Site icon Vistara News

Sunday Read: ಹೊಸ ಪುಸ್ತಕ: ಯಾಬ್ಲಿ: ಯಥಾಪ್ರಕಾರ

new kannada book yabli

:: ಎಚ್.ಆರ್‌ ರಮೇಶ

ಸಾವಜ್ಜಿಗೆ ರಾತ್ರಿ ನಿದ್ರೆಯಲ್ಲಿ ಕನಸು. ಭೂಮಿ ಸುಟ್ಟು ಹೋಗಿತ್ತು. ಸುಡುವ ಬೆಂಕಿಯ ಝಳದಲ್ಲಿ ಒಂದು ಬಿಳಿಯ ಹಂಸ ಹಾರಿ ಹೋಗುತ್ತಿತ್ತು ಆಕಾಶದ ಕಡೆ ಮುಖಮಾಡಿ. ಸಾವಜ್ಜಿ ನೋಡುತ್ತಲೇ ಇದ್ದಳು ಅದನ್ನು. ಅಂತರಿಕ್ಷದಲ್ಲಿ ಅದು ಹಾರಿಹೋಗುತ್ತಿತ್ತು. ಅದನ್ನು ಸಾವಜ್ಜಿ ನೋಡುತ್ತಲೇ ಇದ್ದಳು. ಸಾವಜ್ಜಿ ಅದನ್ನು ನೋಡುತ್ತಲೇ ಇದ್ದಳು. ಕಲ್ಲು ನೀರು ಕರಗುವ ಹೊತ್ತು ಈ ಕನಸು ಬಿದ್ದ ಹೊತ್ತು. ಅದು ಕರಗದೆ ಹಾಗೇ ಇತ್ತು ಅವಳ ಸುಕ್ಕುಗಳ ಮೇಲೆ ಅಡುಗೆ ಕೋಣೆಯ ಕಿಟಕಿಯಿಂದ ಸೂರ್ಯನ ಕಿರಣಗಳು ಹರಿದು ಹೋಗುವ ತನಕ. ಅವಳ ಕೆನ್ನೆಗಳ ಮೇಲೆ ಮೂಡಿದ್ದ ಸುಕ್ಕುಗಳು ನುಣುಪು ಬೆಣಚು ಕಲ್ಲುಗಳಾಗಿದ್ದವು. ಬೆಣಚು ಕಲ್ಲುಗಳ ಸಂದುಗೊಂದುಗಳಲ್ಲೆಲ್ಲ ಜುಳು ಜುಳು ಸದ್ದುಮಾಡಿಕೊಂಡು ಹರಿವ ತೊರೆಯ ನೀರು ಅವಳ ಕೆನ್ನೆಯ ಸುಕ್ಕುಗಳ ಮೇಲೆ ಹರಿವ ಸೂರ್ಯನ ಕಿರಣಗಳು. ಎಚ್ಚರವಾಯಿತು.

ಎದ್ದಳು ನಿಧಾನ. ಮಾಳಿಗೆ ಮನೆಯ ನಡುಮನೆಯಲ್ಲಿ ಮಲಗಿದ್ದಳು. ಗೋಡೆಯ ಮೇಲೆ ನೇತುಹಾಕಿದ್ದ ಶಿವನ ಪಟಕ್ಕೆ ಕೈ ಮುಗಿದು, ‘ಶಿವನೇ ಏನೇಳ್ಲಪ್ಪ ನಿನ್ನ ಮಯಿಮೇನ, ಇಷ್ಟು ದಿನ ಕರಕಂಬದ್ದಲ್ಲಪ್ಪ, ಏನೇಳ್ಲಿ ನಿನ್ನ ಪವಾಡಕೆ’ ಎಂದುಕೊಳ್ಳುತ್ತ ನಿಧಾನ ಎದ್ದಳು. ಹಳೆಯ ಸೀರೆಗಳನ್ನು ಒಂದಕ್ಕೊಂದು ಸೇರಿಸಿ ಹೊಲೆದು, ಮೆತ್ತನೆಯ ಹಾಸಿಗೆಯ ಥರ ಮಾಡಿಕೊಂಡಿದ್ದ ಅದನ್ನು ನೀಟಾಗಿ, ಚೌಕಾಕಾರದಲ್ಲಿ ಮಡಿಚಿ, ಆ ನಡುಮನೆಯ ಕೋಣೆಯ ತಾನು ಮಲಗಿದ್ದ ಬಲಭಾಗದ ಮೂಲೆಯಲ್ಲಿ ಅದನ್ನು ಮತ್ತು ಅದರ ಜೊತೆಗೆ ದಿಂಬನ್ನು ಇಟ್ಟಳು. ದಿಂಬಿಗೆ ಹಳೆಯ ಸೀರೆಯನ್ನು ಕವರನ್ನಾಗಿ ಹೊಲಿದಿದ್ದು, ಅದರಲ್ಲಿನ ಹೂವಿನ ಚಿತ್ರಗಳು ಎಣ್ಣೆಯ ಜಿಡ್ಡಿಗೆ ತಮ್ಮ ಕಳೆಯನ್ನು ಕಳೆದುಕೊಂಡಿದ್ದವು. ಎದ್ದು, ಬಾಗಿಲ ಹಿಂದೆ ಇದ್ದ ಮರದ ಅಗಳಿಯನ್ನು ಸರಿಸಿ ಬಾಗಿಲನ್ನು ಹಿಂದಕ್ಕೆ ಎಳೆದುಕೊಂಡಳು. ಇವಳು ಬಾಗಿಲು ತೆಗೆಯುವುದನ್ನೇ ಕಾಯುತ್ತಿತ್ತೇನೋ ಎಂಬಂತಿದ್ದ ಹೊರಗಿದ್ದ ಬೆಳಗಿನ ಬೆಳಕು, ಇವಳು ಬಾಗಿಲನ್ನು ತೆಗೆಯುತ್ತಿದ್ದಂತೇ ಒಳನುಗ್ಗಿತು.

ತುಸು ಎತ್ತರದ ಹೊಸ್ತಿಲನ್ನು ನಿಧಾನ ದಾಟಿ, ಬೆಳಕನ್ನು ಸೀಳಿಕೊಂಡು ಹೊರನಡೆದು, ಮನೆಯ ಬಲಗಡೆ ಸಂದಿಯಲ್ಲಿ ಅವಳ ಗಂಡನಕಾಲದ ಪುಟ್ಟ ಶೌಚಾಲಯಕ್ಕೆ ಹೋಗಿ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ, ಹೊರಗಿನ ಗುಡಾಣದಲ್ಲಿರುವ ನೀರನ್ನು ಗುಡಾಣದ ಮುಚ್ಚುಳದ ಮೇಲೆ ಕಾಲದ ಸಾಕ್ಷಿಯೆಂಬಂತೆ ಇದ್ದ ಲಬಿಕಿದ ಅಲ್ಯುಮಿನಿಯಮ್ ತಂಬಿಗೆಯಲ್ಲಿ ತುಂಬಿಸಿಕೊಂಡು, ಮತ್ತೊಮ್ಮೆ ಕೈ ತೊಳೆದು, ಕಾಲಿನ ಹಿಮ್ಮಡಿಯು ನೆನೆಯುವಂತೆ ಎರಡೂ ಪಾದಗಳ ಮೇಲೆ ನೀರನ್ನು ಹಾಕಿಕೊಂಡು ಒಳನಡೆದಳು. ಅಡುಗೆ ಕೋಣೆಯು ನಡುಮನೆಗೆ ಹೊಂದಿಕೊಂಡಿತ್ತು. ನಿಧಾನ ಅಡುಗೆ ಕೋಣೆಯೊಳಗೆ ಪಾದಗಳ ಇಡತೊಡಗಿದಳು. ಒಲೆಯ ಪಕ್ಕ ಇದ್ದ ಬಚ್ಚಲು ಮನೆಗೆ ಎಡ್ಲಿಯಲ್ಲಿ ತಾಮ್ರದ ತಂಬಿಗೆಯನ್ನು ಅದ್ದಿದಳು. ಆಗ ಅಲ್ಲಿ ನೀರು ತಂಬಿಗೆ ಒಳಗಡೆ ಸೇರುವ ಗುಡುಗುಡು ಸದ್ದು. ನೀರು ತುಂಬಿಸಿಕೊಂಡು, ಇದ್ದಿಲಿನ ಪುಡಿಯಲ್ಲಿ ಹಲ್ಲುಗಳನ್ನು ಉಜ್ಜಿ, ಮುಖವನ್ನು ತೊಳೆದುಕೊಂಡು, ನಿಧಾನ ಬಚ್ಚಲಿಗೆ ಅಡ್ಡಲಾಗಿಟ್ಟಿದ್ದ ಕಲ್ಲನ್ನು ದಾಟಿ ಹೊರ ನಡೆದಳು. ಸೂರ್ಯನ ಕಿರಣಗಳು ಅವಳ ಬೆನ್ನಿನ ಮೇಲೆ ಬಂಗಾರದ ನೀರನ್ನು ಸುರಿಯುತ್ತಿರುವಂತೆ ಕಾಣುತ್ತಿತ್ತು. ನಡುಮನೆಯ ಎಡಭಾಗದ ಗೋಡೆಗೆ ಸಮೀಪ ಬಿದಿರಿನ ಒಂದು ಉದ್ದನೆಯ ಗಳವನ್ನು ತೆಂಗಿನ ಹುರಿಯಲ್ಲಿ ಜಂತೆಯ ತೊಲೆಗೆ ಕಟ್ಟಿ ನೇತು ಬಿಡಲಾಗಿತ್ತು. ಆ ದಂಡಿಗೆಯ ಮೇಲೆ ಸೀರೆ, ರವಿಕೆ, ಮತ್ತಿತರೆ ಬಟ್ಟೆಗಳನ್ನು ಮಡಿಚಿ ನೇತುಹಾಕಲಾಗಿತ್ತು.

ಅದರ ಮೇಲೆ ನೇತಾಡುತ್ತಿದ್ದ ಟವಲನ್ನು ಎಳೆದುಕೊಂಡು, ಅದರಿಂದ ಮುಖವನ್ನು ಒರೆಸಿ ಕೊಂಡು, ಅದನ್ನು ಮತ್ತೆ ತನ್ನ ಭುಜದ ಮೇಲೆ ಹಾಕಿಕೊಂಡು ಮುಂದಕ್ಕೆ ಹೆಜ್ಜೆಗಳನ್ನು ಇಟ್ಟಳು. ಅವಳ ಮನೆ ಪಶ್ಚಿಮಾಭಿಮುಖವಾಗಿದ್ದುದರಿಂದ, ಸೂರ್ಯ ಕಾಣಿದಿದ್ದರೂ, ಅವಳ ಮನೆಯ ಬಾಗಿಲಿನ ಕಡೆ ಅಂದರೆ ಪೂರ್ವ ದಿಕ್ಕಿನ ಕಡೆ ತಿರುಗಿ ಒಂದು ನಮಸ್ಕಾರ ಹಾಕಿದಳು. ಹಾಕಿ, ಮನೆಯ ಮುಂಭಾಗದ ಬಲಗಡೆಯಲ್ಲಿ ಇಬ್ಬರು ಕುಳಿತುಕೊಳ್ಳಬಹುದಾಗಿದ್ದ ಒಂದು ಸಣ್ಣಕಲ್ಲು ಹಾಸಿನ ಕೆಳಗೆ ಕೈ ಹಾಕಿ ಪೊರಕೆಯನ್ನು ತೆಗೆದುಕೊಂಡಳು. ಕಸ ಗುಡಿಸಿ, ಅಲ್ಲೆ ಗುಡಾಣದಲ್ಲಿದ್ದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಬಾಗಿಲಿಗೆ ನೀರನ್ನು ಚಿಮುಕಿಸಿದಳು. ಮುಂಬಾಗಿಲಿನ ಕೈಗೆಟುಕುವ ಎತ್ತರದಲ್ಲಿದ್ದ ಒಂದು ಪುಟ್ಟ ಗೂಡೊಳಗೆ ಕೈ ಹಾಕಿ ಅರಿಶಿಣ, ಕುಂಕುಮ ಮತ್ತು ರಂಗೋಲಿ ಹಿಟ್ಟು ಇದ್ದ ಒಂದು ಬಟ್ಟಲನ್ನು ತೆಗೆದುಕೊಂಡು, ಹೊಸ್ತಿಲ ಮೇಲೆ ಮೂರುಕಡೆ ಮೂರು ಗೆರೆಗಳನ್ನು, ಅವುಗಳ ಅಂತರದಲ್ಲಿ ಸುರುಳಿಯಾಕಾರದ ಚಕ್ರ, ಇಂಟು ಆಕಾರದ ಎರಡು ಎಲೆಗಳಂತಿರುವ ಎಳೆಗಳನ್ನು ಎಳೆದು, ಹೊಸ್ತಿಲಿನ ಮುಂಭಾಗಕ್ಕೆ ಕುಂಕುಮ ಮತ್ತು ಅರಿಶಿಣವನ್ನು ಇಟ್ಟಳು. ಮನೆಯ ಅಂಗಳಕ್ಕೆ ದಾರಿಗೆ ಹೊಂದಿಕೊಂಡು ಮರದಂತೆ ಬೆಳೆದಿದ್ದ ಎಕ್ಕದ ಹೂವುಗಳನ್ನು ಕಿತ್ತು ಇಟ್ಟಳು. ಅದರ ಪಕ್ಕದಲ್ಲೇ ಇದ್ದ ಮಧ್ಯಾಹ್ನ ಮಲ್ಲಿಗೆ ಹೂವು ಸಂಜೆ ಅರಳಿದ್ದರಿಂದ, ಮುದುಡಿ ಮಲಗಿದ್ದವು. ಕೆಲವು ಗಿಡದ ಬುಡದಲ್ಲಿ ಬಿದ್ದಿದ್ದವು. ತಂಬಿಗೆಯಲ್ಲಿ ಉಳಿದಿದ್ದ ನೀರಿನಲ್ಲಿ ಕೈಗಳನ್ನು ತೊಳೆದುಕೊಂಡು, ಭುಜದ ಮೇಲೆ ಹಾಕಿಕೊಂಡಿದ್ದ ಟವಲನ್ನು ಮನೆಯ ಮುಂಭಾಗದ ಗೋಡೆಗೆ ಮತ್ತು ಅಂಗಳದ ಗೂಟಕ್ಕೆ ಕಟ್ಟಿದ್ದ ತಂತಿಯ ಮೇಲೆ ನೇತುಹಾಕಿ ಒಳ ನಡೆದಳು.

ಸಾವಜ್ಜಿಯ ಮಾಳಿಗೆ ಮನೆ, ಎರಡು ಕೋಣೆಗಳಿದ್ದರೂ, ತುಂಬಾ ವಿಶಾಲವಾಗಿತ್ತು. ಮನೆಯ ಅಡುಗೆ ಕೋಣೆಯು ಐದಾರು ಜನ ಕೂತು ಊಟ ಮಾಡುವಷ್ಟು ವಿಶಾಲ ವಾಗಿತ್ತು. ಮೂಲೆಯಲ್ಲಿ ಮಣ್ಣಿನ ಸೋರೆಗಳನ್ನು ಹೈಕಳು ಲಗೋರಿ ಆಟವಾಡುವಾಗ ಒಂದರ ಮೇಲೊಂದು ಜೋಡಿಸುವ ಬಿಲ್ಲೆಗಳಂತೆ ಜೋಡಿಸಿಡಲಾಗಿತ್ತು. ನೀರು ಕುಡಿಯಲು ಕಂಚಿನ ವೃತ್ತಾಕಾರದ ಗಿಂಡಿ, ಅದರ ಪಕ್ಕ ಒಂದು ಸ್ಟೀಲಿನ ಕೊಳಗ ಅದರ ಪಕ್ಕ ಮಣ್ಣಿನ ಗುಡಾಣ. ತರಕಾರಿಗಳನ್ನು ಇಡಲು ಜಾಲರ ರೂಪದ ನೇತಾಡುವ ಬುಟ್ಟಿಯನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಲಾಗಿತ್ತು. ಅಡುಗೆ ಮನೆಯಲ್ಲಿ ಮೂರು ಕಂಬಗಳಿದ್ದವು. ಅವುಗಳಿಗೆ ಹುರಮಂಜನ್ನು ಬಳಿಯಲಾಗಿತ್ತು. ಅಡುಗೆ ಕೋಣೆಯ ಬಾಗಿಲ ಮೇಲೆ ಇಡಲಾಗಿದ್ದ ಅಡ್ಡಕಲ್ಲಿನ ಮೇಲೆ ಐದಾರು ತಾಮ್ರದ, ಸ್ಟೀಲಿನ ಡಬ್ಬಿಗಳಿದ್ದವು. ಮೂರು ನಿಲುವುಗಳಿದ್ದು, ಒಂದರಲ್ಲಿ ಹಾಲಿನ ಬಟ್ಟಲು, ಮತ್ತೊಂದರಲ್ಲಿ ಕುಂಬಳಕಾಯಿ ಇದ್ದು, ಮೂರನೆಯದು ಖಾಲಿಯಿತ್ತು. ಅಡುಗೆ ಕೋಣೆಯ ಬಲಭಾಗದಲ್ಲಿ ಪುಟ್ಟದಾದ ದೇವರಗೂಡು. ಅದರಲ್ಲಿ ಹುಲಿ ವಾಹನದ ಮೇಲೆ ಕುಳಿತುಕೊಂಡಿರುವ ದೇವಿಯ ಚಿತ್ರ. ಅದಕ್ಕೆ ಗಾಜಿನ ಕಟ್ಟನ್ನು ಹಾಕಲಾಗಿತ್ತು. ಕುಂಕುಮ, ವಿಭೂತಿ, ಮತ್ತು ಅಂಟಿಕೊಂಡಿದ್ದ ಬಸವನ ಪಾದದ ಹೂವುಗಳು. ಫೋಟೋದ ಮುಂದೆ ಒಂದು ದಪ್ಪನೆಯ ಪುಸ್ತಕ. ಅದರ ಮೇಲೆಲ್ಲ ವಿಭೂತಿ, ಕುಂಕುಮ, ತೀರ್ಥದ ಕಲೆಗಳು. ಅದರ ಪಕ್ಕದಲ್ಲಿ ವಿಭೂತಿ, ಕುಂಕುಮ, ಅರಿಶಿಣ. ವಿಭೂತಿಯನ್ನು ಎತ್ತಿಕೊಂಡು ತನ್ನ ಬಲಗೈಯ ಮೂರು ಅಂಗೈ ಬೆರಳುಗಳಿಗೆ ಅದನ್ನು ಬಳಿದುಕೊಂಡು ಆ ಮೂರು ಬೆರಳುಗಳಿಂದ ತನ್ನ ಹಣೆಯ ಮೇಲೆ ಮೂರು ಅಡ್ಡ ವಿಭೂತಿಯ ಗೆರೆಗಳನ್ನು ಎಳೆದುಕೊಂಡಳು. ಮತ್ತು ಉಂಗುರದ ಬೆರಳ ತುದಿಯಿಂದ ಒಂದಿಷ್ಟಗÀಲದ ಕುಂಕುಮವನ್ನು ತನ್ನ ಎರಡು ಹುಬ್ಬುಗಳ ನಡುವೆ ಹಚ್ಚಿಕೊಂಡಳು. ದೇವಿ ಫೋಟೋದ ಪಕ್ಕ ಬಿದಿರಿನ ಕೊಳವೆಯಲ್ಲಿದ್ದ ಊದುಬತ್ತಿಗಳಲ್ಲಿ ಎರಡನ್ನು ಹೊರಗೆ ಎಳೆದುಕೊಂಡು ಅಲ್ಲೇ ದೇವರ ಗೂಡಲ್ಲಿದ್ದ ಬೆಂಕಿಪೊಟ್ಟಣವನ್ನು ಹುಡುಕಿ ತೆಗೆದು, ಕಡ್ಡಿಯನ್ನು ಗೀರಿ ಊದುಬತ್ತಿಗಳ ತುದಿಗೆ ತಾಗಿಸಿದಳು. ಹಳದಿ ಮತ್ತು ಕೆಂಪು ಮಿಶ್ರಿತ ಪುಟ್ಟದಾದ ಜ್ವಾಲೆ ಎರಡು ಸೆಕೆಂಡು ಮೂಡಿ, ಊದುಬತ್ತಿಯ ತುದಿಯಲ್ಲಿ ಕೆಂಡದ ಬಣ್ಣದಕಿಡಿ ಮಾತ್ರ ಸ್ಠಾಪಿತಗೊಂಡಿತು. ಗೊಂಡು, ಪರಿಮಳದ ಹೊಗೆ ಆ ಅಡುಗೆ ಕೋಣೆಯಲ್ಲಿ ಹಬ್ಬತೊಡಗಿತು.

ಅವುಗಳನ್ನು ಬಲಗೈಯಲ್ಲಿ ಹಿಡಿದು ಫೋಟೋಕ್ಕೆ ಮೂರುಸಲ ಬೆಳಗಿದಳು. ಅಡುಗೆ ಕೋಣೆಯ ನಡುವಲ್ಲಿ ನೇತಾಡುತ್ತಿದ್ದ ಹಾಲಿನ ನೆಲುವಿನ ಬಳಿ ಹೋಗಿ, ಅದರಲ್ಲಿದ್ದ ಬಟ್ಟಲನ್ನು ಎತ್ತಿಕೊಂಡು, ಅದರೊಳಗಿದ್ದ ಹಾಲನ್ನು ಒಂದು ಪುಟ್ಟ ಪಾತ್ರೆಯಲ್ಲಿ ಸುರುವಿದಳು. ಎರಡು ಒಲೆಗಳು ಅವುಗಳ ಹಿಂದೆ ಎರಡು ಮೂರು ಚಿಕ್ಕ ಪಾತ್ರೆಗಳನ್ನು ಇಡಬಹುದಾದಷ್ಟು ಜಾಗವಿತ್ತು. ಎಡಗಡೆಯ ಒಲೆಯ ಪಕ್ಕ ಎಡಲಿ. ಅದರ ಪಕ್ಕ ಅಡ್ಡಲಾಗಿ ಒಂದು ಆಳು ಉದ್ದದ ಮದ್ದಕ್ಕನ ಹಳ್ಳಿ ಕಲ್ಲು. ಅದರಾಚೆ ಬಚ್ಚಲು. ಮನೆಯ ಗೋಡೆಗೆ ಹೊಂದಿಕೊಂಡಂತಿದ್ದ ಅದು ಅಡ್ಡವಾಗಿ ದಾಟಿ ಹೋಗಬಹುದಾದ ಎತ್ತರದ ಕಲ್ಲನ್ನು ಹೊಂದಿತ್ತು. ಮತ್ತು ಬಿದಿರಿನ ಅಡ್ಡ ಬಾಗಿಲನ್ನು ಹೊಂದಿತ್ತು. ಆ ಬಚ್ಚಲಿನ ಒಳಗೆ ಒಂದು ಪುಟ್ಟ ಕಿಟಕಿಯೂ ಇತ್ತು. ಬಲ ಒಲೆಯ ಪಕ್ಕ ಒಂದು ಆಳು ಕುಳಿತುಕೊಂಡಾಗ ಇರುವ ಎತ್ತರದಷ್ಟು ಇಟ್ಟಿಗೆ ತಡೆಗೋಡೆ. ಅದರ ಆಚೆ ಸೌದೆಗಳನ್ನು ಪೇರಿಸಿ ಇಡಲಾಗಿತ್ತು. ಅದರ ಪಕ್ಕ ಒಂದೆರಡು ಮೂರು ಅಡಿ ದೂರದಲ್ಲಿ ನುಸಿರೋಗ ಬಂದು ಒಳಗೆ ಟೊಳ್ಳಾಗಿರುವ ತೆಂಗಿನಮರದ ಥರ ಉದ್ದನೆಯ ಕಡಗೋಲು ತಾನೇನು ಮಾಡುತ್ತಿದ್ದೆ ಎನ್ನುವುದರ ನೆನಪು ಇಲ್ಲದೆ ನಿಸ್ತೇಜಗೊಂಡು ನಿಂತಿತ್ತು ಗೋಡೆಗೆ ಒರಗಿ. ಇದರ ಎದುರಿನ ಗೋಡೆಯ ಹತ್ತಿರ ಒಂದು ಸಣ್ಣದಾದ ಪೆಟ್ಟಿಗೆ ಅನಾದಿಕಾಲದಿಂದ ಮಲಗಿದಂತೆ ಇತ್ತು. ಒಲೆಯ ಹಿಂಭಾಗದ ಹಾಸಿನ ಮೇಲಿನ ಮೂಲೆಯಲ್ಲಿ ಬೆಕ್ಕು ತಪಸ್ಸಿಗೆ ಕುಳಿತ ಮುನಿಯಂತೆ ಇತ್ತು. ಸಾವಜ್ಜಿ ಹಾಲನ್ನು ಸುರುವ ಸದ್ದಿಗೆ ಎಚ್ಚರಗೊಂಡು ಅಥವಾ ಎಚ್ಚರವಾಗಿತ್ತೇನೋ, ಆ ಕಡೆ ಕಣ್ಣು ನೆಟ್ಟಿತು. ನೆಟ್ಟು ನನಗೂ ಅದಕ್ಕೂ ಸಂಬಂಧವಿಲ್ಲ ವೇನೋ ಎನ್ನುವಂತೆ ಮತ್ತೆ ಕಣ್ಣು ಮುಚ್ಚಿಕೊಂಡಿತು. ಇದನ್ನು ಕಂಡು ಅವಳು ನಕ್ಕಳು. ಹಾಲಿನ ಪಾತ್ರೆಯನ್ನು ಹಿಡಿದುಕೊಂಡು ಒಲೆಯ ಹತ್ತಿರ ಹೋಗಿ, ಒಲೆಯ ಮೇಲೆ ಇಟ್ಟಳು.

ಒಲೆಯ ಮುಂದೆ ಕುಳಿತರೆ ಕೈಗೆ ತಾಗುವ ಅಂತರದಲ್ಲಿ ಒಂದು ಮರದ ಕಂಬ. ಅದರ ಬುಡದಲ್ಲಿ ಇದ್ದ ಮಣೆಯನ್ನು ಎಳೆದುಕೊಂಡು ಅದರ ಮೇಲೆ ಕುಳಿತಳು. ಪಾತ್ರೆಯನ್ನು ಮತ್ತೆ ತೆಗೆದು ತನ್ನ ಪಕ್ಕ ಇಟ್ಟುಕೊಂಡಳು. ತಂಬಿಗೆಯನ್ನು ತೆಗೆದುಕೊಂಡು ಎಡಲಿಯಲ್ಲಿ ನೀರನ್ನು ತುಂಬಿಕೊಂಡು ಪಕ್ಕಕ್ಕೆ ಇಟ್ಟುಕೊಂಡಳು. ಸೌದೆಗಳನ್ನು ಪೇರಿಸಿಟ್ಟ ಜಾಗದಲ್ಲಿ ಎರಡು ಅಂಗೈಯಗಲದ ಚಚ್ಚೌಕಾಕಾರದ ಮರದ ಹಲಗೆಯನ್ನು ತೆಗೆದುಕೊಂಡು, ಅದನ್ನು ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಸೌದೆಯ ಬಳಿಯೇ ಇದ್ದ ಕಾಯಿಯ ಮೇಲಿನ ಚಿಪ್ಪನ್ನು ಎತ್ತಿಕೊಂಡು ಒಲೆಗಳಲ್ಲಿದ್ದ ಬೂದಿಯನ್ನು ಎಳೆದುಕೊಂಡಳು. ಅದನ್ನು ಸೌದೆಯ ಮುಂಭಾಗಕ್ಕೆ ಇಟ್ಟು, ಮತ್ತೆ ಕೈಗಳನ್ನು ತೊಳೆದುಕೊಂಡು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಮುಚ್ಚುಳವನ್ನು ಮುಚ್ಚಿದಳು ಸೌದೆಗಳಲ್ಲಿ ಪುರಳೆಗಳಂತವುಗಳನ್ನು ಆಯ್ದುಕೊಂಡು, ಮುರಿದು, ಒಲೆ ಯೊಳಗೆ ಇಟ್ಟಳು. ನಂತರ ಒಲೆಯ ಹಾಸಿನ ಒಂದು ಜಾಗದಲ್ಲಿ ಇದ್ದ ಬೆಂಕಿಪೊಟ್ಟಣವನ್ನು ಒಂದು ಪುಟ್ಟ ಸೀಮೆ ಎಣ್ಣೆಯ ಬುಡ್ಡಿಗೆ ಹಚ್ಚಿ ಅದರ ಜ್ವಾಲೆಗೆ ಕೆಲವು ಪುರುಳೆಗಳನ್ನು ಹಿಡಿದು ಅವು ಹೊತ್ತಿಕೊಂಡಾಗ ಅವನ್ನು ಈಗಾಗಲೇ ಒಲೆಯಲ್ಲಿ ಇಟ್ಟಿದ್ದ ಪುರುಳೆಗಳಿಗೆ ತುಸು ತಾಗಿಸಿ ಬೆಂಕಿ ಮಾಡಿದಳು. ಆಮೇಲೆ ಒಂದೆರಡಮೂರು ಗಟ್ಟಿ ಸೌದೆಗಳನ್ನು ಎತ್ತಿಕೊಂಡು ಒಲೆಯಲ್ಲಿ ಇಟ್ಟಳು. ಬೆಂಕಿ ನಿಧಾನವಾಗಿ ಎಲ್ಲ ಸೌದೆಗಳಿಗೆ ಹಬ್ಬತೊಡಗಿತು. ಈಗ ಮುಚ್ಚಳವನ್ನು ತೆರೆದಳು. ಎದ್ದು ಅಡುಗೆ ಕೋಣೆಯ ಬಾಗಿಲಿನ ಒಳ ನಿಲುವಿನ ಮೇಲೆ ಇದ್ದ ಡಬ್ಬ ಒಂದನ್ನು ಎತ್ತಿಕೊಂಡು ತನ್ನ ಅಂಗೈಯಿಯ ಬೊಗಸೆಯಲ್ಲಿ ಬೆಲ್ಲದ ಪುಡಿಯನ್ನು ಸುರುವಿಕೊಂಡು, ವಾಪಸ್ಸು ಒಲೆಯ ಹತ್ತಿರ ಬಂದು ಅದನ್ನು ಹಾಲಿನಲ್ಲಿ ಸುರುವಿದಳು. ಉಕ್ಕುತ್ತಿದ್ದ ಹಾಲು ಇದನ್ನು ಹಾಕುತ್ತಿದ್ದ ಹಾಗೆ ಡೌನಾಗತೊಡಗಿತು. ಒಲೆಯ ಹಿಂಭಾಗದ ಗೋಡೆಗೆ ಒಂದು ಪುಟ್ಟಗೂಡು ಹೊಂದಿಕೊಂಡಿತ್ತು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ

ಆ ಗೂಡಿನ ಒಳಗಡೆ ಕೈ ಹಾಕಿ ಒಂದು ಸಣ್ಣದಾದ, ಹೊಗೆ ಮತ್ತು ಮಸಿಗೆ ಕಪ್ಪಾಗಿರುವ, ತಾಮ್ರದ ಡಬ್ಬಿಯನ್ನು ಎತ್ತಿಕೊಂಡಳು. ಅದರ ಮುಚ್ಚಳ ವನ್ನು ಬಿಚ್ಚಿ ಅದರೊಳಗಿನ ಚಿಕ್ಕ ಚಮಚದಲ್ಲಿ ಅದರೊಳಗಿದ್ದ ಕಾಫಿ ಪುಡಿಯನ್ನು ತುಂಬಿಕೊಂಡು ಒಲೆಯ ಮೇಲಿನ ಪಾತ್ರೆಗೆ ಸುರುವಿ ಡಬ್ಬಿಯನ್ನು ತನ್ನ ಸ್ವಸ್ಥಳಕ್ಕೆ ತಲುಪಿಸಿದಳು. ಹಾಲಿನ ಪಾತ್ರೆಯನ್ನು ಇಳಿಸಿ, ಅಲ್ಲೇ ಗೋಡೆಯ ಮೊಳೆಯೊಂದಕ್ಕೆ ನೇತು ಹಾಕಲ್ಪಟ್ಟ ಸೋಸುವ ಜಾಲರವನ್ನು ಎತ್ತಿಕೊಂಡು, ಅದರ ಪಕ್ಕ ಮರದ ರಿಪೀಸನ್ನು ಗೋಡೆಯ ಎರಡು ಮೊಳೆಗಳ ಮೇಲಿಟ್ಟು ಅದರ ಮೇಲೆ ಮಗುಚಿ ಇಟ್ಟಿದ್ದ ಐದಾರು ಸ್ಟೀಲಿನ ಕಪ್ಪುಗಳಲ್ಲಿ ಒಂದನ್ನು ಎತ್ತಿಕೊಂಡು ಅದರಲ್ಲಿ ಸೋಸಿದಳು. ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿಗೆ ಮನೆಯೊಳಗಿನ ಧೂಳಿನ ಕಣಗಳು ಮತ್ತು ಅವುಗಳ ಜೊತೆಗೆ ಹೊಗೆ ಆಟವಾಡುತ್ತಿದ್ದವು ಬೆಳಕಿನ ಓರೆಯಾಕಾರದ ದಾರಿ ಮಾಡಿಕೊಂಡು. ಗವಾಕ್ಷಿಯಿಂದ ಇನ್ನೂ ಬೆಳಕು ನಿಚ್ಚಳವಾಗಿ ಹರಿದು ಬರುತ್ತಿರು ವಂತೆ ಕಾಣುತ್ತಿರಲಿಲ್ಲ. ಅವಳು ಕಾಫಿಯನ್ನು ಕುಡಿಯಲು ಬಲಗೈಯನ್ನು ಆಡಿಸುವಾಗ ಅವಳ ಕೈಯಲ್ಲಿದ್ದ ಎರಡೋ ಮೂರೋ ಬಳೆಗಳು ಒಂದು ಹಿನ್ನಲೆ ಸಂಗೀತವನ್ನು ಒದಗಿಸುತ್ತಿದ್ದವು. ಸ್ಟೀಲಿನ ಕಪ್ಪಿನ ಮೇಲೆ ಅವಳ ಪುಟ್ಟದಾದ ಆಕೃತಿ ಮೂಡಿತ್ತು. ಅವಳು ಕುಡಿಯುವ ಸಂದರ್ಭದಲ್ಲೆ ಅವಳ ಮನಸ್ಸು ಇನ್ನು ಒಂದು ಗಂಟೆ ಅಥವಾ ಒಂದೂವರೆ ಗಂಟೆಯಲ್ಲಿ ಅವಳು ಮಾಡಬಹುದಾಗಿದ್ದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಎಳ್ಳು ಹಾಕಿ ರಾಗಿಯ ತಪ್ಪಲೆ ರೊಟ್ಟಿಯನ್ನು ರೂಪಿಸುತ್ತಿತ್ತು.

ಕಸಗುಡಿಸಿ, ಕಸವನ್ನು ಮತ್ತು ಬೂದಿಯನ್ನು ಒಂದು ಮೊರದಲ್ಲಿ ತುಂಬಿಕೊಂಡು ಮನೆಯ ಹಿಂಭಾಗದ ತಿಪ್ಪೆಗೆ ಹಾಕಿ, ನಂತರ ಒಂದು, ಒಂದೂವರೆ ಗಂಟೆಯಲ್ಲಿ ಇದೂ ಆಗಿ, ಮುಂಬಾಗಿಲಿನಿಂದ ಹಗಲಿನ ಬೆಳಕು ಒಳಗಡೆ ಬಂದು ಸೆಟ್ಲಾಗತೊಡಗುತ್ತಿತ್ತು. ಆ ಬೆಳಕಿನಲ್ಲಿ ನಡುಮನೆಯಲ್ಲಿ ಕುಳಿತು ರೊಟ್ಟಿಯ ಕೊನೆಯ ತುತ್ತನ್ನು ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ, ಅಜ್ಜಿ ಅಜ್ಜಿ ಎಂದು ಪುಟ್ಟ ಹುಡುಗಿ ಕೂಗಿಕೊಂಡು ಬಂದಳು. ‘ಯಾಕೆ ರಶ್ಮಿ, ಏನಾಯ್ತೆ, ನಿಮ್ಮಪ್ಪ, ದೊಡ್ಡಪ್ಪ ಮತ್ತೆ ಗುದ್ದಾಡ್ತಿದರೇನೆ?’ ಎಂದು ಕೇಳಿದಳು. ‘ಅಜ್ಜಿ ಇಬ್ಬರೂ ಮನೆ ಮುಂದಿನ ತೆಂಗಿನ ಮರದ ಬೇಲಿಯೊಳಗಡೆ ಬಿದ್ದಿದ್ದಾರೆ’ ಎಂದಳು. ‘ಮೂರು ಬಿಟ್ಟೋವು, ನನ್ನ ಹೊಟ್ಟೆಗೆ ಯಾಕರ ಹುಟ್ಟಿದವೋ ಏನೋ’ ಎಂದು ಶಪಿಸಿಕೊಂಡಳು. ಮೂರು ದಿನದ ಹಿಂದೆ, ಅಂದರೆ, ಇವೊತ್ತು ಸೋಮವಾರ ಅಲ್ಲವೆ, ಭಾನುವಾರ, ಶನಿವಾರ, ಹ್ಞಾ ಶುಕ್ರವಾರ ಮಧ್ಯಾಹ್ನ ಹೀಗಾಗಿತ್ತು: ಸಾರು ಮಾಡಲು ಸೊಪ್ಪು ಕಿತ್ತುಕೊಂಡು ಬರಲು ಹೊಲದ ಕಡೆ ಹೋಗಿದ್ದ ಅವಳು ತನ್ನ ಚಿಕ್ಕ ಮಗ ರಂಗ ಮತ್ತು ದೊಡ್ಡ ಮಗ ಓಬ ಇಬ್ಬರೂ ಒಬ್ಬರಿಗೊಬ್ಬರು ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು ಸೆಣಸಾಟಕ್ಕೆ ಇಳಿದಿದ್ದುದನ್ನು ಕಂಡಿದ್ದಳು. ಥೂ ಮಾನಮರ್ಯಾದೆ ಇಲ್ಲದವೆ, ಯಾಕರ ಹುಟ್ಟಿದರೋ, ನಿಮ್ಮಪ್ಪ ಹೋದನು ಹೋದ ತಣ್ಣಗೆ, ನನ್ನೂ ಅವನ ಜೊತೆ ಕರಕೊಂಡು ಹೋಗಬಾರದಿತ್ತ, ಈ ಎಲ್ಡು ನೇತ್ರಗಳಿಂದ ಏನೆಲ್ಲ ನೋಡಬೇಕೋ ಎಂದು ಮಡಿಲಲ್ಲಿ ಸೊಪ್ಪನ್ನು ಬಿಗಿಯಾಗಿ ಕಟ್ಟಿಕೊಂಡು ಅವರನ್ನು ಬಿಡಿಸಲು ಹೋಗಿದ್ದಳು. ಚಿಕ್ಕ ಮಗ ರಂಗ ‘ನಿಮ್ಮವ್ವನ್ನ ನೀನ್ಯಾಕೆ ಬಂದೆ ಹೋಗೆ ಇಲ್ಲಿ’ ಎಂದು ಅವಳನ್ನು ದೂಡಿದ. ಅವಳು ಮಾರುದೂರ ಹೋಗಿ ಬಿದ್ದಳು. ‘ದೊಡ್ಡೋನು ಅನ್ನಿಸಿಕೊಂಡೋನು ನಿನಗೂ ಬುದ್ದೀ ಇಲ್ಲವೇನಲೇ ಓಬ, ಅವನು ದೂಕಿದರೂ ಸುಮ್ಮನಿದಿಯಾ ಎಂದು ಬೈದುಕೊಳ್ಳುತ್ತ ಸಾಯಿರಿ, ನಿಮ್ಮಿಂದ ಯಾವ ದೇಶ ಉದ್ಧಾರ ಆಗಬೇಕು, ಯಾವ ಕೇರಿಗೆ ಒಳ್ಳೆದು ಆಗಬೇಕು, ಹೊಲ ಉಳಿಸಿದ್ದಕ್ಕೆ ನಿಮಗೆ ಇಷ್ಟೊಂದು ಧಿಮಾಕು, ಅವಾಗ್ಲೆ ಎಲ್ಲ ಮಾರಿದ್ದಿದ್ದರೆ ಚೆನ್ನಾಗಿರ್ತಿತ್ತು’ ಎಂದು ಬೈದುಕೊಂಡ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮನೆಯ ಕಡೆ ಬಂದಿದ್ದಳು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು

ಕೃತಿ: ಯಾಬ್ಲಿ (ಸಣ್ಣಕತೆಗಳು)
ಲೇಖಕ: ಎಚ್. ಆರ್‌ ರಮೇಶ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 160 ರೂ.

Exit mobile version