Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

vistara short story contest winners

:: ಡಾ. ಬಿ. ಜನಾರ್ದನ ಭಟ್

ಈ ಇಪ್ಪತ್ತೈದು ಕತೆಗಳನ್ನು ಕನ್ನಡದ ಈ ಕಾಲಘಟ್ಟದ ಕತೆಗಳ ಪ್ರಾತಿನಿಧಿಕ ಕತೆಗಳು ಎಂದು ಭಾವಿಸಿದರೆ ಈ ಕತೆಗಳನ್ನು ಒಟ್ಟಾರೆಯಾಗಿ ಸಮೀಕ್ಷಿಸುವ ಮೂಲಕ ಸಣ್ಣಕತೆಗಳ ಒಲವು ನಿಲುವುಗಳನ್ನು ಅರಿಯಬಹುದು ಅನಿಸುತ್ತದೆ.

ಅದಕ್ಕಿಂತ ಮೊದಲು ಸಣ್ಣಕತೆಗಳ ಪ್ರಕಾರಕ್ಕೆ ಸಂಬಂಧಿಸಿದ ಕೆಲವು ಮಾತುಗಳು: ಸಣ್ಣಕತೆಗಳಲ್ಲಿ ಒಂದು ಕಥಾಂಶ ಅಥವಾ ಟೇಲ್ ಪ್ರಾಪರ್ ಮತ್ತು ಅದರ ಮೂಲಕ ವ್ಯಕ್ತವಾಗುವ ಆಶಯ – ಕತೆಗಾರ ರೂಪಿಸುವ ಒಂದು ಪರಿಣಾಮ – ಓದುಗರಿಗೆ ಮುಖ್ಯವಾಗಿ ಗಮನಕ್ಕೆ ಬರುವ ಅಂಶಗಳು. ಸತ್ಯದ ಅನ್ವೇಷಣೆ ಬಹುಮಟ್ಟಿಗೆ ಕತೆಗಾರಿಕೆಯ ಉದ್ದೇಶ.

ಆದರೆ ಸಣ್ಣಕತೆಯು ರ್ಯಾಶಿಯಾಸಿನೇಷನ್ (ratiocination) ಅಥವಾ ತರ್ಕಪ್ರಕ್ರಿಯೆಯ ಕಥಾನಕವೂ ಹೌದು – ಎನ್ನುವುದನ್ನು ಮೊದಲನೆಯ ಆಧುನಿಕ ಕತೆಗಾರ ಎಡ್ಗರ್ ಅಲನ್ ಪೋ-ನೇ ಹೇಳಿದ್ದಾನೆ. ಈ ಕಾಲದ ಕತೆಗಳಿಗೆ ಈ ಮಾದರಿ ಹೆಚ್ಚು ಪ್ರಿಯವಾಗಿದೆ. ಬಹುತೇಕ ಕತೆಗಳು ರ್ಯಾಶಿಯಾಸಿನೇಷನ್ ಮಾದರಿಯವು. ಇದನ್ನು ಬಳಸುವುದರಲ್ಲಿ ಹೆಚ್ಚುಗಾರಿಕೆಯಾಗಲಿ, ದೋಷವಾಗಲಿ ಇಲ್ಲ. ಆದರೆ ಕಥೆಯ ಸಂವಿಧಾನವನ್ನು ಕಲ್ಪಿಸುವಾಗ ಡೆನ್ಯೂಮೋ ಅಥವಾ ಇಳಿಮುಖ ಕ್ರಿಯೆ ಮತ್ತು ಅಂತ್ಯವನ್ನು – ಅಂತ್ಯವು ಬೀರಬೇಕಾದ ಪರಿಣಾಮವನ್ನು – ಕಲ್ಪಿಸುವಲ್ಲಿ ಬಹುತೇಕ ಕತೆಗಾರರು ವಿಫಲರಾಗುತ್ತಿರುವುದನ್ನು ಈ ಕೆಲವು ಕತೆಗಳಲ್ಲಿ ನಾನು ಗಮನಿಸಿದ್ದೇನೆ.

ಸಣ್ಣಕತೆ ನೈತಿಕ ಅರಿವಿನಲ್ಲಿನ ಬದಲಾವಣೆಯನ್ನು ತೋರಿಸುತ್ತದೆ; ಕಾದಂಬರಿಯಲ್ಲಿ ಬದುಕಿನ ನೈತಿಕ ಬದಲಾವಣೆಯನ್ನು ಚಿತ್ರಿಸುತ್ತದೆ (ಸಣ್ಣ ಕತೆಯು ಇದನ್ನು ಸೂಚಿಸಬಹುದಷ್ಟೆ). ಶೋರರ್ ಪ್ರಕಾರ – ಸಣ್ಣಕತೆಯಲ್ಲಿ ‘ನೈತಿಕ ಸಾಕ್ಷಾತ್ಕಾರದ ನೆಲೆ’ (ಆರ್ಟ್ ಆಫ್ ಮೋರಲ್ ರಿವಿಲೇಶನ್) ಇರುತ್ತದೆ; ಕಾದಂಬರಿಯಲ್ಲಿ ‘ನೈತಿಕ ವಿಕಾಸದ ನೆಲೆ’ (ಆರ್ಟ್ ಆಫ್ ಮೋರಲ್ ಇವೊಲ್ಯೂಷನ್) ಇರುತ್ತದೆ. ಸಣ್ಣಕತೆಯು ವಿಕಾಸದ ಪ್ರಕ್ರಿಯೆಯನ್ನು ಪರೀಕ್ಷಿಸಲು ಅದರಲ್ಲಿ ಮನುಷ್ಯ ಸಂಬಂಧಗಳು, ಅಥವಾ ಸಮಾನಾಂತರ ಕತೆಗಳು / ವೈದೃಶ್ಯಗಳು ಬೇಕಾಗುತ್ತವೆ. ಹೀಗೆ ಪರೀಕ್ಷಿಸುವ ವೇದಿಕೆಯಾಗಿದ್ದರೂ ಕೂಡ ಸಣ್ಣ ಕತೆಯಲ್ಲಿ ಒಂದು ಅನಿಸಿಕೆಯಾಗಿ ಅಥವಾ ತೀರ್ಮಾನವಾಗಿ ಮಾತ್ರ ಈ ನೈತಿಕ ಅರಿವಿನ ಸಾಕ್ಷಾತ್ಕಾರ ಬರುತ್ತದೆ. ಈ ಪರಿಶೀಲನೆಯ ಮೂಲಕ ಒಂದು ಮೌಲ್ಯವಾಗಿ ಸ್ವೀಕರಿಸಲ್ಪಟ್ಟ ನೈತಿಕ ಸಾಕ್ಷಾತ್ಕಾರದ ನೆಲೆಯು ಅದರ ಬೆಳವಣಿಗೆ ಅಥವಾ ನಿಜವಾದ ಸಾಕ್ಷಾತ್ಕಾರವನ್ನು ಓದುಗರ ಊಹೆಗೆ ಬಿಡಬೇಕಾಗುತ್ತದೆ.

ಫ್ರಾಂಕ್ ಒಕಾನರ್ ಹೇಳುವ ಪ್ರಕಾರ ಸಣ್ಣಕತೆಗಳ ನಾಯಕರು ಮುಳುಗಿಹೋದ ಜನರ (ಸಬ್‍ಮರ್ಜ್‍ಡ್ ಪಾಪ್ಯುಲೇಶನ್ ಗ್ರೂಪ್) ಪ್ರತಿನಿಧಿಗಳಾಗಿರುತ್ತಾರೆ. ಹಾಗಾಗಿ ಪತನದ ಅನುಭವ ಕೊಡುವ ಕತೆಗಳೇ ಹೆಚ್ಚು. ಈ 25 ಕತೆಗಳ ಮಟ್ಟಿಗೂ ಅದನ್ನು ಹೇಳಬಹುದು. ಇಲ್ಲಿ ಬಹುಮಾನ ಪಡೆದ ಕತೆಗಳ ಬಗ್ಗೆ ಒಟ್ಟಿನಲ್ಲಿ ಕೆಲವು ಮಾತುಗಳನ್ನು ಹೇಳುವುದಾದರೆ ಇವು ಸಮಕಾಲೀನತೆ ಉಳ್ಳ, ಸಾಮಾಜಿಕ ಪ್ರಸ್ತುತತೆಯುಳ್ಳ ಕತೆಗಳಾಗಿರುವುದರ ಜತೆಗೆ ‘ಮುಳುಗಿಹೋದ’ ಸ್ಥಿತಿಯಿಂದ ಎದ್ದು ಬರುವ ಛಲವನ್ನು ಅಥವಾ ಮುಳುಗುತ್ತಿರುವವರಿಗೆ ಕೈನೀಡಿ ಎಬ್ಬಿಸುವ ಛಾತಿಯನ್ನು ತೋರಿಸುತ್ತವೆ. ಹಾಗಾಗಿ ಅವು ಬಹುಮಾನಕ್ಕೆ ಅರ್ಹವಾಗಿವೆ. ಈ ಮಾನದಂಡದಲ್ಲಿ ಅಥವಾ ಯಾವುದೇ ಮಾನದಂಡದಲ್ಲಿ ನೋಡಿದರೂ ಬಹುಮಾನಕ್ಕೆ ಅರ್ಹವಾಗಿರುವ ಇನ್ನಷ್ಟು ಕತೆಗಳು ಈ 25 ಕತೆಗಳಲ್ಲಿವೆ. ಕೇವಲ ಎಂಟು ಕತೆಗಳನ್ನು ಆರಿಸಿಕೊಳ್ಳಬೇಕಾದಾಗ, ಅಂತಹ ಕೆಲವು ಕತೆಗಳನ್ನು ಹೊರಗಿಡುವ ತೀರ್ಮಾನ ಕೈಗೊಳ್ಳುವುದು ಕೂಡ ಸ್ವಲ್ಪ ಕಷ್ಟವೇ ಆಗಿತ್ತು.

ನನಗೆ ಸಂಪಾದಕರು ಕಳುಹಿಸಿಕೊಟ್ಟಿರುವ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕತೆಗಳಲ್ಲಿ ಮೊದಲ ಎಂಟು ಸ್ಥಾನಗಳಿಗೆ ಆಯ್ಕೆಯಾಗಿರುವ ಕತೆಗಳ ಕುರಿತು ಟಿಪ್ಪಣಿಗಳು ಹೀಗಿವೆ:

ಪ್ರಥಮ ಬಹುಮಾನ ಪಡೆದ ಕತೆ: ಸೋಮನ ಕುಣಿತ

ಸೋಮನ ಕುಣಿತ ಎನ್ನುವುದು ಒಂದು ಗ್ರಾಮೀಣ ಆಚರಣೆ ಎನ್ನುವುದು ಕತೆಯಿಂದ ತಿಳಿದುಬರುವ ಮಾಹಿತಿ; ಈ ಆಚರಣೆಯ ಕುರಿತು ತಿಳಿಯದವರಿಗೂ ಕತೆಯನ್ನು ಓದಿ ಮೆಚ್ಚಲು ಬೇಕಾಗುವಷ್ಟು ಮಾಹಿತಿ ಕತೆಯೊಳಗೆಯೆ ಸಿಗುವುದರಿಂದ ಈ ಆಚರಣೆಯ ಬಗ್ಗೆ ತಿಳಿಯದ ಓದುಗರಿಗೆ ಸಮಸ್ಯೆಯಾಗುವುದಿಲ್ಲ. ಕೊಂಡಮ್ಮ ದೇವಿ ಎಂಬ ಗ್ರಾಮದೇವತೆಯ ಇಬ್ಬರು ಅಂಗರಕ್ಷಕರಲ್ಲಿ ರೌದ್ರ ಸೋಮ ಮತ್ತು ಸೌಮ್ಯ ಸೋಮ ಎಂಬ ಇಬ್ಬರು ಪಾತ್ರಧಾರಿಗಳಿರಬೇಕು. ರೌದ್ರ ಸೋಮನ ವೇಷಧಾರಿ ಕೆಂಪು ಬಣ್ಣ ಬಳಿದುಕೊಂಡು 15 ಕಿಲೋ ಭಾರವಾದ ರೌದ್ರ ಸೋಮನನ್ನು ಹೊತ್ತು ಕುಣಿಯಬೇಕು. ರಂಗಯ್ಯ ರೌದ್ರ ಸೋಮನನ್ನು ಹೊತ್ತು ಕುಣಿಯುತ್ತಿದ್ದ ಶಕ್ತಿವಂತ. ಅವನ ತಮ್ಮ ನರಸುಮ್ಮ ಹಳದಿ ಬಣ್ಣದ ಸೌಮ್ಯ ಸೋಮನನ್ನು ಹೊತ್ತು ಸುಮ್ಮನೆ ನಿಂತರೆ ಸಾಕಿತ್ತು. ರಂಗಯ್ಯ ಊರು ಬಿಟ್ಟು ಹೋದ ಮೇಲೆ ರೌದ್ರ ಸೋಮನನ್ನು ಹೊರುವವರು ಯಾರೂ ಸಿಕ್ಕಿರಲಿಲ್ಲ. ತನಗೆ ಬದುಕುವ ದಾರಿ ಮಾಡಿಕೊಡುತ್ತಿದ್ದ ತಮಟೆಯ ಚರ್ಮ ಹರಿದು ಬೇರೊಂದು ಚರ್ಮಕ್ಕಾಗಿ ದೊಡ್ಡಮದುರೆಯ ಜಾತ್ರೆಯ ಕೋಣಬಲಿಯ ದಿನಕ್ಕೆ ಕಾಯುತ್ತಿದ್ದ ನರಸುಮ್ಮನಿಗೆ ನಿಷೇಧ ಇತ್ಯಾದಿ ಗೊಂದಲದಿಂದ ಚರ್ಮ ಸಿಗುವುದಿಲ್ಲ. ಎರಡು ದಿನ ಕಳೆದು ಜಾತ್ರೆಯಾಗುತ್ತಿದ್ದ ಪಕ್ಕದ ಸ್ವಾಂದೇನಹಳ್ಳಿಗೆ ಹೋದರೆ ಅಲ್ಲಿ ಪೊಲೀಸರು ಎಚ್ಚರಿಕೆಯಿಂದ ಕಾದುಕೊಂಡಿದ್ದು ಬಲಿಯಾಗದಂತೆ ತಡೆಯುತ್ತಾರೆ. ಹೊಟ್ಟೆಗಿಲ್ಲದೆ ಚರ್ಮಕ್ಕಾಗಿ ಕಾದುಕೊಂಡಿದ್ದ ನರಸುಮ್ಮನ ಸಾತ್ವಿಕ ರೋಷವು ಅವನನ್ನು ರೌದ್ರ ಸೋಮನನ್ನು ಹೊತ್ತುಕೊಂಡು ಕುಣಿಯುವಂತೆ ಪ್ರಚೋದಿಸುತ್ತದೆ. ಅವನ ರೌದ್ರ ಕುಣಿತದೊಂದಿಗೆ ಕತೆ ಕೊನೆಯಾಗುತ್ತದೆ.

ದಲಿತರ ಬಡತನ ಮತ್ತು ಜೀವನದ ಹೋರಾಟಗಳ ಒಂದು ಅದ್ಭುತ ಚಿತ್ರಣ ನೀಡುವ ಈ ಕತೆಯ ಭಾಷೆ, ಬಳಸುವ ರೂಪಕಗಳು ಎಲ್ಲವೂ ಸಶಕ್ತವಾಗಿವೆ. ಇದು ತನ್ನ ಒಡಲಲ್ಲಿಟ್ಟುಕೊಂಡಿರುವ ಸಮೃದ್ಧ ಜೀವನಾನುಭವ ಮತ್ತು ಅಷ್ಟೇ ಹೃದಯಸ್ಪರ್ಶಿಯಾಗಿ ಓದುಗನ ಅನುಭವವಾಗಿ ಮಾರ್ಪಡಿಸುವ ಶಕ್ತಿಯಿರುವ ಕತೆಯಾದುದರಿಂದ ಮೊದಲನೆಯ ಬಹುಮಾನಕ್ಕೆ ಅರ್ಹವಾದ ಕತೆಯಾಗಿದೆ.

ಇಂತಹ ಕತೆಗಳ ಸಮಾಜಶಾಸ್ತ್ರೀಯ ವಿವರಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಹೋದಾಗ ಅವು, ವರ್ತಮಾನ ಕಾಲದ ಅನುಭವಗಳಿಂದ ಪ್ರಶ್ನಾರ್ಹವಾಗುತ್ತವೆ. ಅನಂತಮೂರ್ತಿಯವರ ‘ಸಂಸ್ಕಾರ’ದ ಶವಸಂಸ್ಕಾರದ ಪ್ರಶ್ನೆ, ಚಿನುಅ ಅಚೆಬೆಯವರ ಕತೆಗಳ ಆಚರಣೆಗಳು ಈ ರೀತಿಯವು. ಇಂತಹ ಕತೆಗಳು ಪ್ರಶ್ನೆಗಳನ್ನು ಮೀರಿ, ಕೆಲವೊಮ್ಮೆ ದೇಶ ಕಾಲಗಳನ್ನೂ ಮೀರಿ ಚಿರಂತನ ರೂಪಕಗಳಾಗುವ ಶಕ್ತಿಯನ್ನು ಪಡೆದಾಗ ಅವು ಯಶಸ್ವಿ ಸಾಹಿತ್ಯಕೃತಿಗಳಾಗುತ್ತವೆ. ‘ಸೋಮನ ಕುಣಿತ’ ಕತೆಗೆ ಆ ಬಗೆಯ ಶಕ್ತಿಯಿರುವುದರಿಂದ ಇದಕ್ಕೆ ಮೊದಲನೆಯ ಬಹುಮಾನ ಕೊಡಬಹುದೆನ್ನುವುದು ನನ್ನ ಅಭಿಪ್ರಾಯವಾಗಿದೆ.

ಎರಡನೆಯ ಬಹುಮಾನ: ಅಂತಃಕರಣದ ಟಿಪ್ಪಣಿಗಳು

ಈ ಕತೆಯು ಕುಟುಂಬದ ಕೇಂದ್ರದಲ್ಲಿರುವ ವಿದ್ಯಾವಂತ ಮತ್ತು ಪ್ರಜ್ಞಾವಂತ ಗೃಹಿಣಿಯೊಬ್ಬಳ (ಭಾಗೀರಥಿ) ಸ್ವಗತದ ಮೂಲಕ ನಿರೂಪಿಸಲ್ಪಟ್ಟಿದೆ. ಆಕೆಗೆ ಬಹುಶಃ ಡಿಪ್ರೆಶನ್ ತರಹದ ಸಮಸ್ಯೆಯಿದ್ದು ಆಕೆಯ ವೈದ್ಯೆ ಸುಮನ ಆಕೆಗೆ ತನ್ನ ಬಗೆಗೆ ಬರೆದಿಡುವಂತೆ ಹೇಳಿದ್ದರಿಂದ ಟಿಪ್ಪಣಿಯ ರೂಪದಲ್ಲಿ ಇದನ್ನು ಬರೆಯುತ್ತಿದ್ದಾಳೆ. ಅವಳ ಕನಸಿನಲ್ಲಿ ಅಥವಾ ಭ್ರಮಾಲೋಕದೊಳಗೆ ಒಬ್ಬ ಹುಡುಗ ದಂಡವನ್ನಾಡಿಸುತ್ತಾ ಪ್ರತ್ಯಕ್ಷವಾಗುತ್ತಾನೆ. ಇದು ಅಂತಃಪ್ರಜ್ಞೆಗೆ ರೂಪಕವಾಗಿರಬಹುದು. ಕಾರ್ಲ್ ಯೂಂಗ್ ಈ ರೀತಿ ಚಿತ್ರಗಳನ್ನು ಬರೆಸುವುದು, ಅಕ್ಷರಗಳಲ್ಲಿ ದಾಖಲಿಸುವುದು, ಹೇಳಿಕೊಳ್ಳುವುದು ಇತ್ಯಾದಿಗಳ ಮೂಲಕ ಮನಸ್ಸಿನ ಅಂತರಾಳದಲ್ಲಿ ಅಥವಾ ಅನ್‍ಕಾನ್ಷಸ್ ಹಂತದಲ್ಲಿರುವ ಅದುಮಿಟ್ಟ ಮನಸ್ಸಿನ ಕಲ್ಮಶಗಳನ್ನು ಹೊರತಂದು ಮನೋಚಿಕಿತ್ಸೆ ನೀಡುತ್ತಿದ್ದ. ನಿರೂಪಕಿಯ ಕನಸಿನ ಹುಡುಗ ಇಂತಹ ಒಂದು ಸಂಕೇತವಾಗಿರಬಹುದು.

ಆಕೆಯ ಗಂಡ ಪ್ರಕಾಶ ರಾಜಕಾರಣಿ – ಬೈಸೆಕ್ಸುವಲ್. ಆತನಿಗೆ ಮತ್ತೊಬ್ಬ ಪುರುಷನ ಜತೆಗೂ ಸಂಪರ್ಕವಿದೆ. ಅದರ ವಿಡಿಯೋ ಒಮ್ಮೆ ವೈರಲ್ ಆಗಿ ರಾಜಕೀಯ ಬಿರುಗಾಳಿ ಎದ್ದಾಗ ಈ ಕಥಾನಾಯಕಿ ಅದು ಸಹಜ ಎಂದು ಹೇಳಿ ಬಿರುಗಾಳಿಯನ್ನು ತಣ್ಣಗಾಗಿಸಿ ಗಂಡನನ್ನು ಕಾಪಾಡಿದ್ದಳು.

ಅವಳ ಇಬ್ಬರು ಮಕ್ಕಳೂ ಅತ್ತ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಇಂಟರ್ ಸೆಕ್ಸ್ ಮಕ್ಕಳಾಗಿ ಹುಟ್ಟಿರುತ್ತಾರೆ. ಮೊದಲು ಹುಟ್ಟಿದ ಮಗುವನ್ನು ಹೆಣ್ಣಾಗಿ ಲಿಂಗಪರಿವರ್ತನೆ ಮಾಡಿಸಿ ಭೂಮಿ ಎಂದು ಹೆಸರಿಟ್ಟಿದ್ದರು. ಎರಡನೆಯದನ್ನು ಗಂಡಾಗಿ ಮಾಡಿ ಮುಗಿಲು ಎಂದು ಹೆಸರಿಟ್ಟಿದ್ದರು. ಬೆಳೆದ ಮಕ್ಕಳು ತಾವು ಏನಾಗಿದ್ದೇವೋ ಅದಕ್ಕಿಂತ ಭಿನ್ನವಾದ ಮನಸ್ಥಿತಿಯನ್ನು ಹೊಂದಿ ಅಪ್ಪ ಅಮ್ಮನ ಮೇಲೆ ಅಸಮಾಧಾನಗೊಂಡಿರುತ್ತಾರೆ. ಕೊನೆಗೆ ಮುಗಿಲು ಮನೆಬಿಟ್ಟು ಹೋಗಿರುತ್ತಾನೆ/ಳೆ.

ಅಪ್ರಜ್ಞೆಗೆ ಸಂಕೇತವಾಗಿರಬಹುದಾದ ಹುಡುಗ ಕೊನೆಯ ಭಾಗದಲ್ಲಿ ಅವಳನ್ನು ನುಂಗಲು ಬರುವಂತಹ ಅನುಭವ ನಿರೂಪಕಿಗೆ ಆಗುತ್ತದೆ. ಆಮೇಲೆ ಸ್ವಲ್ಪ ದಿನ ಚಿಕಿತ್ಸೆ ಪಡೆದು ಬರುತ್ತಾಳೆ. ಈ ಕತೆಯ ವೈಶಿಷ್ಟ್ಯ ಎಂದರೆ ಕತೆಯ ಹುಡುಗನನ್ನು ಬಿಟ್ಟರೆ ಉಳಿದ ವಿವರಗಳು ವಾಸ್ತವವೂ ಆಗಿವೆ, ಸಾಂಕೇತಿಕವೂ ಆಗಿವೆ. ಭಾಗೀರಥಿ ಅಥವಾ ಗಂಗೆ ಎನ್ನುವ ಹೆಸರು, ಭೀಷ್ಮಪ್ರತಿಜ್ಞೆಯ ಚಿತ್ರ ಇತ್ಯಾದಿ ಹಲವು ಸಂಕೇತಗಳು ಕತೆಯಲ್ಲಿವೆ.

ಕತೆಯಲ್ಲಿ ಟಿಪ್ಪಣಿಗಳನ್ನುಬರೆಯುವವಳು ಮತ್ತು ಕೇಂದ್ರಪ್ರಜ್ಞೆಯಾಗಿರುವವಳು ಒಬ್ಬಳು ‘ತಾಯಿ’. ಇದೊಂದು ತನ್ನದೇ ಸಮಸ್ಯೆಗಳನ್ನುಳ್ಳ ಆಧುನಿಕ ಮಹತ್ವಾಕಾಂಕ್ಷೀ ಸಂಸಾರ. ಇದರಲ್ಲಿ ಸಂಸಾರದ ಪೂರ್ವಪ್ರಜ್ಞೆಗೆ ಸಂಕೇತವಾಗಿ ಚಿಕ್ಕಿ ಇದ್ದಾರೆ; ಪತ್ನಿಗೆ ಪೂರ್ತಿ ನಿಷ್ಠನಾಗಿಲ್ಲದ ಮಹತ್ವಾಕಾಂಕ್ಷೀ ಗಂಡನಿದ್ದಾನೆ. ಮಕ್ಕಳು ಅವರದೇ ಸಮಸ್ಯೆಗಳ ಜತೆಗೆ ಹೆತ್ತವರನ್ನು ಧಿಕ್ಕರಿಸುತ್ತ ತಮ್ಮ ಅಸ್ತಿತ್ವದ ಅರ್ಥವನ್ನು ಅನ್ವೇಷಿಸುವ ಕಷ್ಟಗಳನ್ನು ಎದುರಿಸುತ್ತಿವೆ. ಇಲ್ಲಿ ಯುವಜನಾಂಗ ಬೇಜವಾಬ್ದಾರಿಯದು ಎನ್ನುವ ನಿಲುವಿಲ್ಲ. ಹೆತ್ತವರ ಆಯ್ಕೆಯಿಂದಾಗಿ ಅವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕಷ್ಟವಾಗುತ್ತಾ ಇದೆ. ರ್ಯಾಶಿಯೋಸಿನೇಶನ್ ಮಾದರಿಯ ಕತೆಯಾಗಿ, ಕನ್ನಡ ಕಥನಪರಂಪರೆಗೆ ಹೊಸದೇ ಆದ ಸಮಸ್ಯೆಯೊಂದರ ಮೂಲಕ ಬದುಕಿನ ಅರ್ಥಶೋಧನೆ ನಡೆಸುವ ಕಾರಣ ಈ ಕತೆ ಬಹುಮಾನಕ್ಕೆ ಅರ್ಹವಾಗುತ್ತದೆ.

ಮೂರನೆಯ ಬಹುಮಾನ: ಅದು ಅವರ ಪ್ರಾಬ್ಲಮ್

ಈ ಕತೆ ಬೆಂಗಳೂರು ನಗರ ಕೇಂದ್ರಿತ ಆಧುನಿಕ ಚಟುವಟಿಕೆಗಳಲ್ಲಿ ಒಂದಾದ (ಬಹುಶ ಅನಿವಾಸಿ ಭಾರತೀಯರಿಂದ ನಡೆಸಲ್ಪಡುತ್ತಿರುವ) ಸಮಾಜಸೇವಾ ಚಟುವಟಿಕೆಯ ಸಂಘಟನೆಯೊಂದರ ಕೆಲವು ವ್ಯಕ್ತಿಗಳ ಕತೆ. ವಿಷಯ ವೈಯಕ್ತಿತವಾದರೂ ಸಂಘಟನೆಯ ಚಟುವಟಿಕೆ ಮತ್ತು ಸಾಮಾಜಿಕ ಪ್ರಸ್ತುತತೆಯಿರುವ ಕಾರಣ ಗಮನ ಸೆಳೆಯುತ್ತದೆ. ವಾರಾಂತ್ಯದಲ್ಲಿ ಯುವಜನಾಂಗದ ಸಾಮಾಜಿಕ ಕಾಳಜಿ ಇರುವ ಯುವಕ ಯುವತಿಯರು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗಿ ಅವರಿಗೆ ಆಪ್ತ ಸಲಹೆ, ಮುಂದಿನ ಜೀವನದ ಮಾರ್ಗದರ್ಶನ, ಆರೋಗ್ಯ ಸಲಹೆ, ಸಾಮಾಜಿಕ ಜಾಗೃತಿಗಾಗಿ ಬೀದಿ ನಾಟಕ ಇತ್ಯಾದಿಗಳನ್ನು ಹಮ್ಮಿಕೊಳ್ಳುತ್ತಾರೆ. ಮಕ್ಕಳಿಗೆ ಚಾಕಲೇಟ್, ಗಿಫ್ಟ್ ಇತ್ಯಾದಿಗಳ ಆಮಿಷದಿಂದಾಗಿ ಅವರು ರಜಾದಿನವೂ ಬರುತ್ತಾರೆ. ಈ ಕತೆಯ ನಾಯಕಿಗೆ ಇದೇ ಸಂಘಟನೆಯ ಆಕರ್ಷಕ ಯುವಕ ಮ್ಯಾಡಿಯ ಬಗ್ಗೆ ಆಕರ್ಷಣೆ ಇದೆ. ಅವನನ್ನು ಒಲಿಸಿಕೊಳ್ಳಲು, ಅವನ ಬೈಕಿನಲ್ಲಿ ಹೋಗಲು ಆಸೆಪಡುತ್ತಾಳೆ.

ಇಂತಹ ಒಂದು ವಾರಾಂತ್ಯದ ಕಾರ್ಯಕ್ರಮದಲ್ಲಿ ಅವಳಿಗೆ ಮ್ಯಾಡಿಯು ಬಡ ಬಾಲಕನೊಬ್ಬನನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡದ್ದು ಗಮನಕ್ಕೆ ಬರುತ್ತದೆ. ಅವನ ಬಗ್ಗೆ ದೂರು ನೀಡಲು ಹುಡುಗನ ಹೆತ್ತವರು, ಅಧ್ಯಾಪಕರು, ಸಂಘಟನೆಯವರು ಯಾರೂ ಮುಂದೆ ಬರುವುದಿಲ್ಲ. ‘ಅದು ಅವರ ಪ್ರಾಬ್ಲೆಮ್’ ಎನ್ನುವ ಮನೋಭಾವ ಎಲ್ಲರದೂ. ಮ್ಯಾಡಿ ಬೇರೆ ಹುಡುಗರನ್ನು ಬಳಸಿಕೊಂಡಿರುವುದೂ ಕತೆಯಲ್ಲಿ ದಾಖಲಾಗುತ್ತದೆ. ಕಥಾನಾಯಕಿ ಮ್ಯಾಡಿಯ ಬಿಳಿ ಟೀಶರ್ಟ್ ಬೆನ್ನಿಗೆ ‘ಐ ಆಮ್ ಅ ಪೀಡೋಫೈಲ್’ (ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಕೃತಕಾಮಿ) ಎಂದು ಪೋಸ್ಟರ್ ಪೆನ್ನಿನಿಂದ ಬರೆದು ತನ್ನ ಪ್ರತಿಭಟನೆಯನ್ನು ದಾಖಲಿಸುತ್ತಾಳೆ. ಮುಂದೆಯೂ ಆಕೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಾದ ನಿರ್ಧಾರದಲ್ಲಿರುವಂತೆ ಅನಿಸುತ್ತದೆ. ವಿಕೃತ ಮನಸ್ಥಿತಿಯ ಚಿತ್ರಣ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತಿಪಾದನೆ ಇದರ ಆಶಯ. ಸಮಾಜದಲ್ಲಿ ಮುಖ್ಯ ನೆಲೆಯ ಚರ್ಚೆಗೆ ಬಾರದೆ ಉಳಿಯುವ ಬಹುದೊಡ್ಡ ಸಮಸ್ಯೆಯೊಂದನ್ನು ಈ ಕತೆ ಪರಿಶೀಲನೆಗೆ ಎತ್ತಿಕೊಂಡಿರುವುದು ಶ್ಲಾಘನೀಯವಾಗಿದೆ.

ಮೆಚ್ಚುಗೆ ಪಡೆದ 5 ಕತೆಗಳು:

1. ಹುಣಸೇ ಹೂವು

ಗ್ರಾಮೀಣ ಬದುಕಿನ ಬಡತನದ ಬದುಕು ಮತ್ತು ಜಮೀನುದಾರೀ ಶೋಷಣೆ ಬಹಳ ಸಶಕ್ತವಾಗಿ ಕತೆಯ ರೂಪವನ್ನು ತಾಳಿದೆ. ಬಡತನದ ದಾರುಣ ಚಿತ್ರಣ ಮತ್ತು ಭೀಭತ್ಸ ನಿರೂಪಣೆಯಿಂದಾಗಿ ಹೊಟ್ಟೆ ತೊಳಸುವಂತಾಗುವ ಸನ್ನಿವೇಶಗಳಿವೆ. ಬಡವರನ್ನು ಗೌಡರ ಮನೆಯವರು ಲೈಂಗಿಕವಾಗಿ ಶೋಷಿಸುವುದು ಮತ್ತು ದುಡಿಯುವವರ ಆರ್ಥಿಕ ಸಂಕಷ್ಟಗಳು ಹಿನ್ನೆಲೆಯಲ್ಲಿ ಬಂದು ಬಡ ಕುಟುಂಬದ ಗಂಡಸಿನ ದೈನೇಸಿ ಬದುಕು, ಅಸಹಾಯಕತೆ ಮತ್ತು ಮಗಳ ಮೇಲಿನ ಸಿಟ್ಟಿನ ಮೂಲಕವೇ ಕತೆಯಲ್ಲಿ ಬದುಕಿನ ಕ್ರೌರ್ಯವನ್ನು ಚಿತ್ರಿಸಿರುವುದು ವಿಶೇಷವಾಗಿದೆ. ಲೈಂಗಿಕ ಶೋಷಣೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಒಂದು ಕುಟುಂಬದ ಸರ್ವನಾಶ ಆಗುವುದು ಹೃದಯಸ್ಪರ್ಶಿಯಾಗಿದೆ. ಗ್ರಾಮ್ಯಭಾಷೆಯ ಬಳಕೆ ಇಲ್ಲಿ ಸಹಜವಾಗಿ ಬಂದಿದೆ.

2. ಪಿಂಕ್ ಟ್ರಂಪೆಟ್

ಈ ಕತೆಯಲ್ಲಿ ಮಧ್ಯವಯಸ್ಸಿನ ಹಳ್ಳಿಯ ವಿಧವೆ ಹೆಂಗಸು ಶರಾವತಿ ನಗರಕ್ಕೆ ಬಂದಾಗ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುತ್ತಾ ಮಾನಸಿಕವಾಗಿ ಅರಳುವುದನ್ನು ಪಿಂಕ್ ಟ್ರಂಪೆಟ್ ಎಂಬ ಹೂವಿನ ಸಂಕೇತದ ಮೂಲಕ ಹೇಳಿರುವ ಸೂಕ್ಷ್ಮ ಚೆನ್ನಾಗಿದೆ. ಊರಲ್ಲಿ ಅಡಿಕೆ ಕೃಷಿಕ ಕುಟುಂಬದಲ್ಲಿದ್ದು ಸಹಕರಿಸಬೇಕಾದ ಆಕೆಗೆ ಈ ಕೆಲಸಗಳು ಇರದ ಫೆಬ್ರವರಿ, ಮಾರ್ಚ್, ಎಪ್ರಿಲ್ – ಹೀಗೆ ಬೇಸಗೆಯ ತಿಂಗಳುಗಳಲ್ಲಿ ಮಾತ್ರ ಮಗನ ಜತೆಗೆ ಬಂದಿರಲು ಸಾಧ್ಯ. ಆಗ ವಾಕಿಂಗ್ ಹೋಗುತ್ತ ಮಧ್ಯವಯಸ್ಕ ಕಲಾವಿದ, ಆಧುನಿಕ ಜೀವನಶೈಲಿಯ ರತ್ನಾಕರನ ಜತೆಗೆ ವಾಕಿಂಗ್ ಹೋಗುತ್ತ ಅವನತ್ತ ಆಕರ್ಷಿತಳಾಗುತ್ತಾಳೆ. ವೈಧವ್ಯದ ಬದುಕು ಅನಿವಾರ್ಯವೆಂಬಂತಿದ್ದ ಆಕೆಯ ಮನಸ್ಸು ಆತನನ್ನು ಮದುವೆಯಾದರೆ ಆದೀತು ಎನ್ನುವಂತೆ ಅರಳುತ್ತದೆ. ಅದೇ ವೇಳೆಗೆ ಆತನ ಪತ್ನಿ ಗಾಯತ್ರಿಯೂ ಮುನಿಸಿಕೊಂಡು ಆತನನ್ನು ಬಿಟ್ಟುಹೋಗಿರುತ್ತಾಳೆ. ‌

ಮುಂದಿನ ವರ್ಷ ಬೆಂಗಳೂರಿಗೆ ಹೋದಾಗ ಶರಾವತಿಗೆ ತಾನು ರತ್ನಾಕರನ ಜತೆಗೆ ಹೊಸಬದುಕನ್ನು ಪ್ರಾರಂಭಿಸಬೇಕೆನ್ನುವ ನಿರ್ಧಾರ ಗಟ್ಟಿಯಾಗಿರುತ್ತದೆ. ಅವಳ ಮಾವನ ಮನೆಯವರಿಗೆ ಕೆಲಸಕ್ಕೆ ಒಂದಾಳು ಕಡಿಮೆಯಾಗುವುದೆಂದು ಆತಂಕದಿಂದ ಅವಳು ಬೆಂಗಳೂರಿನಲ್ಲಿ ಹೆಚ್ಚು ದಿನ ಇರಬಾರದು ಎಂದು ಒತ್ತಾಯಿಸುತ್ತಾರೆ. ಗಾಯತ್ರಿ ರತ್ನಾಕರನ ಬದುಕಿಗೆ ಹಿಂದಿರುಗಿರುವುದಿಲ್ಲ. ಇದರಿಂದ ಶರಾವತಿಗೆ ತಾನೇ ಮುಂದುವರಿದು ತಾವಿಬ್ಬರು ಜತೆಗೂಡಿದರೆ ಹೇಗೆ ಎಂದು ಪತ್ರಬರೆಯಲು ಧೈರ್ಯವಾಗುತ್ತದೆ. ಆದರೆ ರಮಾನಂದ ಅದಕ್ಕೆ ಸ್ಪಂದಿಸುವುದಿಲ್ಲ. ಅವನು ಮಾನಸಿಕವಾಗಿ ತನ್ನ ಪತ್ನಿಯನ್ನು ಹಚ್ಚಿಕೊಂಡಿರಬಹುದು; ಅಥವಾ ಪತ್ರವನ್ನು ನೋಡದೆಯೆ ಇರಬಹುದು, ಅಥವಾ ಅವನು ಗಾಯತ್ರಿಯನ್ನು ಜೀವನಸಂಗಾತಿಯನ್ನಾಗಿ ಕಲ್ಪಿಸಿಕೊಳ್ಳದೆ ಇರಬಹುದು.

ರ್ಯಾಶಿಯೋಸಿನೇಶನ್ ಮಾರ್ಗದ ಒಂದು ಕತೆಯಾದ ಇದರಲ್ಲಿ ನಾಯಕಿ ಶರಾವತಿ ತಾನೇ ಪ್ರೌಢ ಮರುಮದುವೆಗೆ ಪ್ರಸ್ತಾಪ ಮಾಡುವಷ್ಟು ದಿಟ್ಟತನ ತೋರಿಸುವಷ್ಟಕ್ಕೆ ಮನೋವ್ಯಾಪಾರದ ಬೆಳವಣಿಗೆ ನಿಂತುಬಿಡುತ್ತದೆ. ಅದು ಆ ಗಂಡಸಿನ ಗಮನಕ್ಕೆ ಬಂದಿದೆಯೋ ಬಂದಿಲ್ಲವೋ ಎನ್ನುವುದು ಅಸ್ಪಷ್ಟವಾದ ಕಾರಣ ಅವಳ ಮುಂದಿನ ನಡೆ ಮತ್ತೆ ತನ್ನ ಹಳೆಯ ಬದುಕಿಗೆ ವಾಪಸಾಗುವುದೇ ಆಗಬಹುದು ಎನ್ನುವ ದಟ್ಟವಾದ ಸೂಚನೆ ಕತೆಯಲ್ಲಿದೆ. ಹಾಗಾಗಿ ಹೊಸ ಅರಿವು ‘ನೈತಿಕ ವಿಕಾಸದ ನೆಲೆ’ಯನ್ನು ತಲುಪುವುದನ್ನು ಕೂಡ ಓದುಗರು ಊಹಿಸಲು ಅವಕಾಶ ಇರುವುದಿಲ್ಲ. ಹಿಂದೆ ಇಪ್ಪತ್ತನೆಯ ಶತಮಾನದ ನವೋದಯ ಸಾಹಿತ್ಯದಲ್ಲಿ ವಿಧವಾ ವಿವಾಹವನ್ನು ಪ್ರತಿಪಾದಿಸುವ ಕತೆ ಕಾದಂಬರಿಗಳಲ್ಲಿ ಸಮಾಜದ ಒಟ್ಟಭಿಪ್ರಾಯವನ್ನು ಒಲಿಸಿಕೊಳ್ಳಬೇಕಾದ ಅಗತ್ಯ ಎಷ್ಟಿತ್ತೆಂದರೆ ಆಕೆ ಅಕ್ಷತ ಕನ್ಯೆ ಎನ್ನುವುದನ್ನು ಸೂಚಿಸುವ ಕೃತಿಗಳನ್ನು ಕಾಣಬಹುದಾಗಿತ್ತು. ಇಲ್ಲಿ, ನಾಯಕಿಯ ತರ್ಕ ಪ್ರಕ್ರಿಯೆ ಗಟ್ಟಿಯಾದುದೇ ಆಗಿದ್ದರೆ ಆಕೆ ನೇರವಾಗಿ, “ನಾನು ನಿಮಗೊಂದು ಸಂದೇಶ ಇರಿಸಿದ್ದೆ. ನೀವದನ್ನು ಗಮನಿಸಿದಿರಾ?” ಎಂದು ಕೇಳಿ ಸಂಶಯ ಪರಿಹರಿಸಿಕೊಳ್ಳಬಹುದಿತ್ತು. ಅವಳು ಮತ್ತೆ ತನ್ನ ಹಳೆಯ ಬದುಕಿಗೆ ಮರಳುತ್ತಾಳೆ ಎನ್ನುವ ಸೂಚನೆಯೇ ಕತೆಯಲ್ಲಿದೆ.

3. ಪರವೇಶ್ಮಸ್ಥನ ಫಿಕ್ಖ್ ಪ್ರಸಂಗ

ಇಲ್ಲಿ ಒಬ್ಬ ಮುಸಲ್ಮಾನ ಸಂಸಾರಸ್ಥ ಒಂದು ಕುಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾನೆ. ಅವನ ಏಕೈಕ ಪುತ್ರ ತಾಂತ್ರಿಕ ಶಿಕ್ಷಣ ಪಡೆದು ಮುಂಬಯಿಯಲ್ಲಿ ಸಂಸಾರ ಹೂಡಿದ್ದಾನೆ. ಅಪ್ಪ ಅಮ್ಮ ತನ್ನ ಜತೆಗೆ ಬಂದಿರುವಂತೆ ಕರೆಯುತ್ತಿದ್ದಾನೆ. ಅಪ್ಪ ಇಮಾಮ್, ಊರಿನ ಮುಖಂಡನೊಬ್ಬನ ಜತೆಗೆ ಮಸೀದಿಯ ಡೆಪೆÇೀಸಿಟ್‍ಗೆ ಬರುವ ಬಡ್ಡಿ ಹಣದ ವಿಚಾರದಲ್ಲಿ ತಾಕಲಾಟಕ್ಕೆ ಬಿದ್ದಿದ್ದಾನೆ. ಮುಖಂಡ ಆ ಹಣವನ್ನು ತಿಂದುಹಾಕಬಾರದೆಂಬ ನ್ಯಾಯಪ್ರಜ್ಞೆಯೇ ಅದು. ಆದರೆ ಇಮಾಮ್ ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕುವಾಗ ಮುಖಂಡನ ಇನ್‍ಫ್ಲೂಯೆನ್ಸ್ ಇವನನ್ನು ಉಳಿಸಲು ಬೇಕಾಗುತ್ತದೆ. ಅಲ್ಲದೆ ಈತ ಪರವೇಶ್ಮಸ್ಥ (ಬೇರೆಯವರ ಮನೆಯಲ್ಲಿ ವಾಸಿಸುವವನು). ಕೊನೆಗೂ ಊರಿನ ಉಸಾಬರಿಯನ್ನು ಬಿಟ್ಟು ಮುಂಬಯಿಗೆ ತೆರಳುತ್ತ್ತಾನೆ. ಮಗ ಅವನಿಂದ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಕೇಳಿ ಪಡೆಯುತ್ತಾನೆ. ಮುಖ್ಯವಾದುದು, ಇಮಾಮನ ಪತ್ನಿ ನಫೀಸಾ ಹಿಂದೂ ಆಗಿದ್ದವಳು ಎನ್ನುವುದು.

ಇಲ್ಲಿನ ಮುಖ್ಯ ಧರ್ಮ ಜಿಜ್ಞಾಸೆ ಶೀರ್ಷಿಕೆಯಲ್ಲಿರುವ ಹಾಗೆ ಫಿಕ್ಖ್ ಎಂಬ ಬಡ್ಡಿ ಹಣದ ನಿಯಮದ ಕುರಿತಾಗಿದೆ; ಜತೆಗೆ ಈ ಜಿಜ್ಞಾಸೆಗೆ ತಾನು ಅಧಿಕಾರಸ್ಥ ಎಂದು ಮುಂದೆ ಕಾಲಿಟ್ಟು ಹಿಂದೆ ಸರಿದ ಕಥಾನಾಯಕನ ‘ಪರವೇಶ್ಮಸ್ಥ’ ಸ್ಥಿತಿಯ ಜತೆಗೆ ಅವನ ಧಾರ್ಮಿಕ ನಿಲುವಿನ ಮುಖಾಮುಖಿಯನ್ನು ಅದು ಸೂಚಿಸುತ್ತದೆ. ಕತೆಯ ಕೊನೆ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು.

4. ಕಿತ್ತಳೆ ಚಿಟ್ಟೆ

ಮನಸ್ಸಿನ ಮತ್ತು ಸಂಬಂಧಗಳ ಸೂಕ್ಷ್ಮಗಳನ್ನು ಚಿತ್ರಿಸಿರುವ ಸಣ್ಣಕತೆ. ಕಥಾನಾಯಕಿ ತಾನೊಂದು ಕಿತ್ತಳೆಯಾಗಿರುವಂತೆ, ಅದನ್ನು ಯಾರೋ ಸಿಪ್ಪೆ ಸುಲಿದು ತಿಂದಂತೆ, ಮತ್ತೆ ತಾನೊಂದು ಕಿತ್ತಳೆ ಚಿಟ್ಟೆಯಾದಂತೆ ಕನಸುಕಾಣುತ್ತಾಳೆ. ಅವಳ ಮನಸ್ಸು ಅತಿಯಾಗಿ ಸೂಕ್ಷ್ಮವಾಗಿದೆ. ಅವಳ ಪ್ರಿಯತಮ ಒಮ್ಮೆ ಅವಸರಿಸಿ ಅವಳ ಮೇಲೆ ದಾಳಿಮಾಡಿದನೆಂದು ದೂರಸರಿಯುತ್ತಾಳೆ. ಮತ್ತೆ ಅವರು ಜತೆಯಾದರೂ ಮೊದಲಿನ ವಿಶ್ವಾಸ ಉಳಿಯುವುದಿಲ್ಲ ಇತ್ಯಾದಿ ಮನಸ್ಸಿನ ಸೂಕ್ಷ್ಮಗಳು, ಪ್ರೇಮ-ಕಾಮವನ್ನು ಹೆಸರಿಸದೆ ಅವುಗಳ ವ್ಯತ್ಯಾಸವನ್ನು ಕ್ರಿಯೆಯಲ್ಲಿ ಅನುಭವಿಸುವ ಮಾದರಿಯ ಕತೆ.

‘ಪಿಂಕ್ ಟ್ರಂಪೆಟ್’ ಎಂಮ ಕತೆಯ ಶೀರ್ಷಿಕೆಯನ್ನು ಇದರ ಶೀರ್ಷಿಕೆಯ ಜತೆಗೆ ಹೋಲಿಸಿದಾಗ ಒಂದು ವಿಶಿಷ್ಟ ವಿದ್ಯಮಾನವು ನಮ್ಮ ಗಮನಕ್ಕೆ ಬರುತ್ತದೆ. ಹೆಣ್ಣನ್ನು ಹೂವಿಗೆ, ಚಿಟ್ಟೆಗೆ, ಹಣ್ಣಿಗೆ ಹೋಲಿಸುವ ಒಂದು ಸಂಪ್ರದಾಯ ಆಧುನಿಕ ಸಾಹಿತ್ಯದಲ್ಲಿಯೂ ಬೇರೆಬೇರೆ ರೀತಿಗಳಲ್ಲಿ ಪರಂಪರೆಯ ಮುಂದುವರಿಕೆಯಾಗಿ ಕಾಣಿಸುತ್ತಿದೆ. ಈ ಎರಡೂ ಕತೆಗಳಲ್ಲಿ ಈ ರೂಪಕಗಳು ಸೃಜನಶೀಲವಾಗಿ ಬಂದಿವೆ; ಸಿದ್ಧಕಲ್ಪನೆಯಾಗಿ ಬಂದಿಲ್ಲ.

ಹಾಗೆ ನೋಡಿದರೆ ‘ಹುಣಸೇ ಹೂವು’ ಕೂಡ ಗ್ರಾಮೀಣ ಶೋಷಿತ ಮಹಿಳೆಗೆ ರೂಪಕವಾಗಿಯೇ ಬಂದಿದೆ. ಇದು ಕೂಡ ಸೃಜನಶೀಲವಾಗಿಯೇ ಇದೆ. ಅಲ್ಲಿ ಅದು ಹೋಲಿಕೆಯಾಗಿ ಬಂದಿಲ್ಲ; ಹೆಚ್ಚು ಸಾಂಕೇತಿಕವಾಗಿದೆ.

5. ನೆಲೆ

ಪ್ರತಿಭಾ ಎನ್ನುವ ಪ್ರತಿಭಾವಂತ ಸುಂದರಿ ಯುವತಿಯನ್ನು ಬಡತನದ ಕಾರಣದಿಂದಾಗಿ ಮುಂಬಯಿಯ ಕಿವುಡ, ಮೂಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆಕೆ ಸ್ವಂತ ಪರಿಶ್ರಮದಿಂದ ಉದ್ಯೋಗ ಸಂಪಾದಿಸಿಕೊಂಡು ಸ್ವಂತ ಕಾಲಿನ ಮೇಲೆ ನಿಲ್ಲುವಂತಾಗುತ್ತಾಳೆ. ಚಿತ್ರಲೇಖಾ ಎಂಬ ಹೆಣ್ಣೂಮಗುವಾದ ಮೇಲೆ ಗಂಡನನ್ನೂ ಮಗಳನ್ನೂ ಬಿಟ್ಟು ದೆಹಲಿಗೆ ಹೋಗಿ ಮಧು ಎಂದು ಹೆಸರು ಬದಲಾಯಿಸಿಕೊಳ್ಳುತ್ತಾಳೆ. ಅಲ್ಲಿಯೇ ಒಬ್ಬ ಸಹೋದ್ಯೋಗಿಯನ್ನು ಮದುವೆಯಾಗಿ ಸ್ಟಾರ್ಟ್ ಅಪ್ ಕಂಪೆನಿ ಮಾಡುತ್ತಾಳೆ. ಗಂಡ ತೀರಿಹೋಗುತ್ತಾನೆ. ಅವಳಿಗೆ ಅವನಲ್ಲಿ 19 ವರ್ಷದ ಮಗ ಇರುತ್ತಾನೆ. ಈಗ ಅವಳಿಗೆ ಅವಳ ಹಿರಿಯ ಮಗಳನ್ನು ಸಂಪರ್ಕಿಸಲು ಆಸೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಸಾಧಿಸುತ್ತಾಳೆ. ಅವಳ ಮಗಳು ಮೊದಲು ತನ್ನನ್ನು ತೊರೆದು ಹೋದವಳು ಎಂದು ಅವಳನ್ನು ತಿರಸ್ಕರಿಸಿದರೂ ನಂತರ ಅವಳ ‘ನೆಲೆ’ಯಿಂದ ಅವಳ ಬದುಕನ್ನು ಅರ್ಥಮಾಡಿಕೊಂಡು ಅವಳನ್ನು ಭೇಟಿಯಾಗಲು ಮಾನಸಿಕವಾಗಿ ಸಿದ್ಧಳಾಗುತ್ತಾಳೆ.

ವ್ಯಕ್ತಿಗಳ ಆಯ್ಕೆಯನ್ನು ಭಿನ್ನಭಿನ್ನವಾದ ನೆಲೆಗಳ ಮೂಲಕ ನೋಡಲು ಪ್ರೇರಣೆ ಕೊಡುವ, ಯಾರನ್ನೂ ಟೀಕಿಸದೆ; ಆಯ್ಕೆಗಳನ್ನು ಮಾಡುವ ಮೂಲಕ ವ್ಯಕ್ತಿ ತನ್ನ ಬದುಕಿಗೆ ತಾನು ಜವಾಬ್ದಾರನಾಗುವುದನ್ನು ಅರಿತುಕೊಂಡು ಅವನನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಯನ್ನು ಆಶಯವಾಗಿ ಪರಿವರ್ತಿಸಿರುವ ಉತ್ತಮ ಕತೆ ಇದು.

ಬಹುಮಾನ ವಿಜೇತರಿಗೂ, ಉತ್ತಮ ಕತೆಗಳನ್ನು ಬರೆದಿರುವ ಇತರರಿಗೂ ಅಭಿನಂದನೆಗಳು. ಈ ಕಥಾಸ್ಪರ್ಧೆಯನ್ನು ಏರ್ಪಡಿಸಿ, ಕನ್ನಡದ ಸಣ್ಣಕಥಾ ಕ್ಷೇತ್ರದಲ್ಲಿ ಹೊಸ ಸ್ಪಂದನೆಗಳಿಗೆ ಕಾರಣವಾಗಿರುವ ವಿಸ್ತಾರ ನ್ಯೂಸ್ ಬಳಗಕ್ಕೆ ಧನ್ಯವಾದಗಳು ಹಾಗೂ ಅಭಿನಂದನೆಗಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್‌ ಡಿ.ಆರ್‌ ಪ್ರಥಮ, ದಾದಾಪೀರ್‌ ಜೈಮನ್‌ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ

Exit mobile version