ಬೆಂಗಳೂರು: ವಿಸ್ತಾರ ನ್ಯೂಸ್ ವಾಹಿನಿಯು ಮೇ 27 ಹಾಗೂ 28ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ʼವಿಸ್ತಾರ ಸಾಹಿತ್ಯ ಸಂಭ್ರಮʼದ ಹಿನ್ನೆಲೆಯಲ್ಲಿ ಸಾಹಿತಿಗಳ ಜತೆ ಸಮಾಲೋಚನಾ ಸಭೆ ಇಂದು ವಿಸ್ತಾರ ನ್ಯೂಸ್ ಕಚೇರಿಯಲ್ಲಿ ನಡೆಯಿತು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ಸಾಹಿತ್ಯ ಸಂಭ್ರಮದ ರೂಪುರೇಷೆಗಳನ್ನು ವಿವರಿಸಿದರು. ವಿಸ್ತಾರ ವಾಹಿನಿಯು ಕನ್ನಡ ನಾಡು-ನುಡಿ, ಸಂಸ್ಕೃತಿಗಳನ್ನು ಬಿಂಬಿಸುವ, ಈ ಮೂಲಕ ಕಲಾಸಕ್ತರನ್ನು ಬೆಸೆಯುವ ʼಸಾಹಿತ್ಯ ಸಂಭ್ರಮ’ ಆಯೋಜಿಸುತ್ತಿದೆ. ವಿಸ್ತಾರ ವಾಹಿನಿ ಈಗಾಗಲೇ ʼಬುಕ್ ಟಾಕ್ʼ ಮೂಲಕ ಪುಸ್ತಕ ಪರಿಚಾರಿಕೆ ಮಾಡುತ್ತಿದೆ. ಟಿವಿ ವಾಹಿನಿಯೊಂದು ಸಾಹಿತ್ಯೋತ್ಸವ ಆಯೋಜಿಸುತ್ತಿರುವುದು ಇದೇ ಮೊದಲು. ಸಮಕಾಲೀನ ಆಶಯಗಳನ್ನು ಹೊಂದಿರುವ ಗಂಭೀರ ಸಂವಾದ ಹಾಗೂ ಜನಪ್ರಿಯ ಅಂಶಗಳು ಬೆರೆತ ಮಹತ್ವದ ಸಾಹಿತ್ಯೋತ್ಸವ ಆಯೋಜಿಸುವುದು ವಿಸ್ತಾರದ ಆಶಯ ಎಂದವರು ತಿಳಿಸಿದರು.
ವಿಸ್ತಾರದ ಈ ಉತ್ಸವದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಸಿನೆಮಾ, ರಾಜಕೀಯ, ಕ್ರೀಡೆ ಮುಂತಾದ ಹಲವಾರು ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಾಜ್ಯದ ಪ್ರತಿ ತಾಲೂಕಿನಿಂದ ಮತ್ತು ದೇಶ- ವಿದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮಕ್ಕಳ ಆಟ, ಪರಿಸರ ಪಾಠ, ಆಹಾರ ವೈವಿಧ್ಯ, ಪುಸ್ತಕ ಮೇಳ ಮುಂತಾದ ಅನೇಕ ಆಕರ್ಷಣೆಗಳಿರುತ್ತವೆ. ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಖುಷಿಯಿಂದ ಭಾಗವಹಿಸಬಹುದಾದ ಪರಿಸರ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ವಿದ್ವಾಂಸ, ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕರ್ನಾಟಕದ ನೆಲ- ಜಲದ ಆಶಯಗಳನ್ನು ಬಿಂಬಿಸುವ ಸಾಹಿತ್ಯ ಹಬ್ಬ ನಡೆಸುವುದು ಮಹತ್ವದ್ದಾಗಬೇಕಿದೆ. ವಾಹಿನಿಯೊಂದು ಇಂಥ ಸಾಹಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಸಾಹಿತ್ಯ ಸಂಭ್ರಮದಲ್ಲಿ ಪ್ರಸ್ತುತ ಕನ್ನಡ ಕಾವ್ಯದ ನೆಲೆ ಬೆಲೆಗಳು ಚರ್ಚೆಯಾಗಬೇಕು. ಮುಂದಿನ ತಲೆಮಾರಿನ ಓದುಗರು ಯಾವುದನ್ನು ಓದುತ್ತಾರೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ. ಆಗ ಮಾತ್ರ ನಮ್ಮ ಸಾಹಿತ್ಯ ಕೃಷಿ ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಕವಿ ಬಿ.ಆರ್ ಲಕ್ಷ್ಮಣರಾವ್ ನುಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗುವಂತೆ ಸಾಹಿತ್ಯ ಸಂಭ್ರಮವು ಪುಸ್ತಕಗಳ ಮಾರಾಟಕ್ಕೆ ಹಾಗೂ ಹೊಸ ತಲೆಮಾರಿನ ಸಾಹಿತಿಗಳ ಕೃಷಿಗೆ ಪೂರಕವಾದ ರೀತಿಯಲ್ಲಿ ಸಂಯೋಜಿಸಲ್ಪಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಕಿವಿಮಾತು ಹೇಳಿದರು.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಚರ್ಚೆಯಾಗುತ್ತಿರುವ ಮಹಿಳಾ, ಲಿಂಗತ್ವ, ಮಕ್ಕಳ, ಜನಪ್ರಿಯ ಮತ್ತಿತರ ಬಹುತ್ವದ ನೆಲೆಗಳಲ್ಲಿ ಕಾರ್ಯಕ್ರಮಗಳು ಸಂಯೋಜನೆಯಾದರೆ ಎಲ್ಲರನ್ನೂ ತಲುಪುವಂತಾಗುತ್ತದೆ ಎಂದು ಕತೆಗಾರ ದಾದಾಪೀರ್ ಜೈಮನ್ ನುಡಿದರು.
ಸಾಹಿತಿಗಳಾದ ಡುಂಡಿರಾಜ್, ಸಹನಾ ಹೆಗಡೆ, ಅರುಣ ಜಿ.ವಿ., ಮಧುಸೂದನ ವೈ.ಎನ್, ಆಶಾ ರಘು, ಶಿವಕುಮಾರ ಮಾವಲಿ, ಶರತ್ ಭಟ್ ಸೇರಾಜೆ, ಲಕ್ಷ್ಮಣ ವಿ.ಎ., ಶಶಾಂಕ್ ಪರಾಶರ್, ವಿನಾಯಕ ಅರಳಸುರುಳಿ, ಮಂಜುನಾಥ ಕುಣಿಗಲ್, ನೌಶಾದ್ ಜನ್ನತ್, ಶಮಾ ನಂದಿಬೆಟ್ಟ, ಪೂರ್ಣಿಮಾ ಸಣ್ಣಕೇರಿ, ಗಾಯತ್ರಿ ರಾಜ್ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಸಿಒಒ ಪರಶುರಾಮ್, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್ ಹೆಡ್ ಕುಸುಮಾ ಆಯರಹಳ್ಳಿ ಜತೆಗಿದ್ದರು.
ಇದನ್ನೂ ಓದಿ: ಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ, ಪ್ರಕಾಶಕರ ಬೆಂಬಲ