Site icon Vistara News

Vistara Kathaspardhe: ಇದು ಪ್ಯಾನ್‌ ಇಂಡಿಯಾ ಸ್ಪರ್ಧೆಯಾಗಲಿ: ವಿಸ್ತಾರ ನ್ಯೂಸ್‌ ಕಥಾಸ್ಪರ್ಧೆಗೆ ಸಾಹಿತ್ಯಲೋಕ ಮೆಚ್ಚುಗೆ

Yugadi katha spardhe

ಬೆಂಗಳೂರು: ಕನ್ನಡ ಸಣ್ಣಕಥೆಗಳ ಇತಿಹಾಸದಲ್ಲಿಯೇ ದಾಖಲೆ ಬಹುಮಾನ ಮೊತ್ತದ ʼವಿಸ್ತಾರ ನ್ಯೂಸ್-‌ ಯುಗಾದಿʼ ಕನ್ನಡ ಸಣ್ಣ ಕಥಾ ಸ್ಪರ್ಧೆಗೆ ಲೇಖಕರು, ಕಥೆಗಾರರು ಹಾಗೂ ಪ್ರಕಾಶಕರಿಂದ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗಿದೆ.

ವಿಸ್ತಾರ ನ್ಯೂಸ್‌ ಮೊದಲ ಬಾರಿ ಆಯೋಜಿಸುತ್ತಿರುವ ಈ ಸಣ್ಣಕಥೆ ಸ್ಪರ್ಧೆಯಲ್ಲಿ ದಾಖಲೆ ಮೊತ್ತದ ಬಹುಮಾನವನ್ನು ನೀಡಲಾಗುತ್ತಿದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ಮೆಚ್ಚುಗೆ ಪಡೆದ ಕಥೆಗಳಿಗೆ ಒಟ್ಟು ಒಂದು ಲಕ್ಷ ರೂ. ಬಹುಮಾನವಿದೆ. ಮೊದಲ ಬಹುಮಾನ 55,000 ರೂ. ಆಗಿದೆ. ಇದು ಕನ್ನಡ ಕಥಾ ಸ್ಪರ್ಧೆಗಳಲ್ಲೇ ದಾಖಲೆ ಮೊತ್ತದ ಬಹುಮಾನವಾಗಿದೆ.

ಟಿವಿ ವಾಹಿನಿಯೊಂದು ಏರ್ಪಡಿಸುತ್ತಿರುವ ಮೊದಲ ಕನ್ನಡ ಸಾಹಿತ್ಯ ಸ್ಪರ್ಧೆ ಕೂಡ ಇದು ಎನಿಸಿಕೊಂಡಿದೆ. ಈ ಬಗ್ಗೆ ಹಲವು ಕಥೆಗಾರರು, ಲೇಖಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ಕೂಡ ಈ ಪ್ರಯತ್ನದ ಬೆನ್ನು ತಟ್ಟುವ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕಥೆಗಾರ, ಪ್ರಕಾಶಕ ವಸುಧೇಂದ್ರ ಅವರು ವಿಸ್ತಾರ ನ್ಯೂಸ್‌ನ ಈ ನಡೆಯನ್ನು ಶ್ಲಾಘಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಬಹುಮಾನಗಳನ್ನು ಹೊಂದಿರುವ ಸ್ಪರ್ಧೆಗಳನ್ನು ಕನ್ನಡಕ್ಕೆ ಸೀಮಿತಗೊಳಿಸದೆ, ಪ್ಯಾನ್‌ ಇಂಡಿಯಾ ಆಗಿಸಬೇಕು. ಇತರ ಭಾಷೆಗಳ ಕಥೆಗಾರರೂ ಇದಕ್ಕೆ ತಮ್ಮ ಕಥೆಗಳನ್ನು ಅನುವಾದ ಮಾಡಿಸಿ ಕಳಿಸುವಂಥ ಅವಕಾಶ ಕಲ್ಪಿಸಬೇಕು. ಆಗ ಕನ್ನಡ ಸಾಹಿತ್ಯ ವಿಶ್ವವ್ಯಾಪಿ ಪ್ರತಿಷ್ಠೆ ಗಳಿಸಲು ಇನ್ನೊಂದು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಕನ್ನಡದಲ್ಲಿ ಇಂಥ ಕಥಾಸ್ಪರ್ಧೆಗಳಿಂದಲೇ ಹೊಸ, ಭರವಸೆಯ, ಉತ್ತಮ ಕಥೆಗಾರರು ಮೂಡಿ ಬಂದಿದ್ದಾರೆ. ಹೊಸ ಹೊಸ ಆಶಯಗಳು, ಕಥೆಗಾರಿಕೆಯಲ್ಲಿ ಹೊಸ ವಿನ್ಯಾಸಗಳು ಹಾಗೂ ಅನುಭವಗಳು ಸೃಷ್ಟಿಯಾಗಿವೆ. ಹಲವು ದೊಡ್ಡ ದಿನಪತ್ರಿಕೆಗಳ ಕಥಾಸ್ಪರ್ಧೆಗಳು ಹೊಸ ಕಥೆಗಾರರನ್ನು ಆವಿಷ್ಕರಿಸಿದವು. ವಿಸ್ತಾರ ನ್ಯೂಸ್‌ ಅಂಥ ಹೊಸ ಕಥೆಗಾರರ ಶೋಧಕ್ಕೆ ಕಾರಣವಾಗಲಿ ಎಂದು ವಸುಧೇಂದ್ರ ಹಾರೈಸಿದರು.

ಕಹಿರಿಯ ಕವಿ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು ಮಾತನಾಡಿ, ಇಂಥ ಸ್ಪರ್ಧೆಗಳಿಂದ ಕಥೆಗಳ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚುವುದು ಖಚಿತ. ಆಯಾ ಕಾಲಕ್ಕೆ ತಕ್ಕ ಸ್ವರೂಪ ಹಾಗೂ ಅಭಿವ್ಯಕ್ತಿಯನ್ನು ಕಥಾಪ್ರಕಾರ ತಾನೇ ಆಯ್ದುಕೊಳ್ಳುತ್ತದೆ. ಅಂಥ ಸ್ವರೂಪ ನಿರ್ಮಾಣಕ್ಕೆ ಇಂಥ ಸ್ಪರ್ಧೆಗಳು ವೇದಿಕೆಗಳಾಗುತ್ತವೆ ಎಂದಿದ್ದಾರೆ. ವಿಸ್ತಾರ ನ್ಯೂಸ್‌ನ ಸಾಹಸಕ್ಕೆ ಶುಭ ಹಾರೈಸಿದ್ದಾರೆ.

ಈ ಸ್ಪರ್ಧೆಯಿಂದ ಹೊಸ ಲೇಖಕರು ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಅಂಕಿತ ಪುಸ್ತಕ ಮಾಲೀಕ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ ಹೇಳಿದ್ದಾರೆ.

ಕನ್ನಡದಲ್ಲಿ ಬಹುಶಃ ಈ ಮೊತ್ತದ ಬಹುಮಾನವನ್ನು ಕೊಡುವ ಸ್ಪರ್ಧೆ ಇದೇ ಮೊದಲು. ವಿಶ್ವೇಶ್ವರ ಭಟ್ಟರ ಜತೆ ಸೇರಿ 25 ಸಾವಿರ ರೂ. ಮೊತ್ತದ ಬಹುಮಾನವನ್ನು 10-15 ವರ್ಷದ ಹಿಂದೆ ಆರಂಭಿಸಿದ್ದೇ ಬಹುಶಃ ದೊಡ್ಡ ಮೊತ್ತ ಆಗಿತ್ತು. ಈ ರೀತಿಯ ಕಾರ್ಯಕ್ರಮಗಳಿಂದ ಹೊಸ ಹೊಸ ಲೇಖಕರು ಬರುತ್ತಾರೆ. ವಸುಧೇಂದ್ರ, ಸುಮಂಗಲಾ ಬಾದರದಿನ್ನಿ, ಸಂದೀಪ್‌ ನಾಯಕ್‌ ಸೇರಿ ಅನೇಕ ಹೊಸಬರು ಬರೆದಿದ್ದರು. ಈಗ ಅವರೆಲ್ಲರೂ ಪ್ರಸಿದ್ಧರಾಗಿದ್ದಾರೆ. ಹೊಸ ಲೇಖಕರಿಗೆ ಬರೆದರೆ ಪ್ರಕಟಿಸಲು ಒಂದು ವೇದಿಕೆ ಸಿಗುತ್ತದೆ, ಹಳೆಯ ಲೇಖಕರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಕನ್ನಡದಲ್ಲಿ ವಿಶಿಷ್ಟವಾದ ಮತ್ತು ಆಗಲೇಬೇಕಾಗಿದ್ದ ಒಂದು ಕಾರ್ಯ ಇದು. ಇದರಿಂದ ನಮಗೆ ಬಹಳ ಖುಷಿ ಆಗಿದೆ ಎಂದು ಪ್ರಕಾಶ್‌ ಹೇಳಿದ್ದಾರೆ.

ಸ್ಪರ್ಧೆಯ ಆಯ್ಕೆಗಳು ಸ್ಪರ್ಧಾತ್ಮಕವಾಗಿರಬೇಕು, ಪಾರದರ್ಶಕವಾಗಿರಬೇಕು ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹೇಳಿದ್ದಾರೆ. ಇದರಿಂದ ಹೊಸ ಪ್ರತಿಭೆಗಳು ನಮಗೆ ಸಿಗುತ್ತಾರೆ. ಅವರಿಗೆಲ್ಲರಿಗೂ ಅವಕಾಶ ಇದರಿಂದ ಸಿಗುತ್ತದೆ. ಹೆಚ್ಚು ಮೊತ್ತದ ಬಹುಮಾನ ನೀಡುತ್ತಿರುವ ವಿಸ್ತಾರ ನ್ಯೂಸ್‌ಗೆ ನಮ್ಮ ಸಂಘದ ಪರವಾಗಿ ಅಭಿನಂದಿಸುತ್ತೇನೆ. ಈ ಬಗ್ಗೆ ಒಂದು ವಿಷಯ ಹೇಳಬೇಕು ಎಂದರೆ, ಇಂತಹ ಕಾರ್ಯಕ್ರಮಗಳು ನಿಂತು ಹೋಗಬಾರದು. ಇದನ್ನು ಮುಂದುವರಿಸಬೇಕು. ಕನ್ನಡಕ್ಕೆ ಇಂತಹದ್ದೊಂದು ಬೇಕಾಗಿದೆ ಎಂದಿರುವ ಅವರು, ಇದಕ್ಕಾಗಿ ವಿಸ್ತಾರ ತಂಡವನ್ನು ಅಭಿನಂದಿಸಿದ್ದಾರೆ.

ಸ್ಪರ್ಧೆಯ ಪ್ರಕಟಣೆಗೆ ಹಲವಾರು ಕಥೆಗಾರರು ಸ್ಪಂದಿಸಿದ್ದು, ಇಮೇಲ್‌ ಹಾಗೂ ಅಂಚೆಯ ಮೂಲಕ ಕಥೆಗಳನ್ನು ಕಳಿಸಲು ಆರಂಭಿಸಿದ್ದಾರೆ. ಮಾರ್ಚ್‌ 5 ಕಥೆ ಕಳಿಸಲು ಅಂತಿಮ ದಿನಾಂಕ.

ಕಥಾಸ್ಪರ್ಧೆಯ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ: Vistara Kathaspardhe : ವಿಸ್ತಾರ ನ್ಯೂಸ್‌ನಿಂದ ಯುಗಾದಿ-2023 ಕಥಾ ಸ್ಪರ್ಧೆ; 1 ಲಕ್ಷ ರೂ. ಬಹುಮಾನ!

Exit mobile version