Site icon Vistara News

Sunday read | ಹೊಸ ಪುಸ್ತಕ | ಹೀರೋಯಿನ್‌ ಹಾಗೆ ಇದ್ದ ಹುಡುಗಿ

kannada book

ಭಾಗ: ಒಂದು

ರಾಜೇಶ

ಎಂದಿನಿಂದಲೋ ಏನೋ ಒಳಗೊಂದು ಸಖಜೀವ
‘ಸಖಿ! ಬಾರೆ ಬಾ!’ ಎಂದು ಕೂಗುತಿದೆ

-೧-

ರಾಜೇಶ ಸ್ಟಾಫ್‌ರೂಮಿನಲ್ಲಿ ಕುಳಿತು ಪುಸ್ತಕವೊಂದರ ಓದಿನಲ್ಲಿ ಮಗ್ನನಾಗಿದ್ದ. ಡ್ರಿಲ್ ಮಾಸ್ಟರು ರಮೇಶ ಪಳ್ಳ ಮತ್ತು ಕ್ರಾಫ್ಟ್ ಟೀಚರ್ ಸುರೇಖಾ ಎದುರು ಸಾಲಿನ ಅಕ್ಕಪಕ್ಕದ ಕುರ್ಚಿಗಳಲ್ಲಿ ಕುಳಿತು ಮೆಲುಧ್ವನಿಯಲ್ಲಿ ಮಾತಾಡುತ್ತಿದ್ದರು. ಅಷ್ಟರಲ್ಲಿ ಯಾರೋ ಬಾಗಿಲಲ್ಲಿ ಬಂದು ನಿಂತದ್ದು ಮೂವರಿಗೂ ಅರಿವಾಯಿತು. ಹಾಗೆ ಬಂದು ನಿಂತವಳು ಒಬ್ಬಳು ಸುಮಾರು ಮೂವತ್ತೈದು ವರ್ಷ ವಯಸ್ಸಿನ ಲಕ್ಷಣವಾದ ಯುವತಿ. ತಿಳಿನೇರಳೆ ಬಣ್ಣದ ಹೂಗಳಿದ್ದ ಆಕಾಶನೀಲಿ ಬಣ್ಣದ ಸೀರೆಯನ್ನುಟ್ಟುಕೊಂಡಿದ್ದಳು. ಹಣೆಗೆ ಇಟ್ಟುಕೊಂಡಿದ್ದ ಉರುಟಾದ ಕುಂಕುಮ ಮತ್ತು ಅದರ ಮೇಲೆ ಅಡ್ಡಕ್ಕೆ ಸಣ್ಣದಾಗಿ ಹಚ್ಚಿಕೊಂಡಿದ್ದ ಗಂಧ ಅವಳ ಸುಂದರ ದುಂಡುಮುಖದ ಅಂದಕ್ಕೆ ಕಳೆಗೂಡಿಸಿದ್ದವು. ಆರೋಗ್ಯ ಸೂಸುವ ಮೈಕಟ್ಟಿನ ಆಕೆಯ ಮೈಕಾಂತಿಯೂ ಆಕರ್ಷಕವಾಗಿತ್ತು. ರಾಜೇಶ ಅವಳನ್ನು ನೋಡಿದವನೆ, “ಹೋ! ನೀನಾ!!” ಎಂದು ಉದ್ಗರಿಸಿ, ಪುಸ್ತಕವನ್ನು ಪುಟಗುರುತು ತಪ್ಪದಂತೆ ಮೇಜಿನಮೇಲೆ ಕವುಚಿ ಇಟ್ಟು, ಎದ್ದು ಹೊರಗೆ ಬಂದ. ಅಲ್ಲಿಯೇ ಬಂದವಳ ಜತೆಗೆ ಏನೋ ಮಾತನಾಡಿ, ಅವಳ ಜತೆಗೆ ರಾಜೇಶನೂ ಹೊರಟುಹೋದ.

ರಾಜೇಶ ಅವಳನ್ನು ಹೆಸರು ಹಿಡಿದು ಕರೆಯದ ಕಾರಣ ಬಂದವಳು ಯಾರೆಂದು ಇಬ್ಬರಿಗೂ ಗೊತ್ತಾಗಲಿಲ್ಲ.

ಸುರೇಖಾ ಟೀಚರ್ ಬಂದಿದ್ದ ಯುವತಿಯ ಬಗ್ಗೆ ಕುತೂಹಲಗೊಂಡು ಡ್ರಿಲ್ ಮಾಸ್ಟರನ್ನು ಕೇಳಿದರು, “ಇವಳೇ ರಾಗಿಣಿಯಾ?”

ಬಿ. ಜನಾರ್ದನ ಭಟ್

ಯಾಕೆಂದರೆ ರಾಜೇಶನ ಪರಿಚಯದ ಯಾರಾದರೂ ಯುವತಿಯರು ಅಥವಾ ಅವನ ಮದುವೆಯ ಸಾಧ್ಯತೆ ಇತ್ಯಾದಿ ವಿಚಾರಗಳು ಬಂದಾಗಲೆಲ್ಲ ಅವನ ಸಹೋದ್ಯೋಗಿಗಳಿಗೆ ಅವರು ಯಾರೂ ಕಾಣದೆ ಇದ್ದ ರಾಗಿಣಿ ಎಂಬ ಸುಂದರಿಯ ಹೆಸರಿನ ನೆನಪು ಸುಳಿದುಹೋಗುವುದು! ಅವಳನ್ನು ನೋಡಿದ್ದ ರಮೇಶ ಮಾಸ್ಟರರೆ ಅವಳ ಬಗ್ಗೆ ಅಧಿಕೃತವಾಗಿ ಹೇಳಬಲ್ಲ ಸಂಪನ್ಮೂಲ ವ್ಯಕ್ತಿ.

ರಮೇಶ ಪಳ್ಳ ಆ ಅರಿವಿನಿಂದಲೇ ಸುರೇಖಾ ಟೀಚರಿಗೆ ತಿಳಿಯಹೇಳಿದರು, “ಅಲ್ಲಪ್ಪ! ರಾಗಿಣಿ ಒಳ್ಳೆ ಫಿಲ್ಮ್ ಸ್ಟಾರ್ ಹಾಗಿದ್ದಾಳೆ!”

ಸುರೇಖಾ ಟೀಚರ್, “ಇವಳೂ ಚೆಂದ ಇದ್ದಾಳಲ್ಲ?” ಎಂದರು.

ಇವಳಿಗಿಂತ ತುಂಬ ಚೆಂದ ಇದ್ದಾಳೆ ಅಂದರೆ ರಾಗಿಣಿ ಅಪ್ರತಿಮ ಸುಂದರಿಯೇ ಇರಬಹುದು. ಸುರೇಖಾ ಟೀಚರಿಗೆ ಈಗ ಬಂದ ಯುವತಿಯ ವಿಚಾರಕ್ಕಿಂತಲೂ ರಾಗಿಣಿ ಯಾವ ಫಿಲ್ಮ್ ಸ್ಟಾರಿನ ಹಾಗಿದ್ದಾಳೆ ಎಂದು ತಿಳಿದುಕೊಳ್ಳುವ ಕುತೂಹಲ ತಕ್ಷಣಕ್ಕೆ ಆದ್ಯತೆಯದಾಯಿತು. “ಹೌದಾ, ರಾಗಿಣಿ ಯಾರ ಹಾಗೆ ಇದ್ದಾಳೆ?” ಎಂದು ಕೇಳಿದರು.

ರಮೇಶ ಪಳ್ಳ, “ಯಾರ ಹಾಗೆ ಎಂದು ಹೇಳಲು ನಾನೇನೂ ನಿಮ್ಮ ಹಾಗೆ ಸಿನಿಮಾಕ್ಕೆಲ್ಲ ಹೋಗುವವನಲ್ಲ…. ಯಾರ ಹಾಗೆ ಎಂದು ಹೇಳುವುದಪ್ಪ!?….. ತೆಲುಗಿನಲ್ಲಿ ರಾಗಿಣಿಯ ಹಾಗಿನವಳು ಅನುಷ್ಕಾ ಅಂತ ಒಬ್ಬಳು ಹೊಸ ಹೀರೋಯಿನ್ ಇದ್ದಾಳೆ, ಅವಳ ಹಾಗೆ ಎನ್ನಬಹುದು” ಎಂದರು.

“ಸಿನಿಮಾ ನೋಡುವುದಿಲ್ಲ ಎನ್ನುತ್ತೀರಿ ಪಳ್ಳ ಸರ್, ತೆಲುಗಿನ ಹೀರೋಯಿನ್‌ಗಳು ಕೂಡ ಗೊತ್ತುಂಟು ನಿಮಗೆ!” ಎಂದು ಸುರೇಖಾ ಮೇಡಮ್ ಡ್ರಿಲ್ ಮಾಸ್ಟರರ ಕಾಲೆಳೆದರು. ಅದಕ್ಕೆ ಉತ್ತರ ಹೇಳದೆ ಮಾಸ್ಟರರು ನಕ್ಕರು. ಸುರೇಖಾ ಮೇಡಮ್ ಕೂಡ ನಕ್ಕರು.

ರಮೇಶ್ ಪಳ್ಳ ಅವರು ಈಗ ಬಂದ ಯುವತಿಯನ್ನೇ ಕುರಿತು ಯೋಚಿಸುತ್ತ, “ಅಲ್ಲ ಮೇಡಮ್, ರಾಜೇಶ ಮಾಸ್ಟರಿಗೆ ಆ ರಾಗಿಣಿಯ ಹಿಂದೆ ಹೋಗುವುದಕ್ಕಿಂತ ಇಂತಹ ಲಕ್ಷಣವಾದ ಹುಡುಗಿಯೊಬ್ಬಳನ್ನು ಮದುವೆಯಾಗಬಹುದಿತ್ತಲ್ಲ!” ಎಂದರು.

“ಈಗಲಾದರೂ ಏನು! ಕಾಲ ಮಿಂಚಿಲ್ಲವಲ್ಲ? ರಾಜೇಶ ಮಾಸ್ಟರರು ಇನ್ನೂ ಬ್ಯಾಚುಲರ್ ಅಲ್ವಾ?” ಎಂದು ಸುರೇಖಾ ಮೇಡಮ್ ತಮ್ಮದೂ ಒಂದು ಒಗ್ಗರಣೆ ಹಾಕಿದರು.

“ಯಾರನ್ನು ಆಗುವುದು?”

“ಈಗ ಬಂದವರನ್ನು. ಅವರಿಬ್ಬರು ಹತ್ತಿರ ನಿಂತು ಮಾತಾಡಿದ ರೀತಿಯಲ್ಲೇ ಅವರು ತುಂಬಾ ಕ್ಲೋಸ್ ಇದ್ದಾರೆ ಎಂದು ಗೊತ್ತಾಗುತ್ತದೆ” ಎಂದರು ಸುರೇಖಾ ಮೇಡಮ್.

ರಮೇಶ ಮಾಸ್ಟರು ನಕ್ಕರು. “ಈಗ ಬಂದ ಹೆಂಗಸಿಗೆ ಮದುವೆ ಆಗಿಲ್ಲ ಎಂದು ಹೇಳುತ್ತೀರಾ ಮೇಡಮ್? ಮದುವೆ ಆದವರ ಹಾಗೆ ಇದ್ದಾರಲ್ಲ? ನಿಮ್ಮ ತಲೆ ಜಾಸ್ತಿಯೇ ಫಾಸ್ಟಾಗಿ ಓಡುತ್ತದೆ! ನಾನು ಹಾಗೆ ಹೇಳಿದ್ದಲ್ಲ, ಈ ಹೆಂಗಸನ್ನು ನೋಡಿ, ರಾಗಿಣಿಯಿಂದಾದ ಬೇಸರವನ್ನು ಬಿಟ್ಟು ಬೇರೆ ಯಾರನ್ನಾದರೂ ಮದುವೆ ಆಗಬಹುದಿತ್ತು ಎಂದು ಅನಿಸಿತು…. ಅಷ್ಟೆ. ಇವರನ್ನೇ ಆಗಬೇಕೆಂದು ಹೇಳುವುದಕ್ಕೆ ನಾವು ಯಾರು?”

ಹೀಗೆ ಅವರ ಹರಟೆ ಸಾಗಿತು. ಸ್ವಲ್ಪ ಹೊತ್ತಿನಲ್ಲಿ ಆಟೋರಿಕ್ಷವೊಂದು ಮೈದಾನವನ್ನು ದಾಟಿ ಗೇಟಿನ ಮೂಲಕ ಹೊರಗೆ ಹೋದುದನ್ನು ಅವರು ಕಿಟಿಕಿಯ ಮೂಲಕ ಕಂಡರು. ಬಹುಶಃ ಆ ಯುವತಿ ಬಂದಿದ್ದ ಆಟೋರಿಕ್ಷ ಅದು. ಆಮೇಲೆ ಸಹೋದ್ಯೋಗಿ ಗಳಿಗೆೆ ರಾಜೇಶ ಮಾಸ್ಟರು ಅರ್ಧದಿನ ರಜೆ ಹಾಕಿ, ಬಂದಿದ್ದ ಯುವತಿಯ ಜತೆಗೆ ಹೋದರೆನ್ನುವ ಸುದ್ದಿ ಸಿಕ್ಕಿತು.

ರಮೇಶ ಮಾಸ್ಟರು ಸ್ವಲ್ಪ ಹೊತ್ತಿನಲ್ಲಿ ಅದರ ಪೂರ್ವಾಪರವನ್ನೆಲ್ಲ ತಿಳಿದುಕೊಂಡು ಬಂದು ಸುರೇಖಾ ಟೀಚರಿಗೂ, ಶಿಕ್ಷಕರ ಕೊಠಡಿಯ ಇತರರಿಗೂ ತಿಳಿಸಿದರು. ಬಂದಿದ್ದವಳು ರಾಜೇಶ ಮಾಸ್ಟರರ ಸೋದರ ಮಾವ ಸುಧಾಕರ ವರ್ಕಾಡಿಯವರ ಮಗಳು ಕಲ್ಯಾಣಿ ಎಂಬುವಳAತೆ. ಅವಳಿಗೆ ಮದುವೆಯಾಗಿದೆ.

ರಾಜೇಶ ಮಾಸ್ಟರರ ಮಾವ ಸುಧಾಕರ ವರ್ಕಾಡಿಯವರು ಅದೇ ಶಾಲೆಯಲ್ಲಿ ಜವಾನರಾಗಿದ್ದು ಈಗ ನಿವೃತ್ತರಾಗಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ಶಾಲೆಯವರಿಗಷ್ಟೇ ಅಲ್ಲ, ಊರಿನಲ್ಲಿ ಎಲ್ಲರಿಗೂ ಗೊತ್ತಿರುವ ವ್ಯಕ್ತಿ ಸುಧಾಕರ ವರ್ಕಾಡಿ. ನಿವೃತ್ತರಾದ ಮೇಲೆ ಪೂರ್ಣಾವಧಿ ಇಲೆಕ್ಟಿçಕಲ್ ಕಂಟ್ರಾಕ್ಟರರಾಗಿ ಅವರು ಎಲ್ಲರಿಗೂ ಗೊತ್ತಿರುವವರು. ಅವರದು ಒಂದು ಇಲೆಕ್ಟ್ರಿಕಲ್ಸ್ ಅಂಗಡಿಯೂ ಇದೆ. ಬಂದಿದ್ದ ಯುವತಿ ಅವರ ಮಗಳು ಎಂಬ ಸುದ್ದಿ ಕೇಳಿ, ಎಲ್ಲರಿಗೂ ಹುಟ್ಟಿದ್ದ ಕುತೂಹಲ ಅಲ್ಲಿಗೇ ತಣಿಯಿತು.

ಇದನ್ನೂ ಓದಿ | ಹೊಸ ಪುಸ್ತಕ | ಪ್ರೀತಿಯಿಂದ ರಮೇಶ್‌ | ನಿಮ್ಮಲ್ಲಿರುವ ಅತಿ ದೊಡ್ಡ ರಿಯಲ್‌ ಎಸ್ಟೇಟ್‌ ಯಾವುದು ಗೊತ್ತೆ?

ತೋರಣಪದವು ವಿದ್ಯಾವರ್ಧಕ ಜೂನಿಯರ್ ಕಾಲೇಜಿನ ಹೈಸ್ಕೂಲು ವಿಭಾಗದ ಸಮಾಜ ವಿಜ್ಞಾನದ ಶಿಕ್ಷಕ ರಾಜೇಶನನ್ನು ಅವನ ಮಿತ್ರರು ಮತ್ತು ಕೆಲವರು ಆರ್.ಕೆ. ಮಾಸ್ಟರರೆಂದು ಕರೆಯುತ್ತಾರೆ. ಅವನ ಪೂರ್ತಿ ಹೆಸರು ರಾಜೇಶ ಕಾರಂಗಳ ಎಂದು. ಅವನಿಗೆ ನಲುವತ್ತಮೂರು ವರ್ಷ ವಯಸ್ಸು, ಆದರೆ ಮದುವೆಯಾಗದೆ ಉಳಿದಿದ್ದಾನೆ. ಮದುವೆ ಆಗದೆ ಉಳಿದಿರುವುದು ಯಾಕೆ ಎನ್ನುವುದನ್ನು ಅವನು ಯಾರ ಬಳಿಯೂ ಚರ್ಚಿಸುತ್ತಿರಲಿಲ್ಲ. ಅವನ ಗಂಭೀರ ವ್ಯಕ್ತಿತ್ವದ ಕಾರಣ ಯಾರಿಗೂ ಅವನ ಬಳಿ ಆ ಬಗ್ಗೆ ಮಾತನಾಡಲು ಧೈರ್ಯವೂ ಬರುತ್ತಿರಲಿಲ್ಲ.
ರಾಜೇಶನದು ಎತ್ತರದ ಆಕರ್ಷಕ ವ್ಯಕ್ತಿತ್ವ. ಕ್ರಿಕೆಟ್, ಬ್ಯಾಡ್ಮಿಂಟನ್ ಆಡುತ್ತಾ ಹೊಟ್ಟೆ ಬಾರದ ಹಾಗೆ ನೋಡಿಕೊಂಡು ಸ್ಲಿಮ್ ಆಗಿದ್ದಾನೆ. ನೋಡಲು ಮೂವತ್ತೆöÊದು ವರ್ಷದ ಯುವಕನಂತೆ ಕಾಣುತ್ತಾನೆ. ಜಿಲ್ಲೆಯ ಹವ್ಯಾಸೀ ತುಳು ಮತ್ತು ಕನ್ನಡ ನಾಟಕಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದ ಅವನಿಗೆ ಆ ಕ್ಷೇತ್ರದಲ್ಲೂ ಒಳ್ಳೆಯ ಹೆಸರಿತ್ತು. ಅವನು ಸಾಹಿತ್ಯ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಪ್ರವೇಶ ಪಡೆದಿರುವ ಕವಿ-ಸಾಹಿತಿಯೂ ಹೌದು. ನೀಟಾಗಿ ಬಟ್ಟೆ ಧರಿಸುವ ಅಭಿರುಚಿಯೂ; ಗಂಭೀರವಾಗಿ, ಸ್ಪಷ್ಟವಾಗಿ ಮಾತನಾಡುವ ಕಲೆಯೂ ಅವನಿಗೆ ರಂಗಭೂಮಿಯಲ್ಲಿ ಸಿಕ್ಕಿದ ಅನುಭವದ ಫಲ. ಅವನ ರೂಪ ದೈವದತ್ತವಾದುದು.

ರಾಜೇಶನನ್ನು ಹುಡುಕಿಕೊಂಡು ಬಂದಿದ್ದ ಕಲ್ಯಾಣಿ ಅವಳ ಗಂಡನ ಮನೆಯಿದ್ದ ನಂದರಪಲ್ಕೆಯಿಂದಲೇ ಒಂದು ಆಟೋರಿಕ್ಷ ಮಾಡಿಕೊಂಡು ಬಂದಿದ್ದಳು. ತಾನು ಎದುರಿಸಬೇಕಾಗಿ ಬಂದಿದ್ದ ಒಂದು ವಿಚಿತ್ರ ಸಂಕಟದ ಸನ್ನಿವೇಶವನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ಆರ್ತಳಾಗಿ, ದಾರಿಕಾಣದೆ ರಾಜೇಶನ ಬಳಿಗೆ ಅವಳೀಗ ಬಂದಿದ್ದಳು. ಮನೆಗೆ ಹೋದರೆ ಅಪ್ಪ ಅಮ್ಮ ನೊಂದುಕೊಳ್ಳುವರೆAದು ಕಲ್ಯಾಣಿ ನೇರವಾಗಿ ವಿದ್ಯಾವರ್ಧಕ ಹೈಸ್ಕೂಲಿಗೆ ಬಂದು ರಾಜೇಶನ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಳು.

ಎರಡು ದಿನಗಳ ಹಿಂದೆ, ಸೋಮವಾರ ಅವಳ ತವರು ಮನೆಯವರು ಕುಲದೇವರಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುವ ಕಾರ್ಯಕ್ರಮ ಇತ್ತು. ಅದಕ್ಕಾಗಿ ಅವಳನ್ನು ತವರುಮನೆಗೆ ಕಳುಹಿಸಿಕೊಡಲು ಅವಳ ಅಪ್ಪ ಸುಧಾಕರ ವರ್ಕಾಡಿಯವರು ಕಳೆದ ವಾರವೇ ಅವಳ ಗಂಡ ಮೋಹನನಿಗೆ ಫೋನ್ ಮಾಡಿ ತಿಳಿಸಿದ್ದರು. ಅವನು ಅದನ್ನು ತನ್ನ ಅಪ್ಪ ಅಮ್ಮನಿಗೆ ಹೇಳಿ, ಅವರ ಅನುಮತಿ ಪಡೆದು, ಮತ್ತೆ ಮಾವನಿಗೆ ಫೋನ್ ಮಾಡಿ, ‘ಅಮ್ಮ ಆಯ್ತು ಅಂತ ಹೇಳಿದರು…. ಶನಿವಾರ ಕರೆದುಕೊಂಡು ಹೋಗಬಹುದಂತೆ’ ಎಂದು ಹೇಳಿದ್ದ. ಶನಿವಾರ ವರ್ಕಾಡಿಯವರು ತಮ್ಮ ಪರಿಚಯದ ಆಟೋರಿಕ್ಷ ಒಂದರಲ್ಲಿ ತಾವೇ ಹೋಗಿ ಮಗಳನ್ನು ಕರೆದುಕೊಂಡು ಬಂದಿದ್ದರು. ಅವರ ಬಳಿ ಇಲೆಕ್ಟಿçಕಲ್ಸ್ನ ಕೆಲಸಗಳಿಗಾಗಿ ಅವರ ಹುಡುಗರು ಬಳಸುವ ಒಂದು ಹಳೆಯ ಜೀಪು ಇದ್ದರೂ ವರ್ಕಾಡಿಯವರು ಅದನ್ನು ಬಳಸುತ್ತಿರಲಿಲ್ಲ. ಅವರು ಸ್ವಂತಕ್ಕೆ ಬಳಸುತ್ತಿದ್ದದ್ದು ಬೈಕನ್ನೆ.

ಕಲ್ಯಾಣಿಯನ್ನು ಕಳುಹಿಸಿಕೊಡುವಾಗ ಮೋಹನನ ಅಮ್ಮ ಅಮಣಕ್ಕ ‘ಪೂಜೆ ಭಾನುವಾರ ಅಲ್ವಾ, ಸೋಮವಾರ ಕಲ್ಯಾಣಿ ಬಂದುಬಿಡಲಿ, ಇಲ್ಲಿಯೂ ಕಷ್ಟವಾಗುತ್ತದೆ’ ಎಂದು ಹೇಳಿದ್ದರು.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಎಲ್ಲರೂ ಕುರುಡರಾದಾಗ ಉಳಿದ ಒಬ್ಬಳೇ ಮಹಿಳೆಯ ಕಥೆ

ವರ್ಕಾಡಿಯವರು ಕುಲದೇವರ ಸನ್ನಿಧಾನದಲ್ಲಿ ಪೂಜೆ ಇಟ್ಟುಕೊಂಡದ್ದು ಕಲ್ಯಾಣಿಯ ಸಲುವಾಗಿಯೇ; ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಿಲ್ಲದ ಅವಳಿಗೆ ಮಕ್ಕಳಾಗಲಿ ಎಂದೇ ಆಗಿತ್ತು. ಅಳಿಯ ಮೋಹನ ಅವನ ಅಮ್ಮನ ಲಕ್ಷ್ಮಣರೇಖೆಯನ್ನು ದಾಟಿ ಎಲ್ಲಿಗೂ ಹೋಗುವವನಲ್ಲ. ಹಾಗಾಗಿ ಅಳಿಯನನ್ನು ಅವರು ಕರೆದಿರಲಿಲ್ಲ. ಮಗಳನ್ನು ಮಾತ್ರ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿ ಬಂದಿದ್ದರು. ಕಲ್ಯಾಣಿಯ ಅಮ್ಮ ವತ್ಸಲಕ್ಕ ಮಗಳಿಗೆ ಸ್ವಲ್ಪ ಆರೈಕೆ ಮಾಡಿ, ಅವಳ ಇಷ್ಟದ ತಿಂಡಿ ತಿನಸುಗಳನ್ನು ಮಾಡಿಹಾಕುವ ಉದ್ದೇಶದಿಂದ ಅವಳನ್ನು ಮರುದಿನ ಸೋಮವಾರವೇ ಕಳುಹಿಸಿಕೊಟ್ಟಿರಲಿಲ್ಲ. ಮಂಗಳವಾರ ವಾರದೋಷ ಎಂದು ಇನ್ನೊಂದು ದಿನ ಉಳಿಸಿಕೊಂಡು, ಬುಧವಾರ ಕಳುಹಿಸಿಕೊಟ್ಟದ್ದು ಕಲ್ಯಾಣಿಯ ಅತ್ತೆಮನೆಯಲ್ಲಿ ದೊಡ್ಡ ಗಲಾಟೆಗೆ ಕಾರಣವಾಯಿತು.

ಆ ದಿನ ಬೆಳಿಗ್ಗೆ ತಿಂಡಿ ಆದಮೇಲೆ ಸುಧಾಕರ ವರ್ಕಾಡಿಯವರು ತಮ್ಮ ಮಾಮೂಲಿ ಆಟೋರಿಕ್ಷದಲ್ಲಿ ಅವಳನ್ನು ನಂದರಪಲ್ಕೆಗೆ ಕಳುಹಿಸಿಕೊಟ್ಟಿದ್ದರು. ಅವರಿಗೆ ಆ ದಿನ ಒಂದು ಹೊಸ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸುವ ಅಗತ್ಯದ ಕೆಲಸ ಇದ್ದದ್ದರಿಂದ ಅವರಿಗೆ ತಾವೇ ಸ್ವತಃ ಹೋಗಿ ಮಗಳನ್ನು ಬಿಟ್ಟುಬರಲು ಆಗಿರಲಿಲ್ಲ. ನಂದರಪಲ್ಕೆಯೇನೂ ತುಂಬಾ ದೂರದ ಊರಲ್ಲ, ಐದು ಕಿಲೋಮೀಟರ್ ದೂರದ ಪಕ್ಕದ ಊರು. ಹಾಗಾಗಿ ಕಲ್ಯಾಣಿ ಒಬ್ಬಳೇ ಹೋಗಿ ಬರುತ್ತಿದ್ದದ್ದು ಅಪರೂಪವಲ್ಲ. ಗಂಡ ಮೋಹನ ಮಾತ್ರ ಈ ಜವಾಬ್ದಾರಿಯನ್ನು ಒಮ್ಮೆಯೂ ಹೊತ್ತಿದ್ದವನಲ್ಲ.

ಕಲ್ಯಾಣಿ ಆಟೋರಿಕ್ಷದಲ್ಲಿ ಬಂದು ಮನೆಯ ಸಮೀಪ ಇಳಿದು, ಕೈಚೀಲ ಹಿಡಿದುಕೊಂಡು ಅಂಗಳಕ್ಕೆ ಬರುತ್ತಿದ್ದಂತೆ ಅಂಗಳದಲ್ಲಿದ್ದ ಅಮಣಕ್ಕನೂ, ಜಗಲಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಮಾವ ಶೀನಪ್ಪಯ್ಯನೂ ತಕ್ಷಣ ಎದ್ದು ದುಡುದುಡು ಎಂದು ಮನೆಯ ಒಳಗೆ ಹೋಗಿ, ಬಾಗಿಲು ಹಾಕಿ ಚಿಲಕ ಹಾಕಿಕೊಂಡರು. ಕಲ್ಯಾಣಿ ಏನು ಮಾಡಬೇಕೆಂದು ತಿಳಿಯದೆ, “ಅತ್ತೇ….. ಅತ್ತೇ….” ಎಂದು ಹಲವು ಬಾರಿ ಕರೆದಳು. ಸುಮಾರು ಅರ್ಧ ಗಂಟೆಯ ಕಾಲ ಒಳಗಿನಿಂದ ಸದ್ದಿಲ್ಲ. ಕಲ್ಯಾಣಿ ಏನು ಮಾಡುವುದೆಂದು ತೋಚದೆ, ಜಗಲಿಯಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ತನ್ನನ್ನು ನೋಡಿಯೇ ಅವರಿಬ್ಬರೂ ಒಳಗೆ ಹೋದುದಕ್ಕೆ ಸಂಶಯವೇನೂ ಇರಲಿಲ್ಲ. ತನ್ನನ್ನು ಮನೆಗೆ ಸೇರಿಸದಿದ್ದರೆ ಏನು ಮಾಡುವುದು ಎಂದು ಅವಳಿಗೆ ತಿಳಿಯಲಿಲ್ಲ. ಆಮೇಲೆ ಧೈರ್ಯವಹಿಸಿ, ಮತ್ತೊಮ್ಮೆ ಪ್ರಯತ್ನಿಸೋಣ ಎಂದು, “ಅತ್ತೇ…. ಬಾಗಿಲು ತೆರೆಯಿರಿ” ಎಂದು ಬಾಗಿಲಿಗೆ ದಬದಬನೆ ಬಡಿದಳು.

ಆಗ ಅತ್ತೆ ರೌದ್ರಾವತಾರ ತಾಳಿ, ಕಿಟಕಿಯಿಂದಲೇ ಕಲ್ಯಾಣಿಗೂ ಅವಳ ಅಪ್ಪ ಅಮ್ಮನಿಗೂ ಮನುಷ್ಯರು ಕೇಳಲಾಗದ ಭಾಷೆಯಲ್ಲಿ ಬಯ್ಯತೊಡಗಿದರು. ಹೆಂಗಸಾಗಿ ಅಂತಹ ಭಾಷೆಯನ್ನೆಲ್ಲ ಬಳಸುವ ಅತ್ತೆಯನ್ನು ನೋಡಿ ಕಲ್ಯಾಣಿಗೆ ಅಳು ಉಕ್ಕಿ ಬಂತು. ಜಗಲಿಯಲ್ಲಿ ಕುಸಿದು ಕುಳಿತು ಜೋರಾಗಿ ಅಳತೊಡಗಿದಳು. ಅಮಣಕ್ಕನ ಸಿಟ್ಟು ಕಡಿಮೆಯಾಗದೆ ದಡಕ್ಕನೆ ಬಾಗಿಲು ತೆರೆದು ಅಂಗಳಕ್ಕೆ ಓಡಿ ಬಂದು, ನಾಟಕೀಯವಾಗಿ ಕಲ್ಯಾಣಿಯ ಎದುರು ಕಾಲು, ಕೈ, ಬಾಯಿ, ಮುಖ, ಕಣ್ಣುಗಳಿಂದೆಲ್ಲ ರೋಷದ ಅಭಿನಯವನ್ನು ಮಾಡುತ್ತ ಮತ್ತಷ್ಟು ಹಂಗಿಸಿದರು.

ಕಲ್ಯಾಣಿ ಅವರ ರೌದ್ರಾವೇಶವನ್ನು ನೋಡಲಾಗದೆ ಜಗಲಿಯಂಚಿನಲ್ಲಿ ಕುಳಿತಿದ್ದವಳು ತಲೆಯನ್ನು ಬಾಗಿಸಿ, ಮುಖಮುಚ್ಚಿಕೊಂಡು ಮೌನವಾಗಿ ಕಣ್ಣೀರು ಸುರಿಸತೊಡಗಿದಳು. ಅತ್ತೆ ಆರ್ಭಟಿಸಿ ಆರ್ಭಟಿಸಿ ಸೋತು ಮತ್ತೆ ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಹೀಗೆಯೇ ಕಾಲ ಸರಿದು ಮಧ್ಯಾಹ್ನವಾಯಿತು. ಮೋಹನ ತನ್ನ ಬಜಾಜ್ ಚೇತಕ್ ಸ್ಕೂಟರಿನಲ್ಲಿ ಊಟಕ್ಕೆ ಬಂದವನು ಜಗಲಿಯಲ್ಲಿ ಅತ್ತು ಅತ್ತು ಬಸವಳಿದು ಕುಳಿತಿದ್ದ ಕಲ್ಯಾಣಿಯನ್ನು ನೋಡಿದ. ಅವಳು ಯಾಚನೆಯ ದೃಷ್ಟಿಯಿಂದ ಅವನನ್ನು ನೋಡಿದಾಗ ಅವನು ದೃಷ್ಟಿ ತಪ್ಪಿಸಿಕೊಂಡ. ಅವನು ಅವಳನ್ನು ಮಾತನಾಡಿಸುವ ಮುಂಚೆಯೇ ಅಮಣಕ್ಕ ಹೊರಗೆ ಓಡಿಬಂದು, “ಮೋಹನಾ, ಕಲ್ಯಾಣಿಯನ್ನು ನಾನೇ ಹೊರಗೆ ನಿಲ್ಲಿಸಿದ್ದು. ಅವಳಿಗೆ ಸ್ವಲ್ಪ ಬುದ್ಧಿ ಬರಲಿ. ನೀನು ಊಟ ಮಾಡಿ ಹೋಗು…. ಅವಳ ವಿಷಯ ನಾನು ನೋಡಿಕೊಳ್ಳುತ್ತೇನೆ” ಎಂದರು.

ಇದನ್ನೂ ಓದಿ | Sunday Read | ಹೊಸ ಪುಸ್ತಕ | ಇದಿರು ನೋಟದ ಪ್ರತಿಮೆಗಳು

ಮೋಹನ ಮೌನವಾಗಿ ತಲೆತಗ್ಗಿಸಿಕೊಂಡು ತಾನು ಊಟ ಮಾಡಿ ಸೊಸೈಟಿಗೆ ಹೊರಟುಹೋದ. ಆಗ ಕಲ್ಯಾಣಿಗೆ ತನಗಿದ್ದ ಕೊನೆಯ ಆಸರೆಯೂ ತಪ್ಪಿಹೋದುದು ಖಚಿತವಾಯಿತು. ಅವಳು ತನ್ನ ಚೀಲವನ್ನು ಹಿಡಿದುಕೊಂಡು, ಬಿರಬಿರನೆ ಹೆಜ್ಜೆ ಹಾಕಿ, ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿದ್ದ ಮುಖ್ಯ ರಸ್ತೆಗೆ ಬಂದಳು. ಸ್ವಲ್ಪ ಹೊತ್ತಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಖಾಲಿ ಆಟೋರಿಕ್ಷವನ್ನು ನಿಲ್ಲಿಸಿ, ನೇರವಾಗಿ ರಾಜೇಶನ ಬಳಿಗೆ ಬಂದಳು.

ಪುಸ್ತಕ: ಗಮ್ಯ (ಕಾದಂಬರಿ)

ಲೇಖಕ: ಬಿ.ಜನಾರ್ದನ ಭಟ್‌

ಪ್ರಕಾಶನ: ಅಂಕಿತ ಪ್ರಕಾಶನ, ಬೆಂಗಳೂರು

Exit mobile version