮೃತ ದೇಹಗಳನ್ನು ಅವುಗಳ
ವಾರಸುದಾರರಿಗೆ ಕೊಡಬಹುದೇ ಹೊರತು ಇತರರಿಗಲ್ಲ. ಗೌರಿ ಲಂಕೇಶ್ ಮೃತ ನಕ್ಸಲರ ರಕ್ತಸಂಬಂಧಿಯಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಯಾವ ಕಾರಣಕ್ಕಾಗಿಯೂ ಮೃತ ದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಬೇರೆಯವರಿಗೆ ಕೊಡಲು ಬರುವುದೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಉತ್ತರದಿಂದ ಧರ್ಮಸಿಂಗ್‌ರಿಗೆ ಕೋಪ ಬಂದಿತು. ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಅವರು ನನ್ನನ್ನು ಕೋರಿದರು. ಆಗ ನಾನು ಮುಖ್ಯಮಂತ್ರಿಗಳಿಗೆ ಪ್ರಕರಣದ ಸೂಕ್ಷ್ಮತೆಯ ಅರಿವು ಮಾಡಿಕೊಟ್ಟು ಮೃತ ದೇಹಗಳನ್ನು ಅವುಗಳ ವಾರಸುದಾರರಿಗೆ ಮಾತ್ರ ಅಂತ್ಯಕ್ರಿಯೆಗಾಗಿ ಕೊಡಬಹುದಾಗಿದ್ದು ಅಧಿಕಾರಿಗಳು ತೆಗೆದುಕೊಂಡಿರುವ ನಿಲುವು ಸರಿಯಾಗಿಯೇ ಇದೆ ಎಂದು ಸ್ಪಷ್ಟಿಕರಿಸಿದೆ.
“ಹಾಗಾದರೆ ಮುಂದಿನ ದಾರಿ ಏನು?” ಎಂದು ಕೇಳಿದರು ಧರ್ಮಸಿಂಗ್. “ಒಂದು ವೇಳೆ ಎರಡೂ ದೇಹಗಳನ್ನು ತಮ್ಮ ವಶಕ್ಕೆ ಅವುಗಳ ವಾರಸುದಾರರು ಪಡೆದು ಆನಂತರ ಅವನ್ನು ಬೇರಾರಿಗಾದರೂ ಅಂತ್ಯಕ್ರಿಯೆ ಮಾಡಲು ಒಪ್ಪಿಸಿದರೆ ಆಗ ಮಾತು ಬೇರೆಯಾಗಬಹುದೇನೋ” ಎಂದೆ. ಧರ್ಮಸಿಂಗ್ ನಾನು ಹೇಳಿದ ಇದೇ ಮಾತನ್ನೇ ಗೌರಿ ಲಂಕೇಶ್‌ಗೆ ತಿಳಿಸಿದರು. ಆಕೆ ಸಾಕೇತ್ ರಾಜನ್ ತಾಯಿ ರಾಜಲಕ್ಷ್ಮಿ ಮೈಸೂರಿನಲ್ಲಿ ವಾಸಿಸುತ್ತಿದ್ದು, ಶಿವಲಿಂಗುರವರ ಮಾತಾಪಿತರು ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದು ಅವರಿಗೆ ಸಂಬಂಧಪಟ್ಟ ಶವಗಳನ್ನು ಹಸ್ತಾಂತರಿಸಲು ತಮ್ಮ ಅಡ್ಡಿ ಇಲ್ಲ ಎಂದರು.
ಇದನ್ನೂ ಓದಿ: ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ
ಇದಾದ ನಂತರ ಡಿ.ಜಿ.ಪಿ ಬೋರ್ಕರ್ ಮೈಸೂರು ಪೊಲೀಸ್ ಆಯುಕ್ತ ಕೆಂಪಯ್ಯನವರೊಡನೆ ಮಾತನಾಡಿ ಸಾಕೇತ್ ರಾಜನ್ ತಾಯಿಯವರ ಜತೆ ಈ ವಿಷಯ ಪ್ರಸ್ತಾಪಿಸಿ ಎಂದು ಆದೇಶಿಸಿದರು. ಎರಡೇ ಗಂಟೆಗಳ ನಂತರ ವರದಿ ನೀಡಿದ ಕೆಂಪಯ್ಯ, “ಸಾಕೇತ್ ರಾಜನ್‌ರ ತಾಯಿಗೆ ತಮ್ಮ ಪುತ್ರನ ಶವ ಬೇಕಾಗಿಲ್ಲ. ಮಗ ಮನೆಬಿಟ್ಟು ಹೋಗಿ ಎರಡು ದಶಕಗಳೇ ಆಗಿವೆ. ಅವನಿಗೂ ನಮಗೂ ಸಂಬಂಧ ಕಡಿದಿದೆ ಎಂಬ ಉತ್ತರ ನೀಡಿದ್ದಾರೆ” ಎಂದರು. ಸಾಕೇತ್ ರಾಜನ್‌ಗೆ ಬೇರೆ ಯಾರೂ ಹತ್ತಿರದ ಬಂಧುಗಳು ಇರದಿದ್ದರಿಂದ ಆತನ ಶವದ ಅಂತಿಮ ಸಂಸ್ಕಾರವನ್ನು ಪೊಲೀಸ್/ ಸರ್ಕಾರಿ ಅಧಿಕಾರಿಗಳೇ ಮಾಡುವುದು ಎಂಬ ತೀರ್ಮಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದರು.
ಇದಾದ ಕೆಲ ಸಮಯದ ನಂತರ ಗೌರಿ ಲಂಕೇಶ್ ಮತ್ತೊಮ್ಮೆ ಧರ್ಮಸಿಂಗ್‌ರನ್ನು ಭೇಟಿ ಮಾಡಿ ಶವಗಳನ್ನು ಇನ್ನೇನು ಅಂತಿಮ ಸಂಸ್ಕಾರಕ್ಕೆ ಒಯ್ಯಲಾಗುತ್ತಿದೆ. ತಾವು ಶೀಘ್ರ ಮಧ್ಯ ಪ್ರವೇಶಿಸಿ ಶವಗಳಿಗೆ ಅಂತಿಮ ಸಂಸ್ಕಾರ ಮಾಡಲು ನಮಗೆ ಹಸ್ತಾಂತರಿಸಲು ಆದೇಶ ನೀಡಿ ಎಂದು ಕೋರಿದರು. ಈ ಕೋರಿಕೆಗೆ ಮಣಿದ ಧರ್ಮಸಿಂಗ್ ಹಿರಿಯ ಪೊಲೀಸ್ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರು. ಆದರೆ ಯಾರೂ ದೂರವಾಣಿಗೆ ಸಿಗಲಿಲ್ಲ. ಅಷ್ಟರಲ್ಲಾಗಲೇ ಅಂತಿಮ ಸಂಸ್ಕಾರವೇ ಮುಗಿದು ಹೋಗಿತ್ತು.
ಫೆಬ್ರವರಿ 9ರಂದು ʻಸಿಟಿಜನ್ ಇನಿಷಿಯೇಟವ್ ಫಾರ್ ಪೀಸ್’ನ ಕಾರ್ಯಕರ್ತರು ಮೃತ ನಕ್ಸಲ್ ಶವಗಳಿಗೆ ಪೊಲೀಸರೇ ಅಂತ್ಯ ಸಂಸ್ಕಾರ ಮಾಡಿದ ಕ್ರಮವನ್ನು ವಿರೋಧಿಸಿ ಬೆಂಗಳೂರು ನಗರದಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗಲು ಉದ್ದೇಶಿಸಿದರು. ನಗರ ಪೊಲೀಸ್ ಆಯುಕ್ತರು ಈ ಮೆರವಣಿಗೆಗೆ ಅನುಮತಿ ನೀಡದೇ ಹೋದುದ್ದರಿಂದ ಈ ಸಂಘಟನೆಯ ಕೆಲವು ನಾಯಕರು ಮುಖ್ಯಮಂತ್ರಿ ಧರ್ಮಸಿಂಗ್‌ರನ್ನು ಭೇಟಿ ಮಾಡಲು ಅವರ ಗೃಹ ಕಚೇರಿ ಕೃಷ್ಣಾಗೆ ಬಂದರು. ಭೇಟಿ ಮಾಡಲು ಬಂದ ನಿಯೋಗದಲ್ಲಿ ಆಂಧ್ರ ಪ್ರದೇಶದ ಕ್ರಾಂತಿಕಾರಿ ಕವಿ ವರವರರಾವ್, ಕ್ರಾಂತಿಕಾರಿ ಗಾಯಕ ಗದ್ದರ್, ಗೌರಿ ಲಂಕೇಶ್, ಪ್ರೊ. ಜಿ.ರಾಮಕೃಷ್ಣ, ಮನು ಚಕ್ರವರ್ತಿ ಮುಂತಾದವರು ಇದ್ದರು. ಮುಖ್ಯಮಂತ್ರಿಯವರ ಆದೇಶವನ್ನು ಪಾಲಿಸದೇ ಮೃತ ನಕ್ಸಲರಿಗೆ ಅಂತ್ಯ ಸಂಸ್ಕಾರ ಮಾಡಿದ ಕಾರಣಕ್ಕಾಗಿ ರಾಜ್ಯ ಪೊಲೀಸ್ ಮುಖ್ಯಸ್ಥ ಬೋರ್ಕರ್ ಇವರನ್ನು ಕೂಡಲೇ ಅಮಾನತ್ತಿನಲ್ಲಿ ಇಡಬೇಕು ಹಾಗೂ ಈ ಬಗ್ಗೆ ವಿವರವಾದ ತನಿಖೆ ನಡೆಯಬೇಕು ಎಂಬ ಬೇಡಿಕೆಯನ್ನು ನಿಯೋಗ ಇಟ್ಟಿತು. ಮಾತುಕತೆಯ ಸಮಯದಲ್ಲಿ ಗದ್ದರ್ ತಮ್ಮ ಜೊತೆ ನಕ್ಸಲರ ಅಸ್ತಿ (ಬೂದಿ) ಇದ್ದ ಕಳಶವೊಂದನ್ನು ತಂದಿದ್ದನ್ನು ನಾನು ನೋಡಿದೆ. ಮುಖ್ಯಮಂತ್ರಿ ಈ ನಿಯೋಗಕ್ಕೆ ಯಾವುದೇ ಆಶ್ವಾಸನೆಯನ್ನು ನೀಡಲಿಲ್ಲ.
ಇದನ್ನೂ ಓದಿ: ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು
ಮೃತ ನಕ್ಸಲರ ದೇಹಗಳನ್ನು ʻಸಿಟಿಜನ್ ಇನಿಷಿಯೇಟಿವ್ ಫಾರ್ ಪೀಸ್’ ನಾಯಕರಿಗೆ ಒಪ್ಪಿಸುವಂತಹ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದು ಅವರನ್ನು ಸಾಕಷ್ಟು ಟೀಕೆಗೆ ಗುರಿಮಾಡಿತು. ರಾಜ್ಯದಲ್ಲಿನ ಬಹಳಷ್ಟು ಜನರಿಗೆ ಧರ್ಮಸಿಂಗ್ ನಕ್ಸಲೀಯರ ಬಗ್ಗೆ ಮೃದು ಭಾವನೆ ತಳೆದಿದ್ದರೆಂದು ಅನಿಸಿದ್ದು ಸತ್ಯವೇ.
ಕೃತಿ: ಧರ್ಮಾತ್ಮ (ನಾ ಕಂಡಂತೆ ಧರ್ಮಸಿಂಗ್)
ಲೇಖಕ: ಡಾ.ಡಿ.ವಿ ಗುರುಪ್ರಸಾದ್ (ನಿವೃತ್ತ ಡಿಜಿಪಿ)
ಪ್ರಕಾಶನ: ವಿಕ್ರಂ ಪ್ರಕಾಶನ
ಬೆಲೆ: 200/-