:: ಪೂರ್ಣಿಮಾ ಮಾಳಗಿಮನಿ
ನಿಜ ಹೇಳಬೇಕೆಂದರೆ ನೆನ್ನೆ ಬೆಳಿಗ್ಗೆ ನಾಲ್ಕು ಘಂಟೆಗೆ ಫಾಲ್ಗುಣಿ ಫೋನ್ ಮಾಡಿ, “ಇನ್ನು ಹದಿನೈದು ನಿಮಿಷದಲ್ಲಿ ಬಂದು ಪಿಕ್ ಮಾಡ್ತೀನಿ” ಎಂದಾಗ ಯಾಕಾದರೂ ಈ ಟ್ರಿಪ್ ಗೆ ಹೋಗೋಕೆ ಒಪ್ಪಿಕೊಂಡೆನೋಂತ ಚಿಂತೆಯಾಗಿ, “ಯಾಕೋ ಹೊಟ್ಟೆ ನೋಯ್ತಿದೆ ಕಣೇ, ಮೋಸ್ಟ್ಲಿ ಪಿರಿಯಡ್ಸ್ ಆಗಬಹುದು, ನಾನು ಬರೋಕಾಗಲ್ಲ” ಎಂದು ಸುಳ್ಳು ಹೇಳಿದ್ದೆ. ಆಗವಳು, “ಅಯ್ಯೋ ದಡ್ಡಿ, ಇವತ್ತೇನಾದ್ರೂ ನೀನು ತಪ್ಪಿಸಿಕೊಂಡ್ರೆ, ಮ್ಯಾಡಿನ ನೋಡಿ ಮಾತಾಡ್ಸಿ, ಪಟಾಯಿಸಿಕೊಳ್ಳೋ ಚಾನ್ಸ್ ಕಳ್ಕೋತೀಯ ಅಷ್ಟೇ! ” ಎಂದೊಡನೆ ಸುಳ್ಳು ಹೇಳಿ ಸಿಕ್ಕಿಕೊಂಡ ನಾಚಿಕೆಯಿಲ್ಲದೆ, “ನಿಜ್ವಾಗ್ಲೂ?” ಎಂದು ಕೂಗಿ, ಚಕ್ಕಂತ ರೆಡಿಯಾಗಿದ್ದೆ. ಆದ್ರೆ ಎರಡನೇ ದಿನವೇ ನಿಜಕ್ಕೂ ಪೀರಿಯಡ್ಸ್ ಆಗಿ ನಾನು ಈ ಟ್ರಿಪ್ ಗೆ ಬರದಿದ್ದಿದ್ರೆ ಚೆನ್ನಾಗಿತ್ತು ಅನಿಸಿತು!
ಅಗತ್ಯವಿರುವವರಿಗೆ ಧನ ಸಹಾಯ, ಬೀದಿ ನಾಟಕಗಳಾಡಿಸುವುದು, ಉಚಿತ ಹೆಲ್ತ್ ಕ್ಯಾಂಪ್ಸ್, ಮಕ್ಕಳಿಗೆ ಕೆರಿಯರ್ ಕೌನ್ಸೆಲಿಂಗ್ ಮುಂತಾದವನ್ನು ಮಾಡುತ್ತಿದ್ದ ನಾವು ಸಾಮಾನ್ಯವಾಗಿ ವೀಕೆಂಡುಗಳಲ್ಲಿ ನಮ್ಮ ನಮ್ಮ ಗಾಡಿಗಳಲ್ಲಿ ಹಳ್ಳಿಗಳನ್ನು ಸುತ್ತುತ್ತಿದ್ದೆವು. ನನ್ನತ್ರ ಒಂದು ಸ್ಕೂಟಿ ಕೂಡ ಇರಲಿಲ್ಲವಾದ್ದರಿಂದ ಸದ್ಯಕ್ಕೆ ಫಾಲ್ಗುಣಿಯ ಕಾರಿನಲ್ಲೇ ಹೋಗುತ್ತಿದ್ದೆ. ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ನಂಗಿಷ್ಟವಿಲ್ಲ ಎಂದೆಷ್ಟೇ ಹೇಳಿದರೂ ಬಿಡದೆ ಈ ಗುಂಪಿಗೆ ನನ್ನನ್ನು ಬಲವಂತವಾಗಿ ಸೇರಿಸಿದ್ದಳು ಫಾಲ್ಗುಣಿ. ನನ್ನ ಆಸಕ್ತಿಗಳು ಸಿನೆಮಾ, ನಾಟಕ, ಅಭಿನಯ, ಪೇಂಟಿಂಗ್ ಇತರೆಯಾಗಿದ್ದರೂ ‘ಏನ್ ಟ್ಯಾಲೆಂಟು ನಿಂದು, ಎಂಥಾ ಬ್ಯೂಟಿ, ಎಫರ್ಟ್ಲೆಸ್ ಆಕ್ಟಿಂಗ್’ ಎಂದೆಲ್ಲಾ ಜ್ಯಾಕ್ ಎತ್ತಿ ಅವಳ ಗುಂಪಿನ ಉದ್ದೇಶ ಈಡೇರಿಸುವಂಥ ಕೆಲಸ ತೆಗೆಯಬಹುದೆಂದು ಅರಿತಿದ್ದಳು. ನನಗೆ ಯಾವುದೇ ವಿಷಯ ಕೊಟ್ಟರೂ ಅದನ್ನು ಬೀದಿ ನಾಟಕವಾಡಿಸುವುದು ಕಷ್ಟವೇನಿರಲಿಲ್ಲ. ಮೈಕ್ ಇಲ್ಲದೆಯೂ ನೆರೆದವರಿಗೆಲ್ಲಾ ಕೇಳಿಸುವಂಥ ನನ್ನ ಜೋರುದನಿ ಅವಳ ಕೆಲಸವನ್ನು ಸುಲಭ ಮಾಡಿತ್ತು.
ನಮ್ಮ ವಯಸ್ಸಿನವರು ಸಿನಿಮಾ, ಶಾಪಿಂಗ್, ಟ್ರೆಕ್ಕಿಂಗ್, ಪಬ್ಬಿಂಗ್ ಅಂತೆಲ್ಲಾ ಮಜಾ ಮಾಡ್ತಿದ್ರೆ ನಾವ್ಯಾಕೆ ಈ ಆಂಟಿ ಅಂಕಲ್ಗಳ ಜೊತೆ ಸೋಶಿಯಲ್ ಸರ್ವಿಸ್ ಮಾಡಬೇಕೂಂತ ಫಾಲ್ಗುಣಿ ಜೊತೆ ಜಗಳವಾಡುತ್ತಿದ್ದೆ. ಆಗ ‘ಬರೀ ಆಂಟಿ ಅಂಕಲ್ಗಳಷ್ಟೇ ಅಲ್ಲ, ಒಬ್ಬ ಹಾಟ್ ಹುಡುಗ ಮ್ಯಾಡಿ ಅಂತಿದಾನೆ. ಅವನಂತೂ ನಿನ್ನ ಹೈಟ್ ನೋಡೇ ಬಿದ್ದೋಗ್ ಬಿಡ್ತಾನೆ, ನಿನ್ ಪರ್ಫಾರ್ಮೆನ್ಸ್ ನೋಡಿದ್ರಂತೂ ಕ್ಲೀನ್ ಬೋಲ್ಡ್, ಇಂಟ್ರೊಡ್ಯೂಸ್ ಮಾಡಿಸ್ತೀನಿ ಬಾ’ ಎಂದಾಗ ಮ್ಯಾಡಿ ಫೋಟೋ ನೋಡಿಯೇ ಕನಸೊಂದು ಚಿಗುರಿತ್ತು. ಮೂರು ತಿಂಗಳುಗಳಾಗಿದ್ದರೂ ಒಮ್ಮೆಯೂ ಅವನ ದರ್ಶವಾಗಿರಲೇಯಿಲ್ಲ. ಹಾಗಾಗಿ ಅವನು ಬರ್ತಾನೆಂದೊಡನೆ ನಾನು ಸ್ವಾರ್ಥದಿಂದಲೇ ಹೊರಟಿದ್ದೆ.
ಈ ಗಣರಾಜ್ಯೋತ್ಸವವನ್ನು ಯಾವುದಾದರೂ ದೂರದ ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ವಿಶೇಷವಾಗಿ ಆಚರಿಸೋದು, ಚಾಕಲೇಟ್ಸ್, ನೋಟಬುಕ್ಸ್, ಶೂಸ್ ಇತರೆ ಗಿಫ್ಟ್ಸ್ ಕೊಡೋದು, ಡ್ರಾಯಿಂಗ್ ಮಾಡಿಸೋದು, ನಾಟಕ ಮಾಡೋದಂತ ನಿರ್ಧಾರವಾಗಿತ್ತು. ಪೂರ್ತಿ ಟ್ರಿಪ್ಪಿನ ರೂಟ್ ಮ್ಯಾಪ್ ಮಾಡಿ ತಂಡವನ್ನು ಲೀಡ್ ಮಾಡುವ ಕೆಲಸ ಮ್ಯಾಡಿಯದಾಗಿತ್ತು. ನಾನು ಅಂಬೇಡ್ಕರ್ ರೂಪಿಸಿದ ಸಂವಿಧಾನದಿಂದ ಹೇಗೆ ಭಾರತದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಬ್ರಿಟಿಷರಿಗಿಂತಲೂ ಮೊದಲೇ ಸಿಕ್ಕಿತ್ತು ಎನ್ನುವ ಕುರಿತು ನಾಟಕ ಮಾಡುವುದೆಂದೆಣಿಸಿದ್ದೆ. ಅದಕ್ಕೆ ಬೇಕಾದ ಸೈನ್ ಬೋರ್ಡ್ ಗಳನ್ನೆಲ್ಲಾ ತಡ ರಾತ್ರಿಯ ತನಕ ಕುಳಿತು ಚಾರ್ಟ್ ಪೇಪರು, ವಾಟರ್ ಪೇಂಟ್ಸ್, ಸ್ಕೆಚ್ ಪೆನ್ಸ್, ಮಾರ್ಕರುಗಳನ್ನೆಲ್ಲಾ ಹರಡಿಕೊಂಡು ಬರೆಯುತ್ತಿದ್ದಾಗ ಮ್ಯಾಡಿಯನ್ನು ಇಂಪ್ರೆಸ್ ಇಷ್ಟೆಲ್ಲಾ ಮಾಡ್ತಿದ್ದೀನಾ ಅಂತ ನನ್ನನ್ನೇ ಕೇಳಿಕೊಂಡು ನಾಚಿಕೊಂಡಿದ್ದೆ.
ನೆನ್ನೆ ಬೆಂಗಳೂರಿನಿಂದ ಹೊರಟಾಗಲೂ ನಾವು ಇದೇ ಹೋಟೆಲಿನಲ್ಲೇ ಊಟಕ್ಕೆ ನಿಲ್ಲಿಸಿದ್ದೆವು. ನೆನ್ನೆ ಮ್ಯಾಡಿಯನ್ನು ಅಷ್ಟು ಹತ್ತಿರದಿಂದ ನೋಡಿದಾಗ ನನ್ನ ಖುಷಿಯನ್ನು ಹತ್ತಿಕ್ಕಲು ಹೆಣಗಿದ್ದು, ಅವನ ಫ್ಯಾಟ್ ಬಾಯ್ ಹಾರ್ಲೆ ಡೇವಿಡ್ಸನ್ ಬೈಕನ್ನು ಮುಟ್ಟಿ ಪುಳಕಗೊಂಡಿದ್ದು, ನೆಪ ಮಾಡಿ ಮಾತಾಡಿಸುತ್ತಿದ್ದುದೆಲ್ಲಾ ನೆನಪಾಯಿತು.
“ಮ್ಯಾಡಿ ನೀವ್ಯಾಕೆ ಹೆಚ್ಚಾಗಿ ಟ್ರಿಪ್‌ಗಳಿಗೆ ಬರಲ್ಲ?” ಎಂದು ತಡೆಯಲಾರದೆ ಕೇಳಿಬಿಟ್ಟಾಗ, “ಹಾನೆಸ್ಟ್ಲಿ, ನನಗೆ ಈ ರೀತಿ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟವಿಲ್ಲ. ಈ ರೀತಿ ಬಡಮಕ್ಕಳಿಗೆ ಗಿಫ್ಟ್ಸ್ ಕೊಟ್ಟು, ಅದರ ಫೋಟೋ, ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಳ್ಳುವುದೆಲ್ಲಾ ಒಂದು ರೀತಿಯ ಶೋ-ಆಫ್! ನಾವು ಕೊಡೋ ಒಂದು ನೋಟಬುಕ್‌ನಿಂದ, ಸೈಜ್ ಚೆಕ್ ಮಾಡದೇ ತರೋ ಶೂಸ್‌ನಿಂದ ಅವರ ಲೈಫ್ ಏನೂ ಬದ್ಲಾಗಿಬಿಡಲ್ಲ” ಎಂದಿದ್ದ. ಸೋಶಿಯಲ್ ಸರ್ವಿಸ್ ಬಗ್ಗೆ ಅವನಿಗೂ ನನ್ನಂತೆ ಆಸಕ್ತಿಯಿಲ್ಲ ಎನ್ನುವುದು ಒಂಥರಾ ಖುಷಿಕೊಟ್ಟಿತ್ತು.
ನಾನು ಕುಳಿತಿದ್ದ ಟೇಬಲ್ನಿಂದ ಹೊರಗೆ ಮರದ ಕೆಳಗೆ ನಿಂತು ಸಿಗರೇಟ್ ಸೇದುತ್ತಿದ್ದ ಮ್ಯಾಡಿಯ ಬೆನ್ನು ಮಾತ್ರ ಕಾಣಿಸುತಿತ್ತು. ನೆನ್ನೆಯಿಂದ ಮೊದಲ ಬಾರಿಗೆ ದೂರದಿಂದಲೇ ಅದು ಅವನೇ ಎಂದು ಗುರುತಿಸಲು ಅವನ ಬೈಕಾಗಲೀ, ದುಬಾರಿ ಜಾಕೆಟಾಗಲೀ, ಬೋಡು ತಲೆ ಮೇಲೆರಡು ಕೊಂಬು ಮೂಡಿದಂತಿದ್ದ ಹೆಲ್ಮೆಟ್ ಆಗಲೀ, ಸಿಗರೇಟಿನ ವಾಸನೆಯಾಗಲೀ, ಹತ್ತಿರ ಸುಳಿದರೆ ಸಾಕು ಉಸಿರೆಳೆದುಕೊಳ್ಳಬೇಕೆನ್ನಿಸುವ ಸೆಂಟಾಗಲೀ, ಅವತಾರ್ ಸಿನಿಮಾದ ಹೀರೋನಂಥ ಎತ್ತರದ ನಿಲುವಾಗಲೀ ಬೇಕಾಗಲಿಲ್ಲ!
ಫಾಲ್ಗುಣಿ ನೆನ್ನೆಯಿಂದಲೂ ಫೋನಿನಲ್ಲಿ ತೆಗೆದಿದ್ದ ಫೋಟೋಗಳನ್ನು ಒಂದೊಂದೇ ನೋಡುತ್ತಾ, ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಾ, ಖುಷಿಯಿಂದ ತೋರಿಸುತ್ತಿದ್ದರೆ, ನಾನು ಬೆಳಿಗ್ಗೆಯಿಂದ ಸ್ಕೂಲಿನಲ್ಲಿ ನಡೆದದ್ದನ್ನೆಲ್ಲಾ ಒಡಲಲ್ಲಿ ಬೆಂಕಿಯಂತಿಟ್ಟುಕೊಂಡು ಮಂಕಾಗಿ ಕೂತುಬಿಟ್ಟಿದ್ದೆ.
“ಏನಾಯ್ತೆ ನಿಂಗೆ? ಯಾಕ್ ಹಾಗೆ ಸಾಂಬಾರ್ ಇಲ್ದಿರೋ ಇಡ್ಲಿ ಥರ ಸಪ್ಪಗಿದೀಯ?”
ನನಗೆ ಖಾಲಿಯಾಗಿದ್ದ ಅವಳ ಸಾಂಬಾರ್ ಬಟ್ಟಲಿನಲ್ಲೇ ಮುಳುಗಿ ಸಾಯಬೇಕೆನಿಸುತಿತ್ತು.
“ಅಥವಾ ಪೀಟಿ ಮೇಷ್ಟ್ರೋ, ಹೆಡ್ ಮೇಷ್ಟ್ರೋ ಲೈನ್ ಹೊಡಿತಿದ್ರಾ?”
ನಾನು ಅದಕ್ಕೂ ಪ್ರತಿಕ್ರಿಯಿಸದೆ ಮ್ಯಾಡಿ ಕಡೆಗೇ ನೋಡುತ್ತಾ ಕುಳಿತಿದ್ದೆ.
“ಓಹ್, ಸೋ ಯು ಆರ್ ಮ್ಯಾಡ್ ಅಬೌಟ್ ಮ್ಯಾಡಿ ಈಸ್ ಇಟ್? ಗಾಡ್ ಸೇವ್ ಯು ಫ್ರಮ್ ದಟ್ ಹಾರ್ನಿ ಫೆಲೋ”
ನಾನು ಅಚ್ಚರಿಯಿಂದ ಅವಳ ಕಡೆ ನೋಡಿದೆ.
“ಅವನ ಹೆಲ್ಮೆಟ್ ಮೇಲೆ ಎರಡೆರಡು ಕೋಡುಗಳಿದಾವಲ್ಲ ಅದಕ್ಕೇ ತಮಾಷೆ ಮಾಡಿದೆ ಅಷ್ಟೇ, ನಂಗೇನ್ ಗೊತ್ತು ಅವನೆಷ್ಟು ಹಾರ್ನಿ ಅಂತ. ನಮ್ಮಕ್ಕನಿಗೆ ಕೇಳಿದ್ರೆ ಗೊತ್ತಾಗಬಹುದು”
“ಏನು?”
“ಅಯ್ಯೋ ಹಾಗಲ್ಲ… ಅಂದ್ರೆ… ಅವ್ನು ನಮ್ಮಕ್ಕನ ಮನೆಯೆದುರಿಗೇ ಇರೋದು. ಫ್ಯಾಮಿಲಿ-ಫ್ರೆಂಡ್ಸ್ ಅಂತ ಹೇಳಿದೆನಷ್ಟೇ.” ಎಂದು ನಕ್ಕು, “ಅವ್ನು ತುಂಬಾ ಒಳ್ಳೇವ್ನಂತ ಕೇಳಿದೀನಿ. ಅಕ್ಕನ ಮಗನ ಜೊತೆ ತುಂಬಾ ಆಡ್ತಾನಂತೆ. ಎಷ್ಟೊಂದು ಸಲ ಬೈಕಲ್ಲಿ ರೌಂಡ್ ಹೊಡುಸ್ತಾನಂತೆ.”
ನನಗೆ ಅವಳ ಮಾತಿನಲ್ಲಿ ಆಸಕ್ತಿ ಹುಟ್ಟಿದ್ದಕ್ಕಿಂತ ಆತಂಕವೇ ಹೆಚ್ಚಾಗಿದ್ದನ್ನು ನೋಡಿ, “ಯಾವಾಗ್ಲೂ ನೆಗಟಿವ್ ಆಗೇ ಯೋಚಿಸ್ಬೇಡ, ಮೇ ಬಿ ಯು ಆರ್ ಮಿಸ್ಟೇಕನ್” ಎಂದಳು. ನಾನು ಮತ್ತೆ ಮ್ಯಾಡಿ ಕಡೆ ನೋಡಿದೆ. ಅವನ ತಲೆಯ ಮೇಲಿನಿಂದ ಸಿಗರೇಟಿನ ಹೊಗೆ ಹರಡಿಕೊಳ್ಳುತ್ತಿದ್ದರೆ ನನ್ನ ಕಣ್ಮುಂದೆ ಬೆಳಗಿನ ಘಟನೆಗಳೆಲ್ಲಾ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿದ್ದವು.
***
ಬೆಳಿಗ್ಗೆ ಶಾಲೆಯಲ್ಲಿ ಮೇಷ್ಟುಗಳು, ಮಕ್ಕಳು ಮತ್ತು ಪೋಷಕರನ್ನೆಲ್ಲಾ ಕಾಯಿಸಬಾರದು, ಸರಿಯಾದ ಸಮಯಕ್ಕೆ ಹಾಜರಾಗಲೇಬೇಕೆಂದು ಫಾಲ್ಗುಣಿ ಎಲ್ಲರನ್ನೂ ಬಲವಂತವಾಗಿ ಏಳಿಸಿ, ಬೇಗನೇ ಹೊರಡಿಸಿಕೊಂಡು ಬಂದಿದ್ದಳು. ನಮ್ಮ ಗುಂಪಿನ ಲೋಗೋ ಇದ್ದ ಬಿಳಿ ಟಿ-ಶರ್ಟ್, ನೀಲಿಜೀನ್ಸ್ ಹಾಕಿಕೊಂಡು, ನಮ್ಮ ಗಾಡಿಗಳಿಗೆ ಬಾವುಟಗಳನ್ನು ಸಿಕ್ಕಿಸಿಕೊಂಡು, ಗದ್ದಲವೆಬ್ಬಿಸುತ್ತಾ ನಾವುಗಳು ಶಾಲೆಯ ಕಾಂಪೌಂಡ್ ಒಳಗೆ ಹೋಗುತ್ತಿದ್ದಂತೆಯೇ ನಿದ್ದೆಗಣ್ಣಿನ ಮಕ್ಕಳ ಕಣ್ಣುಗಳು ಮಿಂಚಿದ್ದವು! ಸಂಭ್ರಮದಿಂದಿದ್ದ ಚಿಕ್ಕಮಕ್ಕಳೆಲ್ಲಾ ಹೋ ಎಂದು ಖುಷಿಯಿಂದ ಕೂಗುತ್ತಾ ನಮ್ಮತ್ತ ಓಡಿಬರುವುದನ್ನು ಟೀಚರುಗಳು ಅಸಹಾಯಕರಾಗಿ ನೋಡುತ್ತಾ ನಿಂತುಬಿಟ್ಟಿದ್ದರು. ನಮ್ಮತ್ರ ಬಂದು ಬಾವುಟವನ್ನು ಕೈಗೆತ್ತಿಕೊಳ್ಳುವುದು, ಮ್ಯಾಡಿಗೆ ಒಂದು ರೌಂಡ್ ಬೈಕಲ್ಲಿ ಕರ್ಕೊಂಡು ಹೋಗ್ತೀರಾ ಎಂದೆಲ್ಲಾ ಕೇಳುವುದು, ಅವನ ಹೆಲ್ಮೆಟ್ ಹಾಕಿಕೊಂಡು ಗುಮ್ ಬುಡ್ತೀನಿ ಎಂದೆಲ್ಲಾ ತರಲೆ ಮಾಡತೊಡಗಿದರು. ಸ್ವಲ್ಪ ದೊಡ್ಡಮಕ್ಕಳು ವಯಸ್ಸಿಗೆ ಸಹಜವಾದ ಸಂಕೋಚದಿಂದ ಅಲ್ಲಲ್ಲೇ ನಿಂತಿದ್ದರು.
ಫಾಲ್ಗುಣಿ, “ಈ ಪುಟ್ಟಮಕ್ಕಳನ್ನು ನೋಡಿದ್ರೆ ನನಗೆ ನನ್ನಕ್ಕನ ಮಗ ಗುಂಡನ ನೆನಪಾಗ್ತಿದೆ” ಎಂದಳು.
ಅಷ್ಟರಲ್ಲಿ ಪೀಟಿ ಮೇಷ್ಟ್ರು ಬಂದು ಮಕ್ಕಳನ್ನು ಗದರಿಕೊಂಡು, ನಮ್ಮನ್ನು ಸ್ವಾಗತಿಸಿದರು. ಅಂಗಳದಲ್ಲಿ ಪುಟಾಣಿ ವೇದಿಕೆಯಿತ್ತು. ಕುಂಟದಂತೆ ಕಲ್ಲಿಟ್ಟ ಕಾಲು ಮುರಿದ ಕುರ್ಚಿಯೊಂದರ ಮೇಲಿದ್ದ ಗಾಂಧೀಜಿಯ ಫೋಟೋ, ಕಂಠ ಸೀಳಿದೊಂದು ಸ್ಟೀಲ್ ಕಪ್ ಒಳಗೆ ಗಂಧದಕಡ್ಡಿಗಳನ್ನು ನಿಲ್ಲಿಸಿಕೊಂಡಿದ್ದ ಮರಳು, ಹೊಟ್ಟೆ ತುಂಬಾ ಹೂವುಗಳನ್ನು ತುಂಬಿಕೊಂಡು ಹಾರಾಡಲು ಕಾಯುತ್ತಿದ್ದ ಬಾವುಟ, ಅಡ್ಡಾದಿಡ್ಡಿ ಓಡಾಡುವ ಮಕ್ಕಳ ಕಾಲುಗಳಿಗೆ ಕಣ್ಣುಬರಿಸಿದ್ಧ ಬಣ್ಣ ಬಣ್ಣದ ರಂಗೋಲಿ, ಮಂದಾರ, ದಾಸವಾಳಗಳ ಮಕರಂದ ತುಂಬಿಕೊಂಡಿದ್ದ ಚಹಾ ಕಪ್ ಎಲ್ಲಾ ಸರಳವಾದೊಂದು ಸಂಭ್ರಮಕ್ಕೆ ಸಜ್ಜಾದಂತಿದ್ದವು. ಅಲ್ಲಲ್ಲಿ ಹರಿದಿದ್ದರೂ ಬಿಸಿಲುಕೋಲುಗಳನ್ನು ಇಳಿಸಿಕೊಡುತಿದ್ದ ಶಾಮಿಯಾನ ಮಕ್ಕಳನ್ನು ಬೆಚ್ಚಗಾಗಿಸಿತ್ತು. ಹುಡುಗಿಯರ ಬಟ್ಟೆಗಳ ಮೇಲಿನ ಚಮಕಿಗಳು ಪ್ರತಿಫಲಿಸಿ ಹಲ್ಲುದುರಿದ ಮಕ್ಕಳ ನಗುವನ್ನೂ ಹೊಳೆಯಿಸಿತ್ತು. ಜಮಖಾನದಲ್ಲಿದ್ದ ತೂತುಗಳಲ್ಲಿ ಬೆರಳು ತೂರಿಸಿ ಇನ್ನಷ್ಟು ದೊಡ್ಡದು ಮಾಡುತ್ತಾ ಕೆಲವು ಮಕ್ಕಳು ತುಂಟಾಟದಲ್ಲಿ ತೊಡಗಿದ್ದರು.
ಇದೆಲ್ಲದರ ನಡುವೆ ನನ್ನ ಕಣ್ಣುಗಳು ಮಾತ್ರ ನಾನೆಷ್ಟು ಲೈನ್ ಹೊಡೀತಿದ್ರೂ ಕಾಳು ಹಾಕದೆ ತಪ್ಪಿಸಿಕೊಂಡು ಹೋಗುತ್ತಿದ್ದ ಮ್ಯಾಡಿಯನ್ನೇ ಹುಡುಕುತ್ತಿದ್ದವು. ನಾವು ಹುಡುಗಿಯರು ಯಾಕಿಂಗೆ ಜೊಲ್ಲು ಪಾರ್ಟಿ ಹುಡುಗರನ್ನು ಇಗ್ನೋರ್ ಮಾಡಿ, ನಮ್ಮನ್ನು ಇಗ್ನೋರ್ ಮಾಡುವ ಹುಡುಗರ ಹಿಂದೆ ಬೀಳ್ತೀವಂತ ಹಳಿದುಕೊಂಡೆ.
“ಇವತ್ತು ಬೆಂಗಳೂರಿನಿಂದ ಯಾರೋ ಬತ್ತರೆ, ಏನಾರ ಗಿಫ್ಟ್ಸ್ ಕೊಡ್ತಾರೆ, ತಪ್ಪಿಸ್ಕಳ್ಳಬಾರ್ದು ಅಂತ ಎಲ್ಲಾ ಮಕ್ಳು ಬಂದವ್ರೆ” ಪೀಟಿ ಮೇಷ್ಟ್ರು ತಮಾಷೆಯೆನ್ನುವಂತೆ ಹೇಳಿ, ಜಮಖಾನದ ಹಿಂದಿದ್ದ ಬೆಂಚುಗಳ ಮೇಲೆ ನಮಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ವೇದಿಕೆ ಮೇಲೆ ಗ್ರಾಮದ ಗಣ್ಯರು, ಅತಿಥಿಗಳು, ಹೆಡ್-ಮೇಷ್ಟ್ರು ಕುಳಿತಿದ್ದರು. ಅವರ ಎಡಕ್ಕೆ ಸ್ವಲ್ಪ ದೂರದಲ್ಲಿ ಹತ್ತಾರು ಮಕ್ಕಳು ಬ್ಯಾಂಡ್ ಸೆಟ್ ಹಿಡಿದು ತಮ್ಮ ಸರದಿಗಾಗಿ ಕಾಯುತ್ತಾ ಬೇಸರಗೊಂಡಂತಿದ್ದರು. ಶಾಲೆಯ ಮತ್ತೊಂದು ಬದಿಯಲ್ಲಿ ಬಿಸಿ ಬಿಸಿ ಉಪ್ಪಿಟ್ಟು ಸಿದ್ಧವಾಗುತ್ತಿತ್ತು!
ನಾನು ಉಡುಗೊರೆಗಳನ್ನೆಲ್ಲಾ ಬೆಂಚುಗಳ ಮೇಲೆ ಜೋಡಿಸಿಟ್ಟು ಪೆಚ್ಚಾಗಿ ನೋಡಿದೆ. ಮ್ಯಾಡಿ ಮಾತು ನೆನಪಾಗಿ ನಿಟ್ಟುಸಿರಿಟ್ಟು ಮಕ್ಕಳ ಕಡೆ ನೋಡಿದರೆ ಅವರೆಲ್ಲಾ ಉಡುಗೊರೆಗಳನ್ನೇ ಆಸೆಯಿಂದ ನೋಡುತ್ತಿದ್ದರು. ನಾನು ಮುಗುಳ್ನಕ್ಕು, “ಪ್ರೋಗ್ರಾಮ್ ಮುಗಿಯೋ ತನಕ ಸೈಲೆಂಟ್ ಆಗಿ ಕೂತಿರಿ, ಎಲ್ಲರಿಗೂ ಸಿಗುತ್ತೆ.” ಎಂದೆ. ಅವಸರದಲ್ಲಿ ಮಾಡಿದ್ದ ನನ್ನ ನಾಟಕದ ಸೈನ್ ಬೋರ್ಡುಗಳಿಗೆ ಮಾರ್ಕರುಗಳಿಂದ ಕಲಾತ್ಮಕವಾಗಿ ಫೈನಲ್ ಟಚ್ ಕೊಡುತ್ತಾ ಕುಳಿತೆ. ನನ್ನ ಜೊತೆ ನಾಟಕದಲ್ಲಿ ಪಾರ್ಟ್ ಮಾಡುವ ಹುಡುಗರು ಸ್ಕ್ರಿಪ್ಟ್ ಹಿಡಿದುಕೊಂಡು ಆಗಾಗ ಕಣ್ಣಾಡಿಸುತ್ತಿದ್ದರು.
ಮಕ್ಕಳ ಆಶಯವನ್ನರಿಯದೆ ಉರುಹೊಡೆದ ಬಡಿದೇಳಿಸುವ ಭಾಷಣಗಳು, ಹುರುಪಿಲ್ಲದ ಹಾಡುಗಳು, ನವೆಯಾಗಿಸುವ ನೃತ್ಯಗಳು ನನಗೆ ಬಹಳ ಕಿರಿಕಿರಿಯಾಗುತ್ತಿತ್ತು.
“ಇಂಥ ಹಳ್ಳಿಗೆ ಬಂದು ರಂಗಶಂಕರದಂಥ ಪರ್ಫಾರ್ಮೆನ್ಸ್ ಎಕ್ಸ್ಪೆಕ್ಟ್ ಮಾಡ್ಬೇಡ, ಮುಗ್ಧ ಮಕ್ಕಳ ಉತ್ಸಾಹ ಮುಖ್ಯ” ಎಂದು ಫಾಲ್ಗುಣಿಯಿಂದ ಬೈಸಿಕೊಂಡು ನಾನು ತೆಪ್ಪನೆ ಅತ್ತಿತ್ತ ನೋಡತೊಡಗಿದೆ. ಶಾಲೆಯ ಸುತ್ತ ಕಾಂಪೌಂಡ್ ಇದ್ದರೂ ಒಂದು ಮೂಲೆಯಲ್ಲಿ ಗೋಡೆ ಕುಸಿದಿತ್ತು. ಅಲ್ಲಿಂದ ಮೊದಲು ಒಂದು ನಾಯಿಮರಿ ಜಿಗಿಯುತ್ತಾ ಬಂತು. ಅದರ ಹಿಂದೆಯೇ ನಾಲ್ಕೈದು ವರ್ಷದ ಬಾಲಕನೊಬ್ಬ ಜಿಗಿದು ಬಂದ. ಗಮನಿಸಿದರೆ ನಿಕ್ಕರ್ ತೊಟ್ಟೇ ಇಲ್ಲ! ಇದೇನು ಬಡತನವೋ, ಉದ್ಧಟತನವೋ ಎಂದು ನನಗೆ ಮುಜುಗರವಾಯಿತು. ಕೂಡಲೇ ಅವನ ಹಿಂದೆಯೇ ಒಬ್ಬ ಹೆಂಗಸು ಬಂದು ಅವನನ್ನು ಎಳೆದುಕೊಂಡು ಮತ್ತೆ ಮೋಟುಗೋಡೆಯ ಹಿಂಬದಿಗೆ ಹೋದಳು. “ಯವ್ವಾ ಬಿಡೇ, ಬಿಡೇ” ಅವನು ಕೂಗಿಕೊಳ್ಳುತ್ತಿದ್ದ. ನಾನಿದೇನು ತಮಾಷೆಯೆಂದು ಅತ್ತಲೇ ನೋಡುತ್ತಿದ್ದೆ. ಆನಂತರ ನಾಯಿಮರಿಯೂ ತನ್ನ ಸ್ನೇಹಿತನಿಗಾಗಿ ಮರಳಿತು. ಕೆಲನಿಮಿಷಗಳ ಬಳಿಕ ನಾಯಿಮರಿ, ಹುಡುಗ ಇಬ್ಬರೂ ಓಡೋಡಿ ಬಂದರು. ಈಗವನು ನಿಕ್ಕರ್ ಹಾಕಿಕೊಂಡಿದ್ದು ನನಗೆ ಸಮಾಧಾನವಾಯಿತು. ಅವನು ನಾನು ಕುಳಿತಿದ್ದ ಬೆಂಚಿನಿಂದ ಸ್ವಲ್ಪವೇ ಮುಂದೆ ಕುಳಿತಿದ್ದ ಒಬ್ಬನೇ ಪುಟ್ಟ ಹುಡುಗನ ಜೊತೆ ಕುಳಿತು ನನ್ನ ಕಡೆ ನೋಡಿ ದೊಡ್ಡದಾಗಿ ನಕ್ಕನು.
“ನಿನ್ನ ಹೆಸರೇನು?”
“ರಾಮಲಿಂಗ, ಒನ್ನೇ ಕ್ಲಾಸು” ಎಂದು ಹೇಳಿ ಹಲ್ಕಿರಿದು, “ಇವ್ನು ಚೆನ್ನ, ಇವ್ನಿಗೆ ಕೈ ಮುರ್ದೋಗೈತೆ, ನೆನ್ನೆ ಮರ ಹತ್ತಕೋಗಿ ಬಿದ್ದೋದ, ಪಾಪ” ಎಂದು ರಾಗವಾಗಿ ಹೇಳಿದ.
ಚೆನ್ನನ ಬಲಗೈ ಮುರಿದಿತ್ತು. ಒಂದು ಮಾಸಿದ ಟವೆಲನ್ನು ಕೊರಳಿಗೆ ಕಟ್ಟಿ, ಪ್ಲಾಸ್ಟರ್ ಹಾಕಿದ ಅವನ ಕೈಯನ್ನು ಅದರಲ್ಲಿ ತೂರಿಸಿಡಲಾಗಿತ್ತು. ಆ ಎಳೆವಯಸ್ಸಿನ ಮುಖದ ಮೇಲೆ ನೋವೆಷ್ಟು ದಟ್ಟವಾಗಿತ್ತೆಂದರೆ ಅವನಿಗೆ ಯಾವುದರಲ್ಲಿಯೂ ಆಸಕ್ತಿಯಿದ್ದಂತಿರಲಿಲ್ಲ. ಅಪ್ಪ-ಅಮ್ಮನ ಬಲವಂತಕ್ಕೋ, ಮೇಷ್ಟ್ರುಗಳ ಹೆದರಿಕೆಯಿಂದಲೋ ಸುಮ್ಮನೆ ಬಂದು ಕುಳಿತಂತಿತ್ತು. ನಾನು, “ಓಹ್, ತುಂಬಾ ನೋಯ್ತಾ ಇದೆಯಾ ಪುಟ್ಟಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ಸಾಕು, ರಾಮಲಿಂಗ ನನ್ನೆಡೆಗೆ ಎದ್ದು ಬಂದು, “ಊಂ ಆಂಟಿ, ನೆನ್ನೆಯಿಂದ ಅಳ್ತಾ ಅವ್ನೆ, ಏನ್ ಕೊಟ್ಟರೂ ಸುಮ್ಕಾಯ್ತಾನೇ ಇಲ್ಲ” ಎಂದು ಹೇಳಿ ನಾವು ಜೋಡಿಸಿಟ್ಟ ತಿನಿಸು ಉಡುಗೊರೆಗಳ ಕಡೆ ನೋಡತೊಡಗಿದ. ನಾನು ತಡೆಯಲಾರದೆ ಎದ್ದು ಹೋಗಿ ಒಂದು ಚಾಕೊಲೇಟ್ ತಂದು ಚೆನ್ನನ ಕೈಗೆ ಕೊಟ್ಟೆ. ಅವನ ಮುಖದ ಮೇಲೆ ಬಲವಂತವಾಗಿ ಸಣ್ಣ ನಗು ಮಿಂಚಿತು. ನಾನು ಮರಳಿ ಬಂದಾಗ ರಾಮಲಿಂಗ ಇನ್ನೇನು ತನ್ನ ಸರದಿ ಎಂದು ಉತ್ಸುಕನಾಗಿ ನಿಂತಿದ್ದ. ಅಷ್ಟರಲ್ಲಿ ಪೀಟಿ ಮೇಷ್ಟ್ರು ಇತ್ತ ಕಡೆಯೇ ಬಂದು ಅವನಿಗೆ ಕುಳಿತುಕೊಳ್ಳುವಂತೆ ಗದರಿಸಿದರು. ನಾನು ಆಮೇಲೆ ಕೊಡ್ತೀನಿ ಎಂದು ಕಣ್ಣಿನಲ್ಲೇ ಸನ್ನೆ ಮಾಡಿ ಹೇಳಿ ಕುಳಿತು ಮಕ್ಕಳ ನೃತ್ಯ ನೋಡತೊಡಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದಾಗ ನೋಡಿದರೆ ರಾಮಲಿಂಗ ಮತ್ತವನ ನಾಯಿಮರಿ ಯಾವಾಗಲೋ ಎದ್ದು ಹೋಗಿಬಿಟ್ಟಿದ್ದರು. ಅವನು ಮರಳಿ ಬರುವುದರೊಳಗೆ ಎಲ್ಲಾ ಚಾಕೊಲೇಟ್ಸ್ ಖಾಲಿಯಾಗಿಬಿಟ್ಟಾವೆಂದು ಒಂದು ಚಾಕಲೇಟನ್ನು ನನ್ನ ಬ್ಯಾಗಿನೊಳಗಿಟ್ಟುಕೊಂಡೆ. ಇನ್ನೇನು ಉಡುಗೊರೆಗಳನ್ನು ಪಡೆಯುವ ಸಮಯವೆಂದು ಮಕ್ಕಳೆಲ್ಲಾ ಖುಷಿಯಿಂದ ಸಾಲಾಗಿ ನಿಂತರು. ನಾನು ಅವರಿಗೆಲ್ಲಾ ಹಂಚುತ್ತಾ ಅತ್ತಿತ್ತ ಕಣ್ಣಾಯಿಸಿದಾಗ ಮ್ಯಾಡಿ ಮಾತ್ರ ಎಲ್ಲೂ ಕಾಣಲಿಲ್ಲ.
ಹೆಡ್ ಮೇಷ್ಟ್ರು ‘ತಿಂಡಿ ತಿಂದ ಮೇಲೆ ಬೆಂಗಳೂರಿನ ತಂಡದಿಂದ ಹಲವಾರು ಕಾರ್ಯಕ್ರಮಗಳಿವೆ, ಯಾರೂ ಹೋಗಬಾರದು’ ಎಂದು ಅನೌನ್ಸ್ ಮಾಡಿದರು. ಆಗಲೇ ಸಮಯ ಹತ್ತೂವರೆಯಾಗಿತ್ತು, ಚೆನ್ನಾಗಿ ಹಸಿದಿದ್ದ ನಾವು ಬಿಸಿಬಿಸಿ ಉಪ್ಪಿಟ್ಟು ಸವಿಯಲು ಎದ್ದೆವು. ಆಗಲೂ ಮ್ಯಾಡಿ ಕಾಣಲಿಲ್ಲ. ತಿಂಡಿ ಮುಗಿಸಿ ನಾನೂ, ಫಾಲ್ಗುಣಿ ಕೈ ತೊಳೆದುಕೊಳ್ಳಲು ಶೌಚಾಲಯದ ಕಡೆಗೆ ಹೋಗುತ್ತಿರುವಾಗ ಮೋಟುಗೋಡೆಯ ಮೇಲಿನಿಂದ ಮತ್ತೆ ಜಿಗಿದು ರಾಮಲಿಂಗ ಒಳಗೋಡಿ ಬಂದ.
“ಏಯ್ ರಾಮಲಿಂಗ, ನಿಂತುಕೊಳ್ಳೋ, ಎಲ್ಲೋ ಹೋಗಿದ್ದೆ, ತಗೋ … ” ಎಂದು ಕೂಗಿ ಕರೆದೆ. ಅವನೋ ಚಾಕಲೇಟ್ ಫ್ಯಾಕ್ಟರಿಯೇ ತನ್ನ ನಿಕ್ಕರಿನ ಜೇಬಿನಲ್ಲಿರುವಂತೆ ಅದನ್ನು ಹಿಡಿದುಕೊಂಡು ಕುಣಿದಾಡುತ್ತಾ ಚೆನ್ನ ಕುಳಿತಿದ್ದ ಕಡೆಗೆ ಹೋಗುತ್ತಿದ್ದ. ನಾನು ಮತ್ತೆ ಕರೆದಾಗ, ಬಲವಂತಕ್ಕೆ ನನ್ನ ಬಳಿ ಬಂದ.
“ಎಲ್ಲೋ ಹೋಗಿದ್ದೆ? ನೀನ್ಯಾಕೆ ಯಾವಾಗ್ಲೂ ಕಾಂಪೌಂಡು ಹಾರಿ ಬರ್ತೀಯ, ಗೇಟಿಂದ ಬರ್ಬೇಕು ತಾನೇ?” ನನ್ನ ಪ್ರಶ್ನೆಯಿಂದಲೇ ಮೊದಲ ಬಾರಿಗೆ ಅವನೂ ಆ ಕುರಿತು ಯೋಚಿಸುತ್ತಿರುವುದೆನಿಸಿತು.
“ಕಳ್ಳ ದಾರೀಲಿ ಕಲ್ಲು ಮುಳ್ಳುಗಳಿರ್ತವೆ ಕಣೋ” ಫಾಲ್ಗುಣಿ ನಗುತ್ತಾ ಗದರಿದಳು.
“ಅವ್ನಿಗೆ ತೆಗ್ದಿರೋ ಗೇಟೂ, ಬಿದ್ದೋಗಿರೋ ಗೋಡೆ ಎರಡೂ ದಾರಿಗಳಷ್ಟೇ; ಕಳ್ಳ ದಾರಿ ಸುಳ್ಳು ದಾರಿ ಅನ್ನೋ ಮುಳ್ಳುಗಳು ಚುಚ್ಚೋದಿಕ್ಕೆ ಇನ್ನೂ ನಾಜೂಕಾಗ್ಬೇಕು ಅವನ ಕಾಲುಗಳು”
“ಓಹೋ, ಇದೇನು ನಿನ್ನ ಮುಂದಿನ ನಾಟಕದ ಡೈಲಾಗಾ?”
“ಹೇಗಿದೆ?”
“ಸೂಪರ್” ಎಂದು ಹೇಳಿ ಕೈ ತೊಳೆದುಕೊಳ್ಳಲು ಹೋದಳು.
ಛೇ, ಇನ್ನೊಂಚೂರು ಡೀಟೈಲ್ ಆಗಿ ಹೊಗಳಬಾರದಿತ್ತಾ ಇವ್ಳು ಎಂದುಕೊಂಡು ಮತ್ತೆ ರಾಮಲಿಂಗನಿಗೆ, “ಬಾರೋ ಇಲ್ಲಿ, ಚಾಕ್ಲೇಟ್ ಬೇಡ್ವಾ” ಅಂತ ನನ್ನ ಬ್ಯಾಗಿನಿಂದ ಚಾಕ್ಲೇಟ್ ತೆಗೆದು ಹತ್ತಿರಕ್ಕೆ ಕರೆದೆ. ಅವನು ಅನುಮಾನಿಸುತ್ತಲೇ ಬಂದು ಮೆಲ್ಲನೆ, “ಇಲ್ನೋಡಿ… ” ಎಂದು ತನ್ನ ನಿಕ್ಕರಿನ ಜೇಬಿನಿಂದ ಚಾಕೊಲೇಟಿನ ದೊಡ್ಡ ಬಾರ್ ತೆಗೆದು ತೋರಿಸಿದ. ನಾವು ಮಕ್ಕಳಿಗೆ ತಂದಿದ್ದು ಅದಕ್ಕಿಂತ ಚಿಕ್ಕ ಚಾಕೊಲೇಟ್ಸ್ ಆಗಿದ್ದವು.
“ಈ ಚಾಕೊಲೇಟ್ ಯಾರು ಕೊಟ್ರು? ನಾವು ಇಂಥದ್ದು ತಂದೇ ಇಲ್ವಲ್ಲ?” ನಾನು ಅಚ್ಚರಿಯಿಂದ ಕೇಳಿದೆ.
“ಒಬ್ಬರು ಅಂಕಲ್ ಕೊಟ್ರು, ಶ್ ಯಾರಿಗೂ ಹೇಳ್ಬೇಡ ಅಂದವ್ರೆ” ಎಂದು ಚಾಕೊಲೇಟ್ ಅನ್ನು ಜೇಬಿನಲ್ಲಿಟ್ಟುಕೊಂಡ.
“ಓಹೋ ನಿಂದೇ ಚಾನ್ಸ್ ಬಿಡಪ್ಪ. ಎಷ್ಟು ದೊಡ್ಡ ಚಾಕಲೇಟ್ ಸಿಕ್ಕಿದೆ ನಿಂಗೆ. ನಂಗೊಂದು ಕೊಡುಸ್ತೀಯಾ?” ನಾನು ತಮಾಷೆ ಮಾಡಿದೆ.
ಅವನು ಜೋರಾಗಿ ನಗತೊಡಗಿದ.
“ಯಾಕೆ ಬರೀ ಚಿಕ್ ಮಕ್ಳಿಗಷ್ಟೇನಾ ಆವಂಕಲ್ ಕೊಡೋದು?”
“ಅಯ್ಯೋ ಪೆದ್ದು ಆಂಟಿ, ನಿನ್ನತ್ರ ಬುಲ್ಲಕಾಯಿ ಇಲ್ವಲ್ಲಾ?”
“ಏನು?” ನನಗೆ ಅವನು ಹೇಳಿದ್ದು ಅರ್ಥವಾಗದೆ, “ಏಯ್ ಸರಿಯಾಗಿ ಹೇಳೋ, ಏನದು ಬುಲ್ಲಕಾಯಿ ಅಂದ್ರೆ?”
“ಅಯ್ಯೋ ನಿಂಗೆ ಚಾಕಲೇಟ್ ಸಿಗಾಕಿಲ್ಲ ಬುಡಾಂಟಿ, ಇಲ್ಲಿ ಇಂಗೆ ಚಡ್ಡಿ ತೆಗ್ದಿ ಬುಲ್ಲಕಾಯಿ ತೋರ್ಸುದ್ರೆ ಅಸ್ಟೆ ಚಾಕಲೇಟ್ ಕೊಡದು ಆವಂಕಲು” ಎಂದು ಅವಸರದಲ್ಲಿ ಹೇಳಿ ಓಡಿ ಹೋದ.
ನನ್ನ ಕೈಲಿದ್ದ ಚಾಕ್ಲೇಟ್ ನೆಲಕ್ಕೆ ಬಿತ್ತು!
ಸಿಟ್ಟಿನಿಂದ ಕಂಪಿಸುತ್ತಾ ಯಾರಿರಬಹುದು ಈ ನೀಚ ಎಂದು ಹಾಗೇ ಮೋಟುಗೋಡೆ ಕಡೆ ತಿರುಗಿದಾಗ ಮೋಟುಗೋಡೆಯ ಹಿಂದಿನಿಂದ ಸಿಗರೇಟ್ ಹೊಗೆ ಕಾಣಿಸಿತು. ಏನೋ ಕೆಡುಕೆನಿಸಿ, ನನ್ನ ಮನಸ್ಸು ‘ದೇವ್ರೇ, ಅದು ಮ್ಯಾಡಿ ಆಗಿಲ್ದೇ ಇರ್ಲಿ’ ಎಂದು ಬೇಡಿಕೊಂಡಿತು. ಗಾಬರಿ ಬಿದ್ದು ಹಾಗೇ ನೋಡುತ್ತಿದ್ದಾಗ ಕೋಡುಗಳಿದ್ದ ಹೆಲ್ಮೆಟ್ ಅನ್ನು ಎರಡು ಕೈಗಳು ಮೇಲಕ್ಕೆತ್ತಿ ಹಿಡಿದು ಮತ್ತೆ ಕೆಳಗಿಳಿಸಿದ್ದು ಕಂಡಿತು. ಆನಂತರ ಮ್ಯಾಡಿಯ ಬೈಕ್ ಗುಡುಗುಡು ಸದ್ದು ಮಾಡುತ್ತಾ ಹೋಗುವುದು ಕಾಣಿಸುತ್ತಿದ್ದಂತೆಯೇ ನಾನು ನಿಂತಲ್ಲೇ ಕುಸಿದೆ!
ಒಬ್ಬಳು ಮುದ್ದಾದ ಹುಡುಗಿ ಸೀರೆ ಉಟ್ಟುಕೊಂಡು, ನಮ್ಮ ಗುಂಪಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಳು! ವೇದಿಕೆಯಿಂದ ದೂರ ಮಿಸುಕಾಡದೆ ಕುಳಿತೇಯಿದ್ದ ನನ್ನನ್ನು ಫಾಲ್ಗುಣಿ ಕೈ ಬೀಸಿ ಕರೆಯುತ್ತಿದ್ದಳು. ಅವಳ ಮುಖದಲ್ಲಿ ಉದ್ವೇಗ, ಅಚ್ಚರಿ, ಗೊಂದಲ ಕಾಣುತ್ತಿದ್ದವು. ಅವಳಿಗೆ ನನ್ನೆದೆಯಲ್ಲಿ ಸ್ಪೋಟಗೊಂಡಿದ್ದ ಜ್ವಾಲಾಮುಖಿ ಕಾಣುವಂತಿದ್ದರೆ ಎನಿಸಿತು. ಆಗಲೇ ನಾಟಕದ ಇತರ ಪಾತ್ರಧಾರಿಗಳು ವೇದಿಕೆ ತಲುಪಿ ನನಗಾಗಿ ಕಾಯುತ್ತಿದ್ದರು. ನಿಧಾನವಾಗಿ ನಾನು ಎದ್ದು ಅವರನ್ನು ಸೇರಿಕೊಂಡೆ. ಆದರೆ ನನ್ನ ಮುಖ ನೋಡಿ ಅವರಿಗೆಲ್ಲಾ ಇನ್ನಷ್ಟು ಗೊಂದಲವಾಯಿತು.
“ಆರ್ ಯು ಆಲ್ರೈಟ್?” ಫಾಲ್ಗುಣಿ ಹತ್ತಿರ ಬಂದು, “ಪಿರಿಯಡ್ಸ್ ಆಗಿಬಿಡ್ತಾ?” ಕೇಳಿದಳು.
ನಾನು ತಲೆಯನ್ನು ಅತ್ತಿಂದಿತ್ತ ಆಡಿಸಿ, ಅಸಹಾಯಕಳಾಗಿ, ದುಃಖದಿಂದ ಅವಳನ್ನು ನೋಡಿದೆ. ಆದರೆ ಎಲ್ಲರೂ ನಮ್ಮನ್ನು ನೋಡುತ್ತಿರುವುದು, ನಮ್ಮ ನಾಟಕಕ್ಕಾಗಿ ಕಾಯುತ್ತಿರುವುದು ನೆನಪಾಗಿ ಸ್ವಲ್ಪ ಸುಧಾರಿಸಿಕೊಂಡು ಶುರು ಮಾಡಿದೆ. ಹೆಣ್ಣು ಮಕ್ಕಳ ವೋಟಿಂಗ್ ಹಕ್ಕುಗಳ ಬಗ್ಗೆ ಡೈಲಾಗ್ ಹೇಳುತ್ತಿದ್ದಂತೆಯೇ ನನಗೆ ಅರಿವಿಲ್ಲದಂತೆ, ಲೈಂಗಿಕ ಶೋಷಣೆ, ಮಾನಸಿಕ ಶೋಷಣೆ ಎಂದೆಲ್ಲಾ ಬಡಬಡಾಯಿಸಿದೆ. ಆಸಕ್ತಿ ಕಳೆದುಕೊಳ್ಳುತ್ತಿದ್ದ ಮಕ್ಕಳು ನಿಧಾನವಾಗಿ ಗುಜುಗುಜು ಮಾತಾಡತೊಡಗಿದ್ದು ಗೊತ್ತಾಗುತ್ತಿತ್ತು.
ಬರೀ ಹೆಣ್ಣು ಮಕ್ಕಳಲ್ಲ ಇಂದು ಗಂಡು ಮಕ್ಕಳು ಕೂಡ ಸೇಫ್ ಇಲ್ಲ…
ಕಾಮುಕರು ಎಲ್ಲೆಡೆ ಇರುತ್ತಾರೆ, ನಿಮ್ಮ ಹತ್ತಿರದವರೇ …
ಗುಡ್ ಟಚ್ ಬ್ಯಾಡ್ ಟಚ್ …
ನನ್ನ ಮಾತು ಎತ್ತೆತ್ತಲೋ ಹೋಗುತ್ತಿತ್ತು.
ನಾನಿನ್ನೂ ಮುಗಿಸಿರಲಿಲ್ಲ, ಫಾಲ್ಗುಣಿ ಮೈಕ್ ಕಸಿದುಕೊಂಡು, “ಇಲ್ಲಿಗೆ ನಮ್ಮ ನಾಟಕ ಮುಕ್ತಾಯವಾಯಿತು. ಮುಂದೆ ಡ್ರಾಯಿಂಗ್ ಮಾಡೋಕೆ ಆಸಕ್ತಿ ಇರೋ ಮಕ್ಕಳು ಬನ್ನಿ” ಎಂದಳು. ಎಲ್ಲರೂ ಸದ್ಯ ಏನೋ ಒಂದು ಅಹಿತಕರವಾದದ್ದು ಮುಗಿಯಿತೆನ್ನುವ ನಿರಾಳತೆಯಿಂದ ಚೆದುರಿದರು. “ವಾಟ್ ದ ಹೆಲ್ ವಾಸ್ ದಟ್?” ಫಾಲ್ಗುಣಿ ಸಿಟ್ಟಿನಿಂದ ನನ್ನ ತೋಳು ಹಿಡಿದು ಶೌಚಾಲಯದತ್ತ ಎಳೆದುಕೊಂಡು ಹೋದಳು. “ಹೇಳು ಏನಾಯ್ತು?” ಅವಳ ಕಣ್ಣುಗಳಲ್ಲಿ ಸಿಟ್ಟಿತ್ತು.
“ಮ್ಯಾಡಿ …” ನನಗೆ ಮಾತನಾಡಲು ಆಗಲಿಲ್ಲ.
“ನೀನೇ ಪ್ರೊಪೋಸ್ ಮಾಡಿಬಿಟ್ಯ? ರಿಜೆಕ್ಟ್ ಮಾಡಿದ್ನಾ? ಅಷ್ಟ್ಯಾಕ್ ಅರ್ಜೆಂಟ್ ಮಾಡಿದೆ?”
“ಅವನೇನು ರಿಜೆಕ್ಟ್ ಮಾಡೋದು ನನ್ನ?” ನಾನು ಅವುಡುಗಚ್ಚಿ, ಟಾಯ್ಲೆಟ್ ಬಾಗಿಲಿಗೆ ಗುದ್ದಿದೆ. ತುಕ್ಕು ಹಿಡಿದಿದ್ದ ಅದರ ಚಿಲಕ ಮುರಿದು ಬಿತ್ತು. ನಾನು ನಡೆದುದ್ದನ್ನು ಹೇಳುತ್ತಿದ್ದಂತೆ ಫಾಲ್ಗುಣಿಯ ಸಿಟ್ಟು ಹೆಚ್ಚಾಗತೊಡಗಿತು.
“ನೀನು ರಿಜೆಕ್ಷನ್ ತಡ್ಕೊಳೋಕಾಗ್ದೆ ರಿವೇಂಜ್ ತಗೋತ್ತಿಲ್ಲ ತಾನೇ?”
ನನಗೆ ತಲೆ ಗಿರ್ ಅಂತು. ಇಂಥವರನ್ನು ಬಯಲಿಗೆಳೆಯುವಾಗ ಯಾಕೆ ಎಲ್ಲರೂ ನಮ್ಮದೇನಾದರೂ ಮೋಟಿವ್ ಇದೆಯಾಂತ ಕೆದಕುತ್ತಾರೆ ಎಂದು ಚಿಂತೆಯಾಯಿತು.
“ನಾನು ನಿಂಗೆ ಏನೂ ಪ್ರೂವ್ ಮಾಡ್ಬೇಕಾಗಿಲ್ಲ” ನಾನು ಸಿಟ್ಟಿನಿಂದ ಹೊರನಡೆಯತೊಡಗಿದೆ.
“ಸೀರಿಯಸ್ಲೀ? ಇಷ್ಟಕ್ಕೇ ಯಾವ್ದೋ ಮರ್ಡರ್ ಗೆ ವಿಟ್ನೆಸ್ ಆಗಿದ್ದೋಳಂಗೆ ಆಡ್ತಿಯಲ್ಲೇ? ಅವ್ನಿಗೆ ಆಮೇಲೆ ಹೇಳ್ಬೋದಿತ್ತು ಹಿಂಗೆಲ್ಲ ಮಾಡ್ಬೇಡಾಂತ, ಅಷ್ಟಕ್ಕೂ ಆ ಹುಡುಗ ಮೊದ್ಲು ಚಡ್ಡಿನೇ ಹಾಕ್ಕೊಂಡು ಬಂದಿರಲಿಲ್ವಲ್ಲಾ?” ನನ್ನ ಕೈ ಹಿಡಿದೆಳೆದು ನಿಲ್ಲಿಸಿ ಕೇಳಿದಳು.
ನನಗೆ ನಾನು ನಡೆದಿದ್ದನ್ನೆಲ್ಲಾ ಸರಿಯಾಗಿ ಹೇಳಿದೆನೋ ಇಲ್ಲವೋ ಎಂದು ಅನುಮಾನವಾಯಿತು. “ಅಲ್ವೇ ಬಟ್ಟೆಯಿಂದ ಹೇಗೆ ಮೈ ಮುಚ್ಚಿಕೊಳ್ಳೋದು ಅಂತಾನೂ ಗೊತ್ತಿಲ್ದಿರೋ ಮಗೂಗೆ ಚಾಕ್ಲೇಟ್ ಆಸೆ ತೋರಿಸಿ ಬಟ್ಟೆ ಬಿಚ್ಚಿಸೋದು ಎಂಥ ವಿಕೃತಿ? ಮ್ಯಾಡಿಗೆ ನಿಜಕ್ಕೂ ಚಾರಿಟಿಯಲ್ಲಿ ನಂಬಿಕೆಯಿಲ್ಲ. ಅವನು ಬಂದಿದ್ದೇ ಚಿಕ್ಕ ಮಕ್ಕಳು ಸಿಗ್ತಾರೆ ಅಂತ. ಹಿ ಈಸ್ ಸಿಕ್ ” ನಾನು ಚೀರಿದೆ.
“ಆರ್ ಯು ಕ್ರೇಝಿ? ಅಷ್ಟಕ್ಕೂ ಏನ್ ಪ್ರೂಫ್ ಇದೆ ನಿನ್ನತ್ರ? ಅವನು ನಮ್ಮ ಫ್ಯಾಮಿಲಿ ಫ್ರೆಂಡ್ …”
ಇವಳು ನಿಜಕ್ಕೂ ನನ್ನ ಸ್ನೇಹಿತೆ ಫಾಲ್ಗುಣಿಯೇ? ನಾವು ಇಷ್ಟು ಬೇರೆ ಬೇರೆಯಾಗಿ ಯೋಚಿಸ್ತಿವಾ? ಇಂಥ ಸೀರಿಯಸ್ಸಾದ ವಿಷಯವಾದರೂ ಇವಳಿಷ್ಟು ತಣ್ಣಗೆ ಮಾತಾಡುತ್ತಿದ್ದಾಳಲ್ಲಾಂತ ಸಿಟ್ಟೂ ಬಂತು.
“ಫಾಲು ನಿಂಗೆ … ” ನಾನು ಮಾತಾಡ್ತಿದ್ರೂ ಅವಳು ಹೋಗ್ಬಿಟ್ಳು.
ನಾನು ಯಾವ ಕಾರಣಕ್ಕೂ ಈ ವಿಷಯವನ್ನು ಇಲ್ಲಿಗೇ ಬಿಡಬಾರದೆಂದು ರಾಮಲಿಂಗನನ್ನು ಹುಡುಕಿ, “ನಿಮ್ಮಮ್ಮನತ್ರ ಕರ್ಕೊಂಡೋಗು” ಎಂದೆ. ಅವನು ಎಲ್ಲಿ ತನ್ನ ಚಡ್ಡಿ ಜೇಬು ಹಿಡಿಸದಷ್ಟು ದೊಡ್ಡ ಚಾಕ್ಲೇಟ್ ತಿನ್ನುವ ಮೊದಲೇ ಕಳೆದುಹೋಗುತ್ತೋ ಎನ್ನುವ ಭಯದಿಂದ ಒಂದು ಕೈಯಲ್ಲಿ ಅದನ್ನು ಹಿಡಿದುಕೊಂಡೇ ಮನೆಯತ್ತ ನಡೆಯುತ್ತಾ, “ಯಾಕ್ ಆಂಟಿ? ಯಾಕ್ ಅಂತೇಳಿ ಪಷ್ಟು?” ಎಂದು ಗೋಗರೆಯತೊಡಗಿದ. ಕುಡಿಯುವ ನೀರಿನ ಟ್ಯಾಂಕಿ ಹತ್ತಿರ ಬಿಂದಿಗೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಆಕೆ ನನ್ನನ್ನು ನೋಡಿದೊಡನೆ ನಾಚಿಕೊಂಡು, “ಅಯ್ಯೋ ಮೇಡಮ್ಮೊರೇ ನೀವ್ಯಾಕೆ ಇಲ್ಲಿಗಂಟ ಬರಾಕೋದ್ರಿ, ನಮ್ ಮಗಾ ಏನಾರ ತರ್ಲೆ ಮಾಡುದ್ನಾ?” ಎಂದು ಮೈಯೆಲ್ಲಾ ಹಿಡಿ ಮಾಡಿಕೊಂಡು, ಅವನ ತಲೆ ಮೊಟಕಿ, ಕೇಳಿದಳು.
ನಾನು ಆಕೆಯನ್ನು ಹತ್ತಿರ ಕರೆದು ನಡೆದುದ್ದನ್ನೆಲ್ಲಾ ಹೇಳಿ, “ನೀವು ತಕ್ಷಣ ನನ್ ಜೊತೆ ಬನ್ನಿ, ಹೆಡ್ ಮೇಷ್ಟ್ರುಗೆ ಕಂಪ್ಲೇಂಟ್ ಕೊಡಿ” ಎಂದೆ. ಆಕೆ ಸೆರಗಿನಿಂದ ಬಾಯಿ ಮುಚ್ಚಿಕೊಂಡು ನಗುತ್ತಾ, “ಏ ಬುಡಿ ಮೇಡಮ್ಮೋರೆ, ಬುದ್ದಿ ಬಂದ್ಮ್ಯಾಕೆ ನಮ್ ರಾಮಲಿಂಗ ಅಂಗೆಲ್ಲಾ ಮಾಡಾಕಿಲ್ಲ” ಎನ್ನುತ್ತಾ ಹೊರಟೇ ಹೋದಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು
ನನಗೆ ಆ ಟ್ಯಾಂಕಿಗೆ ನನ್ನ ತಲೆ ಚಚ್ಚಿಕೊಳ್ಳಲೇ ಎನಿಸಿತು.
ನಾನು ವಾಪಸ್ ಸ್ಕೂಲಿಗೆ ಬಂದು ಮಕ್ಕಳಿಂದ ಬ್ಯಾಂಡ್ ಸೆಟ್ ಗಳನ್ನು ಎತ್ತಿ ಒಳಗಿಡಿಸುತ್ತಿದ್ದ ಪೀಟಿ ಮೇಷ್ಟ್ರತ್ರ ಹೋದೆ. ಆತನೋ, ಎಲ್ಲಾ ಕೇಳಿದ್ಮೇಲೆ, “ಮೇಡಂ, ಇಂಥ ಒಂದು ಖುಸಿ ಟೆಮಲ್ಲಿ, ಏನೋ ನಮಳ್ಳಿ ಮಕ್ಳಿಗೆ ಒಳ್ಳೇದಾಗ್ಲಿ ಅಂತವ ನೀವೆಲ್ಲಾ ಬಂದಿರುವಾಗ, ಇದೆಲ್ಲಾ ಕೆಟ್ ಮಾತಾಡಿ ಮನ್ಸ್ ಕೆಡಿಸ್ಕಳದು ಯಾಕೆ ಬುಡಿ, ನಾನು ನಮ್ಮ ಉಡುಗ್ರುಗೆ ಆಮ್ಯಾಕೆ ಹೇಳ್ತಿನಿ.” ಎಂದುಬಿಟ್ಟರು. ನನಗೆ ಅವರು ಕುತ್ತಿಗೆಗೆ ಹಾಕಿಕೊಂಡಿದ್ದ ವಿಶಲ್ ಕಸಿದುಕೊಂಡು, ಜೋರಾಗಿ ಊದಿ, ಈ ಮ್ಯಾಡಿ ಎಂಥ ಹಲ್ಕಟ್ ನನ್ಮಗಾಂತ ಕೂಗಿ ಹೇಳಬೇಕನ್ನಿಸಿತು. ಮಕ್ಕಳು ಡ್ರಾಯಿಂಗ್ ಮಾಡುತ್ತಿದ್ದುದ್ದನ್ನು ಸಂತೋಷದಿಂದ ನೋಡುತ್ತಾ, ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದ ಹೆಡ್ ಮೇಷ್ಟ್ರ ಬಳಿ ಹೋದೆ. ಅವರಂತೂ ನಾನು ಗುಡ್ ಟಚ್ ಬ್ಯಾಡ್ ಟಚ್ ಎಂದೆಲ್ಲಾ ಮಾತನಾಡಲು ಶುರು ಮಾಡಿದಾಗಿನಿಂದಲೂ ಮುಖ ಕೊಟ್ಟು ಮಾತನಾಡಿಸಿರಲೇ ಇಲ್ಲ. ಅವರತ್ತಲೇ ಬಿರುಸಾಗಿ ನಡೆದು ಬರುತ್ತಿದ್ದ ನನ್ನನ್ನು ನೋಡುತ್ತಿದ್ದಂತೆಯೇ ಮೆಲ್ಲಗೆ ತಪ್ಪಿಸಿಕೊಂಡು ಬಿಟ್ಟರು.
ಅಷ್ಟರಲ್ಲಿ ಫಾಲ್ಗುಣಿ, ಗ್ರೂಪ್ ಫೋಟೋಗಾಗಿ ನನ್ನನ್ನು ಹುಡುಕಿಕೊಂಡು ಬಂದಳು. ನಾನು ಇಲ್ಲಿಂದ ಹೊರಡುವ ಮೊದಲು ಯಾರಿಗಾದರೂ ಹೇಳಲೇಬೇಕೆಂದು ಒದ್ದಾಡಿ ಪ್ರಯೋಜನವಾಗದೇ, ಹತಾಶಳಾಗಿ, ಫೋಟೋಗಳಿಗೆ ಪೋಸ್ ಕೊಟ್ಟೆ. ನಂತರ ಎಲ್ಲರೂ ವಾಪಸ್ ಹೊರಡಲನುವಾದರು. ನಾನು ಕೊನೇಪಕ್ಷ ರಾಮಲಿಂಗನಿಗಾದರೂ ಬುದ್ದಿ ಹೇಳಬೇಕೆಂದು ಅವನನ್ನು ಹುಡುಕಿದೆ. ಚೆನ್ನನ ಪಕ್ಕ ಕುಳಿತು ಹೊಸ ಚಾಕೊಲೇಟ್ ಅನ್ನು ತೋರಿಸಿಕೊಂಡು ಜಂಭ ಪಡುತ್ತಾ ತಿನ್ನುತ್ತಿದ್ದ. ನನ್ನನ್ನು ನೋಡಿದೊಡನೆ, “ಆಂಟಿ, ನೀವು ನೆಕ್ಸ್ಟ್ ಟೆಮ್ ಬರೋತ್ಗೆ ನಾನೂ ಕೈ ಮುರ್ಕೊಂಡಿರ್ತೀನಿ, ಆಗ ನಂಗೂ ಪಸ್ಟ್ ಚಾಕೊಲೇಟ್ ಕೊಡ್ಬೇಕು” ಎಂದು ಪೆದ್ದು ಪೆದ್ದಾಗಿ ಹೇಳಿದ.
ನಾನು ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಕಣ್ಣೀರನ್ನು ಹರಿಯಲು ಬಿಟ್ಟು, ಮಂಡಿಯೂರಿ ಕುಳಿತು, ಅವನನ್ನು ತಬ್ಬಿಕೊಂಡೆ.
“ಹಾಗೆಲ್ಲಾ ಅನ್ನಬಾರದು ದಡ್ಡ, ನಾವು ನೆಕ್ಸ್ಟ್ ಟೈಮ್ ಬರೋ ಹೊತ್ತಿಗೆ, ನಿಂಗೆ ಬುಲ್ಲಕಾಯಿ ತೋರಿಸು ಅಂತ ಕೇಳೋವ್ರ ಕೈ ಮುರೀಬೇಕು, ಆಯ್ತಾ?” ಅವನು ಗೊಂದಲದಿಂದ ನಾನು ಅಳುವುದನ್ನೇ ನೋಡಿದ. “ಕೈ ಮುರ್ಕೊಂಡು ಕೂತ್ರೆ ನಿನ್ನ ನೋಡಿ ಅಯ್ಯೋ ಪಾಪ ಅಂತಾರೆ. ಅದೂ ಗ್ಯಾರಂಟಿ ಇಲ್ಲ. ಕೆಲವರು ನಿನ್ನತ್ರಿರೋ ಚಾಕ್ಲೇಟ್ನ ಕಸ್ಕೊಂಡು ಬಿಡಬೋದು. ಹಂಗಾಗಬಾರ್ದಲ್ವಾ? ರಾಮಲಿಂಗ ಅಂದ್ರೆ ತುಂಬಾ ಸ್ಟ್ರಾಂಗು, ಅವನ ಹತ್ರ ನಾಯಿ ಮರಿ ಬೇರೆ ಇದೆ, ಅವನ ತಂಟೆಗೋಗ್ಬೇಡಿ ಅಂತ ಹೇಳ್ಬೇಕು. ಆಯ್ತಾ?”
ನನ್ನ ಮಾತು ಅವನಿಗಾಗಲೀ, ಚೆನ್ನನಿಗಾಗಲೀ ಅರ್ಥವಾಗಲೇ ಇಲ್ಲ. ಬೇಸರದಿಂದಲೇ ಅಲ್ಲಿಂದ ಹೊರಟು, ನಾನು ಫಾಲ್ಗುಣಿ ಕಾರಿನಲ್ಲಿ ಕುಳಿತುಕೊಂಡೆ. ದಾರಿಯುದ್ದಕ್ಕೂ ಫಾಲ್ಗುಣಿ ಆ ಟಾಪಿಕ್ ಮಾತಾಡೋದೇ ಬೇಡವೆಂದುಬಿಟ್ಟಿದ್ದಳು. ಆಗಾಗ ನಮ್ಮ ಕಾರಿನ ಮುಂದೆ ಹಾದು ಹೋಗುತ್ತಿದ್ದ ಮ್ಯಾಡಿಯ ಬೈಕ್ ಬೇಡವೆಂದರೂ ಅದೇ ನೆನಪುಗಳಿಂದ ನನ್ನನ್ನು ವ್ಯಗ್ರಗೊಳಿಸುತಿತ್ತು. ಮೊದಲೇ ನಿರ್ಧರಿಸಿದ್ದಂತೆ ಅದೇ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಿದಾಗ ನನಗಂತೂ ಹಸಿವೇ ಇರಲಿಲ್ಲ.
***
ನಾನು ಫಾಲ್ಗುಣಿಯನ್ನು ದಿಟ್ಟಿಸಿ ನೋಡಿ, “ಫಾಲು, ಮಿಸ್ ಬಿಹೇವ್ ಮಾಡಿದವ್ರನ್ನ ತೆಗೆದಾಕದಿದ್ರೆ ನಾಳೆ ಗ್ರೂಪಿಗೇ ಕೆಟ್ಟೆಸರು ಬರಲ್ವಾ?” ಎಂದು ಕೇಳಿದೆ.
“ನೀನು ಹಿಂಗೆ ಓವರ್ ರಿಯಾಕ್ಟ್ ಮಾಡ್ಬಾರ್ದು. ಆ ಹೆಡ್ ಮೇಷ್ಟ್ರು ನಿನ್ ಬಗ್ಗೆ ಏನು ಹೇಳಿದ್ರು ಗೊತ್ತಾ? ಟೈಮಿಗೆ ಸರಿಯಾಗಿ ಮದ್ವೆ ಮಾಡಲಿಲ್ಲ ಅಂದ್ರೆ ಹೆಣ್ಮಕ್ಳು ಹಿಂಗೇ … “
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ
“ಸಮಸ್ಯೆಯಿದೆ ಅಂತಾನೇ ಒಪ್ಪಿಕೊಳ್ಳದವರು ಪರಿಹಾರ ಹುಡುಕುತ್ತಾರ?”
“ಹೋಗ್ಲಿ ಬಿಡೇ, ಏನಾದ್ರೂ ಇಂಟೆರೆಸ್ಟಿಂಗ್ ಮಾತಾಡೋಣ? ಸ್ಕೂಟರ್ ಯಾವಾಗ ತಗೋತಿದೀಯ? ಮ್ಯಾಡಿಯಂಥ ಬೈಕ್ ತಗೊಂಡುಬಿಡು. ಅಷ್ಟೇ ಹುಡುಗ್ರೆಲ್ಲಾ ಫಿದಾ ಆಗ್ಬಿಡ್ತಾರೆ. ಇಲ್ಲಾಂದ್ರೂ ಬೀದಿಲಿರೋ ಮಕ್ಳೆಲ್ಲಾ , ಒಂದ್ ರೌಂಡ್ ಅಂತ ಗೋಗರಿತಾರೆ. ನನ್ನ ಅಕ್ಕನ ಮಗನ ಬಗ್ಗೆ ಹೇಳ್ತಿದ್ದನಲ್ಲ, ಅವನಿಗಂತೂ ಮ್ಯಾಡಿ ಜೊತೆ ಬೈಕ್ ನಲ್ಲಿ ಒಂದು ರೌಂಡ್ ಹೋಗೋದಂದ್ರೆ…”
“ಮ್ಯಾಡಿ ಜೊತೆನಾ?” ನಾನು ಹೆಚ್ಚು ಕಡಿಮೆ ಚೀರಿದೆ.
ಫಾಲ್ಗುಣಿ ಇದ್ದಕ್ಕಿದ್ದಂತೆ ಸೈಲೆಂಟ್ ಆದಳು. ಏನೋ ಯೋಚಿಸುತ್ತಾ, “ಆದ್ರೆ ಮೊದ್ಲಿನಷ್ಟು ಇಷ್ಟ ಪಡ್ತಿಲ್ಲಾಂತ ಹೇಳ್ತಿದ್ಲು ಅಕ್ಕ. ಈಗೀಗ ಯಾಕೋ ಮಂಕಾಗಿರ್ತಾನೆ, ಚಾಕ್ಲೇಟ್ ಕೊಟ್ಟರೂ … ” ಅವಳ ಮನಸ್ಸು ಏನೋ ಒದ್ದಾಟದಲ್ಲಿ ಸಿಲುಕಿರುವುದು ಸ್ಪಷ್ಟವಾಗಿತ್ತು.
“ಫಾಲು?” ಮ್ಯಾಡಿನ ಏನೂಂತ ಸರಿಯಾಗಿ ಗುರುತಿಸುವಲ್ಲಿ ಗೆದ್ದೆನೆನ್ನುವ ಖುಷಿಗಿಂತ ನೋವೇ ಹೆಚ್ಚಾಗತೊಡಗಿತು.
“ಛೇ, ಹಾಗಿರಲ್ಲ ಬಿಡೇ, ಅಕ್ಕನತ್ರ ಗುಂಡ ಹೇಳ್ಕೊತಿದ್ದ ಅಲ್ವಾ? ಅಲ್ದೆ ಅವ್ನಿಗೆ ಎದುರು ಮನೆಯವರ ಜೊತೆಲೇ ಹಾಗೆ ನಡ್ಕೊಳೋವಷ್ಟು ಧೈರ್ಯ ಹೇಗೆ …ನಂಗಾದ್ರು ಗೊತ್ತಾಗಬಾರದ … ಪಾಪ ಗುಂಡ” ಅವಳ ಕೈಗಳು ಕಂಪಿಸುತ್ತಿದ್ದುದು ಕಾಣಿಸುತಿತ್ತು. ಇಡ್ಲಿ ತಿನ್ನುತ್ತಿದ್ದ ಎರಡೂ ಚಮಚೆಗಳು ತಟ್ಟೆಯೊಳಗೆ ಬಿದ್ದವು. ಅವಳ ತುಟಿಗಳು ನೋವಿನಿಂದ ಅದುರತೊಡಗಿ, ಕಣ್ಣುಗಳು ತುಂಬಿಕೊಂಡವು.
“ಅಕ್ಕನಿಗೆ ಹೇಗೇಳೋದು?”
“… “
“ಸುಮ್ನೆ ಬಿಡಲ್ಲ ಅವನನ್ನ.” ಸಿಟ್ಟಿನಿಂದ ಎದ್ದು ನಿಂತವಳು, “ಐ ಯಾಮ್ ಸಾರಿ ಕಣೇ” ಎಂದಳು.
“ಯಾಕೆ?”
“ಮ್ಯಾಡಿ ನನ್ನ ಸ್ವಂತ ಅಕ್ಕನ ಮಗನ್ನೇ ಅಬ್ಯೂಸ್ ಮಾಡ್ತಿದಾನೇಂತ ಗೊತ್ತಾಗ್ದಿದ್ರೆ ನಾನೂ ಅವನನ್ನ ಎಕ್ಸ್ಪೋಸ್ ಮಾಡೋದ್ರ ಬಗ್ಗೆ ತಲೆ ಕೆಡಿಸ್ಕೊಳ್ತಿರ್ಲಿಲ್ಲಾನ್ಸುತ್ತೆ. ನಮ್ಮ ಬುಡಕ್ಕೆ ಬರೋ ತನಕ ಅದು ನಮ್ ಪ್ರಾಬ್ಲಮ್ ಅನ್ಸೋದೇ ಇಲ್ವಲ್ಲ?”
“ನಿವ್ಯಾರೂ ಸಪೋರ್ಟ್ ಮಾಡದಿದ್ರೂ ನಾನು ಅವನನ್ನು ಸುಮ್ನೆ ಬಿಡಲ್ಲ. ವಿ ನೀಡ್ ಟು ಆಕ್ಟ್, ನೌ!” ನಾನು ರೋಷದಿಂದ ಹೇಳಿದೆ.
“ಯಸ್”
***
ನಾನು ಮ್ಯಾಡಿ ಹತ್ತಿರ ಹೋಗಿ ಮುಗುಳುನಕ್ಕು, “ನಾನು ಸ್ವಲ್ಪ ದೂರ ನಿಮ್ಮ ಬೈಕಲ್ಲಿ ಹಿಂದೆ ಕೂತ್ಕೊಬಹುದಾ?” ಎಂದೆ.
“ಅಫ್ ಕೋರ್ಸ್” ನಿರ್ಭಾವುಕನಾಗಿ ಹೇಳಿದ. ನಾನೂ ಒಬ್ಬಳು ಪುಟ್ಟ ಹುಡುಗಿಯಾಗಿದ್ದರೆ ಖುಷಿಯಿಂದ ಒಪ್ಪಿಕೊಳ್ತಿದ್ದನೇನೋ ರಾಸ್ಕಲ್ ಎಂದು ಬೈದುಕೊಂಡು ನನ್ನ ಬ್ಯಾಗನ್ನು ನಡುವೆ ಇಟ್ಟುಕೊಂಡು ಕುಳಿತೆ. ನೆನ್ನೆಯಿಂದ ಆಸೆಪಡುತಿದ್ದ ಈ ಸೀಟು ಇಷ್ಟು ಬೇಗ ಹೇಸಿಗೆ ಹುಟ್ಟಿಸುತ್ತದೆಯೆಂದು ಯಾವೋಳಿಗೆ ಗೊತ್ತಿತ್ತು? ಸುಮಾರು ಹತ್ತು ಕಿಲೋಮೀಟರ್ ಹೋಗಿದ್ದೆವೇನೋ ಅಷ್ಟೇ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ ಚಂದ್ರಶೇಖರ್
“ಮ್ಯಾಡಿ ಪ್ಲೀಸ್ ನಿಲ್ಲುಸ್ತೀರಾ? ನನಗೆ ಭಯ ಆಗ್ತಿದೆ. ಹೆಲ್ಮೆಟ್ ಬೇರೆ ಇಲ್ಲ. ಸಾರಿ ನಾನು ಫಾಲ್ಗುಣಿ ಜೊತೆಲೇ ಬರ್ತೀನಿ. ಪ್ಲೀಸ್”
“ಶ್ಯೂರ್”
ಇಡೀ ಗುಂಪನ್ನು ಲೀಡ್ ಮಾಡುತ್ತಿದ್ದ ಅವನು ತನ್ನ ಬಲಗೈಯನ್ನು ಎತ್ತಿ ಎಲ್ಲರಿಗೂ ನಿಲ್ಲಿಸುತ್ತಿರುವ ಸೂಚನೆ ಕೊಟ್ಟ. ನಮ್ಮನ್ನು ಫಾಲೋ ಮಾಡುತ್ತಿದ್ದ ಎಲ್ಲರೂ ಗಕ್ಕನೆ ನಿಲ್ಲಿಸಿ ಕುತೂಹಲದಿಂದ ನಮ್ಮನ್ನೇ ನೋಡತೊಡಗಿದರು. ನಾನು ಇಳಿದು ಫಾಲ್ಗುಣಿ ಕಾರ್ ಹತ್ತಿದೆ.
“ನಿಂಗೆ ಸೋಶಿಯಲ್ ಸರ್ವಿಸ್ ಮಾಡೋದೆಲ್ಲಾ ಇಷ್ಟ ಇಲ್ಲಾಂತ ಯಾವತ್ತೂ ಹೇಳ್ಬೇಡ” ಫಾಲು ಭಾವುಕಳಾಗಿ ಹೇಳಿದಳು.
ಮ್ಯಾಡಿ ಹೊರಡೋಣವೇ ಎಂದು ಸಿಗ್ನಲ್ ಮಾಡುತ್ತಿದ್ದರೂ ಯಾರೂ ಹೊರಡಲೇ ಇಲ್ಲ. ಎಲ್ಲಾ ಬಿಟ್ಟ ಬಾಯಿ ಬಿಟ್ಟಂತೆಯೇ ಮ್ಯಾಡಿಯ ದುಬಾರಿ ತಿಳಿ ಬೂದು ಬಣ್ಣದ ಜಾಕೆಟ್ ಮೇಲೆ ನಾನು ಕಪ್ಪು ಮಾರ್ಕರ್ ನಿಂದ ದೊಡ್ಡದಾಗಿ ಬರೆದಿದ್ದ ‘ಐ ಯಾಮ್ ಎ ಪೀಡೊಫೈಲ್’ ಎನ್ನುವ ಪದಗಳನ್ನೇ ಕೆಕ್ಕರಿಸಿಕೊಂಡು ನೋಡತೊಡಗಿದರು!
***