Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಕಿಂಡಿ

woman walking in park for kannada short story

:: ಸಂಪತ್‌ ಸಿರಿಮನೆ

ಸಾಮಾನ್ಯವಾಗಿ ಗಾಯತ್ರಿಗೆ ಕನಿಷ್ಠ ನಾಲ್ಕು ಸುತ್ತು ಹೊಡೆಯದ ಹೊರತು ಏದುಸಿರು ಬರುವುದಿಲ್ಲ. ಅದಾದಮೇಲೂ ಒಂದು ಸುತ್ತು ಹೊಡೆದು ಸರಿಯಾಗಿ ನಾಲ್ಕು ಕಿಲೋಮೀಟರ್ ಮುಟ್ಟಿಸಿಯೇ ಗಾಯತ್ರಿ ‘ಹೆಚ್’ ಬ್ಲಾಕಿನ ಲಿಫ್ಟು ಹತ್ತುವವಳು. ಅದೇಕೋ ಇವತ್ತು ಮೂರನೇ ಸುತ್ತಿನಲ್ಲಿ ‘ಸಿ’ ಬ್ಲಾಕಿನ ಬಳಿ ಬರುವಷ್ಟರಲ್ಲಿಯೇ ಕಾಲು ಸೋತು, ಎದೆ ಹಿಡಿದುಕೊಂಡಂತಾಗಿ ಹೂದೋಟದ ಪಕ್ಕದ ಕಟ್ಟೆಯ ಮೇಲೆ ಕೂತುಬಿಟ್ಟಳು. ಪಕ್ಕದಲ್ಲಿ ಕೆಲಸಗಾರನೊಬ್ಬ ‘ಮ್ಯಾನೆಕ್ಸ್ ಸೆಕ್ಯುರಿಟಿ ಸರ್ವಿಸಸ್’ ಎಂಬ ಫಲಕವಿರುವ ನೀಲಿ ಬಣ್ಣದ ಶರ್ಟು ಹಾಕಿಕೊಂಡು ಗಿಡಗಳಿಗೆ ನೀರುಣಿಸುತ್ತಿದ್ದ. ನೀರು ಹನಿಹನಿಯಾಗಿ ಪೈಪಿನಿಂದ ಬೀಳುವುದನ್ನು ನೋಡಿದ ಗಾಯತ್ರಿಗೆ ಬಾಯಿ ಒಣಗಲು ಶುರುವಾಯಿತು. “ಕುಡಿಯೋ ನೀರಿದ್ಯೇನಪ್ಪಾ?” ಎಂದು ಇದ್ದಬದ್ದ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮಾತು ಹೊರಡಿಸಿದಳು. ಅವನು “ಜೀ ಮೇಡಂ?” ಎಂದು ಎರಡೇ ಪದಗಳಲ್ಲಿ ‘ನೀವು ಹೇಳಿದ್ದನ್ನು ಮತ್ತೊಮ್ಮೆ ನನಗೆ ಅರ್ಥವಾಗುವ ಭಾಷೆಯಲ್ಲಿ ತರ್ಜುಮೆ ಮಾಡಿ ಹೇಳಿ’ ಎಂಬ ಸೂಚನೆಯನ್ನು ಅವಳಿಗೆ ರವಾನಿಸಿದ. ಮತ್ತೊಮ್ಮೆ ಬಾಯ್ತೆಗೆಯಲು ತ್ರಾಣವಿಲ್ಲದ್ದರಿಂದಲೂ, ಅವಳಿಗೆ ದುರದೃಷ್ಟವಶಾತ್ ಹಿಂದಿ ಬಾರದಿದ್ದರಿಂದಲೂ ‘ಏನಿಲ್ಲ’ ಎಂಬಂತೆ ಕೈಯಾಡಿಸಿ ನಾಲಿಗೆಯ ಮೇಲೆ ಅಲ್ಲಲ್ಲಿ ಸ್ಫುರಿಸುತ್ತಿರುವ ಅಳಿದುಳಿದ ಎಂಜಲನ್ನೇ ನುಂಗುತ್ತಾ ನಿಧಾನವಾಗಿ ಉಚ್ವಾಸ-ನಿಶ್ವಾಸಗಳ ಪ್ರಕ್ರಿಯೆಯನ್ನು ಶುರುವಿಟ್ಟಳು.

ಸಂಜೆಯಾದ ತಕ್ಷಣ ಆಲ್ಪೈನ್ ಅಪಾರ್ಟುಮೆಂಟಿನ ಆವರಣಕ್ಕೆ ಜೀವ ಬರುತ್ತದೆ. ಚಪಾತಿ ಹಿಟ್ಟಿನ ಮುದ್ದೆಗಳಂತಿರುವ ಹೊಟ್ಟೆಯನ್ನು ಕರಗಿಸಲು ಓಡುವವರು, ಮಕ್ಕಳನ್ನು ವಾಕಿಂಗ್ ಕರೆದುಕೊಂಡು ಹೋಗುವವರು, ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವವರು, ಬೇರೆ ಬೇರೆ ಬ್ಲಾಕಿನ ಪ್ರೇಮಿಗಳು, ಇವಳಂತೆಯೇ ಮನೆಯ ಅಸಹನೀಯ ಮೌನದಿಂದ ಸ್ವಲ್ಪ ಹೊತ್ತಾದರೂ ಬಚಾವಾಗೋಣ ಎಂದು ನಿಧಾನಕ್ಕೆ ನಡೆಯುತ್ತಿರುವವರು, ಒಳಗೆ ಬರುವ ವಾಹನಗಳಿಗೆ ಪಾರ್ಕಿಂಗ್ ಜಾಗ ತೋರಿಸುವ ತಲೆಗೆ ಕ್ಯಾಪು ತೊಟ್ಟ ವಾಚ್ಮನ್ನುಗಳು ಹೀಗೆ ಅಲ್ಲೊಂದು ಜಾತ್ರೆಯೇ ಸೃಷ್ಟಿಯಾಗಿರುತ್ತದೆ. ಊರಿನಲ್ಲಿದ್ದ ಐವತ್ತು ವರ್ಷಗಳಲ್ಲಿ ಅದೆಷ್ಟೋ ಜಾತ್ರೆಗಳನ್ನು ಗಾಯತ್ರಿ ನೋಡಿದ್ದಾಳೆ. ಆದರೆ ಊರಿನ ಜಾತ್ರೆಗಳಲ್ಲಿ ಸಮನ್ವಯತೆ ಇರುತ್ತದೆ, ಒಂದು ಕುಟುಂಬದವರೇ ಸೇರಿ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎನ್ನುವ ಒಳಗೊಳ್ಳುವಿಕೆ ಇರುತ್ತದೆ, ಜನ ಜಾಸ್ತಿಯಾದಷ್ಟೂ ಉತ್ಸಾಹ ಹೆಚ್ಚಾಗುತ್ತದೆ. ಆದರೆ ಇಲ್ಲಿ ನೂರಾರು ಜನ ಒಂದೇ ಸಮಯಕ್ಕೆ ಒಂದೇ ದಾರಿಯಲ್ಲಿ ನಡೆಯುತ್ತಿದ್ದರೂ ಪ್ರತಿಯೊಬ್ಬರೂ ಪ್ರತ್ಯೇಕವೇ ಎನ್ನುವಂತಹ ಭಾವನೆಯಿದೆ. ಜನ ಸೇರಿದರೆ ಜಾತ್ರೆಯಲ್ಲ, ಮನಸ್ಸುಗಳು ಸೇರಿದರೆ ಜಾತ್ರೆಯಲ್ಲವೇ ಎಂಬಂತಹ ತಾತ್ವಿಕ ಪ್ರಶ್ನೆಗಳೆಲ್ಲಾ ಗಾಯತ್ರಿಗೆ ಬರುತ್ತದೆ. ಹಾಗಂತ ತಾನು ಪಕ್ಕದ ಮನೆಯ ಸುಚಿತ್ರಾ ಮೊನ್ನೆ ನಗು ಬೀರಿದಾಗ ಕನಿಷ್ಠ ಸೌಜನ್ಯಕ್ಕಾದರೂ ಯಾಕೆ ವಾಪಸ್ ನಗಲಿಲ್ಲ?. ‘ಬಿ’ ಬ್ಲಾಕಿನ ಸುಲೋಚನಾ “ನೀವು ವಾಕಿಂಗ್ ಹೋಗುವಾಗ ಕರೀರೀ” ಎಂದು ಹೇಳಿದ್ದರೂ ಬೇಕೆಂದೇ ಅವರ ಫೋನನ್ನೂ ಎತ್ತದೇ ಯಾಕೆ ತಪ್ಪಿಸಿಕೊಳ್ಳುತ್ತಿದ್ದೇನೆ?. ಮೊನ್ನೆ ನಮ್ಮ ಬ್ಲಾಕಿನ ನಮ್ಮ ಫ್ಲೋರಿನ ಆರು ಮನೆಯವರು ಮಾತ್ರ ಗೆಟ್ ಟುಗೆದರ್ ಮಾಡುವಾಗ “ಅಜ್ಜಿ ಪಕ್ಕ ನಿಂತ್ಕೋ ಹೋಗು” ಎಂದಾಗ ಅದ್ವೈತ ಎಲ್ಲರೆದುರೇ “ಅಜ್ಜೀನ ಕಂಡ್ರೆ ನಂಗಿಷ್ಟ ಇಲ್ಲ” ಎಂದು ಹೇಳಿಬಿಟ್ಟನಲ್ಲ!. ಅದನ್ನು ಕೇಳಿದಾಗ ನನಗೆ ಒಂದು ರೀತಿಯ ಖುಷಿಯಾಗಿದ್ದು ಯಾಕೆ?!. ಇನ್ನಾದರೂ ನನಗೆ ಆತುಕೊಳ್ಳುವವರು ಯಾರೂ ಇಲ್ಲ ಎಂದೆನ್ನಿಸಿ ಒಂದು ರೀತಿ ಹಗುರ ಹಗುರವೆನಿಸಿದ್ದು ಸುಳ್ಳಲ್ಲ ಅಲ್ಲವೇ?

“ಪಾನೀ ಚಾಹಿಯೇ ಮೇಡಂ ಜೀ?” ಎಂದು ಮ್ಯಾನೆಕ್ಸ್ ಶರ್ಟಿನ ಪರಭಾಷೆಯ ಕೆಲಸಗಾರ ಕೈಯಲ್ಲಿ ನೀರು ತುಂಬಿದ ಹಳೇ ಫಾಂಟಾ ಬಾಟಲಿ ಹಿಡಿದುಕೊಂಡು ಕೇಳಿದ. “ಬೇಡ” ಎಂದು ನಿಷ್ಠುರ ಸ್ವರದಲ್ಲಿ ನುಡಿದ ಗಾಯತ್ರಿ ಎದ್ದು ನಿಂತಳು. ಕೆಲ ಹೊತ್ತಿನ ಮುಂಚೆ ಅದೇ ನೀರಿಗೆ ತವಕಿಸುತ್ತಿದ್ದ ನಾನು ಇದ್ದಕ್ಕಿದ್ದಂತೆ ಈಗ ಬೇಡ ಎಂದಿದ್ದು ಏಕೆ?. ನಿಜವಾಗಿಯೂ ಬಾಯಾರಿಕೆ ಕಡಿಮೆಯಾಯಿತಾ, ಅಥವಾ ಅವನ ತೊಳೆಯದ ಹಳೇ ಫಾಂಟಾ ಬಾಟಲಿಯನ್ನು ನೋಡಿ ಇದ್ದಕ್ಕಿದ್ದಂತೆ ನಮ್ಮಿಬ್ಬರ ಮಧ್ಯೆ ಇರುವ ಸಾಮಾಜಿಕ ಅಂತರ ನೆನಪಾಯಿತಾ??. ನಾಳೆ ಈ ಮ್ಯಾನೆಕ್ಸ್ ಕೆಲಸಗಾರನೂ ನನ್ನನ್ನು ತೋರಿಸಿ “ಆ ಅಜ್ಜೀನ ಕಂಡ್ರೆ ನಂಗಿಷ್ಟ ಇಲ್ಲ” ಎನ್ನುತ್ತಾನೇನೋ ಅಲ್ಲವಾ ಎಂದು ಗಾಯತ್ರಿಗೆ ಅನ್ನಿಸಿತು. ನಾನು ಅಷ್ಟೊಂದು ಅಸಹನೀಯ ವ್ಯಕ್ತಿಯಾ??. ಈ ದರಿದ್ರ ಯೋಚನೆಗಳು ನಿಲ್ಲಬೇಕೆಂದರೆ ಮತ್ತೆ ನಡೆಯಬೇಕು. ಏದುಸಿರು ಹತೋಟಿಗೆ ಬಂದಿತ್ತು, ಎದೆ ಸ್ವಲ್ಪ ಹಗುರವಾಗಿತ್ತು. ಮೂರನೇ ಸುತ್ತನ್ನು ಮುಂದುವರಿಸಲು ಶುರುವಿಟ್ಟಳು.

‘ಹೆಚ್’ ಬ್ಲಾಕಿನ ಬಳಿ ಬಂದಾಗಲೊಮ್ಮೆ ತಲೆಯೆತ್ತಿ ಆರನೇ ಫ್ಲೋರಿನ ಕಡೆಗೆ ನೋಡಿದಳು. ಬಾಗಿಲಿನ ಕೀ ಹೋಲಿನ ಸಮಸ್ಯೆಯನ್ನು ಅನಂತ ಸರಿ ಮಾಡಿಸಿದ್ದರೆ ತಾನು ಜಗಳ ಮಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ ಎಂದು ಇದ್ದಕ್ಕಿದ್ದಂತೆ ಗಾಯತ್ರಿಗೆ ಸಿಟ್ಟು ಬಂತು. ಈ ಅದ್ವೈತನನ್ನು ಹತೋಟಿಯಲ್ಲಿಡಲು ಅನಂತನಿಗೆ, ಅವನ ಹೆಂಡತಿಗೆ ಇಬ್ಬರಿಗೂ ಬರುವುದಿಲ್ಲ. ಈಗಿನವರು ಸುಮ್ಮನೇ ಮದುವೆಯಾಗಿಬಿಡುತ್ತಾರೆ, ಆದರೆ ಅಪ್ಪ-ಅಮ್ಮ ಆಗಲು ಬೇಕಾದ ಗುಣಗಳೂ ಅವರಲ್ಲಿ ಮೂಡುವುದಿಲ್ಲ. ಇವರು ಮಲಗಿದ್ದಾಗ ಅನಂತ ಜೋರಾಗಿ ಕಿಟಾರೆಂದು ಕಿರುಚಿದನೆಂಬ ಕಾರಣಕ್ಕೆ ಇವರು ಇಡೀ ಬೀದಿ ಅಟ್ಟಾಡಿಸಿಕೊಂಡು ಅವನಿಗೆ ಹೊಡೆದಿರಲಿಲ್ಲವೇ?. ಅದಾದ ಮೇಲೆ ಅಪ್ಪನೆದುರು ಉಸಿರೆತ್ತುವುದಕ್ಕೆ ಮುನ್ನ ಅನಂತ ಯೋಚಿಸಲು ಶುರು ಮಾಡಲಿಲ್ಲವೇ?. ತನ್ನ ಕೀಟಲೆಗೆ ಬಾಗಿಲನ್ನು ಧಬಾರೆಂದು ಬಡಿದು ಕೀ ಹೋಲಿನ ಲೆನ್ಸು ಹಾರಿ ಹೊರಗೆ ಬಿದ್ದಾಗ ಅದ್ವೈತನಿಗೆ ಸರಿಯಾಗಿ ಬಾರಿಸುವುದು ಬಿಟ್ಟು ಈ ಅನಂತ ಮತ್ತವನ ಹೆಂಡತಿ ನೀತಿ ಪಾಠ ಮಾಡುತ್ತಾರೆ!. ಕೊನೆಯ ಪಕ್ಷ ತನ್ನ ತಂದೆ-ತಾಯಿ ತನ್ನ ಮೇಲೆ ಹಾಕಿದ ಸಿಟ್ಟನ್ನು ತನ್ನ ಮಗನ ಮೇಲೆ ರವಾನಿಸಬೇಕು ಎಂದೂ ಅನಂತನಿಗೆ ಅನ್ನಿಸುವುದಿಲ್ಲವೇ? ಇದೆಂಥಾ ಪೀಳಿಗೆ?! ವಾಕಿಂಗಿಗೆ ಹೊರಗೆ ಹೋಗುವ ಮುನ್ನ ಒಮ್ಮೆ ಕೀಹೋಲಿನಲ್ಲಿ ನೋಡುವುದು ವಾಡಿಕೆ. ಅದೇ ಸಮಯಕ್ಕೆ ಎದುರು ಮನೆಯವರು ಯಾರಾದರೂ ಬಾಗಿಲು ತೆರೆದು ಹೊರಗೆ ಬರುತ್ತಿದ್ದರೆ, ಕಾರಿಡಾರಿನಲ್ಲಿ ಯಾರಾದರೂ ಮಾತನಾಡುತ್ತಾ ನಿಂತಿದ್ದರೆ ತಾನು ಹೊರಗೆ ಬರುವುದೇ ಇಲ್ಲ. ಅವರೆಲ್ಲರೂ ಜಾಗ ಖಾಲಿ ಮಾಡಿ ಅಂತರ್ಧಾನವಾದ ಮೇಲೆಯೇ ನೆಮ್ಮದಿಯಿಂದ ಕಾಲು ಹೊರಗೆ ಇಡುವುದು. ಆ ಅಭ್ಯಾಸಬಲದಿಂದ ಹೋದ ವಾರ ತಾನು ನೋಡಿರದಿದ್ದರೆ ಕೀ ಹೋಲಿನ ಲೆನ್ಸು ಬಿದ್ದುಹೋಗಿರುವುದು ಈ ಜಡ್ಡು ಹಿಡಿದ ಮಂಡೆಗಳಿಗೆ ಗೊತ್ತೂ ಆಗಿರುತ್ತಿರಲಿಲ್ಲ. ಆಮೇಲೆ ತಾನೇ ಎಂದಿನಂತೆ ದೊಡ್ಡ ಕಣ್ಣು ಬಿಟ್ಟು ಅದ್ವೈತನಿಗೆ ಹೆದರಿಸಿ ಬಾಯಿ ಬಿಡಿಸಬೇಕಾಯಿತು. ಹೋಗಲಿ, ಇತ್ತೀಚೆಗೆ ಇಡೀ ಅಪಾರ್ಟುಮೆಂಟಿನ ಟ್ರಾನ್ಸ್‍ಫಾರ್ಮರೇ ಹಾಳಾಗಿತ್ತು, ಎರಡು ಘಂಟೆಯೊಳಗೆ ಅದನ್ನೇ ಸರಿ ಮಾಡಿಸಿದ್ದಾರೆ, ಅಂಥಾದ್ದರಲ್ಲಿ ಈ ಜುಜುಬಿ ಕೀ ಹೋಲ್ ಸರಿ ಮಾಡಿಸಲಿಕ್ಕೆ ಈ ಅನಂತನಿಗೆ ಏನು ರೋಗ?. “ಅವ್ರದ್ದು ಟೆನ್ ಟು ಫೈವ್ ವರ್ಕಿಂಗ್ ಅವರ್ಸ್, ನಾವಿಬ್ರೂ ಆಫೀಸಲ್ಲಿರ್ತೀವಮ್ಮ, ನಿಂಗೆ ಯುಟಿಲಿಟೀಸ್ ನಂಬರ್ ಗೊತ್ತಲ್ಲ, ವೀಕ್ ಡೇಸ್ ಹತ್ ಘಂಟೆ ಮೇಲೆ ಫೋನ್ ಮಾಡಿ ಕರೆಸ್ಕೋ” ಅಂತಾನೆ. “ಶಾಲೆಯಿಂದ ಬಂದು ಸುಸ್ತಾಗಿದೆ, ವೀಳ್ಯದೆಲೆ ಕಟ್ಟುವುದಿಲ್ಲ” ಎಂದು ನಾನು ಯಾವತ್ತಾದರೂ ಅಪ್ಪಯ್ಯನಿಗೆ ತಿರುಗಿ ಹೇಳಿದ್ದೆನಾ?. ಇದು ಅವನ ಮನೆಯ ಕೆಲಸ, ಅವನೇ ಮಾಡಿಸಬೇಕು ತಾನೇ?. ಹೊರಗೆ ನಿಂತು ಯಾರೇ ಆ ಖಾಲಿ ಕಿಂಡಿಗೆ ಕಣ್ಣು ಕೊಟ್ಟು ಇಣುಕಿದರೆ ನಮ್ಮ ಮನೆಯ ಇಡೀ ಹಜಾರ ದೃಷ್ಟಿಗೆ ದಕ್ಕುತ್ತದೆ. ಎಂಥಾ ಬೆತ್ತಲಾದ ಅನುಭವ ಇದು!. “ನೋಡ್ಕೊಂಡ್ರೆ ನೋಡ್ಕೊಳ್ಲಿ, ಅಂಥಾದ್ದೇನಿದೆ ನಮ್ಮನೇಲಿ” ಎನ್ನುವ ದಾಷ್ಟ್ರ್ಯದ ಉತ್ತರ ಬೇರೆ!. ಅದೇ ಕಾರಣಕ್ಕೆ ಅಲ್ಲವೇ ಇವತ್ತು ನಾನು ಕಿರುಚಾಡಿ ರಂಪ ಮಾಡಿದ್ದು?. ಅದರಿಂದಲೇ ಸುಸ್ತಾಗಿದ್ದು. ಒಂದಷ್ಟು ಶಕ್ತಿ ಅಲ್ಲಿ ವ್ಯಯವಾಗಿದ್ದಕ್ಕೇ ಈಗ ಇಲ್ಲಿ ಮೂರನೇ ಸುತ್ತಿಗೇ ಏದುಸಿರು ಬಂದಿದ್ದು…

ಅಪಾರ್ಟುಮೆಂಟಿನ ಮಧ್ಯಭಾಗವಾದ ರಿಲಾಯನ್ಸ್ ಮಾರ್ಟನ್ನು ತಲುಪಿ ನಾಲ್ಕನೇ ಸುತ್ತು ಶುರುವಾಗುವಷ್ಟರಲ್ಲಿ ಗಾಯತ್ರಿಗೆ ಬೇಡದ ವಿಷಯ ಎಷ್ಟು ತಡೆದುಕೊಂಡರೂ ತಲೆಗೆ ಬಂದೇಬಿಟ್ಟಿತು. ಹೌದು, ಇವರೂ ಅವತ್ತು ನನ್ನೊಂದಿಗೆ ಜಗಳ ಮಾಡಿದ್ದರು!. ನನಗೆ ಊರಿನ ಜೀವನ ಸಾಕಾಗಿತ್ತು, ಅವರಿಗೆ ಇನ್ನೂ ಬೇಕಾಗಿತ್ತು. ಅರವತ್ತು ವರ್ಷದವರೆಗೆ ಕಛೇರಿಯ ಕೆಲಸದಲ್ಲೇ ಮುಳುಗಿಹೋಗಿ ನಿವೃತ್ತರಾದ ತಕ್ಷಣ ಅವರಿಗೆ ಊರು ಸ್ವರ್ಗವಾಗಿ ಕಾಣಿಸಲು ಶುರುವಾಗಿತ್ತು. ನನಗೋ, ಅದೇ ಗುಡ್ಡ, ಅದೇ ಹಸಿರು, ಅದೇ ಕೆರೆ, ಅದೇ ಜನರನ್ನು ನೋಡೀ ನೋಡೀ ವಾಕರಿಕೆ ಬಂದಿತ್ತು. ಅದನ್ನು ಅವರಿಗೆ ಹೇಗೆ ಅರ್ಥ ಮಾಡಿಸುವುದು?. ಅದು ಅತ್ತಲಾಗಿರಲಿ, ನಾನು ಮನೆಗೆ ಬಂದು ಸಂಸಾರಕ್ಕೆ ಹೊಂದಿಕೊಳ್ಳುವ ಮುನ್ನವೇ ಅತ್ತೆ-ಮಾವನ ಸೇವೆ ಶುರು ಮಾಡಬೇಕಾದ ಅನಿವಾರ್ಯವಿತ್ತು. ಅದೇ ಅಲ್ಲಿ ಅದ್ವೈತ ಹುಟ್ಟಿ ಎರಡು ವರ್ಷವಾದರೂ ಇವರಿಬ್ಬರೂ ಆರಾಮವಾಗಿದ್ದಾರಲ್ಲಾ, ಆ ವಿಷಯಕ್ಕಾದರೂ ಇವರು ಬೆಂಗಳೂರಿಗೆ ಬರಲು ಗೋಣು ಅಲ್ಲಾಡಿಸಬೇಕಿತ್ತು ತಾನೇ?. ಆಯಿತು, ಇದೇ ಥರ ಜೋರಾದ ಜಗಳವೇ ಆಯಿತು. ಕಿರುಚಾಡಿ ರಂಪ ಮಾಡಿದರು. ಸುಸ್ತಾದರು. ಕೆರೆ ಏರಿಯತ್ತ ಹೋಗಿ ಬರುತ್ತೇನೆ ಎಂದು ಧುಮುಗುಟ್ಟಿಕೊಂಡು ಹೊರಟರು. ಅವರಿಗೂ ಹೀಗೆಯೇ ಏದುಸಿರು ಬಂದು ಕಾಲು ಸೋತಿತ್ತೇ?, ಅವರಿಗೂ ಹೀಗೆಯೇ ಎದೆ ಹಿಡಿದುಕೊಂಡಿತ್ತೇ?, ಹಾಗಾದರೆ ಅವರ ಹೃದಯಾಘಾತಕ್ಕೂ ನಾನೇ ಕಾರಣಳಾ?… ಹಾಗಾದರೆ ಈಗ ನನಗೂ ಹೃದಯಾಘಾತವಾಗಿ ಸತ್ತರೆ ಅದರ ಪಾಪ ಅನಂತನ ಮೇಲೆ ಬರುತ್ತದೆ ಎಂದಾದರೆ ನಾನು ಖುಷಿಯಿಂದ ಸತ್ತುಬಿಡುತ್ತೇನಾ?… ‘ಡಿ’ ಬ್ಲಾಕಿನಿಂದ ಮುಂದೆ ಜಿಮ್ಮಿನ ಪಕ್ಕ ಕಲ್ಟ್ ಫಿಟ್ ನವರ ಇನ್-ಹೌಸ್ ಶಾಖೆಯಿಂದ ‘ನಗಾಡೇ ಸಂಗ್ ಢೋಲ್ ಬಾಜೇ’ ಎಂಬ ಹಾಡು ಆಪದ್ಬಾಂಧವನಂತೆ ಕೇಳಿ ಬಂದು ಗಾಯತ್ರಿಯ ಲಹರಿಯನ್ನು ಬೇರೆಡೆಗೆ ಒಯ್ಯದಿದ್ದರೆ ಅಲ್ಲೇ ಕುಸಿಯುತ್ತಿದ್ದಳೇನೋ.

ತೂಕ ಕರಗಬೇಕು, ಜೊತೆಯಲ್ಲಿಯೇ ಬೇಸರವೂ ಕಳೆಯಬೇಕೆಂದರೆ ಈ ಕಲ್ಟ್ ಫಿಟ್ ಸರಿಯಾದ ಜಾಗ. ಒಂದಷ್ಟು ಹಿಂದಿ, ಇಂಗ್ಲಿಷ್, ಕನ್ನಡದ ಜಿಂಗ್‍ಚಾಕ್ ಹಾಡುಗಳು, ಅದಕ್ಕೆ ಕಾಲಿನ ಮಣಿಗಂಟು ನೋವಿರುವವರೂ ಕುಣಿಯಬಹುದಾದ ಸುಲಭವಾದ ನೃತ್ಯದ ಹೆಜ್ಜೆಗಳು. “ಗಯ್ಸ್, ಟುಡೇಸ್ ಸ್ಪೆಷಲ್ ಇಸ್ ಪಾಪ್ ಕಾರ್ಡಿಯೋ ಎಕ್ಸರ್ಸೈಸ್, ಇದು ಹಾರ್ಟ್‍ನ ಹೆಲ್ದಿ ಆಗಿಡೋಕೆ ತುಂಬಾ ಇಂಪಾರ್ಟೆಂಟ್ ಎಕ್ಸರ್ಸೈಸ್, ಇದ್ರಲ್ಲಿ ಮೈನ್ಲಿ ಹಿಪ್ ಸ್ವಿಂಗ್ ಮತ್ತು ಸ್ಕ್ವಾಟ್ಸ್ ಇರುತ್ತೆ, ಯೆಸ್, ಕಮಾನ್, ಗೆಟ್ ರೆಡಿ, ಮ್ಯೂಸಿಕ್” ಎಂದು ತೆಳ್ಳನೆಯ ನಡುವಿನ ತರಬೇತುದಾರಿಣಿ ನೃತ್ಯ ಮಾಡಲು ಶುರು ಮಾಡಿದಳು. “ರೈನ್ ಓವರ್ ಮೀ…” ಎಂಬ ಇಂಗ್ಲಿಷ್ ಹಾಡಿನ ಫಲುಕುಗಳಿಗೆ ಸರಿಯಾಗಿ ನಿಂತಲ್ಲೇ ಮೇಲಿಂದ ನೀರು ಸುರಿಯುತ್ತಿರುವ ಭಂಗಿಯಲ್ಲಿ ಕೈಗಳನ್ನು ಆಡಿಸಿ, ಚನ್ನಪಟ್ಟಣದ ಬೊಂಬೆಯಂತೆ ಅತ್ತಿತ್ತ ಸೊಂಟ ತಿರುಗಿಸಿ ಒಮ್ಮೆ ಬಸ್ಕಿ ಹೊಡೆದು ಸಣ್ಣದಾಗಿ ಜಿಗಿದಳು. ಅದನ್ನು ಹಿಂಬಾಲಿಸುವಂತೆ ಅಲ್ಲಿದ್ದ ಅಪಾರ್ಟುಮೆಂಟಿನ ಎಲ್ಲಾ ಹರೆಯದವರನ್ನೂ ಒಳಗೊಂಡ ಉತ್ಸಾಹಿ ಗುಂಪಿಗೆ ಆಜ್ಞೆ ಮಾಡಿದಳು. ಹಾಡಿನ ಓಘಕ್ಕೂ, ಕೈಕಾಲು ಸೊಂಟಗಳ ತಾಳಮೇಳಕ್ಕೂ ಸಂಬಂಧವೇ ಇಲ್ಲದಂತೆ, ಕೋಗಿಲೆಯನ್ನು ಅನುಕರಿಸಲು ವಿಫಲವಾದ ಕಾಗೆಗಳಂತೆ, ಇಡೀ ತರಗತಿಗೇ ಅವಮಾನವಾಗುವಂತೆ ಕೆಟ್ಟಕೆಟ್ಟದಾಗಿ ಎಲ್ಲರೂ ಕುಣಿದು ಒಂದು ಅಸಂಬದ್ಧ ದೃಶ್ಯ ಸೃಷ್ಟಿಯಾದದ್ದನ್ನು ನೋಡಿ ಗಾಯತ್ರಿ ಕುಹಕವಾಗಿ ನಕ್ಕಳು. ತಾನು ಅಲ್ಲಿದ್ದಿದ್ದರೆ ಆ ತೆಳ್ಳಗಿನ ಸೊಂಟದ ಬೊಂಬೆಯೇ ಬೆದರಿ ಬೆಚ್ಚುವಂತೆ ನೃತ್ಯ ಮಾಡಿ ತೋರಿಸುತ್ತಿದ್ದೆ ಎಂದು ಅಂದುಕೊಂಡಳು. ತಾನು ಭರತನಾಟ್ಯ ಮಾಡುತ್ತಿದ್ದುದು ಮದುವೆಗೂ ಮುನ್ನ ಅದೆಲ್ಲೋ ನಾಲ್ಕು ದಶಕಗಳ ಮೊದಲು, ಆ ಕಸುವು ಇನ್ನೂ ತನ್ನಲ್ಲಿ ಉಳಿದಿದೆಯಾ ಎಂದು ಅವಳಲ್ಲಿಯೇ ಒಮ್ಮೆ ಪ್ರಶ್ನೆ ಮೂಡಿತು. ಅದಕ್ಕೆ ಉತ್ತರ ಕಟುವಾಗಿರುತ್ತಿತ್ತೇನೋ, ಅಷ್ಟರಲ್ಲಿ ‘ಇ’ ಬ್ಲಾಕಿನ ಗ್ರೌಂಡ್ ಫ್ಲೋರಿನ ಮನೆಯೆದುರು ಭೂತದ ಮಾಸ್ಕ್ ಹಾಕಿರುವ ಅದ್ವೈತ ಮನೆಯೊಡತಿಗೆ “ಟ್ರಿಕ್ ಆರ್ ಟ್ರೀಟ್?” ಎಂದು ಕೇಳುತ್ತಿರುವುದೂ, ಆ ಮನೆಯೊಡತಿ “ಎರ್ಡೂ ಕೊಡ್ದೇ ಇದ್ರೆ?” ಎಂದು ಕೇಳಿದ್ದೂ, ಅದಕ್ಕೆ ಅದ್ವೈತ “ದೆನ್ ಐ ವಿಲ್ ಕಿಲ್ ಯೂ” ಎಂದು ಹೇಳಿದ್ದೂ, ಅದಕ್ಕೆ ಮನೆಯೊಡತಿ “ನೋ ದಿಸ್ ಕ್ಯೂಟ್ ಡೆಮನ್ ಕಾಂಟ್ ಕಿಲ್ ಮಿ” ಎಂದು ಅವನನ್ನು ಮುದ್ದಿಸಿ ಒಳಗಿನಿಂದ ಚಾಕ್ಲೆಟ್ ತಂದುಕೊಟ್ಟಿದ್ದೂ ಕಾಣಿಸಿತು. ಅವರೆಲ್ಲಾದರೂ ನನ್ನ ಕಡೆ ನೋಡಿ “ಸೀ ದೇರ್, ಯುವರ್ ಗ್ರಾಂಡ್‍ಮದರ್” ಎಂದು ತೋರಿಸಿದರೆ ಒಂದು ಹುಸಿ ನಗು ಬೀರಬೇಕಲ್ಲಾ ಎಂದು ಅರಿವಾಗಿ, ಮುದ್ದಿಸುವಂತದ್ದು ಆ ಮರಿಪಿಶಾಚಿಯಲ್ಲಿ ಏನಿದೆ ಎಂದು ತಾಳೆಹಾಕುತ್ತಾ ಗಾಯತ್ರಿ ಮುಂದೆ ನಡೆದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಚೆಕ್‍ಔಟ್‌

ಅಕ್ಟೋಬರ್ ತಿಂಗಳು ಬಂದ ತಕ್ಷಣ ಗಾಯತ್ರಿ ಒಂದೈವತ್ತು ಮಿಲ್ಕಿ ಬಾರ್ ಚಾಕಲೇಟುಗಳನ್ನು ತಂದು ಫ್ರಿಜ್ಜಿನಲ್ಲಿ ಇಟ್ಟುಬಿಡುತ್ತಾಳೆ. ಅದ್ಯಾವ ವಿಚಿತ್ರ ಪರದೇಶಿ ಸಂಸ್ಕೃತಿಯೋ, ಇವಳಿಗೆ ರ‍್ಥವಾಗುವುದಿಲ್ಲ. ಮುಖಕ್ಕೆ ವಿಚಿತ್ರವಾದ ಮುಖವಾಡ ಧರಿಸಿ ಭೂತದ ಅವತಾರ ಧರಿಸಿದ ಮಕ್ಕಳು ಮನೆಮನೆಗೆ ಹೋಗುವುದಂತೆ, ಅಲ್ಲಿ ‘ಟ್ರಿಕ್ ಆರ್ ಟ್ರೀಟ್’ ಎಂದು ಕೇಳುವುದಂತೆ. ಎರಡರಲ್ಲಿ ಒಂದನ್ನು ಕೊಡಲೇಬೇಕು, ಇಲ್ಲದಿದ್ದರೆ ಆ ಭೂತ ನಿಮ್ಮನ್ನು ಕೊಲ್ಲುತ್ತದೆ!. ಟ್ರಿಕ್ ಎಂದರೆ ಏನಾದರೂ ಕೈಚಳಕ, ಮ್ಯಾಜಿಕ್ ಅಥವಾ ರ‍್ಕಸ್ ಮಾಡಿ ಆ ಭೂತವನ್ನು ಖುಷಿಪಡಿಸಬೇಕು. ಅಷ್ಟು ಪ್ರತಿಭೆ ಇಲ್ಲದಿದ್ದರೆ ಮುಚ್ಚಿಕೊಂಡು ಏನಾದರೂ ‘ಟ್ರೀಟ್’ ಅಂದರೆ ತಿಂಡಿಯನ್ನು ಕೊಡಬೇಕು. ಬಾಗಿಲು ಬಡಿದು ಭಿಕ್ಷೆ ಬೇಡುವುದು ಇದ್ಯಾವ ಸುಡುಗಾಡು ಹಬ್ಬ?!. ನಮ್ಮ ಸಂಸ್ಕೃತಿಯಲ್ಲಿ ಬೇಡುವ ಪದ್ಧತಿಯಿಲ್ಲ, ಕೊಡುವ ಪದ್ಧತಿ. ಸಂಕ್ರಾಂತಿಗೆ ಎಳ್ಳು ಬೀರಲು ಹೋಗುತ್ತೇವೆ, ಬೇಡಲು ಹೋಗುವುದಿಲ್ಲ. ನನಗೆ ಇಷ್ಟವಿಲ್ಲ ಎಂದರೆ ಮಕ್ಕಳು ಬಿಡಬೇಕಲ್ಲ. ಅದಕ್ಕೇ ಮಿಲ್ಕಿ ಬಾರ್ ದಾಸ್ತಾನು. ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ಒಬ್ಬಳೇ ಇರುವಾಗ ಬಾಗಿಲು ಸದ್ದಾದರೆ ಕೈಯಲ್ಲಿ ಒಂದು ಮಿಲ್ಕಿ ಬಾರ್ ಹಿಡಿದುಕೊಂಡೇ ಗಾಯತ್ರಿ ಬಾಗಿಲು ತೆರೆಯುವುದು. ಹೊರಗೆ ನಿಂತ ಮಕ್ಕಳು ಬಾಗಿಲು ತೆರೆದ ರಭಸಕ್ಕೆ ಅವಾಕ್ಕಾದವರು ಸುಧಾರಿಸಿಕೊಂಡು ‘ಟ್ರಿಕ್ ಆರ್ ಟ್ರೀಟ್’ ಎಂದು ಹೇಳಲು ಬಾಯಿ ತೆರೆಯುವ ಮುನ್ನವೇ ಅವರ ಕೈಯಲ್ಲಿ ಚಾಕ್ಲೆಟ್ ತುರುಕಿ ರಪ್ಪೆಂದು ಬಾಗಿಲು ಹಾಕಿಕೊಳ್ಳುವುದು ಗಾಯತ್ರಿಗೆ ಅಭ್ಯಾಸವಾಗಿಬಿಟ್ಟಿದೆ. ಸುಖಾಸುಮ್ಮನೇ ಮುದ್ದು ಮಾಡದೇ ತನ್ನಂತೆಯೇ ಎಲ್ಲರೂ ನಿಕೃಷ್ಟವಾಗಿ ನಡೆದುಕೊಂಡರೆ ಮಕ್ಕಳೂ ಇಂತಹಾ ತಗಡು ತಾಪತ್ರಯಗಳನ್ನೆಲ್ಲಾ ನಿಲ್ಲಿಸುತ್ತಾರೆ, ಯಾರಿಗೂ ಬುದ್ಧಿಯಿಲ್ಲ ಎಂದು ಯೋಚಿಸುತ್ತಾ ಗಾಯತ್ರಿ ಮುಂದೆ ಬರುವುದಕ್ಕೂ, ‘ಜಿ’ ಬ್ಲಾಕಿನಿಂದ ವರದರಾಜ್ ಹೊರಗೆ ಬರುವುದಕ್ಕೂ ಸರಿ ಹೋಯಿತು.

ವರದರಾಜ್ ನಿವೃತ್ತ ಬ್ಯಾಂಕ್ ಮ್ಯಾನೇಜರು. ಅವರೂ ಇವರಂತೆಯೇ ಅಟೆಂಡರ್ ಆಗಿಯೇ ಕೆಲಸ ಶುರು ಮಾಡಿದವರಂತೆ. ಇವರು ಮಾತ್ರ ನಿವೃತ್ತರಾಗುವಾಗ ಇನ್ನೂ ಕ್ಲರ್ಕ್ ಆಗಿಯೇ ಇದ್ದರು. ಒಂದೇ ಮೈದಾನವಾದರೂ ಆಟಗಾರರ ತಾಕತ್ತಿನ ಆಧಾರದ ಮೇಲೆ ಫಲಿತಾಂಶ ಬೇರೆಯಾಗುತ್ತದೆ. ಇವರಂತೆ ವರದರಾಜ್ ಲುಂಗಿ ಉಟ್ಟುಕೊಂಡು ಹೊರಗೆ ಬರುವುದಿಲ್ಲ. ವಾಕಿಂಗ್ ಬರುವಾಗಲೂ ಫುಲ್ ಕೈ ಶರ್ಟು ಧರಿಸಿ, ಶಿಸ್ತಾಗಿ ಫಾರ್ಮಲ್ ಪ್ಯಾಂಟು ಹಾಕಿಕೊಂಡು ಬ್ಯಾಂಕ್ ಕೆಲಸಕ್ಕೆ ಹೊರಟವರಂತೆಯೇ ಹೊರಗೆ ಬರುತ್ತಾರೆ. ತಾನು ಎಷ್ಟು ಪ್ರಯತ್ನ ಪಟ್ಟರೂ ಇವರಿಗೆ ಕೊನೆಯವರೆಗೂ ಈ ಶಿಸ್ತನ್ನು ಕಲಿಸಲಾಗಲಿಲ್ಲವಲ್ಲಾ. ಪ್ರತಿದಿನವೂ ವಾಕಿಂಗ್ ಹೋಗುವಾಗ ವರದರಾಜರನ್ನು ನೋಡುತ್ತೇನೆ. ಪ್ರತಿದಿನವೂ ಅದೇ ಗಾಂಭೀರ್ಯ. ಅವರು ಮುಂದೆ ಕಾಣಿಸಿದರೆ ಸಾಕು, ನನ್ನ ನಡಿಗೆಯ ಗತಿ ಮಂದವಾಗಿಬಿಡುತ್ತಿತ್ತು. ಶೂ ಹಾಕಿ ಟಾಕ್ ಟಾಕ್ ಎಂದು ನಡೆಯುವ ಆ ಹೆಜ್ಜೆಗಳಲ್ಲೂ ಎಂತಹಾ ಗತ್ತು, ಎಂತಹಾ ಸಮ್ಮೇಳ. ಇವರೂ ಇದ್ದರು, ಕೊನೆಯವರೆಗೂ ಹವಾಯ್ ಚಪ್ಪಲಿಯನ್ನು ಬಿಡಲಿಲ್ಲ. ಇವರು ಬದುಕಿದ್ದಾಗಲೇ ವರದರಾಜ್ ಕಂಡಿದ್ದಿದ್ದರೆ ಹೀಗೆಯೇ ತಾಳೆ ಹಾಕಿ ನೋಡುತ್ತಿದ್ದೆನೇ?. ಹಾಗಾದರೆ ಒಂದು ಲೆಕ್ಕದಲ್ಲಿ ಇವರ ಬದಲು ವರದರಾಜರೇ ನನಗೆ ಪತಿಯಾಗಿ ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವ ಆಲೋಚನೆ ನನ್ನ ಮನದಲ್ಲಿ ನನಗೇ ಗೊತ್ತಿಲ್ಲದಂತೆ ಮೂಡುತ್ತಿದೆಯೇ?. ಹಾಗೆ ಮೂಡಿದರೆ ಅದರಲ್ಲೇನು ತಪ್ಪು?. ಇಷ್ಟು ದಿನದಲ್ಲಿ ಒಮ್ಮೆಯೂ ವರದರಾಜರನ್ನು ಮಾತನಾಡಿಸಿಲ್ಲ, ಇಂದು ನಾನು ಐದು ಸುತ್ತು ಮುಗಿಸುವವರೆಗೂ ಜೀವಂತವಾಗಿರುತ್ತೇನೆ ಎಂಬ ನಂಬಿಕೆಯೇ ಯಾಕೋ ಬರುತ್ತಿಲ್ಲ, ಇವತ್ತು ಬಿಟ್ಟರೆ ಸಿಗುವುದಿಲ್ಲ, ಹೋಗಿ ಮಾತನಾಡಿಸಿಯೇಬಿಡುತ್ತೇನೆ ಎಂಬ ತಾಕಲಾಟದಲ್ಲಿ ಗಾಯತ್ರಿ ದಾಪುಗಾಲು ಹಾಕಿಕೊಂಡು ಮುಂದೆ ಹೋದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ

ನಡೆಯುತ್ತಾ ನಡೆಯುತ್ತಾ ವರದರಾಜರ ಪಕ್ಕಕ್ಕೇ ಬಂದಳು. ತಮ್ಮ ಪಕ್ಕದಲ್ಲಿ ಇನ್ನೊಂದು ಮನುಷ್ಯಾಕೃತಿ ಬಂದದ್ದರ ಅರಿವಾಗಿ ವರದರಾಜರು ಒಮ್ಮೆ ತಲೆಯನ್ನು ಅತ್ತ ತಿರುಗಿಸಿದರು. “ಹಾಯ್, ನಾನು ಗಾಯತ್ರಿ, ಹೆಚ್ ಬ್ಲಾಕ್ 604” ಎಂದು ಶೇಕ್ ಹ್ಯಾಂಡ್ ಕೊಡುವಂತೆ ಕೈಯನ್ನು ಮುಂದೆ ಮಾಡಿದಳು. ವರದರಾಜ್ ಒಮ್ಮೆ ಅವಳತ್ತ ನೋಡಿ ‘ಆಯ್ತು’ ಎಂಬಂತೆ ತಲೆಯಾಡಿಸಿ, ಶೇಕ್ ಹ್ಯಾಂಡ್ ಕೊಡದೇ ಗಂಭೀರವಾಗಿ ಮುಂದೆ ನಡೆದರು. ಒಮ್ಮೆಗೇ ಗಾಯತ್ರಿಗೆ ಇಡೀ ದೇಹವೇ ಸಂತುಲನ ತಪ್ಪಿದಂತಾಯಿತು. ಕೆಳಗಿನ ಭೂಮಿ ಕುಸಿದು ತಾನು ಪಾರ್ಕಿಂಗ್ ಜಾಗಕ್ಕೆ ಹೋಗಿ ಬೀಳಬಾರದೇ ಎಂದೆನಿಸಿತು. ವರದರಾಜರ ಅವಜ್ಞೆಯನ್ನು ಸ್ವೀಕರಿಸುವಷ್ಟು ಅವಳಲ್ಲಿ ಮನೋಸ್ಥೈರ್ಯ ಇರಲಿಲ್ಲ. ಮ್ಯಾನೆಕ್ಸ್ ಕೆಲಸಗಾರ, ಅದ್ವೈತ, ಕಲ್ಟ್ ಫಿಟ್ ತರಬೇತುದಾರಿಣಿ, ಸುಲೋಚನಾ ಎಲ್ಲರೂ ಅವಳತ್ತ ನೋಡಿ ಅಣಕಿಸುತ್ತಿರುವಂತೆ ಅನ್ನಿಸಿತು. ಹೌದು ಸುಲೋಚನಾ!, ಅವಳನ್ನೂ ನಾನು ಹೀಗೇ ನಿರ್ಲಕ್ಷಿಸುವುದು ಅಲ್ಲವೇ?!. ತಮ್ಮಿಂದಾಗುವಾಗ ಚಂದ, ತಾವೇ ಅನುಭವಿಸುವಾಗ ಕಷ್ಟ!. ಹಾಗಾದರೆ ಇದು ನನ್ ಕರ್ಮಕ್ಕೆ ಸಿಕ್ಕ ಫಲವೇ? ಈಗಲೇ ಹೋಗಿ ಸುಲೋಚನಾಳ ಮನೆಯ ಬಾಗಿಲು ತಟ್ಟಿ “ಬನ್ನಿ, ಒಟ್ಟಿಗೇ ವಾಕಿಂಗ್ ಹೋಗೋಣ” ಎಂದು ಕೆಳಗೆ ಕರೆತಂದರೆ ಆಗ ವರದರಾಜರು ನನ್ನತ್ತ ನಗು ಬೀರಬಹುದೇ ಎಂದೆಲ್ಲಾ ಗಾಯತ್ರಿಯ ಮನಸ್ಸಿನಲ್ಲಿ ಆಲೋಚನೆಗಳ ತಾಂಡವವಾಯಿತು. ಅಷ್ಟು ಹೊತ್ತೂ ದೇಹ ಹಲವು ರೀತಿಯ ಏರಿಳಿತಗಳನ್ನು ಅನುಭವಿಸಿದ್ದರೂ ಧೃತಿಗೆಡದ ಕಂಗಳು ನಿಧಾನಕ್ಕೆ ತೇವವಾಗತೊಡಗಿದವು. ನೀರು ತುಂಬಿಕೊಂಡು ಸುತ್ತಲಿನ ಜಗತ್ತು ಮಂಜಾಗತೊಡಗಿತು. ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ನಾಲ್ಕನೇ ಸುತ್ತಿಗೇ ವಾಕಿಂಗನ್ನು ಮೊಟಕುಗೊಳಿಸಿ ಗಾಯತ್ರಿ ಹೆಚ್ ಬ್ಲಾಕಿನ ಲಿಫ್ಟ್ ಹತ್ತಿದಳು.

ಮನೆ ನಂಬರ್ 604ರ ಎದುರು ಇಬ್ಬರು ಹುಡುಗರು ಭೂತದ ಮುಖವಾಡ ಹಾಕಿಕೊಂಡು ನಿಂತಿದ್ದರು. ಎರಡು ಮೂರು ಬಾರಿ ಬಾಗಿಲು ತಟ್ಟಿದರೂ ಯಾವುದೇ ಉತ್ತರವಿಲ್ಲದೇ ಇನ್ನೇನು ಅವರು ಹೊರಡಲು ತಯಾರಾಗಿದ್ದಾಗ ಧುಸುಬುಸು ಎಂದು ಲಿಫ್ಟಿನ ಕಡೆಯಿಂದ ಹೆಜ್ಜೆ ಹಾಕುತ್ತಾ ಬಂದ ಗಾಯತ್ರಿಯನ್ನು ನೋಡಿ ‘ಟ್ರಿಕ್ ಆರ್ ಟ್ರೀಟ್?’ ಎಂದರು. ಮಕ್ಕಳಿಗೆ ಕಣ್ಣೀರು ಕಾಣಬಾರದೆಂದು ಗಡಿಬಿಡಿಯಲ್ಲಿ ಬಾಗಿಲು ತೆರೆದು ಒಳಗೆ ಬಂದ ಗಾಯತ್ರಿ ಫ್ರಿಜ್ಜಿನ ಕಡೆಗೆ ಹೆಜ್ಜೆ ಹಾಕಿದಳು. ಇನ್ನೇನು ಎರಡನೇ ಕಂಪಾರ್ಟುಮೆಂಟಿನಲ್ಲಿರುವ ಮಿಲ್ಕಿ ಬಾರಿಗೆ ಅವಳ ಕೈ ಹೋಗಬೇಕು, ಅಷ್ಟರಲ್ಲಿ ಹೊರಗೆ ಒಬ್ಬ ಹುಡುಗ “ಅಯ್ಯೋ ಈ ಅಜ್ಜಿ ಯಾವಾಗ್ಲೂ ಮಿಲ್ಕಿ ಬಾರ್ ಕೊಡ್ತಾರೆ ಕಣೋ” ಎಂದಿದ್ದು ಕೇಳಿಸಿತು. ರಪ್ಪೆಂದು ಫ್ರಿಜ್ಜಿನ ಬಾಗಿಲು ಮುಚ್ಚಿದ ಗಾಯತ್ರಿ ರಭಸವಾಗಿ ಹಜಾರಕ್ಕೆ ಬಂದು ಧಡ್ಡೆಂದು ಬಾಗಿಲನ್ನು ಹಾಕಿದಳು. ಬಾಗಿಲಿನ ಕಡೆಗೇ ನೋಡುತ್ತಾ ಅಲ್ಲೇ ನಿಂತವಳು ಎರಡು ಕ್ಷಣ ಏದುಸಿರು ಬಿಟ್ಟು ಕಣ್ಣೊರೆಸಿಕೊಂಡು “ರೈನ್ ಓವರ್ ಮೀ…” ಎಂದು ಕೂಗುತ್ತಾ ನಿಂತಲ್ಲೇ ಮೇಲಿಂದ ನೀರು ಸುರಿಯುತ್ತಿರುವ ಭಂಗಿಯಲ್ಲಿ ಕೈಗಳನ್ನು ಆಡಿಸಿ, ಚನ್ನಪಟ್ಟಣದ ಬೊಂಬೆಯಂತೆ ಅತ್ತಿತ್ತ ಸೊಂಟ ತಿರುಗಿಸಿ ಒಮ್ಮೆ ಬಸ್ಕಿ ಹೊಡೆದು ಥೈ ಎಂದು ಮೇಲಕ್ಕೆ ಜಿಗಿದಳು. ಎರಡು ಕ್ಷಣ ಬಿಟ್ಟು ಹೊರಗಿನಿಂದ “ಟ್ರಿಕ್ ಚೆನ್ನಾಗಿತ್ತು ಅಜ್ಜೀ, ಸ್ಟೆಪ್ಸ್ ಸೂಪರ್” ಎಂದು ಹುಡುಗನ ಧ್ವನಿ ಕೇಳಿತು. ಗಾಯತ್ರಿಯ ಮುಖದಲ್ಲಿ ಮುಗುಳ್ನಗು ಮೂಡಿತು ಅನ್ನಿಸುತ್ತದೆ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಸೀಕ್ರೆಟ್ ಸ್ಯಾಂಟಾ

Exit mobile version