| ಪ್ರೊ.ಆರ್.ಜಿ. ಹೆಗಡೆ
ದೇಶಕ್ಕೆ ಗಾಂಧಿ ಕೊಡುಗೆಯ ಮರು ಮೌಲ್ಯಮಾಪನ ನಡೆಯುತ್ತಿರುವಂತಿದೆ. ಗಾಂಧಿ ಪುಣ್ಯತಿಥಿಯ ದಿನ ಹಲವು ಲೇಖನಗಳು, ಮಾತುಗಳು ಬಂದವು. ಅಂತಹ ಅಭಿಪ್ರಾಯಗಳು ಹಿಂದೆಯೂ ನಿರಂತರವಾಗಿ ಬಂದಿವೆ. ಅವುಗಳಲ್ಲಿ ಕೆಲವು ನೇರವಾಗಿ, ಕೆಲವು ಸೂಕ್ಷ್ಮವಾಗಿ ಹೇಳಿದ್ದು ಒಂದೇ. ಏನೆಂದರೆ ಗಾಂಧಿ ಹೆಚ್ಚುಕಡಿಮೆ ಅಪ್ರಸ್ತುತ. ಕೆಲವು ಬರಹಗಳು ಇನ್ನೂ ಒಂದು ಮಾತು ಹೇಳಿದವು. ಏನೆಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಗಾಂಧಿಯ ಪಾತ್ರ ಹೇಳುವಷ್ಟು ದೊಡ್ಡದೇನೂ ಇರಲಿಲ್ಲ. ಬ್ರಿಟಿಷರು ಗಾಂಧಿ ಚಳವಳಿಗೆ ಹೆದರಿ ಬಿಟ್ಟು ಹೋದರೆನ್ನುವುದು ಹಾಸ್ಯಾಸ್ಪದ ಮಾತು. ಮತ್ತೆ ಕೆಲವು ಗಾಂಧಿ ಹಿಂದೂ ಧರ್ಮಕ್ಕೆ ದೊಡ್ಡ ಅಪಚಾರ ಮಾಡಿ ಇನ್ನೊಂದು ಧರ್ಮವನ್ನು ಎತ್ತಿಹಿಡಿದರು ಎಂಬ ಅಭಿಪ್ರಾಯವನ್ನೂ ಮಂಡಿಸಿವೆ/ಸುತ್ತಲೇ ಇವೆ (ದೀರ್ಘಕಾಲದಿಂದ ಪ್ರಚಲಿತವಿರುವ ಮಾತು). ಗೋಡ್ಸೆ ಗಾಂಧಿಯನ್ನು ಏಕೆ ಕೊಲ್ಲಬೇಕಾಯಿತು ಎನ್ನುವುದನ್ನು ಹಲವು ಕಾರಣಗಳ ಮೂಲಕ ಅವು ವಿಶದೀಕರಿಸಿವೆ/ಕರಿಸುತ್ತಿವೆ. ಅಂದರೆ ಗೋಡ್ಸೆಗೆ ಬಲವಾದ ಕಾರಣಗಳಿದ್ದವು ಎನ್ನುವುದು ವಾದ.
ಐತಿಹಾಸಿಕ ವ್ಯಕ್ತಿಗಳನ್ನು, ಘಟನೆಗಳನ್ನು ಮರುಮೌಲ್ಯಮಾಪನ ಮಾಡುವುದು ತಪ್ಪೇನೂ ಅಲ್ಲ. ಹಾಗೆಯೇ ಅಭಿಪ್ರಾಯಗಳಿಗೆಲ್ಲ ಉತ್ತರ ಬರೆದು ಗಾಂಧೀಜಿಯನ್ನು ‘ರಕ್ಷಿಸುವ’ ಅಗತ್ಯವೂ ಇಲ್ಲ. ಬದುಕಿರುವಾಗ ಕೂಡ ಆತ ತಮ್ಮನ್ನು ವಿಮರ್ಶೆಗಳಿಗೆ ತೆರೆದೇ ಇಟ್ಟಿದ್ದರು. ತಪ್ಪಿದ್ದಿದ್ದು ಗೊತ್ತಾದರೆ ಪಶ್ಚಾತ್ತಾಪ ಪಡುತ್ತಿದ್ದರು. ಕ್ಷಮೆ ಕೇಳುತ್ತಿದ್ದರು. ಸರಿಪಡಿಸಿಕೊಳ್ಳುತ್ತಿದ್ದರು. ಹಾಗಾಗಿ ಗಾಂಧಿ ಕುರಿತ ಹೊಸ, ಬೇರೆ ಬೇರೆ ದೃಷ್ಟಿಕೋನಗಳನ್ನು ನಿಂದಿಸುವ, ಖಂಡಿಸುವ ಅಗತ್ಯವೇನೂ ಇಲ್ಲ. ಆದರೂ ಈ ಹಿನ್ನೆಲೆಯಲ್ಲಿ ಬಹುಶಃ ನಾವು ಮಾಡಬೇಕಿರುವುದೆಂದರೆ ಗಾಂಧಿ ತತ್ವಗಳನ್ನು, ಗಾಂಧಿಯನ್ನು ಮತ್ತೊಮ್ಮೆ ನೋಡಿ ನಮ್ಮ ನಿಲುವುಗಳನ್ನು ಖಾತ್ರಿಪಡಿಸಿಕೊಳ್ಳುವುದು. ಈ ಲೇಖನದ ಉದ್ದೇಶ ಅದು.
1.. ಸಮಕಾಲೀನ ಗಾಂಧಿ ‘ವಿಮರ್ಶೆ’ಯ ಭಾಗವಾಗಿ ಬಂದಿರುವ ಮೊದಲ ಮಾತು ಗಾಂಧಿಯನ್ ಸತ್ಯಾಗ್ರಹಕ್ಕೆ ಬೆದರಿ ಬ್ರಿಟಿಷರು ಬಿಟ್ಟು ಹೋಗಲಿಲ್ಲ. ಅಂತಹ ಕ್ರೆಡಿಟ್ ಅನ್ನು ಗಾಂಧಿಗೆ ನೀಡುವುದು ಸರಿಯಲ್ಲ ಎನ್ನುವದು. ವಾದವನ್ನು ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ಈ ವಿಷಯವೇ ಗಾಂಧಿ ತತ್ವದ ಪ್ರಸ್ತುತತೆಯನ್ನು ಅಥವಾ ಅಪ್ರಸ್ತುತತೆಯನ್ನು ನಿರ್ಣಯಿಸುವ ಪ್ರಮುಖ ಅಂಶ. ಒಂದು ರೀತಿಯಲ್ಲಿ ನೋಡಿದರೆ ಬಂದಿರುವ ಮಾತು ಸರಿ. ಗಾಂಧಿ ಸತ್ಯಾಗ್ರಹಕ್ಕೆ ʻಹೆದರಿ’ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿರಲಿಕ್ಕಿಲ್ಲ. ಅಂತಹ ದಾಖಲೆಗಳೂ ಇದ್ದಂತಿಲ್ಲ. ಆದರೆ ಇಲ್ಲಿ ಒಂದು ಮಹತ್ವದ ವಿಷಯ. ಏನೆಂದರೆ ಸ್ವಾತಂತ್ರ್ಯ ಹೋರಾಟದ ಉದ್ದೇಶ ಕೂಡ ಬ್ರಿಟಿಷರನ್ನು ʻಹೆದರಿಸಿ’ ಓಡಿಸುವುದು ಇರಲಿಲ್ಲ. ಗಾಂಧಿ ಅಂತಹ ಭಾಷೆ ಮಾತನಾಡುತ್ತಿರಲಿಲ್ಲ. ಚಳವಳಿ ಬ್ರಿಟಿಷರ ʻವಿರುದ್ಧ’ ಇರಲೂ ಇಲ್ಲ. ಅಥವಾ ಅದು ಕೇವಲ ʻಸ್ವಾತಂತ್ರ್ಯ’ ಪಡೆಯುವ ಉದ್ದೇಶ ಹೊಂದಿದ ʻಹೋರಾಟ’ವೂ ಆಗಿರಲಿಲ್ಲ.
ಈ ಕುರಿತು ಅರಿಯಲು ಗಾಂಧಿ ಬರೆದ ಪುಸ್ತಕ ʻಹಿಂದ್ ಸ್ವರಾಜ್’ ಅನ್ನು ಓದಿಕೊಳ್ಳಬೇಕು. ತಮ್ಮ ʻಹೋರಾಟವನ್ನು’ ಆರಂಭಿಸುವುದಕ್ಕೆ ಮುನ್ನುಡಿಯಾಗಿ ಕೆಲವು ಪ್ರಶ್ನೆಗಳನ್ನು ಗಾಂಧಿ ತಮಗೆ ತಾವು ಕೇಳಿಕೊಳ್ಳುತ್ತಾರೆ. ಏನೆಂದರೆ ಬ್ರಿಟಿಷರ ವಿರುದ್ಧ ನಾವು ಯಾಕೆ ಹೋರಾಡಬೇಕು? ಅವರು ದೇಶವನ್ನು ಆಳಿದರೆ ಏನು ತೊಂದರೆ? ಸ್ವಾತಂತ್ರ್ಯ ಎಂದರೇನು? ಅವರನ್ನು ಓಡಿಸಿದ ನಂತರ ನಾವು ಯಾವ ರೀತಿಯ ಸರಕಾರವನ್ನು ರಚಿಸಬೇಕು? ಬಿಳಿ ಸಾಹಿಬ್‌ಗಳು(ಬ್ರಿಟಿಷರು) ಹೋಗಿ ಬ್ರೌನ್ ಸಾಹಿಬ್‌ಗಳು (ನಮ್ಮವರು) ಬಂದರೆ ಎಲ್ಲವೂ ಸರಿಹೋಗುತ್ತದೆಯೇ? ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತ ಗಾಂಧಿ ಗಾಢ ಚಿಂತನೆಯಲ್ಲಿ ತೊಡಗುತ್ತಾರೆ. ಓದಿನಲ್ಲಿ, ದೇಶಸಂಚಾರದಲ್ಲಿ, ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುತ್ತಾರೆ. ನಂತರ ತಮಗೆ ತಾವು ಸ್ಪಷ್ಟಪಡಿಸಿಕೊಳ್ಳುವುದೆಂದರೆ ಚಳವಳಿಯ ಉದ್ದೇಶ ಕೇವಲ ಬ್ರಿಟಿಷರನ್ನು ತೊಲಗಿಸುವುದು ಅಲ್ಲವೇ ಅಲ್ಲ. ಹೋರಾಟವಿರುವುದು ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ. ಆ ʻಸೈತಾನನ ಸಂಸ್ಕೃತಿ’ಯ ಅಥವಾ ʻವೇಶ್ಯಾ ಸಂಸ್ಕ್ರತಿʼಯ ವಿರುದ್ಧ. ಬೇರೆಲ್ಲೂ ಬಳಸದ ಕಟು ಶಬ್ದಗಳನ್ನು ಆ ಸಂಸ್ಕೃತಿಯನ್ನು ವರ್ಣಿಸಲು ಗಾಂಧಿ ಬಳಸುತ್ತಾರೆ.
ಪಾಶ್ಚಿಮಾತ್ಯ ಸಂಸ್ಕೃತಿಯ ವಿರುದ್ಧ ಗಾಂಧಿ ಇಂತಹ ನಿಲುವು ತಳೆಯುವುದಕ್ಕೆ ಕಾರಣಗಳಿವೆ. ಏನೆಂದರೆ ಅವರು ಭಾವಿಸಿದಂತೆ ಆ ಸಂಸ್ಕೃತಿ ಆತ್ಮವಿಲ್ಲದ, ನೈತಿಕತೆ ಪ್ರಧಾನವಲ್ಲದ ಸಂಸ್ಕೃತಿ. ಅದು ಮೆಟೀರಿಯಲಿಸ್ಟಿಕ್ ಆದ, ಸುಖಭೋಗಕ್ಕೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದಿಸುವುದು ಮತ್ತು ಇಂತಹ ಉಪಕರಣಗಳನ್ನು ಬಳಸಿ ಮನುಷ್ಯ ಸುಖಪಡುವುದಕ್ಕೆ ಪ್ರಾಮುಖ್ಯತೆ ನೀಡುವ ಸಂಸ್ಕೃತಿ. ಗಾಂಧಿ ಬಹುಶಃ ಭಾವಿಸಿದಂತೆ ಇಂತಹ ಸಂಸ್ಕೃತಿಗಳಿಂದಾಗಿಯೇ ಜಗತ್ತಿನಲ್ಲಿ ವಸಾಹತುಶಾಹಿ ಮನಸ್ಥಿತಿ ಹುಟ್ಟಿಕೊಂಡಿದ್ದು ಮತ್ತು ಜಾಗತಿಕ ಯುದ್ಧಗಳು ಸಂಭವಿಸಿದ್ದು. ಮತ್ತೂ ಅವರು ಭಾವಿಸಿದಂತೆ ಇಂತಹ ಮಟೀರಿಯಲಿಸಂನಿಂದಾಗಿಯೇ ಭಾರೀ ಪ್ರಮಾಣದ ಆರ್ಥಿಕ ಅಸಮಾನತೆ ಜಗತ್ತಿನಲ್ಲಿ ಆರಂಭವಾಗಿದ್ದು. ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಶ್ರೀಮಂತವಾಗುತ್ತ ಹೋಗಿ ಜಗತ್ತಿನ ಕೋಟ್ಯಂತರ ಜನ ಬಡವರಾಗಿ ಹೋಗಿದ್ದು. ಮತ್ತು ಇಂತಹ ಸಂಸ್ಕೃತಿಯಿಂದಾಗಿಯೇ ಜಗತ್ತಿನಾದ್ಯಂತ ಜನ ತಮ್ಮ ದೇಶದಲ್ಲಿಯೇ ಅನ್ಯರಾಗಿ ಹೋಗಿ, ಘನತೆಯನ್ನು ಕಳೆದುಕೊಂಡು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಹೋಗಿದ್ದು. ವಿಷಯವೆಂದರೆ ಸಂಸ್ಕೃತಿಯನ್ನು ಕಳೆದುಕೊಂಡು ಜನ ಪಶ್ಚಿಮದ ದಾಸರಾಗಿ ಹೋಗುತ್ತಿರುವುದರ ಕುರಿತು ಗಾಂಧಿಗೆ ತೀವ್ರ ಕಳವಳವಿತ್ತು.
ಇಂತಹ ಮೆಟೀರಿಯಲಿಸ್ಟಿಕ್ ಸಂಸ್ಕೃತಿಗೆ ವಿರುದ್ಧವಾಗಿ ಇನ್ನೊಂದು ರೀತಿಯ ಮೆಟೀರಿಯಲಿಸ್ಟಿಕ್ ಸಂಸ್ಕೃತಿಯನ್ನು ಹುಟ್ಟುಹಾಕುವುದರ ಮೂಲಕ ಕಾರ್ಲ್ ಮಾರ್ಕ್ಸ್ ಅದಕ್ಕೆ ಸ್ಪಂದಿಸಿದ್ದರೆ ಗಾಂಧಿ ಅದಕ್ಕೆ ಭಾರತೀಯ ಸಂಸ್ಕೃತಿಯ ಆಳದಲ್ಲಿರುವ ತಾತ್ವಿಕತೆಯ, ಧಾರ್ಮಿಕತೆಯ ಪುನರುತ್ಥಾನಕ್ಕೆ ಪ್ರಯತ್ನಿಸುವುದರ ಮೂಲಕ ಸ್ಪಂದಿಸಿದ್ದರು. ಸಂಸ್ಕೃತಿಯ ಪುನರುತ್ಥಾನ ಗಾಂಧಿ ಸ್ವಾತಂತ್ರ್ಯ ಹೋರಾಟದ ಪ್ರಾಥಮಿಕ ಗುರಿ. ಕೇವಲ ಬ್ರಿಟಿಷರನ್ನು ರಾಜಕೀಯವಾಗಿ ಓಡಿಸುವದು ಅಲ್ಲ. ಏಕೆಂದರೆ ಬ್ರಿಟಿಷರನ್ನು ಓಡಿಸಿಬಿಟ್ಟರೂ ಕೂಡ ಬ್ರಿಟಿಷ್ ಸಂಸ್ಕೃತಿ ನಮ್ಮಲ್ಲಿ ಉಳಿದುಹೋದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ ಎನ್ನುವುದು ಗಾಂಧಿಗೆ ಗೊತ್ತಿತ್ತು. ಉದ್ದೇಶ ದೇಶಕ್ಕೆ ಕೇವಲ ಬ್ರಿಟಿಶ್ ದೇಶದಿಂದ ಸ್ವಾತಂತ್ರ‍್ಯ ಪಡೆಯುವುದಿರಲಿಲ್ಲ. ಗಾಂಧಿ ಚಳವಳಿ ಒಂದು ನಾಗರಿಕತೆಗಳ ಸಮರ. ಆ ಸಂಸ್ಕೃತಿಯಿಂದ ಮುಕ್ತಿ ಪಡೆದು ರಾಜಕೀಯ ಸ್ವಾತಂತ್ರ್ಯಕ್ಕೆ ಜನರನ್ನು ಅರ್ಹರನ್ನಾಗಿಸಿ ನಂತರ ರಾಜಕೀಯ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ ಸಂಕೀರ್ಣ ʻಸಮರ’ ಅದು. ಮೂಲತಃ ಸಾಂಸ್ಕೃತಿಕ ಹೋರಾಟ.
ಹಾಗಾಗಿಯೇ ಅಲ್ಲಿ ಗಾಂಧಿ ಬಳಸಿದ ಆಯುಧಗಳು ಹಿಂದೂ ಸಂಸ್ಕೃತಿಯ ಆಳದಲ್ಲಿರುವ ಶ್ರೇಷ್ಠ ಮೌಲ್ಯಗಳು. ಮತ ಪ್ರತಿರೋಧದ ತಂತ್ರಗಳು. (ಉಪವಾಸ, ಭಜನೆ, ಹರತಾಳ ಮತ್ತು ಅಹಿಂಸೆ) ಅವುಗಳಿಗೆ ಅಪಾರ ಶಕ್ತಿಯಿದೆ ಎನ್ನುವುದು ಗಾಂಧಿಗೆ ಗೊತ್ತಿತ್ತು. ನಮ್ಮ ಋಷಿಮುನಿಗಳು, ಸಂತರು, ಧರ್ಮಸುಧಾರಕರು ಬಳಸಿದ ಮಾರ್ಗಗಳು ಅವೇ ಎನ್ನುವುದು ಗೊತ್ತಿತ್ತು. ನಮ್ಮ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಿಗೆ ಮುಖಾಮುಖಿಯಾದಾಗ ಆ ಸಂಸ್ಕೃತಿ ತನ್ನ ಕುರಿತು ನಾಚಿಕೊಳ್ಳುತ್ತದೆ. ಮತ್ತು ಹಾಗೆ ಆಗಬೇಕು. ಹಾಗೆ ಆದಾಗ ಇಂಗ್ಲೆಂಡ್ ಶರಣಾಗಿ ಹಿಂದೆ ಸರಿಯುತ್ತದೆ ಎನ್ನುವುದು ಗಾಂಧಿ ನಂಬುಗೆಯಾಗಿತ್ತು. ಇಂತಹ ಪ್ರಯತ್ನದಲ್ಲಿ ಗಾಂಧಿ ಕೆಲವು ಮಟ್ಟಿಗಾದರೂ ಯಶಸ್ವಿಯಾಗಿದ್ದು ನಮಗೆ ಗೊತ್ತಿದೆ. ಉದಾಹರಣೆಗಳಿವೆ. ಗಾಂಧಿಗೆ ಜೈಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಾಪಪ್ರಜ್ಞೆಯಿಂದ ಎದ್ದು ನಿಂತು ಬಿಡುತ್ತಾನೆ. ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಇಡೀ ದೇಶವೇ ಉಪ್ಪು ತಯಾರಿಸಲು ಆರಂಭಿಸಿದಾಗ ಇಂಗ್ಲೆಂಡ್‌ಗೆ ಏನು ಮಾಡಬೇಕೆಂದೇ ತಿಳಿಯದೆ ಜಾಗತಿಕವಾಗಿ ಮುಖಭಂಗ ಅನುಭವಿಸುತ್ತದೆ. ಮತ್ತೆ ದೇಶ ಸ್ವತಂತ್ರವಾದ ನಂತರ ಕಲ್ಕತ್ತಾದಲ್ಲಿ ಆರಂಭವಾಗುವ ಭಾರೀ ಪ್ರಮಾಣದ ಕೋಮುಗಲಭೆಯನ್ನು ಗಾಂಧಿ ಏಕಾಂಗಿಯಾಗಿ ಹತೋಟಿಗೆ ತಂದಿದ್ದು ನೋಡಿದ ವಿಶ್ವ ದಂಗುಬಡಿದು ಹೋಗುತ್ತದೆ. ಅವರು ತಮ್ಮ ರಾಜಕೀಯ ಹೋರಾಟದ ಗೆಲ್ಲುವಿಕೆಗೆ ಒಂದು ನಿರ್ದಿಷ್ಟ ತಾರೀಕು ಇತ್ಯಾದಿ ಇಟ್ಟುಕೊಂಡಿರಲಿಲ್ಲ. ಮುಖ್ಯ ವಿಷಯ ಸಂಸ್ಕೃತಿಯ ಪುನರುತ್ಥಾನ. ಪುನರುತ್ಥಾನದ ನಾಯಕರಾಗಿದ್ದವರು ಗಾಂಧಿ. ಸಾಂಸ್ಕೃತಿಕ ಗೆಲುವಿನ ಮೂಲಕ ರಾಜಕೀಯ ಗೆಲುವು ತಂದವರು.
2. ಗಾಂಧೀಜಿಯನ್ನು ಇನ್ನೊಂದು ದೃಷ್ಟಿಯಿಂದ ಕೂಡ ನೋಡಬೇಕು. ಏನೆಂದರೆ ಇತಿಹಾಸಕಾರ್ತಿ ರೋಮಿಲಾ ಥಾಪರ್ ಹೇಳುವಂತೆ ಭಾರತಕ್ಕೆ ʻರಾಷ್ಟ್ರೀಯತೆಯ ಪರಿಕಲ್ಪನೆ’ಯನ್ನು ನೀಡಿಹೋದವರು ಗಾಂಧಿ. ಹಿಂದೆ ನಮ್ಮ ದೇಶದಲ್ಲಿ ರಾಜಕೀಯ ಐಕ್ಯತೆಯ ಪರಿಕಲ್ಪನೆಯೇ ಇರಲಿಲ್ಲ. (ಸಾಂಸ್ಕೃತಿಕ ಏಕತೆ ಇತ್ತು). ರಾಜರುಗಳು, ರಾಣಿಯರು ಅಲ್ಲಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ತಮ್ಮ ಸಲುವಾಗಿ. ತಮ್ಮ ದತ್ತು ಪುತ್ರರ ಸಲುವಾಗಿ. ಭಾರತದ ಸಲುವಾಗಿ ಅಲ್ಲ. ಅವೆಲ್ಲ ಸ್ವಾತಂತ್ರ್ಯ ಹೋರಾಟಗಳಾಗಿರಲಿಲ್ಲ. ಹಾಗೆಯೇ ಮೊದಲನೆಯ ಪೀಳಿಗೆಯ ಮೋತಿಲಾಲ್ ನೆಹರು ಅಂತವರ ʻಸ್ವಾತಂತ್ರ್ಯ ಹೋರಾಟ’ಗಳಲ್ಲಿ ಸಾಮಾನ್ಯ ಜನರ, ಬಡವರ, ದೀನದಲಿತರ, ಮಹಿಳೆಯರ ಮಕ್ಕಳ ಭಾಗವಹಿಸುವಿಕೆ ಇರಲಿಲ್ಲ. ಇಂತಹ ಸಮುದಾಯಗಳಿಗೆ ಆ ಹೋರಾಟದಲ್ಲಿ ಗೌರವವೂ ಇರಲಿಲ್ಲ. ದೇಶಕ್ಕೆ ಗಾಂಧೀಜಿಯ ಕೊಡುಗೆ ಸ್ವಾತಂತ್ರ್ಯ ಹೋರಾಟವನ್ನು ಜನರ ಹೋರಾಟವನ್ನಾಗಿಸಿ ತಾವೆಲ್ಲರೂ ಒಂದು ನೇಶನ್ ಸ್ಟೇಟ್‌ನಲ್ಲಿ ಭಾಗಿದಾರರು ಎಂಬ ಭಾವನೆಯನ್ನು ಅವರ ಮನಸ್ಸುಗಳೊಳಗೆ ಮೂಡಿಸಿದ್ದು. ದೇಶದ ಜನ ಒಂದು ರಾಜಕೀಯ ಕೊಡೆಯ ಕೆಳಗೆ ಬಂದಿದ್ದು ಈಗ.
ಜನರ ಮನಸ್ಸುಗಳೊಳಗೆ ಧೈರ್ಯವನ್ನು, ಮೋಟಿವೇಶನ್ ಅನ್ನು ತುಂಬಿದ ಗಾಂಧಿ ಅವರನ್ನೆಲ್ಲ ಘನತೆವಂತರನ್ನಾಗಿ ಮಾಡಿಬಿಟ್ಟರು. ಎಂತಹ ಘನತೆವಂತರೆಂದರೆ ಯಾವ ಹಣ ಬಲವೂ, ಸೈನ್ಯ ಬಲವೂ ಬಗ್ಗಿಸಲಾರದಂತದ್ದು. ಹೀಗಾಗಿ ನಮ್ಮ ಹೋರಾಟ ಪ್ರಜಾಪ್ರಭುತ್ವ ಪರಂಪರೆಯ ಹೋರಾಟ ಕೂಡ ಆಗಿಹೋಯಿತು. ಗಮನಿಸಬೇಕು. ಭಾರತದ ಸ್ವಾತಂತ್ರ್ಯ ಹಿಂಸಾತ್ಮಕ ಮಾರ್ಗಗಳಿಂದ ಬಂದಿದ್ದರೆ ನಾವು ಪ್ರಜಾಪ್ರಭುತ್ವ ದೇಶವಾಗಿ ಉಳಿಯುತ್ತಿರಲಿಲ್ಲವೇನೋ. ಏಕೆಂದರೆ ಹಿಂಸಾತ್ಮಕ ಚಳವಳಿಗಳ ನಾಯಕತ್ವ ವಹಿಸಿದವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿರುವುದಿಲ್ಲ. ಸೈನ್ಯ ಬಲದ ಹೋರಾಟಗಳು ಒಂದು ವ್ಯಕ್ತಿ ಅಥವಾ ವ್ಯವಸ್ಥೆ ತನ್ನನ್ನು ತಾನು ಬಲಪಡಿಸಿಕೊಳ್ಳುವ ಹೋರಾಟಗಳಾಗಿರುತ್ತವೆ. ಅಂತಹ ಹೋರಾಟಗಳು ಜನರ ಕೈಗೆ ಅಧಿಕಾರ ನೀಡುವುದಿಲ್ಲ. ಆದರೆ ಗಾಂಧಿ ದೇಶಾದ್ಯಂತ ಸೃಷ್ಟಿಸಿದ ಜನ ಬಡವರಾಗಿದ್ದರೂ ಕೂಡ ನೈತಿಕವಾಗಿ ಶ್ರೀಮಂತರಾಗಿದ್ದವರು. ಬೇರೆಯವರ ದಮ್ಮಡಿ ಕಾಸು ಬಯಸಿದವರಲ್ಲ. ಸರಕಾರದಿಂದಲೂ ಕೂಡ ಏನನ್ನೂ ಬಯಸಿದವರಲ್ಲ. ತ್ಯಾಗ ಮಾಡಲು ಸಿದ್ಧವಿದ್ದವರು.
ಇನ್ನೂ ಒಂದು ಸೂಕ್ಷ್ಮ ವಿಚಾರವಿದೆ. ಬಹುಶಃ ಗಾಂಧೀಜಿಗೂ ಗೊತ್ತಿತ್ತು. ಏನೆಂದರೆ ಅಂದಿನ ಸಂದರ್ಭದಲ್ಲಿ ಸೈನ್ಯದ ಮೂಲಕ ಹೋರಾಟ ನಡೆಸಿದ್ದರೆ ಬಹುಶಃ ನಾವು ಗೆಲ್ಲುವುದು ಅನುಮಾನವಿತ್ತು. ಏಕೆಂದರೆ ಭಾರತಕ್ಕೆ ಅಂದು ಅಂತಹ ಸೈನ್ಯದ ಶಕ್ತಿ ಇರಲಿಲ್ಲ. ಮತ್ತು ಯುದ್ಧಗಳಿಗೆ ಬೇಕಾಗುವ ಹಣ ನಮ್ಮ ಬಳಿ ಇರಲಿಲ್ಲ. ಅಲ್ಲದೆ ನಾವು ಅಂದು ಗೆಲ್ಲಲು ಬೇರೆ ದೇಶದ ಸಹಾಯ ಪಡೆದಿದ್ದರೆ ನಾವು ಆ ದೇಶದ ಅಡಿಯಾಳಾಗಿ ಹೋಗುತ್ತಿದ್ದೆವು. ಯಾಕೆಂದರೆ ಯಾವ ದೇಶವೂ ಇನ್ನೊಂದಕ್ಕೆ ಪುಕ್ಕಟೆ ಸಹಾಯ ಮಾಡುವುದಿಲ್ಲ. ಗಾಂಧಿ ಪ್ರಸ್ತುತತೆ /ಅಪ್ರಸ್ತುತತೆ ಚರ್ಚಿಸುವಾಗ ಬಹುಶಃ ನಾವು ಈ ವಿಚಾರಗಳನ್ನು ಲಕ್ಷ್ಯದಲ್ಲಿಕೊಳ್ಳಬೇಕು.
3. ಇನ್ನೂ ಒಂದು ಮಹತ್ವದ ವಿಷಯ. ಏನೆಂದರೆ ಗಾಂಧಿಗೆ ದೇಶಗಳ, ಸರಕಾರಗಳ ಕುರಿತೇ ಅನುಮಾನವಿತ್ತು. ಅಂದರೆ ಸಂಘಟಿತ ದೇಶಗಳನ್ನು, ಸರಕಾರಗಳನ್ನು ನಡೆಸುವ ʻನಾಯಕರು’ ಒಳಗಿನಿಂದ ಜನವಿರೋಧಿಯಾಗಿರಲು ಸಾಧ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ಅಂದಿನ ರಶಿಯಾ, ಚೀನಾ ಇಂತಹ ದೇಶಗಳ ಜನರ ಪರಿಸ್ಥಿತಿ ನೋಡಿದ್ದ ಗಾಂಧಿಗೆ ದೇಶಕ್ಕಿಂತಲೂ ಜನರ ಕಲ್ಯಾಣ ಮುಖ್ಯ ಎನ್ನುವುದು ತಿಳಿದಿತ್ತು. ದುರ್ಬಲರ, ದೀನ ದಲಿತರ, ಮಹಿಳೆಯರ ಮತ್ತು ಅಶಕ್ತರ ಕಾಳಜಿಯೇ ಹೆಚ್ಚು ಮಹತ್ವದ್ದಾಗಿತ್ತು. ನಿಜದ ಪ್ರಜಾಪ್ರಭುತ್ವ ಸಾಧಿಸಲು ಹೊರಟವರು ಗಾಂಧಿ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಅವರು ಮುಂದಿಟ್ಟಿದ್ದು ಇಂತಹ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ. ವಿಕೇಂದ್ರೀಕ್ರತ ಆಡಳಿತದಲ್ಲಿ ಸರಕಾರಗಳು ವಿಪರೀತ ಬಲಗೊಳ್ಳುವ ಅಗತ್ಯತೆ ಇರುವುದಿಲ್ಲ. ಆಗ ಅವು ನಿಜವಾಗಿ ಜನರ ಸೇವೆಯಲ್ಲಿ ತೊಡಗಬಹುದು ಎನ್ನುವುದು ಗಾಂಧಿಗೆ ಅರಿವಿತ್ತು.
ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ
4. ಗಾಂಧಿ ದೇವಮಾನವರಾಗಿರಲಿಲ್ಲ. ಅವರೊಳಗೂ ಎಕ್ಸೆಂಟ್ರಿಕ್ ಎಂದು ಹೇಳಬೇಕಾದ ವರ್ತನೆಗಳಿದ್ದವು. ಉದಾಹರಣೆಗೆ ಗಾಂಧಿ ಕಸ್ತೂರಬಾ ಮೇಲೆ ವಿಪರೀತದ ಕಂಡಿಷನ್‌ಗಳನ್ನು ಹೇರಿದ್ದರು. ಕಾಮವನ್ನು ತ್ಯಜಿಸಿದ್ದರು. ಮಕ್ಕಳ ಮೇಲೆ ಕೂಡ ಅಪಾರ ಒತ್ತಡಗಳನ್ನು ಹೇರಿದ್ದರು. ಅದು ಹೋಗಲಿ. ಗಾಂಧಿ ತೆಗೆದುಕೊಂಡ ಇತರ ಹಲವಾರು ನಿರ್ಣಯಗಳು ಕೂಡ ರಾಜಕೀಯದ ದೃಷ್ಟಿಯಿಂದ ತಪ್ಪಾಗಿದ್ದವು ಎಂದೇ ಹೇಳಬೇಕು. ಮುಖ್ಯವಾಗಿ (ದೇಶವಿಭಜನೆ ತಪ್ಪಿಸಲು) ʻಜಿನ್ನಾ ಪ್ರಧಾನಿಯಾಗಲಿ’ ಎಂದು ಗಾಂಧಿ ಹೇಳಿದ್ದರು. ಅಲ್ಲದೆ ಪಾಕಿಸ್ತಾನ ಹೋರಾಟದ ಸಿದ್ಧತೆಯಲ್ಲಿದ್ದರೂ ಕೂಡ ಆ ದೇಶಕ್ಕೆ ಒಪ್ಪಂದದ ಪ್ರಕಾರ ನೀಡಬೇಕಾಗಿದ್ದ ಹಣವನ್ನು ನೀಡಬೇಕು ಎಂದು ಹೇಳಿದ್ದರು. ತಮ್ಮ ವೃದ್ಧಾಪ್ಯದಲ್ಲಿ ತಮಗೆ ಕಾಮವನ್ನು ಗೆಲ್ಲಲು ಸಾಧ್ಯವಾಗಿದೆಯೇ ಎನ್ನುವದನ್ನು ಖಾತ್ರಿಪಡಿಸಿಕೊಳ್ಳುವ ಸಲವಾಗಿ ಚಿತ್ರವಿಚಿತ್ರ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು. ಆದರೆ ಇಲ್ಲೆಲ್ಲ ನಾವು ಒಂದು ವಿಷಯ ಗಮನಿಸಬೇಕು. ಏನೆಂದರೆ ಗಾಂಧಿ ಬರೇ ರಾಜಕಾರಣಿಯಾಗಿರಲಿಲ್ಲ. ಆಳವಾಗಿ ಧಾರ್ಮಿಕರಾಗಿದ್ದ ಅವರು ಸಂತನಾಗುವ, ಅಂದರೆ ತಮ್ಮನ್ನು ಪರಿಶುದ್ಧನನ್ನಾಗಿಸಿಕೊಳ್ಳುವ, ಆತ್ಮವನ್ನು ಉನ್ನತಮಟ್ಟಕ್ಕೆ ಕರೆದೊಯ್ಯುವ, ʻಸತ್ಯವನ್ನು’ ಅರಸುವ ನಿರಂತರ ಪರೀಕ್ಷೆಯಲ್ಲಿ ತೊಡಗಿದ್ದರು. ಬರೇ ರಾಜಕಾರಣಿಯಾದರೆ ಅವರು ಹಲವು ವಿಷಯಗಳನ್ನು ಮುಚ್ಚಿಡುತ್ತಿದ್ದರೇನೋ. ಆದರೆ ಗಾಂಧಿ ತಮ್ಮ ಜೀವನವನ್ನು ಪಾರದರ್ಶಕವಾಗಿಟ್ಟುಕೊಳ್ಳುವ ಹಂಬಲದಲ್ಲಿ ಎಲ್ಲವನೂ ಹೇಳಿಕೊಂಡುಬಿಟ್ಟರು. ಬಹುಶಃ ಅವರಿಗೆ ತಮ್ಮ ಸಾವೂ ದೊಡ್ಡ ವಿಷಯವಾಗಿರಲಿಲ್ಲ. ಆತ್ಮಶುದ್ಧಿ ಹೆಚ್ಚು ಮಹತ್ವದ್ದಾಗಿತ್ತು.
5. ಮತ್ತೊಂದು ವಿಷಯ ಬಹುಶಃ ನಾವು ಮರೆಯಬಾರದು. ಏನೆಂದರೆ ಗಾಂಧಿ ಹಿಂದೂ ಧರ್ಮದ ಕಟ್ಟಾ ಅನುಯಾಯಿ. ತಮ್ಮನ್ನು ತಾನು ಸನಾತನಿ ಹಿಂದು ಎಂದು ಕರೆದುಕೊಂಡವರು. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿ ಹಿಂದೂ ಧರ್ಮದ ಮೌಲ್ಯಗಳನ್ನು, ತಂತ್ರಗಳನ್ನು ಆಧಾರಸ್ತಂಭಗಳನ್ನಾಗಿ ಇಟ್ಟುಕೊಂಡ ಚಳವಳಿ. ಹಿಂದೂ ಮೌಲ್ಯಗಳ ಪುನರುತ್ಥಾನ ಸಾಧಿಸಿದ ಚಳವಳಿ. ಆದರೂ ಕೂಡ ಮುಖ್ಯವಾಗಿ ಸ್ವಾತಂತ್ರ್ಯಾನಂತರದ ಕೆಲವು ಘಟನೆಗಳನ್ನು ಬಿಡಿಬಿಡಿಯಾಗಿ ನೋಡಿದರೆ ಗಾಂಧಿ ಉದ್ದೇಶಗಳ ಕುರಿತು ಸಾಧಾರಣ ವ್ಯಕ್ತಿಯೊಬ್ಬನಿಗೆ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಗಾಂಧಿಯ ಇಂತಹ ಕೆಲವು ವೈರುಧ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬ ಪ್ರಶ್ನೆ ಇದೆ. ಬಹುಶಃ ಇವನ್ನು ಗಾಂಧಿಯ ಸಮಗ್ರ ವ್ಯಕ್ತಿತ್ವದ ಭಾಗವಾಗಿ ನೋಡಬೇಕು. ಬಹುಶಃ ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಗಾಂಧಿಗೆ ತಾವು ರಾಜಕೀಯವನ್ನು ಮೀರಿದ ಒಂದು ಮಹಾ ಆತ್ಮವಾಗಬೇಕು, ಸಂತನಾಗಬೇಕು ಎಂದು ಇದ್ದ ಅಭಿಲಾಷೆಯೇ ಅವರ ಕೆಲವು ನಿರ್ಣಯಗಳನ್ನು ನಿರೂಪಿಸಿರಬಹುದು.
ಇದನ್ನೂ ಓದಿ | ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಮೋದಿ ನಮನ
6. ಗಾಂಧಿಯಂತಹ ಇಡೀ ದೇಶದ ಮೈಮನಗಳನ್ನು ಆವರಿಸಿದ ವ್ಯಕ್ತಿ ಅಪ್ರಸ್ತುತವೆಂದು, ಅಥವಾ ದೇಶದ ಯುವಜನತೆ ಗಾಂಧಿಯಿಂದ ದೂರಹೋಗುತ್ತಿರಬಹುದೆಂದು, ಹಲವರು ಅಥವಾ ಕನಿಷ್ಟ ಕೆಲವರು ಭಾವಿಸುತ್ತಿರುವ ಕಾರಣಗಳನ್ನೂ ಹುಡುಕಿಕೊಳ್ಳಬೇಕು. ಬಹುಶಃ ಇದಕ್ಕೆ ಕಾರಣ ಗಾಂಧಿಯಲ್ಲ. ಗಾಂಧೀಜಿಯ ಹೆಸರನ್ನು, ಭಾವಚಿತ್ರವನ್ನು ಬಳಸಿಕೊಂಡು ಸುದೀರ್ಘಕಾಲ ನಡೆದುಬಂದ ʻಖುಷಿಪಡಿಸುವ ರಾಜಕೀಯ’ ಮತ್ತು ಸಬ್ಸಿಡಿ ರಾಜಕೀಯ. ಈ ರಾಜಕೀಯದಿಂದ ಬೇಸತ್ತಿರುವ ಸಮಕಾಲೀನ ಯುವಜನತೆ ಅದಕ್ಕೆಲ್ಲ ಗಾಂಧಿಯೇ ಕಾರಣ ಎಂದು ನಂಬಿರಲೂ ಸಾಧ್ಯವಿದೆ.
ಬಹುಶಃ ಗಾಂಧೀಜಿಯ ಮರುಮೌಲ್ಯಮಾಪನ ಮೇಲೆ ಕಾಣಿಸಿದ ವಿಷಯಗಳನ್ನೂ ಪರಿಗಣಿಸಬೇಕು.
(ಲೇಖಕರು ಪ್ರಾಧ್ಯಾಪಕ, ಕವಿ, ಕತೆಗಾರ, ವಿಮರ್ಶಕ)