Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಉರಿವ ರಾತ್ರಿ ಸುರಿದ ಮಳೆ

uriva ratri surida male story

:: ಡಾ. ಹೆಚ್.ಸಿ. ಭವ್ಯ ನವೀನ್

ಇಷ್ಟೊಂದು ಸುಡು ಹಗಲಿನಲ್ಲು ಕತ್ತಲಿಗಿಂತ ಹೆಚ್ಚು ಗವ್ವೆನ್ನುವ ಆ ನಿರ್ಜನ ಕಾಡು ದಾರಿಯಲ್ಲಿ ಕೆಟ್ಟು ನಿಂತ ಬೈಕಿಗೆ ಒದ್ದು ಒಬ್ಬಂಟಿಯಾಗಿ ಬಿರುಸಾಗಿ ನಡೆದುಕೊಂಡು ಬರುತ್ತಿದ್ದ ಸೂರಿ ಸಂಜೆಯಾಗುವ ಮೊದಲು ಮನೆ ತಲುಪಿ ಚಂದನೆ ಹೆಂಡತಿಯ ಸೇರಿಕೊಳ್ಳುವ ಆತುರದಲ್ಲಿದ್ದ. ಇನ್ನೂ ತಿಂಗಳೂ ತುಂಬದ ಮದುವೆ ಶಾಸ್ತ್ರದ ಯಾವ ಗುಂಗೂ ಉಳಿಸಿಕೊಳ್ಳದೆ ತನ್ನ ಪಾಡಿಗೆ ತಾನು ಗುಡ್ಡದ ಒಂಟಿ ಮನೆಯಲ್ಲಿ ಕೆಂಡದ ಮೇಲಿದ್ದ ಹಾಲಿನ ಕುಡಿಕೆಯ ಇಣುಕಿಣುಕಿ ಇನ್ನೂ ಕೆನೆಕಟ್ಟಿಲ್ಲವಲ್ಲ ಅಂತ ಪೇಚಾಡಿಕೊಳ್ಳುತ್ತಿದ್ದಳು ಪಾರಿ. ಹಜಾರದ ಕಿಟಕಿ ಸರಳುಗಳಿಗೆ ಕಟ್ಟಿದ ಪ್ಲಾಸ್ಟಿಕ್ ಹಾಳೆ ಸಣ್ಣಗೆ ರಪ ರಪ ಸದ್ದು ಮಾಡುತ್ತಿದ್ದುದು ಬಿಟ್ಟರೆ ಇಲ್ಲೇಲ್ಲೋ ಈ ಗುಡ್ಡದ ಮೇಲೆ ಒಂದು ಮನೆ ಇದ್ದೀತು… ಅಲ್ಲಿ ನಾನೆಂಬ ಒಬ್ಬಳು ಹಸೀ ಹಸೀ ಮದುವಣಗಿತ್ತಿ ಯಾರಾದರೂ ಬರಲಿ ತನ್ನ ಗಂಡ ಮಾತ್ರ ಬರುದೂ ಬೇಡ ಅಂತ ವಿಚಿತ್ರ ಸಂಕಟದಲ್ಲಿ ಚೀರಿಕೊಳ್ಳಲೂ ಆಗದೇ ಕೂತಿರುವುದು ಆಕಾಶದಲ್ಲಿ ಸುತ್ತುವ ನಮ್ಮಪ್ಪ ಶಿವಪ್ಪನಿಗೂ ಗೊತ್ತಾಗದೇನೋ ಅಂದುಕೊಳ್ಳುತ್ತ ಅಟ್ಟದ ಕಾಲಿಗೆ ತಲೆಕೊಟ್ಟು ಕೂತಿರುವಾಗಲೇ ಸೂರಿ ಜೋರಾಗಿ ಹಾಡಿಕೊಳ್ಳುತ್ತ ಒಳಗೆ ಬಂದ.‌

ಮುದ್ದುಗರೆಯುತ್ತ ಮಾತಾಡಿ ಪೇಟೆಯಿಂದ ತಂದಿದ್ದ ಬೂದುಗುಂಬಳದ ಹಲ್ವ ತಿನ್ನಿಸಿ, ತನ್ನನ್ನು ಹದಕ್ಕೆ ತರಲು ಎಂದಿನಂತೆ ಮತ್ತೆ ಪ್ರಯತ್ನಿಸಿದ ಅವನ ಅಷ್ಟೂ ಪ್ರೀತಿಗೆ ಬೇಕೋ ಬೇಡವಾ ಅಂತಲೇ ಚೂರು ತುಟಿ ಅಗಲಿಸಿ ನಕ್ಕಳು ಪಾರಿ. ಅಷ್ಟಕ್ಕೇ ಅದೇ ಸೂಚನೆ ಅಂದುಕೊಂಡವನು ಅನಾಮತ್ತು ಅವಳನ್ನೆತ್ತ್ತಿಕೊಂಡು ಹೋಗಿ ಹಾಸಿಗೆ ಮೇಲೆ ಉರುಳು ಹಾಕಿದ. ಇವನೇನು ಕಚ್ಚಿ ಕೊಂದೇ ಬಿಡುತ್ತಾನೇನೋ ಅನ್ನುವ ಭಯದಲ್ಲಿ ಪಾರಿ ಸದ್ದು ಮಾಡದೆ ಯಾವ್ಯಾವುದೋ ಭಂಗಿಗಳಲ್ಲಿ ಹಾಸಿಗೆ ಮೇಲೆ ಒದ್ದಾಡುತ್ತಿರುವಾಗಲೇ ಇನ್ನೇನು ಮುಗಿಯಿತು ಅಂತ ಸೂರಿ ಪಕ್ಕಕ್ಕೊರಳಿಕೊಂಡ. ಅವಳು ಸಣ್ಣಗೆ ನರಳುವ ದನಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆ ಆರಿಸಿಕೊಂಡು ಎದ್ದಳು. ‘ಅಲ್ವೆ, ಸತ್ತನಾಯಿ ಹಂಗೆ….’ ಮುಂದೆ ಏನೋ ಹೇಳಲು ಹೊರಟವನು ಮುಂಗೈ ಚುಚ್ಚಿದ ಬಳೆಚೂರು ಹಿಡಿದು ಕಿಟಕಿಯ ಆಚೆ ತೂರುವಷ್ಟರಲ್ಲಿ ಪಾರಿ ಬಚ್ಚಲಿನಲ್ಲಿ ಒಂದೇ ಸಮನೆ ನೀರು ಸುರುವಿಕೊಳ್ಳುತ್ತಿದ್ದಳು.


ಪಾರಿ.. ಪಾರಿಜಾತ.. ಹಾಸನಕ್ಕೆ ಮದುವೆ ಮಾಡಿಕೊಟ್ಟಿದ್ದ ಅಕ್ಕನ ಮನೆಯಲ್ಲೇ ಉಳಿದು ಚೆನ್ನಾಗೇ ಕಾಲೇಜು ಓದಿಕೊಂಡವಳು. ಪಾರಿ ಓದಿದ್ದು ಹುಡುಗಿಯರ ಕಾಲೇಜಿನಲ್ಲೇ ಆದರೂ ಅಲ್ಲಿ ಗಂಡುಡುಗರ ಗದ್ದಲ ಇಲ್ಲದೇನಿರಲಿಲ್ಲ. ಕ್ಯಾಂಪಸ್ಸಿನ ಒಳಗಿಂದ ಒಂದು, ಗೇಟಿನ ಹೊರಗಿಂದ ಒಂದು ಅಂತ ಕ್ಯಾಂಟೀನಿಗೆ ಎರಡು ಬಾಗಿಲಿದ್ದರೆ, ಜೆರಾಕ್ಸ್ ಅಂಗಡಿ ಹಿಂಗಡೆ ಬಾಗಿಲು ಸೇರಿ ಒಂದು ಕಾಲೇಜಿಗಿದ್ದ ಮೂರು ಬಾಗಿಲಲ್ಲಿ ಹುಡುಗರು ಹಾಯಾಗಿ ಓಡಾಡಿಕೊಂಡಿದ್ದರು. ಕಾಲೇಜಿನ ಶುರುವಲ್ಲೇ ಇದ್ದ ಕ್ಯಾಂಟೀನನ್ನು ತಾಗಿಯೇ ಆಚೆ ಹೋಗಬೇಕಿದ್ದ ಹುಡುಗಿಯರ ಕಣ್ಣಿಗೆ ಹುಡುಗರು, ಹುಡುಗರ ಕಣ್ಣಿಗೆ ಹುಡುಗಿಯರು ಅನಾಯಾಸವಾಗಿ ಕನೆಕ್ಟ್ ಆಗುತ್ತಿದ್ದರು. ಹಾಗೇ.. ಬೆಳ್ಳನೆ ಅಯಸ್ಕಾಂತದಂತಿದ್ದ ಪಾರಿಯ ಪ್ರಭಾವಲಯದ ಸುತ್ತ ಅಭಿಮಾನಿ ಹುಡುಗರ ದಂಡೇ ಇರುತ್ತಿತ್ತು. ಅಲ್ಲಿ ಪೋಲಿ ರೋಮಿಯೋಗಳಿಂದ ಹಿಡಿದು, ಚಂದದ- ಬುದ್ಧಿವಂತ- ನಿಯತ್ತಾದ ಪ್ರೇಮಿಗಳೂ ಇದ್ದರೆನ್ನಿ. ಪಾರಿ ಮಾತ್ರ ಆ ಕಡೆಗೆ ಸಂಬಂಧವೇ ಇಲ್ಲ ಅನ್ನಿಸುವಂತೆ ನೇರ ರಸ್ತೆ ನೋಡುತ್ತಾ ಹೊರಟರೆ ಮುಗೀತು. ಕಡೆವರೆಗೂ ಅವಳ ತಪಸ್ಸನ್ನು ಯಾರೂ ಮುರಿಯಲಾಗಲಿಲ್ಲ ಅಂತ ಅವಳ ಗೆಳತಿಯರು ಮಾತಾಡಿಕೊಳ್ಳುತ್ತಿದ್ದರು. ಅದೆಲ್ಲಾ ಪಾರಿಯ ಕಿವಿಗೆ ಬಿದ್ದಾಗ ಪಾರಿ ಉದಾಸೀನದಿಂದ ನಕ್ಕು ಸುಮ್ಮನಾಗುತ್ತಿದ್ದಳು.

ಹಾಗಂತ ಪಾರಿಗೆ ಅವಳ ಹಿಂದೆ ಬಿದ್ದಿದ್ದ ಹುಡುಗರ ಮೇಲೆ ಪ್ರಜ್ಞೆಯೇ ಇರಲಿಲ್ಲ ಅಂತೇನಿಲ್ಲ. ಅವಳ ಹಿಂದೆ ಬಿದ್ದಿದ್ದ ಪೋಲಿ ಅರುಣ, ಜೆರಾಕ್ಸ್ ಅಂಗಡಿ ಓನರ್ ‘ಒಳ್ಳೆ ಹುಡ್ಗ ರಮೇಶ’, ಕ್ಯಾಂಟೀನಿನ ಮೂಲೆ ಹಿಡಿದು ಕೂತಿರುತ್ತಿದ್ದ ಕ್ಯಾಶಿಯರ್ ಪರಮ, ಕಾಲೇಜಿನ ಎದುರುಗಡೆ ಏರ್‌ಟೆಲ್ ಸರ್ವೀಸ್ ಸೆಂಟರಿನ ಮ್ಯಾನೇಜರ್ ಸಂದೇಶ ಎಲ್ಲರ ಹೆಸರು ಮತ್ತು ಉದ್ದೇಶಗಳು ಪಾರಿಗೆ ಗೊತ್ತಿತ್ತು. ಕಾಲೇಜಿಗೆ ಹೊಸದಾಗಿ ಅಪಾಂಯ್ಟ್ ಆಗಿ ಬಂದಿದ್ದ ಸೋಷಿಯಾಲಜಿ ಸರ್ ಇವಳೆಂದರೆ ವಿಶೇಷ ಕಾಳಜಿ ತೋರಿಸುತ್ತಿದ್ದುದನ್ನೂ ಪಾರಿ ಶುರುವೀಗೆ ಗೊತ್ತುಮಾಡಿಕೊಂಡಿದ್ದಳು. ವಯಸ್ಸಲ್ಲವಾ.. ಆಗೀಗೇನಾದರೂ ಕನಸಿನಲ್ಲಿ ಕಾಲೇಜಿನ ದಂಡು ಬಂದರೆ ಅದರಲ್ಲಿ ಗಡ್ಡ-ಮೀಸೆ ಕ್ಲೀನ್ ಶೇವ್ ಮಾಡಿಕೊಂಡು ತೆಳ್ಳಗೆ ಬೆಳ್ಳಗೆ ಇದ್ದ ಸಂದೇಶನೊಟ್ಟಿಗೆ ಮಾತ್ರ ಪಾರಿ ನಗುತ್ತಾ ಮಾತಿಗೆ ಕೂತಂತೆ ಕೂತಿರುತ್ತಿದ್ದಳು. ಅದೇ ನಿದ್ದೆಯೊಡೆದು ಎದ್ದಾಗ ಕನಸಿಗೆ ಕನಸೇ ಮರೆತು ಮತ್ತೆ ಎಲ್ಲರ ಮೇಲೂ ಎಂದಿನ ಉದ್ದೇಶಿತ ಉದಾಸೀನ ಅವಳದ್ದು.
ಹೆಚ್ಚೆಂದರೆ ಪಾರಿ ಅವಳ ಶರೂ ಬಾವನನ್ನಷ್ಟೇ ಮಾತಾಡಿಸುತ್ತಿದ್ದದ್ದಾ ಅಂತ. ಅಪ್ಪ-ಅಮ್ಮ ಇಬ್ಬರೂ ಇಲ್ಲದ ಪಾರಿಯನ್ನ ಅವಳಕ್ಕ ತಾರಿಣಿ, ಬಾವ ಶರತ ಹಳ್ಳಿಯಿಂದ ಹಾಸನದ ಮನೆಗೆ ತಂದಿಟ್ಟುಕೊಂಡ ನಾಲ್ಕೈದು ವರ್ಷದಲ್ಲಿ ಈಗೀಗ ಬಾವನ ಜೊತೆ ಅರ್ಧ ಇಂಚಿನ ಸ್ಮೈಲು ಕೊಡುವುದನ್ನು ರೂಢಿಸಿಕೊಂಡಿರುವುದು ಪಾರಿ ಅಕ್ಕ ತಾರಿಣಿಗೂ, ಶರತನಿಗೂ ಸಮಾಧಾನ. ಮೊದಲೆಲ್ಲ ಅವಳು ಶರತನ ಕಾಳಜಿಯ ಸ್ಪರ್ಶಕ್ಕೂ ಹಾವು ಕಂಡವಳಂತೆ ಮಿಡುಕಿ ಹಿಂದೆ ಸರಿಯುತ್ತಿದ್ದಾಗ ಶರತನಿಗಿಂತ ತಾರಿಣಿಗೇ ವಿಪರೀತ ಸಿಟ್ಟು ಬರುತ್ತಿತ್ತು. ಶರತ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಮನುಷ್ಯ. ಪಾರಿಯನ್ನು ತಂಗಿಯಂತೆ ಸಲಿಗೆಯಿಂದಲೂ, ನಾದಿನಿ ಅಂತ ಕಾಳಜಿಯಿಂದಲೂ ನೋಡಿಕೊಂಡ ಮೇಲೆ ಪಾರಿ ಈಗ ಸ್ವಲ್ಪ ಹದಕ್ಕೆ ಬಂದಿದ್ದಾಳೆ, ಅದೇ ಅರ್ಧ ಇಂಚಿನ ಸ್ಮೈಲು ಕೊಡುವಷ್ಟು. ವಿಷಯ ಏನೆಂದರೆ, ಮೊದಲಿಂದಲೂ ಪಾರಿಗೆ ಗಂಡು ದೇಹದ ಗಂಧದ ಮೇಲೂ ವಿಚಿತ್ರ ಭಯ. ಹಾಗೇನಾದರೂ ಯಾರಾದರೂ ಹತ್ತಿರತ್ತಿರ ಬಂದರೆ ಪಟಕ್ಕನೆ ಅವಳ ಎದೆ ಸೀಳಿನ ಮಧ್ಯೆ ಗಂಟು ಗಂಟಾಗಿ ಉಳಿದುಹೋಗಿದ್ದ ಬಳೆಗಾಜಿನ ಗೀರುಗಾಯದ ಕಲೆ ಇದ್ದಕ್ಕಿದ್ದ ಹಾಗೆ ಹಸಿಯಾಗಿಬಿಡುತ್ತಿತ್ತು… ಆಗ ಭಯಂಕರ ನೋವಿನಿಂದ ಮುಖ ಕಿವುಚುತಿದ್ದಳು.
ಹಾಲಿನ ದಿವಾನಿನ ಮೇಲೆ ಒಂಟಿಯಾಗಿ ಮಲಗುತ್ತಿದ್ದ ಎಳೇ ಯೌವ್ವನದ ಹುಡುಗಿ ಪಾರಿಗೆ ಅಕ್ಕಬಾವನ ರೂಮಿಂದ ಬರುತ್ತಿದ್ದ ಮಂಚದ ಕರ್‌ಕಿರ್ ಶಬ್ದ, ಸಿನಿಮಾದ ಪ್ರಣಯ ಪ್ರಸಂಗಗಳು ಪ್ರೀತಿಯ, ಮಾಧುರ್ಯದ ಆಸೆ ಹುಟ್ಟಿಸೇ ಇಲ್ಲ ಎಂದರೆ ಸುಳ್ಳಾದೀತು. ಆದರೆ ಅದೊಂದು ಗೀರುಗಾಯದ ಕಲೆ ಸದಾ ಅವಳನ್ನು ಕಟ್ಟಿಹಾಕುತ್ತಿತ್ತು. ಅದೂ ಬೇಡ, ಇದೂ ಬೇಡ.. ಮದುವೆಯ ಗೊಡವೆಯೇ ಬೇಡ ಅಂತಿದ್ದ ಕೆಂಪು ಕೆಂಪಾಗಿ ಮೈ ಕೈ ತುಂಬಿಕೊಂಡಿದ್ದ ಪಾರಿಯನ್ನು ಒಬ್ಬನೇ ಮಗ, ಎಂಟೆಕೆರೆ ಕಾಫಿ ತೋಟ, ಅತ್ತೆ ಮಾವನ ಕಾಟವಿಲ್ಲಾಂತ ಹೇಳಿ ಸೂರಿಗೆ ಗಂಟು ಬೀಳಿಸಿದ್ದರು. ಯಾವುದೋ ಕನಸುಗಳ ಮಧ್ಯೆ ಹೇಗೋ ಹಂಗಿಂಗಿದ್ದ ಪಾರಿಜಾತ ಸುರೇಶನ ಹೆಂಡತಿಯಾಗಿ ಮಲೆನಾಡಿನ ಈ ಒಂಟಿ ಮನೆಗೆ ಬಂದು ಬಿದ್ದದ್ದೂ ಒಂದು ಕನಸಾಗಬಾರದಾ ಅಂತ ಪಾರಿ ಈ ಒಂದು ತಿಂಗಳಿಂದ ದೇವರಿಗೆ ಪ್ರತಿ ಹೂವಿಡುವುದಕ್ಕೆ ಮುಂಚೆಯೂ ಬೇಡಿಕೊಳ್ಳುತ್ತಿದ್ದಳು.


ಅಮ್ಮಾರೇ, ಸೂರಪ್ಪಗೌಡರು ಕೊಟ್ಟುಕಳಿಸಿದ್ರು ಅಂತ ದೊಡ್ಡ ಹಲಸಿನ ಹಣ್ಣು ಹೊತ್ತುಕೊಂಡು ಬಂದ ಚನ್ನ. ಪಾರಿ ಹೊರಗೆ ಬಂದವಳೆ ಚನ್ನನನ್ನು ನೋಡಿ ಕಾಫಿ ಕೊಡಲಾ ಅಂದಳು. ‘ಕಾಪಿ ಗೀಪಿ ಬ್ಯಾಡ್ರ’ ಅಂತ ರಾಗವಾಗಿ ನುಲಿದ ಚನ್ನನನ್ನು ನೋಡಿ ಪಾರಿಗೆ ನಗುಬಂತು. ಇಂಥ ನಗುವೆಲ್ಲ ನನಗೆ ಅಭ್ಯಾಸ ಅನ್ನುವ ಹಾಗೆ ಅವನು ‘ಅಮ್ಮಾರೇ ನಾನು ಚನ್ನ, ಇಲ್ಲೇ ಇರೋನಿ. ಅಗಾ ಅಲ್‍ಕಾಣೊ ಲೈನ್ ಮನೇಲೀ.. ಏನಾರಾ ಬೇಕಿದ್ರೆ ನೀವು ಕೂ.. ಅನ್ನಿ ಸಾಕು, ನಾ ಓ.. ಅಂತ ಓಡ್ಕಂಡ್ ಬತ್ತಿನಿ’ ಅಂತ ಮಾತಿಗಿಂತಲೂ ರಾಗವಾಗಿ ಲುಂಗಿ ಅಂಚಿಡಿದುಕೊಂಡು ನುಲಿಯುತ್ತಾ ಹೊರಟ. ಆಚೇ ಕಡೆಯಿಂದ ಡರ್ ಡರ್ ಅಂತ ಸದ್ದು ಮಾಡುತ್ತಾ ಬುಲೆಟ್ ಬಂದು ನಿಂತಿತು. ಪಾರಿ ಚನ್ನನ ದಾರಿ ನೋಡುತ್ತಾ ನಗುತ್ತಲೇ ನಿಂತಿದ್ದಳು. ಸೂರಿ ಅದನ್ನು ನೋಡಿದವನೆ ‘ಅವ್ನು ಚನ್ನ, ಒಂಥರಾ ಹೆಣ್ಗ. ಮದ್ವೆಗಂತ ಊರಿಗ್ ಹೋಗಿದ್ದ. ಬಂದ್ನಲ್ಲ.. ಇನ್ನ ಮನೆ ಕೆಲ್ಸ ಏನಿದ್ರೂ ಅವನೇ ನೋಡ್ತಾನೆ’ ಅಂದು ಒಳಗೆ ಕರೆದ. ರಾತ್ರಿಯ ನಿರಾಶೆ ಮತ್ತು ಪಾರಿಯನ್ನು ಬೈದ ಬೇಸರ ಎರಡೂ ಸುರೇಶನನ್ನು ಬಿಡದೇ ಕಾಡುತ್ತಿದ್ದವು. ಪಾರಿ ಮಾತ್ರ ಅದ್ಯಾವುದೂ ತನಗೆ ನೆನಪೇ ಇಲ್ಲ ಅನ್ನುವ ಹಾಗೆ ‘ಅವ್ರಿಗೂ ಮದುವೆ ಆಯ್ತಾ’ ಅಂತ ಕಣ್ಣರಳಿಸಿ ಮುಗ್ಧತೆಯಲ್ಲಿ ಕೇಳಿದಾಗ ಸೂರಿ ‘ಅವ್ರು ಇವ್ರು ಏನ್ ಬೇಡ ಅವ್ನು ಅಂತಾನೇ ಕರಿ. ಬೇಸರ ಕಳೀಲಿಕ್ಕೆ ಮಾತಿಗ್ ಸಿಗದು ಅವ್ನೊಬ್ನೇ ಇಲ್ಲಿ’ ಅಂತೇಳಿ ಯಾವುದೋ ಲೆಕ್ಕ ಬರೆಯುತ್ತಾ ಕೂತ.


‘ಇನ್ನಾದ್ರೂ ಹೀಗೇ ಹೆಂಗಸರಂಗೆ ಸೊಂಟ ಕುಣುಸ್ಕೋತ ನಡೀಬೇಡ’ ಅಂತ ತನ್ನ ಅಕ್ಕನ ಮಗಳು, ಮೊನ್ನೆಯಷ್ಟೇ ಮದುವೆಯಾದ ಹೊಸಾ ಹೆಂಡ್ತಿ ಮಾದೇವಿ ಚನ್ನನಿಗೆ ಮೊದಲ ರಾತ್ರಿಯೇ ಹೇಳಿದ್ದು ಈ ಅಂಗೈ ಅಗಲದ ಮನೆಯ ಸಣ್ಣ ಮೂಲೆಯ ಕೋಣೆ ಅಂದುಕೊಳ್ಳಬಹುದಾದ ಕೋಣೆಯ, ಬಾಗಿಲು ಅಂದುಕೊಂಡ ಬಾಗಿಲಿಂದ ಗೋಡೆ ಅಂದುಕೊಂಡ ಗೋಡೆಯ ಆಚೆಗೆ ಹೋಗಿಬಿಟ್ಟಿತಾ ಅಂತ ಅವನು ಕಣ್ಣಲ್ಲಿ ನೀರು ತುಂಬಿಕೊಂಡು ಅವಮಾನದಿಂದ ನಿಂತಿದ್ದ. ‘ಹೆಂಗಸ್ರಂಗೆ ಅಳ್ಬೇಡ ಮತ್ತೆ’ ಅಂತ ಮಾದೇವಿ ಹೇಳಿದ್ದು ಹುಡುಗಿಯ ರಾಗದ, ಹುಡುಗಿಯ ಹಾವಭಾವದ ಚನ್ನನಿಗಲ್ಲ, ಅವಳು ಯಾವತ್ತೂ ಕಾಣದ ಚನ್ನನ ಗಂಡಸ್ತನದ ಬಗ್ಗೆ ಅಂತ ಅನ್ನಿಸಿದ್ದೇ ತಡ ದುಃಖ, ರೋಷ ಒಟ್ಟೊಟ್ಟಿಗೆ ಬಂದು ಸೇವಂತಿಗೆ, ಗುಲಾಬಿ, ಮಲ್ಲಿಗೆಯನ್ನೆಲ್ಲಾ ತರಿದು ಹಾಕಿದ್ದ ಹೊಸಾ ದಟ್ಟಕ್ಕೆ ಅವಳನ್ನು ತಳ್ಳಿ ತನಗೆ ತಾನೇ ಸಮಾಧಾನವಾಗುವಷ್ಟು ಎರಗಿ ಬಿದ್ದಿದ್ದ ಚನ್ನ. ಮಾವನ ಮೇಲಿನ ಸಲಿಗೆಗೆ ಎಂದಿನಂತೆ ಮಾತಾಡಿದ್ದ ಮಾದೇವಿ ಅದೇ ಸಲಿಗೆಯ ಮುಖದಲ್ಲೇ ನಾನು ದಣಿದೇ ಇಲ್ಲ, ನೀನೇ ಸೋತೆ ಅನ್ನುವ ಹಾಗೇ ಚನ್ನನನ್ನು ನೋಡುತ್ತಲೇ ಇದ್ದಳು. ಚನ್ನ ಮಾತ್ರ ‘ತಾನೂ ಅಪ್ಪಟ ಗಂಡಸು’ ಅನ್ನುವ ಅಹಮ್ಮಿಗೆ ಪೆಟ್ಟಾದವನಂತೆ ಮತ್ತೆ ಅವಳನ್ನು ಆವರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.


ದಿನಗಳಿಗೇನು? ತಮ್ಮ ಪಾಡಿಗೆ ತಾವು ಮಗ್ಗುಲು ಬದಲಿಸಿಕೊಂಡು ಹೋಗುತ್ತಿರುತ್ತವೆ. ಅಷ್ಟೂ ದಿನಗಳ ಮಗ್ಗುಲಿನಲ್ಲಿ ಸೂರಿಯ ಪ್ರೀತಿಯ ಆಸೆಗಳಿಗಾಗಲಿ, ರಾತ್ರಿಯ ಬಯಕೆಗಳಿಗಾಗಲೀ ಒಗ್ಗಿಕೊಂಡಿರದಿದ್ದರೂ ಪಾರಿ ಮೊದಲಿನ ಹಾಗೆ ಭಯ ಬೀಳುತ್ತಿರಲಿಲ್ಲ. ಹೆಚ್ಚು ಕಡಿಮೆ ಹತ್ತಿರದವರ್ಯಾರೂ ಇಲ್ಲದ ಸೂರಿಯಾದರೂ ಹೆಂಡತಿ ಇನ್ನೂ ಎಳೆಯವಳು, ಹೊಂದಿಕೊಳ್ಳುತ್ತಾಳೆ ಅಂತ ಆಗಾಗ ಅವರಿಸುತ್ತಲೇ ಸುಧಾರಿಸಿಕೊಂಡು ತನ್ನ ಪಾಡಿಗೆ ತಾನು ಉಳಿದು ಹೋಗಿದ್ದು ಪಾರಿಗೆ ನೆಮ್ಮದಿಯಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಚನ್ನನ ಮಾಯದ ಜತೆ ಅವಳಿಗೆ ಖುಷಿ ಕೊಡುತ್ತಿತ್ತು.
ತೀರಾ ಗಂಡಸಾಗಿದ್ದರೂ ಗಂಡಸಿನಂತಿಲ್ಲದ, ಆಸೆಗಣ್ಣಿಲ್ಲದ, ಕಣ್ಣಿಗೆ ಕಣ್ಣಚ್ಚಿ ಮಾತಾಡುವ ಚನ್ನನ ಮೇಲೆ ಪಾರಿಗೆ ವಿಪರೀತ ಅನ್ನುವಷ್ಟು ಸಲಿಗೆ. ಯಾವ ಗಂಡಸಿನ ಮೈ ಗಂಧದ ಮೇಲೆ ಅವಳಿಗೆ ಹೇಸಿಗೆಯಿತ್ತೊ ಅದನ್ನು ಮೀರಿಕೊಳ್ಳಲು ಸೂರಿಯ ಬಯಕೆಯ ತಾಳಿಕೆ-ಬಾಳಿಕೆಯ ಜೊತೆಗಿಂತ ಚನ್ನನ ಈ ನಿರ್ಲಿಪ್ತತೆ ಹೆಚ್ಚು ಅಂತನ್ನಿಸಿ, ನಿಧಾನಕ್ಕೆ ಧ್ಯಾನಸ್ಥಳಾಗಿ ಗಂಡಸಿನ ಲೋಕವನ್ನು, ಗಂಡನನ್ನೂ ಕೊಂಚ ಸಹಾನುಭೂತಿಯಿಂದ ನೋಡುವುದು ಪಾರಿಗೆ ಸಾಧ್ಯವಾಗುತ್ತಿತ್ತು. ಇತ್ತ ಚನ್ನನ ಹೆಂಡತಿ ಮಾದೇವಿಯೂ ಸಿಟ್ಟು, ಬೇಸ್ರದ ಸನ್ಯಾಸೀ ಚನ್ನನ ಸಂಗಕ್ಕಿಂತ ಸೂರಪ್ಪಗೌಡನಂಥ ಆಸೆ ಕಣ್ಣುಗಳು ಎಷ್ಟು ತಂಪು ಅಂತ ಅಂದುಕೊಂಡೇ ಚನ್ನನ ಹೆಂಡತಿಯಾಗಿ ಉಳಿದಿರುವ ಯಾವ ಕಲ್ಪನೆಗಳೂ ಇಲ್ಲದೆ, ಬಯಕೆ-ಬಯಕೆಗಳಿಲ್ಲದ ಅಥವಾ ಹಾಗಂದುಕೊಂಡ ಎರಡು ಬೇರೆ ಬೇರೆ ಜೀವಗಳು ಒಂದೇ ಹಸಿರು ಸೀಮೆಯ ವಿಶಾಲವಾದ ತೊಟ್ಟಿಮನೆಯಲ್ಲಿ ಮತ್ತು ಅದರಿಂದಾಚಿನ 100 ಮೀಟರ್ ದೂರದ ತುದೀ ಲೈನ್‍ಮನೆಯಲ್ಲಿ ಏದುಸಿರೆಳೆದುಕೊಳ್ಳುತ್ತ ಮತ್ತೆರಡು ಬೇರೆ ಬೇರೆ ಅತೃಪ್ತ ಜೀವಗಳಿಗೆ ಬೆನ್ನು ಹಾಕಿ ಮಲಗುತ್ತಿದ್ದವು.


ಈ ಒಂದೇ ದಡದ ಎರಡೂ ಕಡೆ ಎರಡು ಕೆರೆಗಳು ಅನ್ನುವುದು ನಿಜವೋ… ಒಂದೇ ಕೆರೆಯನ್ನು ಇದೊಂದು ದಡ ಎರಡಾಗಿಸಿತು ಅನ್ನುವುದು ನಿಜವೋ ಅಂತ ಪಾರಿ ಅದೊಂದು ದಿನ ಅಲ್ಲೇ ಇಳಿಜಾರಿನಲ್ಲಿ ಬಟ್ಟೆ ಸೆಣೆಯುತ್ತಾ ಕೂತಿದ್ದ ಮಾದೇವಿಗೆ ಹೇಳುವಂತೆ ತನಗೆ ತಾನೇ ಕೇಳುವಂತೆ ಕೂಗಿಕೊಂಡಳು. ಮಾದೇವಿಗೆ ಪಾರಿಯ ಭಾಷೆ ತಿಳಿಯದೆ ಹೂಂಗುಟ್ಟತ್ತಾ ತನ್ನದೇ ಯೋಚನೆಯಲ್ಲಿ ಸೂರಿಯ ಶರ್ಟಿಗೆ ಸೋಪು ಹಚ್ಚುತ್ತಿದ್ದಳು.
ಹೌದಲ್ಲ.. ಬಂಧ ಮತ್ತು ಬಯಕೆ ಎಂಬ ಎರಡು ಕೆರೆಗಳು ನನ್ನ ಗತಕಾಲದ ದಡದ ಬಗ್ಗುಲಿಗಿದೆಯೋ ಅಥವಾ ಪಾರಿಜಾತ ಮತ್ತು ಸೂರಿ ಎಂಬ ಒಂದೇ ವಿಶಾಲವಾದ ಕೆರೆಯು ಅಪನಂಬಿಕೆ, ಕರಾಳ ನೆನಪಿನ ಭಯದಿಂದಾಗಿ ಎರಡಾಗಿದೆಯೋ ಅಂಥ ಪಾರಿ ಯೋಚಿಸುತ್ತಾ ನಿಂತಿದ್ದಳು. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ಒಬ್ಬ ಗಂಡಸಿನ ಬಗ್ಗೆ ಭಯ, ಉದಾಸೀನ, ಜಿಗುಪ್ಸೆಗಳನ್ನೆಲ್ಲಾ ಬೆಳೆಸಿಕೊಂಡು ಬಂದ ನನ್ನಂತಹ ಪಾರಿಜಾತಳಿಗೆ ಮಾತ್ರ ದಡಗಳು ಪ್ರತ್ಯೇಕಿಸಲು ಇದೆ ಅಂತನ್ನಿಸುತ್ತದೆ. ಸೂರಿಯ ಪ್ರಾಮಾಣಿಕ ಪ್ರೀತಿ, ಆಸೆ, ಸಿಟ್ಟುಗಳಿಗಿಂತ ಚನ್ನನ ಮಾತು, ನಡಿಗೆ, ಅವನ ಹೆಣ್ತನದ ಅಸಹಾಯಕ ಲಕ್ಷಣಗಳು ಇಷ್ಟವಾಗುತ್ತವೆ ಅನ್ನುವುದನ್ನು ನಾನಾದರೂ ಹೊರಗೆ ನಿಂತು ಒಪ್ಪಿಕೊಳ್ಳುತ್ತೇನಾ ಅಂತ ಯೋಚಿಸಿ ಪಾರಿ ತಣ್ಣಗೆ ಮತ್ತೆ ಮತ್ತೆ ತಣ್ಣಗಾಗಿಬಿಡುತ್ತಿದ್ದಳು.

ಇನ್ನು, ಹಳ್ಳದ ಹರಿಯುವ ನೀರಿನಲ್ಲಿ ಸೂರಪ್ಪನ ಅಷ್ಟಗಲದ ಶರ್ಟು ಜಾಲಾಡುತ್ತಿದ್ದ ಮಾದೇವಿಗೆ ಬೇರೆಯದೇ ಯೋಚನೆ. ಸೂರಪ್ಪಗೌಡನಂತಹ ಗಟ್ಟಿಮುಟ್ಟಾದ ಗಂಡಸಿನ ಉಸಿರುಗಟ್ಟುವ ಅಪ್ಪುಗೆ, ಸರಸದಲ್ಲಿ ಪಿಸುಗುಡುವಾಗ ಚುಚ್ಚುವ ಮೀಸೆ, ಕಡೇಪಕ್ಷ ಅವನು ಗದರುವಾಗಿನ ಏರು ರಾಗ, ಜಗಳಾಡಿ ಎಳೆದಾಡುವಾಗಿನ ಒರಟುತನ ಎಲ್ಲವನ್ನೂ ಬಸಿದುಕೊಂಡ ಗಟ್ಟಿ ಗಂಡಸೊಬ್ಬನ ಎದೆಗೆ ಒರಗುವುದು ಎಷ್ಟು ಚಂದ ಅಂತ ಯಾವುದೇ ಮುಜುಗರವಿಲ್ಲದೇ ಅಂದುಕೊಳ್ಳುತ್ತಿದ್ದಳು. ದಿನೇ ಬೆಳಗೆದ್ದು ಸೂರಪ್ಪಗೌಡನ ಮನೆಯ ಹಟ್ಟಿ ಗುಡಿಸಿ, ಕೊಟ್ಟಿಗೆ ಹಾಕಿ, ಆಗಾಗ ಅಕ್ಕಿ ಕೇರುತ್ತಾ, ರಾಗಿ ಬೀಸುತ್ತ ಅಡಿಗೆಗೆ ಸೊಪ್ಪು ತರಕಾರಿಗಳನ್ನು ಸೋಸುತ್ತಾ ಕೂರುವ ಹೆಣ್ಣಿಗನಂಥ ಚನ್ನನನ್ನು ಗೊತ್ತಿದ್ದೂ ಗೊತ್ತಿದೇ ಕಟ್ಟಿಕೊಂಡಿರುವ ನನಗೆ ಈಗ ಯಾಕೆ ಇದೆಲ್ಲಾ ಸಹಿಸಿಕೊಳ್ಳಲಾಗುತ್ತಿಲ್ಲ. ಮದುವೆಯಾಗಿ ಗರತಿ ಗೌರಮ್ಮ ಅನ್ನಿಸಿಕೊಳ್ಳೋಕಂತಲೇ ಹೆಣ್ಣಾದಾಗಿಂದ ತಂತಾನೇ ಹುಟ್ಟಿಕೊಂಡ ಈ ಆಸೆಗಳ ಚಿÀವುಟಿಕೊಳ್ಳಬೇಕಾ ಅಂತ ಪ್ರತಿಭಟಿಸುವ ಮಾದೇವಿಯ ಕಣ್ಣುಗಳು ಇದೆಲ್ಲವನ್ನು ವಿವರಿಸಿ ಒಪ್ಪಿಸುವ ಭಾಷೆ ಗೊತ್ತಾಗದೇ ಉರಿಯುತ್ತಿದ್ದವು.


ಸೂರಿ ತೋಟದಿಂದ ಬರುವಷ್ಟರಲ್ಲಿ ಮಳೆ ಬಂದ್ರೆ ಅಂತ ಪಾರಿಜಾತ ಜಗುಲಿಯಲ್ಲಿ ಕೂತು ಅವನ ದಾರಿಯನ್ನೇ ನೋಡುತ್ತಿದ್ದಳು. ‘ಮಾದೇವಿ ಇಂಥ ಮಳೆಗೆಲ್ಲಾ ಹೆದರುವುದಿಲ್ಲಾ, ಆದ್ರೂ ಈ ಕರೇ ಮೋಡ ನೋಡಿದ್ರೆ ಮಳೆ ನಿಲ್ಲಾದು ಕಾಣೆ, ಸೂರಪ್ಪ ಬಂದ್ರೆ ಪಟ್ಟಂತ ಹೊಂಟು ಬಿಡ್ತಿನಿ’ ಅಂತ ಚನ್ನ ಮನಸಲ್ಲೇ ಲೆಕ್ಕ ಹಾಕುತ್ತಾ ದಾರಿಗೇ ನಿಂತಿದ್ದ.
ನೀವು ಏನಾದರೂ ಮಾತಾಡಿಕೊಳ್ಳಿ ಅಂತ ಮಳೆ ಧೋ ಅಂತ ಸುರಿದೇ ಬಿಟ್ಟಿತು.

ಈ ಕಡೆ, ಇನ್ನೇನು ಮನೆ ತಲುಪೇ ಬಿಟ್ಟೆ ಅಂತ ಬಂದ ಸೂರಿ ಮಳೆಗೆ ಸಿಕ್ಕು ಬಿದ್ದು ಮುಂದೆ ಹೋಗಲಾಗದೆ ಲೈನ್‍ಮನೆಯ ಸೂರಡಿಯಲ್ಲಿ ನೆನೆಯದೆ ನಿಲ್ಲಲು ಹರ ಸಾಹಸ ಪಡುತ್ತಿದ್ದ.

ಚೀರಿ ಅಳುವಂಥ ದುಃಖದ ಮಳೆ ಇದು. ಆಕಾಶ ಸಮಾಧಾನ ಆಗುವವರೆಗೂ ಸುರಿಯುತ್ತಲೇ ಇರುತ್ತದೆ. ಹೀಗೇ ಅತ್ತು ಚೀರಿ ಕರಗಿಬಿಡಬೇಕು ಅನ್ನಿಸಿತು ಪಾರಿಗೆ. ಒಳಗೆದ್ದು ಬಂದು ಮಾತಿಲ್ಲದೆ ಕೂತಿದ್ದ ಪಾರಿ ಕಂಡು ಚನ್ನ ‘ಅಮ್ಮಾರೆ ಭಯಾಯ್ತಾ?’ ಅಂದ.

‘ಇಷ್ಟು ಜೋರು ಸುರಿಯೋ ಮಳೆಗೆ, ಗುಡುಗು ಸಿಡಿಲು, ಸೂರು ಕಿತ್ತು ಹೋಗೋ ಈ ಗಾಳಿಗೆ ನಾನ್ ಭಯ ಪಡೋದೇ ಇಲ್ಲ ಅಂತಲ್ಲ ಚನ್ನ, ಆದ್ರೆ ಇಂಥ ಯಾವ ಕುಂಭದ್ರೋಣದ ಮಳೆ ಸಂಜೆನೂ ಮಾಡದ ಗಾಯಗಳನ್ನ ಅದೊಂದು ವೈಶಾಖದ ಧಗೆಯ ರಾತ್ರಿ ಇನ್ನೂ ಎಳಸು ಎಳಸಾಗಿದ್ದ ಆ ಹುಡುಗಿಯ ಎದೆಯ ಮೇಲೆ ಮಾಡಿಬಿಟ್ಟಿದೆ. ಈ ಭಯ ಏನೂ ಅಲ್ಲ ಚನ್ನ’ ಅಂದಾಗ ಸಿಡಿಲು ಮನೆ ತುಂಬಾ ಬೆಳಗುತ್ತಿತ್ತು.

ಲೈನ್‍ಮನೆಯ ಸೂರಡಿಯ ಜಗುಲಿಯಲ್ಲಿ ನಿಂತು ಮನೆ ಕಡೆ ಹೋಗಲೂ ಆಗದೆ, ನಿಲ್ಲಲೂ ಆಗದೇ ಅರ್ಧರ್ಧ ನೆನೆದೇ ಹೋಗಿದ್ದ ಸೂರಪ್ಪಗೌಡನು ಕಲ್ಲೆಸೆದಂಥ ಮಳೆ ರಭಸ ತಾಳಲಾರದೆ ವಿಧಿ ಇಲ್ಲದೆ ಬಾಗಿಲು ಬಡಿದಾಗ ಮಾದೇವಿಯ ಮನೆಯೊಳಗೆ ಸಂಜೆ ಗಾಢವಾಗಿ ರಾತ್ರಿ ಹನಿಸುತ್ತಿತ್ತು. ಐದಾರು ಸಾವಿರ ಕಾಫಿ ಕುಕ್ಕೆಗಳು ನರ್ಸರಿಯಲ್ಲಿದ್ದವು, ಪಾರೀ ಮನೆಯ ಮುಂದೆ ಅಷ್ಟೊಂದು ಪ್ರೀತಿಯಿಂದ ಹಾಕಿಸಿದ್ದ ಗುಲಾಬಿ ಗಿಡಗಳು, ಮೊನ್ನೆ ಮೊನ್ನೆ ತರಿಸಿದ್ದ ಆಂಥೋರಿಯಂ ಎಲ್ಲಾ ಈ ಪರಿ ಗಾಳಿಗೆ ಉಳಿದಿರುತ್ತವಾ ಅಂತ ಲೆಕ್ಕ ಹಾಕುತ್ತಲೇ ‘ಇವತ್ತದೆಲ್ಲಾ ಮಣ್‍ಪಾಲೇ ಮಾದೇವಿ’ ಅಂತ ಕೊರಗುತ್ತಾ ಕೂರಲೋ ಬೇಡವೋ ಅಂತ ಆ ಪುಟ್ಟ ಮನೆ ತುಂಬಾ ಇದ್ದ ಒಂದೇ ಒಂದು ಮಂಚದ ತುದಿಗೆ ಭುಜ ಒರಗಿಸಿ ಕೂತ ಸೂರಿ. ಮಾದೇವಿ ಏನು.. ಎಂಥ.. ಅಂತ ತಿರುಗಿ ಕೇಳದೆ ‘ಹೂಂ.. ಸೂರಪ್ಪ್‍ಗೌಡ್ರೇ’ ಅಂದು ಬಾಗಿಲು ಮುಂದೆ ಮಾಡಿ ನಿಂತಳು.

‘ಚನ್ನ, ಅದೇ ಆ ಬೇಸಿಗೆಯ ರಾತ್ರಿ ಅಂದ್ನಲ್ಲ.. ಆ ರಾತ್ರಿ ಅಟ್ಟದ ಮೇಲೆ ತೆರೆದ ಹೆಂಚಿಂದ ಆಕಾಶ ಮನೆಯೊಳಕ್ಕೆ ಬರುತ್ತಿತ್ತು. ಚುಕ್ಕಿಗಳು ಕಣ್ಣು ಮಿಟುಕಿಸುತ್ತಿದ್ದವು. ಊರಿನ ಹಬ್ಬಕ್ಕೆ ಸೇರಿದ್ದ ನಾವೆಲ್ಲಾ ಒಂದೇ ಜಮಾಖಾನದ ಮೇಲೆ ಮಾತಾಡುತ್ತಾ, ನಗುತ್ತಾ ಗೊತ್ತೇ ಆಗದ ಹಾಗೇ ನಿದ್ದೆಗೆ ಬಿದ್ದಿದ್ದೆವು. ಅಷ್ಟೊಂದು ಗಾಢ ನಿದ್ದೆ ನನಗೀವತ್ತಿನ ತನಕ ಮತ್ತೆ ಬಂದ ನೆನಪೇ ಇಲ್ಲ. ಅಷ್ಟು ಚಂದದ ನಿದ್ದೆ, ಯಾವುದೋ ಒಳ್ಳೆಯ ಕನಸಿನ ಮಧ್ಯೆ ಹಾಯಾಗಿರುವಾಗಲೇ ಏನೋ ಚೀರಲಾಗದ ಪ್ರತಿಭಟಿಸಲಾಗದ ಒಂದು ದಾಳಿ ಶುರುವಾಯಿತು, ಜೀವನ ಪರ್ಯಂತ ಕಾಡುವ ದಾಳಿ!’

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಶ್ರಾವಣಾ

‘ಕಾಪಿ ಕಾಸಿ ಕೊಡ್ಲಾ, ಬೆಚ್ಚುಗೆ’ ಮಾದೇವಿ ಮತ್ತೇನಾದರೂ ಮಾತಡಲಾ ಅಂತ ಮಾತು ತೆಗೆದಳು. ಅವನು ಬೇಡವೆಂದ. ‘ಬಡವ್ರ್ ಮನೆ ಕಾಪಿ’ ಅಂತ ಮಾದೇವಿ ರಾಗ ತೆಗೆದಾಗ ಸೂರಪ್ಪಗೌಡ ಕಿಟಕಿಯ ಸರಳುಗಳಿಂದ ಬೀಸಿ ಬಂದ ಎರಚಲಿಗೆ ಅಡ್ಡ ಹಾಕುವಂತೆ ಕೈ ಅಡ್ಡ ಹಿಡಿದ. ಮಾದೇವಿ ತನ್ನ ಪಾಡಿಗೆ ತಾನು ಒಲೆ ಉರುವಿ ಹಾಲಿಗೆ ಕಪ್ಪುಬೆಲ್ಲ ಹಾಕಿದಳು. ಎದೆಯೊಳಗಿನ ಮಂಜುಗಡ್ಡೆಗೆ ಈ ಬೆಚ್ಚಗಿನ ಕಾಪಿ ಎಲ್ಲಿ ಸಾಲೀತು ಅಂತ ತಲೆ ಕೊಡವಿಕೊಂಡ ಸೂರಿ. ಮೈ ನುಗ್ಗಿ ಕೊರೆಯುತ್ತಿರುವ ಈ ಪರಿಯ ಚಳಿಗೆ ಈಗ ಮನೆಯಲ್ಲಿದ್ದಿದ್ದರೆ ಪಾರಿಯ ಕವುಚಿಕೊಳ್ಳಬಹುದಿತ್ತು, ಪಾರಿ ಈಗೇನು ಕೊಸರಾಡುವುದಿಲ್ಲ. ಆದರೆ ಪ್ರೀತಿ.. ನನ್ನಷ್ಟೇ ಪ್ರೀತಿಯಿಂದ ಅವಳು ಸ್ಪಂದಿಸುತ್ತಿರಲಿಲ್ಲ. ಬರೀ ದೇಹ ಬೆಚ್ಚಾಗುತ್ತಿತ್ತು.. ಗುಟುಕು ಕಾಫಿಯಷ್ಟೇ.

‘ಅವನು ವರಸೆಯಲ್ಲಿ ನಂಗ್ ಏನಾಗಿದ್ದ ಅನ್ನೋದು ಆವತ್ತಿಂದ ನಂಗೆ ಮರೆತೆ ಹೋಯ್ತು. ಅದೆಲ್ಲಾ ತುಂಬಾ ಎಳವೆಯ ದಿನಗಳು ಚನ್ನ, ಅದಾದ್ಮೇಲೂ ಮತ್ತೆ ಹಾಗೇ ಆಯ್ತು ಅಂತ ಹೇಳಿದ್ರೆ ಯಾಕಾಯ್ತು? ಹೇಗೆ ಅವಕಾಶ ಆಯ್ತು? ಅಂತ ಸುಮ್ಮನೆ ನನ್ ಮೇಲೆ ನಂಗೇ ಕೋಪ. ತಪ್ಪಿಸಿಕೊಳ್ತಾ ಹೋದೆ, ಆದ್ರೂ ತಪ್ಪಲಿಲ್ಲ. ನನ್ನ ಪ್ರತಿಭಟನೆ ಪ್ರತಿಭಟನೆ ಅಂತ ಅವ್ನಿಗೂ ಅನ್ನಿಸ್ಲಿಲ್ಲ… ಅವ್ನ್ ಊರಿಗ್ ಹೋದ. ಊರಿಗ್ ಹೋದವನು ಮತ್ತೆ ಬಂದ್ರೆ ಅಂತ ಭಯ ಆಗ್ತಿತ್ತು. ಭಯಕ್ಕೆ ಸರಿಯಾಗಿ ಅವ್ನು ಮತ್ತೆ ಬರ್ತಿದ್ದ. ಮತ್ತೆ ಮತ್ತೆ ಬರ್ತಾನೇ ಹೋದ. ಅವನು ಅಂದ್ರೆ ನಂಗೆ ಹುಲಿ, ಸಿಂಹ, ಹಾವು, ಹಲ್ಲಿ, ಹೇಲು, ಉಚ್ಚೆ. ಅವ್ನು ಬಂದಷ್ಟೂ ದಿನಾನೂ ನಾನಂದ್ರೆ ನಂಗೆ ಬರೀ ಭಯ, ಬರೀ ಹೇಸಿಗೆ. ಅದೊಂದ್ ದಿನ ನಾನ್ ಹೇಸಿಕೊಳ್ಳುವಾಗಲೇ ಎದ್ದು ಹೊರಟಿದ್ದ ಅವ್ನು ಕೈ ಹರಿದು, ಕಾಲು ನುರಿದು ಲಾರಿ ಅಡಿಯಲ್ಲಿ ಸತ್ತು ಬಿದ್ದಿದ್ದ ಅಂತ ಮನೆಯವರೆಲ್ಲಾ ಗೊಳೋ ಅಂತ ಚೀರಾಡಿ ಅಳುವಾಗ ನಾನೂ ತುಂಬಾ ಹೊತ್ತು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅತ್ತು ಹಗುರಾಗಿ ಅವ್ನು ಮತ್ತೆ ತಿರುಗಿ ಬರುವುದಿಲ್ಲ ಅಂತ ಖಾತ್ರಿಯಾದ ಮೇಲೆ ಅವನೊಬ್ಬನ್ ಬಗ್ಗೆ ಇದ್ದ ಜಿಗುಪ್ದೆ, ಭಯ ಸುತ್ತಲಿನ ಎಲ್ಲಾ ಗಂಡಸರ ಬಗ್ಗೆ ಹುಟ್ಟಿಕೊಳ್ತು. ಅವನ ಚುಚ್ಚೋ ಮೀಸೆ ನನ್ನ ನುಣುಪು ಕೆನ್ನೆನ ಘಾಸಿ ಮಾಡಿದ್ ಈಗಲೂ ಹಾಗೇ ಇದೆ ಅನ್ನೋ ಹಾಗೆ, ಅವ್ ಅಷ್ಟೊಂದು ಬಲವಾದ ಮಾಂಸ ಖಂಡಗಳು ಈಗ್ಲೂ ನನ್ನ ಕಟ್ಟಿ ನೋಯುಸ್ತಿವೆ ಅನ್ನೋ ಹಾಗೆ ಸೂರಿಯ ದಟ್ಟವಾದ ಕಪ್ಪು ಮೀಸೆ, ಅವನ ಕಡೆದಿಟ್ಟಂಥ ಬಲವಾದ ದೇಹ ನನ್ನನ್ನ ಈಗ್ಲೂ ಕಾಡತ್ತೆ ಚನ್ನ. ನಿನ್ನ ಸೂರಪ್ಪಗೌಡನೂ ಅಂಥದ್ದೇ ಕಟ್ಟುಮಸ್ತಾದ ಗಂಡಸು ಅಂತನೇ ನಂಗೆ ಸಾವಿರ ಅನುಮಾನ ಹುಟ್ಟಿ ನನ್ನ ತಾಳಿ ಕಟ್ಟಿದ ಗಂಡನೇ ದೊಡ್ಡ ಹಿಂಸೆ ಅನ್ನಿಸೋ ಹಾಗೆ..

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

‘ಗುಟುಕು ಕಾಫಿಯಷ್ಟೇ!’ ಅಂತ ಸೂರಿ ಉಸುರಿಕೊಂಡಿದ್ದು ಮಾದೇವಿಗೆ ಸಾವಿರ ಅರ್ಥದಲ್ಲಿ ಕೇಳಿಸಿತ್ತು. ಬೆಚ್ಚಗೆ ಕಾಪಿ ಮಾತ್ರ ಯಾಕೆ, ಏನೂ ಬೇಕಾದರೂ ಕೊಡಬಹುದು. ಆದ್ರೆ ಯಾರಿಗೆ? ಎಲ್ಲಾನೂ ತಾವಗೇ ಕೊಡೋಕ್ಕೆ ನಿಂತ್ಕೊಬಾರ್ದು. ಪಡೆಯೋರು ಸುಮ್ಮನೆ ಪಡ್ಕೊಬೇಕು ಅಂತ ಅಂದುಕೊಳ್ಳುತ್ತಾ ಮಾದೇವಿ ಹಾಲಿಗೆ ಕಾಪಿ ಬೆರೆಸಿ ಎತ್ತಾಡಿಸುತ್ತಿದ್ದಳು. ನಂಗ್ ಬೇಕೆನ್ಸೋ ಅದೇ ಚುಚ್ಚು ಮೀಸೆ, ಹರವಾಗಿರೋ ಎದೆಗೆ ಈಗಂದ್ರೆ ಈಗ ಹೋಗಿ ತಾಕೊಕೊಳ್ಬೋದು, ಹೆಣ್ತನಕ್ ಸೋಲದವರ್ಯಾರಿದ್ದಾರೆ. ಆದ್ರೆ ಹೆಣ್ತನ ಸೋಲ್ಬಾರ್ದು ಅಷ್ಟೇಯಾ ಅಂತ ಅಂದುಕೊಳ್ಳುತ್ತಲೇ ಕಾಪಿ ಕೊಡುವಾಗ ಮಾದೇವಿ ಸೂರಪ್ಪ ಗೌಡನ ಬೆರಳುಗಳು ಪರಸ್ಪರ ತಾಕಿಕೊಂಡವು.
‘ಸೂರಪ್ಪಗೌಡ್ರೇ ಹಿಂಸೆನಾ??’ ಚನ್ನ ಬೆನ್ನು ನೆಟ್ಟಗೆ ಮಾಡಿ ಕೂತ. ‘ನನಗ್ ಮೀಸೆ ಇಲ್ಲ. ನಾನ್ ಗಟ್ಟಿ ಗಂಡಸಲ್ಲ ಅಂತ ನನ್ ಬಗ್ಗೆ ಧೈರ್ಯನಾ? ಅಮ್ಮಾರೇ’ ಕೀರಲು ಧ್ವನಿಯಲ್ಲೂ ಚನ್ನ ಗಟ್ಟಿಯಾಗೇ ಕೇಳಿದ. ಗಂಡ್ಸಿನ ಗಟ್ಟಿತನ ಅಂದ್ರೆ ಮೀಸೆ, ಭುಜನಾ? ಪಾರಿಯ ಮಾತುಗಳು ಮಾದೇವಿಯ ವ್ಯಂಗ್ಯಕ್ಕಿಂತ ಹೆಚ್ಚು ಕೆಟ್ಟದು ಅನಿಸಿತು ಚನ್ನನಿಗೆ. ‘ನಂಗೆ ಮೀಸೆ ಇಲ್ಲ. ಆದ್ರೆ ನಾನೂ ಗಂಡ್ಸೇ. ಗಡಸು ಧ್ವನಿ, ದೊಡ್ಡೆದೆ, ಭುಜ ಇಲ್ದಿದ್ರೇನು? ನಿಯತ್ತಿರ್ಬೇಕು. ಅದೊಂದಿಲ್ದಿದ್ರೆ ಎಂಥ ಗಂಡಸೂ ಕಚ್ಚೆ ಹರಕನೇ. ಮೈ ನೋಡಿ, ತಾಕತ್ ನೋಡಿ ಸೂರಪ್ಪ ಹೀಗೆ, ಚನ್ನ ಹೀಗೀಗೆ ಅಂತ ಅಂದ್ಕೊಂಡ್ ತೀರ್ಮಾನ ಮಾಡೇ ಬಿಡೋದಾ? ನಂಬ್ಕೆ ಜೊತೆಗೇ ಒಂದೀಸು ಸಮಾಧಾನ್ದಲ್ಲಿರ್‍ಬೇಕು ಬೇಕು-ಬೇಡ ಅನ್ನಾದು, ನಮ್ ಗಾಯಕ್ಕೆ ನಾವ್ ಔಷ್ದಿ ಮಾಡ್ಕಳ್ದೆ, ಬೇರೆವ್ರ್ನೂ ಗಾಯ ಮಾಡೋದಾ ಹೇಳಿ’ ಅಂತ ಚನ್ನ ಎದ್ದು ನಿಂತ. ಮತ್ತದೇ ಹೆಣ್ದನಿಯಲ್ಲಿ ಅಮ್ಮಾರೆ ಅಂತ ಕೂಗಲು ಹೊರಟವನು ಯಾಕೊ ಇದ್ದಬದ್ದ ಶಕ್ತಿಯೆಲ್ಲಾ ಒಗ್ಗೂಡಿಸಿ ಜೋರಾಗಿ ‘ಪಾರೀ..’ ಅಂದ.

ಲೈನ್‍ಮನೆಯಲ್ಲಿ ತಾಕಿದ ಎರಡು ಬಯಕೆಗಳ ಬೆರಳುಗಳೋ ಮಾತು ಶುರುವಾದರೆ ಅನ್ನುವ ಭಯಕ್ಕೆ ತಂತಾನೇ ಮೌನವಾದವು. ಹರವಾದ ಎದೆÉ, ದಪ್ಪಮೀಸೆ ಅಂತಿದ್ದ ಮಾದೇವಿಯ ಬೆರಳ ತುದಿಯ ಬಯಕೆಗೆ ಸೂರಪ್ಪ ಶೃತಿಯಾಗಲಿಲ್ಲ. ಅಷ್ಟಾಸೆಯ ಮಾದೇವಿಯೂ ಹದಗೊಳ್ಳಲಿಲ್ಲ. ಜೋರಾಗಿ ನಿಟ್ಟುಸಿರಿಟ್ಟು ಗಾಳಿಯಿಂದ ತೆಗೆದ ಕಿಟಕಿಗೆ ಅಗುಳಿ ಹಾಕಿದಳು. ಪಾರಿ, ಮಾದೇವಿ, ಚನ್ನ, ಸೂರಪ್ಪ ಯಾರೇ ಆಗಲೀ ತಂತಾನೇ ಆವರಿಸುವ, ಮಿಡಿಯುವ, ತಣಿಯುವ, ತಣಿಸುವ ಪ್ರೇಮದ ನಂಬಿಕೆ ಬರಬೇಕು.

‘ಪ್ರೇಮದ ಬಿಸಿ ಇಲ್ಲದೆ ಎದೆಯ ಶೀತ ಕರಗಿ ಬೆಚ್ಚಗಾಗುವುದಿಲ್ಲ’ ಅಂತ ಸೂರಪ್ಪ ಎದ್ದು ನಿಂತ.

‘ಹೂಂ ಪಾರೀ.. ಚನ್ನನ ಕಣ್ಣೊಳಗೂ ಆಸೆ ಹೊತ್ತಿಕೊಳ್ಳಬಹುದು.’ ಚನ್ನ ಬಾಗಿಲು ತೆಗೆದು ಹೊರಗೆ ಬಂದ.


ಸೂರಪ್ಪ ಹೊರಡುವಾಗ ಮಾದೇವಿ ಬೆಂಕಿ ಆರಿಸುತ್ತಿದ್ದಳು. ಸೂರಿ ಎದೆಯ ಮಂಜುಗಡ್ಡೆಗೆ ಬೆಚ್ಚಗಿನ ಕನಸಾದರೂ ಇರಲಿ ಅಂತ ನಡುಗುತ್ತಾ ಹೊರಟ. ಚನ್ನ ಕಣ್ಣೊಳಗೆ ಅದ್ಯಾವುದೋ ಕಿಡಿ ಇಟ್ಟುಕೊಂಡು ಕತ್ತಲಲ್ಲಿ ನಡೆದು ಬಂದ. ಪಾರಿಗೆ ಗಂಡಸೆಂದರೆ ಬರೀ ಅವನೊಬ್ಬನ ನೆನಪಲ್ಲ ಅನ್ನಿಸಿತು.

ಒಂದು ಉರಿವ ರಾತ್ರಿ ಸುರಿದ ಮಳೆ ನಿಧಾನಕ್ಕೆ ತೊಟ್ಟಿಕ್ಕುತ್ತಲೇ ಇತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

Exit mobile version